Updated News From Kaup

ಕಾಪು : ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನ - ಚಂಡಿಕಾಯಾಗ ಪೂರ್ಣಾಹುತಿ ; ಶ್ರೀ ದೇವಿಯ ದರ್ಶನ, ಕೆಂಡ ಸ್ನಾನ ಸಂಪನ್ನ

Posted On: 04-10-2022 09:02PM

ಕಾಪು : ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮಂಗಳವಾರ ಚಂಡಿಕಾಯಾಗದ ಪೂರ್ಣಾಹುತಿ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿಯ ನಂತರ ಅನ್ನಸಂತರ್ಪಣೆ ಸಂಜೆ ಶ್ರೀ ದೇವಿಯ ದರ್ಶನ ಜೊತೆಗೆ ಕೆಂಡ ಸ್ನಾನವು ಜರಗಿತು. ತದನಂತರ ಪ್ರಸಾದ ವಿತರಣೆಯು ಜರಗಿತು.

ಈ ಸಂದರ್ಭ ನಮ್ಮ ಕಾಪು ವೆಬ್ ನ್ಯೂಸ್ ನೊಂದಿಗೆ ಮಾತನಾಡಿದ ಲಕ್ಷ್ಮೀಜನಾರ್ಧನ ದೇವಳದ ವಿಶೇಷ ತಂತ್ರಿವರ್ಯ ಶ್ರೀಶ ತಂತ್ರಿಯವರು, ಶರನ್ನವರಾತ್ರಿ ಕಾಲದಲ್ಲಿ ದೇವಳದಲ್ಲಿ ನಿತ್ಯ ಬೆಳಗ್ಗೆ ಶಕ್ತಿ ಆರಾಧನೆ, ಗಣಯಾಗ, ಕಲ್ಪೋಕ್ತ ಪೂಜೆ, ಸಾಯಂಕಾಲ ದುರ್ಗಾಪೂಜೆ ನೆರವೇರುತ್ತಿದೆ. ಒಂದನೆಯ ಮಂಗಳವಾರ ಲಕ್ಷ್ಮಿ ಪ್ರವೇಶ ಎರಡನೆಯ ಮಂಗಳವಾರ ಚಂಡಿಕಾಯಾಗದ ಪೂರ್ಣಾಹುತಿ ಅನ್ನಸಂತರ್ಪಣೆ ನಡೆದಿರುತ್ತದೆ. ಹಿಂದಿನಿಂದ ಬಂದ ಪದ್ಧತಿಯಂತೆ ಎಲ್ಲಾ ಸೇವೆಗಳ ಸಸೂತ್ರವಾಗಿ ನಡೆಯುತ್ತಿದೆ. ಚಂಡಿಕಾಯಾಗ ಪೂರ್ಣಾಹುತಿಯ ಈಗಾಗಲೆ ನಡೆದಿದ್ದು ಭಕ್ತರ ಕಷ್ಟಕಾರ್ಪಣ್ಯಗಳನ್ನು ದೇವಿ ದೂರ ಮಾಡುತ್ತಾಳೆ. ಪ್ರತಿ ಮಂಗಳವಾರ ಸನ್ನಿಧಾನದಲ್ಲಿ ಪೂಜೆ ನಡೆಯುತ್ತದೆ. ಶರತ್ಕಾಲದ ಅಶ್ವಿಜ ಮಾಸದಲ್ಲಿ ನಡೆಯುವ ಹತ್ತು ದಿನದ ಉತ್ಸವದಲ್ಲಿ ದೇವಿಯನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳನ್ನು ದೇವಿ ಈಡೇರಿಸುತ್ತಾಳೆ ಇದು ಶಾಸ್ತ್ರ ನಿಯಮವಾಗಿದೆ ಎಂದರು.

ಶಂಕರಪುರ : ಟಿ ಬಿ ಕಾಯಿಲೆಯ ಬಗ್ಗೆ ಮಾಹಿತಿ ಶಿಬಿರ

Posted On: 04-10-2022 09:47AM

ಶಂಕರಪುರ : ರೋಟರಿ ಶಂಕರಪುರ, ಆರ್‌ ಸಿ ಸಿ ಕ್ಲಬ್ ಇನ್ನಂಜೆ, ಇನ್ನರ್ ವೀಲ್ ಕ್ಲಬ್ ಶಂಕರಪುರ ಜೊತೆಯಾಗಿ ಟಿ ಬಿ ಕಾಯಿಲೆಯ ಬಗ್ಗೆ ಮಾಹಿತಿ ಶಿಬಿರವು ಅಕ್ಟೋಬರ್ 3ರಂದು ರೋಟರಿ ಶತಾಬ್ದಿ ಭವನ ಶಂಕರಪುರದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಡಾ. ಶೈನಿ ಕ್ರಿಸ್ತಬೆಲ್ ರವರು ಟಿ ಬಿ ಕಾಯಿಲೆ ಯಾವ ರೀತಿ ಹರಡುತ್ತದೆ, ಸಂಘ ಸಂಸ್ಥೆಗಳು ಯಾವ ರೀತಿ ಸಹಾಯ ಮಾಡಬಹುದು, ಟಿ ಬಿ ಕಾಯಿಲೆ ಎಷ್ಟು ಸಮಯದಲ್ಲಿ ಗುಣವಾಗುತ್ತದೆ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಅಧ್ಯಕ್ಷರುಗಳಾದ ಗ್ಲಾಡಸನ್ ಕುಂದರ್, ದಿವೇಶ್ ಶೆಟ್ಟಿ, ಶಾಲಿನಿ ಪೂಜಾರಿ, ರೋಟರಿ ಕಾರ್ಯದರ್ಶಿ ಸಿಲ್ವಿಯಾ ಕಸ್ಟಲೀನೋ, ರೋಟರಿ, ಆರ್ ಸಿ ಸಿ, ಇನ್ನರ್ವಿಲ್ ಸದಸ್ಯರು ಉಪಸ್ಥಿತರಿದ್ದರು.

ಶಿರ್ವ : ಸಿ ಪ್ರೋಗ್ರಾಮ್ ಮೇಡ್ ಈಜಿ - ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆ

Posted On: 03-10-2022 03:21PM

ಶಿವ೯: ಇಲ್ಲಿನ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಕಚೇರಿ ಅಧೀಕ್ಷಕಿ ಡೋರಿನ್ ಡೀಸಿಲ್ವ ಅವರು ಉಪನ್ಯಾಸಕ ಕೆ.ಪ್ರವೀಣ್ ಕುಮಾರ್ ರವರ “ಸಿ ಪ್ರೋಗ್ರಾಮ್ ಮೇಡ್ ಈಜಿ" - ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆಗೊಳಿಸಿದರು. ಪ್ರತಿಯೊಂದು ಪುಸ್ತಕ ಒಂದು ಒಳ್ಳೆಯ ಸ್ನೇಹಿತ, ಪುಸ್ತಕಗಳ ಓದುವ ಮೂಲಕ ಅನೇಕ ವಿಷಯಗಳನ್ನು ಸಂಗ್ರಹಿಸಬಹುದು ಮತ್ತು ವಿವಿಧ ಜ್ಞಾನಾರ್ಜನೆಗಳನ್ನು ವಿದ್ಯಾರ್ಥಿಗಳು ವೃದ್ಧಿಸಿಕೊಳ್ಳಬಹುದು.

ಪರೀಕ್ಷಾ ತಯಾರಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಸಹಜ. ಈ ನಿಟ್ಟಿನಲ್ಲಿ ಪರೀಕ್ಷಾ ಪೂವ೯ ತಯಾರಿಯಾಗಿ ಇಂತಹ ಪ್ರಶ್ನೋತ್ತರ ಮಾಲಿಕೆ ಪುಸ್ತಕಗಳು ವಿದ್ಯಾರ್ಥಿಯ ಪರೀಕ್ಷಾ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯೆಂದು ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ್ ರವರು ಪುಸ್ತಕದ ಬಗ್ಗೆ ಲೇಖಕರನ್ನು ಪ್ರಶಂಸೆಯ ಮಾತುಗಳೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಿ.ಸಿ.ಎ. ವಿಭಾಗದ ಮುಖ್ಯಸ್ಥ ಹಾಗೂ ಮಾಹಿತಿ ತಂತ್ರಜ್ಞಾನದ ಸಂಯೋಜಕರಾದ ಲೆಫ್ಟಿನೆಂಟ್ ಕೆ.ಪವೀಣ್ ಕುಮಾರ್ ರವರು ಇಂತಹ ಪುಸ್ತಕಗಳನ್ನು ತಯಾರು ಮಾಡಲು ನನ್ನ ಗಣಕ ವಿಜ್ಞಾನದ ವಿದ್ಯಾರ್ಥಿಗಳೆ ಪ್ರೇರಕ ಶಕ್ತಿ, ಅವರಿಗೆ ನಾನು ಅಭಾರಿಯಾಗಿದ್ದೇನೆ. ಪುಸ್ತಕದ ಬಗ್ಗೆ ಮಾತನಾಡುತ್ತಾ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ಪ್ರಥಮ ಬಿ.ಸಿ.ಎ. ಒಂದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿ ಯಿಂದ ಈ ಪುಸ್ತಕ ಹೆಚ್ಚು ಸಹಕಾರಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಅಧ್ಯಾಪಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಹಮ್ಮದ್ ಆಶಿಕ್, ಮಹಮ್ಮದ್ ಜಿಯಾನ್ ಸಹಕರಿಸಿದ್ದರು. ಕು. ರಕ್ಷ ಮತ್ತು ಬಳಗ ಪ್ರಾರ್ಥಿಸಿ, ಕು. ಸನಿಯಾ ಶೇಕ್ ಸ್ವಾಗತಿಸಿ, ಕು. ತರನಂ ಕಾರ್ಯಕ್ರಮ ನಿರೂಪಿಸಿದರು. ಕು. ಜಿಯಾ ಸಿ ಪೂಜಾರಿ ವಂದಿಸಿದರು.

ನವೆಂಬರ್ 27 ರಂದು ಜರಗಲಿರುವ ಹಿಂದೂ ಸಮಾಜೋತ್ಸವದ ಪ್ರಚಾರದ ವೀಡಿಯೊ ತುಣುಕು ಬಿಡುಗಡೆ

Posted On: 03-10-2022 03:13PM

ಉಡುಪಿ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ನವೆಂಬರ್ 27 ರಂದು ಜರಗಲಿರುವ ಹಿಂದೂ ಸಮಾಜೋತ್ಸವದ ಪ್ರಚಾರದ ವೀಡಿಯೊ ತುಣುಕು ಬಿಡುಗಡೆ ಸೋಮವಾರ ನಡೆಯಿತು.

ಬಂಟಕಲ್ಲು ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಳೆಯವರು ಹಿಂದೂ ಸಮಾಜೋತ್ಸವದ ಪ್ರಚಾರದ ವೀಡಿಯೊ ಬಿಡುಗಡೆ ಮಾಡಿದರು.

ವಿಶ್ವ ಹಿಂದೂ ಪರಿಷದ್ ಮಟ್ಟಾರು ಕಾರ್ಯದರ್ಶಿ ಸತೀಶ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಯಾದ ಸಂದೀಪ್ ಶೆಟ್ಟಿ ನಾಲ್ಕುಬೀದಿ, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರಿ, ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ಆಶಾ ಆಚಾರ್ಯ, ಬಜರಂಗದಳ ಕಾಪು ಪ್ರಖಂಡ ಸುರಕ್ಷಾ ಪ್ರಮುಖ್ ಆನಂದ, ವಿಶ್ವ ಹಿಂದೂ ಪರಿಷದ್ ಮಟ್ಟಾರು ಸೇವಾ ಪ್ರಮುಖ್ ಸತೀಶ್, ಪ್ರಚಾರ ಮತ್ತು ಸಾಮಾಜಿಕ ಜಾಲತಾಣ ಪ್ರಮುಖ್ ಪ್ರವೀಣ್ ಪೂಜಾರಿ, ಬಜರಂಗದಳ ಸುರಕ್ಷಾ ಪ್ರಮುಖ್ ಅಭಿಜಿತ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಯಪ್ರಕಾಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಗಾಂಧೀಜಿಯ ಅಹಿಂಸಾ ತತ್ವ, ಜಾತ್ಯಾತೀತ ನಿಲುವು ನಮ್ಮ ದೇಶಕ್ಕೆ, ರಾಜ್ಯಕ್ಕೆ ತುಂಬಾ ಅಗತ್ಯ : ಯೋಗೀಶ್ ವಿ ಶೆಟ್ಟಿ

Posted On: 03-10-2022 03:07PM

ಉಡುಪಿ : ಜಿಲ್ಲೆಯಲ್ಲಿ ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ 153ನೇ ಗಾಂಧಿ ಜಯಂತಿಯನ್ನು ಉಡುಪಿ ಜಿಲ್ಲಾ ಪಕ್ಷ ಕಚೇರಿ ಯಲ್ಲಿ ಆಚರಿಸಲಾಯಿತು. ಮಹಾತ್ಮಾ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಗೈದು ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಮಾತನಾಡಿ, ಗಾಂಧಿಜಿಯವರ ಜೀವನವೇ ಒಂದು ಆದರ್ಶ, ನುಡಿದಂತೆ ನಡೆದು ತನ್ನ ಜೀವನವನ್ನು ಅದೇ ರೀತಿಯಲ್ಲಿ ಅನುಕರಣೆ ಮಾಡಿದ ಒಂದು ಮಹಾನ್ ವ್ಯಕ್ತಿ ಅವರ ಜೀವನ ನಮಗೆಲ್ಲರಿಗೂ ಆದರ್ಶ. ಅವರು ಏನು ಹೇಳುತ್ತಿದ್ದಾರೋ ಅದೇ ರೀತಿ ಜೀವನ ನಡೆಸುತ್ತಿದ್ದರು. ಇಂದಿನ ಕಲುಷಿತ ವಾತಾವರಣದಲ್ಲಿ ಅವರ ಅಹಿಂಸಾ ತತ್ವ ಜಾತ್ಯಾತೀತ ನಿಲುವು ನಮ್ಮ ದೇಶಕ್ಕೆ, ರಾಜ್ಯಕ್ಕೆ ತುಂಬಾ ಅಗತ್ಯ ಇದೆ. ಇದನ್ನು ನಾವು ಅನುಸರಿಸೋಣ ಎಂದು ನುಡಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಸುಧಾಕರ ಶೆಟ್ಟಿ, ವಾಸುದೇವ ರಾವ್, ಜಯರಾಮ ಆಚಾರ್ಯ, ಗಂಗಾಧರ ಬಿರ್ತಿ, ಜಯಕುಮಾರ್ ಪರ್ಕಳ, ಇಸ್ಮಾಯಿಲ್ ಪಲಿಮಾರು, ವೆಂಕಟೇಶ್ ಎಂ ಟಿ, ಬಿ. ಕೆ. ಮೊಹಮ್ಮದ್, ದೇವರಾಜ್, ಯು. ಎ. ರಶೀದ್, ರಂಗಾ ಕೋಟ್ಯಾನ್, ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಡುಬಿದ್ರಿ : 2 ನೇ ವರ್ಷದ ಕಂಚಿನಡ್ಕ - ನಂದ್ಯೂರಮ್ಮನಡೆಗೆ ನಮ್ಮ ನಡೆ ಪಾದಯಾತ್ರೆ ಸಂಪನ್ನ

Posted On: 03-10-2022 02:35PM

ಪಡುಬಿದ್ರಿ : ಶರನ್ನವರಾತ್ರಿ ಸಂದರ್ಭದಲ್ಲಿ ಪಡುಬಿದ್ರಿಯ ಕಂಚಿನಡ್ಕದ ಹಿಂದೂ ಬಾಂಧವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಅಕ್ಟೋಬರ್ 2 ರಂದು ಕಂಚಿನಡ್ಕದಿಂದ ನಂದಿಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.

ಹಿರಿಯರಾದ ಮೊನಪ್ಪ, ಸುಂದರ್, ಕೃಷ್ಣ ಬಂಗೇರರವರು ದೀಪ ಪ್ರಜ್ವಲಿಸಿ, ದೇವಿ ಮಹಾತ್ಮೆಯಲ್ಲಿ ಉಚ್ಚರಿಸಲ್ಪಟ್ಟ ಸಪ್ತಶ್ಲೋಕದ ವಿಶೇಷ ಮಂತ್ರ ಪಾರಾಯಣದೊಂದಿಗೆ ಚಾಲನೆ ನೀಡಲಾಯಿತು. ಪಾದಯಾತ್ರೆಯಲ್ಲಿ ಸುರೇಶ್ ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು.

ನಂದಿಕೂರು ದೇವಳದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮದ್ವರಾಯ ಭಟ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಇವರ ಉಪಸ್ಥಿತಿಯಲ್ಲಿ ಪಾದಯಾತ್ರಿಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿದರು. ಸುಮಾರು ನೂರಕ್ಕೂ ಅಧಿಕ ಮಂದಿ ಪಾದಯಾತ್ರಿಗಳು ಭಾಗವಹಿಸಿದ್ದರು.

ಉದ್ಯಾವರ : ಧರ್ಮಪ್ರಾಂತ್ಯದ ನೂತನ ಕುಲಪತಿಗೆ ಸನ್ಮಾನ

Posted On: 03-10-2022 02:21PM

ಉದ್ಯಾವರ : ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ನೂತನ ಕುಲಪತಿಗಳಾಗಿ ಆಯ್ಕೆಯಾಗಿರುವ ಅ. ವಂ. ಡಾ. ರೋಶನ್ ಡಿಸೋಜ ರವರನ್ನು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದಲ್ಲಿ ಸಮ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಂ. ಡಾ. ರೋಶನ್ ಡಿಸೋಜ, ತನ್ನ ಮೇಲೆ ನಂಬಿಕೆ ಇಟ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿಯನ್ನು ನೀಡಿರುವ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕಳೆದ ನಾಲ್ಕೂವರೆ ವರ್ಷ ಉಡುಪಿ ಧರ್ಮಪ್ರಾಂತ್ಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಉದ್ಯಾವರ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ. ಸ್ಟ್ಯಾನಿ ಬಿ ಲೋಬೊರವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದೇವಾಲಯದ ಸಹಾಯಕ ಧರ್ಮಗುರು ವಂ. ಲಿಯೋ ಪ್ರವೀಣ್ ಡಿಸೋಜ, ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಕಾರ್ಯದರ್ಶಿ ಮೈಕಲ್ ಡಿಸೋಜಾ ಮತ್ತು 20 ಆಯೋಗದ ಸಂಯೋಜಕ ಜೆರಾಲ್ಡ್ ಪಿರೇರಾ ಉಪಸ್ಥಿತರಿದ್ದರು.

ಕಾಪು : ಶ್ರೀ ಜನಾರ್ದನ ದೇಗುಲ ಮತ್ತು ಹೊಸ ಮಾರಿಗುಡಿಗೆ ಪ್ರಮೋದ್ ಮುತಾಲಿಕ್ ಭೇಟಿ

Posted On: 03-10-2022 02:14PM

ಕಾಪು : ಪ್ರಖರ ಹಿಂದುತ್ವವಾದಿ, ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರವರು ಸೋಮವಾರ ಕಾಪು ಶ್ರೀ ಜನಾರ್ದನ ದೇಗುಲ ಹಾಗೂ ಕಾಪು ಶ್ರೀ ಹೊಸಮಾರಿ ಗುಡಿ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಶ್ರೀ ಜನಾರ್ದನ ದೇಗುಲದಲ್ಲಿ ವೇದಮೂರ್ತಿ ಜನಾರ್ಧನ ತಂತ್ರಿಯವರು ಶಾಲು ಹೊದಿಸಿ ಸನ್ಮಾನಿಸಿ ಪ್ರಸಾದ ವಿತರಿಸಿದರು. ಕಾಪುಶ್ರೀ ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀನಿವಾಸ್ ತಂತ್ರಿಯವರು ಶಾಲು ಹೊದಿಸಿ ಸನ್ಮಾನಿಸಿ ಶ್ರೀದೇವಿಯ ಪ್ರಸಾದ ವಿತರಿಸಿದರು.

ಈ ಸಂದರ್ಭ ಪ್ರಮೋದ್ ಮುತಾಲಿಕ್ ಮಾತನಾಡಿ, ಪ್ರಥಮ ಬಾರಿಗೆ ಇಲ್ಲಿಯ ದೇಗುಲಕ್ಕೆ ಬರುತ್ತಿದ್ದೇನೆ. ಇಲ್ಲಿಯ ವಾಸ್ತು ಹಾಗೂ ಪರಿಕಲ್ಪನೆ ಮನಸ್ಸಿಗೆ ಸಂತಸ ನೀಡುತ್ತಿದೆ ಎಂದರು. ಹೊಸಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯನ್ನು ಪ್ರಮೋದ್ ಮುತಾಲಿಕ್ ರವರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ, ಮೋಹನ ಭಟ್, ಜಯರಾಮ್ ಅಂಚಿ ಕಲ್ಲು, ಶರತ್, ಲಕ್ಷ್ಮೀಶ ಕಾಪು, ಸುದರ್ಶನ್ ಕಪ್ಪೆಟ್ಟು, ದಿವಾಕರ್, ರಾಧಾಕೃಷ್ಣ, ಸುಜಿತ್ ನಿಟ್ಟೂರು, ರಮೇಶ್ ಹೆಗ್ಡೆ ಕಲ್ಯ, ಗೋವರ್ಧನ್ ಶೇರಿಗಾರ್, ಶ್ರೀಧರ್ ತಂತ್ರಿ ಉಪಸ್ಥಿತರಿದ್ದರು.

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇಗುಲಕ್ಕೆ ಸಚಿವ ಸುನಿಲ್ ಕುಮಾರ್ ಭೇಟಿ

Posted On: 02-10-2022 04:31PM

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಉಚ್ಚಿಲ ದಸರಾ 2022 ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರವರು ಸಚಿವರಿಗೆ ಪ್ರಸಾದ ವಿತರಿಸಿದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರವರು ಸಚಿವರಿಗೆ ಪ್ರಸಾದ ವಿತರಿಸಿದರು.

ಉದ್ಯಾವರ : ಗಾಂಧಿ ಜಯಂತಿ ಆಚರಣೆ

Posted On: 02-10-2022 03:10PM

ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಕಥೋಲಿಕ್ ಸಭಾ ಉದ್ಯಾವರ ಘಟಕ ಇವರ ಜಂಟಿ ಆಶ್ರಯದಲ್ಲಿ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.

ಉಡುಪಿ ಧರ್ಮಪ್ರಾಂತ್ಯದ ನೂತನ ಕುಲಪತಿ ಅ. ವಂ. ಡಾ. ರೋಶನ್ ಡಿಸೋಜರವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಸ್ಟ್ಯಾನಿ ಬಿ ಲೋಬೊ ಮಾತಾನಾಡಿ, ಮಹಾತ್ಮ ಗಾಂಧೀಜಿಯವರ ನಾಯಕತ್ವ ಇಡೀ ದೇಶಕ್ಕೆ ಪ್ರೇರಣೆ. ಅವರ ಹೋರಾಟದ ಫಲದಿಂದ ನಾವೆಲ್ಲರೂ ಇಂದು ಸ್ವತಂತ್ರರಾಗಿದ್ದೇವೆ. ಅವರಂತೆ ಆಗಲು ಅಸಾಧ್ಯವಾದರೂ, ಅವರಂತೆ ನಮ್ಮ ಜೀವನದಲ್ಲೂ ಬದಲಾವಣೆ ತರೋಣ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ. ಫಾ. ಲಿಯೋ ಡಿಸೋಜ, ಲಯನ್ಸ್ ಜಿಲ್ಲೆ 317Cಯ ವಲಯ 2ರ ಅಧ್ಯಕ್ಷ ಲ. ಜೋನ್ ಫೆರ್ನಾಂಡಿಸ್, ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷೆ ಮೇರಿ ಡಿಸೋಜ, ಉಪಾಧ್ಯಕ್ಷ ರೊನಾಲ್ಡ್ ಅಲ್ಮೇಡಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲಯನ್ ಅನಿಲ್ ಲೋಬೊ, ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಕಾರ್ಯದರ್ಶಿ ಮೈಕಲ್ ಡಿಸೋಜ, 20 ಅಯೋಗಗಳ ಸಂಯೋಜಕ ಜೆರಾಲ್ಡ್ ಪಿರೇರಾ, ಕಥೋಲಿಕ್ ಸಭಾ ಉದ್ಯಾವರ ಘಟಕದ ಕಾರ್ಯದರ್ಶಿ ಟೆರೆನ್ಸ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು.

ಕಥೋಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷ ಲಾರೆನ್ಸ್ ಡೆಸಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಿರ್ದೇಶಕ ಲ. ವಿಲ್ಫ್ರೆಡ್ ಡಿಸೋಜ ವಂದಿಸಿದರು.