Updated News From Kaup

ಶಬ್ಬೀರ್ ಎಸ್ ಅಭಿಮಾನಿ ಬಳಗದಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರಿಗೆ ಅಭಿನಂದನೆ

Thumbnail
Posted On: 17 Jan 2023, 12:41 PM

ಕಾಪು : ಶಬ್ಬೀರ್ ಎಸ್ ಅಭಿಮಾನಿ ಬಳಗ ಮಂಗಳೂರು ವತಿಯಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರ ರವರನ್ನು ಬಟರ್ ಫ್ಲೈ ಗೆಸ್ಟ್ ಹೌಸ್ ನಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿ.ಕೆ.ಡಿ.ಸಿ.ಸಿ ಪ್ರದಾನ ಕಾರ್ಯದರ್ಶಿ ಶಬ್ಬೀರ್ ಸಿದ್ದಕಟ್ಟೆ ಮಾತನಾಡಿ ಫಾರೂಕ್ ಚಂದ್ರನಗರ ಉಡುಪಿ ಜಿಲ್ಲೆಯ ಹತ್ತಾರು ಗ್ರಾಮದಲ್ಲಿ ಉತ್ತಮ ಸಮಾಜ ಸೇವೆ ಸಲ್ಲಿಸಿದ್ದಾರೆ ಅದಕ್ಕಾಗಿ ಅವರಿಗೆ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಆ ನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಕೂಡ ಅವರ ಪಾಲಿಗೆ ಬಂದಿರುತ್ತದೆ. ಇನ್ನು ಮುಂದೆಯೂ ದೇವರು ಅವರಿಗೆ ಇನ್ನಷ್ಟು ಶಕ್ತಿ ಕೊಟ್ಟು ಬಡವರ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೂಡುಬಿದ್ರೆ ಅಳ್ವಾಸ್ ಪಿ.ಯು ಕಾಲೇಜು ಪ್ರಾಂಶುಪಾಲರಾದ ಮೊಹಮ್ಮದ್ ಸದಕತ್, ಮಾಜಿ ವಿಲೇಜ್ ಅಕೌಂಟೆಂಟ್ ಸುಲೈಮಾನ್ ಬಜಗೋಳಿ, ಉದ್ಯಮಿ ಶಬ್ಬೀರ್ ಅಲ್ತಾಫ್, ಮಾಜಿ ವಿ.ಎಸ್.ಎಸ್.ಎನ್ ಬ್ಯಾಂಕ್ ಮೆನೇಜರ್ ಮೊಹಮ್ಮದ್ ವೇಣೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಡ್ವೆ-ನಂದಿಕೂರು ಕಂಬಳ - ಕಂಬಳ‌ ನೋಡಬೇಕೆನ್ನುವ ಹಂಬಲವಿತ್ತು, ನೋಡಿ ಧನ್ಯನಾದೆ : ಪ್ರಮೋದ್ ಮುತಾಲಿಕ್

Thumbnail
Posted On: 15 Jan 2023, 11:44 PM

ಪಡುಬಿದ್ರಿ : ಕಂಬಳದ ಬಗ್ಗೆ ಆಸಕ್ತಿ ಇತ್ತು. ನೋಡಬೇಕೆನ್ನುವ ಹಂಬಲವೂ ಇತ್ತು. ಅದು ಇಂದು ಅಡ್ವೆ- ನಂದಿಕೂರು ಕಂಬಳದಲ್ಲಿ ಈಡೇರಿದೆ. ಮೊದಲನೆಯ ಬಾರಿ ಕಂಬಳ ನೋಡಿ ಧನ್ಯನಾದೆ. ಜಾತಿ,ಮತ, ಶ್ರೀಮಂತ, ಬಡವನೆಂಬ ಬೇಧವಿಲ್ಲದೆ, ಎಲ್ಲರ ಕ್ರೀಡೆ ಎನ್ನಬಹುದು. ರೈತವರ್ಗಕ್ಕೆ ಪ್ರೋತ್ಸಾಹ, ಆನಂದ ಕೊಡುವ ಕ್ರೀಡೆ. ಗ್ರಾಮೀಣ ಭಾಗದ ಕಂಬಳವು ದೇಶದಲ್ಲಿ ಆಕರ್ಷಕವಾದಂತಹ ಕ್ರೀಡೆ. ತುಳು ಭಾಷೆ ಗ್ರಾಮೀಣ ಭಾಷೆ, ಶ್ರೇಷ್ಠ ಭಾಷೆ, ಪುರಾತನ ಭಾಷೆ ಸರಕಾರ ಮಾನ್ಯತೆ ನೀಡಬೇಕೆಂದು ಸರಕಾರಕ್ಕೆ ಆಗ್ರಹಿಸುತ್ತೇನೆ. ಈ ಭಾಗದಲ್ಲಿ ಧಾರ್ಮಿಕತೆಗೆ ಒತ್ತು ನೀಡುತ್ತಾ ಭಜನಾ ಸಂಸ್ಕೃತಿಗೂ ಕೂಡ ಮಹತ್ವ ನೀಡಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಹೇಳಿದರು. ಅವರು ಆದಿತ್ಯವಾರ ಪಡುಬಿದ್ರಿ ಸಮೀಪದ ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ 30ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿರಂತರ 30 ವರ್ಷಗಳಿಂದ ಕಂಬಳ ಆಯೋಜಿಸಿದ ಸಂಘಟಕರಿಗೆ ಮತ್ತು ಭಾಗವಹಿಸಿದ ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು. ಈ ಸಂದರ್ಭ ಗಣ್ಯರು, ಕಂಬಳಾಭಿಮಾನಿಗಳು ಉಪಸ್ಥಿತರಿದ್ದರು.

ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮದ ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Thumbnail
Posted On: 15 Jan 2023, 10:40 PM

ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗ ಇದರ ಸಭೆಯಲ್ಲಿ ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ನಡೆಯುವ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಬಗ್ಗೆ ಮಾಹಿತಿ ಮತ್ತು ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮದ ದಶಮಾನೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ನವೀನ ಆಚಾರ್ಯ ಪಡುಬಿದ್ರಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ನಾವು ಪ್ರತಿದಿನ ಶ್ರದ್ದಾ ಭಕ್ತಿಯಿಂದ ಕುಲ ದೇವರನ್ನು ನೆನೆದು ಪ್ರಾರ್ಥಿಸಿದರೆ ನಿಮ್ಮ ಕೆಲಸ ಕಾರ್ಯ ಸುಗಮ ರೀತಿಯಲ್ಲಿ ನಡೆಯುತ್ತದೆ ದೇವರಿಗೆ ನಾವು ಶರಣಾದರೆ ದೇವರು ನಮಗೆ ಶರಣಾಗುತ್ತಾನೆ ಎಂದರು. ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ವಿಶ್ವ ಬ್ರಾಹ್ಮಣ ಯುವ ಸಂಘಟನೆಯ ಅಧ್ಯಕ್ಷರಾದ ಸುಧಾಕರ ಆಚಾರ್ಯ ಬಿಳಿಯಾರು, ಬಂಟಕಲ್ಲು ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮುರಳಿಧರ ಆಚಾರ್ಯ, ಸ್ಥಳೀಯ ಮೊಕ್ತೇಸರರು, ಯುವ ಸಂಗಮದ ಗೌರವಾಧ್ಯಕ್ಷ ಸುರೇಶ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಭಾಸ್ಕರಾಚಾರ್ಯ, ಶೋಭಾ ಶಂಕರಚಾರ್ಯ ಉಪಸ್ಥಿತರಿದ್ದರು. ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿ, ದಶಮಾನೋತ್ಸವದ ಸಂಚಾಲಕ ಪ್ರಶಾಂತ್ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಮಾಧವಾಚಾರ್ಯ ಕಾರ್ಯಕ್ರಮ ನಿರೂಪಿಸಿದರು

ಮುದರಂಗಡಿ : ಸಿ.ಎ. ಪರೀಕ್ಷೆಯಲ್ಲಿ ದೀಕ್ಷಾ ಶೆಣೈ ತೇರ್ಗಡೆ

Thumbnail
Posted On: 15 Jan 2023, 03:49 PM

ಮುದರಂಗಡಿ : ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ನಡೆಸಿದ ಪ್ರತಿಷ್ಠಿತ ಸಿ.ಎ. ಪರೀಕ್ಷೆಯಲ್ಲಿ ಕಾಪು ತಾಲೂಕಿನ ಮುದರಂಗಡಿಯ ದೀಕ್ಷಾ ಶೆಣೈ ತೇರ್ಗಡೆಯಾಗಿರುತ್ತಾರೆ. ಇವರು ದೀಪಾ ಶೆಣೈ ಮತ್ತು ದಿವಾಕರ್ ಶೆಣೈ ಮುದರಂಗಡಿ ಇವರ ಪುತ್ರಿ.

ಇಂದು ಅಡ್ವೆ-ನಂದಿಕೂರು ಕಂಬಳ

Thumbnail
Posted On: 15 Jan 2023, 12:03 PM

ಪಡುಬಿದ್ರಿ : ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ 30ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳೋತ್ಸವ ಜನವರಿ 15, ಆದಿತ್ಯವಾರ ಅಡ್ವೆ ನಂದಿಕೂರಿನಲ್ಲಿ ನಡೆಯಲಿದೆ. ಕನೆ ಹಲಗೆ, ಅಡ್ಡಹಲಗೆ, ನೇಗಿಲು ಕಿರಿಯ ಮತ್ತು ಹಿರಿಯ, ಹಗ್ಗ ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಹಗ್ಗ ಹಿರಿಯ ವಿಭಾಗದ ವಿಜೇತ ಕೋಣಗಳನ್ನು ಓಡಿಸಿದ ಓಟಗಾರನಿಗೆ ದಿ. ನಡುಮುಗೇರಗುತ್ತು ಕರುಣಾಕರ ಶೆಟ್ಟಿ ಸ್ಮರಣಾರ್ಥ ಒಂದು ಪವನ್ ವಿಶೇಷ ಬಹುಮಾನ ನೀಡಲಾಗುತ್ತದೆ.

ಕಾಪು : ಸೈಂಟ್ ಜಾನ್ಸ್ ಶಂಕರಪುರ ಶಾಲೆಯಲ್ಲಿ ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಮಾಹಿತಿ ಕಾರ್ಯಾಗಾರ

Thumbnail
Posted On: 15 Jan 2023, 11:52 AM

ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ಇವರ ವತಿಯಿಂದ ವಿವೇಕಾನಂದರ ಜನ್ಮದಿನದ ಅಂಗವಾಗಿ ಸೈಂಟ್ ಜಾನ್ಸ್ ಶಂಕರಪುರ ಇಲ್ಲಿಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಮಾದಕ ದ್ರವ್ಯ, ಡ್ರಗ್ಸ್ ಬಗ್ಗೆ ಮಾಹಿತಿಯನ್ನು ಜೆಸಿಐ ಇಂಡಿಯಾ ತರಬೇತುದಾರರು ಆದ ಪಿಪಿಪಿ ಜೆಸಿ ರಾಕೇಶ್ ಕುಂಜೂರು ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಂಕರಪುರದ ಅಧ್ಯಕ್ಷರಾದ ಜೆಸಿ ಮಾಲಿನಿ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯರಾದ ಅಶ್ವಿನ್ ರೋಡ್ರಿಗಸ್, ವಿದ್ಯಾರ್ಥಿ ನಾಯಕಿ ಮರೀನಾ ಕ್ರಾಸ್ಟ, ಜೆಸಿ ಶಂಕರಪುರದ ಪೂರ್ವ ಅಧ್ಯಕ್ಷೆ ಸೀಮಾಮಾರ್ಗರೇಟ್ ಉಪಸ್ಥಿತರಿದ್ದರು. ಅಧ್ಯಕ್ಷರು ಸ್ವಾಗತಿಸಿದರು. ಸಿಲ್ವಿಯಾ ಕಾಸ್ಟಲಿನೋ ಪ್ರಾರ್ಥಿಸಿದರು. ಜೆಸಿ ಸಂತೋಷ್ ಕುಮಾರ್ ವಂದಿಸಿದರು.

ಓಮನ್ ಬಿಲ್ಲವಾಸ್ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ

Thumbnail
Posted On: 12 Jan 2023, 09:59 PM

ಓಮನ್ ಬಿಲ್ಲವಾಸ್ ಇದರ 2023-24ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಜನವರಿ 6ರಂದು ಮಸ್ಕತಿನ ಅಜೈಬ ಗಾರ್ಡನ್ ಸಭಾಂಗಣದಲ್ಲಿ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮ ಜರಗಿತು. ನೂತನ ಸಾಲಿನ ಅಧ್ಯಕ್ಷರಾಗಿ ಸುಜಿತ್ ಎಸ್ ಅಂಚನ್ ಪಾಂಗಾಳ ಮತ್ತು ವಿವಿಧ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಬ್ರಹ್ಮಶ್ರೀ ನಾರಾಯಣ ಗುರುದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹಿರಿಯರಾದ ರಾಮಕೃಷ್ಣ ಸುಜೀರ್ ಪ್ರಮಾಣ ವಚನ ಬೋಧಿಸಿ, ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಸದಸ್ಯರಾದ ಡಾ. ಅಂಚನ್ ಸಿ ಕೆ, ಆಯ್ಕೆ ಸಮಿತಿಯ ಕೃಷ್ಣಪ್ರಸಾದ್ ಮತ್ತು ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು ಹಾಗೂ ಹಾಗೂ ವಿವಿಧ ಬಿಲ್ಲವ ಸಮಾಜದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಕಳ : ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

Thumbnail
Posted On: 12 Jan 2023, 06:51 PM

ಕಾರ್ಕಳ : ಇಲ್ಲಿನ ಕ್ರಿಯೇಟಿವ್‌ ಪಿಯು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಹಿಂದಿ ಉಪನ್ಯಾಸಕರಾದ ವಿನಾಯಕ ಜೋಗ್‌ ವಿವೇಕಾನಂದರ ಚೈತನ್ಯ ಶಕ್ತಿ ಯುವ ಮನಸ್ಸುಗಳಲ್ಲಿ ಮೊಳೆಯಲ. ತನ್ಮೂಲಕ ದೇಶದ ಭವಿತವ್ಯವನ್ನು ,ಸುಭದ್ರ ಭಾರತದ ನಿರ್ಮಾಣ ಮಾಡಲು ಯುವ ಸಮುದಾಯ ಕಾರ್ಯಪ್ರವೃತ್ತವಾಗಲಿ ಎಂದು ಕರೆ ನೀಡಿದರು. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ಗಣಪತಿ ಭಟ್‌ ಕೆ.ಎಸ್. ನುಡಿಯುತ್ತಾ ಇಂದಿನ ಕಾಲದಲ್ಲಿ ಯುವಕರೆಲ್ಲರೂ ಒಂದಾಗಿ ಜಗತ್ತಿನ ಪ್ರಮುಖ ಶಕ್ತಿಯಾಗಿ ಬೆಳೆಯಲಿ ಎಂದು ಹಾರೈಸಿದರು. ವಿದ್ಯಾರ್ಥಿನಿ ವಿಂಧ್ಯಾ ಹೆಗಡೆ ವಿವೇಕಾನಂದರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಉಮೇಶ್‌, ರಾಮಕೃಷ್ಣ ಹೆಗಡೆ, ರಾಘವೇಂದ್ರ ರಾವ್‌, ಗಿರೀಶ್‌ ಭಟ್‌, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಕಾಶ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಅನಘಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲಾಧ್ಯಕ್ಷರಾಗಿ ಪರಿಮಳ ಮಹೇಶ್ ರಾವ್ ಅಧಿಕಾರ ಸ್ವೀಕಾರ

Thumbnail
Posted On: 10 Jan 2023, 11:08 PM

ಮಂಗಳೂರು : ವೃತ್ತಿಯಲ್ಲಿ ವಕೀಲೆ ಪ್ರವೃತ್ತಿಯಲ್ಲಿ ಕವಯತ್ರಿ ಮಕ್ಕಳ ಸಾಹಿತಿಯಾಗಿರುವ ಮಂಗಳೂರು ಮೂಲದ ಪರಿಮಳ ಮಹೇಶ್ ರಾವ್ ಇವರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದ.ಕ.ಜಿಲ್ಲಾ ಅಧ್ಯಕ್ಷ ರಾಗಿ ಇಂದು ಅಧಿಕಾರ ಸ್ವೀಕರಿಸಿದರು. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಜನವರಿ 9 ರಿಂದ 10ರ ತನಕ ನಡೆದ ಬೃಹತ್ ದ್ವಿತೀಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್.ಅಶೋಕ ನಿರ್ದೇಶನದಂತೆ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಅರುಣ್ ಅಧಿಕಾರ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಕುಸುಮ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಮಾಹಿತಿ ಕರಪತ್ರ ಬಿಡುಗಡೆ

Thumbnail
Posted On: 09 Jan 2023, 09:56 PM

ಕಾಪು : ನೂತನವಾಗಿ ಪ್ರಾರಂಭಗೊಂಡ ಕಳತ್ತೂರು ಚಂದ್ರನಗರದಲ್ಲಿರುವ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ನ ಮಾಹಿತಿ ಕರಪತ್ರವನ್ನು ಮಲ್ಲಾರು-ಮಜೂರು ಬದ್ರಿಯಾ ಜುಮ್ಮಾ ಮಸ್ಜಿದ್ ಧರ್ಮಗುರುಗಳಾದ ಅಬ್ದುರ್ರಶೀದ್ ಸಖಾಫಿ ಅಲ್-ಖಾಮಿಲ್ ರವರು ಕಾಪುವಿನ ಸಮಾಜ ಸೇವಕ ಲೀಲಾದರ ಕೆ ಶೆಟ್ಟಿಯವರ ನಿವಾಸದಲ್ಲಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಲೀಲಾದರ ಶೆಟ್ಟಿಯವರು ಮಾತನಾಡಿ ಫಾರೂಕ್ ಚಂದ್ರನಗರರವರು ಉತ್ತಮ ಸಮಾಜ ಸೇವಕರಾಗಿದ್ದು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವದಿಂದ ಕಾಣುವ ಹಸನ್ಮುಖಿ ವ್ಯಕ್ತಿಯಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಬಟರ್ ಫ್ಲೈ ಎಂಬ ಹೆಸರಿನಲ್ಲಿ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಪ್ರಾರಂಭ ಮಾಡಿದ್ದು ಹಣದ ಆಸೆಯನ್ನು ಬಿಟ್ಟು ಸಮಾಜ ಸೇವೆ ಮಾಡುವ ಮೂಲಕ ಸಾಮಾನ್ಯ ಜನರಿಗೂ ಕೂಡ ಸಮಾಧಾನಕರ ರೀತಿಯ ದರದಲ್ಲಿ ಸಿಗಲಿ ಎಂಬ ಉದ್ದೇಶದಿಂದ ಮಾಡಿರುತ್ತಾರೆ ನೂತನವಾಗಿ ಪ್ರಾರಂಭಿಸಿದ ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜನಸಂಪರ್ಕ ಜನಸೇವಾ ವೇದಿಕೆ ಕಾಪು ಇದರ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಉಳಿಯಾರು ಇದರ ಅಧ್ಯಕ್ಷರಾದ ನಾಗಭೂಷಣ್ ರಾವ್ , ರವಿ ಉಪಾಧ್ಯಾಯ ಕರಂದಾಡಿ, ಪ್ರಭಾತ್ ಮೂಳೂರು, ಶಂಶುದ್ಧಿನ್ ಇಸ್ಮಾಯಿಲ್ ಕರಂದಾಡಿ, ರವೀಂದ್ರ ಮಲ್ಲಾರು ಉಪಸ್ಥಿತರಿದ್ದರು. ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಇದರ ಆಡಳಿತ ನಿರ್ದೇಶಕರಾದ ಫಾರೂಕ್ ಚಂದ್ರನಗರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.