Updated News From Kaup
ಪಡುಬಿದ್ರಿ : ಟ್ಯಾಂಕರ್ ಅಜಾಗರೂಕತೆ ಚಾಲನೆ ; ಸ್ಕೂಟಿಯಲ್ಲಿದ್ದ ದಂಪತಿಗಳು ಮೃತ್ಯು
.jpg)
Posted On: 07-03-2023 07:43PM
ಪಡುಬಿದ್ರಿ : ಟ್ಯಾಂಕರ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಮೂಲ್ಕಿ ಸೇತುವೆ ಮೇಲೆ ಇಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ತೀರ್ಥಹಳ್ಳಿಯ ಅಡಿಕೆ ವ್ಯಾಪಾರಿ ದಂಪತಿ ಅಕ್ಬರ್ ಬಾಷಾ(61) ಹಾಗೂ ಖತೀಜಾಬಿ(46) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಶಾಂಭವಿ ನದಿಯ ಸೇತುವೆ ಮೇಲೆ ಈ ಘಟನೆ ನಡೆದಿದ್ದು ಟ್ಯಾಂಕರನ್ನು ಹೆಜಮಾಡಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರುಗಡೆಯಿಂದ ಸೇತುವೆಯ ಮೇಲೆ ಎಡ ಬದಿಯಲ್ಲಿ ಅಕ್ಬರ್ ಬಾಷಾರವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಅಪಘಾತದಿಂದ ಸ್ಕೂಟರ್ ಸವಾರ ಅಕ್ಬರ್ ಬಾಷಾ ಹಾಗೂ ಸಹ ಸವಾರೆ ಖತೀಜಾಬಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತೀವ್ರರಕ್ತ ಗಾಯಗೊಂಡು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ : ಶ್ರೀ ಬಬ್ಬರ್ಯ ದೈವಸ್ಥಾನ ಮೂಡುಮಟ್ಟಾರು - ವಾರ್ಷಿಕ ನೇಮೋತ್ಸವ, ಮಹಾ ಅನ್ನಸಂತರ್ಪಣೆ

Posted On: 07-03-2023 05:16PM
ಶಿರ್ವ : ಇಲ್ಲಿನ ಶ್ರೀ ಬಬ್ಬರ್ಯ ದೈವಸ್ಥಾನ ಮೂಡುಮಟ್ಟಾರು ದೈವಸ್ಥಾನದಲ್ಲಿ ಮಾರ್ಚ್ 8, ಬುಧವಾರ ಬೆಳಿಗ್ಗೆ ಗಂಟೆ 10ಕ್ಕೆ ಭಂಡಾರ ಇಳಿಯುವುದು, ಮಧ್ಯಾಹ್ನ 12ಕ್ಕೆ ದರ್ಶನ ಸೇವೆ, ಮಧ್ಯಾಹ್ನ ಗಂಟೆ 1ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ ಗಂಟೆ 8ಕ್ಕೆ ಶ್ರೀ ನಂದಿಗೋಣ ನೇಮೋತ್ಸವ, ರಾತ್ರಿ ಗಂಟೆ 9:30 ರಿಂದ ಶ್ರೀ ಬಬ್ಬರ್ಯ ದೈವದ ನೇಮೋತ್ಸವ ಜರಗಲಿದೆ.
ಮಾಚ್೯ 9, ಗುರುವಾರ ಮಧ್ಯಾಹ್ನ ಗಂಟೆ 2 ರಿಂದ ನೀಚ ದೈವದ ನೇಮೋತ್ಸವ (ಕೊರಗಜ್ಜ) ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಟಪಾಡಿ : ಸುಭಾಸ್ ನಗರದಲ್ಲಿ ನೂತನ ಬಾಲವನ ಉದ್ಘಾಟನೆ ; ಮಕ್ಕಳ ಆಟಿಕೆಗಳ ಕೊಡುಗೆ

Posted On: 07-03-2023 05:04PM
ಕಟಪಾಡಿ : ರೋಟರಿ ಕ್ಲಬ್ ಶಂಕರಪುರ ಹಾಗೂ ಗ್ರಾಮ ಪಂಚಾಯತ್ ಕಟಪಾಡಿ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ನೂತನ ಬಾಲವನವನ್ನು ಸುಭಾಸ್ ನಗರದ ಅಂಗನವಾಡಿಯ ಬಳಿಯಲ್ಲಿ ನಿರ್ಮಿಸಲಾಯಿತು. ಕಾರ್ಯಕ್ರಮವನ್ನು ಮಕ್ಕಳ ಆಟಿಕೆಯ ದಾನಿಗಳಾದ ದಿವಂಗತ ಅಪ್ಪಿ ತೋಮಣಿ ಸುವರ್ಣ ''ಪಪ್ಪಾ ಅಮ್ಮ ಛಾಯಾ ಸುಭಾಸ್ನಗರ '' ಇವರ ಸ್ಮರಣಾರ್ಥ ಮಕ್ಕಳಾದ ಮಂಜುಳಾ ನಾಗರಾಜ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಎಸ್ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾದ ರೋಟರಿ ವಲಯ ಸೇನಾನಿ ಯಶೋಧರ ಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿ ಡೇನಿಯಲ್ ಡೊಮ್ನಿಕ್ ಡಿಸೋಜಾ ಶುಭ ಹಾರೈಸಿದರು. ಅಂಗನವಾಡಿಯ ಶಿಕ್ಷಕಿಯಾದ ಕಾಂತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿನ ಹೆಚ್ಚಿನ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಕಾಮಗಾರಿಯನ್ನು ನಡೆಸಿದ ಪ್ರಭಾಕರ್ ಪಾಲನ್, ಮಕ್ಕಳ ಆಟಿಕೆಯ ಕೆಲಸಗಳನ್ನು ನಿರ್ವಹಿಸಿದ ಮೊಹಮ್ಮದ್ ಸಾಧಿಕ್ ಇವರುಗಳನ್ನು ಗುರುತಿಸಲಾಯಿತು.
ಸ್ಥಳೀಯರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಸ್ವಾಗತಿಸಿದರು. ವಿನ್ಸೆಂಟ್ ಸಲ್ದಾನ ಪ್ರಾರ್ಥಿಸಿದರು. ಅಂತೋನಿ ಡೇಸಾ ಪ್ರಸ್ತಾಪನೆಗೆಗೈದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ವೈ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ದಾನಿಗಳಾದ ಮಂಜುಳಾ ನಾಗರಾಜ್ ಇವರನ್ನು ಸನ್ಮಾನಿಸಲಾಯಿತು. ಚಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ : ಉದ್ದಿಮೆ ಆರಂಭಿಸದೆ, ಹೆಚ್ಚುವರಿ ಜಾಗ ಪಡೆದ ಕಂಪನಿಗಳ ಜಾಗವನ್ನು ಸರಕಾರ ಮರುವಶ/ಮರು ಹಂಚಿಕೆ ಮಾಡಬೇಕು - ಯೋಗೇಶ್ ವಿ ಶೆಟ್ಟಿ

Posted On: 07-03-2023 04:31PM
ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸರಕಾರದಿಂದ ಭೂಮಿ ಪಡೆದು ಪೂರ್ಣ ಕೈಗಾರಿಕೆಗಳನ್ನು ಸ್ಥಾಪಿಸದೆ / ವಿಸ್ತರಣೆ ಮಾಡದೆ ಇರುವ ಭೂಮಿಯನ್ನು ಸರಕಾರ ತನ್ನ ವಶಕ್ಕೆ ವಾಪಸು ಪಡೆಯಬೇಕು ಅಥವಾ ನೀಡಿಕೆಯಾದ ಭೂಮಿಯನ್ನು ಮರುಹಂಚಿಕೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಜನತಾದಳ(ಜಾತ್ಯತೀತ)ದ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿ ಆಗ್ರಹಿಸಿದ್ದಾರೆ.
ಸಾಧಾರಣ ಅಂದಾಜು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7599 ಎಕ್ರೆ ಮತ್ತು ಉಡುಪಿ ಜಿಲ್ಲೆಯಲ್ಲಿ 2719 ಎಕ್ರೆ ಸೇರಿ ಒಟ್ಟು 10318 ಎಕ್ರೆ ಕೈಗಾರಿಕೆ ವಿಸ್ತರಣೆ ಮಾಡದೆ ಖಾಲಿ ಜಾಗ ಇದ್ದು,ಹಲವಾರು ಕಂಪನಿಗಳಿಗೆ ವಿತರಣೆಯಾಗಿದ್ದು, ಅಂತೆಯೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಅಂಕಿ ಅಂಶ ಇದೇ ರೀತಿಯಲ್ಲಿ ಇದೆ.
ಕೈಗಾರಿಕೆಗಳು ಬೆಳೆಯಲಿ ಆರ್ಥಿಕ ಪ್ರಗತಿಗಾಗಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎನ್ನುವ ಕಾರಣಕ್ಕೆ ಕೈಗಾರಿಕೆ ಸ್ಥಾಪಿಸುವರೇ ಸರಕಾರದಿಂದ ಭೂಮಿ ಕೊಡಲ್ಪಟ್ಟಿತ್ತು . ಆದರೂ ಕೆಲವು ಕೈಗಾರಿಕಾ ಸಂಸ್ಥೆಗಳು ಸಾಧಾರಣ 15 /30ವರ್ಷಗಳಿಂದ ವಿಸ್ತರಣೆ ಮಾಡಿದೆ ಹೆಚ್ಚುವರಿಯಾಗಿ ಜಾಗವನ್ನು ಹಾಗೆಯೇ ಉಳಿಸಿಕೊಂಡಿರುತ್ತದೆ. ಅಂತಹ ಜಾಗವನ್ನು ವಾಪಸು ಪಡೆದು, ಮರುಹಂಚಿಕೆಮಾಡಬೇಕೆಂದು ಸರಕಾರವನ್ನು ಒತ್ತಾಯ ಮಾಡುತ್ತಿದ್ದೇವೆ.
ಪರಿಹಾರ ನೀಡದ ವಶಪಡಿಸಿ ಕೊಂಡಂತಹ ಜಾಗವನ್ನು ಸಹಾ ಕೂಡಲೇ ವಾಪಸ್ ಪಡೆದು ಐಟಿ ಹಬ್ ಮತ್ತು ಇತರ ಕೈಗಾರಿಕೆಗಳನ್ನು ಸ್ಥಾಪಿಸುವ ಆಸಕ್ತರಿಗೆ ಮರು ವಿತರಣೆ ಮಾಡಿ ಉದ್ಯೋಗ ಸೃಷ್ಟಿ ಮಾಡುವರೇ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಅದೇ ರೀತಿ ಜಾಗ ನೀಡಿದವರಿಗೆ/ ಕುಟುಂಬಸ್ಥರಿಗೆ / ಸ್ಥಳೀಯರಿಗೆ ಉದ್ಯೋಗ ನೀಡುವರೆ ಸರಕಾರವನ್ನು ಒತ್ತಾಯ ಪಡಿಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ತಮ್ಮ ಭಾಷೆ, ಆರೋಗ್ಯದ ಬಗ್ಗೆ ಕೊರಗ ಸಮುದಾಯ ಮಹತ್ವ ನೀಡಬೇಕಾಗಿದೆ - ಪಾಂಗಾಳ ಬಾಬು ಕೊರಗ

Posted On: 06-03-2023 08:32PM
ಶಿರ್ವ : ನೆಲಮೂಲದ ಸಂಸ್ಕೃತಿಯ ಪ್ರತಿನಿಧಿಗಳಾದ ಕೊರಗರು ಇಂದು ಹೊರಗಿನವರಾಗಿ ಬಿಟ್ಟಿರುವುದು ಬೇಸರದ ಸಂಗತಿ. ಇಂದು ಎಲ್ಲಾ ರೀತಿಯ ಹಕ್ಕುಗಳಿದ್ದರೂ ಕೊರಗ ಸಮುದಾಯ ಹಿಂಜರಿಯುತ್ತಿದೆ. ಶಿಕ್ಷಣವೊಂದೇ ಬದಲಾವಣೆಗೆ ಸಹಕಾರಿ. ತಮ್ಮ ಭಾಷೆ ಮತ್ತು ಆರೋಗ್ಯದ ಬಗೆಯೂ ಮಹತ್ವ ನೀಡಬೇಕಾಗಿದೆ ಎಂದು ಕೊರಗ ಸಮುದಾಯದ ಹಿರಿಯ ಸಂಘಟಕ, ಸಾಹಿತಿ ಪಾಂಗಾಳ ಬಾಬು ಕೊರಗ ಹೇಳಿದರು.

ಅವರು ಮಾಚ್೯ 5 ರಂದು ಮುಂಚಿಕಾಡು (ಪಾಂಬೂರು)ಕೊರಗರ ಬಲೆಪುವಿನಲ್ಲಿ ಬೆಳ್ಳೆ ಗ್ರಾಮ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ ಮತ್ತು ಉಡುಪಿ ಜಿಲ್ಲಾ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕೊರ್ರೆನ ಕೊರಲ್ - ಕೊರಗರ ನೆಲಮೂಲ ಪರಂಪರೆ, ಭಾಷೆಯ ಹೊಳಹು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. ಕೊರಗರ ಬಲೆಪುವಿನ ಗುರಿಕಾರ ವಸಂತ ಅವರು ಕೊಳಲು ವಾದನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊರಗರ ಬಲೆಪುವಿನ ಕಮಲ ಮತ್ತು ಸುಂದರ ಟಿ. ತೀಪೆ ಪಟ್ನದು ಜೇನು ನೀಡಿ ಜೇನ ಹಬ್ಬ ನೆರವೇರಿಸಿದರು.

ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಈ ಸಂದರ್ಭ ಹಿರಿಯ ಸಂಘಟಕ, ಸಾಹಿತಿ ಪಾಂಗಾಳ ಬಾಬು ಕೊರಗ ಅವರನ್ನು ಸಮ್ಮಾನಿಸಲಾಯಿತು. ಬೆಳ್ಳೆ ಗ್ರಾ.ಪಂ. ಅಧ್ಯಕ್ಷರಾದ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಜಿಲ್ಲಾ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ದೇವದಾಸ ಹೆಬ್ಬಾರ್, ಬೆಳ್ಳೆ ಗ್ರಾ.ಪಂ. ಸದಸ್ಯೆ ಅಮಿತಾ ವೇದಿಕೆಯಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊರಗ ಸಮುದಾಯದ ಪ್ರಮುಖರು, ಬೆಳ್ಳೆ ಗ್ರಾಮ ಪಂಚಾಯತ್ ಅಧಿಕಾರಿ ವರ್ಗ, ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಬೆಳ್ಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ನೀಲಾನಂದ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ತಟ್ಟಿ ಕುಡುಪು, ಬುಟ್ಟಿ, ಡೋಲು, ಕೊಳಲು, ಹುರಿ ಹಗ್ಗದ ಮಾಹಿತಿಯನ್ನು ನೀಡಲಾಯಿತು. ಸಭಾಕಾರ್ಯಕ್ರಮದ ಬಳಿಕ ಡೋಲು-ಕೊಳಲು ವಾದನ, ಕೊರಗರ ಹಾಡು, ಕೊರಗರ ನೃತ್ಯ, ಅರಕಜಬ್ಬೆಯ ಕಥಾವಾಚನ, ಕೊರಗರ ದೊರೆ ಉಭಾಷಿಕನ ಇತಿಹಾಸದ ಪ್ರಾತ್ಯಕ್ಷಿಕೆ ನೀಡಲಾಯಿತು.
ಮಾರ್ಚ್ 19 : ಹೆಬ್ರಿ ತಾಲೂಕು ನೂತನ ಕುಲಾಲ ಸಂಘದ ಉದ್ಘಾಟನೆ

Posted On: 04-03-2023 10:53PM
ಕಾರ್ಕಳ : ತಾಲೂಕಿನ ಹೆಬ್ರಿಯ ನೂತನ ಕುಲಾಲ ಸಂಘದ ಉದ್ಘಾಟನೆ ಸಮಾರಂಭ ಮಾರ್ಚ್ 19 ರ ಬೆಳಿಗ್ಗೆ 9:30 ಕ್ಕೆ ಬಂಟರ ಭವನ ಹೆಬ್ರಿಯ ಶ್ರೀಮತಿ ಶೀಲಾ ಸುಭೋದ ಬಲ್ಲಾಳ್ ಸಭಾ ಭವನದಲ್ಲಿ ನಡೆಯಲಿದೆ ಎಂದು ಹೆಬ್ರಿ ತಾಲೂಕು ಕುಲಾಲ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟಣೆ ನೀಡಿರುತ್ತಾರೆ.
ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯನ್ನು ಎದುರಿಸುತ್ತಿದ್ದೇನೆ : ವಿನಯಕುಮಾರ್ ಸೊರಕೆ

Posted On: 04-03-2023 10:50PM
ಉದ್ಯಾವರ : ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಸೇವೆಯನ್ನು ಮಾಡಿದ್ದೇನೆ. ಅಧಿಕಾರ ಇದ್ದ ಅಥವಾ ಅಧಿಕಾರ ಇಲ್ಲದ ಸಮಯದಲ್ಲೂ ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅಧಿಕಾರ ಇದ್ದಂಥ ಸಮಯದಲ್ಲಿ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಪ್ರಸ್ತುತ ಚುನಾವಣೆ ನಾನು ಎದುರಿಸುತ್ತಿರುವ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯಾಗಲಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಯಾವರದಲ್ಲಿ ಭಾವನಾತ್ಮಕವಾಗಿ ಮಾತನಾಡಿದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾದರೂ, ಜನರು ಮತ್ತು ಕಾರ್ಯಕರ್ತರು ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ. ಕ್ಷೇತ್ರದ ಮತದಾರರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಮೇಲೆ ಇಟ್ಟ ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ. ಪ್ರಸ್ತುತ ನಾನು ಮಾಜಿ ಶಾಸಕನಾದರೂ ಪ್ರತಿದಿನ ಎಂಬಂತೆ ಜನರು ನನ್ನ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ನನ್ನ ಬಳಿ ತಿಳಿಸುತ್ತಿದ್ದಾರೆ ಮತ್ತು ಅದಕ್ಕೆ ನಾನು ಸ್ಪಂದಿಸುತ್ತಿದ್ದೇನೆ. ಹಿಂದುತ್ವದ ಹೆಸರೇಳಿ ಅಧಿಕಾರ ಪಡೆದಂತ ಬಿಜೆಪಿ ನಾಯಕರು ರಾಜ್ಯದ ವಿವಿಧ ದೇವಸ್ಥಾನಗಳನ್ನು ಕೆಡವಲು ಪ್ರಯತ್ನಿಸಿದರು. ನಂಜನಗೂಡಿನಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನ ಕೆಡವಿದ ಬಳಿಕ ಜನರ ಪ್ರತಿಭಟನೆಗೆ ಹೆದರಿ ತನ್ನ ನಿರ್ಧಾರದಿಂದ ಬಿಜೆಪಿ ಹಿಂದಕ್ಕೆ ಸರಿದಿತ್ತು ಎಂದರು.
ನನ್ನ ಅಧಿಕಾರದ ಸಮಯದಲ್ಲಿ ವಿವಿಧ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಸರಕಾರದಿಂದ ದೊರಕುವ ಅನುದಾನ ಮತ್ತು ನನ್ನ ವೈಯುಕ್ತಿಕ ಸಹಾಯವನ್ನು ಮಾಡಿದ್ದೇನೆ. ಯಾವುದೇ ಸಂದರ್ಭದಲ್ಲಿ ನಾನು ರಾಜಕೀಯ ಮಾಡಿಲ್ಲ. ಕಳೆದ ಚುನಾವಣೆಯಲ್ಲಿ ನನಗೆ ಸೋಲಾದರೂ, ಮನೆಯಲ್ಲಿ ಕುಳಿತುಕೊಳ್ಳದೆ ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನವನ್ನು ನಿಷ್ಠೆಯಿಂದ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಆದ ಯೋಜನೆಗಳನ್ನು ಪ್ರಸ್ತುತ ಬಿಜೆಪಿ ಶಾಸಕರು ಉದ್ಘಾಟನೆ ಮಾಡುತ್ತಿದ್ದಾರೆ. ಅದೇ ಅವರ ಸಾಧನೆ. ಪ್ರಸ್ತುತ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸ್ಪಷ್ಟವಾಗಿದೆ. ಅಧಿಕಾರ ಇರಲಿ ಅಧಿಕಾರ ಇಲ್ಲದಿರಲಿ, ಜಾತಿ ಧರ್ಮವನ್ನು ನೋಡಿಲ್ಲ. ಪಕ್ಷಾತೀತವಾಗಿ ಕಾಪು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೋರಾಟ ಮಾಡಿದ್ದೇನೆ ಮತ್ತು ಜನರ ಸಹಕಾರದಿಂದ ಯಶಸ್ವಿಯಾಗಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ. ಕಪ್ಪು ಚುಕ್ಕೆ ಇಲ್ಲದ ನನ್ನ ರಾಜಕೀಯ ಜೀವನದ ಈ ಚುನಾವಣೆಗೆ ಮತದಾರರು ಆಶೀರ್ವದಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ ಎಂದು ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಬಂಟಕಲ್ಲು : ರವಿಪ್ರಭ ಕೆ ಅವರಿಗೆ ಪಿಎಚ್ಡಿ ಪದವಿ ಪ್ರದಾನ

Posted On: 01-03-2023 01:25PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾದ ರವಿಪ್ರಭಾ ಕೆ ಇವರು ಎನ್.ಎಮ್.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ ಇಲ್ಲಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ರಮೇಶ್ ಭಟ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಸ್ಟಡೀಸ್ ಆಫ್ ಕೊರೊಶನ್ ಇನ್ಹಿಬಿಶನ್ ಆಫ್ ಅಲ್ಯುಮಿನಿಯಂ ಬೈ ಯುಸಿಂಗ್ ಸಿಂಪಲ್ ಆ್ಯಂಡ್ ಫ್ಯೂಸ್ಡ್ ಹೀಟಿರೋಸೈಕ್ಲಿಕ್ ಕಾಂಪೌಂಡ್ಸ್ ಇನ್ ಅಸಿಡಿಕ್ ಮಿಡಿಯಮ್ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪ್ರಾಧ್ಯಾಪಕಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಮಾಚ್೯ 21, 22 : ಕಾಪು ಮಾರಿಯಮ್ಮನ ಸನ್ನಿಧಿಯಲ್ಲಿ ಕಾಲಾವಧಿ ಸುಗ್ಗಿ ಮಾರಿಪೂಜೆ

Posted On: 01-03-2023 10:28AM
ಕಾಪು : ಇಲ್ಲಿನ ಮೂರು ಮಾರಿಗುಡಿಗಳಲ್ಲಿ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜೆ ಮಾಚ್೯ 21, ಮಂಗಳವಾರ ಮತ್ತು 22, ಬುಧವಾರದಂದು ನಡೆಯಲಿದೆ ಎಂದು ಮೂರು ಮಾರಿಗುಡಿಗಳ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಳೆ, ಹೊಸ, ಕಲ್ಯಾ(ಮೂರನೆಯ) ಮಾರಿಗುಡಿಗಳಲ್ಲಿ ವಿಶೇಷವಾಗಿ ಮಾರಿಪೂಜೆ ಆಚರಿಸಲಾಗುತ್ತದೆ. ಜಿಲ್ಲೆ ಹೊರತುಪಡಿಸಿ ವಿವಿದೆಡೆಗಳಿಂದ ಭಕ್ತ ಜನರು ಮಾರಿಪೂಜೆಯಲ್ಲಿ ಭಾಗವಹಿಸುತ್ತಾರೆ.
ಮಾಚ್೯ 14 ಮೀನ ಸಂಕ್ರಮಣದಂದು ಕುರಿ ಬಿಡುವ ಕ್ರಮವಿದ್ದು ಅದರ ನಂತರದ ವಾರದಲ್ಲಿ ಮಾರಿಪೂಜೆ ನಡೆಯುತ್ತದೆ.
ಈ ಸಂದರ್ಭದಲ್ಲಿ ಕಾಪು ಹಳೆ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಹೆಗ್ಡೆ, ಮೂರನೇ ಮಾರಿಗುಡಿಯ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್, ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಭಟ್ ಕೆ. ಎಮ್ ಇವರ ಗುರುವಂದನಾ ಕಾರ್ಯಕ್ರಮಕ್ಕಾಗಿ ಸಜ್ಜಾಗಿದೆ ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರು

Posted On: 28-02-2023 10:19PM
ಕಾಪು : ಗೋಪಾಲಕೃಷ್ಣ ಭಟ್ ಕೆ. ಎಮ್ ದೂರದ ಕಾಸರಗೋಡುವಿನ ಸಂಪ್ರದಾಯಸ್ಥ ಮನೆತನದ ಪರಮೇಶ್ವರ ಭಟ್ ಮತ್ತು ಸುಮತಿ ದಂಪತಿಗಳ ಪುತ್ರರಾಗಿ ಜನಿಸಿದ ಶ್ರೀಯುತರು ಬಾಲ್ಯದ ವಿದ್ಯಾಭ್ಯಾಸವನ್ನು ತನ್ನ ಊರಿನಲ್ಲಿ ಪಡೆದರು. ಇವರ ಕುಟುಂಬವು ಕೂಡ ಶಿಕ್ಷಕ ಕುಟುಂಬವೆಂದು ಹೇಳಿದರೂ ಅತಿಶಯೋಕ್ತಿಯಾಗಲಾರದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಮಾತು ಇವರಿಗೆ ಎಲ್ಲಾ ವಿಧದಲ್ಲೂ ಸಲ್ಲುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಗಣಿತ ಹಾಗೂ ವಿಜ್ಞಾನದ ಬಗ್ಗೆ ಅಪಾರ ಅನುಭವ ಹೊಂದಿ ಆ ಅನುಭವವನ್ನು ಮೈಗೂಡಿಸಿಕೊಂಡ ಹಿರಿಮೆ ಇವರದ್ದು. ಇವರು ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಗೆ 1986 ರಲ್ಲಿ ಅಧ್ಯಾಪಕರಾಗಿ ಸೇರಿ ಗಣಿತ ಪಾಠ ಮಾಡುವುದರಲ್ಲಿ ವರ್ಷದಿಂದ ವರ್ಷಕ್ಕೆ ಎತ್ತರಕ್ಕೆ ಏರುತ್ತಾ ಹೋದರು. ಉಡುಪಿ ಜೆಲ್ಲೆಯಲ್ಲಿ ಸತತವಾಗಿ ಮೂರು ಬಾರಿ ಎಸ್ ಎಸ್ ಎಲ್ ಸಿ ಗಣಿತದಲ್ಲಿ ಸರಾಸರಿ ಅಂಕಗಳಲ್ಲಿ ಪ್ರಥಮ, ಉಡುಪಿ ಜಿಲ್ಲಾ ಸಾಧಕ ಶಿಕ್ಷಕ ಪ್ರಶಸ್ತಿ, ತನ್ನೂರಿನ ಹಾಗೂ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿದೆ.
ನಿವೃತ್ತ ನೆಚ್ಚಿನ ಶಿಕ್ಷಕ ಗೋಪಾಲಕೃಷ್ಣ ಭಟ್ ಕೆ.ಎಮ್ ಇವರಿಗೆ ಶಾಲಾ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳೆಲ್ಲ ಸೇರಿ ಅದ್ದೂರಿ ಗುರುವಂದನಾ ಕಾರ್ಯಕ್ರಮ ಮಾರ್ಚ್ 3ರಂದು ನಡೆಯಲಿದೆ.
ಜಾತಿ, ಧರ್ಮ, ಪಕ್ಷ , ಪಂಗಡ ಇವೆಲ್ಲವುಗಳನ್ನು ಮರೆತು ಎಲ್ಲರಿಗೂ ಸಮಾನತೆ, ಸೌಹಾರ್ದತೆ, ಸಹ ಬಾಳ್ವಿಕೆಯನ್ನು ಕಲಿಸಿ ಕೊಡುವ ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರಿನ ಈ ಅದ್ದೂರಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗೋಣ.
✍️ ಉದಯ ಕುಲಾಲ್ ವರದಿಗಾರರು ನಮ್ಮ ಕಾಪು ನ್ಯೂಸ್