Updated News From Kaup

ಫೆ. 22ರಿಂದ 25 : ಪಣಿಯೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನೇಮ

Posted On: 21-02-2023 08:36PM

ಕಾಪು : ತಾಲೂಕಿನ ಪಣಿಯೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಫೆಬ್ರವರಿ 22ರಿಂದ 25ರವರೆಗೆ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ ನೆರವೇರಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿಯವರು ಮಂಗಳವಾರ ಪಣಿಯೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ವೇ| ಮೂ| ಬೆಟ್ಟಿಗೆ ವೆಂಕಟರಾಜ ತಂತ್ರಿಗಳ ನೇತೃತ್ವದಲ್ಲಿ ಫೆಬ್ರವರಿ 22ರಿಂದ ಮೊದಲ್ಗೊಂಡು ಫೆಬ್ರವರಿ 25ರವರೆಗೆ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ ಜರಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಶೆಟ್ಟಿ, ಸುಕುಮಾರ್‌ ಶೆಟ್ಟಿ ನಡಿಮನೆ, ಗುತ್ತಿನಾರ್‌ ಯೋಗೀಶ್‌ ಶೆಟ್ಟಿ ಮಣಿಯೂರು ಗುತ್ತು, ಕಾರ್ಯದರ್ಶಿ ಗಣೇಶ್‌ ಶೆಟ್ಟಿ, ಗುರಿಕಾರ ಶಂಕರ ಬಿ. ಪ್ರಚಾರ ಸಮಿತಿಯ ಸತೀಷ್‌ ಶೆಟ್ಟಿ ಗುಡ್ಡೆಚ್ಚಿ, ರಾಕೇಶ್‌ ಕುಂಜೂರು ಮತ್ತಿತರರು ಉಪಸ್ಥಿತರಿದ್ದರು.

ಉಚ್ಚಿಲ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಗಲು ರಥೋತ್ಸವ ರಥಾರೋಹಣ ಸಂಪನ್ನ

Posted On: 21-02-2023 07:28PM

ಉಚ್ಚಿಲ : ಇಲ್ಲಿನ ಪುರಾಣ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದ ವಾರ್ಷಿಕ ಹಗಲು ರಥೋತ್ಸವ ಹಾಗೂ ರಥಾರೋಹಣ ಮಂಗಳವಾರ ಮಧ್ಯಾಹ್ನ ಸಂಪನ್ನಗೊಂಡಿತು.

ದೇವಳದ ತಂತ್ರಿ ವರ್ಯರಾದ ಶ್ರೀ ರಾಧಾಕೃಷ್ಣ ಉಪಾಧ್ಯಾಯ, ಆಡಳಿತಾಧಿಕಾರಿ ಕಾಪು ತಹಶಿಲ್ದಾರ್‌ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಸಿಬ್ಬಂದಿ ವರ್ಗ, ಅರ್ಚಕರ ಸಹಿತ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆಯೂ ನೆರವೇರಿತು.

ಪಡುಬಿದ್ರಿ : ಢಕ್ಕೆ ಬಲಿ ಸೇವೆ ; ಹೊರೆ ಕಾಣಿಕೆ ಮೆರವಣಿಗೆ

Posted On: 21-02-2023 05:57PM

ಪಡುಬಿದ್ರಿ : ಇಲ್ಲಿನ ಕಲ್ಲಟ್ಟೆ ಜಾರಂದಾಯ ದೈವಸ್ಥಾನದಿಂದ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ನಡೆಯಲಿರುವ ಢಕ್ಕೆ ಬಲಿ ಸೇವೆಯ ಪ್ರಯುಕ್ತ ಫಲಪುಷ್ಪ ತಾಂಬೂಲ ಪರಿಕರ ಹೊರಕಾಣಿಕೆ ಮೆರವಣಿಗೆಯು ಮಂಗಳವಾರ ವಿಜೃಂಭಣೆಯಿಂದ ಜರಗಿತು.

ಮಧ್ಯಾಹ್ನ ಜಾರಂದಾಯ ದೈವಸ್ಥಾನದಲ್ಲಿ ಅನ್ನಸಂತರ್ಪಣೆಯು ಜರಗಿದ್ದು ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದರು.

ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಪಡುಬಿದ್ರಿ - ಮುಂಬಯಿ ಕಲ್ಲಟ್ಟೆ ಶ್ರೀ ಜಾರಂದಾಯ ಸೇವಾ ಸಮಿತಿ, ಕಲ್ಲಟ್ಟೆ ಶ್ರೀ ಜಾರಂದಾಯ ಯುವಕ ವೃಂದ, ಕಲ್ಲಟ್ಟೆ ಶ್ರೀ ಜಾರಂದಾಯ ಮಹಿಳಾ ಮಂಡಲ, ಗುರಿಕಾರರು, ಊರ ಹತ್ತು ಸಮಸ್ತರು ಪಾಲ್ಗೊಂಡಿದ್ದರು.

ಕುಂಬಾರರ ಬೇಡಿಕೆಯನ್ನು ಸರಕಾರ ನಿರ್ಲಕ್ಷಿಸಿರುವುದು ಬೇಸರ ತಂದಿದೆ : ಅನಿಲ್ ದಾಸ್

Posted On: 21-02-2023 04:27PM

ಮಂಗಳೂರು : ಕುಂಬಾರರ ಬೇಡಿಕೆಯನ್ನು ಸರಕಾರ ನಿರ್ಲಕ್ಷಿಸಿರುವುದು ತುಂಬಾ ಬೇಸರ ತಂದಿದೆ. ಒಂದು ರಾಜಕೀಯ ಪಕ್ಷವನ್ನು ಗೆಲ್ಲಿಸುವಲ್ಲಿ ಹಾಗೂ ಸೋಲಿಸುವುದರಲ್ಲಿ ಕುಲಾಲ-ಕುಂಬಾರರ ಮತಗಳು ನಿರ್ಣಾಯಕವೆನ್ನುವುದನ್ನು ರಾಜಕೀಯ ನಾಯಕರು ಮನಗಂಡಿಲ್ಲ ಎಂದು ಕರ್ನಾಟಕ ರಾಜ್ಯ ಕುಲಾಲ-ಕುಂಬಾರ ಯುವ ವೇದಿಕೆಯ ಮಂಗಳೂರು ವಿಭಾಗದ ಉಪಾಧ್ಯಕ್ಷ ಅನಿಲ್‌ದಾಸ್ ಹೇಳಿದ್ದಾರೆ.

ರಾಜ್ಯ ಸರಕಾರ ರಾಜ್ಯದಲ್ಲಿ ಇರುವ ಕುಂಬಾರರ ಶ್ರೇಯೋಭಿವೃದ್ಧಿಗೆ ಕುಂಭ ನಿಗಮವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಆಶ್ವಾಸನೆಗಳನ್ನು ನೀಡುತ್ತಾ ಬಂದಿರುತ್ತದೆ. ಅನೇಕ ಹೋರಾಟ ಹಕ್ಕೊತ್ತಾಯ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷದ ನಾಯಕರುಗಳು ಭರವಸೆಗಳನ್ನು ನೀಡುತ್ತಾ ಬಂದಿದ್ದು, ಇದು ರಾಜಕೀಯ ನಾಯಕರ ಕಾಲಹರಣ ಎಂಬುದು ಕುಂಬಾರರಿಗೆ ಈಗ ಮನದಟ್ಟಾಗಿದೆ. ಈ ಬಾರಿಯ ಬಜೆಟ್‌ನಲ್ಲಿಯೂ ಮುಖ್ಯಮಂತ್ರಿಗಳು ಕುಂಬಾರರ ಬೇಡಿಕೆಯನ್ನು ನಿರ್ಲಕ್ಷಿಸಿರುವುದು ತುಂಬಾ ಬೇಸರ ತಂದಿದೆ. ಕುಂಬಾರರ ಯುವಶಕ್ತಿ, ಮಹಿಳಾ ಶಕ್ತಿ ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ, ಸಮುದಾಯದ ನಿರ್ಲಕ್ಷ್ಯ ಸಲ್ಲದು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಶಿರ್ವ ಗ್ರಾಮ ಪಂಚಾಯತ್ ಗೆ ಎರಡನೆಯ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿಮೆ

Posted On: 20-02-2023 05:16PM

ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ಗೆ ಎರಡನೆ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ತುಂಬಾ ಸಂತಸದ ವಿಚಾರ. ಈ ಹಿಂದೆ 2020 ರಲ್ಲಿ ಶಿರ್ವಾ ಗ್ರಾಮ ಪಂಚಾಯತ್ ನ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷರಾದ ವಾರಿಜಾ ಪೂಜಾರಿಯವರ ಹಾಗೂ ಉಪಾಧ್ಯಕ್ಷರಾದ ದೇವದಾಸ್ ನಾಯಕ್ ಇವರ ಅವಧಿಯಲ್ಲಿ ಗಾಂಧಿ ಗ್ರಾಮ ಗೌರವಕ್ಕೆ ಪಾತ್ರವಾಗಿದೆ.

ವಾರಿಜಾ ಪೂಜಾರಿಯವರ ಅಧಿಕಾರಾವಧಿಯಲ್ಲಿ ಶಿರ್ವ ಗ್ರಾಮ ಪಂಚಾಯತ್ ಸ್ವಚ್ಛತೆಯನ್ನು ಪಾಲಿಸುವ ಸಲುವಾಗಿ ವಿಶೇಷ ಗಮನವನ್ನು ಕೊಟ್ಟು ಸಮಗ್ರವಾಗಿ ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡನೆ ಮಾಡಲು ಎಸ್.ಎಲ್.ಆರ್.ಎಂ.ಘಟಕವನ್ನು ಸ್ಥಾಪಿಸಿದ ಹೆಗ್ಗಳಿಕೆಯೂ ವಾರಿಜಾ ಪೂಜಾರಿಯವರಿಗೆ ಸಲ್ಲುತ್ತದೆ. ಅಲ್ಲದೇ ಪ್ರತಿನಿತ್ಯ ಕೇವಲ ಒಂದೇ ಕಸ ಸಂಗ್ರಹಿಸುವ ವಾಹನ ಹಾಗೂ ನಿಯಮಿತ ಸ್ವಚ್ಛತಾ ಸಿಬಂದಿಗಳಿದ್ದರೂ ಬಹಳ ಉತ್ತಮ ರೀತಿಯಲ್ಲಿ ಕಸ ವಿಲೇವಾರಿಯ ಕೆಲಸವನ್ನೂ ನಿರ್ವಹಿಸುತ್ತಾರೆ. ಇದರ ಮೊದಲು ಶಿರ್ವ ಬಸ್ಸು ತಂಗುದಾಣ,ಪೇಟೆಯ ಸುತ್ತ ಮುತ್ತದಲ್ಲಿ ಕಸದ ರಾಶಿಗಳು ಗಬ್ಬು ನಾರುತ್ತಿತ್ತು.

2020 ರಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ದೊರಕುವಲ್ಲಿ ಶಿರ್ವ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ಅನಂತ ಪದ್ಮನಾಭ ನಾಯಕ್ ಇವರ ಶ್ರಮವನ್ನು ಮರೆಯುವಂತಿಲ್ಲ. ಅವರ ಮೊದಲ ಆದ್ಯತೆ ಸ್ವಚ್ಛತೆಯ ಕಡೆಗೆ ಇತ್ತು. ಇದರೊಂದಿಗೆ ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಸಹಕಾರ ಸ್ವಚ್ಛತಾ ಸಿಬ್ಬಂದಿಗಳ ಶ್ರಮವನ್ನು ಮರೆಯುವಂತಿಲ್ಲ. ಪ್ರಸ್ತುತ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರವು ದೊರೆಯಲು ಈ ಹಿಂದೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಆಡಳಿತ ಅವಧಿಯಲ್ಲಿ ಹಾಕಿದ ಭದ್ರಬುನಾದಿಯೇ ಮೂಲ ಕಾರಣವಾಗಿದೆ ಎಂಬುದನ್ನು ಗ್ರಾಮಸ್ಥರು ಎಂದಿಗೂ ಮರೆಯುವಂತಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ರವೀಂದ್ರ ಪಾಟ್ಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 24, 25, 26 : ಕಟಪಾಡಿ ಉತ್ಸವ

Posted On: 20-02-2023 04:57PM

ಕಟಪಾಡಿ‌ : ಜೋಕಾಲಿ ಫ್ರೆಂಡ್ಸ್ ಪಳ್ಳಿಗುಡ್ಡೆ ಕಟಪಾಡಿ ಇದರ ಆಶ್ರಯದಲ್ಲಿ ನಾಡೋಜ ಡಾ.ಜಿ.ಶಂಕರ್ ಅವರ ಆಶೀರ್ವಾದದೊಂದಿಗೆ ಕಟಪಾಡಿ ಪಳ್ಳಿಗುಡ್ಡೆ ಮೈದಾನದಲ್ಲಿ ಫೆಬ್ರವರಿ 24, 25, 26ರಂದು ವಿವಿಧ ಕ್ರೀಡೆಗಳು, ಸಭಾ ಕಾರ್ಯಕ್ರಮ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಒಳಗೊಂಡ ಕಟಪಾಡಿ ಉತ್ಸವ ಜರಗಲಿದೆ.

ಫೆಬ್ರವರಿ 24, ಶುಕ್ರವಾರದಂದು ಬೆಳಗ್ಗೆ 9:30ಕ್ಕೆ ಕಟಪಾಡಿ ಪೇಟೆಯಿಂದ ಮಹಿಳಾ ಸಂಗಮ ಮೆರವಣಿಗೆ, ಬೆಳಗ್ಗೆ ಗಂಟೆ 10:30ಕ್ಕೆ ಸಭಾ ಕಾರ್ಯಕ್ರಮ ತದನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಕ್ರೀಡೆ, ಸಂಜೆ ಗಂಟೆ 6ಕ್ಕೆ ಮಧುಕರ್ ಕಟಪಾಡಿ ಇವರಿಂದ ಸಂಗೀತ ಸಂಜೆ, ಸಂಜೆ 7:30ರಿಂದ ಸಭಾ ಕಾರ್ಯಕ್ರಮ, ರಾತ್ರಿ 8:30ರಿಂದ ಚಲನಚಿತ್ರ ಕಂಠದಾನ ಕಲಾವಿದರಾದ ಅಂತರಾಷ್ಟ್ರೀಯ ಮಟ್ಟದ ಗಾಯಕ ಕೆ. ನವೀನಚಂದ್ರ ಅರ್ಪಿಸುವ ಶಿವಾನಿ ಮ್ಯೂಸಿಕಲ್ ಇವರಿಂದ ಅದ್ದೂರಿಯ ಸಂಗೀತ ರಸಮಂಜರಿ ಕಾರ್ಯಕ್ರಮ, ರಾಜ್ಯಪ್ರಶಸ್ತಿಯ ಕ್ರೇಜಿ ಗಾಯ್ಸ್ ತಂಡದವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರಗಲಿದೆ.

ಫೆಬ್ರವರಿ 25, ಶನಿವಾರ ಬೆಳಿಗ್ಗೆ 9ರಿಂದ ಜೋಕಾಲಿ ಫ್ರೆಂಡ್ಸ್ ಟ್ರೋಫಿ 2023 ವಾಲಿಬಾಲ್ ಪಂದ್ಯಾಟ, ಸಂಜೆ 6:30ಕ್ಕೆ ರಾಜ್ಯಪ್ರಶಸ್ತಿ ವಿಜೇತ ಎಕ್ಸ್- ಟ್ರೀಮ್ ಡ್ಯಾನ್ಸ್ ಕ್ರ್ಯೂ ಬಿ.ಸಿ.ರೋಡ್ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ಸಂಜೆ 8ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 9ಕ್ಕೆ ಹೊನಲು ಬೆಳಕಿನ 40 ಗಜಗಳ ಕ್ರಿಕೆಟ್ ಪಂದ್ಯಾಕೂಟ ಜೋಕಾಲಿ ಫ್ರೆಂಡ್ಸ್ ಟ್ರೋಫಿ -2023 ಜರಗಲಿದೆ.

ಫೆಬ್ರವರಿ 26, ರವಿವಾರ ಮಧ್ಯಾಹ್ನ 12:30ರಿಂದ ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ರಾಜ್ ಸಂತೆಕಟ್ಟೆ ಇವರಿಂದ ಸಂಗೀತ ಸಂಜೆ, ರಾತ್ರಿ ಗಂಟೆ 8ಕ್ಕೆ ಸಭಾ ಸಭಾ ಕಾರ್ಯಕ್ರಮ, ರಾತ್ರಿ 9:30 ರಿಂದ ಕಲಾಚಾವಡಿ ಅಂಬಲಪಾಡಿ, ಉಡುಪಿ ತಂಡದಿಂದ ಮೋಕೆದ ಮದಿಮಾಲ್ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು : ಶಂಕರಪುರ ಇನ್ನರ್ ವೀಲ್ ಕ್ಲಬ್ ಗೆ ಜಿಲ್ಲಾ ಚೇರ್ಮೆನ್ ಅಧಿಕೃತ ಭೇಟಿ

Posted On: 20-02-2023 01:39PM

ಕಾಪು : ತಾಲೂಕಿನ ಶಂಕರಪುರ ಇನ್ನರ್ ವೀಲ್ ಕ್ಲಬ್ ಗೆ ಶುಕ್ರವಾರದಂದು ಇನ್ನರ್ ವೀಲ್ ಜಿಲ್ಲಾ ಚೇರ್ಮೆನ್ ಕವಿತಾ ನಿಯತ್ ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಂಕರಪುರದ ಮುಖ್ಯ ಬೆಳೆಯಾದ ಮಲ್ಲಿಗೆ ಕೃಷಿ ಹಾಗೂ ಹೂವಿನ ಬಗ್ಗೆ ಮತ್ತು ಶಂಕರಪುರ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಸಂದರ್ಭ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉದಯೋನ್ಮುಖ ಸಂಗೀತಗಾರ ಆಯುಷ್ ರೇಗನ್ ಮಿನೇಜಸ್ ಹಾಗೂ ಶಿರ್ವದಲ್ಲಿ ವಿಭಿನ್ನ ಶಕ್ತಿಯ ಮಕ್ಕಳಿಗೆ ತರಬೇತಿ ಹಾಗೂ ತರಗತಿಯನ್ನು ನೀಡುತ್ತಿರುವ ವಿಶಿಷ್ಟ ಸಂಸ್ಥೆಯ ಸ್ಥಾಪಕಿ ಫ್ಲೋರಿನ್ ರಿಮಾ ಮಿನಜಸ್ ಅವರನ್ನು ಸನ್ಮಾನಿಸಲಾಯಿತು. ಸುಭಾಷ್ ನಗರ ಸರಕಾರಿ ಗುಡ್ಡೆ ಹಾಗೂ ಶಂಕರಪುರ ಪರಿಸರದಲ್ಲಿ ಅಡ್ಡರಸ್ತೆಯ ಗುರುತಿನ 9 ನಾಮಫಲಕಗಳನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ಸಿ. ಜಿ .ಆರ್. ದೀಪ ಭಂಡಾರಿ ಸಂಸ್ಥೆಯ ಗ್ರಹ ಪತ್ರಿಕೆ "ಹೊಂಗಿರಣ" ಅನ್ನು ಬಿಡುಗಡೆಗೊಳಿಸಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಕೊಂಡಾಡಿದರು. ರೋಟರಿ ಸದಸ್ಯರು, ಜೆಸಿಐ ಸದಸ್ಯರು, ವಿವಿಧ ಇನ್ನರ್ ವೀಲ್ ಕ್ಲಬ್ ಗಳಿಂದ ಆಗಮಿಸಿದ ಸದಸ್ಯರು ಉಪಸ್ಥಿತರಿದ್ದರು.

ಎಲಿಸಾ ಮಾರ್ಟಿಸ್ ಪ್ರಾರ್ಥಿಸಿದರು. ಅಧ್ಯಕ್ಷರಾದ ಶಾಲಿನಿ ಚಂದ್ರ ಸ್ವಾಗತಿಸಿದರು. ಲೀನಾ ಮೆಂಡೋನ್ಸ ಕಾರ್ಯಕ್ರಮ ನಿರೂಪಿಸಿದರು. ಆಲಿಸ್ ರೋಡ್ರಿಗಸ್ ವಂದಿಸಿದರು.

ಕಾರ್ಕಳ : ಕುಲಾಲ ಸಂಘ, ಕುಲಾಲ ಯುವ ವೇದಿಕೆ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

Posted On: 20-02-2023 12:54PM

ಕಾರ್ಕಳ : ಇಲ್ಲಿನ ಕುಲಾಲ ಸಂಘ, ಕುಲಾಲ ಯುವ ವೇದಿಕೆ ವತಿಯಿಂದ ಕಾರ್ಕಳ ತಾಲೂಕಿನ ಬಳಿ ಇರುವ ಸರ್ವಜ್ಞ ಸರ್ಕಲ್ ನ ಸರ್ವಜ್ಞನ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಸರ್ವಜ್ಞ ಜಯಂತಿಯನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಕುಲಾಲ್, ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ದಿವಾಕರ್ ಬಂಗೇರ, ಕಾರ್ಕಳ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಉದಯ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಕುಲಾಲ್, ವಸಂತ ಕುಲಾಲ್, ಸುರೇಂದ್ರ ಕುಲಾಲ್ ವರಂಗ, ಹೃದಯ ಕುಲಾಲ್, ವಿಜೇಶ್ ಕುಲಾಲ್, ಮಹಿಳಾ ಮಂಡಲದ ಸದಸ್ಯರು, ಯುವ ವೇದಿಕೆಯ ಸದಸ್ಯರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಟಪಾಡಿ ಸಮಾಜ ಸೇವಕ ಜಯರಾಜ ಕಟಪಾಡಿ, ಸಂಗಡಿಗರು ಜೆಡಿಎಸ್ ಪಕ್ಷ ಸೇರ್ಪಡೆ

Posted On: 19-02-2023 04:00PM

ಉಡುಪಿ : ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಟಪಾಡಿಯ ಸಮಾಜ ಸೇವಕರಾದ ಜಯರಾಜ ಕಟಪಾಡಿ ಮತ್ತು ಸಂಗಡಿಗರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಜಯರಾಜ ಕಟಪಾಡಿ ಮತ್ತು ಸಂಗಡಿಗರಿಗೆ ಶಾಲು ಹೊದಿಸಿ ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭ ರಾಜ್ಯ ಕಾರ್ಯದರ್ಶಿಗಳಾದ ಸುಧಾಕರ ಶೆಟ್ಟಿ, ಗಂಗಾಧರ ಬಿರ್ತಿ ಮತ್ತು ಮನ್ಸೂರ್ ಇಬ್ರಾಹಿಂ, ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವ ರಾವ್, ನಾಯಕರಾದ ಸಂಕಪ್ಪ ಎ, ಬಾಲಕೃಷ್ಣ ಆಚಾರ್ಯ ಕಬ್ಬೆಟ್ಟು, ಇಕ್ಬಾಲ್ ಅತ್ರಾಡಿ, ಅಶ್ರಫ್ ಪಡುಬಿದ್ರಿ, ಸಂಜಯ್ ಕುಮಾರ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ

Posted On: 19-02-2023 03:39PM

ಕಾಪು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ ರವಿವಾರ ಕಾಪು ಮಹಾದೇವಿ ಶಾಲೆಯ ಮೈದಾನದಲ್ಲಿ ಉದ್ಘಾಟನೆಗೊಂಡಿತು.

ಹೆಜಮಾಡಿಯ ಉದ್ಯಮಿ ಗುಲಾಂ ಅಹಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತಾಡಿದ ಅವರು ಪತ್ರಕರ್ತರು ತಮ್ಮ ದೈನಂದಿನ ಕಾರ್ಯದ ಒತ್ತಡದ ನಡುವೆಯೂ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತಸದ ವಿಷಯ. ಕ್ರೀಡಾಕೂಟಕ್ಕೆ ಶುಭಹಾರೈಸಿದರು.

ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕಾಪು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಪುಂಡಲೀಕ ಮರಾಠೆ, ಕ್ರೀಡಾ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹಮೀದ್ ಪಡುಬಿದ್ರಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಸುರೇಶ್ ಎರ್ಮಾಳು ಸ್ವಾಗತಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ನಿರೂಪಿಸಿ, ವಂದಿಸಿದರು.