Updated News From Kaup
ಕಳತ್ತೂರಿನಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ

Posted On: 25-10-2022 09:10PM
ಕಾಪು : ಕುಶಲ ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಕಳತ್ತೂರು ಶೇಖರ ಬಿ. ಶೆಟ್ಟಿ ನೇತ್ರತ್ವದಲ್ಲಿ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಅಂಧತ್ವ ನಿವಾರಣ ವಿಭಾಗ ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಆದಿತ್ಯವಾರ ಕಳತ್ತೂರಿನ ಕುಶಲ ಶೇಖರ ಶೆಟ್ಟಿ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇದರ ಆಡಳಿತ ನಿರ್ದೇಶಕರಾದ ಡಾ. ಕೃಷ್ಣಪ್ರಸಾದ್ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸುಸಜ್ಜಿತವಾದ ಅಂತರಾಷ್ಟ್ರೀಯ ಮಟ್ಟದ ಚಿಕಿತ್ಸೆಯನ್ನು ಕೊಡಿಸುವುದೇ ನಮ್ಮ ಶಿಬಿರದ ಉದ್ದೇಶವಾಗಿದೆ ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಶೇಖರ್ ಬಿ.ಶೆಟ್ಟಿ ಇವರ ಸೇವೆಯನ್ನು ಕೊಂಡಾಡಿದರು. ಮುಖ್ಯ ಅತಿಥಿಯಾಗಿ ಉಡುಪಿಯ ನ್ಯಾಯವಾದಿ ಕುತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಉಮೇಶ ಶೆಟ್ಟಿ ಕಳತ್ತೂರು ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಚಿಕಿತ್ಸೆಯು ಸಿಗಬೇಕು. ಸಮಾಜಕ್ಕೆ ತುಂಬಾ ಉಪಕಾರ ಮಾಡುವ ಉದ್ದೇಶದಿಂದ ಈ ಶಿಬಿರ ನಡೆಸಲಾಗುತ್ತಿದೆ. ಶೇಖರ ಬಿ ಶೆಟ್ಟಿಯವರು ಈ ಭವ್ಯವಾದ ಸಭಾಂಗಣವನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಮಾಡಿ ಹಲವಾರು ಸಮಾಜ ಸೇವೆ ಮಾಡಿ ಪ್ರಖ್ಯಾತರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರಖ್ಯಾತ ನೇತ್ರ ತಜ್ಞರಾದ ಡಾ. ಕೃಷ್ಣಪ್ರಸಾದ್ ಇವರನ್ನು ಹಿರಿಯರಾದ ವಾಸು ಶೆಟ್ಟಿ ಇವರು ಅಭಿನಂದಿಸಿ ಗೌರವಿಸಿದರು. ಸಭಾಧ್ಯಕ್ಷತೆಯನ್ನು ಶೇಖರ ಬಿ. ಶೆಟ್ಟಿ ವಹಿಸಿದರು.
ಮುಖ್ಯ ಅತಿಥಿಯಾಗಿ ಜನ ಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ.ಶೆಟ್ಟಿ ಕಳತೂರು, ಸಮಾಜ ಸೇವಾ ವೇದಿಕೆ ಅಧ್ಯಕ್ಷ ಉದ್ಯಮಿ ಮೊಹಮ್ಮದ್ ಫಾರೂಕ್ ಚಂದ್ರನಗರ, ಕಳತ್ತೂರು ರಾಘವೇಂದ್ರ ಭಟ್, ಜಯಲಕ್ಷ್ಮಿ ಆಳ್ವ ಪಾದೂರು ಗುತ್ತು, ಹಿರಿಯರಾದ ವಾಸು ಶೆಟ್ಟಿ ಕಳತೂರು, ಡಾ. ಅಕ್ಷತಾ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ ಕುಮಾರ್ ಹೆಗ್ಡೆ ನಿರೂಪಿಸಿದರು. ಸಮಾಜ ಸೇವಾ ವೇದಿಕೆ ಸಂಚಾಲಕ ದಿವಾಕರ ಡಿ ಶೆಟ್ಟಿ ವಂದಿಸಿದರು.
ಶಿರ್ವದ ಕಡಂಬುವಿನಲ್ಲಿ ರಾರಾಜಿಸುತ್ತಿದೆ ಕೆ ಕೆ ಫ್ರೆಂಡ್ಸ್ ರಚಿಸಿದ ಬೃಹತ್ ಗೂಡುದೀಪ

Posted On: 25-10-2022 08:59PM
ಶಿರ್ವ : ಕೆ ಕೆ ಫ್ರೆಂಡ್ಸ್ ಕಡಂಬು ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ಕಡಂಬು ಮೈದಾನದಲ್ಲಿ ಸೋಮವಾರ ಬೃಹತ್ ಗೂಡುದೀಪ ಅಳವಡಿಸಿ ದೀಪಾವಳಿ ಆಚರಿಸಲಾಯಿತು.

ಸುಮಾರು 9 ಫೀಟ್ ಎತ್ತರ ಮತ್ತು 5 ಫೀಟ್ ಅಗಲದ ಗೂಡುದೀಪ ಜೊತೆಗೆ ವಿದ್ಯುತ್ ದೀಪದ ಮೆರುಗು ಕಡಂಬು ಮೈದಾನದಲ್ಲಿ ರಾರಾಜಿಸುತ್ತಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕೆ ಕೆ ಫ್ರೆಂಡ್ಸ್ ನ ಸದಸ್ಯರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪಡುಬಿದ್ರಿ : ಕೊರಗಜ್ಜ ಕ್ಷೇತ್ರದ ಜೀರ್ಣೋದ್ಧಾರದ ನೀಲ ನಕ್ಷೆ, ವಿಜ್ಞಾಪನಾ ಪತ್ರ ಬಿಡುಗಡೆ

Posted On: 24-10-2022 06:10PM
ಪಡುಬಿದ್ರಿ : ಪ್ರೇರಣೆಯಿಲ್ಲದೆ ಯಾವುದೇ ಕಾರ್ಯ ನಡೆಯದು. ಅದು ವಿಜ್ಞಾಪನ ಪತ್ರದ ಮೂಲಕ ಈ ಸಮಾಜಕ್ಕೆ ತಲುಪಲಿದೆ. ಸಂಕಲ್ಪವು ಮಹಾ ಸಂಕಲ್ಪವಾಗಿ ಮೂಡಿದಾಗ ಸಂಪತ್ತು ಕ್ರೋಢೀಕರಣ ಸಾಧ್ಯ. ಮನುಷ್ಯ ಪ್ರಯತ್ನ ಜತೆಗೆ ದೈವಾನುಗ್ರಹ ಇದ್ದರೆ ಕಾರ್ಯ ಸಾಧ್ಯ. ಈ ಸಾನಿಧ್ಯದ ಸಂಕಲ್ಪ ಮಹಾ ಸಂಕಲ್ಪವಾಗಿ ಜೀರ್ಣೋದ್ಧಾರವಾಗಲಿ ಎಂದು ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಹೇಳಿದರು. ಅವರು ಕಾಪು ತಾಲೂಕಿನ ಸಾವಿರಾರು ವರ್ಷಗಳ ಇತಿಹಾಸವಿರುವ ಪಡುಬಿದ್ರಿಯ ಶ್ರೀ ಆದಿಶಕ್ತಿ ಆದಿ ಮಾಯೆ ಅಣ್ಣಪ್ಪ ಪಂಜುರ್ಲಿ ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಅಕ್ಟೋಬರ್ 22ರಂದು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಗಣ್ಯರ ಸಮ್ಮುಖ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಜೀರ್ಣೋದ್ದಾರದ ನೀಲನಕ್ಷೆ ಮತ್ತು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ, ಕ್ಷೇತ್ರದ ಧರ್ಮದರ್ಶಿಗಳಾದ ಸುಧಾಕರ ಮಡಿವಾಳ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಕಿಶೋರ್ ಶೆಟ್ಟಿ, ಕಂಚನ್ ರಮೇಶ್ ಕಾಂಚನ್, ಸದಾನಂದ ಸಾಲಿಯಾನ್, ಶ್ರೀಕರ್ ಶೆಟ್ಟಿ ಕಾಪು, ಪ್ರಕಾಶ್ ಶೆಟ್ಟಿ ಪಡುಹಿತ್ಲು, ವಿನೋದ್ ಶೆಟ್ಟಿ, ಮಮತಾ ಪಿ ಶೆಟ್ಟಿ, ನೀತಾ ಪ್ರಭು, ಶ್ಯಾಮಲ ಕುಂದರ್, ನಿತಿನ್ ಪೂಜಾರಿ, ದಿನೇಶ್ ಶೆಟ್ಟಿ ಕಾಪು ಕಲ್ಯ, ಕರಿಯ ಶೆಟ್ಟಿ ಉಪಸ್ಥಿತರಿದ್ದರು.

ಅಮೃತಾ ಹಾಗು ಯಶೋಧ ಪ್ರಾರ್ಥಿಸಿದರು. ಪ್ರಕಾಶ್ ಶೆಟ್ಟಿ ಪಡುಹಿತ್ಲು ಸ್ವಾಗತಿಸಿದರು. ಸದಾನಂದ ಸಾಲ್ಯಾನ್ ಕೆರ್ವಾಶೆ ಪ್ರಸ್ತಾವನೆಗೈದರು. ಪ್ರೀತಿ ಕಲ್ಯಾಣಪುರ ಕಾರ್ಯಕ್ರಮ ಸಂಯೋಜಿಸಿ, ಸ್ವಾತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಶೆಟ್ಟಿ ಕಾಪು ಕಲ್ಯ ವಂದಿಸಿದರು.
ಹೆಜಮಾಡಿ : 4 ಕೋಟಿ ರೂ ಅನುದಾನದ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿ ಪೂಜೆ

Posted On: 24-10-2022 03:59PM
ಹೆಜಮಾಡಿ : ಇಲ್ಲಿನ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಶಾಸಕರಾದ ಲಾಲಾಜಿ ಆರ್ ಮೆಂಡನ್ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 9 ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು. ಬಿಜೆಪಿ ನೇತೃತ್ವದ ಹೆಜಮಾಡಿ ಗ್ರಾಮ ಪಂಚಾಯತ್ ಉತ್ತಮವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದು ಪಂಚಾಯತ್ ಸದಸ್ಯರು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು ರಸ್ತೆ ಹಾಗೂ ಇನ್ನುಳಿದ ಕಾಮಗಾರಿಗಳ ಅಭಿವೃದ್ಧಿಗೆ ಈಗಾಗಲೇ 11 ಕೋಟಿ 61 ಲಕ್ಷ ಅನುದಾನ ಹಾಗೂ ಈ ಭಾಗದಲ್ಲಿ ಕರಾವಳಿ ಮೀನುಗಾರರ ಕನಸಾಗಿದ್ದ ಹೆಜಮಾಡಿ ಬಂದರು ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸ್ಥಳೀಯರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯ ಮಾಡಲಾಗುವುದು ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಾಂಡುರಂಗ ಕರ್ಕೇರ, ಉಪಾಧ್ಯಕ್ಷೆ ಪವಿತ್ರ ಗಿರೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಶರಣ್ ಹೆಜಮಾಡಿ, ಪ್ರಾಣೇಶ್ ಹೆಜಮಾಡಿ, ಲಿಲೇಶ್ ಸುವರ್ಣ, ಶಿವಕುಮಾರ್, ರೇಷ್ಮಾ ಮೆಂಡನ್, ಪ್ರಸಾದ್ ಹೆಜಮಾಡಿ, ರೋಷನ್, ವಸಂತಿ ವಿನೋದ್, ಸುಜಾತಾ, ನಳಿನಿ ಸುವರ್ಣ ಹಾಗೂ ಸ್ಥಳೀಯ ಮುಖಂಡರಾದ ಸುಧಾಕರ್ ಕರ್ಕೇರ, ನಿತಿನ್ ಕೋಡಿ, ಅನಿಲ್ ಕುಂದರ್, ಕೀರ್ತನ್, ದೇವಕಿ, ಸಚಿನ್ ನಾಯಕ್, ಚಂದ್ರಹಾಸ ನಡಿಕುದ್ರು, ರಘುವಿರ ಸುವರ್ಣ, ಸತೀಶ್ ಕೋಟ್ಯಾನ್, ರವಿ ಕುಂದರ್, ಸುಕೇಶ್ ಸಾಲ್ಯಾನ್, ಸಂದೀಪ್ ಸುವರ್ಣ, ನೂತನ ಪುತ್ರನ್, ಸದಾನಂದ ಬೂಚಿಹಿತ್ಲು, ವಾಮನ ಕೋಟ್ಯಾನ್, ಹೆಚ್. ವಿ ಕೋಟ್ಯಾನ್, ಉಮೇಶ್ ಕೋಟ್ಯಾನ್, ನಿರಂಜನ್ ಪೂಜಾರಿ, ನವೀನ್ ಸಾಲ್ಯಾನ್ ನಡಿಕುದ್ರು ಹಾಗೂ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
ಬಂಟಕಲ್ಲು: ಶಿಕ್ಷಕಿ ಸಂಗೀತ ಪಾಟ್ಕರ್ ರವರಿಗೆ ಅಂತರಾಷ್ಟ್ರೀಯ ರೋಟರಿಯಿಂದ ನೇಷನ್ ಬಿಲ್ಡರ್ ಪ್ರಶಸ್ತಿ

Posted On: 24-10-2022 03:33PM
ಬಂಟಕಲ್ಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾರ್ಥಮಿಕ ಶಾಲೆಯ ಗೌರವ ಶಿಕ್ಷಕಿ ಸಂಗೀತ ಪಾಟ್ಕರ್ ರವರಿಗೆ ಅಂತರಾಷ್ಟ್ರಿಯ ರೋಟರಿಯು, ಶಿಕ್ಷಕ ವೃತ್ತಿಯಲ್ಲಿರುವ ಆಯ್ದ ಶಿಕ್ಷಕರಿಗೆ ಕೊಡಮಾಡುವ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ನೀಡಲಾಯಿತು.

ಉಡುಪಿ ಕಿದಿಯೂರು ಹೋಟೆಲ್ ನಲ್ಲಿ ರೋಟರಿ ಜಿಲ್ಲೆ ಹಾಗೂ ರೋಟರಿ ಜಿಲ್ಲಾ ಸಾಕ್ಷರತಾ ಸಮಿತಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಕಾರ್ಯಗಾರ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್, ರೊ. ಡಾ. ಜಯಗೌರಿಯವರು ಪ್ರಧಾನ ಮಾಡಿದರು. ಶಿರ್ವ ರೋಟರಿ ಸಂಸ್ಥೆಯ ಶಿಫಾರಸಿನೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಸಂಗೀತ ಪಾಟ್ಕರ್ ರವರು 23 ವರುಷಗಳಿಂದ ಬಂಟಕಲ್ಲು ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ಥ ಇವರು ಈ ಶೈಕ್ಷಣಿಕ ವರ್ಷದಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಕೆ ಆರ್ ಪಾಟ್ಕರ್ ರವರ ಪತ್ನಿ.
ಕಟಪಾಡಿ : ಏಣಗುಡ್ಡೆಯಲ್ಲಿ ಮುಳ್ಳಮುಟ್ಟೆ ಆಚರಣೆ

Posted On: 24-10-2022 03:27PM
ಕಟಪಾಡಿ : ಕಾಪು ತಾಲೂಕಿನ ಕಟಪಾಡಿಯ ಏಣಗುಡ್ಡೆಯ ನೀಚ ದೈವಸ್ಥಾನದ ಬಳಿ ದೀಪಾವಳಿಯಂದು ಪ್ರಾತ: ಕಾಲ ಮುಳ್ಳಮುಟ್ಟೆ ಸುಡುವ ಕಾರ್ಯಕ್ರಮ ಜರಗಿತು.
ಈ ಸಂದರ್ಭ ಮಾತನಾಡಿದ ಹಿರಿಯರಾದ ಕಟಪಾಡಿ ಶಂಕರ ಪೂಜಾರಿ ನಮ್ಮ ಪೂರ್ವಜರ ಕಾಲದಿಂದಲೂ ದೀಪಾವಳಿಯಂದು ಪ್ರಾತಃಕಾಲದಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಮುಳ್ಳಮುಟ್ಟೆ ಸುಡುವ ಆಚರಣೆ ಇಂದಿಗೂ ಪ್ರಸ್ತುತ. ತುಳುನಾಡಿನ ಹಬ್ಬಗಳು, ಆಚರಣಾ ಪದ್ಧತಿ, ಕಟ್ಟು ಕಟ್ಟಳೆಗಳು, ಸಂಪ್ರದಾಯಗಳು, ನಂಬಿಕೆ ನಡವಳಿಕೆಗಳ ಗಟ್ಟಿತನ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಈ ಸಂದರ್ಭ ದೈವಸ್ಥಾನದ ಮುಖ್ಯಸ್ಥರಾದ ಆನಂದ ಮಾಬಿಯಾನ್, ಕೂಡುಕಟ್ಟಿನ ಗುರಿಕಾರರಾದ ದಾಮೋದರ ಪೂಜಾರಿ, ಸೂರಪ್ಪ ಕುಂದರ್, ಜಯ ಪೂಜಾರಿ, ವಿನೋಧ ಪೂಜಾರಿ, ಅರ್ಚಕ ರಮೇಶ್ ಕೋಟ್ಯಾನ್ ಪ್ರಮುಖರಾದ ಮಂಜುನಾಥ, ರಾಜೇಂದ್ರ ಆಚಾರ್ಯ, ಸಿದ್ಧಾಂತ್, ರಜತ್, ವಿಘ್ನೇಶ್, ಕಿಶೋರ್ ಮೊದಲಾದವರು ಉಪಸ್ಥಿತರಿದ್ದರು.
ಕಾಪು : ಕಾಂಗ್ರೆಸ್ ವತಿಯಿಂದ ತುಡರ ಪರ್ಬದ ಗಮ್ಮತ್ ; ಸನ್ಮಾನ ; ಅನಾಥಾಶ್ರಮಗಳಿಗೆ ಉಡುಪು ವಿತರಣೆ

Posted On: 24-10-2022 03:03PM
ಕಾಪು : ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವಿನಯ ಕುಮಾರ್ ಸೊರಕೆ ಉಪಸ್ಥಿತಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತುಡರ ಪರ್ಬದ ಗಮ್ಮತ್ 2022 ಇದರ ಅಂಗವಾಗಿ ಸೋಮವಾರ ರಾಜೀವ್ ಭವನ, ಕಾಪು ಇಲ್ಲಿ ವಿವಿಧ ಸಮುದಾಯಗಳ ಅನಾಥರಿಗೆ,ನಿರಾಶ್ರಿತರಿಗೆ ಉಡುಪುಗಳನ್ನು, ಸಿಹಿ ತಿಂಡಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಮೋಹನ್ ನಂಬಿಯಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಒಂದೇ. ಎಲ್ಲರ ಮನಸ್ಸಿನಲ್ಲಿ ನಾವೆಲ್ಲ ಒಂದೇ ಎಂಬ ಸಂದೇಶ ಹುಟ್ಟಿ ಎಲ್ಲಾ ಕಡೆ ಪಸರಿಸಬೇಕಿದೆ ಎಂದರು.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿ, ದೀಪಾವಳಿ ಬೆಳಕಿನ ಹಬ್ಬ. ಪ್ರತಿ ಹಬ್ಬವು ಉತ್ತಮ ಸಂದೇಶ ನೀಡುತ್ತದೆ. ಕಾಂಗ್ರೆಸ್ ಪಕ್ಷವು ಎಲ್ಲಾ ಧರ್ಮಿಯರನ್ನು ಸಮಾನವಾಗಿ ಕಾಣುವ ಪಕ್ಷವಾಗಿದೆ. ಕಾಂಗ್ರೆಸ್ ಕಚೇರಿಯು ಪವಿತ್ರವಾದ ಸ್ಥಳ. ಇಲ್ಲಿ ಎಲ್ಲರಿಗೂ ಸಮಾನವಾದ ಸ್ಥಾನ ನೀಡುತ್ತಿದೆ. ದೀಪಾವಳಿ ಕತ್ತಲನ್ನು ಕಳೆದು ಬೆಳಕ ನೀಡುವ ಹಬ್ಬ. ದ್ವೇಷ ಕಡಿಮೆಯಾಗಿ ಪ್ರೀತಿ ಹೆಚ್ಚಾಗಲಿ ಎಂದು ಹಾರೈಸಿದರು. ಸನ್ಮಾನ : ಮಲ್ಲಾರು ಆಶ್ರಮದ ಮಹಮ್ಮದ್ ಶಫಿ ಮದನಿ, ಕಟಪಾಡಿ ಕಾರುಣ್ಯ ಆಶ್ರಮದ ಕುಮಾರ್ ಪಾಂಗಾಳ ಆಸರೆ ಹಿರಿಯರ ವಸತಿ ಧಾಮದ ಬೆನ್ವಿನ್ ಪಾಂಗಾಳ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನವೀನ್ ಚಂದ್ರ ಸುವರ್ಣ, ದೀಪಕ್ ಎರ್ಮಾಳ್, ಶಾಂತಲತ ಶೆಟ್ಟಿ, ಶೇಖರ್ ಹೆಜ್ಮಾಡಿ, ನವೀನ್ ಶೆಟ್ಟಿ, ಹರೀಶ್ ನಾಯಕ್, ಗಣೇಶ್ ಕೋಟ್ಯಾನ್,ರಮೀಝ್ ಹುಸೇನ್, ಸಾದಿಕ್, ಸುಚರಿತ, ಜ್ಯೋತಿ ಮೆನನ್, ಶರ್ಫುದ್ದೀನ್, ಅಬ್ದುಲ್ ರೆಹಮಾನ್, ಲಕ್ಷ್ಮೀಶ್ ತಂತ್ರಿ, ಮಧ್ವರಾಜ್, ಆಶಾ ಕಟಪಾಡಿ, ಅಶ್ವಿನಿ ಬಂಗೇರ, ಸುಧೀರ್ ಕರ್ಕೇರ, ಯಶವಂತ್ ಪಲಿಮಾರು, ದೀಪ್ತಿ ಮನೋಜ್, ಉಸ್ಮಾನ್ ಕೊಪ್ಪಲಂಗಡಿ ಮತ್ತಿತರರು ಉಪಸ್ಥಿತರಿದ್ದರು. ದೀಪಕ್ ಎರ್ಮಾಳು ಸ್ವಾಗತಿಸಿದರು. ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.
ದೀಪಾವಳಿ - ಸೊಡರ ಹಬ್ಬಕ್ಕೆ ಸೊಬಗಿನ ಸೋಬಾನೆ

Posted On: 24-10-2022 08:15AM
ಓ... ಬಲೀಂದ್ರ ಮೂಜಿ ದಿನತ ಬಲಿಗೆತೊಂದು ’ಪೊಲಿ’ ಕೊರ್ಲ ಕೂ... ’ಹೊಲಿ’ ಕೊಟ್ರು ಬಲಿ ತಕಂಡ್ರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ’ಹೊಲಿ’ಯೇ ಬಾ.... ಆ ಊರುದ ’ಪೊಲಿ’ ಕೊಂಡತ್ತ್ದ್ ಈ ಊರುದ ಕಲಿಕೊಂಡೋಲ ಹರಿಯೋ ಹರ.... ಹೀಗೆ ಉಡುಪಿ ,ಕುಂದಾಪುರ ,ಪುತ್ತೂರು - ಸುಳ್ಯ ಭಾಗಗಳಲ್ಲಿ ಬಲೀಂದ್ರ ಕರೆಹದ ಒಂದು ಕ್ರಮ. ’ಧನ, ಧಾನ್ಯ, ಪಶು ಸಂಪತ್ತು ’ಪೊಲಿ’ (ಸಮೃದ್ಧಿ)ಯಾಗಲಿ ಎಂಬ ಆಶಯದೊಂದಿಗೆ ಆಚರಿಸುವ ಸೊಡರ ಹಬ್ಬ ’ದೀಪಾವಳಿ’. ನರಕ ಚತುರ್ದಶಿಯ ದಿನ ಎಣ್ಣೆ ಹಚ್ಚಿ ಬಿಸಿ ನೀರ ಸ್ನಾನ. ಹಿಂದಿನ ದಿನ ಪಿತೃಗಳ ಸ್ಮರಣೆ, ಹಚ್ಚಿಡುವ ಯಮದೀಪ. ದೀಪಾವಳಿಯಂದು ಬಲೀಂದ್ರನ ಸ್ವಾಗತಕ್ಕೆ ಸಿದ್ಧತೆ. ಧಾನ್ಯದ ರಾಶಿ, ಮನೆ, ಹಟ್ಟಿ, ಗದ್ದೆಗಳಲ್ಲಿ ಬಲೀಂದ್ರನನ್ನು ಸ್ಮರಿಸಿ ದೀಪವಿರಿಸಿ ’ಹೊಲಿ’ ಹರಕೆಗೊಂಬ ಸಂಭ್ರಮ. ಗೋಪೂಜೆ, ಧನಲಕ್ಷ್ಮೀ ಪೂಜೆಗಳೊಂದಿಗೆ ಮೂರನೇ ದಿನ ದೀಪದ ಹಬ್ಬದ ಸಮಾರೋಪ. ನರಕಾಸುರನ ವಧೆ ಕೃಷ್ಣ-ಸತ್ಯಭಾಮೆಯರಿಂದ ಆಯಿತು. ಆಯಾಸದಿಂದ ಕೃಷ್ಣ ಎಣ್ಣೆ ಹಚ್ಚಿ ಬಿಸಿನೀರ ಸ್ನಾನ ಮಾಡಿದನೆಂಬ ಕಥೆ. ಬಲಿ ಚಕ್ರವರ್ತಿಯನ್ನು ವಾಮನಾವತಾರಿ ವಿಷ್ಣು ಪಾತಾಳಕ್ಕೆ ಮೆಟ್ಟಿದ ಎಂಬ ವಿವರಣೆಗಳು. ಈ ಇಬ್ಬರೂ ಭೂಮಿ ತಾಯಿಯ ಮಕ್ಕಳು ಎಂಬ ಒಡಂಬಡಿಕೆಗಳು ಸಮಗ್ರ ದೀಪಾವಳಿ ಆಚರಣೆಯ ವಿವಿಧ ಹಂತಗಳಲ್ಲಿ ಸ್ಪಷ್ಟವಾಗುತ್ತವೆ. ನರಕಾಸುರನೂ ಭೂಮಿದೇವಿಯ ಮಗ (ಭೌಮ), ಬಲೀಂದ್ರನೂ ಭೂಮಿಪುತ್ರನೆಂದೇ ಪ್ರಸಿದ್ಧನು.
ಆವಾಹನೆ -ವಿಸರ್ಜನೆ : ’ಆವಾಹನೆ-ವಿಸರ್ಜನೆ’ ವಿಧಾನದ, ಪ್ರಾಪಂಚಿಕ-ಪಾರಮಾರ್ಥಿಕಗಳನ್ನು ಬೆಸೆಯುವ, ಸಾಮಾನ್ಯ-ಅಸಾಮಾನ್ಯ ಪರಿಕಲ್ಪನೆಯ, ಬಂದು ಹಿಂದಿರುಗುವ ’ಸಮೃದ್ಧಿ ದೇವತೆ’ ಬಲೀಂದ್ರನ ಆರಾಧನೆ ಅಥವಾ ಸ್ಮರಣೆ ದೀಪಾವಳಿ. ಕೃಷಿ ಪ್ರಧಾನವಾಗಿದ್ದ ಆದಿಮ ಸಮಾಜ ಬೆಳೆದ ಬೆಳೆಯೇ ತಮ್ಮ ಸಂಪತ್ತು ಎಂದುಕೊಂಡಿದ್ದರೆ ಸಹಜವೆಂದೇ ಸ್ವೀಕರಿಸಬಹುದಾಗುತ್ತದೆ. ಕೃಷಿಗೆ ಪೂರಕ ನೀರು, ಪಶು, ಕೃಷಿ ಉಪಕರಣಗಳು ಪ್ರಧಾನ ಆಸ್ತಿಯಾಗಿ ಪರಿಗ್ರಹಿಸಿದ್ದರೆ ಆಶ್ಚರ್ಯವಲ್ಲ. ಧಾನ್ಯದಿಂದ ಜೀವ, ಅದರಿಂದಲೇ ಧನ, ಇದೇ ಸಂಪತ್ತು. ಈ ಸಂಪತ್ತೇ ಸಮೃದ್ಧಿ (’ಹೊಲಿ’ ಅಥವಾ ಪೊಲಿ)ಯಾಗಲಿ ಎಂಬುದೇ ದೀಪಾವಳಿಯ ಬೆಳಕಿನಲ್ಲಿ, ಸಿಡಿಯುವ ಸಿಡಿ ಮದ್ದುಗಳ ಶಬ್ದದಲ್ಲಿ, ತಿನ್ನುವ ತಿಂಡಿಯ ರುಚಿಯಲ್ಲಿ, ತೊಡುವ ಬಣ್ಣದ ಉಡುಪುಗಳ ವರ್ಣರಂಜಿತ ಪರಿಸರದಲ್ಲಿ ಹಾರೈಸಬೇಕಾದ ಅಂಶ. ಕೃಷಿಗೆ, ವಾಸಕ್ಕೆ ಭೂಮಿಯೇ ಆಸರೆ. ಭೂಮಿಯನ್ನು ಅವಲಂಬಿಸಿದ ಮನುಷ್ಯ ಭೂಮಿಯ ಮೂಲಕ ಪ್ರಪಂಚವನ್ನು ಕಂಡ. ವಿಶ್ವವ್ಯಾಪಿಯಾಗಿರುವ ಚೈತನ್ಯವೊಂದರ ಇರುವಿಕೆಯನ್ನು ಸ್ಪಷ್ಟೀಕರಿಸಿಕೊಂಡ. ನೀರು, ಗಾಳಿ, ಬೆಂಕಿ, ಗಿಡಮರಬಳ್ಳಿ ತನ್ನ ಸುತ್ತಮುತ್ತಲ ಪರಿಸರದಿಂದ ಪ್ರಭಾವಿತನಾದ, ಇವು ಅನಿವಾರ್ಯವೆಂಬ ತಿಳಿವಳಿಕೆ ಬಂದಾಗ ಶರಣಾದ. ಇದೇ ಆರಾಧನೆ, ಆಚರಣೆಗೆ ಪ್ರೇರಣೆ ದೊರೆತ ಸ್ಥಿತಿ. ಭೂಮಿ, ಭೂಮಿ ಪುತ್ರನೆಂದೇ ಖ್ಯಾತನಾದ ಬಲೀಂದ್ರ, ಕೃಷಿಯ ಫಲಗಳಾದ ಧಾನ್ಯ, ಧನ, ಪಶುಸಂಪತ್ತಿನ ಪೂಜೆಯಾಗಿ ದೀಪಾವಳಿ ಜಾನಪದ-ಶಿಷ್ಟ ಸಂಸ್ಕೃತಿಗಳನ್ನು ಬೆಸೆಯುತ್ತದೆ. ಮೂಲದ ಆದಿಮ ಜೀವನ ಶೈಲಿಯ ಮುಂದುವರಿದ ಭಾಗವಾಗಿ ಶಿಷ್ಟ ಸಂಸ್ಕೃತಿ ಪಡಿಮೂಡುತ್ತದೆ. ಇದಕ್ಕೆ ’ಬಲೀಂದ್ರ’ ಒಂದು ನಿಖರ ಉದಾಹರಣೆ. ನಿರ್ಮಲ ಚಾರಿತ್ರ್ಯ, ಜನಪ್ರೀತಿ, ಆಚಾರ-ವಿಚಾರ-ಯಾಗ-ಯಜ್ಞ, ಧಾರ್ಮಿಕತೆ, ದಾನ-ಧರ್ಮಗಳಿಂದ ದೇಶವಾಳಿದ ಬಲೀಂದ್ರ ಮಹಾತ್ಯಾಗಿಯಾಗಿ ಜಾನಪದ ಕಥೆಗಳಲ್ಲಿ ಅನಾವರಣಗೊಳ್ಳುತ್ತಾನೆ. ಇಂದ್ರ ಮತ್ತು ಇಂದ್ರ ಪಕ್ಷಪಾತಿಯಾಗಿ ವಿಷ್ಣುವಿನ ಆಗಮನ ಕಥೆಗೆ ತಿರುವನ್ನು ಕೊಡುತ್ತದೆ. ಅವರ ನಡವಳಿಕೆ ಪ್ರಶ್ನಾರ್ಹವೇ ಆಗಿ ಉಳಿಯುತ್ತದೆ. ಮುಂದಿನ ಮನ್ವಂತರದ ಇಂದ್ರ ಪದವಿ, ಬಲೀಂದ್ರನ ಮನೆಬಾಗಿಲು ಕಾಯುವ ವಿವರಣೆ, ವ?ಕ್ಕೊಮ್ಮೆ ಬಂದು ಹೋಗುವ ಅವಕಾಶಗಳೊಂದಿಗೆ ವಾಮನಾವತಾರಿ ವಿಷ್ಣವಿನ ಪಾದದ ತುಳಿತದಲ್ಲಿ ಬಲೀಂದ್ರ ಪಾತಾಳ ಸೇರುತ್ತಾನೆ ಅಥವಾ ಭೂಗತನಾಗುತ್ತಾನೆ. ಭೂಮಿಯಲ್ಲಿ ವಿಲೀನನಾಗುತ್ತಾನೆ. ಆದುದರಿಂದಲೇ ಇರಬೇಕು ಭೂಮಿ ಧಾನ್ಯ ಸಮೃದ್ಧಿಯನ್ನು ಮನುಕುಲಕ್ಕೆ ನೀಡುವ ವೇಳೆ ಅಥವಾ ಭೂದೇವಿ ತನ್ನ ಫಲವಂತಿಕೆಯನ್ನು ದೃಢೀಕರಿಸಿದಾಗ ಆಕೆಯ ಮಗನಾಗಿ ಬಲೀಂದ್ರನ ಆಗಮನ.
ನಿತ್ಯೋತ್ಸವದ ನಾಡಗಿದ್ದ ಬಲೀಂದ್ರನ ಅಧಿಕಾರ ವ್ಯಾಪ್ತಿಗೆ ಆತ ಮರಳಿ ಬರುವಾಗ, ಬಂದು ಹೋಗುವಾಗ ನಾವು ಒಂದು ದಿನದ ಸಂಭ್ರಮವನ್ನು ಆಚರಿಸುತ್ತೇವೆ. ಏಕೆಂದರೆ ಅವನ ನಾಡಲ್ಲಿ ನಾವು ಇಂದಿಗೂ ಅದೇ ಧರ್ಮ ಮತ್ತು ಐಶ್ವರ್ಯವನ್ನು ಹೊಂದಿದ್ದೇವೆ ಎಂದು ತೋರ್ಪಡಿಸಲು ಎಷ್ಟೊಂದು ವಿಪರ್ಯಾಸ - ಸೋಗು ಅನ್ನಿಸುವುದಿಲ್ಲವೇ? ವಿವಿಧ ಪಾಠಾಂತರಗಳಲ್ಲಿ, ಬೇರೆ ಬೇರೆ ಕಲ್ಪನೆಗಳೊಂದಿಗೆ ಬಲೀಂದ್ರನನ್ನು ಕರೆಯುತ್ತೇವೆ, ಪೂಜಿಸುತ್ತೇವೆ, ಬೀಳ್ಕೊಡುತ್ತೇವೆ ಇಲ್ಲಿ ವೈವಿಧ್ಯ ಕಂಡರೂ ಮೂಲ ಆಶಯ ಮಾತ್ರ ಸಾಮಾನ್ಯವಾಗಿದೆ ಎಂಬುದು ಗಮನಾರ್ಹ. ಮನೆ ಅಂಗಳದಲ್ಲಿ ಬಲೀಂದ್ರನ ಚಿತ್ರ ಬಿಡಿಸಿ, ದೀಪ ಹಚ್ಚಿಟ್ಟು ಅವಲಕ್ಕಿ, ವೀಳ್ಯದೆಲೆ-ಅಡಿಕೆ ಸಮರ್ಪಿಸಿ ಪೂಜಿಸುವ ಅಥವಾ ಬಲೀಂದ್ರನ ನೆನಪಿನ ದೀಪಾವಳಿ ಆಚರಿಸುವ ಕ್ರಮವಿದೆ. ಇದರೊಂದಿಗೆ ಗದ್ದೆಗೆ ದೀಪ ಹಚ್ಚುವ, ದೈವಸ್ಥಾನಗಳಲ್ಲಿ ದೀಪ ಹಚ್ಚಿ ’ಪರ್ಬ ಮಲ್ಪುನ’ ಕ್ರಮವಿದೆ. ಕೃಷಿ ಉಪಕರಣ ಹಾಗೂ ಕೋಣ, ಎತ್ತು, ದನಗಳಿಗೂ ಸ್ನಾನ-ಪೂಜೆ ಇದೆ.
ಉಡುಪಿ ಕೇಂದ್ರವಾಗಿ ಮಠಗಳಲ್ಲಿ ಹಾಗೂ ಹಲವೆಡೆ ಬಲೀಂದ್ರನ ಸುಂದರ ಚಿತ್ರ ಬಿಡಿಸಿ, ವೈವಿಧ್ಯ ದೀಪಗಳನ್ನು ಬೆಳಗಿ ವೈಭವದಿಂದ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಬಲೀಂದ್ರನ ಚಿತ್ರದ ತಲೆಯ ಭಾಗದಲ್ಲಿ ಸುದರ್ಶನ(ವಿಷ್ಣುವಿನಸನ್ನಿಧಾನವಿರುವ ಸಾಲಿಗ್ರಾಮ)ವನ್ನಿಟ್ಟು ಪೂಜೆ ಮಾಡುವ ಸಂಪ್ರದಾಯವಿದೆ. ಇದು ವಾಮನಾವತಾರಿ ವಿಷ್ಣು ಬಲಿಯ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತಳ್ಳಿದ ತ್ರಿವಿಕ್ರಮನಾಗಿ ಭೂವ್ಯೋಮ ವ್ಯಾಪಿಸಿದ ಕಥೆಯ ಸಂದರ್ಭವನ್ನು ನೆನಪಿಸುತ್ತದೆ. ಉಡುಪಿಯ ಶ್ರೀಕೃ ಮಠದಲ್ಲಿ ಬಲೀಂದ್ರನ ಚಿತ್ರ ಬರೆದು ವಿಶೇಷ ಅನುಸಂಧಾನದೊಂದಿಗೆ ಪೂಜೆ ನಡೆಯುತ್ತದೆ. ಮನತುಂಬಿದಾಗ ಮನೆತುಂಬ ದೀಪ,ಅಂಗಳದಲ್ಲಿ ಮತ್ತೆ ದೀಪಗಳ ಸಾಲು ,ಪ್ರತಿ ಮನೆಯಿಂದ ಹೊಲ - ಗದ್ದೆಗಳಿಗೆ ದೀಪ ಪಸರಿಸಿದಾಗ ಊರಿಗೆ ಊರೇ ದೀಪಮಯ. ಇದೇ ದೀಪಾವಳಿ.ಇದುವೇ ಲಕ್ಷಾಂತರ ಸಂಖ್ಯೆಯಲ್ಲಿ ಉರಿಯುವ ದೀಪಗಳ ಲಕ್ಷದೀಪೋತ್ಸವ.ಕಾರ್ತಿಕ ಮಾಸ ಪೂರ್ತಿ ನಾಡಿನ ಗುಡಿ ,ದೇವಾಲಯ,ಭೂತ ಸ್ಥಾನಗಳಲ್ಲಿ "ದೀಪೋತ್ಸವ". ಮನೆ ಮುಂದಿನ ತುಳಸಿ ಕಟ್ಟೆಯಲ್ಲಿ ದೀಪಹಚ್ವಿ ಸಂಕೀರ್ತನೆ. ಲೇಖನ : ಕೆ.ಎಲ್.ಕುಂಡಂತಾಯ
ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆ - ಉಡುಪಿ ಜಿಲ್ಲಾ ಕಾರ್ಯಾಲಯ ಉದ್ಘಾಟನೆ

Posted On: 23-10-2022 06:27PM
ಉಡುಪಿ : ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆಯ ಉಡುಪಿ ಜಿಲ್ಲಾ ಕಾರ್ಯಾಲಯ ಸಂತೆಕಟ್ಟೆ ಹಳೆಯ ಡೈಲಿ ನೀಡ್ಸ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಭಾನುವಾರ ಸಮಿತಿಯ ಗೌರವಾಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಾಲಯವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸಮಾಜಸೇವಕರಾದ ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ ಬಹಳ ವರ್ಷದಿಂದ ರಾಮ ಮಂದಿರ ಆಗಬೇಕು ಅದನ್ನು ನಾವೆಲ್ಲರೂ ನೋಡಬೇಕು ಎನ್ನುವುದೇ ನಮ್ಮ ಎಲ್ಲರ ಆಶಯ. ಅಲ್ಲಿಗೆ ಹೋಗಲಿಕ್ಕೆ ಆಗದಿದ್ದರೂ ಜಿಲ್ಲೆಗೆ ಬರುವ ದಿಗ್ವಿಜಯ ಯಾತ್ರೆಯಲ್ಲಿ ಭಾಗವಹಿಸುವುದೇ ನಮ್ಮ ಭಾಗ್ಯ ಎಂದರು. ಹಣದ ಹಿಂದೆ ಓಡುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ಹೊಸ ಪೀಳಿಗೆಗೆ ಜಾಗೃತಿ ಹುಟ್ಟಿಸುವ ಕೆಲಸ ಆಗಲಿ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಮಿತಿಯ ಗೌರವಾಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿಯವರು ಮಾತನಾಡಿ ತುಳುನಾಡಿನ ಜನತೆ ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ದೈವ ದೇವರುಗಳು ಯಾವುದೇ ಒಂದು ಪಕ್ಷಕ್ಕೆ ಆಗಲಿ ಒಂದು ಜಾತಿಗಾಗಲಿ ಸೀಮಿತ ಅಲ್ಲ. ಎಲ್ಲ ಪಕ್ಷದವರು ಎಲ್ಲಾ ಜಾತಿಯವರು ಒಟ್ಟುಗೂಡಿ ಮಾಡುವಂತಹ ಒಂದು ಶಕ್ತಿ. ಈ ನಿಟ್ಟಿನಲ್ಲಿ ನವೆಂಬರ್ 7ನೇ ತಾರೀಕಿನಂದು ನಡೆಯುವ ಶ್ರೀರಾಮನ ದಿಗ್ವಿಜಯ ಯಾತ್ರೆಯಲ್ಲಿ ಎಲ್ಲರೂ ಸಮಾನತೆಯಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದರು.
ಸಮಿತಿಯ ಅಧ್ಯಕ್ಷರಾದ ಆನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಪ್ರಮುಖರಾದ ತಾರ ಉಮೇಶ್ ಆಚಾರ್ಯ, ಮನೋಹರ್ ಶೆಟ್ಟಿ ತೋನ್ಸೆ, ಕೃಷ್ಣ ದೇವಾಡಿಗ ಕಲ್ಯಾಣಪುರ, ಕರುಣಾಕರ್ ಸಾಲ್ಯಾನ್, ಪ್ರಭಾಕರ ಪೂಜಾರಿ, ಗೀತಾ ರವಿ ಶೇಟ್, ಸಂಧ್ಯಾ ರಮೇಶ್, ರಾಮ ಪೂಜಾರಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಕೊಡವೂರು ಪ್ರಾಸ್ತಾವಿಕ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ರಾಧಕೃಷ್ಣ ಮೆಂಡನ್ ನಿರೂಪಿಸಿದರು.
ಕಾಪು : ವಿದ್ಯಾನಿಕೇತನ ಸಂಸ್ಥೆಯಲ್ಲಿ ದೀಪಾವಳಿ ಆಚರಣೆ ; ಮಕ್ಕಳು - ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ

Posted On: 23-10-2022 05:24PM
ಕಾಪು : ವಿದ್ಯಾನಿಕೇತನ ಸಂಸ್ಥೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದ್ದು ಅದರ ಭಾಗವಾಗಿ ನಮ್ಮ ಆಚರಣೆಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಪತ್ರಕರ್ತ ರಾಕೇಶ್ ಕುಂಜೂರು ಹೇಳಿದರು. ಅವರು ಕಾಪು ವಿದ್ಯಾನಿಕೇತನ್ ಶಾಲೆಯಲ್ಲಿ ಜರಗಿದ ದೀಪಾವಳಿ ಆಚರಣೆಯ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದೀಪಾವಳಿ ಎಂದರೆ ಅದು ಹಬ್ಬಗಳ ರಾಜ. ದೀಪಾವಳಿ ಎಂದರೆ ಪಟಾಕಿ ಹಚ್ಚಿ ಸಂಭ್ರಮಿಸುವ ಜೊತೆಗೆ ಆಚರಣೆಗಳ ಬಗೆಗೂ ತಿಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭ ಸಂಸ್ಥೆಯ ಮುಖ್ಯಸ್ಥರಾದ ಕೆ ಪಿ ಆಚಾರ್ಯ, ಸಹ ಮುಖ್ಯಸ್ಥೆ ಶ್ವೇತಾ ಆಚಾರ್ಯ, ಮುಖ್ಯ ಶಿಕ್ಷಕಿ ರಂಜಿತ, ಶಾಲಾ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವರ್ಗ, ಸಿಬಂದಿ ವರ್ಗ, ಪೋಷಕರು ಉಪಸ್ಥಿತರಿದ್ದರು.

ಸಂಸ್ಥೆಯ ಮಕ್ಕಳು ಮತ್ತು ಶಿಕ್ಷಕರಿಂದ ದೀಪಾವಳಿ ಕುರಿತಾದ ಕಿರು ಪ್ರಹಸನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.