Updated News From Kaup

ಕಾಪು : ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜನ ನೇಮೋತ್ಸವ

Posted On: 26-09-2022 07:47PM

ಕಾಪು : ಇಲ್ಲಿನ ಶ್ರೀ ಹಳೇಮಾರಿಯಮ್ಮ ದೇವಸ್ಥಾನದ ಬಳಿಯ ಶ್ರೀ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಭಾನುವಾರ ರಾತ್ರಿ ಕೊರಗಜ್ಜ ದೈವದ ನೇಮೋತ್ಸವ ವಿಜೃಂಭಣೆಯಿಂದ ಜರಗಿತು.

ನೂರಾರು ಭಕ್ತಾದಿಗಳು ಆಗಮಿಸಿ ಶ್ರೀ ದೈವದ ಕರಿಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

ಈ ಸಂದರ್ಭ ಗುರುವ ಹಾಗೂ ಮೆನ್ಕು ಕುಟುಂಬಸ್ಥರು ಮತ್ತು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

ಕಾಪು ಗ್ರಾಮದಾದ್ಯಂತ ಇಂದು ತೆನೆ ಹಬ್ಬ ಆಚರಣೆ

Posted On: 26-09-2022 07:33PM

ಕಾಪು : ಗ್ರಾಮದಾದ್ಯಂತ ಸೋಮವಾರ ತೆನೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮಸ್ಥರು ಮತ್ತು ಪುರೋಹಿತರು ಗದ್ದೆಯಿಂದ ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ತೆನೆಗಳನ್ನು ಸಂಗ್ರಹಿಸಿ, ಪಲ್ಲಕ್ಕಿಯಲ್ಲಿ ಕಾಪುವಿನ ಸಾವಿರ ಸೀಮೆಯ ಒಡೆಯ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನಕ್ಕೆ ತರಲಾಯಿತು.

ದೇವಳದ ಪ್ರಧಾನ ಅರ್ಚಕ ಜನಾರ್ಧನ ತಂತ್ರಿಯವರು ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ಗ್ರಾಮದ ಜನರಿಗೆ ತೆನೆಗಳನ್ನು ವಿತರಿಸಿದರು.

ಈ ಸಂದರ್ಭ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು, ತೆನೆ ಸ್ವೀಕರಿಸಿದರು.

ಕೊಂಕಣಿ ನಾಟಕ ಸಭಾ : ಕಿರು ನಾಟಕ ಸ್ಫರ್ಧೆಯಲ್ಲಿ ಶಂಕರಪುರ ಕಲಾರಾಧನ್ ಪ್ರಥಮ ಸ್ಥಾನ

Posted On: 25-09-2022 10:20PM

ಕಾಪು : ಇತ್ತೀಚೆಗೆ ಮಂಗಳೂರಿನ ಕೊಂಕಣಿ ನಾಟಕ ಸಭಾ ನಡೆಸಿದ ಕಿರು ನಾಟಕ ಸ್ಫರ್ಧೆಯಲ್ಲಿ ಭಾಗವಹಿಸಿದ ಶಂಕರಪುರದ ಇಗರ್ಜಿಯ ಕಲಾರಾಧನ್ ಸಂಘಟನೆಯ ವೆಚಿಕ್ ಪೂತ್ ಪ್ರಥಮ ಸ್ಥಾನವನ್ನು ಪಡೆದಿದೆ.

ವಾಲ್ ಸ್ಟನ್ ಡೇಸ ರಚಿಸಿದ ಈ ಕಿರು ನಾಟಕವನ್ನು ಕಲಾ ಚತುರ ಗಣೇಶ್ ರಾವ್ ಎಲ್ಲೂರುರವರು ನಿರ್ದೇಶಿಸಿದ್ದಾರೆ.ಅನಿಲ್ಡಾ ನೊರೊನ್ನಾ,ಶ್ರಾಯನ್ ಲೋಬೊ,ಅನ್ಸಿಲ್ಲಾ ಕೊರೆಯಾ,ನೊಯೆಲ್ ಡಿಸಿಲ್ವಾ ಮತ್ತು ವಾಲ್ ಸ್ಟನ್ ಡೇಸ ಅಭಿನಯಿಸಿ,ಜೀವನ್ ಮತ್ತು ಕ್ಲೈವ್ ಸಂಗೀತ ನಿರ್ವಹಿಸಿದ್ದಾರೆ. ವ್ಯವಸ್ಥಾಪಕರಾಗಿ ಪೀಟರ್ ಮಾರ್ಟಿಸ್ ರವರು ಸಹಕರಿಸಿದರು.

ಪ್ರಸ್ತುತ ದಿನಗಳಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗಿ ಕುಟುಂಬ ಮತ್ತು ಸಮಾಜಕ್ಕೆ ಕಂಟಕರಾಗಿ ಬದುಕುವ ಯುವಜನರ ಕಥಾ ವಸ್ತುವಿರುವ ಈ ಕಿರು ನಾಟಕ ಜನ ಮೆಚ್ಚುಗೆಯನ್ನು ಪಡೆಯಿತು.

ಎರ್ಮಾಳು : ಪುಷ್ಪಾನಂದ ಫೌಂಡೇಶನ್ ವತಿಯಿಂದ 325 ವಿದ್ಯಾರ್ಥಿಗಳಿಗೆ ರೂ. 3.75 ಲಕ್ಷದ ಪ್ರತಿಭಾ ಪುರಸ್ಕಾರ

Posted On: 25-09-2022 03:41PM

ಎರ್ಮಾಳು : ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಪುಷ್ಪಾನಂದ ಫೌಂಡೇಶನ್ ವತಿಯಿಂದ ಯಶ್ ಪಾಲ್ ಸುವರ್ಣ ರವರ ಸಮಾಜ ಮುಖಿ ಕಾರ್ಯ ಶ್ಲಾಘನೀಯವಾಗಿದ್ದು ಫೌಂಡೇಶನ್ ಮೂಲಕ ಸಮಾಜಮುಖಿ ಕಾರ್ಯಕ್ರಮಗಳು ನಿರಂತರ ಸಾಗಿ ಬರಲಿ ಎಂದು ಜನಾರ್ಧನ ಜನ ಕಲ್ಯಾಣ ಸೇವಾ ಸಮಿತಿಯ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಹೇಳಿದರು. ಎರ್ಮಾಳ್ ಜನಾರ್ದನ ದೇವಸ್ಥಾನದ ಜನಾರ್ದನ ಜನ ಕಲ್ಯಾಣ ಸಭಾಂಗಣದಲ್ಲಿ ಆಯೋಜಿಸಿದ್ದ ಪುಷ್ಪಾನಂದ ಫೌಂಡೇಶನ್ ವತಿಯಿಂದ ಪಡುಬಿದ್ರಿ, ಹೆಜಮಾಡಿ, ಪಲಿಮಾರು, ಎಲ್ಲೂರು, ಬೆಳಪು, ತೆಂಕ ಮತ್ತು ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ 325 ವಿದ್ಯಾರ್ಥಿಗಳಿಗೆ ರೂ. 3.75 ಲಕ್ಷದ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಶೀಲಾ ಕೆ ಶೆಟ್ಟಿ ಮಾತನಾಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಪುಷ್ಪಾನಂದ ಫೌಂಡೇಶನ್ ಸಮಾಜಮುಖಿ ಕಾರ್ಯಚಟುವಟಿಕೆ ಇತರರಿಗೂ ಪ್ರೇರಣೆಯಾಗಲಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುಷ್ಪನಂದ ಫೌಂಡೇಶನ್ ಪ್ರವರ್ತಕ ಯಶ್ ಪಾಲ್ ಎ. ಸುವರ್ಣ ಮಾತನಾಡಿ ಫೌಂಡೇಶನ್ ಮೂಲಕ ಕಾಪು ವಿಧಾನ ಸಭಾ ಕ್ಷೇತ್ರದ 26 ಗ್ರಾಮ ಪಂಚಾಯತ್ ಮತ್ತು ಪುರಸಭೆ ವ್ಯಾಪ್ತಿಯ ಸುಮಾರು 1500 ವಿದ್ಯಾರ್ಥಿಗಳಿಗೆ ರೂ. 15 ಲಕ್ಷ ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲು ಯೋಜನೆ ರೂಪಿಸಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಿದ್ದು, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಇನ್ನೂ ಉತ್ತಮ ಸಾಧನೆ ಮಾಡಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು.

ಸಮಾರಂಭದಲ್ಲಿ ಮುಂಬಯಿ ಉತ್ತರ ಬಿಜೆಪಿ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕೇಸರಿ ಯುವರಾಜ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನೀತಾ ಗುರುರಾಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಸ್ತೂರಿ ಪ್ರವೀಣ್, ಬಡಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಕುಂತಳ, ಪಡುಬಿದ್ರೆ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ಉದ್ಯಮಿ ಕಿಶೋರ್ ಶೆಟ್ಟಿ, ಜೇಸಿಐ ಪಡುಬಿದ್ರಿ ಅಧ್ಯಕ್ಷರಾದ ಶರತ್ ಶೆಟ್ಟಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಕಟಪಾಡಿ : ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ - ಪಂಡಿತ್ ದೀನ್ ದಯಾಳ್ ನುಡಿ ನಮನ

Posted On: 25-09-2022 03:13PM

ಕಟಪಾಡಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಸದಸ್ಯರಾಗಿ, ಸಂಘದ ಪ್ರಚಾರ ಕರಾಗಿ,ಜನಸಂಘದ ಸ್ಥಾಪನೆಗೆ ಕಾರಣಿಕರ್ತರಾಗಿ ನಂತರ ಅಖಂಡ ಭಾರತದ ನಿರ್ಮಾಣಕ್ಕಾಗಿ ಶ್ರಮಿಸಿ ಹಿಂದುತ್ವ ಸಿದ್ದಾಂತವನ್ನು ಪ್ರತಿಪಾದಿಸಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ 106 ನೇ ಜನ್ಮದಿನದ ಪ್ರಯುಕ್ತ ನುಡಿ ನಮನ ಕಾರ್ಯಕ್ರಮವು ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇವರ ವತಿಯಿಂದ ಸಂಘದ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ಹರಿಶ್ಚಂದ್ರ ಕೋಟ್ಯಾನ್, ವಾಸು ಪೂಜಾರಿ, ಮಾಜಿ ಪಂಚಾಯತ್ ಸದಸ್ಯರಾದ ಶ್ರೀಧರ್ ಮಾಬ್ಯಾನ್, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಅಕ್ಟೋಬರ್ 3 : ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ, ಶಂಕರಪುರದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ಕಾರ್ಯಕ್ರಮ

Posted On: 25-09-2022 03:03PM

ಕಾಪು : ಶ್ರೀ ಸಾಯಿ ಈಶ್ವರ್ ಗುರೂಜಿ ದಿವ್ಯ ಸಂಕಲ್ಪದಲ್ಲಿ ದುರ್ಗಾಷ್ಟಮಿಯ ಪ್ರಯುಕ್ತ ದ್ವಾರಕಾಮಾಯಿ ಮಠ ಉಡುಪಿ ಜಿಲ್ಲೆಯ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ,ಶಂಕರಪುರ ಇಲ್ಲಿ ಶ್ರೀ ಸೌಭಾಗ್ಯ ಹೆಣ್ಣಿನ ಭಾಗ್ಯೋದಯದ ಬೆಳಕು ಎಂಬ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 03, ಸೋಮವಾರ ಬೆಳಿಗ್ಗೆ 9:30 ರಿಂದ 7 ವರ್ಷದಿಂದ 19 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ಕಾರ್ಯಕ್ರಮ ಜರಗಲಿದೆ. ಮೊದಲೇ ಹೆಸರು ನೊಂದಾವಣಿ ಮಾಡಿಕೊಂಡವರಿಗೆ ಮಾತ್ರ ಈ ಅವಕಾಶವಿದೆ.

ಮೂಗುತಿ ಧಾರಣೆಯ ಬಗ್ಗೆ :ಶ್ರೀ ಸಾಯಿ ಈಶ್ವರ್ ಗುರೂಜಿ ಸಂಕಲ್ಪದಲ್ಲಿ ನವರಾತ್ರಿಯ ಪರ್ವ ಕಾಲದಲ್ಲಿ ಹೆಣ್ಣು ಮಕ್ಕಳ ಸೌಭಾಗ್ಯಕ್ಕಾಗಿ ಉಚಿತ ಮೂಗುತಿ ಧಾರಣೆಯು ಹೆಣ್ಣುಗಳ ಭಾಗ್ಯಕ್ಕೆ, ಮಕ್ಕಳ ಕೋಪ, ಹಠ, ಚಂಚಲತೆ ನಿಗ್ರಹಿಸುತ್ತದೆ ಈ ಸುಂದರ ಮೂಗುತಿ. ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ವಿಶೇಷ ಮಹತ್ವವನ್ನು ಕೊಡಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ ಆದ್ದರಿಂದ ಮೂಗುತಿ ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯ ನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಕುದುರೆಗೆ ಮೂಗಿಗೆ ದಾರ ಹಾಕಿ ನಿಯಂತ್ರಿಸುವುದನ್ನು ನೋಡಿರಬಹುದು. ಅದೇ ರೀತಿಯಲ್ಲಿಯೇ ಮೂಗುತ್ತಿ ಕೂಡ ಹೆಣ್ಣಿನ ಕೋಪ, ಹಠ, ಚಂಚಲತೆಯನ್ನು ನಿಗ್ರಹಿಸುತ್ತದೆ. ಮೂಗುತಿ ಮಹಿಳೆಯರ ಶ್ವಾಸಮಾರ್ಗವನ್ನು ರಕ್ಷಿಸುತ್ತದೆ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ. ಮೂಗಿನ ಸುತ್ತಲಿನ ವಾಯು ಮಂಡಲವೂ ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹ ಪ್ರವೇಶಿಸಲು ಸುಲಭವಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಮೂಗುತಿಯನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಇದಕ್ಕೆ ಕಾರಣ, ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಗಂಗಳಿಗೆ ಸಂಬಂಧಿಸಿದ ನರವು ಮೂಗಿನ ಎಡ ಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ. ಇದೇ ಕಾರಣದಿಂದಾಗಿ ಮೂಗುತಿಯನ್ನು ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಜೊತೆಗೆ ಇದು ಮಹಿಳೆಯರ ಹೆರಿಗೆ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೆ ವಿಚ್ಚೇದನೆ ಹಾಗೂ ಬಂಜೆತನ ಹೆಚ್ಚಾಗುತ್ತಿರುವುದನ್ನು ಅರಿತುಕೊಂಡ ಶ್ರೀ ಸಾಯಿ ಈಶ್ವರ್, ಹೆಣ್ಣು ಮಕ್ಕಳು ಈ ದೇಶದ ಆಸ್ತಿ ಮತ್ತು ಅವರ ಜೀವನವು ಸುಖಮಯವಾಗಿರಬೇಕೆಂದು ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಪ್ರತಿವರ್ಷ ನವರಾತ್ರಿಯ ದುರ್ಗಾಷ್ಟಮಿಯಂದು ನೂರಾರು ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿಯನ್ನು ಚುಚ್ಚುವ ಪುಣ್ಯ ಸೇವೆಯನ್ನು ನಡೆಸುತ್ತ ಬರುತ್ತಿದ್ದರೆ ಹೆಣ್ಣು ಮಕ್ಕಳು ದರಿಸುವ ಮೂಗುತಿಯ ಮಹತ್ವವನ್ನು ಸಾರುವುದರೊಂದಿಗೆ ನಮ್ಮ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೂ ಈ ಸೇವೆಯನ್ನು ಮುಂದುವರಿಸುವ ಸಂಕಲ್ಪವನ್ನು ಮಾಡಿರುತ್ತಾರೆ. ಈ ಪುಣ್ಯ ಸೇವೆಯಲ್ಲಿ ತಾವು ಕೈ ಜೋಡಿಸಿ ಪೋತ್ಸಾಹಿಸಿ ಎಂದು ಶ್ರೀ ಸಾಯಿ ಈಶ್ವರ್ ಗುರೂಜಿ ದಾನಿಗಳಲ್ಲಿ ಮನವಿ ಮಾಡಿರುತ್ತಾರೆ.

ಶಟಲ್‌ ಬ್ಯಾಡ್ಮಿಂಟನ್‌ ನಲ್ಲಿ ಕ್ರಿಯೇಟಿವ್‌ ಕಾಲೇಜಿನ ಲೇಖನಾ ರಾಜ್ಯಮಟ್ಟಕ್ಕೆ ಆಯ್ಕೆ

Posted On: 24-09-2022 11:18PM

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲ್ಪಟ್ಟ ಉಡುಪಿ ಜಿಲ್ಲಾ ಮಟ್ಟದ ಶಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪ ಪೂ ಕಾಲೇಜಿನ ಕುಮಾರಿ ಲೇಖನಾ ಬಾಲಕಿಯರ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ 18 ರ ವಯೋಮಿತಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಮುಂದಿನ ರಾಜ್ಯಮಟ್ಟದ ತಂಡದಲ್ಲಿ ಆಡುವ ಅವಕಾಶ ಗಳಿಸಿದ್ದಾರೆ.

ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರವಲ್ಲದೆ ಕ್ರೀಡಾ ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗುತ್ತಿದೆ. ಕ್ರಿಯೇಟಿವ್‌ ಈ ಹಿಂದೆಯೂ ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದು ಪ್ರಶಂಸೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳ ಸಾಧನೆಯನು ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ತಂಡದ ಸಂಯೋಜಕ ಮಹೇಶ್‌ ಶೆಣೈ, ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನಂಜೆ : ಹಾಲು ಉತ್ಪಾದಕರ ಸಂಘದ ಮಹಾಸಭೆ, ಸನ್ಮಾನ

Posted On: 24-09-2022 11:09PM

ಇನ್ನಂಜೆ : ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಇನ್ನಂಜೆ ದಾಸ ಭವನದಲ್ಲಿ ಜರಗಿತು. ಈ ಸಂದರ್ಭ ಮಾತನಾಡಿದ ಅವರು ಸದಸ್ಯರು ಉತ್ತಮ ಗುಣ ಮಟ್ಟದ ಮತ್ತು ಹೆಚ್ಚು ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸಿದ್ದರಿಂದ ನಮ್ಮ ಸಂಘವು ಉಡುಪಿ ತಾಲೂಕಿನಲ್ಲಿಯೇ ಅತ್ಯುತ್ತಮ ಸಂಘವಾಗಿ ಮೂಡಿ ಬಂದಿದೆ. ಮುಂದೆಯೂ ಇದೇ ರೀತಿಯ ಬೆಂಬಲದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.

ಒಕ್ಕೂಟದ ಪಶು ವೈದ್ಯಾಧಿಕಾರಿ ಪ್ರಶಾಂತ್ ಮಾತನಾಡಿ ಲಾಭದಾಯಕ ಹೈನುಗಾರಿಕೆ ಬಗ್ಗೆ ರಾಸುವಿನ ಆರೋಗ್ಯದ ದೃಷ್ಟಿಯಲ್ಲಿ ಪ್ರತಿದಿನ ಖನಿಜ ಲವಣ ಮಿಶ್ರಣ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಸಾಮೂಹಿಕ ಜಂತುಹುಳದ ಔಷಧಿಯನ್ನು ನೀಡಲು, ಸದಸ್ಯರಿಗೆ ತಿಳಿಸಿದರು. ಒಕ್ಕೂಟದಿಂದ ಸಂಘದ ಸದಸ್ಯರಿಗೆ ಸಿಗುವ ಅನುದಾನದ ಬಗ್ಗೆ ಹಾಲಿನ ಗುಣಮಟ್ಟದ ಬಗ್ಗೆ ವಿಸ್ತರಣಾಧಿಕಾರಿ ಯಶವಂತ್ ತಿಳಿಸಿದರು. ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿ, ಕೆ.ಎಂ.ಎಫ್. ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಿ. ಅಶೋಕ್ ರವರ ಸಮ್ಮುಖದಲ್ಲಿ ಸಂಘದ ಸಕ್ರಿಯ ಹಿರಿಯ ಸದಸ್ಯರಾದ ರಾಘು ಶೆಟ್ಟಿ, ಶ್ರೀನಿವಾಸ ಕೋಟ್ಯಾನ್ ಮತ್ತು ಪ್ರಭಾವತಿ ಪೂಜಾರ್ತಿ ಇವರನ್ನು ಸರ್ವ ಸದಸ್ಯರ ಪರವಾಗಿ ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ. 85 ಕ್ಕಿಂತ ಅಂಕಗಳಿಸಿದ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಂಘವು 2021-2022 ಸಾಲಿನಲ್ಲಿ ನಿವ್ವಳ ಲಾಭ ರೂ. 7,18,247.40 ಗಳಿಸಿದ್ದು ಶೇ 15 ಡಿವಿಡೆಂಡ್ ಘೋಷಿಸಲಾಯಿತು. ಪ್ರಸಕ್ತ ಸಾಲಿನಲ್ಲ ಹಾಲು ಸರಬರಾಜು ಮಾಡಿದ ಸದಸ್ಯರಿಗೆ ರೂ. 3,08, 828.26 ಬೋನಸ್ಸು ಹಾಗೂ ಶೇ 1 ರಂತೆ ರೂ. 91, 288 ಪ್ರೋತ್ಸಾಹಧನ ನೀಡಲಾಯಿತು.

ಅಧಿಕ ಹಾಲು ಸರಬರಾಜು ಮಾಡಿದ ಆಶಾ ಪ್ರಥಮ, ರಾಘವೇಂದ್ರ ಉಪಾಧ್ಯಾಯ ದ್ವಿತೀಯ ಮತ್ತು ಸುನೀತಾ ಶೆಟ್ಟಿ ತೃತೀಯ ಬಹುಮಾನವನ್ನು ಪಡೆದರು. ಸಂಘದ ನಿರ್ದೇಶಕರಾದ ಆರ್.ಎಲ್.ಉಪಾಧ್ಯಾಯ, ರಾಮ ಕೆ. ಶೆಟ್ಟಿ, ನಾಗರಾಜ ಮುಚ್ಚಿನ್ನಾಯ, ಸುಮತಿ ಪಿ.ಅಂಚನ್, ಉದಯ ಜಿ, ಶಿವರಾಮ ಶೆಟ್ಟಿ, ಜಯ ಕೆ. ಪೂಜಾರಿ , ಉಮೇಶ್ ಆಚಾರ್ಯ, ಬೇಬಿ ಎಂ.ಪೂಜಾರಿ ಮತ್ತು ಪದ್ಮ ಮುಖಾರ್ದಿ ಉಪಸ್ಥಿತರಿದ್ದರು. ಸಂಘದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಎಸ್. ಭಟ್‌ ರವರು ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಉಚ್ಚಿಲ ದಸರಾ : ವಿದ್ಯುತ್ ದೀಪಾಲಂಕಾರದ ಉದ್ಘಾಟನೆ

Posted On: 24-09-2022 08:48PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದಸರಾ ಉತ್ಸವದ ಪೂರ್ವ ಭಾವಿಯಾಗಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸುಮಾರು 17 ಕಿಮೀ ಉದ್ದಕ್ಕೆ ವಿದ್ಯುತ್ ದೀಪ ಅಲಂಕಾರದ ಉದ್ಘಾಟನೆಯನ್ನು ನಾಡೋಜ ಜಿ.ಶಂಕರ್‌ ರವರು ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಸಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ಉಚ್ಚಿಲ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಕರ್ನಾಟಕದ ಇತರ ಕಡೆಗಳಲ್ಲಿ ಜರಗುವಂತೆ ಇಲ್ಲಿ ಕೂಡ ಅತ್ಯಂತ ವಿಜೃಂಭಣೆಯಿಂದ ದಸರಾ ಆಚರಿಸಲು ನಮ್ಮ ಸಮಿತಿ ಎಲ್ಲ ಏರ್ಪಾಟು ಮಾಡಿದ್ದಾರೆ. ಪ್ರತಿದಿನ ಅನ್ನಸಂತರ್ಪಣೆ ಕಾರ್ಯಕ್ರಮ ಕೂಡಾ ಇರುತ್ತದೆ. ವಿದ್ಯುತ್ ಅಲಂಕಾರ ಸಾಂಕೇತಿಕವಾಗಿ ಇಂದು ಉದ್ಘಾಟನೆ ಮಾಡಿದ್ದೇವೆ. ಜಲಸ್ತಂಭನ ಕಾರ್ಯಕ್ರಮ ವಿನೂತನ ರೀತಿಯಲ್ಲಿ ನವದುರ್ಗೆಯರ ಹಾಗೂ ಶಾರದಾ ಮೂರ್ತಿಗಳನ್ನು ಇಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಹೆಜಮಾಡಿ ತನಕ ಹೋಗಿ ವಾಪಾಸು ಕಾಪು ತನಕ ಟ್ಯಾಬ್ಲೋ ಸಹಿತ ಮೆರವಣಿಗೆಯ ಮ‌ೂಲಕ ದೀಪಸ್ತಂಭದ ಬಳಿ ಸಮುದ್ರದಲ್ಲಿ ಜಲಸ್ಥಂಭನೆ ಮಾಡಲಾಗುವುದು ಎಂದರು.

ಈ ಸಂದರ್ಭ ದೇವಳದ ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ಕಾಪು : ಕುಂಜೂರಿನಲ್ಲಿ ಶರನ್ನವರಾತ್ರಿ ರಮೋತ್ಸವ

Posted On: 24-09-2022 08:46PM

ಕಾಪು : ಕುಂಜೂರಿನ ಶ್ರೀದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ರಮೋತ್ಸವವು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 4 ರ ಪರ್ಯಂತ ವೈಭವದಲ್ಲಿ ನೆರವೇರಲಿದೆ.

ಪ್ರತಿದಿನ ಉಷಃಕಾಲ ಪೂಜೆಯೊಂದಿಗೆ ಆರಂಭಗೊಂಡು ಚಂಡಿಕಾಯಾಗ ಹಾಗೂ ದುರ್ಗಾ ಹೋಮ,ಲಕ್ಷ್ಮೀ ಹೃದಯ ಹೋಮ,ಶ್ರೀಸೂಕ್ತ ಹೋಮ ಸಹಿತ ವಿವಿಧ ದುರ್ಗಾ ಹೋಮಗಳು,ವಾಯನ ದಾನ- ಕನ್ನಿಕಾ ಪೂಜೆಗಳು ಒಂಬತ್ತು ದಿನಗಳಲ್ಲೂ ನಡೆಯುವುದು.

ಮಧ್ಯಾಹ್ನ ಅಲಂಕಾರ ಪೂಜೆ, ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ. ಸಂಜೆ ದೀಪಾರಾಧನೆ,ಗಣಪತಿ ರಂಗಪೂಜೆ,ಹೂವಿನ ಪೂಜೆ,ನವರಾತ್ರಿ ಪೂಜೆಗಳು ನಡೆಯುವುದು. ಮಹಾನವಮಿಯಂದು ಸಾಮೂಹಿಕ ಹೂವಿನ‌ಪೂಜೆ,ಪುಸ್ತಕ ಪೂಜೆ ನಡೆಲಿದೆ. ವಿಜಯ ದಶಮಿಯಂದು ಸಾಮೂಹಿಕ ದುರ್ಗಾನಮಸ್ಕಾರ ಹೀಗೆ ನವರಾತ್ರಿ ಆಚರಣೆ ನೆರವೇರುವುದು ,ಪ್ರತಿನಿತ್ಯ ಹೂವಿನ ಅಲಂಕಾರವಿರುತ್ತದೆಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.