Updated News From Kaup
ಉಡುಪಿ : ಮೇ 19ರಂದು ಮಿನಿ ಉದ್ಯೋಗ ಮೇಳ
Posted On: 17 May 2023, 10:34 AM
ಉಡುಪಿ : ಅದ್ವಿತ್ ಐ ಟೆಕ್ ಪ್ರೈ.ಲಿ, ಆಭರಣ ಮೋಟಾರ್ಸ್, ಸುಷ್ಮಾ ಆಟೋಮೊಬೈಲ್ಸ್, ಕಾಂಚನ್ ಅಥರ್ ಎಲೆಕ್ಟ್ರಿಕಲ್ ಹಾಗೂ ಬಿ.ಎಸ್.ಎಲ್ ಇಂಡಿಯಾ ಪ್ರೈ.ಲಿ ಕಂಪನಿಗಳ ವತಿಯಿಂದ ಮೇ 19 ರಂದು ಬೆಳಗ್ಗೆ 10.30 ಕ್ಕೆ ಬಿ.ಎಸ್.ಎಲ್ ಇಂಡಿಯಾ ಪ್ರೈ.ಲಿ, ಸಂಪರ್ಕ ಜೆರಾಕ್ಸ್ ಹತ್ತಿರ, 2ನೇ ಮಹಡಿ, ನಂದ ಕಮರ್ಷಿಯಲ್ ಕಾಂಪ್ಲೆಕ್ಸ್, ಕೋರ್ಟ್ ರೋಡ್, ಉಡುಪಿ ಇಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ, ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ:8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಪಡುಕುತ್ಯಾರು ಆನೆಗುಂದಿಶ್ರೀಗಳ ಪಟ್ಟಾಭಿಷೇಕ ವರ್ಧಂತಿ ಸಂಪನ್ನ ; ಪ್ರಶಸ್ತಿ ಪ್ರಧಾನ ; ಶೈಕ್ಷಣಿಕ ಸಾಧಕರಿಗೆ ಅಭಿನಂದನೆ
Posted On: 16 May 2023, 02:17 PM
ಕಾಪು : ನವ ಮಾದ್ಯಮ ಕಾಲದಲ್ಲಿ ಸಂಸ್ಕಾರಯುತ ಜೀವನ ನಡೆಸುವುದನ್ನು ಎಳೆಯ ಮಕ್ಕಳಿಗೆ ಕಲಿಸುವ ಪ್ರಯತ್ನ ನಡೆಯಬೇಕು. ಇದಕ್ಕಾಗಿ ಹೆತ್ತವರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು. ಅವರು ಪಡುಕುತ್ಯಾರು ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ತಮ್ಮ ಪಟ್ಟಾಭಿಷೇಕ ಮಹೋತ್ಸವದ 13ನೇ ವರ್ಷದ ವರ್ಧಂತ್ಯುತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ವಿವಿಧ ವಿಭಾಗಗಳಲ್ಲಿ ಸಾಧಕರನ್ನು ಮಹಾಸಂಸ್ಥಾನದಿಂದ ಗುರುತಿಸುವ ಪ್ರಯತ್ನ ಮಾಡಲಾಗಿದೆ. ತಮ್ಮ ಕುಲಕಸುಬು ಮಾಡಿಕೊಂಡು ತೆರೆಮರೆಯಲ್ಲಿರುವ ಸಾಧಕರನ್ನೂ ಈ ಬಾರಿ ಗುರುತಿಸಿದ್ದೇವೆ. ಎಂದು ಅವರು ಸೇವಾ ವಲಯದಲ್ಲಿ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಯ ಬಗ್ಗೆ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು. ಮಹಾಸಂಸ್ಥಾನದ ವ್ಯಾಪ್ತಿಯಲ್ಲಿರುವ ಉತ್ತರ ಕನ್ನಡ, ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಶ್ರೀಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳು ಸಮಾಜ ಸದಸ್ಯರಿಂದ ಸಂಗ್ರಹಿಸಿದ ಗುರುಕಾಣಿಕೆಯನ್ನು ವಾಡಿಕೆಯಂತೆ ಜಗದ್ಗುರುಗಳವರಿಗೆ ಫಲತಾಂಬೂಲಗಳೊಂದಿಗೆ ಸಮರ್ಪಿಸಿ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಬೆಳಿಗ್ಗೆ ಜಗದ್ಗುರುಗಳವರಿಂದ ಕಟಪಾಡಿ ಶ್ರೀಮಹಾಸಂಸ್ಥಾನದಲ್ಲಿ ಶ್ರೀಕರಾರ್ಚಿತ ದೇವತಾ ಪೂಜೆ ಬಳಿಕ ಕಟಪಾಡಿಯಲ್ಲಿರುವ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಜಗದ್ಗುರುಗಳವರಿಂದ ಪೂಜೆ ನಡೆಯಲಿದೆ. ಬಳಿಕ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗ ನಡೆಯಿತು. ಬಳಿಕ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆ ನಡೆಯಿತು. ಬೆಳಿಗ್ಗೆ ಜಗದ್ಗುರುಗಳವರಿಂದ ಕಟಪಾಡಿ ಶ್ರೀಮಹಾಸಂಸ್ಥಾನದಲ್ಲಿ ಶ್ರೀಕರಾರ್ಚಿತ ದೇವತಾ ಪೂಜೆ ಬಳಿಕ ಕಟಪಾಡಿಯಲ್ಲಿರುವ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಜಗದ್ಗುರುಗಳವರಿಂದ ಪೂಜೆ ನಡೆಯಲಿದೆ. ಬಳಿಕ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗ ನಡೆಯಿತು. ಬಳಿಕ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆ ನಡೆಯಿತು. ಪ್ರಶಸ್ತಿ ಪ್ರಧಾನ : 2023ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು ಇವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ, ಬ್ರಹ್ಮಶ್ರೀ ಸೀತಾರಾಮ ಶಾಸ್ತ್ರಿ ಮಂಗಳೂರು (ವೈದಿಕ), ಮಂಟಪ ಕೇಶವ ಆಚಾರ್ಯ ಸಾಲಿಗ್ರಾಮ, ಮಂಜುನಾಥ ಆಚಾರ್ಯ ಚಿತ್ರಪಾಡಿ , ವ್ಯಾಸರಾಯ ಆಚಾರ್ಯ ಪಾದೂರು, ದಿವಾಕರ ಆಚಾರ್ಯ ಕೋಟೆಕಾರು(ಶಿಲ್ಪ) ವಿಘ್ನೇಶ್ವರ ಭಟ್ ಪುತ್ತೂರು (ಜ್ಯೋತಿಷ್ಯ), ಡಾ. ಸಿ.ಆರ್. ಚಂದ್ರ ಶೇಖರ್ ಬೆಂಗಳೂರು( ವೈದ್ಯಕೀಯ), ನೇಜಾರು ವಿಶ್ವನಾಥ ರಾವ್ ಕತಾರ್, ಬಿ. ವಿಶ್ವನಾಥ ರಾವ್ ಕೊಯಂಬುತ್ತೂರು( ಮರಣೋತ್ತರ) ( ಉದ್ಯಮ) ಎಂಬಿವರಿಗೆ ಆನೆಗುಂದಿಶ್ರೀ ಪ್ರಶಸ್ತಿಗೆ ಪ್ರದಾನ ಮಾಡಲಾಯಿತು. ವಿಜಯ ಕುಮಾರ್ ಕುಂಟಾಡಿ ಕೆ.ಎ.ಎಸ್ , ಬ್ರಹ್ಮಾವರ ಡಾ. ಗೋಪಾಲಕೃಷ್ಣ ನವದೆಹಲಿ ಇವರಿಗೆ ವಿಶೇಷ ಗೌರವಾಭಿನಂದನೆ ನಡೆಯಿತು. ಶೈಕ್ಷಣಿಕ ಸಾಧಕರಿಗೆ ಅಭಿನಂದನೆ : 2021,2022,2023 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್. ಎಲ್. ಸಿ, ಪಿ.ಯು.ಸಿ/ಪ್ಲಸ್ ಟು ಪರೀಕ್ಷೆಗಳಲ್ಲಿ 95% ಮತ್ತು ಅಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಪದವಿ, ಮೆಡಿಕಲ್, ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ರೇಂಕ್ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಜಗದ್ಗುರುಗಳವರಿಂದ ಅಭಿನಂದನೆ ನಡೆಯಿತು. ಶೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯಲ್ಲಿ ಋಕ್ ಸಂಹಿತಿಯನ್ನು ಪೂರ್ತಿಗೊಳಿಸಿದ ಎರಡನೇ ತಂಡದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ವಸಂತ ವೇದ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ನಡೆಸಿದ ಸ್ಪರ್ಧಾ ವಿಜೆತರಿಗೆ ಹಾಗೂ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಧರ್ಮಸಭೆಯಲ್ಲಿ ವಿದ್ವಾನ್ ವೇ.ಬ್ರ. ಶ್ರೀ ಶಂಕರ ಆಚಾರ್ಯ ಕಡ್ಲಾಸ್ಕರ್ (ಪಂಡಿತ್) ಹುಬ್ಬಳ್ಳಿ ಅವರಿಂದ ಗುರುಪೀಠಗಳು ಮತ್ತು ಯುವ ಜನತೆ ಎಂಬ ವಿಷಯದಲ್ಲಿ ಉಪನ್ಯಾಸ ನಡೆಯಿತು. ಆನೆಗುಂದಿ ಮೂಲ ಮಠ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಕೋಶಾಧಿಕಾರಿ ದಿನೇಶ್ ಆಚಾರ್ಯ ಪಡುಬಿದ್ರಿ, ಕಾಳಿಕಾಂಬಾ ದೇವಾಲಯಗಳ ಧರ್ಮದರ್ಶಿಗಳಾದ ಕೆ. ಕೇಶವ ಆಚಾರ್ಯ ಮಂಗಳೂರು, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಪ್ರಭಾಕರ ಆಚಾರ್ಯ ಚಿತ್ತೂರು, ಉಪ್ರಳ್ಳಿ, ಗಜಾನನ ಎನ್. ಆಚಾರ್ಯ ಭಟ್ಕಳ , ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಶೇಖರ ಆಚಾರ್ಯ ಕಾಪು , ಬಿ.ಎಂ.ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಜನಾರ್ದನ ಆಚಾರ್ಯ ಆರಿಕ್ಕಾಡಿ, ಕೆ. ಪ್ರಭಾಕರ ಆಚಾರ್ಯ ಮಧೂರು, , ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರಾದ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಮೋಹನ್ ಕುಮಾರ್ ಬೆಳ್ಳೂರು, ಸುಂದರ ಆಚಾರ್ಯ ಬೆಳುವಾಯಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ವೈ. ಧರ್ಮೇಂದ್ರ ಆಚಾರ್ಯ ನಿವೃತ್ತ ಸುಬೇದಾರ್ ಕಾಸರಗೋಡು, ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಮಧು ಆಚಾರ್ಯ ಮೂಲ್ಕಿ, ಸದಾನಂದ ಎಸ್. ಆಚಾರ್ಯ ಕಲ್ಯಾಣ ಪುರ, ತುಕಾರಾಮ ಆಚಾರ್ಯ ಬೆಂಗಳೂರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ ಆಚಾರ್ ಕಂಬಾರು ಪ್ರಾಸ್ತಾವನೆಯೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಕೆ. ಎಂ. ಗಂಗಾಧರ ಆಚಾರ್ಯ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು. ಶೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದ ಘೋಷ ನಡೆಯಿತು.
ಪಡುಬಿದ್ರಿ : ಚಾಲಕನ ನಿಯಂತ್ರಣ ತಪ್ಪಿದ ಬಸ್ ; ಆಟೋ ರಿಕ್ಷಾ ಜಖಂ
Posted On: 16 May 2023, 11:24 AM
ಪಡುಬಿದ್ರಿ : ಮಂಗಳೂರಿನಿಂದ ಕಾರ್ಕಳ ಹೋಗುವ ವೇಗದೂತ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಾರ್ಕಳ ಜಂಕ್ಷನ್ ನಲ್ಲಿದ್ದ ಪೋಲೀಸ್ ಬೂತ್ ಗೆ ಡಿಕ್ಕಿ ಹೊಡೆದು ಅದನ್ನು ಸುಮಾರು ನೂರು ಅಡಿ ಎಳೆದೊಯ್ದು ರಿಕ್ಷಾ ಸ್ಟ್ಯಾಂಡ್ ಗೆ ನುಗ್ಗಿದ ಬಸ್ಸು ಒಂದು ಆಟೋ ರಿಕ್ಷಾ ವನ್ನು ಸಂಪೂರ್ಣ ಜಖಂ ಗೊಳಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಅದ್ರಷ್ಟವಶಾತ್ ಬಸ್ ಅಲ್ಲಿಗೆ ನಿಂತಿದ್ದರಿಂದ ಹಲವರು ತಮ್ಮ ಪ್ರಾಣ ಕಳಕೊಳ್ಳವುದು ತಪ್ಪಿದೆ. ಪಕ್ಕದಲ್ಲಿ ಬ್ಯಾಂಕ್ ಎಟಿಎಂ ಅಲ್ಲದೆ ಹಲವಾರು ಅಂಗಡಿಗಳಿದ್ದು ಜನನಿಭಿಡ ಪ್ರದೇಶವಾಗಿತ್ತು. ಹೈವೇ ಪಕ್ಕ ಅಪಘಾತ ಸಂಭವಿಸಿದ ಕಾರಣ ಸ್ವಲ್ಪ ಹೊತ್ತು ಟ್ರಾಫಿಕ್ ಜಾಂ ಆಗಿದೆ. ಪಡುಬಿದ್ರಿ ಪೋಲಿಸ್ ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವ ಮೂಲಕ ತನಿಖೆ ನಡೆಸುತ್ತಿದ್ದಾರೆ.
ಮೇ 16 - 17 : ಮಲ್ಲಾರು ರಾಣೆಕೇರಿಯ ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾಲಾವಧಿ ರಾಶಿ ಮಾರಿಪೂಜೆ
Posted On: 15 May 2023, 10:33 AM
ಕಾಪು : ಇಲ್ಲಿನ ಮಲ್ಲಾರು ರಾಣೆಕೇರಿಯ ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾಲಾವಧಿ ರಾಶಿ ಮಾರಿಪೂಜೆಯು ಮೇ 16, ಮಂಗಳವಾರ ಹಾಗೂ ಮೇ 17, ಬುಧವಾರದಂದು ಜರಗಲಿದೆ. ಮೇ 15, ಸೋಮವಾರದಂದು ಬೆಳಿಗ್ಗೆ ಗಂಟೆ 8ಕ್ಕೆ ಶ್ರೀ ಮಾರಿಯಮ್ಮ, ಶ್ರೀ ಉಚ್ಚಂಗಿ ಮತ್ತು ಶ್ರೀ ಚಾಮುಂಡೇಶ್ವರೀ ದೇವಿಗೆ ರಜತ ಮುಖ ಸಮರ್ಪಣೆ ನಡೆಯಲಿದೆ. ಮೇ 16, ಮಂಗಳವಾರ ರಾತ್ರಿ ಗಂಟೆ 7ಕ್ಕೆ ಗಡುಮಾರಿಯಮ್ಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8ಕ್ಕೆ ಪ್ರಸಿದ್ಧ ಭಜನಾ ಮಂಡಳಿಗಳಿಂದ ಕುಣಿತಾ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 9ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 12ಕ್ಕೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ ಹಾಗೂ ರಾಶಿ ಪೂಜೆ ಮಹೋತ್ಸವ ಜರಗಲಿದೆ. ಮೇ 17, ಬುಧವಾರ ಬೆಳಿಗ್ಗೆ ಗಂಟೆ 6ಕ್ಕೆ ಅರಮನೆ ಪೂಜೆ, ಮಧ್ಯಾಹ್ನ ಗಂಟೆ 12-30ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 3ಕ್ಕೆ ಮಹಾ ಪೂಜೆ, ಶ್ರೀ ಮಾರಿಯಮ್ಮ ಹಾಗೂ ಚಾಮುಂಡೇಶ್ವರೀ ದೇವಿಯ ದರ್ಶನ ಸೇವೆ ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟದಿಂದ ಗೆಲುವು : ಗುರ್ಮೆ ಸುರೇಶ್ ಶೆಟ್ಟಿ
Posted On: 14 May 2023, 12:29 PM
ಕಾಪು : ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಹಿರಿಯರು ಮಾಡಿಕೊಟ್ಟ ಅವಕಾಶ, ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟ, ನಾಯಕರ ಸಂಕಲ್ಪದಿಂದ ಗೆಲುವಾಗಿದೆ ಎಂದು ನೂತನ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿಯವರು ಕಾಪುವಿನಲ್ಲಿ ಹೇಳಿದರು. ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕಾಪುವಿನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದು, ಈಗಾಗಲೇ ಶಾಸಕರಾಗಿದ್ದ ಲಾಲಾಜಿ ಮೆಂಡನ್ ಅವರ ಮುಂದುವರಿದ ಕಾಮಗಾರಿಗಳನ್ನು ಮುಂದುವರಿಸಲಾಗುವುದು. ಹಲವಾರು ಯೋಜನೆಗಳಿವೆ ಆ ಮೂಲಕ ಕಾಪು ಕ್ಷೇತ್ರವನ್ನು ಸಾಮಾಜಿಕ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಮೇಲಕೆತ್ತುವ ಕೆಲಸವನ್ನು ಮಾಡುತ್ತೇನೆ ಎಂದರು. ಸಮಾಜ ಸೇವೆ ಜೀವನದ ಒಂದು ಭಾಗ, ಶಾಸಕತ್ವದ ಮೂಲಕ ಜನಪರ ಕಾರ್ಯಗಳನ್ನು ಸಮಾಜಕ್ಕೆ ತಲುಪಲು ಸಾಧ್ಯವಿದೆ. ಅಧಿಕಾರಿಗಳು, ಸರ್ಕಾರದ ಮೇಲೆ ಒತ್ತಡ ಹಾಕಿ ಕೆಲಸ ಮಾಡುವ ಸೌಭಾಗ್ಯವನ್ನು ಭಗವಂತ ಒದಗಿಸಿದ್ದಾನೆ ಎಂದೂ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಈ ಸಂದರ್ಭ ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಲಾಲಾಜಿ ಮೆಂಡನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಿಲ್ಪಾ ಸುವರ್ಣ, ಮಟ್ಟಾರು ರತ್ನಾಕರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ವಿಜಯಿಯಾದ ಗುರ್ಮೆ ಸುರೇಶ್ ಶೆಟ್ಟಿಗೆ ಭವ್ಯ ಸ್ವಾಗತ
Posted On: 13 May 2023, 08:50 PM
ಕಾಪು : ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯನ್ನು 13,004 ಮತಗಳ ಅಂತರದಲ್ಲಿ ಸೋಲಿಸಿ ವಿಜಯಿಯಾದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಇಂದು ಸಂಜೆ ಕಾಪು ಬಿಜೆಪಿ ಕಚೇರಿಗೆ ಆಗಮಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರು, ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.
ಕಾಪು : ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಬ್ರೇಕ್ ; ಗೆಲುವು ಕಂಡ ಬಿಜೆಪಿ ; ಕಾರ್ಯಕರ್ತರಲ್ಲಿ ಸಂಭ್ರಮ
Posted On: 13 May 2023, 07:10 PM
ಕಾಪು : ಯಾವುದೇ ಶುಭ ಸಮಾರಂಭಗಳಲ್ಲೂ ಚರ್ಚಿತವಾದ ವಿಷಯ ಅವರು ಗೆಲ್ಲುತ್ತಾರೆ ಇವರು ಗೆಲ್ಲುತ್ತಾರೆ ಎಂದು, ಜಾತಿ ಲೆಕ್ಕಾಚಾರ, ಚುನಾವಣಾ ಪೂರ್ವ, ಚುನಾವಣೋತ್ತರ ಸಮೀಕ್ಷೆಗಳು, ಪಕ್ಷಗಳ ಕಾರ್ಯಕರ್ತರು ನಮ್ಮದೇ ಪಕ್ಷದ ಗೆಲುವು ಎಂಬ ಅಭಿಲಾಷೆಯಲ್ಲಿ ಬಿರುಬೇಸಿಗೆಯನ್ನು ಲೆಕ್ಕಿಸದೆ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕೆಂಬ ತವಕ, ತುಡಿತದಲ್ಲಿದ್ದರು. ಅಂತೂ ಮೇ 13ರಂದು ಫಲಿತಾಂಶ ಬಂದಿದೆ. ಉಡುಪಿ ಜಿಲ್ಲೆಯಲ್ಲಿ 5 ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬಿದ್ದಿವೆ. ಇದರಲ್ಲಿ ಮತ ಎಣಿಕೆಯ ಕೆಲವು ಸುತ್ತುಗಳವರೆಗೆ ಬೈಂದೂರು ಮತ್ತು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಕೆಲವೇ ಅಂತರದ ಮತಗಳ ಸ್ಪರ್ಧೆಯನ್ನು ಬಿಜೆಪಿಗೆ ನೀಡುತ್ತಾ ಬಂದರೂ ಕೊನೆಯ ಗೆಲುವು ಬಿಜೆಪಿಯದ್ದಾಗಿತ್ತು. ಉಳಿದಂತೆ ಮೊದಲಿಂದ ಕೊನೆಯವರೆಗೂ ಬಹುಮತದ ಅಂತರವನ್ನೇ ಕಾಯ್ದ ಬಿಜೆಪಿ ಅಭ್ಯರ್ಥಿಗಳು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಭದ್ರಗೊಳಿಸಿದ್ದಾರೆ. ಕಾಪು ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು ವಿವಿಧ ಪಕ್ಷದಿಂದ ಕಣದಲ್ಲಿದ್ದರು. ಅವರು ಪಡೆದುಕೊಂಡ ಇವಿಎಮ್ ಮತ್ತು ಪೋಸ್ಟಲ್ ಮತಗಳ ಒಟ್ಟು ಅಂಕಿಅಂಶ ಇಂತಿವೆ : ಗುರ್ಮೆ ಸುರೇಶ್ ಶೆಟ್ಟಿ (ಬಿಜೆಪಿ) 80,559 ವಿನಯ ಕುಮಾರ್ ಸೊರಕೆ (ಕಾಂಗ್ರೆಸ್) 67555 ಸಬಿನಾ ಸಮದ್ ( ಜೆಡಿಎಸ್) 568 ಎಸ್.ಆರ್. ಲೋಬೊ (ಆಪ್) 252 ಮಹಮದ್ ಹನೀಫ್ (ಎಸ್‌ಡಿಪಿಐ) 1616 ನೋಟಾ: 805 ಒಟ್ಟು ಚಲಾವಣೆಯಾದ ಮತ: 1,51,355 ಗೆಲುವಿನ ಅಂತರ : 13,004 ಎಲ್ಲಾ ಲೆಕ್ಕಾಚಾರಗಳನ್ನು ಜನರು ಮಾಡಿದರೂ ಅಂತಿಮವಾಗಿ ಕಾಪು ಕ್ಷೇತ್ರದಲ್ಲಿ ಹಲವಾರು ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ. ರಾಜಕಾರಣದಲ್ಲಿ ಅನುಭವಿಯಾಗಿದ್ದು ಕ್ಷೇತ್ರದ ಜನರೊಂದಿಗೆ ಬೆರೆತಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಸೋಲನ್ನು ಕಂಡಿದ್ದಾರೆ. ಒಟ್ಟಿನಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕ್ಷೇತ್ರದ ಜನರಿಗೆ ಒಂದಷ್ಟು ಭರವಸೆಯಿದೆ, ಅಭಿವೃದ್ಧಿಯ ಪಥದಲ್ಲಿ ಸಾಗಿ ಸರ್ವಾಂಗೀಣ ಬೆಳವಣಿಗೆಯಾಗಿ ರಾಜ್ಯ, ದೇಶದಲ್ಲೇ ಕಾಪು ಕ್ಷೇತ್ರ ಮಾದರಿಯಾಗಲಿ....
ಕಾಪು : ಗುರ್ಮೆ ಸುರೇಶ್ ಶೆಟ್ಟಿ ಭರ್ಜರಿ ಗೆಲುವು
Posted On: 13 May 2023, 01:47 PM
ಕಾಪು : ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು
Posted On: 13 May 2023, 01:39 PM
ಉಡುಪಿ : ಜಿಲ್ಲೆಯ 5 ಕ್ಷೇತ್ರಗಳಾದ ಕುಂದಾಪುರ, ಬೈಂದೂರು, ಕಾರ್ಕಳ, ಕಾಪು, ಉಡುಪಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಪಕ್ಷದ ಗೆಲುವನ್ನು ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಉಡುಪಿ : ಯಶ್ಪಾಲ್ ಸುವರ್ಣಗೆ ಗೆಲುವು
Posted On: 13 May 2023, 12:49 PM
ಉಡುಪಿ : ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮುನ್ನಡೆ ಕಾಯ್ದುಕೊಂಡು ಗೆಲುವು ಸಾಧಿಸಿದ್ದಾರೆ.
