Updated News From Kaup
ಕಾಪು : ನಾಲ್ಕೂವರೆ ವರ್ಷದಲ್ಲಿ 2898.68 ಕೋಟಿ ರೂಪಾಯಿಯ ಕಾಮಗಾರಿಗಳ ಮಂಜೂರಾತಿ - ಶಾಸಕ ಲಾಲಾಜಿ ಮೆಂಡನ್

Posted On: 23-10-2022 02:08PM
ಕಾಪು : ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 2898.68 ಕೋಟಿ ರೂಪಾಯಿಗಳ ಕಾಮಗಾರಿ ಮಂಜೂರಾತಿ ಆಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಂದಾರ ಸಭಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಕಾಪು ಕ್ಷೇತ್ರದ ಒಟ್ಟು 29 ಗ್ರಾಮ ಪಂಚಾಯತ್ ಗಳಲ್ಲಿ ಜಲಜೀವನ್ ಮಿಶಿನ್ ಯೋಜನೆಯಲ್ಲಿ 98.46 ಕೋಟಿ ರೂ. ಬಿಡುಗಡೆ ಗೊಳಿಸಲಾಗಿದೆ, ಈಗಾಗಲೆ ಕಾಮಗಾರಿ ಪ್ರಾರಂಭಗೊಂಡ ಹೆಜಮಾಡಿ ಮೀನುಗಾರಿಕಾ ಬಂದರು ,ಸಮುದ್ರ ತಡೆಗೋಡೆ ನಿರ್ಮಾಣ, ವಿಜ್ಞಾನ ಸಂಶೋಧನ ಕೇಂದ್ರ, ಪಾಲಿಟೆಕ್ನಿಕ್ ಕಾಲೇಜು, ಮಿನಿ ವಿಧಾನ ಸೌಧ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆರೋಗ್ಯ ಕೇಂದ್ರಗಳ ಮೇಲ್ದರ್ಜೆ, ಅಗ್ನಿಶಾಮಕ ದಳದ ಮಂಜೂರಾತಿ ಸಹಿತ ಹತ್ತು ಹಲವು ಯೋಜನೆ ಗಳ ಅನುಷ್ಟಾನ ಕಾಪು ಕ್ಷೇತ್ರದಲ್ಲಿ ಮೊದಲ್ಗೊಂಡಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಸಂದೀಪ್ ಶೆಟ್ಟಿ, ಪ್ರಾಣೇಶ್ ಹೆಜ್ಮಾಡಿ, ಸುಧಾಮ ಶೆಟ್ಟಿ ಉಪಸ್ಥಿತರಿದ್ದರು.
ಕಾಪು : ಪ್ರೆಸ್ ಕ್ಲಬ್ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮ

Posted On: 23-10-2022 10:45AM
ಕಾಪು : ಬಲಿ ಚಕ್ರವರ್ತಿ ಮೂಲಸಂಸ್ಕೃತಿಯ ಪ್ರತಿನಿಧಿ ಇದ್ದಂತೆ. ಬಲಿಯೇಂದ್ರನನ್ನು ಪುರಾಣದ ಮತ್ತು ತುಳುನಾಡಿನ ಬಲಿಯೇಂದ್ರ ಎಂದು ವಿಭಾಗಿಸಬಹುದು. ಈ ಕಲ್ಪನೆ ಒಂದೆಡೆ ವೈದಿಕತೆಯನ್ನು ಮತ್ತೊಂದೆಡೆ ಜಾನಪದದ ತಳಹದಿಗೆ ಒತ್ತು ನೀಡಿದೆ. ಬಲಿಯೇಂದ್ರನನ್ನು ಸ್ವೀಕರಿಸುವ ಗುಣ ಭಿನ್ನವಾಗಿದೆ. ಮುಂದೆ ಜನಪದರ ಆಚರಣೆಯೊಂದಿಗೆ ವೈದಿಕ ಆಚರಣೆಯ ಸುಗಮವಾದ ಸಮಾಗಮವಾಯಿತು. ದೀಪಾವಳಿ ಮೂರು ದಿನದ ಆಚರಣೆ. ಇದು ಸುಖ ಸಮೃದ್ಧಿಯ ಹಬ್ಬ ಎಂದು ಹಿರಿಯ ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಹೇಳಿದರು. ಅವರು ಶನಿವಾರ ಕಾಪು ಪತ್ರಕರ್ತರ ಸಂಘದಲ್ಲಿ ಜರಗಿದ ದೀಪಾವಳಿ ಹಬ್ಬದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಬ್ಬ ಎಂದರೆ ಸಂತೋಷ. ಪ್ರಖರವಾದ ವಿದ್ಯುತ್ ದೀಪದ ಮುಂದೆ ಹಣತೆಯ ದೀಪದ ಪ್ರಜ್ವಲತೆ ಕ್ಷೀಣವಾಗಿದೆ. ದೀಪದ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ, ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ಮಾತನಾಡಿ ಹಿಂದಿನ ದೀಪಾವಳಿಯಲ್ಲಿ ಬಡತನದೊಂದಿಗೆ ಸಂತಸವಿತ್ತು. ಇಂದು ಜನರು ಸಿರಿವಂತರಾದರೂ ದೀಪಾವಳಿ ಆಚರಣೆಗಳು ಮಹತ್ವ ಇಲ್ಲದಂತಾಗಿದೆ ಎಂದರು.
ಈ ಸಂದರ್ಭ ಕಾಪು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳು, ಕಾರ್ಯದರ್ಶಿ ಪುಂಡಲೀಕ ಮರಾಠೆ, ಪತ್ರಕರ್ತ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ವಂದಿಸಿದರು.
ಕಾಪು : ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ರ‌್ಯಾಲಿ

Posted On: 22-10-2022 10:44AM
ಕಾಪು : ಮಹಮ್ಮದ್ ಪೈಗಂಬರ ಅವರ ಜನ್ಮದಿನದ ದಿನಾಚರಣೆಯ ಪ್ರಯುಕ್ತ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ವತಿಯಿಂದ ಶುಕ್ರವಾರ ಸಂಜೆ ಕಾಪುವಿನ ಪೋಲಿಪು, ಜುಮ್ಮಾ ಮಸೀದಿಯ ದರ್ಗಾದಲ್ಲಿ ರ‌್ಯಾಲಿಗೆ ಕಾಪುವಿನ ಖಾಜಿ ಅಲ್ ಹಜ್ ಶೈಖುನಾ ಅಜ್ಮಿದ್ ಮುಸ್ಲಿಯಾರವರು ಚಾಲನೆ ನೀಡಲಾಯಿತು.
ರ‌್ಯಾಲಿಯು ಕಾಪು ಪೇಟೆಯಲ್ಲಿ ಸಮಾಪನಗೊಂಡಿತು.
ಈ ಸಂದರ್ಭ ನ್ಯಾಯವಾದಿ ಹಂಜತ್ ಹೆಜ್ಮಾಡಿ, ಎಂ.ಕೆ ಇಬ್ರಾಹಿಂ ಮಜೂರು, ಅಬ್ದುಲ್ ಸುಪರ್ಫರ್ ಎಂ. ಕೆ. ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.
ರಾಜಕೀಯಕ್ಕೆ ಬಂದದ್ದು ನಾನು ಸನ್ಯಾಸಿಯಾಗಿಯಲ್ಲ. ಸ್ಥಾನಮಾನ ನೀಡಿದರೆ ಅದನ್ನು ಒಪ್ಪಲು ಸಿದ್ಧ - ಶ್ರೀಶ ನಾಯಕ್

Posted On: 22-10-2022 07:20AM
ಕಟಪಾಡಿ : ಸಾಮಾಜಿಕ ಕಾರ್ಯದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ತಂದೆಯವರ ಕಾರ್ಯಕ್ಷಮತೆ, ಬಿಜೆಪಿ ಪಕ್ಷಕ್ಕಾಗಿ ದುಡಿದವರು ಹಾಗಾಗಿ ಅವರ ನಂತರ ಈ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಮುಂದೆ ಪಕ್ಷ ಅವಕಾಶ ನೀಡಿದರೆ ಕೊಟ್ಟಂತಹ ಜವಾಬ್ದಾರಿಯನ್ನು ನಿರ್ವಹಿಸಲಿದ್ದೇನೆ ಎಂದು ಬಿಜೆಪಿ ಪಕ್ಷದ ಯುವ ನಾಯಕ ಶ್ರೀಶ ನಾಯಕ್ ಹೇಳಿದರು. ನಾನು ಪೆರ್ಣಂಕಿಲದಲ್ಲಿ ಹುಟ್ಟಿದರೂ ಕಾಪು ಕ್ಷೇತ್ರದಲ್ಲಿ 2000ನೇ ಇಸವಿಯಲ್ಲಿ ಪಂಚಾಯತ್ ಸದಸ್ಯನಾಗಿ ಕೆಲಸ ಮಾಡಿದವ ಹಾಗಾಗಿ ಬಿಜೆಪಿ ಪಕ್ಷದ ಯುವಮೋರ್ಚಾದಲ್ಲಿ ಕೆಲಸ ಮಾಡಿದ ಅನುಭವವಿದೆ.
ರಾಜಕೀಯಕ್ಕೆ ಬಂದದ್ದು ನಾನು ಸನ್ಯಾಸಿಯಾಗಿ ಅಲ್ಲ. ಪಕ್ಷ ಏನಾದರೂ ಸ್ಥಾನಮಾನ ನೀಡಿದರೆ ಅದನ್ನು ಒಪ್ಪಲು ಸಿದ್ಧ. ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಎಂಎಲ್ಎ ಅಭ್ಯರ್ಥಿಯಾಗಿ ಅವಕಾಶ ಬಂದರೂ ಸ್ವೀಕರಿಸಲು ತಯಾರಿದ್ದೇನೆ ಎಂದರು.
ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದರೂ, ಸಮಾಜಮುಖಿ, ಪಕ್ಷದ ಜತೆಗಿನ ಕೆಲಸ ನಿರಂತರ. ಪ್ರಬಲ ಜಾತಿ ಲೆಕ್ಕಾಚಾರ ಬಿಟ್ಟು ಈ ಬಾರಿ ಪಕ್ಷ ಅವಕಾಶ ನೀಡಬಹುದೆಂಬ ಆಶಾಭಾವನೆಯಿದೆ ಎಂದರು.
ಒಟ್ಟಿನಲ್ಲಿ ಈ ಬಾರಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಹಲವು ಮಂದಿ ಆಕಾಂಕ್ಷಿಗಳು ಇದ್ದರೂ ಹೈಕಮಾಂಡ್ ಪ್ರಬಲ ಜಾತಿಗಳಿಗೆ ಮಣೆ ಹಾಕಲಿವೆಯೋ ಅಥವಾ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನಿಗೆ ಮಣೆ ಹಾಕಲಿದೆಯೋ ಕಾದು ನೋಡಬೇಕಿದೆ.
ಅಕ್ಟೋಬರ್ 26 : ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ಗೂಡುದೀಪ ಸ್ಪರ್ಧೆ

Posted On: 22-10-2022 01:07AM
ಕಟಪಾಡಿ : ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ಸಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು ಈ ಬಾರಿ ದೀಪಾವಳಿಯನ್ನು ಅರ್ಥೂರ್ಣವಾಗಿಸುವ ನಿಟ್ಟಿನಲ್ಲಿ ಅಕ್ಟೋಬರ್ 26ರಂದು ಸಂಜೆ 4 ಗಂಟೆಗೆ ಕಾಪು ಬೀಚ್ ನಲ್ಲಿ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ಟ್ರಸ್ಟಿ ಶ್ರೀಶ ನಾಯಕ್ ಶುಕ್ರವಾರ ಕಟಪಾಡಿ ಮಟ್ಟುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ಸುಮಾರು ಆನ್ ಲೈನ್ ಮುಖಾಂತರ 100 ಸ್ಪರ್ಧಿಗಳು ಹೆಸರು ನೋಂದಾಯಿಸಿದ್ದಾರೆ. ಪ್ಲಾಸ್ಟಿಕ್ ಬಳಕೆ ಇಲ್ಲದ ಗೂಡುದೀಪಕ್ಕೆ ಪ್ರಾಶಸ್ತ್ಯ ನೀಡಲಾಗುವುದು. ಪ್ರಥಮ ಬಹುಮಾನ ರೂ. 11,111 ದ್ವಿತೀಯ ರೂ. 7,777 ತೃತೀಯ ರೂ.5,555 ನೀಡಲಾಗುವುದು.
ಪ್ರತಿಷ್ಠಾನ ಆರಂಭದ ಮೊದಲೂ ಪ್ರತಿವರ್ಷ ಸುಮಾರು 20 ಲಕ್ಷ ರೂಪಾಯಿಗಳನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿರುತ್ತೇವೆ. ಈಗಾಗಲೇ 21 ಕ್ಯಾನ್ಸರ್ ಪೀಡಿತರಿಗೆ, 12 ಕುಟುಂಬಗಳಿಗೆ ಮನೆ ಕಟ್ಟಲು ಸಹಾಯ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರು 9 ಮಂದಿಗೆ ಸಹಾಯ, ಸುಮಾರು 20 ಮಂದಿ ಆರೋಗ್ಯ ಸಮಸ್ಯೆಯವರಿಗೆ ಸಹಾಯ ಇತ್ಯಾದಿ ಕಾರ್ಯಗಳಲ್ಲಿ ಟ್ರಸ್ಟ್ ಸಹಾಯ ಮಾಡಿದೆ.
ಸಾಂಸ್ಕೃತಿಕ, ಧಾರ್ಮಿಕವಾಗಿ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ಇದೆ. ತಂದೆಯ ಸಮಾಜಮುಖಿ ಕಾರ್ಯವನ್ನು ಮಕ್ಕಳು ಮುಂದುವರಿಸುತ್ತಿದ್ದೇವೆ ಎಂದರು. ಮುಂದಿನ ದಿನಗಳಲ್ಲಿ ಲೋಕ ಕಲ್ಯಾಣಕ್ಕಾಗಿ ಸಹಸ್ರ ದೀಪಾರ್ಚನೆ ಎಂಬ ಕಾರ್ಯಕ್ರಮವನ್ನು ಹಿರಿಯಡ್ಕ ವೀರಭದ್ರ ದೇವಸ್ಥಾನದಲ್ಲಿ ಮಾಡುವ ಯೋಜನೆಯಿದೆ ಎಂದರು. ಈ ಸಂದರ್ಭ ಟ್ರಸ್ಟ್ ನ ಸದಸ್ಯರಾದ ಅನಿಲ್ ಶೆಟ್ಟಿ, ಪ್ರತಾಪ್ ಚಂದ್ರ ಶೆಟ್ಟಿ, ಸಂತೋಷ್ ಮೂಡುಬೆಳ್ಳೆ, ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ : ದಿ| ಜಯ ಸಿ ಸುವರ್ಣರ ದ್ವಿತೀಯ ವರ್ಷದ ಸಂಸ್ಮರಣೆ

Posted On: 21-10-2022 05:18PM
ಮೂಲ್ಕಿ : ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮೂಲ್ಕಿ ಇದರ ಸ್ಥಾಪಕ ಅಧ್ಯಕ್ಷರು, ಬಿಲ್ಲವ ಮುಖಂಡ, ಸಮಾಜ ಸೇವಕ ದಿ| ಜಯ ಸಿ ಸುವರ್ಣರ ದ್ವಿತೀಯ ವರ್ಷದ ಸಂಸ್ಮರಣೆ ಶುಕ್ರವಾರ ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಭಾಂಗಣದಲ್ಲಿ ಜರಗಿತು.
ಈ ಸಂದರ್ಭ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್ ಮಾತನಾಡಿ ಜಯ ಸುವರ್ಣ ವ್ಯಕ್ತಿಯಲ್ಲ, ಅವರೊಂದು ಶಕ್ತಿ, ಅವರ ಹಾದಿಯಲ್ಲೇ ನಾನು ಸಾಗುತ್ತಿದ್ದೇನೆ. ಅವರೇ ನನಗೆ ಪ್ರೇರಣೆ, ಭಾರತ್ ಬ್ಯಾಂಕ್ ನಿಂದ ಸಾಕಷ್ಟು ಜನರಿಗೆ ಉದ್ಯೋಗ ನೀಡಿ ಉದ್ಯೋಗದಾತರಾಗಿದ್ದಾರೆ. ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಜಯ ಸಿ ಸುವರ್ಣ ಅವರು ಮಂಗಳೂರು ಕುದ್ರೋಳಿ ದೇವಸ್ಥಾನ, ಕಟಪಾಡಿ ವಿಶ್ವನಾಥ ಕ್ಷೇತ್ರ, ಗೆಜ್ಜೆಗಿರಿ ನಂದನ ಬಿತ್ತಿಲ್ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ, ಮುಂದಿನ ದಿನಗಳಲ್ಲಿ ಬಿಲ್ಲವ ಸಮಾವೇಶವನ್ನು ಮಾಡುವ ಯೋಜನೆಯನ್ನು ಬಿಲ್ಲವ ಮಹಾಮಂಡಲ ಹಾಕಿಕೊಂಡಿದೆ ಎಂದರು. ಜಯ ಸಿ ಸುವರ್ಣರ ಎರಡನೇ ವರ್ಷದ ಸಂಸ್ಮರಣೆ ನಮ್ಮ ಸಮಾಜಕ್ಕೆ ದುಃಖದ ವಿಷಯ, ನಾರಾಯಣ ಗುರುಗಳಂತೆ ಸಮಾಜಕ್ಕೆ ಗುರುಗಳಾಗಿ ನಮಗೆಲ್ಲ ಸಮಾಜ ಸೇವೆ ಮಾಡಲು ಪ್ರೇರಣೆಯಾಗಿದ್ದಾರೆ ಎಂದರು. ಉಡುಪಿಯ ಹರ್ಷದ ಆಡಳಿತ ನಿರ್ದೇಶಕರಾದ ಸೂರ್ಯಪ್ರಕಾಶ್ ಕೆ ಮಾತನಾಡಿ ಒಬ್ಬ ವ್ಯಕ್ತಿ ಸಮಾಜಕ್ಕೆ ಎಷ್ಟನ್ನು ಕೊಡಲು ಸಾಧ್ಯವೋ ಅಷ್ಟನ್ನು ಕೊಟ್ಟಿದ್ದಾರೆ. ಅವರೊಂದು ಸಮಾಜದ ಬೆಳಕು, ಅವರ ಆದರ್ಶಗಳನ್ನು ಅಳವಡಿಸಿಕೊಂಡು ನಾವೆಲ್ಲ ಜೀವಿಸಬೇಕು ಎಂದರು.
ಈ ಸಂದರ್ಭ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪದಾಧಿಕಾರಿಗಳು, ಬಿಲ್ಲವ ಮುಖಂಡರು, ಜಯ ಸಿ ಸುವರ್ಣರ ಅಭಿಮಾನಿಗಳು , ಮತ್ತಿತರರು ಉಪಸ್ಥಿತರಿದ್ದರು.
ಕಟಪಾಡಿ : ಸೋದೆ ಪೀಠಾಧಿಪತಿಗಳಿಂದ ಮಟ್ಟು ಗುಳ್ಳ ಕೃಷಿಗೆ ಚಾಲನೆ

Posted On: 21-10-2022 05:03PM
ಕಟಪಾಡಿ : ಸೋದೆ ಶ್ರೀ ವಾದಿರಾಜ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶ್ರೀಮಠದ ವತಿಯಿಂದ ಮಟ್ಟುಗುಳ್ಳ ಕೃಷಿ ಮಾಡಲು ಯೋಜಿಸಿದ್ದು, ಆ ಪ್ರಯುಕ್ತ ಗುರುವಾರ ಮಟ್ಟು ಗ್ರಾಮದ ನಾಗಪಾತ್ರಿಗಳಾದ ಶ್ರೀ ಲಕ್ಷ್ಮಣ ರಾಯರ ಗದ್ದೆಯಲ್ಲಿ ಮಟ್ಟು ಗುಳ್ಳದ ಸಸಿಯನ್ನು ನೆಟ್ಟು ಗುಳ್ಳದ ಬೆಳೆಗೆ ಚಾಲನೆ ನೀಡಿದರು.
ಸೋದೆ ಶ್ರೀವಾದಿರಾಜ ಮಠದ ಗುರು ಪರಂಪರೆಯಲ್ಲಿ ಶ್ರೇಷ್ಠರೂ, ಕ್ರಾಂತಿಕಾರಕರೂ ಆದ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರು 500 ವರ್ಷಗಳ ಹಿಂದೆ ಉಡುಪಿ ಸಮೀಪದ ಮಟ್ಟು ಗ್ರಾಮದ ಜನರಿಗೆ ಶ್ರೀ ಹಯಗ್ರೀವ ದೇವರ ಪ್ರೇರಣೆಯಿಂದ ಗುಳ್ಳದ ಬೀಜವನ್ನು ಕೊಟ್ಟು ಅವರ ಉದ್ದಾರಕ್ಕೆ ಕಾರಣೀಕರ್ತರಾಗಿ "ಮಟ್ಟು ಗುಳ್ಳ"ವನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಔಷಧೀಯ ಗುಣವುಳ್ಳ ಈ ಮಟ್ಟು ಗುಳ್ಳವನ್ನು ಮಟ್ಟು ಗ್ರಾಮದ ಅನೇಕ ಕೃಷಿಕರು ಇಂದಿಗೂ ಬೆಳೆಸಿ ಉಳಿಸಿಕೊಂಡು ಬಂದಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಮಟ್ಟು ಗುಳ್ಳ ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ವತಃ ತಾವು ಗ್ರಾಮಕ್ಕೆ ಆಗಮಿಸಿ, ಈ ಶುಭ ಸಂದರ್ಭದಲ್ಲಿ ಶ್ರೀಗುರು ವಾದಿರಾಜರ ಕೃಪಾ ಕಟಾಕ್ಷಕ್ಕೆ ನಿದರ್ಶನವೋ ಎಂಬಂತೆ ಶ್ರೀಪಾದರು ಸಸಿಯನ್ನು ನೆಡುವ ಸಮಯದಲ್ಲಿ ಪುಷ್ಪವೃಷ್ಟಿಯಂತೆ ವರುಣನ ಆಗಮನವಾದದ್ದು ಅಲ್ಲಿ ನೆರೆದಿದ್ದ ಭಕ್ತರ ಭಾವನೆಗೆ ಪುಷ್ಟಿಕೊಟ್ಟಂತಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀಪಾದರೊಂದಿಗೆ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ , ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿಗಳಾದ ರತ್ನಕುಮಾರ್, ಮಟ್ಟು ಗುಳ್ಳ ಬೆಳೆಗಾರರ ಸಂಘದ ಪದಾಧಿಕಾರಿಗಳು , ಮಟ್ಟು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಉಡುಪಿ : ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ, ಗಾಲಿಕುರ್ಚಿಗಳ ವಿತರಣಾ ಕಾರ್ಯಕ್ರಮ

Posted On: 20-10-2022 11:07PM
ಉಡುಪಿ : ಸೇವಾಭಾರತಿ - ಸೇವಾಧಾಮ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಹೈಟೆಕ್ ಮೆಡಿಕೇರ್ ಆಸ್ಪತ್ರೆ, ಅಂಬಲಪಾಡಿ ಉಡುಪಿ, ರೋಟರಿ ಕ್ಲಬ್ ಕಾಪು, ಅಮ್ಮ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.), ಕಾಪು ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವುಗಳ ಸಹಯೋಗದಲ್ಲಿ ಅಕ್ಟೋಬರ್ 19ರಂದು ಹೈಟೆಕ್ ಮೆಡಿಕೇರ್ ಆಸ್ಪತ್ರೆ ಅಂಬಲಪಾಡಿ ಉಡುಪಿ ಇಲ್ಲಿ 16ನೇ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು 10 ಗಾಲಿಕುರ್ಚಿಗಳ ವಿತರಣಾ ಕಾರ್ಯಕ್ರಮವನ್ನು ರೋಟರಿಯ ಝೋನ್ -5 ಸಹಾಯಕ ಗವರ್ನರ್ ರೊ. ಡಾ| ಶಶಿಕಾಂತ ಕಾರಿಂಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾಭಾರತಿ, ಬೆಳ್ತಂಗಡಿ ಅಧ್ಯಕ್ಷರಾದ ಕೆ. ವಿನಾಯಕ ರಾವ್ ವಹಿಸಿದ್ದರು.

ಈ ಸಂದರ್ಭ ಅಮ್ಮ ಚಾರಿಟೇಬಲ್ ಟ್ರಸ್ಟ್ ನ ರಮೇಶ್ ಹೆಗ್ಡೆ ಕಲ್ಯಾ, ವಿಜಯ ಕೊಡವೂರು, ರೊ. ಕೆ. ಸದಾಶಿವ ಭಟ್, ಡಾ. ಟಿ. ಎಸ್. ರಾವ್, ವಾಣಿ ವಿ. ರಾವ್, ಡಾ. ನಾಗಭೂಷಣ ಉಡುಪ, ಡಾ. ಉಮೇಶ್ ಪ್ರಭು, ಡಾ. ಎಸ್. ಪಿ. ಮೋಹಂತಿ, ಡಾ. ಈಶ್ವರ್ ಕೀರ್ತಿ ಸಿ, ರೊ. ಶಾಲೆಟ್ ಲುವಿಸ್, ಕೃಷ್ಣ ಪ್ರಸಾದ್ ಶೆಟ್ಟಿ, ಗಣೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ : ಸೇವಾಭಾರತಿ - ಸೇವಾಧಾಮ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಹೈಟೆಕ್ ಮೆಡಿಕೇರ್ ಆಸ್ಪತ್ರೆ, ಅಂಬಲಪಾಡಿ ಉಡುಪಿ, ರೋಟರಿ ಕ್ಲಬ್ ಕಾಪು, ಅಮ್ಮ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.), ಕಾಪು ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವುಗಳ ಸಹಯೋಗದಲ್ಲಿ ಅಕ್ಟೋಬರ್ 20 ರಂದು ಹೈಟೆಕ್ ಮೆಡಿಕೇರ್ ಆಸ್ಪತ್ರೆ ಅಂಬಲಪಾಡಿ ಉಡುಪಿ ಇಲ್ಲಿ 16ನೇ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು 10 ಗಾಲಿಕುರ್ಚಿಗಳ ವಿತರಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯರು, ಕೊಡವೂರು ಮತ್ತು ಸೇವಾಧಾಮದ ನಿರ್ದೇಶಕರಾದ ಕೆ. ವಿಜಯ ಕೊಡವೂರು ವಹಿಸಿದ್ದರು. ಈ ಸಂದರ್ಭ ಸಿಎ ಗುಜ್ಜಾಡಿ ಪ್ರಭಾಕರ್ ನರಸಿಂಹ ನಾಯಕ್, ವೈ. ಸುಧೀರ್ ಕುಮಾರ್, ಗುರುಪ್ರಕಾಶ್ ಶೆಟ್ಟಿ, ಪ್ರಾಣೇಶ್, ವಿಷ್ಣು ಪ್ರಸಾದ್ ತೆಂಕಿಲ್ಲಾಯ, ಸಂಪತ್ ಕುಮಾರ್ ರಾವ್, ರೊ. ವಿದ್ಯಾಧರ ಪುರಾಣಿಕ್, ಹರೀಶ್ ಕೊಪ್ಪಲ್ ತೋಟ, ಸ್ವರ್ಣ ಗೌರಿ, ಸಂತೋಷ್ ಸುವರ್ಣ, ಮನು ಆರ್ ಮತ್ತಿತರರು ಉಪಸ್ಥಿತರಿದ್ದರು.
ನವಂಬರ್ 7 ರಂದು ಉಡುಪಿಗೆ ಬರಲಿರುವ ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ದಿಗ್ವಿಜಯ ಯಾತ್ರೆ ಪೂರ್ವ ತಯಾರಿ ಸಭೆ

Posted On: 20-10-2022 10:25PM
ಉಡುಪಿ : ಅಯೋಧ್ಯ ಶ್ರೀ ರಾಮಚಂದ್ರನ ದಿಗ್ವಿಜಯ ಯಾತ್ರೆಯ ಪೂರ್ವ ತಯಾರಿ ಬೈಠಕ್ ಅಕ್ಟೋಬರ್ 17 ರಂದು ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ದಿಗ್ವಿಜಯ ಯಾತ್ರೆಯು 26 ರಾಜ್ಯಗಳನ್ನು ಸುತ್ತಾಡಿ ಬರುವ ಯಾತ್ರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ಚಾಲನೆಯನ್ನು ನೀಡಿದ್ದು. ಈ ಯಾತ್ರೆಯು ನವಂಬರ್ 7 ರಂದು ಉಡುಪಿ ಜಿಲ್ಲೆಗೆ ಬರಲಿದ್ದು ಇದಕ್ಕೆ ಪೂರ್ವ ತಯಾರಿಗಾಗಿ ಯೋಚನೆ ಮತ್ತು ಯೋಜನೆಗಾಗಿ ಸಮಿತಿಯನ್ನು ರಚನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ವಿಜಯ ಕೊಡವೂರು ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ಮಂದಿರವನ್ನು ನಿರ್ಮಾಣಕ್ಕಾಗಿ ನಮ್ಮ ಹಿರಿಯರು ಜೀವನವನ್ನೇ ನೀಡಿದ್ದಾರೆ. ಜೊತೆಯಾಗಿ ಸಂಘಟಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ವಿಶ್ವ ಹಿಂದೂ ಪರಿಷತ್ ಅವರ ಮುಂದಾಳತ್ವದಲ್ಲಿ ಈ ಒಂದು ಹೋರಾಟಕ್ಕೆ ಕಿಚ್ಚನ್ನು ನೀಡಿ ನಮ್ಮ ಹಿರಿಯರು ಅದನ್ನು ಉಳಿಸುವ ಪ್ರಯತ್ನವನ್ನು ಮಾಡಿದ್ದಾರೆ ಕಾನೂನಾತ್ಮಕವಾಗಿ ಲಕ್ಷಾಂತರ ಜನ ಹೋರಾಟ ಮಾಡಿದ್ದಾರೆ ಹಾಗೂ ಸಾವು ನೋವು ನಮ್ಮ ಮನಸ್ಸಲ್ಲಿ ಇದ್ದು ಈ ಒಂದು ಅಯೋಧ್ಯೆಯ ದಿಗ್ವಿಜಯ ಸಂದರ್ಭದಲ್ಲಿ ನಾವು ಎಲ್ಲಾ ಸಂಘ ಸಂಸ್ಥೆ, ಭಜನಾ ತಂಡ, ಧಾರ್ಮಿಕ ಶ್ರದ್ಧಾ ಕೇಂದ್ರದ ಮುಖಾಂತರ ರಾಮನ ಮೂರ್ತಿಗೆ ಹಾಲನ್ನು ಅಭಿಷೇಕ ಮಾಡುವಂತ ಅವಕಾಶವನ್ನು ನೀಡಿದ್ದಾರೆ ಮತ್ತು ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಶಕ್ತಿ ಶಂತಾನಂದ ಮಹರ್ಷಿ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಹಿಂದೂ ಸಮಾಜದ ಎಲ್ಲಾ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಚಂದಕಾಣಿಸಿಕೊಡಬೇಕು ಮತ್ತು ಕೇವಲ ಮಂದಿರ ನಿರ್ಮಾಣ ಮಾತ್ರವಲ್ಲ ಜೊತೆಗೆ ರಾಮಾರಾಜ್ಯದ ನಿರ್ಮಾಣವಾಗಬೇಕಾಗಿದೆ. ರಾಮನ ರೀತಿ ನಾವೆಲ್ಲ ನಡೆದು ರಾಮರಾಜ್ಯ ನಿರ್ಮಾಣ ಮಾಡುವಂತ ಅವಶ್ಯಕತೆ ಇದೆ ಎಂದರು.
ಹತ್ತು ಸಾವಿರ ಮಂದಿ ಧಾರ್ಮಿಕ ಸಭೆಗೆ ಸೇರಿ ತದನಂತರ ವಾಹನ ಜಾಥದ ಮುಖಾಂತರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದವರೆಗೆ ಕರೆದುಕೊಂಡು ಹೋಗಿ ಅಲ್ಲಿ ಆಶೀರ್ವಚನ ಪಡೆದು ಅವರನ್ನು ತಲುಪಿಸುವಂತಹ ಜವಾಬ್ದಾರಿ ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರ ಹೆಗಲಿನಲ್ಲಿದೆ. ಆದ್ದರಿಂದ ಎಲ್ಲಾ ರಾಮಭಕ್ತರು ಈ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಮತ್ತು ಈ ಕಾರ್ಯಕ್ರಮದ ಮುಖಾಂತರ ಸಮಾಜ ಜಾಗ್ರತೆಯಾಗಬೇಕು. ಹಿಂದೂ ಸಮಾಜದಲ್ಲಿ ಇರುವಂತಹ ಕುಂದು ಕೊರತೆಗಳು ನಿವಾರಣೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಪುರುಷೋತ್ತಮ್ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಪಾಂಡುರಂಗ ಮಲ್ಪೆ, ರಾಘವೇಂದ್ರ ಕುಂದರ್ (ವಿಶ್ವ ಹಿಂದೂ ಪರಿಷತ್), ಮನೋಹರ್ ಶೆಟ್ಟಿ ತೊನ್ಸೆ, ರಾಧಾಕೃಷ್ಣ ಮೆಂಡನ್ ಮಲ್ಪೆ, ತೋನ್ಸೆ, ತಾರಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ದಾಮೋದರ್ ಶರ್ಮ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
ನಾಡದೋಣಿಗಳಿಗೆ ಸೀಮೆ ಎಣ್ಣೆ ಪೂರೈಸಲು ಕಾಪುವಿನಲ್ಲಿ ಶಾಸಕರಿಗೆ ಮನವಿ

Posted On: 20-10-2022 08:45PM
ಕಾಪು : ಕಳೆದ 2 ತಿಂಗಳಿಂದ ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆ ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ತಕ್ಷಣ ಸೀಮೆ ಎಣ್ಣೆ ಪೂರೈಸುವಂತೆ ಗುರುವಾರ ಹೆಜಮಾಡಿ ಪಟ್ಟೆಬಲೆ ಮತ್ತು ಕಂತಬಲೆ ಯೂನಿಯನ್ ಸದಸ್ಯರು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್‌ರವರಿಗೆ ಕಾಪುವಿನಲ್ಲಿ ಮನವಿ ಸಲ್ಲಿಸಿದ್ದಾರೆ.
ವರ್ಷಂಪ್ರತಿ ಮಳೆಗಾಲ ಮುಗಿದ ಬಳಿಕ ನಾಡದೋಣಿಗಳಿಗೆ ಸಬ್ಸಿಡಿಯುಕ್ತ ಸೀಮೆಎಣ್ಣೆ ನೀಡಲಾಗುತ್ತಿತ್ತು. ಮಳೆಗಾಲದ ಬಳಿಕ 2 ತಿಂಗಳು ನಾಡದೋಣಿ ಮೀನುಗಾರರಿಗೆ ಹೆಚ್ಚು ಸಂಪಾದನೆಯ ಸಮಯ. ಅತೀ ಹೆಚ್ಚು ಮತ್ಸ್ಯ ಸಂಪತ್ತು ಇದೇ ಸಮಯದಲ್ಲಿ ದೊರೆಯುತ್ತದೆ. ಆದರೆ ಸೀಮೆಎಣ್ಣೆ ದೊರೆಯದೆ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸುವ ಹಂತಕ್ಕೆ ಮೀನುಗಾರರು ತಲುಪಿದ್ದಾರೆ. ಇದರಿಂದ ಬಡ ಕುಟುಂಬಗಳು ಕಂಗಾಲಾಗಿದ್ದಾರೆ. ಹಾಗಾಗಿ ತಕ್ಷಣ ಮಧ್ಯ ಪ್ರವೇಶಿಸಿ ಸೀಮೆಎಣ್ಣೆ ಪೂರೈಸುವಂತೆ ಮೀನುಗಾರರು ಅವಲತ್ತುಕೊಂಡಿದ್ದಾರೆ.
ಈ ಬಗ್ಗೆ ಮನವಿ ಸ್ವೀಕರಿಸಿದ ಶಾಸಕ ಮೆಂಡನ್, ಸರಕಾರದ ಮೇಲೆ ಒತ್ತಡ ತಂದು ಶೀಘ್ರ ಸೀಮೆಎಣ್ಣೆ ಪೂರೈಕೆಗೆ ಅನುವು ಮಾಡಿಕೊಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭ ಯೂನಿಯನ್ ಅಧ್ಯಕ್ಷ ಏಕನಾಥ ಕರ್ಕೇರ, ಉಪಾಧ್ಯಕ್ಷ ಮುಕುಂದ ಕುಂದರ್, ಪ್ರಧಾನ ಕಾರ್ಯದರ್ಶಿ ಗೋವರ್ಧನ ಕೋಟ್ಯಾನ್, ಕೋಶಾಧಿಕಾರಿ ದಿನೇಶ್ ಸುವರ್ಣ, ಸದಸ್ಯ ನಿಖಿಲ್ ಕುಂದರ್ ಉಪಸ್ಥಿತರಿದ್ದರು.