Updated News From Kaup
ಇಂದು ಕುಂಜೂರು ದುರ್ಗಾ ದೇವಸ್ಥಾನದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ

Posted On: 30-09-2022 01:30PM
ಕಾಪು : ಶ್ರೀ ದುರ್ಗಾ ಮಿತ್ರವೃಂದ ಕುಂಜೂರು, ಶ್ರೀ ದುರ್ಗಾ ಸೇವಾ ಸಮಿತಿ,ಕುಂಜೂರು, ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಆಶ್ರಯದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ (ರಿ.) ಬೆಂಗಳೂರು ಇವರ ಜನಜಾಗೃತಿ ಅಭಿಯಾನ "ಐತಿಹಾಸಿಕ ಪರಂಪರೆ ಉಳಿಸಿ" ಕಾರ್ಯಕ್ರಮ ಸೆಪ್ಟೆಂಬರ್ 30, ಶುಕ್ರವಾರ ಕುಂಜೂರು ದುರ್ಗಾ ದೇವಸ್ಥಾನದಲ್ಲಿ ಸಂಜೆ 6 ಗಂಟೆಗೆ ಜರಗಲಿದೆ.
ಕಾರ್ಯಕ್ರಮವನ್ನು ದುರ್ಗಾ ದೇವಸ್ಥಾನ,ಕುಂಜೂರು ಇದರ ಅಧ್ಯಕ್ಷರಾದ ದೇವರಾಜ ರಾವ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅದಮಾರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಸುದರ್ಶನ ವೈ .ಎಸ್ ವಹಿಸಲಿದ್ದಾರೆ.
ಮುಖ್ಯ ಉಪನ್ಯಾಸಕಾರರಾಗಿ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಜ್ಯೋತಿಂದ್ರನಾಥ ಭಾಗವಹಿಸಲಿದ್ದಾರೆ. ವೇ.ಮೂ.ಚಕ್ರಪಾಣಿ ಉಡುಪ ಅರ್ಚಕರು, ಕೆ.ಎಲ್.ಕುಂಡಂತಾಯ, ಪ್ರಫುಲ್ಲ ಶೆಟ್ಟಿ ,ಎಲ್ಲೂರು ಗುತ್ತು, ಸತೀಶ ಕುಂಡಂತಾಯ, ಚಂದ್ರಹಾಸ ಆಚಾರ್ಯ, ರಾಘವೇಂದ್ರ ಶೆಟ್ಟಿ , ಮ್ಯಾನೇಜರ್ ದುರ್ಗಾದೇವಸ್ಥಾನ ,ಕುಂಜೂರು ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಪಿಎಫ್ಐ ಮತ್ತದರ ಸಹ ಸಂಘಟನೆಗಳ ಮೇಲೆ 5 ವರ್ಷಗಳ ನಿಷೇಧ ಹೇರಿರುವುದು ಸ್ವಾಗತಾರ್ಹ ನಿರ್ಧಾರ : ಲಾಲಾಜಿ ಆರ್ ಮೆಂಡನ್

Posted On: 29-09-2022 11:10AM
ಕಾಪು : ದೇಶದ ತುಂಬಾ ಮತೀಯ ಉಗ್ರವಾದ, ಗಲಭೆ ಸೃಷ್ಟಿ, ಕೋಮು ದ್ವೇಷ ಸೃಷ್ಟಿ, ದೇಶ ವಿರೋಧಿ ಕೃತ್ಯಗಳಲ್ಲಿ ಪಿಎಫ್ಐ ಮತ್ತು ಅದರ 8 ಸಹೋದರ ಸಂಸ್ಥೆಗಳು ಭಾಗಿಯಾಗಿದ್ದವು. ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ನಡೆದ ಹಲವು ವಿದ್ವಂಸಕ ಕೃತ್ಯಗಳಲ್ಲಿ ಈ ಸಂಘಟನೆಯ ಹೆಸರು ಕೇಳಿ ಬಂದಿತ್ತು. ಇದರ ಜೊತೆಗೆ ನಮ್ಮ ಹಲವಾರು ಕಾರ್ಯಕರ್ತರ ಕೊಲೆಗಳಲ್ಲಿ ಈ ಸಂಘಟನೆಯ ಪಾಲುದರಿಕೆ ಸ್ಪಷ್ಟವಾಗಿತ್ತು. ಈ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಕೂಗು ಕೇಳಿಬರುತ್ತಿತ್ತು. ಆದರೆ, ಈ ಹಿಂದೆ ಇದ್ದ ಸರ್ಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ಈ ಸಂಘಟನೆಗಳನ್ನು ಪೋಷಣೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿತ್ತು.
ಆದರೆ, ಕಳೆದ ಎರಡು ವಾರಗಳಿಂದ ಪಿಎಫ್ಐ ಮತ್ತು ಸಹ ಸಂಘಟನೆಗಳ ಮೇಲೆ ಸರಿಯಾದ ಸಾಕ್ಷಿಗಳನ್ನು ಕಲೆಹಾಕಿ ಎನ್ಐಎ ಮತ್ತು ಉಳಿದ ತನಿಖಾ ಸಂಸ್ಥೆಗಳು ಸರಣಿ ಬಂಧನಗಳನ್ನು ಮಾಡಿತ್ತು. ಇದರ ನಂತರ ಕೆಲವು ಆತಂಕಕಾರಿ ಮಾಹಿತಿಗಳು ಸರ್ಕಾರಕ್ಕೆ ದೊರೆತ ಕಾರಣ ಮತ್ತು ಹಲವಾರು ಹೊರಗಿನ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಸಾಬೀತಾದ ಕಾರಣಕ್ಕೆ ಪಿಎಫ್ಐ ಮತ್ತು 8 ಇತರ ಸಂಘಟನೆಗಳ ಮೇಲೆ 5 ವರ್ಷಗಳ ನಿಷೇಧವನ್ನು ಸರ್ಕಾರ ಹೇರಿದೆ. ಇದು ಅತ್ಯಂತ ಸ್ವಾಗತಾರ್ಹ ನಿರ್ಧಾರವಾಗಿದ್ದು ಇದರಿಂದ ಈ ಸಂಘಟನೆಗಳ ಕುಕೃತ್ಯಗಳಿಗೆ ಕಡಿವಾಣ ಬೀಳಲಿದೆ ಜೊತೆಗೆ ಈ ಸಂಘಟನೆಗಳು ಈವರೆಗೆ ನಡೆಸಿರುವ ದುಶ್ಕೃತ್ಯಗಳ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲಿ.
ಇದೇ ಸಂಧರ್ಭ ಈ ಕಾರ್ಯಾಚರಣೆಗೆ ಕಾರಣರಾದ ನವರಾತ್ರಿಯ ಶುಭಸಂದರ್ಭದಲ್ಲಿ ಇಂತಹ ದಿಟ್ಟ ಹೆಜ್ಜೆ ಇಟ್ಟಿರುವ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಜಿ, ಗೃಹ ಸಚಿವರಾದ ಅಮಿತ್ ಶಾ, ಕೇಂದ್ರ ಗೃಹ ಇಲಾಖೆ, ಎನ್ಐಎ ಸೇರಿದಂತೆ ತನಿಖಾ ಸಂಸ್ಥೆಗಳಿಗೆ ಅಭಿನಂದನೆಗಳನ್ನು ಮತ್ತು ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ ಎಂದು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ನವರಾತ್ರಿಯ ನೆಪದಲ್ಲಿ ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡಿಸುತ್ತಿರುವ ಪಾಲಕರು

Posted On: 28-09-2022 10:47PM
ಪಡುಬಿದ್ರಿ : ನವರಾತ್ರಿಯ ಸಂಭ್ರಮದಲ್ಲಿ ವೇಷಗಳದ್ದೇ ಕಾರುಬಾರು. ಆದರೆ ಪಡುಬಿದ್ರಿ ಪೇಟೆಯಲ್ಲಿ ಕಂಡ ದೃಶ್ಯ ಮಾತ್ರ ಭಿನ್ನ ಸಂಭ್ರಮದ ನಡುವೆ ಬೇಸರ ತರಿಸುವಂತಿತ್ತು. ಇದಕ್ಕೆ ಕಾರಣ ಪಾಲಕರು ಏನೂ ತಿಳಿಯದ ಮುಗ್ಧ ಮಕ್ಕಳ ಮುಖಕ್ಕೆ ಬಣ್ಣ ಬಳಿದು ಜರಿ ಜರಿ ಬಟ್ಟೆ ತೊಡಿಸಿ, ವೇಷದ ನೆಪದಲ್ಲಿ ಭಿಕ್ಷೆ ಬೇಡಿಸುತ್ತಿರುವುದು ಕಂಡು ಬಂದಿದೆ.

ಇದನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರ ಕೆಮರಾಕ್ಕೆ ಹೆದರಿದ ತಾಯಿ ಅಲ್ಲಿಂದ ವೇಗವಾಗಿ ಹೋಗುವ ದೃಶ್ಯ ಕಂಡು ಬಂದಿದೆ.
ಮತೋರ್ವ ಗರ್ಭಿಣಿ ಮಹಿಳೆ ತನ್ನ ಪುಟ್ಟ ಎರಡು ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡಿ ಸುತ್ತಿರುವುದು ಕಂಡು ಬಂದಿದೆ. ಸ್ಥಳೀಯರೋರ್ವರು ಇವರಿಗೆ ಗದರಿಸುತ್ತಿರುವುದು ಕಂಡುಬಂದಿದೆ.
ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡುತ್ತಿರುವುದು ಎಷ್ಟು ಸರಿ ಸಂಬಂಧ ಪಟ್ಟ ಇಲಾಖೆಗಳು ಎಲ್ಲಿವೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಕಳತ್ತೂರು : ಅಂಗನವಾಡಿಯಲ್ಲಿ ಪೋಷಣೆ ಅಭಿಯಾನ ಕಾರ್ಯಕ್ರಮ

Posted On: 28-09-2022 04:36PM
ಕಳತ್ತೂರು : ಗ್ರಾಮದ 3 ಅಂಗನವಾಡಿ ಕೇಂದ್ರದ ಪೋಷಣೆ ಅಭಿಯಾನ ಕಾರ್ಯಕ್ರಮ ಕಳತ್ತೂರು ಅಂಗನವಾಡಿಯಲ್ಲಿ ನಡೆಯಿತು. ಪೋಷಣೆ ಅಭಿಯಾನ ಕಾರ್ಯಕ್ರಮದಲ್ಲಿ ಮೊಳಕೆ ಬರಿಸಿದ ಹೆಸರುಕಾಳು ಪೌಷ್ಟಿಕ ಆಹಾರ -ತರಕಾರಿ -ಸೊಪ್ಪು ಗಳಿಂದ ಸಿಗುವಂತಹ ಪೌಷ್ಟಿಕ ಆಹಾರದ ಮಾಹಿತಿ ನೀಡಲಾಯಿತು. ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಕೂಡ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮಾಜ ಸೇವಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಫಾರೂಕ್ ಚಂದ್ರನಗರ ಮಾತನಾಡಿ ಕಳತ್ತೂರು ಅಂಗನವಾಡಿಯವರ ಕೆಲಸ ಶ್ಲಾಘನಿಯವಾದದ್ದು. ಇವರ ಸಮಾಜಮುಖಿ ಕೆಲಸ ದೇವರು ಮೆಚ್ಚುವಂತಹದು. ಕಾರ್ಯಕ್ರಮದ ಮುತವರ್ಜಿಯನ್ನು ಕಳತ್ತೂರು ಉಪಕೇಂದ್ರದ ಸಿ. ಎಚ್.ಓ ದೀಪಿಕಾ, ಕಿರಿಯ ಮಹಿಳಾ ಕಾರ್ಯಕರ್ತೆ ಸುಧಾವತಿ ಹಾಗೂ 3 ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಸೇರಿಕೊಂಡು ಯಶಸ್ವಿಯಾಗಿ ನಡೆಸಿದ್ದು ಊರಿನವರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಜನಾರ್ಧನ ಆಚಾರ್ಯ, ದಿವ್ಯ ಶೆಟ್ಟಿಗಾರ್, ಸ್ಟೇನ್ಲಿಸಸ್ ಕೊರ್ಡ ಹಾಗೂ ಬಾಲವಿಕಾಸ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷ, ಸದಸ್ಯರು ಮಕ್ಕಳ ತಾಯಂದಿರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕುತ್ಯಾರು ಗುತ್ತು ಮಂಡೇಡಿ ಕೆ ಸದಾನಂದ ಶೆಟ್ಟಿ ನಿಧನ

Posted On: 27-09-2022 07:21PM
ಕಾಪು : ಇನ್ನಂಜೆ ಗ್ರಾಮದ ಹಿರಿಯರಾದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಾರ್ಗದರ್ಶನ ನೀಡುತಿದ್ದ ಕುತ್ಯಾರು ಗುತ್ತು ಮಂಡೇಡಿ ಕೆ ಸದಾನಂದ ಶೆಟ್ಟಿ (87) ಯವರು ಇಂದು ಬೆಳಿಗ್ಗೆ ನಿಧಾನರಾಗಿದ್ದಾರೆ.
ಪ್ರಗತಿಪರ ಕೃಷಿಕರಾಗಿ, ಉಡುಪಿ ಕೃಷಿ ಸಂಘದ ಅಧ್ಯಕ್ಷರಾಗಿ, ವಿಶ್ವಹಿಂದೂ ಪರಿಷತ್ ಕಾಪು ಪ್ರಖಂಡರಾಗಿ ಸೇವೆ ಸಲ್ಲಿಸಿರುತ್ತಾರೆ.
ಉಡುಪಿ ರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ(ರಿ.) ಉಡುಪಿ ಮನವಿ ಪುರಸ್ಕರಿಸಿದ ಜಿಲ್ಲಾಧಿಕಾರಿ

Posted On: 27-09-2022 05:18PM
ಉಡುಪಿ : ಇಲ್ಲಿನ ಶಾಸಕರಾದ ಕೆ.ರಘುಪತಿ ಭಟ್ ಮತ್ತು ಮಹೇಶ್ ಠಾಕೂರ್ ರವರ ವಿಶೇಷ ಪ್ರಯತ್ನದಿಂದ ಜಿಲ್ಲಾಧಿಕಾರಿಯವರು ಉಡುಪಿ ರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ(ರಿ.) ಉಡುಪಿ ಇವರ ಮನವಿ ಪುರಸ್ಕರಿಸಿ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲ ರಿಕ್ಷಾಗಳ ದರ ಪರಿಷ್ಕರಣೆ ಮಾಡಿ ಪ್ರತಿ ಕಿ.ಮೀ 20ರೂಪಾಯಿಗಳು ಕನಿಷ್ಠ 40ರೂ. ನಂತೆ ಮಾಡಿದ್ದಾರೆ.
ಮನವಿ ಪುರಸ್ಕರಿಸಿದಕ್ಕೆ ಉಡುಪಿ ಅಧ್ಯಕ್ಷರು, ಚಾಲಕರು ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಹಾಗೂ ಜಿಲ್ಲಾ ಒಕ್ಕೂಟವು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದೆ.
ಪಡುಬಿದ್ರಿ : ವಿಷ ಜಂತು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು

Posted On: 27-09-2022 05:05PM
ಪಡುಬಿದ್ರಿ : ವಿಷ ಜಂತು ಕಚ್ಚಿ ವಿಷವು ವಿಪರೀತವಾಗಿ ಏರಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸೆಪ್ಟೆಂಬರ್ 26 ರಂದು ಪಡುಬಿದ್ರಿಯ ಅಬ್ಬೇಡಿ ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿ ರಾಮ ದೇವಾಡಿಗ (60) ಗದ್ದೆಯಲ್ಲಿ ಹುಲ್ಲು ತೆಗೆಯುತ್ತಿರುವಾಗ ಅವರ ಕೈ ಬೆರಳಿಗೆ ಯಾವುದೋ ವಿಷ ಜಂತು ಕಚ್ಚಿದ್ದು, ಮನೆಗೆ ಬಂದು ಸಹೋದರಿಯರಲ್ಲಿ ತಿಳಿಸಿದ್ದು ಕೂಡಲೇ ಅವರು ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ವಿಷವು ವಿಪರೀತವಾಗಿ ಏರುತ್ತಿದ್ದು, ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಮುಕ್ಕದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಕರೆದುಕೊಂಡು ಹೋಗಿ ವೈದ್ಯರು ಚಿಕಿತ್ಸೆ ನೀಡುತ್ತಿರುವಾಗ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಟಪಾಡಿ : ದುರ್ಗಾದೌಡ್ ಕಾರ್ಯಕ್ರಮದ ಪೂರ್ವಭಾವಿ ಸಭೆ

Posted On: 27-09-2022 10:37AM
ಕಟಪಾಡಿ : ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ನೇತೃತ್ವದಲ್ಲಿ ಅಕ್ಟೋಬರ್ 2 ರಂದು ನಡೆಯಲಿರುವ ಬೃಹತ್ ದುರ್ಗಾದೌಡ್ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಮಾಲೋಚನ ಸಭೆಯು ಕಟಪಾಡಿ ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಹಿಂದೂಜಾಗರಣ ವೇದಿಕೆಯ ಗುರುಪ್ರಸಾದ್ ಸೂಡ, ರಕ್ಷಿತ್ ಕಡಂಬು , ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೈ ಭರತ್ ಹೆಗ್ಡೆ, ಹಿಂದೂಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇದರ ಪದಾಧಿಕಾರಿಗಳು , ನವೋದಯ ಸಂಘ ದುರ್ಗಾನಗರ ಇದರ ಪದಾಧಿಕಾರಿಗಳು , ಸದಸ್ಯರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಕಾಪು : ಕೊಪ್ಪಲಂಗಡಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ - ಸಾವು

Posted On: 27-09-2022 10:33AM
ಕಾಪು : ಇಲ್ಲಿನ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಮೃತ್ತ ವ್ಯಕ್ತಿಯನ್ನು ಕೊಪ್ಪಲಂಗಡಿ ನಿವಾಸಿ 48 ವರ್ಷದ ಕಿಶೋರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅವರು ತನ್ನ ಮನೆ ಕಡೆ ಬರಲು ರಸ್ತೆ ಪಕ್ಕ ನಿಂತಿದ್ದಾಗ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆ ಸಾಗುತ್ತಿದ್ದ ಇನ್ನ ಗ್ರಾಮದ ನಿವಾಸಿ ಶ್ರೇಯಸ್ ಅವರ ಬೈಕ್ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಿಶೋರ್ ಶೆಟ್ಟಿ, ಮೃತಪಟ್ಟರೆ, ಶ್ರೇಯಸ್ ತೀವ್ರ ಗಾಯಗೊಂಡು ಉಡುಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಪು ಠಾಣಾಧಿಕಾರಿ ಶ್ರೀಶೈಲ ಮುರುಗೋಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ಹಿಂದೂ ಸಮಾಜೋತ್ಸವದ ಕಾರ್ಯಾಲಯ ಉಧ್ಘಾಟನೆ

Posted On: 26-09-2022 07:51PM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ನವೆಂಬರ್ 27 ರಂದು ಜರಗಲಿರುವ ಹಿಂದೂ ಸಮಾಜೋತ್ಸವದ ಕಾರ್ಯಾಲಯ ಉಧ್ಘಾಟನೆ ಇಂದು ನಡೆಯಿತು.
ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಕಾರ್ಯಾಲಯ ಉದ್ಘಾಟನೆ ಮಾಡಿದರು.ವಿಶ್ವ ಹಿಂದೂ ಪರಿಷದ್ ಮಟ್ಟಾರು ಘಟಕ ಉಪಾಧ್ಯಕ್ಷ ಜಗದೀಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಬಜರಂಗದಳ ಉಡುಪಿ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ,ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಧರ್ಮಾಚಾರ್ಯ ಪ್ರಮುಖ್ ವೇದಮೂರ್ತಿ ಪ್ರಸನ್ನ ಭಟ್, ಶಿರ್ವ ವಲಯ ಅಧ್ಯಕ್ಷ ವಿಖ್ಯಾತ್ ಭಟ್, ಮಟ್ಟಾರು ಘಟಕ ಬಜರಂಗದಳ ಸಹಸಂಚಾಲಕ ಮಂಜುನಾಥ ನಾಯಕ್, ಮಾತೃಶಕ್ತಿ ಪ್ರಮುಖ್ ಸುಲೋಚನಾ ಆಚಾರ್ಯ, ಸಹಪ್ರಮುಖ್ ಲಲಿತಾ ಶೆಟ್ಟಿ,ದುರ್ಗಾವಾಹಿನಿ ಸಹಸಂಚಾಲಕಿ ರಾಜಶ್ರೀ ಪೂಜಾರಿ, ಕಾರ್ಯಾಲಯ ಪ್ರಮುಖ್ ಸಂಪತ್ ರಾವ್, ಶಿರ್ವ ಸಹಕಾರಿ ವ್ವವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ ನಾಯಕ್, ಶ್ರೀನಿವಾಸ ಶೆಣೈ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು ಸ್ವಾಗತಿಸಿ,ರಂಜಿತ್ ಶೆಟ್ಟಿ ವಂದಿಸಿದರು.