Updated News From Kaup
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಮಂಜುನಾಥ್ ಮತ್ತು ಸದಾನಂದರಿಗೆ ಪಿಎಚ್ಡಿ ಪದವಿ

Posted On: 28-02-2023 06:43PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಮಂಜುನಾಥ್ ಎಸ್ ಇವರು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣ ಎನ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಡೆವಲಪ್ಮೆಂಟ್ ಆಫ್ ಎ ಡ್ಯುಯಲ್ ಸ್ಟಿಲ್೯ ಚೇಂಬರ್ ಫಾರ್ ಆ್ಯನ್ ಐಡಿ ಎಂಜಿನ್ ಆ್ಯಂಡ್ ಇನ್ವೆಸ್ಟಿಗೇಷನ್ ಆನ್ ಇಟ್ಸ್ ಇಫೆಕ್ಟ್ ಆನ್ ಎಂಜಿನ್ ಪರ್ಫಾರ್ಮೆನ್ಸ್ ಯುಸಿಂಗ್ ಎ ಬಯೋಡೀಸೆಲ್ ಬ್ಲೆಂಡ್" ಎಂಬ ಸಂಶೋಧನಾ ಪ್ರಬಂಧಕ್ಕೆ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಸದಾನಂದ ಎಲ್ ಇವರು ಬ್ಯಾರೀಸ್ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿ ಅಜೀಜ್ ಮುಸ್ತಫ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಮ್ ಎಲ್ ಅಪ್ರೊಚಸಸ್ ಟವರ್ಡ್ಸ್ ಡಿಟೆಕ್ಟಿಂಗ್ ಆಂಡ್ರೈಡ್ ಸ್ಪೆಸಿಫಿಕ್ ಅಡ್ವಾನ್ಸ್ಡ್ ಮಾಲ್ವೇರ್ಸ್" ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪ್ರಾಧ್ಯಾಪಕರ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಪಡುಬಿದ್ರಿ : ಕ್ಷುಲ್ಲಕ ಕಾರಣ ; ಹಲ್ಲೆ, ಜೀವಬೆದರಿಕೆ ; ಇತ್ತಂಡಗಳಿಂದ ದೂರು

Posted On: 27-02-2023 10:41PM
ಪಡುಬಿದ್ರಿ : ಕ್ಷುಲ್ಲಕ ಕಾರಣದಿಂದ ಇತ್ತಂಡಗಳ ನಡುವೆ ಹಲ್ಲೆ, ಜೀವಬೆದರಿಕೆ ಬಗ್ಗೆ ಆದಿತ್ಯವಾರ ದೂರು ಪ್ರತಿದೂರು ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.
ವಸಂತ ಮತ್ತು ಬಾಲು ಎಂಬುವವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಿವಪ್ರಕಾಶ್ ಎಂಬುವವರು ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೀವ ಬೆದರಿಕೆ ಹಾಕಿರುವ ಬಗ್ಗೆ ನವೀನ್ ಎಂಬುವವರು ಪ್ರತಿದೂರು ನೀಡಿದ್ದಾರೆ.
ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯುತ್ತಿರುವ ಢಕ್ಕೆಬಲಿಗೆ ಶಿವಪ್ರಕಾಶ್, ತಮ್ಮ ಆದರ್ಶ್, ಹಾಗೂ ಇಬ್ಬರು ಸ್ನೇಹಿತರಾದ ಧನುಷ್ ಮತ್ತು ಪ್ರತೀಕ್ ಎಂಬುವರೊಂದಿಗೆ ಹೋಗಿದ್ದು, ರಾತ್ರಿ 1 ಗಂಟೆಯ ವೇಳೆಗೆ ಶಿವಪ್ರಕಾಶ್ ಮೂತ್ರ ವಿಸರ್ಜನೆಗೆಂದು ಹೋದ ಸಮಯ ವಸಂತ ಹಾಗೂ ಬಾಲುರವರು ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರನಿತ್ತಿದ್ದಾರೆ.
ಅದೇ ದಿನ ನವೀನ್ ಅವರ ಸ್ನೇಹಿತರಾದ ರಾಕೇಶ್, ದಿವಾಕರ, ಬಾಲಕೃಷ್ಣ ಎಂಬುವವರ ಜೊತೆಗೆ ಹೋಗಿದ್ದು ರಾತ್ರಿ 1 ಗಂಟೆಯ ವೇಳಗೆ ಬ್ರಹ್ಮಸ್ಥಾನದ ನೀರಿನ ಟ್ಯಾಂಕ್ ಬಳಿ ಬ್ರಹ್ಮಸ್ಥಾನದ ಕಡೆಗೆ ಹೋಗುತ್ತಿರುವಾಗ ಶಿವಪ್ರಕಾಶ್ ಎಂಬಾತನು ತಡೆದು ನಿಲ್ಲಿಸಿ ವಸಂತ ಎಲ್ಲಿದ್ದಾನೆ ಎಂದು ಕೇಳಿ, ಚೂರಿ ಹಾಕಿ ಕೊಲ್ಲುತ್ತೇನೆ ಎಂದ ಜೀವ ಬೆದರಿಕೆ ಹಾಕಿರುವುದಾಗಿ ನವೀನ್ ದೂರಿನಲ್ಲಿ ತಿಳಿಸಿದ್ದಾರೆ.
ಜೀರ್ಣಗೊಂಡ ದೇವಾಲಯಗಳ ಉದ್ಧಾರ ಊರಿಗೆ ಶ್ರೇಯಸ್ಕರ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Posted On: 27-02-2023 09:14PM
ಉಡುಪಿ : ಹಳೆಯ ಬಟ್ಟೆಯನ್ನು ತೊಡೆದು ಹೊಸ ಬಟ್ಟೆಯನ್ನು ಉಡುವುದು ವೈಯುಕ್ತಿಕವಾಗಿ ವ್ಯಕ್ತಿಗೆ ಹೇಗೆ ಶ್ರೇಯಸ್ಕರವೋ, ಹಾಗೇ ಜೀರ್ಣಗೊಂಡ ದೇವಾಲಯಗಳನ್ನು ಉದ್ಧಾರಗೊಳಿಸುವುದು ಊರಿಗೆ ಶ್ರೇಯಸ್ಕರವಾದುದು, ಆದ್ದರಿಂದ ದೇವಾಲಯಗಳ ಜೀರ್ಣೋದ್ಧಾರದಲ್ಲಿ ಊರವರೆಲ್ಲರೂ ಒಮ್ಮನಸ್ಸಿನಿಂದ ಸೇವೆ ಸಲ್ಲಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ಸೋಮವಾರ, ಇಲ್ಲಿನ ಪೆರ್ಣಂಕಿಲದ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆ ಪ್ರಾರಂಭದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ದೇವಾಲಯಕ್ಕೆ ಭೂಮಿ, ಮರ, ಧನ ದಾನ ಮಾಡಿದವರನ್ನು ಗೌರವಿಸಿದರು. ಅವದಾನಿ ಗುಂಡಿಬೈಲು ಸುಬ್ರಹಣ್ಯ ಭಟ್ ಊರವರಿಗೆ ದೀಕ್ಷಾಬದ್ಧತೆಯನ್ನು ವಿವರಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪೆರ್ಣಂಕಿಲ ಹರಿದಾಸ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಶಾ ನಾಯಕ್, ಮಠದ ದಿವಾಣರಾದ ಸುಬ್ರಹ್ಮಣ್ಯ ಭಟ್, ವಿದ್ವಾನ್ ರಘುರಾಮ ಆಚಾರ್ಯರು ವೇದಿಕೆಯಲ್ಲಿದ್ದರು.
ಉಮೇಶ್ ನಾಯಕ್ ಮತ್ತು ಸದಾನಂದ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಸರ್ವೇಶ ತಂತ್ರಿಗಳ ನೇತೃತ್ವದಲ್ಲಿ, ಶ್ರೀಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ, ಮಧುಸೂದನ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವರ ಬಿಂಬವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಾಪು : ನಿವೃತ್ತ ಮುಖ್ಯ ಶಿಕ್ಷಕ ಹಾಜಿ ಬಾವು ಬ್ಯಾರಿ ಕರಂದಾಡಿ ನಿಧನ

Posted On: 27-02-2023 07:54AM
ಕಾಪು : ಇಲ್ಲಿನ ಕರಂದಾಡಿ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ಹಾಜಿ ಬಾವು ಬ್ಯಾರಿ ಕರಂದಾಡಿ ಇವರು ಫೆಬ್ರವರಿ 25ರಂದು ಅಲ್ಪಕಾಲದ ಅಸೌಖ್ಯದಿಂದ ತನ್ನ ನಿವಾಸದಲ್ಲಿ ನಿಧನರಾದರು.
ಶ್ರೀಯುತರು ಮಲ್ಲಾರು ಕರಂದಾಡಿ, ಪುಂಜಾಲಕಟ್ಟೆ, ಪಡುಬಿದ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಮುಖ್ಯ ಶಿಕ್ಷಕರಾಗಿ 35 ವರ್ಷ ಸೇವೆಸಲ್ಲಿಸಿದ್ದಾರೆ.
ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶ್ರೀಯುತರು ಪತ್ನಿ ಹಾಗೂ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿದ್ದು ಇದೀಗ ವಿದೇಶದಲ್ಲಿರುವ ಡಾ| ಅಬ್ದುಲ್ ರಝಾಕ್ ಯು.ಕೆ ಸೇರಿದಂತೆ ನಾಲ್ವರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಬಳಕೆದಾರರ ವೇದಿಕೆ ದೇವಿನಗರ ಪರ್ಕಳ ಅಜೀವ ಗೌರವಾದ್ಯಕ್ಷ ಹಾಜಿ ಕೆ.ಅಬೂಬಕ್ಕರ್ ಪರ್ಕಳ, ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಪು : ದೇವಾಡಿಗರ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನಕ್ಕಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ

Posted On: 25-02-2023 06:29PM
ಕಾಪು : ಇಲ್ಲಿನ ದೇವಾಡಿಗರ ಸಂಘದ ಸಮುದಾಯ ಭವನ ನಿರ್ಮಾಣಕ್ಕಾಗಿ ಸರಕಾರದಿಂದ ಅನುದಾನ ಪಡೆಯುವ ಬಗ್ಗೆ ಪ್ರಶಾಂತ್ ಕುಮಾರ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅಧ್ಯಕ್ಷ ಗೋವರ್ಧನ್ ಸೇರಿಗಾರ್ ಮತ್ತು ದೇವಾಡಿಗ ಸಮಾಜದ ನಾಯಕರು ಸೇರಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ನಾರಾಯಣ ದೇವಾಡಿಗ, ಭಾಸ್ಕರ್ ದೇವಾಡಿಗ, ಉಪಾಧ್ಯಕ್ಷ ರಂಜಿತ್ ದೇವಾಡಿಗ ಕಲ್ಯಾ, ಚಂದ್ರಶೇಖರ್ ದೇವಾಡಿಗ, ಕಾರ್ಯದರ್ಶಿ ದೀಪಕ್ ದೇವಾಡಿಗ ಮಲ್ಲಾರ್, ಕೋಶಾಧಿಕಾರಿ ಶ್ರೀಧರ್ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ದೇವಾಡಿಗ, ಸದಸ್ಯರಾದ ರೇಣುಕಾ ಧನಂಜಯ್, ಜಯಂತಿ ದೇವಾಡಿಗ ಕಲ್ಯಾ, ಮಂಜುನಾಥ್ ದೇವಾಡಿಗ, ಯಶ್ವಿನ್ ದೇವಾಡಿಗ, ಪ್ರವೀಣ್ ದೇವಾಡಿಗ, ಪುರಸಭಾ ಸದಸ್ಯರಾದ ಲತಾ ದೇವಾಡಿಗ ಮತ್ತು ಸುರೇಶ್ ದೇವಾಡಿಗ ಉಪಸ್ಥಿತರಿದ್ದರು.
ಇಂದು - ನಾಳೆ : ಕಟಪಾಡಿ ಕಂಬಳ

Posted On: 25-02-2023 06:18PM
ಕಟಪಾಡಿ : ತುಳುನಾಡಿನ ಇತಿಹಾಸದಲ್ಲಿ ಪ್ರಾಮುಖ್ಯತೆ ಗಳಿಸಿರುವ ಕಟಪಾಡಿ ಕಂಬಳಕ್ಕೆ ಇಂದು ಚಾಲನೆ ನೀಡಲಾಯಿತು.
ರಾಜ ಮನೆತನದ ಸಂಪ್ರದಾಯವನ್ನು ಅನುಸರಿಸಿ ಕಂಬಳದ ನಿಯಮಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ.
ಹೊನಲು ಬೆಳಕಿನ ಕಂಬಳವನ್ನೂ ಆಯೋಜಿಸಲಾಗಿದ್ದು ಸಾವಿರಾರು ಮಂದಿ ಕಂಬಳ ಪ್ರೇಮಿಗಳು ವೀಕ್ಷಿಸಲಿದ್ದಾರೆ.
ಫೆಬ್ರವರಿ 25 : ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಢಕ್ಕೆಬಲಿ ಸೇವೆ

Posted On: 24-02-2023 11:30PM
ಪಡುಬಿದ್ರಿ : ಇಲ್ಲಿನ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಅಂಗಡಿಗುತ್ತು ಸುಜಯ್ ಕುಮಾರ್ ಶೆಟ್ಟಿ , ಅವರಾಲು ಕಂಕಣಗುತ್ತು ಅಮೃತಾ ಎಸ್ ಶೆಟ್ಟಿ ಇವರ ಪರಿವಾರದಿಂದ ಫೆಬ್ರವರಿ 25, ಶನಿವಾರದಂದು ಢಕ್ಕೆಬಲಿ ಸೇವೆಯು ನಡೆಯಲಿದೆ.
ಆ ದಿನ ಮಧ್ಯಾಹ್ನ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಅನ್ನಸಂತರ್ಪಣೆ ಜರುಗಿ, ಸಂಜೆ 4 ಗಂಟೆಯಿಂದ ಫಲ ಪುಷ್ಪ ತಾಂಬೂಲಾ ಪರಿಕರ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಅನ್ನಸಂತರ್ಪಣೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿ, ಈ ಪುಣ್ಯ ಸೇವೆಯಲ್ಲಿ ಭಕ್ತ ಮಹಾಶಯರೆಲ್ಲರೂ ಸಕಾಲದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ಖಡ್ಗೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಸುಜಯ ಕುಮಾರ್ ಶೆಟ್ಟಿ ಹಾಗೂ ಅಮೃತಾ ಎಸ್ ಶೆಟ್ಟಿ, ಸಚಿ ಶೆಟ್ಟಿ, ಸವ್ಯ ಶೆಟ್ಟಿ, ಎಸ್. ಕೆ. ಎಸ್. ಕಾರ್ಕಳ ಇನ್ ಫ್ರಾ. ಪ್ರೈ. ಲಿ. ವತಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಮಾರ್ಚ್ 8 : ಬೆಳಪು ಬಡಿಕೇರಿ ಪದ್ಮಶ್ರೀ ಮನೆಯ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ

Posted On: 24-02-2023 07:49PM
ಕಾಪು : ಬೆಳಪು ಗ್ರಾಮದ ಬಡಿಕೇರಿ ಪದ್ಮಶ್ರೀ ಮನೆಯ ವಠಾರದಲ್ಲಿ ಮಾರ್ಚ್ 8, ಬುಧವಾರ ಸಂಜೆ 5.30 ಕ್ಕೆ ಚೌಕಿ ಪೂಜೆ ಆರಂಭಗೊಳ್ಳುವುದರೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ಶ್ರೀ ದೇವಿ ಮಹಾತ್ಮೆ (ಕಾಲಮಿತಿ ಯಕ್ಷಗಾನ) ಎಂಬ ಪ್ರಸಂಗ ನಡೆಯಲಿದೆ.
ಅಂದು ಸಂಜೆ 7.30 ರಿಂದ 8.30 ರವರೆಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಶ್ರೀಮತಿ ಸುಕನ್ಯಾ ಮತ್ತು ಶ್ರೀ ಹರಿರಾವ್ ಹಾಗೂ ಮಕ್ಕಳು ಬಡಿಕೇರಿ, ಮಲಂಗೋಳಿ ಪಣಿಯೂರು ಇವರು ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಪು : ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಬಂಜಾರ ಗ್ರೂಪ್ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಭೇಟಿ ; ಸನ್ಮಾನ

Posted On: 22-02-2023 06:09PM
ಕಾಪು : ಫೆಬ್ರವರಿ 22ರಿಂದ 25 ರವರೆಗೆ ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮೋತ್ಸವ ನಡೆಯಲಿರುವ ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಬಂಜಾರ ಗ್ರೂಪ್ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಭೇಟಿ ನೀಡಿದರು.
ಈ ಸಂದರ್ಭ ಜೀರ್ಣೋದ್ಧಾರಕ್ಕೆ ಸಂಪೂರ್ಣ ಸಹಕಾರ ನೀಡಿ, ಸ್ವಾಗತ ಗೋಪುರದ ಪ್ರಾಯೋಜಕತ್ವ ವಹಿಸಿರುವ ಅವರನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಐಕಳಭಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ಗುತ್ತಿನಾರ್ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು, ಹರೀಶ್ ನಾಯಕ್ ಕಾಪು, ಸುಕುಮಾರ್ ಶೆಟ್ಟಿ ನಡಿಮನೆ, ಉದಯ ಶೆಟ್ಟಿ ಪಡುಮನೆ, ರಾಕೇಶ್ ಕುಂಜೂರು, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ಥಳವಂದಿಗರು ಉಪಸ್ಥಿತರಿದ್ದರು.
ಮಾಚ್೯ 12 - 14 : ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ ಕಾಲಾವಧಿ ಜಾತ್ರೆ

Posted On: 22-02-2023 03:02PM
ಕಟಪಾಡಿ : ಇಲ್ಲಿನ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಮಾಚ್೯13, ಸೋಮವಾರ ಜರಗಲಿದೆ.
ಮಾಚ್೯ 12, ಆದಿತ್ಯವಾರ ಬೆಳಿಗ್ಗೆ ಗಂಟೆ 11:45ಕ್ಕೆ ಧ್ವಜಾರೋಹಣ ರಾತ್ರಿ ಗಂಟೆ 7ರಿಂದ ಅನ್ನ ನೈವೇದ್ಯದ ಅಗೆಲುಸೇವೆ, ಮಾಚ್೯ 13, ಸೋಮವಾರ ಸಂಜೆ ಗಂಟೆ 6:30ಕ್ಕೆ ಶ್ರೀ ಬೈದೇರುಗಳ ನೇಮೋತ್ಸವ, ರಾತ್ರಿ ಗಂಟೆ 8ಕ್ಕೆ ಮಹಾ ಅನ್ನಸಂತರ್ಪಣೆ, ಮಾಚ್೯ 14, ಮಂಗಳವಾರ ಸಂಜೆ ಗಂಟೆ 3ಕ್ಕೆ ಮಾಯಂದಾಲ ನೇಮ ರಾತ್ರಿ ಗಂಟೆ 8ಕ್ಕೆ ಪರಿವಾರ ದೈವಗಳ ನೇಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.