Updated News From Kaup
ಶಿರ್ವ ಗ್ರಾಮ ಪಂಚಾಯತ್ ಗೆ ಎರಡನೆಯ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿಮೆ

Posted On: 20-02-2023 05:16PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ಗೆ ಎರಡನೆ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ತುಂಬಾ ಸಂತಸದ ವಿಚಾರ. ಈ ಹಿಂದೆ 2020 ರಲ್ಲಿ ಶಿರ್ವಾ ಗ್ರಾಮ ಪಂಚಾಯತ್ ನ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷರಾದ ವಾರಿಜಾ ಪೂಜಾರಿಯವರ ಹಾಗೂ ಉಪಾಧ್ಯಕ್ಷರಾದ ದೇವದಾಸ್ ನಾಯಕ್ ಇವರ ಅವಧಿಯಲ್ಲಿ ಗಾಂಧಿ ಗ್ರಾಮ ಗೌರವಕ್ಕೆ ಪಾತ್ರವಾಗಿದೆ.
ವಾರಿಜಾ ಪೂಜಾರಿಯವರ ಅಧಿಕಾರಾವಧಿಯಲ್ಲಿ ಶಿರ್ವ ಗ್ರಾಮ ಪಂಚಾಯತ್ ಸ್ವಚ್ಛತೆಯನ್ನು ಪಾಲಿಸುವ ಸಲುವಾಗಿ ವಿಶೇಷ ಗಮನವನ್ನು ಕೊಟ್ಟು ಸಮಗ್ರವಾಗಿ ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡನೆ ಮಾಡಲು ಎಸ್.ಎಲ್.ಆರ್.ಎಂ.ಘಟಕವನ್ನು ಸ್ಥಾಪಿಸಿದ ಹೆಗ್ಗಳಿಕೆಯೂ ವಾರಿಜಾ ಪೂಜಾರಿಯವರಿಗೆ ಸಲ್ಲುತ್ತದೆ. ಅಲ್ಲದೇ ಪ್ರತಿನಿತ್ಯ ಕೇವಲ ಒಂದೇ ಕಸ ಸಂಗ್ರಹಿಸುವ ವಾಹನ ಹಾಗೂ ನಿಯಮಿತ ಸ್ವಚ್ಛತಾ ಸಿಬಂದಿಗಳಿದ್ದರೂ ಬಹಳ ಉತ್ತಮ ರೀತಿಯಲ್ಲಿ ಕಸ ವಿಲೇವಾರಿಯ ಕೆಲಸವನ್ನೂ ನಿರ್ವಹಿಸುತ್ತಾರೆ. ಇದರ ಮೊದಲು ಶಿರ್ವ ಬಸ್ಸು ತಂಗುದಾಣ,ಪೇಟೆಯ ಸುತ್ತ ಮುತ್ತದಲ್ಲಿ ಕಸದ ರಾಶಿಗಳು ಗಬ್ಬು ನಾರುತ್ತಿತ್ತು.
2020 ರಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ದೊರಕುವಲ್ಲಿ ಶಿರ್ವ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ಅನಂತ ಪದ್ಮನಾಭ ನಾಯಕ್ ಇವರ ಶ್ರಮವನ್ನು ಮರೆಯುವಂತಿಲ್ಲ. ಅವರ ಮೊದಲ ಆದ್ಯತೆ ಸ್ವಚ್ಛತೆಯ ಕಡೆಗೆ ಇತ್ತು. ಇದರೊಂದಿಗೆ ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಸಹಕಾರ ಸ್ವಚ್ಛತಾ ಸಿಬ್ಬಂದಿಗಳ ಶ್ರಮವನ್ನು ಮರೆಯುವಂತಿಲ್ಲ. ಪ್ರಸ್ತುತ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರವು ದೊರೆಯಲು ಈ ಹಿಂದೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಆಡಳಿತ ಅವಧಿಯಲ್ಲಿ ಹಾಕಿದ ಭದ್ರಬುನಾದಿಯೇ ಮೂಲ ಕಾರಣವಾಗಿದೆ ಎಂಬುದನ್ನು ಗ್ರಾಮಸ್ಥರು ಎಂದಿಗೂ ಮರೆಯುವಂತಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ರವೀಂದ್ರ ಪಾಟ್ಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 24, 25, 26 : ಕಟಪಾಡಿ ಉತ್ಸವ

Posted On: 20-02-2023 04:57PM
ಕಟಪಾಡಿ : ಜೋಕಾಲಿ ಫ್ರೆಂಡ್ಸ್ ಪಳ್ಳಿಗುಡ್ಡೆ ಕಟಪಾಡಿ ಇದರ ಆಶ್ರಯದಲ್ಲಿ ನಾಡೋಜ ಡಾ.ಜಿ.ಶಂಕರ್ ಅವರ ಆಶೀರ್ವಾದದೊಂದಿಗೆ ಕಟಪಾಡಿ ಪಳ್ಳಿಗುಡ್ಡೆ ಮೈದಾನದಲ್ಲಿ ಫೆಬ್ರವರಿ 24, 25, 26ರಂದು ವಿವಿಧ ಕ್ರೀಡೆಗಳು, ಸಭಾ ಕಾರ್ಯಕ್ರಮ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಒಳಗೊಂಡ ಕಟಪಾಡಿ ಉತ್ಸವ ಜರಗಲಿದೆ.
ಫೆಬ್ರವರಿ 24, ಶುಕ್ರವಾರದಂದು ಬೆಳಗ್ಗೆ 9:30ಕ್ಕೆ ಕಟಪಾಡಿ ಪೇಟೆಯಿಂದ ಮಹಿಳಾ ಸಂಗಮ ಮೆರವಣಿಗೆ, ಬೆಳಗ್ಗೆ ಗಂಟೆ 10:30ಕ್ಕೆ ಸಭಾ ಕಾರ್ಯಕ್ರಮ ತದನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಕ್ರೀಡೆ, ಸಂಜೆ ಗಂಟೆ 6ಕ್ಕೆ ಮಧುಕರ್ ಕಟಪಾಡಿ ಇವರಿಂದ ಸಂಗೀತ ಸಂಜೆ, ಸಂಜೆ 7:30ರಿಂದ ಸಭಾ ಕಾರ್ಯಕ್ರಮ, ರಾತ್ರಿ 8:30ರಿಂದ ಚಲನಚಿತ್ರ ಕಂಠದಾನ ಕಲಾವಿದರಾದ ಅಂತರಾಷ್ಟ್ರೀಯ ಮಟ್ಟದ ಗಾಯಕ ಕೆ. ನವೀನಚಂದ್ರ ಅರ್ಪಿಸುವ ಶಿವಾನಿ ಮ್ಯೂಸಿಕಲ್ ಇವರಿಂದ ಅದ್ದೂರಿಯ ಸಂಗೀತ ರಸಮಂಜರಿ ಕಾರ್ಯಕ್ರಮ, ರಾಜ್ಯಪ್ರಶಸ್ತಿಯ ಕ್ರೇಜಿ ಗಾಯ್ಸ್ ತಂಡದವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರಗಲಿದೆ.
ಫೆಬ್ರವರಿ 25, ಶನಿವಾರ ಬೆಳಿಗ್ಗೆ 9ರಿಂದ ಜೋಕಾಲಿ ಫ್ರೆಂಡ್ಸ್ ಟ್ರೋಫಿ 2023 ವಾಲಿಬಾಲ್ ಪಂದ್ಯಾಟ, ಸಂಜೆ 6:30ಕ್ಕೆ ರಾಜ್ಯಪ್ರಶಸ್ತಿ ವಿಜೇತ ಎಕ್ಸ್- ಟ್ರೀಮ್ ಡ್ಯಾನ್ಸ್ ಕ್ರ್ಯೂ ಬಿ.ಸಿ.ರೋಡ್ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ಸಂಜೆ 8ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 9ಕ್ಕೆ ಹೊನಲು ಬೆಳಕಿನ 40 ಗಜಗಳ ಕ್ರಿಕೆಟ್ ಪಂದ್ಯಾಕೂಟ ಜೋಕಾಲಿ ಫ್ರೆಂಡ್ಸ್ ಟ್ರೋಫಿ -2023 ಜರಗಲಿದೆ.
ಫೆಬ್ರವರಿ 26, ರವಿವಾರ ಮಧ್ಯಾಹ್ನ 12:30ರಿಂದ ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ರಾಜ್ ಸಂತೆಕಟ್ಟೆ ಇವರಿಂದ ಸಂಗೀತ ಸಂಜೆ, ರಾತ್ರಿ ಗಂಟೆ 8ಕ್ಕೆ ಸಭಾ ಸಭಾ ಕಾರ್ಯಕ್ರಮ, ರಾತ್ರಿ 9:30 ರಿಂದ ಕಲಾಚಾವಡಿ ಅಂಬಲಪಾಡಿ, ಉಡುಪಿ ತಂಡದಿಂದ ಮೋಕೆದ ಮದಿಮಾಲ್ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಶಂಕರಪುರ ಇನ್ನರ್ ವೀಲ್ ಕ್ಲಬ್ ಗೆ ಜಿಲ್ಲಾ ಚೇರ್ಮೆನ್ ಅಧಿಕೃತ ಭೇಟಿ

Posted On: 20-02-2023 01:39PM
ಕಾಪು : ತಾಲೂಕಿನ ಶಂಕರಪುರ ಇನ್ನರ್ ವೀಲ್ ಕ್ಲಬ್ ಗೆ ಶುಕ್ರವಾರದಂದು ಇನ್ನರ್ ವೀಲ್ ಜಿಲ್ಲಾ ಚೇರ್ಮೆನ್ ಕವಿತಾ ನಿಯತ್ ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಂಕರಪುರದ ಮುಖ್ಯ ಬೆಳೆಯಾದ ಮಲ್ಲಿಗೆ ಕೃಷಿ ಹಾಗೂ ಹೂವಿನ ಬಗ್ಗೆ ಮತ್ತು ಶಂಕರಪುರ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಸಂದರ್ಭ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉದಯೋನ್ಮುಖ ಸಂಗೀತಗಾರ ಆಯುಷ್ ರೇಗನ್ ಮಿನೇಜಸ್ ಹಾಗೂ ಶಿರ್ವದಲ್ಲಿ ವಿಭಿನ್ನ ಶಕ್ತಿಯ ಮಕ್ಕಳಿಗೆ ತರಬೇತಿ ಹಾಗೂ ತರಗತಿಯನ್ನು ನೀಡುತ್ತಿರುವ ವಿಶಿಷ್ಟ ಸಂಸ್ಥೆಯ ಸ್ಥಾಪಕಿ ಫ್ಲೋರಿನ್ ರಿಮಾ ಮಿನಜಸ್ ಅವರನ್ನು ಸನ್ಮಾನಿಸಲಾಯಿತು. ಸುಭಾಷ್ ನಗರ ಸರಕಾರಿ ಗುಡ್ಡೆ ಹಾಗೂ ಶಂಕರಪುರ ಪರಿಸರದಲ್ಲಿ ಅಡ್ಡರಸ್ತೆಯ ಗುರುತಿನ 9 ನಾಮಫಲಕಗಳನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ಸಿ. ಜಿ .ಆರ್. ದೀಪ ಭಂಡಾರಿ ಸಂಸ್ಥೆಯ ಗ್ರಹ ಪತ್ರಿಕೆ "ಹೊಂಗಿರಣ" ಅನ್ನು ಬಿಡುಗಡೆಗೊಳಿಸಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಕೊಂಡಾಡಿದರು. ರೋಟರಿ ಸದಸ್ಯರು, ಜೆಸಿಐ ಸದಸ್ಯರು, ವಿವಿಧ ಇನ್ನರ್ ವೀಲ್ ಕ್ಲಬ್ ಗಳಿಂದ ಆಗಮಿಸಿದ ಸದಸ್ಯರು ಉಪಸ್ಥಿತರಿದ್ದರು.

ಎಲಿಸಾ ಮಾರ್ಟಿಸ್ ಪ್ರಾರ್ಥಿಸಿದರು. ಅಧ್ಯಕ್ಷರಾದ ಶಾಲಿನಿ ಚಂದ್ರ ಸ್ವಾಗತಿಸಿದರು. ಲೀನಾ ಮೆಂಡೋನ್ಸ ಕಾರ್ಯಕ್ರಮ ನಿರೂಪಿಸಿದರು. ಆಲಿಸ್ ರೋಡ್ರಿಗಸ್ ವಂದಿಸಿದರು.
ಕಾರ್ಕಳ : ಕುಲಾಲ ಸಂಘ, ಕುಲಾಲ ಯುವ ವೇದಿಕೆ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

Posted On: 20-02-2023 12:54PM
ಕಾರ್ಕಳ : ಇಲ್ಲಿನ ಕುಲಾಲ ಸಂಘ, ಕುಲಾಲ ಯುವ ವೇದಿಕೆ ವತಿಯಿಂದ ಕಾರ್ಕಳ ತಾಲೂಕಿನ ಬಳಿ ಇರುವ ಸರ್ವಜ್ಞ ಸರ್ಕಲ್ ನ ಸರ್ವಜ್ಞನ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಸರ್ವಜ್ಞ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಕುಲಾಲ್, ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ದಿವಾಕರ್ ಬಂಗೇರ, ಕಾರ್ಕಳ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಉದಯ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಕುಲಾಲ್, ವಸಂತ ಕುಲಾಲ್, ಸುರೇಂದ್ರ ಕುಲಾಲ್ ವರಂಗ, ಹೃದಯ ಕುಲಾಲ್, ವಿಜೇಶ್ ಕುಲಾಲ್, ಮಹಿಳಾ ಮಂಡಲದ ಸದಸ್ಯರು, ಯುವ ವೇದಿಕೆಯ ಸದಸ್ಯರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಟಪಾಡಿ ಸಮಾಜ ಸೇವಕ ಜಯರಾಜ ಕಟಪಾಡಿ, ಸಂಗಡಿಗರು ಜೆಡಿಎಸ್ ಪಕ್ಷ ಸೇರ್ಪಡೆ

Posted On: 19-02-2023 04:00PM
ಉಡುಪಿ : ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಟಪಾಡಿಯ ಸಮಾಜ ಸೇವಕರಾದ ಜಯರಾಜ ಕಟಪಾಡಿ ಮತ್ತು ಸಂಗಡಿಗರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಜಯರಾಜ ಕಟಪಾಡಿ ಮತ್ತು ಸಂಗಡಿಗರಿಗೆ ಶಾಲು ಹೊದಿಸಿ ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭ ರಾಜ್ಯ ಕಾರ್ಯದರ್ಶಿಗಳಾದ ಸುಧಾಕರ ಶೆಟ್ಟಿ, ಗಂಗಾಧರ ಬಿರ್ತಿ ಮತ್ತು ಮನ್ಸೂರ್ ಇಬ್ರಾಹಿಂ, ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವ ರಾವ್, ನಾಯಕರಾದ ಸಂಕಪ್ಪ ಎ, ಬಾಲಕೃಷ್ಣ ಆಚಾರ್ಯ ಕಬ್ಬೆಟ್ಟು, ಇಕ್ಬಾಲ್ ಅತ್ರಾಡಿ, ಅಶ್ರಫ್ ಪಡುಬಿದ್ರಿ, ಸಂಜಯ್ ಕುಮಾರ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ

Posted On: 19-02-2023 03:39PM
ಕಾಪು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ ರವಿವಾರ ಕಾಪು ಮಹಾದೇವಿ ಶಾಲೆಯ ಮೈದಾನದಲ್ಲಿ ಉದ್ಘಾಟನೆಗೊಂಡಿತು.
ಹೆಜಮಾಡಿಯ ಉದ್ಯಮಿ ಗುಲಾಂ ಅಹಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತಾಡಿದ ಅವರು ಪತ್ರಕರ್ತರು ತಮ್ಮ ದೈನಂದಿನ ಕಾರ್ಯದ ಒತ್ತಡದ ನಡುವೆಯೂ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತಸದ ವಿಷಯ. ಕ್ರೀಡಾಕೂಟಕ್ಕೆ ಶುಭಹಾರೈಸಿದರು.
ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾಪು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಪುಂಡಲೀಕ ಮರಾಠೆ, ಕ್ರೀಡಾ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹಮೀದ್ ಪಡುಬಿದ್ರಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಸುರೇಶ್ ಎರ್ಮಾಳು ಸ್ವಾಗತಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ನಿರೂಪಿಸಿ, ವಂದಿಸಿದರು.
ಫೆ.20 : ಹೆಜಮಾಡಿಯಲ್ಲಿ ಕಾಪು ತಹಶೀಲ್ದಾರ್ ಗ್ರಾಮ ವಾಸ್ತವ್ಯ

Posted On: 19-02-2023 10:49AM
ಕಾಪು : ತಾಲೂಕಿನ ಹೆಜಮಾಡಿ ಗ್ರಾಮದಲ್ಲಿ ಫೆ.20ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಕಾಪು ತಾಲೂಕಿನ ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯವನ್ನು ಮಾಡಲಿದ್ದಾರೆ ಎಂದು ಕಾಪು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಪು : ರಾಜ್ಯಮಟ್ಟದ ಗೀತಗಾಯನ ಸಂಗೀತ ಸ್ಪರ್ಧೆ - ಶಂಕರಪುರದ ಆಯುಷ್ ರೇಗನ್ ಮಿನೇಜಸ್ ಪ್ರಥಮ ಬಹುಮಾನ

Posted On: 18-02-2023 03:40PM
ಕಾಪು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಇವರು ಆಯೋಜಿಸಿದ ರಾಜ್ಯಮಟ್ಟದ ಗೀತಗಾಯನ ಸಂಗೀತ ಸ್ಪರ್ಧೆಯಲ್ಲಿ ಕಾಪು ಶಂಕರಪುರದ ಆಯುಷ್ ರೇಗನ್ ಮಿನೇಜಸ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸ್ಪರ್ಧೆ ಯಲ್ಲಿ 20 ಜಿಲ್ಲೆಯ ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಈ ಸ್ಪರ್ಧೆಯಲ್ಲಿ ಕಬ್ಸ್ ವಿಭಾಗದಲ್ಲಿ ಆಯುಷ್ ರೇಗನ್ ಮಿನೇಜಸ್ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವೇಳೆ ಪಿ ಜಿ ಆರ್ ಸಿಂದ್ಯಾರವರು ಬಹುಮಾನ ವಿತರಿಸಿ ಶುಭ ಹಾರೈಸಿದ್ದಾರೆ.
ಇವರು ರಾಜ್ಯ ಮಟ್ಟದ ಈ ಸ್ಪರ್ಧೆಯ ಸಲುವಾಗಿ ಕಾಪು ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಕಾಪುವಿನ ಶಂಕರಪುರದ ಅಲ್ವೀನ್ ಮಿನೇಜಸ್ ಹಾಗೂ ಸುನೀತಾ ಮಿನೇಜಸ್ ದಂಪತಿಗಳ ಪುತ್ರನಾದ 9 ವರ್ಷದ ಆಯುಷ್ ರೇಗನ್ ಅವರು ಶಂಕರಪುರದ ಸೈಂಟ್ ಜಾನ್ಸ್ ಅಕಾಡೆಮಿಯ 4 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಇವರು ಗಾಯನಕ್ಕೆ ಒಲಿವರ್ ರೆಬೆಲ್ಲೋರವರಿಂದ ತರಬೇತಿ ಪಡೆದುಕೊಂಡಿದ್ದು, ಈ ಹಿಂದೆ ಉಡುಪಿ ಧರ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯ ಮಕ್ಕಳ ವಿಭಾಗದಲ್ಲಿ ಪ್ರಥಮ ಹಾಗೂ ಕೊಂಕಣಿ ನಾಟಕ ಸಭಾ ಮಂಗಳೂರು ಆಯೋಜಿಸಿದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಅನೇಕ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಗಾಯನ ಪ್ರತಿಭೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಮಹಾಶಿವರಾತ್ರಿ : ಹಬ್ಬವಲ್ಲ, ’ವ್ರತ'

Posted On: 18-02-2023 03:27PM
'ಶಿವರಾತ್ರಿ' ಸಂಭ್ರಮಿಸುವ ಹಬ್ಬ ಅಲ್ಲ; ಉಪವಾಸವಿದ್ದು ಶಿವನನ್ನು ಅಭಿಷೇಕ, ಸಹಸ್ರನಾಮಾದಿಗಳಿಂದ ಸುಪ್ರೀತನನ್ನಾಗಿಸುವುದು, ಧ್ಯಾನಾಸಕ್ತರಾಗಿದ್ದು ರಾತ್ರಿ ಜಾಗರಣೆಯಲ್ಲಿರುವುದು, ಪ್ರದಕ್ಷಿಣೆ-ನಮಸ್ಕಾರ, ಬಿಲ್ವಾರ್ಚನೆ ಯಿಂದ ಮಹಾದೇವನನ್ನು ಆರಾಧಿಸುವ ವ್ರತ ವಿಶೇಷವಾಗಿ ’ಮಹಾ ಶಿವರಾತ್ರಿ’ ಪುರಾಣಕಾರರಿಂದ ವ್ಯಾಖ್ಯಾನಿಸಲ್ಪಟ್ಟಿದೆ. ಶರಣಾರ್ಥಿ ಶರಣರಿಗೆ ಸರ್ವಮಂಗಲವನ್ನು ಅನುಗ್ರಹಿಸುವ ಮಂಗಲಕರನಾದ ಶರ್ವನು ಜನಮಾನಸಕ್ಕೆ ಸಮೀಪದ ದೇವರು. ವೇದಪೂರ್ವ ಕಾಲದಿಂದ ಈತನ ಅಸ್ತಿತ್ವವು ಗುರುತಿಸಲ್ಪಡುತ್ತದೆ. ವೇದಕಾಲದಲ್ಲಿ ಒಂದು ಸ್ವರೂಪವನ್ನು ಪಡೆದು ವೇದೋತ್ತರ ಕಾಲಕ್ಕಾಗುವಾಗ ತ್ರಿಮೂರ್ತಿಗಳಲ್ಲಿ ಒಬ್ಬನಾಗಿ, ಲಯಾಧಿಕಾರಿಯಾಗಿ, ದೇವೋತ್ತಮನಾಗಿ, ಮಹಾಲಿಂಗನಾಗಿ, ಭೂವ್ಯೋಮ ವ್ಯಾಪಿಯಾದ ವಿರಾಟ್ ಪುರುಷನಾಗಿ ಪುರಾಣಗಳು ಕೊಂಡಾಡುವಂತಾಗುವುದನ್ನು ಗಮನಿಸಬಹುದು.
ಸದಾ ಧ್ಯಾನಾಸಕ್ತನಾಗಿರುವ ಶಿವನು ಎಷ್ಟು ವಿರಕ್ತನೋ ಅಷ್ಟೇ ಅನುರಕ್ತನು. ಸರ್ವಸಂಗ ಪರಿತ್ಯಾಗದಂತಹ ನಿವೃತ್ತಿಯು ಎಷ್ಟು ಗಾಢವಾಗಿದೆಯೋ ಅಷ್ಟೇ ತೀವ್ರವಾದ ಪ್ರವೃತ್ತಿಯೂ ಶಂಕರನಲ್ಲಿ ಕಾಣಬಹುದು. ಗೊಂದಲಗಳ ಗೂಡಾಗಿ ಕಾಣುವ, ವಿರೋಧಾಭಾಸಗಳ ಕೇಂದ್ರವೇ ಆಗಿರುವ ಶಿವ-ಶಿವಪರಿವಾರ ಸ್ವತಃ ದೇವದೇವನೇ ಮಾನವ ಕೋಟಿಗೆ ಒಂದು ಆದರ್ಶ ಸಂದೇಶವನ್ನು ನೀಡುವಂತಿದೆ. ಕಾಮನನ್ನು ದಹಿಸಿ ಕಾಮಿನಿಯನ್ನು ವರಿಸುವ ಶಿವ ನಮಗೆ ಹತ್ತಿರದವನೇ ಆಗುತ್ತಾನೆ. ಮನುಕುಲ ಸಹಜವಾಗಿ ಸಾಧಿಸಬೇಕಾದ್ದನ್ನು ಬೋಧಿಸುವಂತಿದೆ ಭಗವಾನ್ ಭರ್ಗನ ಪರಿಕಲ್ಪನೆ, ಅನುಸಂಧಾನ, ಸ್ತುತಿ ಇತ್ಯಾದಿ. ಭಕ್ತಿಗೆ ಒಲಿದಾಗ ಬೇಡಿದ್ದನ್ನು ಅನುಗ್ರಹಿಸುವ ಶಿವನು ಕೆಲವೊಮ್ಮೆ ’ಬೋಳೆ ಶಂಕರ’ನೆಂದೇ ಗುರುತಿಸುವಷ್ಟು ಮುಗ್ಧನಾಗಿ ನಮ್ಮ ಮುಂದೆ ನಿಲ್ಲುತ್ತಾನೆ. ಕೋಪಗೊಂಡಾಗ ಬ್ರಹ್ಮಾಂಡ ಭಾಂಡವನ್ನೇ ಲಯಗೊಳಿಸುವ ಮಹಾಶಕ್ತಿಯಾಗಿ ವಿಜೃಂಭಿಸುತ್ತಾನೆ. ಅರ್ಧನಾರೀಶ್ವರನಾಗಿ ಗೃಹಸ್ಥನ ಬದುಕಿಗೆ ಮೇಲ್ಪಂಕ್ತಿಯಾಗಿರುವ ಪಾರ್ವತಿ ರಮಣನು ಮಾನವರಿಗೆ ಸಮೀಪದ ದೇವರಾಗಿ ಸುಲಭ ಸಾಧ್ಯನಾಗಿ ಕಥಾನಕಗಳಲ್ಲಿ ಚಿತ್ರಿತನಾಗಿರುವುದು ಆತನ ಜನಪ್ರಿಯತೆಗೆ ಕಾರಣವಿರಬೇಕು.
'ಮಹಾಪಾಪಗಳನ್ನು ಮಾಡಿ ಭವದ ಬಂಧನದಲ್ಲಿರುವ ನನ್ನನ್ನು ಲೋಕಕ್ಕೆ ಶಾಂತಿಯನ್ನು ಅನುಗ್ರಹಿಸುವ ದೇವನಾದ ನೀನು ಉದ್ಧರಿಸು’ ಎಂದು ಮಹಾಶಿವರಾತ್ರಿ ಪುಣ್ಯಕಾಲದ ಬೇಡಿಕೆಯಾಗಬೇಕೆಂದು ಶಾಸ್ತ್ರಗಳು ಸೂಚಿಸುತ್ತವೆ. ಸ್ವಯಂಭುವಾಗಿ ಲಿಂಗರೂಪದಲ್ಲಿ ಉದ್ಭವಿಸಿದ ದಿನ. ಹಾಲಾಹಲ ವಿಷಪಾನ ಮಾಡಿದ ಸಂದರ್ಭ, ತಾಂಡವವಾಡಿದ ಸುದಿನವೇ ಶಿವರಾತ್ರಿ ಪರ್ವಕಾಲವೆಂದು ವಿವಿಧ ವ್ಯಾಖ್ಯಾನಗಳಿವೆ. ಈ ಶುಭದಿನ ಮಾಘಮಾಸದ ಬಹುಳ ಚತುರ್ದಶಿಯಂದು ಸನ್ನಿಹಿತವಾಗುತ್ತದೆ. ಶಿವರಾತ್ರಿಯ ಪರ್ವಕಾಲದಲ್ಲಿ ಶಿವಧ್ಯಾನಸಕ್ತರಾಗುತ್ತಾ ’ಕಾಯಕವೇ ಕೈಲಾಸ’, ’ಶರಣು ಶರಣಾರ್ಥಿ’ ಎನ್ನೋಣ. ’ಓಂ ನಮಃ ಶಿವಾಯ’ ಪಠಿಸೋಣ.
ರುದ್ರ-ಪರ್ಜನ್ಯ : ಅನ್ನಾದ್ಭವಂತಿಭೂತಾನಿ ಪರ್ಜನ್ಯಾದನ್ನ ಸಂಭವಃ | ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಬವಃ || ಅನ್ನ-ಜೀವರಾಶಿ, ಅನ್ನ-ಮಳೆ, ಮಳೆ-ಯಜ್ಞ ಈ ಸಂಬಂಧವನ್ನು ನಿರೂಪಿಸುವ ಈ ಶ್ಲೋಕವು ಯಜ್ಞದ ಪರಮಲಕ್ಷ್ಮವನ್ನು ವಿವರಿಸುತ್ತದೆ. ಸಕಾಲಿಕ ಮಳೆಗೆ ಯಜ್ಞಕರ್ಮವೇ ಪೂರಕ ವೈದಿಕ ಪ್ರಕ್ರಿಯೆ ಎಂದು ದೃಢೀಕರಿಸುತ್ತದೆ. ಶಿವ, ಸದಾಶಿವ, ಪರಶಿವ ಇವು ಪರಮಾತ್ಮನ ಮನೋಜ್ಞ ಹೆಸರುಗಳು. ಇವನು ’ರುದ್ರ’ನೂ ಹೌದು. ಮಳೆ ಸುರಿಸಿ ನೀರು ಕೊಡುವವನು, ಅಧಿಕ ಶಬ್ಧ ಮಾಡುತ್ತಾ ನೀರನ್ನು ಕೊಡುವವನು ಎಂಬುದು ’ರುದ್ರ’ ಶಬ್ದಕ್ಕೆ ಯಾಸ್ಕಾಚಾರ್ಯರು ನೀಡುವ ಅರ್ಥ. ಮಳೆ ಸುರಿಸುವ ಶಿವ, ಮಳೆಗೆ ಪೂರಕವಾದ ಯಜ್ಞಕರ್ಮ. ಈ ಎರಡು ಸಿದ್ಧಾಂತಗಳಿಂದ ರುದ್ರದೇವರನ್ನು ಅಗ್ನಿ ಮುಖದಿಂದ ಆರಾಧಿಸಿದರೆ ಮಳೆಯಾಗುತ್ತದೆ. ಮಳೆಯಿಂದ ಬೆಳೆ, ಬೆಳೆಯಿಂದ ಸಮೃದ್ಧಿ ತಾನೇ? ಲೋಕ ಸುಭಿಕ್ಷೆಗೆ ಲೋಕದ ತಂದೆಯನ್ನು ಆರಾಧಿಸುವುದು, ಆ ಮೂಲಕ ಕ್ಷೋಭೆಗಳಿಲ್ಲದ, ನಿರ್ಭಯದಿಂದ ಬದುಕುವ ಪರಿಸರ ನಿರ್ಮಾಣದ ನಿರೀಕ್ಷೆ ಋಜುಮಾರ್ಗದ ಸಂಕಲ್ಪವಲ್ಲವೇ.... ಮಂಗಳಕರ ಮಹಾದೇವನನ್ನು ಶಿವರಾತ್ರಿ ಪರ್ವದಿನದಂದು ಸ್ಮರಿಸುತ್ತಾ ಲೋಕಶಾಂತಿಯನ್ನು ಹಾರೈಸೋಣ.... ಲೇಖನ : ಕೆ.ಎಲ್.ಕುಂಡಂತಾಯ
ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ : ಭರವಸೆಯ ಒಪ್ಪಿಗೆ ನೀಡಿ ಬಜೆಟ್ನಲ್ಲಿ ವಂಚನೆ - ಪ್ರವೀಣ್ ಎಂ ಪೂಜಾರಿ

Posted On: 17-02-2023 10:42PM
ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಕುರಿತು ಮುಖ್ಯಮಂತ್ರಿಯವರು ನೀಡಿದ ಭರವಸೆ ಸುಳ್ಳಾಗಿದೆ. ಸಮಾಜದ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಸಚಿವರಾದ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಲ್ಲವ ಸಮುದಾಯದ ಮುಖಂಡರ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿಗೆ ಜ.5ರಂದು ಮನವಿ ಸಲ್ಲಿಸಿದ್ದ ಸಂದರ್ಭ ನಿಗಮ ಸ್ಥಾಪನೆಗೆ ಸ್ಪಷ್ಟ ಭರವಸೆಯ ಒಪ್ಪಿಗೆ ನೀಡಿ ಸೂಕ್ತ ಅನುದಾನದೊಂದಿಗೆ ಈ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೂ ಈ ಬಾರಿಯ ಬಜೆಟ್ನಲ್ಲಿ ಯಾವುದೆ ಕ್ರಮ ಕೈಗೊಳ್ಳದೆ ಮತ್ತೆ ಬಿಲ್ಲವ, ಈಡಿಗರಿಗೆ ಅನ್ಯಾಯವೆಸಗಿದ್ದಾರೆ.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ನಾರಾಯಣ ಗುರು ತತ್ವ ಆದರ್ಶಗಳ ಪ್ರಚಾರ ದೃಷ್ಟಿಯಿಂದ ನಿಗಮ ಸ್ಥಾಪನೆ ಅಗತ್ಯವಾಗಿದ್ದರೂ ಹಿಂದುಳಿದ ಸಮಾಜದ ನಮಗೆ ಅನ್ಯಾಯವಾಗಿದೆ. ಸಮಾಜದ ಮುಖಂಡರ ಸಭೆ ನಡೆಸಿ ನಿಯೋಗ ಕೊಂಡೊಯ್ದ ಮಾನ್ಯ ಸುನಿಲ್ ಕುಮಾರ್ರವರು ಹಾಗೂ ಆಶ್ವಾಸನೆಯನ್ನು ಸ್ವಾಗತಿಸಿ ಬೆಂಬಲಿಸಿದ ಜನಪ್ರತಿನಿಧಿಗಳೆಲ್ಲರೂ ಈ ಕುರಿತು ಸ್ಪಷ್ಟನೆ ನೀಡುವಂತೆ ಸಮಸ್ತ ಸಮಾಜಬಾಂಧವರ ಹಿತದಿಂದ ಆಗ್ರಹಿಸುತ್ತೇವೆಂದು ಬಿಲ್ಲವ ಯುವ ವೇದಿಕೆ (ರಿ) ಉಡುಪಿ ಇದರ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.