Updated News From Kaup

ಕಾರ್ಕಳ : ಇನ್ನಾದಲ್ಲಿ ಸುಸಜ್ಜಿತ ರುದ್ರಭೂಮಿ ಮೋಕ್ಷಧಾಮ ಲೋಕಾರ್ಪಣೆ

Posted On: 18-03-2023 06:01PM

ಕಾರ್ಕಳ : ಮೂಲ ಸೌಕರ್ಯಗಳನ್ನು ಒದಗಿಸುವ ನಿರಂತರ ಪ್ರಯತ್ನಗಳು ಸ್ಥಳೀಯಾಡಳಿತ ಮಾಡಿದಾಗ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಜಿ.ಪಂ ಸದಸ್ಯರಾದ ಕೆದಿಂಜೆ ಸುಪ್ರಿತ್ ಶೆಟ್ಟಿ ಹೇಳಿದರು. ಅವರು ಇಂದು‌‌ ಇನ್ನಾ ಗ್ರಾಮ ಪಂಚಾಯತ್ ಸಾರ್ವಜಿನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರು ಹಾಗೂ ಗ್ರಾ.ಪಂ ಅಧ್ಯಕ್ಷರಾದ ಕುಶ ಆರ್ ಮೂಲ್ಯ ವಹಿಸಿದ್ದರು.

ಈ ಸಂದರ್ಭ ಸರಿತಾ ಶೆಟ್ಟಿ, ಮಾಜಿ ಜಿ.ಪಂ ಸದಸ್ಯರಾದ ರೇಷ್ಮಾ ಉದಯ ಶೆಟ್ಟಿ, ತಾ.ಪಂ ಉಪಾಧ್ಯಕ್ಷರಾದ ಗೋಪಾಲ ಮೂಲ್ಯ, ಗ್ರಾ.ಪಂ ಉಪಾಧ್ಯಕ್ಷರಾದ ವಿಮಲ, ಪ್ರೇಮ್ ಕುಲಾಲ್, ಪಂಚಾಯತ್ ಕಾರ್ಯದರ್ಶಿ ರಮೇಶ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತ, ಅಮರನಾಥ ಶೆಟ್ಟಿ, ಜಯ ಎಸ್ ಕೋಟ್ಯಾನ್, ಪ್ರವೀಣ್ ಜೆ ಶೆಟ್ಟಿ, ಯು ಸುಬ್ರಮಣ್ಯ ತಂತ್ರಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬೆಳ್ಳಣ್ ವಲಯ ಮೇಲ್ವಿಚಾರಕಿ ಭಾರತಿ, ಗ್ರಾಮಸ್ಥರಾದ ಗಣಪತಿ, ಸುರೇಶ್ ಮೂಲ್ಯ, ಪ್ರಭಾಕರ ಇನ್ನಾ, ದೀಪಕ್ ಕಾಮತ್, ರಮೇಶ್ ಮೂಲ್ಯ, ಲಕ್ಷ್ಮೀ ಕಾಂತ್ ರಾವ್, ಸುಜಾತ ಗಿರಿಯಪ್ಪ, ಅಪ್ಪಿ ಜೆ ಕರ್ಕೇರಾ ಉಪಸ್ಥಿತರಿದ್ದರು.

ಸಮಿತಿ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಸ್ವಾಗತಿಸಿದರು. ಶಿಕ್ಷಕರಾದ ರಾಜೇಂದ್ರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಹರೀಶ್ ಶೆಟ್ಟಿ ದಡ್ಡು ವಂದಿಸಿದರು.

ಮಾರ್ಚ್ 23ರಿಂದ 26 : ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸಮಾರಂಭ ; ಅನಂತೋತ್ಸವ 2023

Posted On: 18-03-2023 05:29PM

ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2023ನೇ ಸಾಲಿನ ವಾರ್ಷಿಕ ಸಮಾರಂಭಗಳು ಮಾರ್ಚ್ 23 ರಿಂದ 26ರವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಆಶಯದಂತೆ ಮಾ.17 ನಿಧನರಾದ ವಿದ್ಯಾಸಂಸ್ಥೆಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಹಿರಿಯ ಪ್ರಾಧ್ಯಾಪಕ, ಕಾರ್ಯಕ್ರಮಗಳ ರೂವಾರಿ ಅನಂತೇಶ್‌ ರಾವ್‌ ಅವರ ನೆನಪಿಗಾಗಿ ವರ್ಣೋತ್ಸವ 2023ರ ಬದಲಾಗಿ ಅನಂತೋತ್ಸವ 2023 ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಮಾರ್ಚ್ 23ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ತಾಂತ್ರಿಕ-ಸಾಂಸ್ಕೃತಿಕ ಸ್ಪರ್ಧೆ ಅನಂತೋತ್ಸವ 2023 ಕಾರ್ಯಕ್ರಮ ನಡೆಯಲಿದ್ದು, ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ರಾಹುಲ್ ಕೋಟ್ಯಾನ್ ಮತ್ತು ನಿಖಿಲ್ ಆಚಾರ್ಯ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಜಗದೀಶ್ ಆಚಾರ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಧ ತಾಂತ್ರಿಕ ಸ್ಪರ್ಧೆಗಳ ಜೊತೆಗೆ ನೃತ್ಯ, ಗಾಯನ, ಫೋಟೋಗ್ರಫಿ, ಚಿತ್ರಕಲೆ, ಮುಖವರ್ಣ ಸ್ಪರ್ಧೆ ನಡೆಯಲಿರುವುದು. ಅದೇ ದಿನ ಸಂಜೆ ಮನೋಂರಜನಾ ಕಾರ್ಯಕ್ರಮವು ನಡೆಯಲಿದೆ. ಮಾರ್ಚ್ 24ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪಯೋಕಾಯುಕ್ತ, ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಭಾಗವಹಿಸಲಿದ್ದು, ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀಪಾದರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಮಾರ್ಚ್ 25ರಂದು ಬೆಳಗ್ಗೆ 9.30ರಿಂದ ಆಟೋ ಎಕ್ಸ್‌ಪೋ ವಾಹನ ಪ್ರದರ್ಶನ ನಡೆಯಲಿದೆ. ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷಸಿಂಚನದ ವಿದ್ಯಾರ್ಥಿಗಳಿಂದ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ “ಮಹಿಷವಧೆ” ಹಾಗೂ “ಸಮಸಪ್ತಕರ ಕಾಳಗ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾರ್ಚ್ 26 ಕಾಲೇಜು ಘಟಿಕೋತ್ಸವ ಕಾರ್ಯಕ್ರಮವು ನಡೆಯಲಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್ ವಿದ್ಯಾಶಂಕರ್ ಮುಖ್ಯ ಅತಿಥಿಗಳಾಗಿ, ಮಂಗಳೂರಿನ ಯುನಿಕೋರ್ಟ್ ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ್ ಶೆಣೈ ಭಾಗವಹಿಸಲಿದ್ದಾರೆ. ಸಂಜೆ ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ. ಸಂಜೆ 7ಗಂಟೆಗೆ ದೇಶದ ಪ್ರತಿಷ್ಟಿತ ಮ್ಯುಸಿಕಲ್ ಬ್ಯಾಂಡ್ ಸಂಸ್ಥೆಯಾದ “ಅಗಮ್' ತಂಡದವರಿಂದ ಸಂಗೀತ ರಸಮಂಜರಿ ಮನೋರಂಜನಾ ಕಾರ್ಯಕ್ರಮ ಜರಗಲಿದೆ. ಶೈಕ್ಷಣಿಕ ವರ್ಷ 2023 ರಿಂದ ಎಂಬಿಎ ಕೋರ್ಸ್ ನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಮಂಜುನಾಥ್, ಡಾ.ರವಿ ಪ್ರಭ, ಸಚಿನ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಚಾರ ಫಲಕ ಅಳವಡಿಸಲು ಅನುಮತಿ ಪಡೆಯಬೇಕು - ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 18-03-2023 02:14PM

ಉಡುಪಿ : ಜಿಲ್ಲೆಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿಯ ಸಭೆ ಸಮಾರಂಭಗಳು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸುವ ಮುನ್ನ ಸ್ಥಳೀಯ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ತಪ್ಪಿದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು. ಅವರು ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾನ್ಯವಾಗಿ ಯಾವುದೇ ಪ್ರಚಾರ ಫಲಕಗಳು ಭಿತ್ತಿಪತ್ರಗಳು ಕರಪತ್ರಗಳು ಧ್ವನಿವರ್ಧಕಗಳ ಬಳಕೆ ಸೇರಿದಂತೆ ಮತ್ತಿತರ ಪ್ರಚಾರ ಕೈಗೊಳ್ಳುವ ಮುನ್ನ ನಿಗದಿತ ಪ್ರಾಧಿಕಾರದಿಂದ ಕಾನೂನುನಡಿಯಲ್ಲಿ ಅವಶ್ಯವಿರುವ ಅನುಮತಿ ಪತ್ರವನ್ನು ಪಡೆದು ಕಾರ್ಯಗತಗೊಳಿಸಬೇಕು. ಒಂದೊಮ್ಮೆ ಉಲ್ಲಂಘಿಸಿ ನಡೆದುಕೊಂಡಲ್ಲಿ ಅಂತಹವರ ವಿರುದ್ದ ಕಾನೂನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಯಾವುದೇ ರೀತಿಯ ಪ್ರಚಾರ ಫಲಕಗಳು ಸೇರಿದಂತೆ ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಅನುಮತಿ ಪಡೆದು ಬಳಸಿದ್ದಲ್ಲಿ, ಅನುಮತಿಯ ಕಾಲಾವಧಿ ಮುಗಿದ ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದ ಅವರು ಯಾವುದೇ ಸಭೆ ಸಮಾರಂಭ ಮೆರವಣಿಗೆ ನಡೆಸಲು ಅನುಮತಿ ತೆಗೆದುಕೊಳ್ಳುವುದು ಕಡ್ಡಾಯ ಎಂದರು.

ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ನೊಂದಾವಣಿ ಆಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು , ಹೆಸರು ಬಿಟ್ಟು ಹೋದಲ್ಲಿ ಕೂಡಲೇ ಹೆಸರು ನೊಂದಾಯಿಸಿಕೊಳ್ಳಬೇಕು, ಮುಂದಿನ ವಾರದಲ್ಲಿ ಬಿ.ಎಲ್.ಓ ಗಳು ಹಾಗೂ ಚುನಾವಣಾ ಏಜೆಂಟರುಗಳ ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಯಾವುದೇ ರೀತಿ ಗೊಂದಲಗಳಿದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು. ಪ್ರತಿ ಮತದಾನದ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ ಒಂದೊಮ್ಮೆ ಯಾವುದೇ ಸೌಕರ್ಯಗಳ ಕೊರತೆಯಿದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದ ಅವರು ಈ ಬಾರಿ ವಿಶೇಷವಾಗಿ 80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರಿಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ , ಅಪರ ಜಿಲ್ಲಾಧಿಕಾರಿ ವೀಣಾ, ತಾಲೂಕು ಚುನಾವಣಾ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಂಟಕಲ್ಲು : ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ - ಸಂತಾಪ ಸೂಚಕ ಸಭೆ

Posted On: 18-03-2023 12:20PM

ಬಂಟಕಲ್ಲು : ಹೊನ್ನಾವರದಲ್ಲಿ ಶುಕ್ರವಾರ ರಸ್ತೆ ಅಪಘಾತದಿಂದ ಸಾವನ್ನಪ್ಪಿದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಅನಂತೇಶ ರಾವ್ ರಿಗೆ ಸಂತಾಪ ಸೂಚಕ ಸಭೆ ಶನಿವಾರ ಜರಗಿತು.

ಈ ಸಂದರ್ಭ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮೆಕ್ಯಾನಿಕಲ್ ವಿಭಾಗದಲ್ಲಿ ಉತ್ತಮ ಪ್ರಾಧ್ಯಾಪಕನಾಗಿ ಸಂಸ್ಥೆಯ ಬಗೆಗಿನ ಅಪಾರ ಪ್ರೀತಿ ಮತ್ತು ಮಕ್ಕಳ ಬಗ್ಗೆ ಕಾಳಜಿ ಹೊಂದಿರತಕ್ಕಂತಹ ಅನಂತೇಶರ ಅಗಲುವಿಕೆ ಸಂಸ್ಥೆಗೆ, ಮಕ್ಕಳಿಗೆ ನೋವನ್ನುಂಟು ಮಾಡಿದೆ. ಅವರನ್ನು ಕಳೆದು ಕೊಂಡಂತಹ ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿ ಭಗವಂತನು ಕರುಣಿಸಲಿ ಎಂದು ಹೇಳಿದರು.

ಈ ಸಂದರ್ಭ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ, ಉಪಪ್ರಾಂಶುಪಾಲರು, ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿ ವೃಂದ, ಸಿಬ್ಬಂದಿ ವೃಂದ ಮತ್ತಿತರರು ಉಪಸ್ಥಿತರಿದ್ದರು.

ಮಾಚ್೯ 21 : ಉಡುಪಿಯಲ್ಲಿ ಮಿನಿ ಉದ್ಯೋಗ ಮೇಳ

Posted On: 18-03-2023 07:51AM

ಉಡುಪಿ : ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 21 ರಂದು ಬೆಳಗ್ಗೆ 10.30 ಕ್ಕೆ ಸ್ಮಾರ್ಟ್ಕೇರ್ ಎಂಟರ್ ಪ್ರೈಸಸ್, ಐಕೇರ್ ಲಿಫ್ಟ್ ಪ್ರೈ.ಲಿ, ಶ್ರೀ ಶಾರದಾ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಪಿ.ಯು.ಸಿ ಕಾಲೇಜ್, ಟೆಕ್ನೋವೈಸ್ ಡಿಜಿಟಲ್ ವರ್ಲ್ಡ್ ಪ್ರೈ.ಲಿ, ಬಿ.ಎಸ್.ಎಲ್ ಇಂಡಿಯಾ ಪ್ರೈ.ಲಿ ಹಾಗೂ ಹೆಚ್.ಡಿ.ಎಫ್.ಸಿ ಲೈಫ್ ಇನ್ಸೂರೆನ್ಸ್ ಕಂಪನಿಗಳ ವತಿಯಿಂದ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ, ಬಿ.ಎ, ಬಿ.ಎಡ್, ಬಿ.ಎಸ್ಸಿ, ಎಂ.ಎ, ಎಂ.ಎಸ್ಸಿ, ಎಂ.ಎಡ್, ಎನ್.ಟಿ.ಟಿ, ಎಂ.ಪಿಎಡ್, ಬಿ.ಎಲ್.ಬಿ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ಕಾರ್ಡ್ ಪ್ರತಿಯೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ, ದೂರವಾಣಿ ಸಂಖ್ಯೆ: 8105618291, 9945856670, 8197440155 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಜಿಲ್ಲಾ ಗವರ್ನರ್ ಭೇಟಿ ಮತ್ತು ವಿವಿಧ ಯೋಜನೆಗಳು ಲೋಕಾರ್ಪಣೆ

Posted On: 18-03-2023 07:48AM

ಉದ್ಯಾವರ : ಲಯನ್ಸ್ ಜಿಲ್ಲಾ 317c ಇದರ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಗೆ ಲಯನ್ಸ್ ಜಿಲ್ಲೆಯ ಗವರ್ನರ್ ಲ. ಡಾ. ಎಂ ಕೆ ಭಟ್ ಎಂ.ಜೆ.ಎಫ್. ಮಾರ್ಚ್ 18ರಂದು ಅಧಿಕೃತ ಭೇಟಿ ನೀಡಲಿದ್ದು, ವಿವಿಧ ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಐದು ವರ್ಷಗಳ ಹಿಂದೆ ಆರಂಭಗೊಂಡಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವಿವಿಧ ಜನ ಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ತನ್ನದೇ ಆದ ಯಶಸ್ವಿಯ ಮೈಲುಗಲ್ಲನ್ನು ಇಟ್ಟಿದೆ. ಪ್ರಸ್ತುತ ವರ್ಷ ಲ. ಅನಿಲ್ ಲೋಬೊ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದು, ಗವರ್ನರ್ ರವರ ಅಧಿಕೃತ ಭೇಟಿಯ ದಿನ ವಿವಿಧ ಸಮಾಜಮುಖಿ ಯೋಜನೆಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ರೂಪರೇಷೆಯನ್ನು ಸಿದ್ಧಪಡಿಸಿದ್ದಾರೆ.

ಉದ್ಯಾವರ ಬಲಾಯಿಪಾದೆ ರಿಕ್ಷಾ ನಿಲ್ದಾಣ ಬಳಿ ಗವರ್ನರ್ ರವರನ್ನು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಸದಸ್ಯರು ಸ್ವಾಗತಿಸಲಿದ್ದು, ಬಳಿಕ ವಾಹನ ಮೆರವಣಿಗೆಯ ಮೂಲಕ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದಲ್ಲಿ ಅಳವಡಿಸಿರುವ ವಾಟರ್ ಪ್ಯೂರಿಫೈ ಉದ್ಘಾಟಿಸಲಿದ್ದಾರೆ. ಬಳಿಕ ಹಿರಿಯ ನಾಗರಿಕರ ಕನಸಿನ ಮನೆಗೆ ಭೇಟಿ ನೀಡಿ ಅಲ್ಲಿಗೆ ಅಗತ್ಯವಿರುವ ಫ್ರಿಜ್ ಹಾಗೂ ಪಲ್ಲೋಟೈನ್ ಸ್ನೇಹಲಯಕ್ಕೆ ಕ್ಲಬ್ಬಿನ ವತಿಯಿಂದ ವಿವಿಧ ದಿನಬಳಕೆಯ ವಸ್ತುಗಳನ್ನು ಹತ್ತಾಂತರಿಸಲಿದ್ದಾರೆ. ಮೇಲ್ಪೇಟೆ ಬಿಲ್ಲವ ಮಹಾಜನ ಬಳಿ ಪ್ರಮುಖ ರಸ್ತೆಯ ಬದಿಯಲ್ಲಿ ಇರುವ ಕೆರೆಗೆ ತಡೆಗೋಡೆಯನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಎರಡು ಅಶಕ್ತ ಕುಟುಂಬಗಳಿಗೆ ಧನಸಹಾಯ ಹಾಗೂ ಇಬ್ಬರು ಅನಾರೋಗ್ಯ ಪಿಡಿತರಿಗೆ ವೀಲ್ ಚೇರ್ ನೀಡುವ ಕಾರ್ಯಕ್ರಮವು ನಡೆಯಲಿದೆ ಎಂದು ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಪ್ರಕಟಣೆ ತಿಳಿಸಿದೆ.

ಮಾಚ್೯ 19 : ಮೀನುಗಾರಿಕಾ ಸಚಿವರಿಂದ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮ

Posted On: 18-03-2023 07:44AM

ಉಡುಪಿ : ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಕರಾವಳಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಪೂರ್ವ ನಿರ್ಧರಿಸಿದ ಸಮುದ್ರ ಮಾರ್ಗದ ಮೂಲಕ ಸಾಗರ ಪರಿಕ್ರಮ ಕಾರ್ಯಕ್ರಮವನ್ನು ಆಯೋಜಿಸಿದೆ. ಮೀನುಗಾರರು, ಕರಾವಳಿ ಸಮುದಾಯಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಂವಾದವನ್ನು ಸುಲಭಗೊಳಿಸಲು ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ವಿವಿಧ ಮೀನುಗಾರಿಕೆ ಸಂಬಂಧಿತ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮಾಹಿತಿಯನ್ನು ಪ್ರಸಾರ ಮಾಡಲು, ಎಲ್ಲಾ ಮೀನುಗಾರರಿಗೆ ಮತ್ತು ಸಂಬಂಧಪಟ್ಟವರಿಗೆ ಒಗ್ಗಟ್ಟನ್ನು ಪ್ರದರ್ಶಿಸುವ ಗುರಿ ಹೊಂದಲು, ಆತ್ಮನಿರ್ಭರ ಭಾರತ ಸ್ಪೂರ್ತಿಯಂತೆ ಮಧ್ಯಸ್ಥಗಾರರು ಜವಾಬ್ದಾರಿಯುತ ಮೀನುಗಾರಿಕೆಯನ್ನು ಉತ್ತೇಜಿಸಲು ಮತ್ತು ರಾಷ್ಟ್ರದ ಆಹಾರ ಭದ್ರತೆ ಮತ್ತು ಕರಾವಳಿ ಮೀನುಗಾರ ಸಮುದಾಯಗಳ ಜೀವನೋಪಾಯಕ್ಕಾಗಿ ಸಮುದ್ರ ಮೀನುಗಾರಿಕೆ ಸಂಪನ್ಮೂಲಗಳ ಬಳಕೆ ಹಾಗೂ ಸಮುದ್ರ ಪರಿಸರ ವ್ಯವಸ್ಥೆಗಳ ರಕ್ಷಣೆಯ ನಡುವೆ ಸುಸ್ಥಿರ ಸಮತೋಲನವನ್ನು ಕೇಂದ್ರೀಕರಿಸುವುದಾಗಿದೆ.

ಸಾಗರ ಪರಿಕ್ರಮ ಕಾರ್ಯಕ್ರಮವು ಕಡಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಹಂತ ಹಂತವಾಗಿ ಒಳಗೊಳ್ಳಲು ಉದ್ದೇಶಿಸಿದ್ದು, ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ವಿವಿಧ ಫಲಾನುಭವಿ ಆಧಾರಿತ ಯೋಜನೆ ಮತ್ತು ಕಾರ್ಯಕ್ರಮಗಳ ಅರಿವು ಮತ್ತು ಅಳವಡಿಸಿಕೊಳ್ಳಬಹುದಾದ ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸುವ ಮೂಲಕ ಕರಾವಳಿ ಪ್ರದೇಶಗಳಲ್ಲಿನ ಮೀನುಗಾರರು, ಮೀನುಗಾರ ಸಮುದಾಯಗಳು ಮತ್ತು ಪಾಲುದಾರರು ಪ್ರಯೋಜನ ಪಡೆಯಬಹುದಾಗಿದೆ. ಸಾಗರ ಪರಿಕ್ರಮದ ಸಂದರ್ಭದಲ್ಲಿ ಆಯೋಜಿಸಲಾಗುತ್ತಿರುವ ಸಂವಾದ ಕಾರ್ಯಕ್ರಮಗಳು ಮೀನುಗಾರರು ಮತ್ತು ಇತರ ಮಧ್ಯಸ್ಥಗಾರರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮತ್ಸ್ಯಸಂಪದದಂತಹ ವಿವಿಧ ಮೀನುಗಾರಿಕೆ ಯೋಜನೆ ಮತ್ತು ಕಾರ್ಯಕ್ರಮಗಳ ಮೂಲಕ ಅವರ ಆರ್ಥಿಕ ಉನ್ನತಿಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.

ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ ಮೀನುಗಾರಿಕೆ ವಲಯದಲ್ಲಿ ರೂ.20,050 ಕೋಟಿ ಗಳ ಅತ್ಯಧಿಕ ಅಂದಾಜು ಹೂಡಿಕೆಯೊಂದಿಗೆ ಪ್ರಮುಖ ಯೋಜನೆಯಾಗಿದೆ. ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ, ಅರ್ಹ ಸಂಸ್ಥೆಗಳಿಗೆ ರಿಯಾಯಿತಿ ಹಣಕಾಸು ಒದಗಿಸುವುದು ಮತ್ತು ಮೀನುಗಾರರು ಮತ್ತು ಮೀನುಗಾರರಿಗೆ ವಿಸ್ತರಿಸಲಾದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸೌಲಭ್ಯ, ಮೀನುಗಾರಿಕಾ ಕ್ಷೇತ್ರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಜೊತೆಗೆ, ಸಾಗರ ಪರಿಕ್ರಮ ಕಾರ್ಯಕ್ರಮದ ಮೂಲಕ ಕೇಂದ್ರ ಸರ್ಕಾರದ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.

4 ನೇ ಹಂತದ ಭಾಗವಾಗಿ, ಕೇಂದ್ರ ಮೀನುಗಾರಿಕೆ ಸಚಿವರು ಮಾ. 19 ರಂದು ಜಿಲ್ಲೆಗೆ ಆಗಮಿಸಲಿದ್ದು, ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 11.30 ರವರೆಗೆ ಮೀನುಗಾರರೊಂದಿಗೆ ಸಂವಾದ ಮತ್ತು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟಪಾಡಿ :ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಅಂತಾರಾಷ್ಟ್ರೀಯ ಉಪಾಧ್ಯಕ್ಷರಾಗಿ ನವೀನ್ ಅಮೀನ್ ಶಂಕರಪುರ ಆಯ್ಕೆ

Posted On: 17-03-2023 11:57AM

ಕಟಪಾಡಿ : ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಅಂತಾರಾಷ್ಟ್ರೀಯ ಉಪಾಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಉದ್ಯಮಿ ನವೀನ್ ಅಮೀನ್ ಶಂಕರಪುರ ಆಯ್ಕೆಯಾಗಿದ್ದಾರೆ.

ಕೇರಳದ ಮಾಹೆಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಜೆಸಿಐ ಶಂಕರಪುರ ಅಧ್ಯಕ್ಷ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ರಾಷ್ಟ್ರೀಯ ಸಂಯೋಜಕ, ಶಂಕರಪುರ ರೋಟರಿ ಅಧ್ಯಕ್ಷ, ರೋಟರಿ ವಲಯ ಸೇನಾನಿ, ಸಹಾಯಕ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಉಂಟಾಗದಂತೆ ಅಧಿಕಾರಿಗಳು ಎಚ್ಚರವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 16-03-2023 07:26PM

ಉಡುಪಿ : ಬೇಸಿಗೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಗಳು ಆಗದಂತೆ ಎಲ್ಲಾ ರೀತಿಯ ಎಚ್ಚರಿಕೆ ವಹಿಸಿ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿನ ಸಮಸ್ಯೆಗಳು ಉಂಟಾಗುತ್ತವೆ . ಜಿಲ್ಲೆಯಲ್ಲಿ ಕಳೆದ ಸೆಪ್ಟಂಬರ್ ಇಂದ ಈವರೆಗೆ ಹೇಳುವಂತಹ ಮಳೆ ಬೀಳದೆ ಇರುವ ಕಾರಣ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳು , ಗ್ರಾಮ ಪಂಚಾಯತ್ ಗಳು ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು, ಒಂದೊಮ್ಮೆ ನೀರಿನ ಸಮಸ್ಯೆಯಾದಲ್ಲಿ ಟ್ಯಾಂಕರ್ಗಳ ಮೂಲಕ ಜನ ಸಾಮಾನ್ಯರಿಗೆ ನೀರು ಸರಬರಾಜು ಮಾಡಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಈಗಾಗಲೇ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಕಲ್ಪಿಸಬೇಕು ಎಂದ ಅವರು ಕುಡಿಯುವ ನೀರಿನ ಅವಶ್ಯವಿರುವ ತುರ್ತು ಕಾಮಗಾರಿಗಳನ್ನೂ ಸಹ ಕೈಗೆತ್ತಿಕೊಳ್ಳುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.

ತಾಲೂಕು ಮಟ್ಟದಲ್ಲಿಯೂ ಸಹ ತಹಸೀಲ್ದಾರ್ ನೇತೃತ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಟಾಸ್ಕ್ ಪೋರ್ಸ್ ಸಮಿತಿಯ ಪ್ರತೀ ಶುಕ್ರವಾರ ಸಭೆಯನ್ನು ನಡೆಸುವದರೊಂದಿಗೆ ಸ್ಥಳೀಯ ನೀರಿನ ಸಮಸ್ಯೆ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಸೂಚನೆ ನೀಡಿದರು. ಸಾರ್ವಜನಿಕರು ಬೇಸಿಗೆಯೆ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸಬೇಕು, ಅದೇ ರೀತಿ ರೈತರೂ ಸಹ ನೀರು ಅನಗತ್ಯ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಸಾಧ್ಯವಾದಷ್ಟು ತೋಟಗಳಿಗೆ ವಾರಕ್ಕೊಮ್ಮೆ ನೀರು ಹಾಯಿಸಬೇಕೆಂದು ಸಲಹೆ ನೀಡಿದರು. ವಿಪತ್ತು ಪರಿಸ್ಥಿತಿಯ ಬಗೆ ಜನ ಸಾಮಾನ್ಯರಿಗೆ ಎಚ್ಚರಿಕೆ ನೀಡುವ ಡಿ.ಎಂ.ಆರ್ ಟವರ್ ಗಳನ್ನು ಆಯಕಟ್ಟಿನ ಜಾಗಗಳಲ್ಲಿ ಶೀಘ್ರವಾಗಿ ನಿರ್ಮಿಸಿ ಅವುಗಳ ಕಾರ್ಯ ಚಾಲನೆ ಮಾಡಬೇಕು. ಇದರಿಂದಾಗಿ ಜನ ಸಾಮಾನ್ಯರಿಗೆ ವಿಪತ್ತಿನ ಮುನ್ಸೂಚನೆಗಳನ್ನು ನೀಡಲು ಸಾಧ್ಯವಾಗುವುದರ ಜೊತೆಗೆ ಹೆಚ್ಚಿನ ಸಾವು ನೋವುಗಳು ಆಗದಂತೆ ನೋಡಿಕೊಳ್ಳಬಹುದು ಎಂದರು.

ಶಾಲಾ ಹಂತಗಳಲ್ಲಿಯೂ ವಿಪತ್ತು ನಿರ್ವಹಣೆ ಯೋಜನೆಯನ್ನು ಪ್ರತೀ ಶಾಲೆಯಲ್ಲೂ ಪರಿಷ್ಕರಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಎಲ್ಲಾ ರೀತಿಯ ವಿಪತ್ತಗಳನ್ನು ಎದುರಿಸಲು ಅರಿವು ಮೂಡಿಸುವರ ಜೊತೆಗೆ ತಮ್ಮ ಕುಟುಂಬದವರಿಗೂ ಆ ರೀತಿಯಲ್ಲಿ ತಿಳಿಸಲು ಸೂಚಿಸಬೇಕು ಎಂದರು. ಕಳೆದ ಸಾಲಿನಲ್ಲಿ ಮಳೆ ಹಾನಿಯಿಂದ ಉಂಟಾದ ಶಾಲೆ ಅಂಗನವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಮತ್ತಿತರ ಹಾನಿಗಳ ದುರಸ್ತಿ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳುವುದರೊಂದಿಗೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು. ಹವಾಮಾನ ಇಲಾಖೆವತಿಯಿಂದ ಜಿಲ್ಲೆಯಲ್ಲಿ ಉಂಟಾಗುವ ವಿಕೋಪ ಮುನ್ಸೂಚನೆಗಳನ್ನು ಸಾರ್ವಜನಿಕರಿಗೆ ಶೀಘ್ರದಲ್ಲಿಯೇ ತಲುಪಿಸುವುದರ ಜೊತೆಗೆ ಅವುಗಳನ್ನು ಎದುರಿಸುವ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾದಿಕಾರಿ ವೀಣಾ ಬಿ.ಎನ್. ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಕೋಟ್ಯಂತರ ಭಕ್ತರ ನಂಬಿಕೆಯ ಗುಳಿಗ ದೈವಕ್ಕೆ ಗೃಹಸಚಿವರಿಂದ ಅಪಮಾನ ಖಂಡನೀಯ : ಪದ್ಮರಾಜ್‌ ಆರ್.

Posted On: 16-03-2023 07:07PM

ಮಂಗಳೂರು : ತುಳುನಾಡು ಮಾತ್ರವಲ್ಲ ದೇಶ, ವಿದೇಶದಲ್ಲೂ ಚರಿತ್ರೆ ಸೃಷ್ಟಿಸಿರುವ ನಾಟಕ ವಿಜಯಕುಮಾರ್ ಕೊಡಿಯಾಲ್‌ಬೈಲ್‌ ನಿರ್ದೇಶನದ 'ಶಿವಧೂತ ಗುಳಿಗೆ'. ದೈವಾರಾಧನೆ ಎಂದರೆ ತುಳುನಾಡಿನ ಧಾರ್ಮಿಕತೆ ಮತ್ತು ನಂಬಿಕೆ. ಇದು ಕೇವಲ ಆಚರಣೆಯಲ್ಲ; ತುಳುನಾಡಿನ ಬದುಕಿನ ಸಂಸ್ಕೃತಿಯೂ ಹೌದು ಎನ್ನುವುದನ್ನು ಅದ್ಭುತ ರಂಗಪ್ರಯೋಗದ ಮೂಲಕ ತೋರಿಸಿಕೊಟ್ಟರು ಕೊಡಿಯಾಲ್‌ಬೈಲ್‌ರವರು. ಇದೀಗ ಇವರ ನಿರ್ದೇಶನದ 'ಶಿವಧೂತ ಗುಳಿಗೆ' ನಾಟಕದ ಬಗ್ಗೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವಹೇಳನ ಮಾಡಿರುವುದು ದೈವಾರಾದನೆ ಮಾತ್ರವಲ್ಲ ಕೋಟ್ಯಂತರ ಮಂದಿ ದೈವ ಭಕ್ತರಿಗೆ ಮಾಡಿದ ಅಪಮಾನ ಎಂದು ಮಂಗಳೂರಿನ ನೋಟರಿ, ವಕೀಲರು ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್. ಖಂಡಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ನಡೆದ ಶಿವಧೂತ ಗುಳಿಗೆ ನಾಟಕವನ್ನು ಸುಮಾರು 16 ಸಾವಿರ ಪ್ರೇಕ್ಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ಊರಲ್ಲಿ ಗೃಹಸಚಿವರು ಗುಳಿಗನ್ನು ಜಪಾನ್ ಮಾತ್ರೆಗೆ ಹೋಲಿಕೆ ಮಾಡಿರುವುದು ಎಷ್ಟು ಸರಿ? ಕೂಡಲೇ ಗೃಹಸಚಿವರು ತುಳುನಾಡು ಸೇರಿದಂತೆ ದೈವ ಭಕ್ತರಲ್ಲಿ ಕ್ಷಮೆಯಾಚನೆ ಮಾಡಬೇಕು. ತುಳುನಾಡಿನ ದೈವಾರಾಧನೆ ಬಗ್ಗೆ ಇವರಿಗೇನು ಗೊತ್ತಿದೆ?. ರಾಜ್ಯದ ಗೃಹ ಸಚಿವರಾಗಿ ದೈವಾರಾಧನೆ ಬಗ್ಗೆ ಪರಿಜ್ಞಾನ ಇಲ್ಲದೆ; ವಿವೇಚನೆ ರಹಿತವಾಗಿ ಮಾತನಾಡುವುದನ್ನು ಬಿಟ್ಟು, ಆ ಬಗ್ಗೆ ಜ್ಞಾನ‌ ಇರುವವರಲ್ಲಿ ಮಾಹಿತಿ ಪಡೆದು ಮಾತನಾಡಲಿ. ಅದನ್ನು ಬಿಟ್ಟು ಇಂತಹ ಅರೆಜ್ಞಾನದ ಮಾತುಗಳಿಗೆ ತುಳುನಾಡಿನ‌ ಜನ ಎಂದಿಗೂ ಕ್ಷಮೆ ನೀಡಲಾರರು ಎಂದಿದ್ದಾರೆ.