Updated News From Kaup
ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ, ಶ್ರೀ ವಿಶ್ವ ಬ್ರಾಹ್ಮಣ ಮಹಿಳಾ ಬಳಗದ ದಶಮಾನೋತ್ಸವ ಸಂಭ್ರಮ ಸಂಪನ್ನ

Posted On: 16-03-2023 06:24PM
ಶಿರ್ವ : ವಿಶ್ವಕರ್ಮ ಯುವ ಜನಾಂಗ ಸಾಮಾಜಿಕ ಚಟುವಟಿಕೆಯಲ್ಲಿ ಹಿಂದಿದೆ. 14ರಿಂದ 20 ವರ್ಷದ ಯುವಕರು ಕೇವಲ ಮೊಬೈಲ್ ನಲ್ಲಿ ತಲ್ಲೀನರಾಗಿದ್ದು ಈ ಬಗ್ಗೆ ಪಾಲಕರು ಮುತುವರ್ಜಿ ವಹಿಸಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಲ್ಲಿ ಜವಾಬ್ದಾರಿ ವಹಿಸಬೇಕು. ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅದು ವಿಶ್ವಕರ್ಮ ಸಮಾಜದವರಿಂದ ಮಾತ್ರ ಸಾಧ್ಯ ಎಂದು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು. ಅವರು ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ). ಶಿರ್ವ ಮತ್ತು ಶ್ರೀ ವಿಶ್ವ ಬ್ರಾಹ್ಮಣ ಮಹಿಳಾ ಬಳಗ ಶಿರ್ವ ಇದರ ದಶಮಾನೋತ್ಸವ ಸಂಭ್ರಮದ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
ಎಲ್ಲವನ್ನು ಸಾಧಿಸುವವರು ವಿಶ್ವಕರ್ಮರು. ರಾಜಕೀಯದಲ್ಲಿ ಗುರುತಿಸಬೇಕಿದ್ದರೆ ಸಂಘಟನೆಗಳು ಅತಿ ಪ್ರಾಮುಖ್ಯ ಎಂದು ವಿದ್ಯಾವರ್ಧಕ ಸಂಘ( ರಿ.) ಇದರ ಆಡಳಿತ ಅಧಿಕಾರಿ ಪ್ರೊ. ವೈ ಭಾಸ್ಕರ್ ಶೆಟ್ಟಿ ಹೇಳಿದರು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ನವೀನ್ ಆಚಾರ್ಯ, ದ.ಕ. ಜಿಲ್ಲೆ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮುಲ್ಕಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷರಾದ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತನ್ ಕುಮಾರ್ ಶೆಟ್ಟಿ, ಯೋಗೀಶ್ ಆಚಾರ್ಯ ಉಡುಪಿ, ಮಣಿಪಾಲ ಡಾ. ಪ್ರತಿಮಾ ಜಯ ಪ್ರಕಾಶ್ ಆಚಾರ್ಯ ಸಂದರ್ಭೋಚಿತವಾಗಿ ಮಾತನಾಡಿದರು.
ಸಮಾಜ ಸೇವಕರು ಹಾಗೂ ಉದ್ಯಮಿ ಕೆ.ಮನೋಹರ್ ಶೆಟ್ಟಿ, ಶಿರ್ವ ಸಿದ್ದಿವಿನಾಯಕ ದೇವಸ್ಥಾನದ ಸ್ಥಾಪಕರಾದ ಗ್ಲಾಬ್ರಿಯಲ್ ನಜರತ್, ವಾಸುದೇವ ಆಚಾರ್ಯ ಪರ್ಕಳ, ಹಿರಿಯ ದಂಪತಿಗಳಾದ ಶ್ರೀಮತಿ ಮತ್ತು ಶ್ರೀ ವ್ಯಾಸರಾಯ ಆಚಾರ್ಯ ಶಿರ್ವ ಇವರನ್ನು ಸನ್ಮಾನಿಸಲಾಯಿತು.
ಇಬ್ಬರಿಗೆ ವೈದ್ಯಕೀಯ ನೆರವು, 17 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಂಸ್ಥೆಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ, 4 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಸ್ಥಾಪಕ ಶ್ರೀಕಾಂತ್ ಆಚಾರ್ಯ ಕಾಪು ಪ್ರಾಸ್ತಾವನೆಗೈದರು. ಗೌರವಾಧ್ಯಕ್ಷರಾದ ಸುರೇಶ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಭಾಸ್ಕರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಉಮೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರವಿ ಪುರೋಹಿತರು ವಿಶ್ವಕರ್ಮ ಪೂಜೆ ನೆರವೇರಿಸಿದರು. ಪುರೋಹಿತ್ ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮಾಧವ ಆಚಾರ್ಯ ವಂದಿಸಿದರು. ನಂತರ ಸದಸ್ಯರಿಂದ ವಿವಿಧ ಮನೋರಂಜನೆ ಕಾರ್ಯಕ್ರಮ, ಥಂಡರ್ ಗೈಸ್ ಫೌಂಡೇಶನ್ (ರಿ) ಬಜ್ಪೆ ಇವರಿಂದ ಕ್ಷೇತ್ರ ಪುರಾಣ ಮಂಜರಿ ಕಾರ್ಯಕ್ರಮ ನೆರವೇರಿತು. ದಶಮಾನೋತ್ಸವದ ಸಂಚಾಲಕರಾದ ಪ್ರಶಾಂತ್ ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪಡುಬಿದ್ರಿ : ಮಾ.14ರಿಂದ ಮಾ.22ರವರೆಗೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ

Posted On: 14-03-2023 08:58PM
ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಾ.14ರಿಂದ ಮಾ. 22ರ ವರೆಗೆ ವರ್ಷಾವಧಿ ಮಹೋತ್ಸವ ವಿಜೃಂಭಣೆಯಿಂದ ಜರಗಲಿದೆ.

ಮಾ.14ರಂದು ಬೆಳಗ್ಗೆ ಧ್ವಜಾರೋಹಣ ಸಂಪನ್ನಗೊಂಡಿತು. ಮಾ.15ರಂದು ರಾತ್ರಿ ಬಲಿ ಉತ್ಸವ, ಆಯನೋತ್ಸವ, ದೀಪಾರಾಧನೆ, ಮಾ.16ರಂದು ರಾತ್ರಿ ಫಲೋತ್ಕ್ಷೆಪ ಬಲಿ ಉತ್ಸವ, ಮಾ.17ರಂದು ರಾತ್ರಿ ಬಲಿ ಉತ್ಸವ, ಪಡು ಸವಾರಿ, ಮಾ.18ರಂದು ರಾತ್ರಿ ಬಲಿ ಉತ್ಸವ, ಪಾರುಪತ್ಯಗಾರ ಕಟ್ಟೆಪೂಜೆ, ಮಾ.19 ರಂದು ರಾತ್ರಿ ಬಲಿ ಸೇವೆ, ಕೆರೆ ದೀಪೋತ್ಸವ, ಮಾ.20ರಂದು ರಾತ್ರಿ ಬಲಿ ಉತ್ಸವ, ತೆಂಕು ಸವಾರಿ ನಡೆಯಲಿದೆ.
ಮಾರ್ಚ್ 21ರಂದು ಬೆಳಗ್ಗೆ 11 ಗಂಟೆಗೆ ರಥಾ ರೋಹಣ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ರಾತ್ರಿ 11 ಗಂಟೆಯಿಂದ ಮಹಾ ರಥೋತ್ಸವ ಜರುಗಲಿದೆ. ಮಾ.22ರಂದು ಬೆಳಗ್ಗೆ 6.30 ಗಂಟೆಗೆ ಕವಾಟೋದ್ಘಾಟನೆ, ಬಲಿ ಉತ್ಸವ, ತುಲಾಭಾರ ಸೇವೆ, ಸಂಜೆ 4 ಗಂಟೆಗೆ ಚೆಂಡು ಉತ್ಸವ, ರಾತ್ರಿ 7 ಗಂಟೆಗೆ ಅವಭ್ರತಸ್ನಾನ, ಕಟ್ಟೆಪೂಜೆ, ಸೂಟೆದಾರ, ಬಲಿ ಉತ್ಸವ, ಧ್ವಜಾವರೋಹಣ ನಡೆಯಲಿದೆ ಮಾ.23ರಂದು ಬೆಳಗ್ಗೆ ಮಹಾ ಸಂಪ್ರೋಕ್ಷಣೆ, ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು : ಮಾ.14ರಂದು ಸಂಜೆ 6 ಗಂಟೆಯಿಂದ ಸ್ಯಾಕ್ಸೋಫೋನ್ ಮತ್ತು ನಾದಸ್ವರ ವಾದನ, ಮಾ.15ರಂದು ರಾತ್ರಿ 7 ಗಂಟೆಗೆ ಯಕ್ಷಗಾನ ಬಯಲಾಟ, ಮಾ.16ರಂದು ಸಂಜೆ ಸಂಗೀತ ಕಾರ್ಯಕ್ರಮ, ಮಾ.18 ರಂದು ರಾತ್ರಿ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಮಾ.21ರಂದು ಮಧ್ಯಾಹ್ನ 12 ಗಂಟೆಗೆ ಭಕ್ತಿ ಸುಧೆ, ಸಂಜೆ 4 ಗಂಟೆಗೆ ಭಕ್ತಿ ಸುಧೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಮಾ.22 ರಂದು ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಡುಪಿ : ಚುನಾವಣೆ ಸಂದರ್ಭ ಅಬಕಾರಿ ಅಕ್ರಮ ತಡೆಗಟ್ಟಲು ವಿಶೇಷ ತಂಡ ರಚನೆ

Posted On: 14-03-2023 07:11PM
ಉಡುಪಿ : ರಾಜ್ಯ ವಿಧಾನಸಭಾ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆ, ಮತದಾರರನ್ನು ಸೆಳೆಯಲು ನಕಲಿ/ ಕಳಪೆ ಮಟ್ಟದ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಗಳನ್ನು ತಯಾರಿಸಿ, ಸಾಗಾಣಿಕೆ ಹಾಗೂ ಶೇಖರಣೆ ಮಾಡಿ, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸುವ ಸಾಧ್ಯತೆ ಇದ್ದು, ಇದನ್ನು ಸೇವನೆ ಮಾಡಿದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು ಹಾಗೂ ಕೆಲವು ಸಮಾಜ ಘಾತುಕರು ಅಕ್ರಮವಾಗಿ ಆದಾಯ ಗಳಿಸಲು ತೆರಿಗೆ ಪಾವತಿಸಿರುವ ಮದ್ಯವನ್ನು ಖರೀದಿಸಿ, ದಾಸ್ತಾನು ಇಟ್ಟು, ಅದನ್ನು ಚುನಾವಣೆಯ ಡ್ರೈ ಡೇ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಇಂತಹ ಕಾರ್ಯಗಳನ್ನು ತಡೆಗಟ್ಟಿ ಅಂತಹವರ ವಿರುದ್ಧ ಅಬಕಾರಿ ಇಲಾಖೆ ವತಿಯಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ, ಜಾರಿ ಮತ್ತು ತನಿಖೆ ಕಾರ್ಯಗಳನ್ನು ಚುರುಕುಗೊಳಿಸಿ, ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ, ನಕಲಿ, ಕಳ್ಳಭಟ್ಟಿ, ಅನಧಿಕೃತ ಮದ್ಯ ತಯಾರಿ, ಸಾಗಾಣಿಕೆ, ದಾಸ್ತಾನು ಮತ್ತು ಮಾರಾಟ ಕಂಡುಬಂದಲ್ಲಿ ಟೋಲ್ ಫ್ರೀ ನಂ.: 1800 4250 732, ಉಡುಪಿ ದೂ.ಸಂಖ್ಯೆ: 0820-2532732, ಕುಂದಾಪುರ ದೂ.ಸಂಖ್ಯೆ: 08254-200902 ಹಾಗೂ ಕಾರ್ಕಳ ದೂ.ಸಂಖ್ಯೆ: 08258-298865 ತಾಲೂಕು ಕಂಟ್ರೋಲ್ ರೂಂ ಅಥವಾ ಅಬಕಾರಿ ಅಧಿಕಾರಿಗಳ ಸಂಚಾರಿ ದೂರವಾಣಿ ಸಂಖ್ಯೆಗಳಾದ ಜಿಲ್ಲಾ ಅಬಕಾರಿ ಉಪ ಆಯುಕ್ತರು ಮೊ.ನಂ: 9449597104, ಉಡುಪಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊ.ನಂ: 9449597113, ಕುಂದಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊ.ನಂ: 9449597777, ಉಡುಪಿ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ: 9449597114, ಕುಂದಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ: 9449597778, ಉಡುಪಿ ವಲಯ-1 ಅಬಕಾರಿ ನಿರೀಕ್ಷಕರು ಮೊ.ನಂ: 9448921980, ಉಡುಪಿ ವಲಯ-2 ಅಬಕಾರಿ ನಿರೀಕ್ಷಕರು ಮೊ.ನಂ:9731860034, ಕಾರ್ಕಳ ವಲಯ ಅಬಕಾರಿ ನಿರೀಕ್ಷಕರು ಮೊ.ನಂ: 9686198924, ಕುಂದಾಪುರ ವಲಯ ಅಬಕಾರಿ ನಿರೀಕ್ಷಕರು ಮೊ.ನಂ: 9731674117 ಹಾಗೂ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರು ಮೊ.ನಂ: 9035773785 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 1 : ಯುವಸೇನೆ ಮಡುಂಬು ಇನ್ನಂಜೆ - 16ನೇ ವಾರ್ಷಿಕೋತ್ಸವ - ಸಾಂಸ್ಕೃತಿಕ, ಮನೋರಂಜನಾ ಮತ್ತು ಸಭಾ ಕಾರ್ಯಕ್ರಮ

Posted On: 14-03-2023 07:34AM
ಕಾಪು : ಯುವಸೇನೆ ಮಡುಂಬು ಇನ್ನಂಜೆ ಇದರ 16ನೇ ವಾರ್ಷಿಕೋತ್ಸವ ಸಮಾರಂಭ ಏಪ್ರಿಲ್ 1, ಶನಿವಾರದಂದು ಮಡುಂಬು ಬೆರ್ಮೋಟ್ಟು ದೇವಸ್ಥಾನದ ಬಳಿ ನಡೆಯಲಿದೆ.
ಸಂಜೆ 6 ಗಂಟೆಯಿಂದ ಸ್ಥಳೀಯರಿಂದ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ರಾತ್ರಿ ಗಂಟೆ 8 ರಿಂದ ಸಭಾ ಕಾರ್ಯಕ್ರಮ ಜರಗಲಿದೆ.
ಸಭಾ ಕಾರ್ಯಕ್ರಮವನ್ನು ಕಾಪು ಮಡುಂಬುವಿನ ಜ್ಯೋತಿಷಿ ಮತ್ತು ಪುರೋಹಿತರಾದ ವಿದ್ವಾನ್ ಕೆ.ಪಿ. ಶ್ರೀನಿವಾಸ ತಂತ್ರಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಭಾಗವಹಿಸಲಿದ್ದು, ಅತಿಥಿಗಳಾಗಿ ಕಾಪು ಶಾಸಕರಾದ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮಹೇಶ್ ಶೆಟ್ಟಿ ತಿಮ್ಮರೋಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ (ನಿ.) ಮಂಗಳೂರು ಅಧ್ಯಕ್ಷರಾದ ಯಶ್ಪಾಲ್ ಸುವರ್ಣ, ಗುರ್ಮೆ ಫೌಂಡೇಶನ್ ಕಳತ್ತೂರು ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗುರ್ಮೆ, ಜನತಾದಳ (ಜಾತ್ಯತೀತ) ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಖ್ಯಾತ ವಕೀಲರಾದ ಸಂಕಪ್ಪ ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಡಿ. ಬಂಗೇರ, ಫ್ರೆಂಡ್ಸ್ ಕ್ಯಾಟರರ್ಸ್ ಶಂಕರಪುರ ಮಾಲಕರಾದ ನವೀನ್ ಅಮೀನ್, ಇನ್ನಂಜೆ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ರಾಜೇಶ್ ರಾವ್ ಪಾಂಗಾಳ, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ಶಾಂತ ಎಲೆಕ್ಟಿಕಲ್ಸ್ & ಇಂಜಿನಿಯರ್ಸ್ ಪ್ರೈ.ಲಿ. ಉಡುಪಿ ಇದರ ಆಡಳಿತ ನಿರ್ದೇಶಕರಾದ ಶ್ರೀಪತಿ ಭಟ್ ಉಪಸ್ಥಿತರಿರುವರು.
ರಾತ್ರಿ ಗಂಟೆ 9 ರಿಂದ ಶಾರದಾ ಆಟ್ಸ್೯ ಕಲಾವಿದೆರ್ ಮಂಜೇಶ್ವರ ತಂಡದಿಂದ ತುಳು ಹಾಸ್ಯಮಯ ನಾಟಕ ನಿತ್ಯೆ ಬನ್ನಗ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗೃಹ ರಕ್ಷಕರ ನೇಮಕಾತಿ : ಅರ್ಜಿ ಆಹ್ವಾನ

Posted On: 13-03-2023 06:27PM
ಉಡುಪಿ : ಜಿಲ್ಲಾ ಗೃಹರಕ್ಷಕದಳ ಇಲಾಖೆಯಲ್ಲಿ ಗೃಹರಕ್ಷಕರಾಗಿ ಸೇವೆ ಸಲ್ಲಿಸಲು ಇಚ್ಛಿಸುವ ಎಸ್.ಎಸ್.ಎಲ್.ಸಿ ಉತ್ತೀರ್ಣ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ, 19 ರಿಂದ 45 ವರ್ಷದೊಳಗಿನ ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾರ್ಚ್ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಗ್ನಿಶಾಮಕ ಕಚೇರಿ ಆವರಣದಲ್ಲಿರುವ ಜಿಲ್ಲಾ ಗೃಹರಕ್ಷಕದಳ ಕಚೇರಿ ದೂ.ಸಂಖ್ಯೆ: 0820-2533650, ಬೈಂದೂರು ಘಟಕಾಧಿಕಾರಿ ರಾಘವೇಂದ್ರ ಮೊ.ನಂ: 9449469838, ಕುಂದಾಪುರ ಘಟಕಾಧಿಕಾರಿ ಕೆ. ಭಾಸ್ಕರ್ ಮೊ.ನಂ: 9242126368, ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಮೊ.ನಂ: 9731897356, ಕಾರ್ಕಳ ಘಟಕಾಧಿಕಾರಿ ಪ್ರಭಾಕರ ಸುವರ್ಣ ಮೊ.ನಂ: 9632002170, ಕಾಪು ಘಟಕಾಧಿಕಾರಿ ಕುಮಾರ್ ವಿ ಕೋಟ್ಯಾನ್ ಮೊ.ನಂ: 9901930467, ಪಡುಬಿದ್ರೆ ಘಟಕಾಧಿಕಾರಿ ನವೀನ್ ಮೊ.ನಂ: 9880343236, ಮಣಿಪಾಲ ಘಟಕಾಧಿಕಾರಿ ಶೇಖರ್ ಮೊ.ನಂ: 6360895883 ಹಾಗೂ ಉಡುಪಿ ಘಟಕಾಧಿಕಾರಿ ಕುಮಾರ್ ಮೊ.ನಂ: 8971682721 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಮಾಂಡೆಂಟ್ ಡಾ. ಕೆ.ಪ್ರಶಾಂತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿಯಿಂದ ಪರಿಪೂರ್ಣತೆ: ಎಸ್.ಟಿ ಸಿದ್ದಲಿಂಗಪ್ಪ

Posted On: 13-03-2023 06:13PM
ಉಡುಪಿ : ತರಬೇತಿಯು ಅಧಿಕಾರಿ ಹಾಗೂ ಸಿಬ್ಬಂದಿಗಳಲ್ಲಿ ಜ್ಞಾನ, ಕೌಶಲ್ಯತೆ ಹಾಗೂ ಅತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು, ಯಾವುದೇ ಉದ್ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸುವಲ್ಲಿ ತರಬೇತಿಯು ಅತೀ ಅಗತ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ಧಲಿಂಗಪ್ಪ ಹೇಳಿದರು. ಅವರು ಗುರುವಾರ, ಮಲ್ಪೆಯ ಸಿ.ಎಸ್.ಪಿ ಕೇಂದ್ರ ಕಚೇರಿಯಲ್ಲಿ, ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 2 ನೇ ತಂಡದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಹಮ್ಮಿಕೊಂಡಿರುವ ಈಜು ತರಬೇತಿ, ಪ್ರಥಮ ಚಿಕಿತ್ಸೆ, ಸಮುದ್ರ ಈಜು ತರಬೇತಿ ಮತ್ತು ಒಳಾಂಗಣ ತರಬೇತಿಯು ಸಿ.ಎಸ್.ಪಿ ಘಟಕದ ಕರ್ತವ್ಯ ನಿರ್ವಹಣೆಗೆ ಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಲ್ಪೆ ಟೆಗ್ಮಾ ಕೊಚ್ಚಿನ್ ಶಿಫ್ಯಾರ್ಡ್ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹರಿಕುಮಾರ್ ಮಾತನಾಡಿ, ಯಾವುದೇ ಉದ್ಯೋಗದಲ್ಲಿ ತರಬೇತಿಯು ಅತೀ ಅಗತ್ಯವಾಗಿದ್ದು, ತರಬೇತಿಯು ತುರ್ತು ಸಮಯದಲ್ಲಿ ಸಾರ್ವಜನಿಕರ ಜೀವ ಮತ್ತು ಸ್ವತ್ತು ರಕ್ಷಣೆಗೆ ಅನುಕೂಲವಾಗಲಿದೆ ಎಂದರು.
ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲ ಸಿ.ಎಸ್.ಪಿ ಕೇಂದ್ರ ಕಚೇರಿಯ ಡಿವೈಎಸ್ಪಿ ಟಿ.ಎಸ್ ಸುಲ್ಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್.ಪಿ ಕೇಂದ್ರ ಕಚೇರಿಯ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಸ್ವಾಗತಿಸಿ, ನಿಸ್ತಂತು ವಿಭಾಗದ ಪಿ.ಎಸ್.ಐ ಮನಮೋಹನ ರಾವ್ ನಿರೂಪಿಸಿ, ಪಿ.ಐ ಕರುಣಾಸಾಗರ ವಂದಿಸಿದರು. 25 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದು, ಇವರಿಗೆ 2 ವಾರಗಳ ಕಾಲ ತರಬೇತಿ ನಡೆಯಲಿದೆ.
ಪಡುಬಿದ್ರಿ : ಟೈಮಿಂಗ್ ವಿಚಾರ - ಬಸ್ ನಿರ್ವಾಹಕ, ಟೈಂ ಕೀಪರ್ ಹೊಡೆದಾಟ ; ದೂರು -ಪ್ರತಿದೂರು ದಾಖಲು

Posted On: 13-03-2023 06:05PM
ಪಡುಬಿದ್ರಿ : ಬಸ್ ನ ಟೈಮಿಂಗ್ ವಿಚಾರವಾಗಿ ಬಸ್ ನಿರ್ವಾಹಕ ಮತ್ತು ಬಸ್ ಟೈಮ್ ಕೀಪರ್ ನಡುವಿನ ಹೊಡೆದಾಟದ ಘಟನೆ ರವಿವಾರ ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರು - ಕುಂದಾಪುರ ಮಾರ್ಗದ ವೇಗದೂತ ಬಸ್ ನಿರ್ವಾಹಕ ಕಾಪು ಮಲ್ಲಾರುವಿನ ಶಮೀಯುಲ್ಲಾ ನೀಡಿದ ದೂರಿನಲ್ಲಿ ಬಸ್ಸು ಹೊರಡುವ ಸಮಯ ಪಡುಬಿದ್ರಿ ಟೈಂ ಕೀಪರ್ ಮಹೇಶ್ ಎಂಬಾತನು ಬಸ್ಸಿನ ಮುಂದೆ ಬಂದು, ಮುಂದೆ ಹೋಗದಂತೆ ತಡೆದಿದ್ದು, ಆತನನ್ನು ಕೇಳುತ್ತಿದ್ದಾಗ, ಮಹೇಶನು ಹಲ್ಲೆಮಾಡಿ ಅವ್ಯಾಚ್ಯವಾಗಿ ಬೈದು ಬಸ್ಸಿನ ಚಾಲಕನಿಗೂ ಮುಂದಕ್ಕೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಇತ್ತ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ನಿವಾಸಿ ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ಟೈಂ ಕೀಪರ್ ಆಗಿರುವ ಮಹೇಶ್ ಮಂಗಳೂರು - ಕುಂದಾಪುರದ ಎಕ್ಸ್ಪ್ರೆಸ್ ಬಸ್ಸು ಪಡುಬಿದ್ರಿಯ ಬಸ್ಸು ನಿಲ್ದಾಣಕ್ಕೆ ಬಂದಿತ್ತು. ಹೊರಡುವ ಸಮಯವಾದ್ದರಿಂದ ಹೊರಡುವಂತೆ ಚಾಲಕನಿಗೆ ಸೂಚಿಸಿದರೂ ಕೂಡಾ ಹೊರಡದೇ ಇದ್ದುದರಿಂದ, ಬಸ್ಸಿನ ಎದುರು ಬಂದು, ಹಿಂದಿನಿಂದ ಬರುವ ಬಸ್ಸಿಗೆ ಕೆಲಸ ಮಾಡುತ್ತಿರುವಾಗ, ಸದ್ರಿ ಬಸ್ಸಿನ ಕಂಡಕ್ಟರ್ ಶಮೀಯುಲ್ಲಾ ಎಂಬುವರು ಹಲ್ಲೆ ಮಾಡಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರು ನೀಡಿರುತ್ತಾರೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು - ಪ್ರತಿದೂರು ದಾಖಲಾಗಿದೆ.
ಶಿರ್ವ : ಮಾಣಿಬೆಟ್ಟುವಿನಲ್ಲಿ ಕಾಪುವಿಗಾಗಿ ಕಾಂಗ್ರೆಸ್ ಬ್ಯಾನರ್ ಹರಿದ ಕಿಡಿಗೇಡಿಗಳು ; ಕ್ರಮಕ್ಕಾಗಿ ಆಗ್ರಹ

Posted On: 13-03-2023 04:48PM
ಶಿರ್ವ : ಇಲ್ಲಿನ ಮಾಣಿಬೆಟ್ಟುವಿನಲ್ಲಿ ಕಾಪುವಿಗಾಗಿ ಕಾಂಗ್ರೆಸ್ ಎಂದು ಕಾಂಗ್ರೆಸ್ ಪಕ್ಷದಿಂದ ಮುಂಬರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಹಾಕಲಾಗಿದ್ದ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಬ್ಯಾನರ್ ಹರಿಯುವ ಮೂಲಕ ದುಷ್ಕೃತ್ಯವೆಸಗಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮಾ.31 ರಿಂದ ಏ.2 : ಕಾಪು ಬಿಲ್ಲವರ ಸಹಾಯಕ ಸಂಘದ ನೂತನ ಶಿಲಾಮಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ

Posted On: 13-03-2023 07:12AM
ಕಾಪು : ಇಲ್ಲಿನ ಬಿಲ್ಲವರ ಸಹಾಯಕ ಸಂಘ(ರಿ.) ಕಾಪು ಇಲ್ಲಿ ಮಾಚ್೯ 31ರಿಂದ ಏಪ್ರಿಲ್ 2 ರವರೆಗೆ ಖ್ಯಾತ ವಾಸ್ತು ತಜ್ಞರಾದ ತ್ರಿವಿಕ್ರಂ ಭಟ್ರವರ ಮಾರ್ಗದರ್ಶನದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ, ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳು ಜರಗಲಿದೆ.

ಆಗಮೋಕ್ತ ವೈದಿಕ ವಿಧಿಗಳು ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠ, ಸೋಲೂರು ಇಲ್ಲಿನ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶಿವಗಿರಿಮಠದ ಮಠಾಧೀಶರಾದ ಶ್ರೀ ಪ್ರಭೋದ ತೀರ್ಥ ಸ್ವಾಮೀಜಿ ಇವರುಗಳ ಉಪಸ್ಥಿತಿಯಲ್ಲಿ ಕ್ಷೇತ್ರದ ಅರ್ಚಕರಾದ ಕಟಪಾಡಿ ಅರವಿಪುರಂ ಮಠದ ಚರಣ್ ಶಾಂತಿ ಪೌರೋಹಿತ್ಯದಲ್ಲಿ ನೆರವೇರಲಿದೆ.
ಮಾಚ್೯ 31, ಶುಕ್ರವಾರ ಧಾರ್ಮಿಕ ಕಾರ್ಯಕ್ರಮ, ಸಂಜೆ ಗಂಟೆ 3ಕ್ಕೆ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಿಂದ ಮಂದಿರಕ್ಕೆ ಹೊರಡಲಿರುವ ಶ್ರೀ ವಿಠೋಭ ರುಕುಮಾಯಿ ದೇವರ ರಜತ ಕವಚ ಮತ್ತು ಪ್ರಭಾವಳಿ, ಶ್ರೀ ಗುರುದೇವರ ರಜತ ಪಾದುಕೆ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ, ಕರದಾಳ ಕಲಬುರ್ಗಿಯ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಇವರು ಚಾಲನೆ ನೀಡುವರು. ಸಂಜೆ ಗಂಟೆ 6ಕ್ಕೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಸಲಿದ್ದು, ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ, ಕರದಾಳ ಕಲಬುರ್ಗಿಯ ಶ್ರೀ ಪಣವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸತ್ಯಜಿತ್ ಸುರತ್ಕಲ್, ಪ್ರವೀಣ್ ಎಂ. ಪೂಜಾರಿ, ರಮೇಶ್ ಹೆಗ್ಡೆ, ಕಲ್ಯ, ಪ್ರಸಾದ್ ಗೋಕುಲ್ದಾಸ್ ಶೆಣೈ, ಉಮೇಶ್ ಕಾಪು, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಚಲನಚಿತ್ರ ನಟರಾದ ಪೃಥ್ವಿ ಅಂಬಾರ್, ಚಿರಶ್ರೀ ಅಂಚನ್ ಹಾಗೂ ಗೌರವ ಉಪಸ್ಥಿತಿಯಲ್ಲಿ ಪ್ರಭಾಕರ ಎಸ್. ಪೂಜಾರಿ, ಚರಣ್ ಶಾಂತಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರುಗಳಿಗೆ, ಹೆಜಮಾಡಿಯಿಂದ ಉದ್ಯಾವರದವರೆಗೆ ಕಾಪು ವ್ಯಾಪ್ತಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಮತ್ತು ದೈವಸ್ಥಾನಗಳ ಅರ್ಚಕರಿಗೆ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ದರ್ಶನ ಪೂಜಾರಿಗಳಿಗೆ, ಬಿಲ್ಲವ ಸಂಘಗಳ ಅಧ್ಯಕ್ಷರುಗಳಿಗೆ ಹಾಗೂ ರೂ.10 ಸಾವಿರದಿಂದ ಮೇಲ್ಪಟ್ಟು ರೂ.25 ಸಾವಿರದವರೆಗೆ ಆರ್ಥಿಕ ಸಹಾಯ ಮಾಡಿದ ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ.
ಏಪ್ರಿಲ್ 1, ಶನಿವಾರ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಏಪ್ರಿಲ್ 2, ರವಿವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 3ರಿಂದ 5:30ರ ತನಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾದಳ, ಕಾಪು ಹಾಗೂ ಗುರುಶ್ರೀ ಮಹಿಳಾ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಗಂಟೆ 6 ರಿಂದ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ, ರೇಣುಕಾ ಪೀಠ, ಸೋಲೂರು ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ರಾಜಶೇಖರ ಕೋಟ್ಯಾನ್, ಹರೀಶ್ ಜಿ. ಅಮೀನ್, ಸೂರ್ಯಕಾಂತ್ ಜೆ. ಪೂಜಾರಿ, ಬಿ.ಎನ್. ಶಂಕರ ಪೂಜಾರಿ, ಮಟ್ಟಾರು ರತ್ನಾಕರ ಹೆಗ್ಡೆ, ಯೋಗೀಶ್ ಶೆಟ್ಟಿ, ಬಾಲಾಜಿ, ಪದ್ಮರಾಜ್ ಮಂಗಳೂರು, ಎನ್. ಟಿ. ಪೂಜಾರಿ, ಬಹುಭಾಷಾ ನಟ ಸುಮನ್ ತಲ್ವಾರ್, ಸತೀಶ್ ಪೂಜಾರಿ ಬೆಳಪು, ಉಮೇಶ್ ಕಾಪು, ಸರಿತ ಪೂಜಾರಿ ಹಾಗೂ ಗೌರವ ಉಪಸ್ಥಿತಿಯಲ್ಲಿ ಪ್ರಭಾಕರ ಎಸ್. ಪೂಜಾರಿ, ಚರಣ್ ಶಾಂತಿ, ಮಹೇಶ್ ಶಾಂತಿ ಭಾಗವಹಿಸಲಿದ್ದಾರೆ. ಈ ಸಂದರ್ಭ ರೂ. 25,000 ದಿಂದ ಮೇಲ್ಪಟ್ಟು ಧನಸಹಾಯ ನೀಡಿದ ಎಲ್ಲಾ ದಾನಿಗಳಿಗೆ ಹಾಗೂ ಮಂದಿರದ ವಿವಿಧ ಕಾಮಗಾರಿಗಳ ವೆಚ್ಚವನ್ನು ಭರಿಸಿದ ದಾನಿಗಳನ್ನು ಗೌರವಿಸಲಾಗುವುದು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷರಾದ ವಿಕ್ರಂ ಕಾಪು ವಹಿಸಲಿದ್ದಾರೆ. ರಾತ್ರಿ ಗಂಟೆ 9:30ರಿಂದ ರುದ್ರ ಥಿಯೇಟರ್ ಮಂಗಳೂರು ಅಭಿನಯಿಸುವ ವಿದ್ದು ಉಚ್ಚಿಲ್ ನಿರ್ದೇಶನದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತದ ಪರಿಕಲ್ಪನೆಯಲ್ಲಿ “ಶೂದ್ರ ಶಿವ” ಕನ್ನಡ ನಾಟಕ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸರಕಾರ ತಲುಪಲು ಸಾಧ್ಯವಾಗದ ಪ್ರದೇಶದಲ್ಲಿಯೂ ಸ್ವಯಂ ಸೇವಾ ಸಂಸ್ಥೆಗಳ ಕರ್ತವ್ಯ ಶ್ಲಾಘನೀಯ : ಗಂಗಾಧರ ಗಾಂಧಿ

Posted On: 13-03-2023 07:07AM
ಮಂಗಳೂರು : ನ್ಯಾಯವಾದಿ, ಕವಯತ್ರಿ, ಮಕ್ಕಳ ಸಾಹಿತಿ ಪರಿಮಳ ರಾವ್ ಕೆ. ಸಾರಥ್ಯದ ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಉದ್ಘಾಟನೆ ಅಂಗವಾಗಿ ಕಥಾಲಾಪ ಮತ್ತು ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಮಂಗಳೂರಿನ ಕದ್ರಿ ಬಾಲಭವನದಲ್ಲಿ ಮಾಚ್೯ 12ರಂದು ನೆರವೇರಿತು. ಕಾರ್ಯಕ್ರಮವನ್ನು NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಇಂದು ಅಧಿಕೃತವಾಗಿ ಅನಾವರಣಗೊಂಡಿದೆ. ದೇಶದಲ್ಲಿ ಲಕ್ಷಾಂತರ ಸ್ವಯಂ ಸೇವಾ ಸಂಸ್ಥೆಗಳು ಕರ್ತವ್ಯ ನಿರ್ವಹಿಸುತ್ತಿದೆ, ಸರಕಾರ ತಲುಪಲು ಸಾಧ್ಯವಾಗದ ಪ್ರದೇಶದಲ್ಲಿಯೂ ತನ್ನ ಕಾರ್ಯಚಟುವಟಿಕೆ ನಡೆಸುತ್ತಿದೆ. ಈ ಕಾರಣದಿಂದಾಗಿ ಭಾರತದ ಅನೇಕ ಹಳ್ಳಿ ಪ್ರದೇಶಗಳು ಅಭಿವೃದ್ಧಿಗೊಂಡಿವೆ. ಇದು ಸ್ವಯಂ ಸೇವಾ ಸಂಸ್ಥೆಯ ಕಾರ್ಯವೈಖರಿ ಎಂದ ಅವರು ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಪಾರದರ್ಶಕತ್ವವನ್ನು ಅನಾವರಣ ಗೊಳಿಸುತ್ತಾ ಸಮಾಜದ ಎಲ್ಲಾ ಸಮುದಾಯದ ಆಶಯಗಳಿಗೆ ಸ್ಪಂದಿಸುವಂತಾಗಬೇಕು. ಆಗಲೇ ಅನಾವರಣದ ಸಮಾಜಮುಖಿ ಕಾರ್ಯಗಳು ಈಡೇರಲು ಸಾಧ್ಯವೆಂದು ಮಾರ್ಮಿಕವಾಗಿ ಹೇಳಿದರು.

ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ ಅಧ್ಯಕ್ಷೆ , ನ್ಯಾಯವಾದಿ ಪರಿಮಳ ರಾವ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. KSSAP ಅಧ್ಯೆಕ್ಷೆ ರಾಣಿಪುಷ್ಪಲತಾದೇವಿ , ಕಥಾಲಾಪ ಅಧ್ಯಕ್ಷ ಮುಕ್ತಕ, ಗಜಲ್ ಕವಿ ಡಾ. ಸುರೇಶ್ ನೆಗಳಗುಲಿ , ಕಥಾಲಾಪ ಸಂಚಾಲಕಿ ಗೀತಾ ಲಕ್ಷ್ಮೀಶ ಉಪಸ್ಥಿತರಿದ್ದರು.

ಆಶ್ವಿಜ ಶ್ರೀಧರ್ ಪ್ರಾರ್ಥನೆಗೈದರು, ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ಪರಿಮಳ ರಾವ್ ಕೆ. ಸ್ವಾಗತಿಸಿ, ಪ್ರಾಸ್ತಾವನೆ ಗೈದರು. ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು.

ಕಥಾಲಾಪದಲ್ಲಿ ವ. ಉಮೇಶ್ ಕಾರಂತ್, ಅಶ್ವಿಜ ಶ್ರೀಧರ್, ಜಯರಾಮ ಪಡ್ರೆ, ರಾಮಾಂಜಿ ನಮ್ಮ ಭೂಮಿ, ಗೋಪಾಲಕೃಷ್ಣ ಶಾಸ್ತ್ರಿ, ರೇಖಾ ಸುದೇಶ್ ರಾವ್, ಶ್ಯಾಮಪ್ರಸಾದ್ ಭಟ್, ದೀಪಾ ಸದಾನಂದ್, ನವೀನ್ ಕುಮಾರ್ ಪೆರಾರ, ಮಾನ್ವಿ ಮಂಗಳೂರು, ಹಿತೇಶ್ ಕುಮಾರ್ ಎ, ಸುಗಂಧಿ ಶ್ಯಾಮ್, ಪದ್ಮನಾಭ ಮಿಜಾರು, ದೇವರಾಜ್ ಕುಂಬ್ಳೆ, ಚಿತ್ರಕಲಾ ದೇವರಾಜ್, ರೇಮಂಡ್ ಡಿಕೂನ ತಾಕೊಡೆ, ಅನುರಾಧಾ ರಾಜೀವ್, ಹರೀಶ್ ಮೆಲ್ಕಾರ್, ದಯಮಣಿ ಎಕ್ಕಾರ್, ವಾಣಿ ಲೋಕಯ್ಯ, ಸೌಮ್ಯ ಆರ್ ಶೆಟ್ಟಿ, ಎ. ಕೆ. ಕುಕ್ಕಿಲ ತಮ್ಮ ಸ್ವರಚಿತ ಕತೆಗಳನ್ನು ವಾಚಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.