Updated News From Kaup
ಉಡುಪಿ : ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ, ಬಿರುಗಾಳಿ ಸಾಧ್ಯತೆ ; ಆರೆಂಜ್ ಅಲರ್ಟ್
Posted On: 29 Jun 2023, 02:50 PM
ಉಡುಪಿ : ಮುಂದಿನ 24 ಗಂಟೆಗಳಲ್ಲಿ ಉಡುಪಿ ,ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಶಿವಮೊಗ್ಗ ಚಿಕ್ಕಮಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆಯಿದ್ದು ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿ ಗಂಟೆಗೆ 40-45 ಕಿ.ಮೀ ವೇಗದಲ್ಲಿ ಬೀಸಲಿದ್ದು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ಉಡುಪಿ : ಜಿಲ್ಲೆಯಾದ್ಯಂತ ಬಕ್ರೀದ್ ಸಂಭ್ರಮಾಚರಣೆ
Posted On: 29 Jun 2023, 11:20 AM
ಉಡುಪಿ : ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಅಝಾ(ಬಕ್ರೀದ್ ಹಬ್ಬ)ವನ್ನು ಇಂದು ಸಂಭ್ರಮದಿಂದ ಆಚರಿಸಿದರು. ಮುಸ್ಲಿಂ ಬಾಂಧವರು ಬೆಳಗ್ಗೆ ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಮಾಜ್ ಬಳಿಕ ಮುಸ್ಲಿಮ್ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಮಸೀದಿಗಳಲ್ಲಿ ಧರ್ಮಗುರುಗಳು ವಿಶೇಷ ಈದ್ ನಮಾಝ್ ನೆರವೇರಿಸಿ ಈದ್ ಸಂದೇಶ ನೀಡಿದರು.
ಜುಲೈ 1 : ಉಡುಪಿಯಲ್ಲಿ ಪತ್ರಿಕಾ ದಿನಾಚರಣೆ
Posted On: 28 Jun 2023, 10:38 PM
ಉಡುಪಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ, ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆಯನ್ನು ಉಡುಪಿ ಐಎಂಎ ಭವನದಲ್ಲಿ ಜುಲೈ 1ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಉದ್ಘಾಟಿಸಲಿರುವರು. ಸುದ್ದಿಯಾನ ಡಿಜಿಟಲ್ ಮೀಡಿಯಾದ ಪ್ರಧಾನ ಸಂಪಾದಕ ಹರಿಪ್ರಸಾದ್ ಎ. ವಿಶೇಷ ಉಪನ್ಯಾಸ ನೀಡಲಿರುವರು. ಅಧ್ಯಕ್ಷತೆ ಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ಕಾರ್ಕಳದ ಹಿರಿಯ ಪತ್ರಕರ್ತ ರಾಧಾಕೃಷ್ಣ ತೋಡಿಕಾನ ಅವರಿಗೆ ಪತ್ರಿಕಾ ದಿನಾಚರಣೆಯ ಗೌರವ ನೀಡಲಾಗುವುದು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್, ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ಅರುಣ್ ಕುಮಾರ್ ಶಿರೂರು, ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಉಡುಪಿ ಪತ್ರಿಕಾ ಭವನ ಸಮಿತಿ ಸಂಚಾಲಕ ಅಜಿತ್ ಆರಾಡಿ ಗೌರವ ಉಪಸ್ಥಿತರಿರುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಹಾಗೂ ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕಾಪು : ತಂತಿಯನ್ನೇ ಶೃಂಗರಿಸಿದ ಬಳ್ಳಿ - ಮೆಸ್ಕಾಂ ಎಲ್ಲಿ ? ಸಾರ್ವಜನಿಕರ ಪ್ರಶ್ನೆ
Posted On: 28 Jun 2023, 10:28 PM
ಕಾಪು : ಇಲ್ಲಿನ ಪುರಸಭಾ ವ್ಯಾಪ್ತಿಯ ಮಲ್ಲಾರು ಗ್ರಾಮದ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ರಸ್ತೆ ಬದಿ ಇರುವ ವಿದ್ಯುದೀಪ ಕಂಬದಿಂದ ಮನೆಗೆ ಸಂಪರ್ಕದ ಸರ್ವಿಸ್ ವಯರ್ ನಲ್ಲಿ ಬಳ್ಳಿಗಳು ಪಸರಿಸಿ ಅವಘಡಕ್ಕೆ ಎಡೆ ಮಾಡಿ ಕೊಟ್ಟಂತಿದೆ. ಈ ಬಗ್ಗೆ ಸಂಬಂಧಪಟ್ಟ ಕಾಪು ಮೆಸ್ಕಾಂನವರು ಕೂಡಲೇ ತೆರೆವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರೋಟರಿ ಕ್ಲಬ್ ಶಿರ್ವದ ನೂತನ ಅಧ್ಯಕ್ಷರಾಗಿ ಫಾರೂಕ್ ಚಂದ್ರನಗರ ಆಯ್ಕೆ
Posted On: 28 Jun 2023, 12:44 PM
ಶಿರ್ವ : ರೋಟರಿ ಕ್ಲಬ್ ಶಿರ್ವ ಇದರ 2023-2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ. ಫಾರೂಕ್ ಚಂದ್ರನಗರ ಸಮಾಜ ಸೇವೆಯಲ್ಲಿ ಹತ್ತಾರು ಸಾಮಾಜಿಕ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ತನ್ನದೆ ಆದ ಛಾಪು ಮೂಡಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಜ್ಯ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಪಡುಬಿದ್ರಿ : ಸಿ ಎ ಸೊಸೈಟಿ - ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿಯೋಗ ಭೇಟಿ
Posted On: 27 Jun 2023, 07:38 PM
ಪಡುಬಿದ್ರಿ :ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟಕೊಪ್ಪಲು ಗ್ರಾಮದ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ನಿಯೋಗ ಇಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಮಳವಳ್ಳಿ ತಾಲೂಕಿನ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಚ್ ಬಿ ಬಸವೇಶ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರಿ ವ್ಯವಸಾಯಿಕ ಸೊಸೈಟಿಗಳು ಉತ್ತಮ ಠೇವಣಾತಿಯ ಹೆಚ್ಚಳದಿಂದ ಲಾಭಾಂಶದಿಂದ ಕೂಡಿವೆ. ಈಗಾಗಲೇ ಬ್ರಹ್ಮಾವರ ಸೇರಿದಂತೆ ವಿವಿಧ ಸಹಕಾರಿ ವ್ಯವಸಾಯಿಕ ಸೊಸೈಟಿಗಳಿಗೆ ಭೇಟಿ ನೀಡಲಾಗಿದೆ. ನಮ್ಮ ಭಾಗದಲ್ಲಿ ಬೆಳೆ ಸಾಲ ಮಾತ್ರವಿದ್ದು ಠೇವಣಾತಿ ಇದ್ದರೂ ಜನ ಹಣ ಇಡುತ್ತಿಲ್ಲ. ಈ ಬಗ್ಗೆ ನಮ್ಮಲ್ಲಿಯೂ ಕರಾವಳಿಯ ಭಾಗದಂತೆ ಜನರು ಸಹಕಾರಿ ಸೊಸೈಟಿಗಳೆಡೆಗೆ ಆಸಕ್ತಿಯುತರಾಗಿ ಮಾಡುವ ಗುರಿಯಿದೆ. ಈ ನಿಟ್ಟಿನಲ್ಲಿ ಈ ಭಾಗದ ಆಯ್ದ ಸಹಕಾರಿ ಸಂಘಗಳಿಗೆ ಭೇಟಿಯಿತ್ತಿದ್ದೇವೆ ಎಂದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್ ಮಾತನಾಡಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟಕೊಪ್ಪಲು ಗ್ರಾಮದ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ತಂಡ ಬಂದಿದ್ದು ಇಲ್ಲಿಯ ಕಾರ್ಯ ವೈಖರಿಯನ್ನು ಪರಿಶೀಲಿಸಿದ್ದಾರೆ. ಮಳವಳ್ಳಿಯಲ್ಲೂ ಇದೇ ರೀತಿ ಸಹಕಾರಿ ಸಂಘವನ್ನು ಸುಧಾರಣೆಗೊಳಿಸುವುದಾಗಿ ಎಂದು ಸಹಕಾರ ಸಂಘದ ಅಧ್ಯಕ್ಷ ಎಚ್ ಬಿ ಬಸವೇಶ್ ಹೇಳಿದ್ದಾರೆ ಎಂದರು. ಈ ಸಂದರ್ಭ ಮಳವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 11ಮಂದಿ ನಿರ್ದೇಶಕರು, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಉಪಾಧ್ಯಕ್ಷ ಗುರುರಾಜ ಪೂಜಾರಿ, ಹಿರಿಯ ನಿರ್ದೇಶಕ ವೈ. ಜಿ. ರಸೂಲ್, ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್ ಸಾಲ್ಯಾನ್ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಪಡುಬಿದ್ರಿ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ. ಎಚ್. ಸ್ವಾಗತಿಸಿ, ವಂದಿಸಿದರು.
ಶಿರ್ವ ವಿಷ್ಣು ಕಲಾವೃಂದ ನೂತನ ಅಧ್ಯಕ್ಷರಾಗಿ ವಿಶ್ವಾಸ್ ವೈ ಶೆಟ್ಟಿಗಾರ್ ಆಯ್ಕೆ
Posted On: 27 Jun 2023, 06:15 PM
ಶಿರ್ವ : ವಿಷ್ಣು ಕಲಾ ವೃಂದ,ಶಿರ್ವ ಇದರ ನೂತನ ಅಧ್ಯಕ್ಷರಾಗಿ ವಿಶ್ವಾಸ್ ವೈ ಶೆಟ್ಟಿಗಾರ್ ಆಯ್ಕೆಯಾಗಿರುತ್ತಾರೆ.
ಹೆಜಮಾಡಿ : ಪಂಚಾಯತ್ನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಇ - ಕೆವೈಸಿ ಜೋಡಣಾ ಕಾರ್ಯಕ್ರಮ
Posted On: 27 Jun 2023, 05:43 PM
ಹೆಜಮಾಡಿ : ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಇ - ಕೆವೈಸಿ ಜೋಡಣೆಯ ಕಾರ್ಯಕ್ರಮ ಇಂದು ನಡೆಯಿತು. ಸಹಾಯಕ ಕೃಷಿ ನಿರ್ದೇಶಕರಾದ ಮೋಹನ್ ರಾಜ್ ಇ- ಕೆವೈಸಿ ಕಾರ್ಯಕ್ರಮದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಕರ್ಕೇರ, ಸದಸ್ಯರಾದ ಪ್ರಾಣೇಶ್ ಹೆಜಮಾಡಿ, ಬಬಿತ, ಕಾರ್ಯದರ್ಶಿ ದೀಪ, ಕೃಷಿ ಇಲಾಖೆಯ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.
ಶಿರ್ವ : ಸಂತ ಮೇರಿ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆ
Posted On: 27 Jun 2023, 04:48 PM
ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಅಂತಾರಾಷ್ಟ್ರೀಯ ಮಾದಕ ವ್ಯಸನ- ಅಕ್ರಮ ಸಾಗಾಟ ವಿರೋಧಿ ದಿನಾಚರಣೆಯನ್ನು ಏರ್ಪಡಿಸಲಾಯಿತು ಇಂದಿನ ಜಗತ್ತಿನಲ್ಲಿ ಯುವಕರು ಅಪಾಯಕಾರಿ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ ಮತ್ತು ಇದು ಜೀವಮಾನದ ಶಿಕ್ಷೆಗೆ ಕಾರಣವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸಿದ ಅವರು, ಸಮಾಜದಲ್ಲಿ ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯುವಕರು ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿದರು ಮತ್ತು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್, ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು. ಕ್ಯಾಡೆಟ್ಗಳಾದ ಅನುಪ್ ನಾಯಕ ಹಾಗೂ ವಿಶಾಲ್ ಟೆರೆನ್ಸ್ ವಾಜ್ ಸಹಕರಿಸಿದರು. ಕೆಡೆಟ್ ಆದಿತ್ಯ ಶೆಟ್ಟಿಗಾರ್ ಸ್ವಾಗತಿಸಿ , ಕೆಡೆಟ್ ಗೌತಮಿ ಕರ್ಕೇರ ವಂದಿಸಿದರು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾಪು ತಾಲೂಕು ಪ್ರೆಸ್ ಕ್ಲಬ್ : ಪದಾಧಿಕಾರಿಗಳ ಆಯ್ಕೆ
Posted On: 27 Jun 2023, 01:23 PM
ಕಾಪು : ಇಲ್ಲಿನ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ 2023 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಹರೀಶ್ ಹೆಜಮಾಡಿ, ಕಾರ್ಯದರ್ಶಿಯಾಗಿ ಸಂತೋಷ್ ಕಾಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿಜಯ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಕರುಣಾಕರ ನಾಯಕ್, ಕೋಶಾಧಿಕಾರಿಯಾಗಿ ಹೇಮನಾಥ ಪಡುಬಿದ್ರಿ, ಕ್ರೀಡಾ ಕಾರ್ಯದರ್ಶಿಯಾಗಿ ರಾಕೇಶ್ ಕುಂಜೂರು ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ,ಕಾರ್ಯದರ್ಶಿ ಪ್ರಮೋದ್ ಸುವರ್ಣ, ಕಾರ್ಯಕಾರಿಣಿ ಸಮಿತಿ ಸದಸ್ಯ ವಿಜಯ ಆಚಾರ್ಯ ನಡೆಸಿದರು.
