Updated News From Kaup

ಉಡುಪಿ ರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ(ರಿ.) ಉಡುಪಿ ಮನವಿ ಪುರಸ್ಕರಿಸಿದ ಜಿಲ್ಲಾಧಿಕಾರಿ

Posted On: 27-09-2022 05:18PM

ಉಡುಪಿ : ಇಲ್ಲಿನ ಶಾಸಕರಾದ ಕೆ.ರಘುಪತಿ ಭಟ್ ಮತ್ತು ಮಹೇಶ್ ಠಾಕೂರ್ ರವರ ವಿಶೇಷ ಪ್ರಯತ್ನದಿಂದ ಜಿಲ್ಲಾಧಿಕಾರಿಯವರು ಉಡುಪಿ ರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ(ರಿ.) ಉಡುಪಿ ಇವರ ಮನವಿ ಪುರಸ್ಕರಿಸಿ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲ ರಿಕ್ಷಾಗಳ ದರ ಪರಿಷ್ಕರಣೆ ಮಾಡಿ ಪ್ರತಿ ಕಿ.ಮೀ 20ರೂಪಾಯಿಗಳು ಕನಿಷ್ಠ 40ರೂ. ನಂತೆ ಮಾಡಿದ್ದಾರೆ.

ಮನವಿ‌ ಪುರಸ್ಕರಿಸಿದಕ್ಕೆ ಉಡುಪಿ ಅಧ್ಯಕ್ಷರು, ಚಾಲಕರು ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಹಾಗೂ ಜಿಲ್ಲಾ ಒಕ್ಕೂಟವು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದೆ.

ಪಡುಬಿದ್ರಿ : ವಿಷ ಜಂತು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು

Posted On: 27-09-2022 05:05PM

ಪಡುಬಿದ್ರಿ : ವಿಷ ಜಂತು ಕಚ್ಚಿ ವಿಷವು ವಿಪರೀತವಾಗಿ ಏರಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸೆಪ್ಟೆಂಬರ್ 26 ರಂದು ಪಡುಬಿದ್ರಿಯ ಅಬ್ಬೇಡಿ ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿ ರಾಮ ದೇವಾಡಿಗ (60) ಗದ್ದೆಯಲ್ಲಿ ಹುಲ್ಲು ತೆಗೆಯುತ್ತಿರುವಾಗ ಅವರ ಕೈ ಬೆರಳಿಗೆ ಯಾವುದೋ ವಿಷ ಜಂತು ಕಚ್ಚಿದ್ದು, ಮನೆಗೆ ಬಂದು ಸಹೋದರಿಯರಲ್ಲಿ ತಿಳಿಸಿದ್ದು ಕೂಡಲೇ ಅವರು ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ವಿಷವು ವಿಪರೀತವಾಗಿ ಏರುತ್ತಿದ್ದು, ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಮುಕ್ಕದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಕರೆದುಕೊಂಡು ಹೋಗಿ ವೈದ್ಯರು ಚಿಕಿತ್ಸೆ ನೀಡುತ್ತಿರುವಾಗ  ಮೃತಪಟ್ಟಿರುತ್ತಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಟಪಾಡಿ : ದುರ್ಗಾದೌಡ್ ಕಾರ್ಯಕ್ರಮದ ಪೂರ್ವಭಾವಿ ಸಭೆ

Posted On: 27-09-2022 10:37AM

ಕಟಪಾಡಿ : ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ನೇತೃತ್ವದಲ್ಲಿ ಅಕ್ಟೋಬರ್ 2 ರಂದು ನಡೆಯಲಿರುವ ಬೃಹತ್ ದುರ್ಗಾದೌಡ್ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಮಾಲೋಚನ ಸಭೆಯು ಕಟಪಾಡಿ ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಹಿಂದೂಜಾಗರಣ ವೇದಿಕೆಯ ಗುರುಪ್ರಸಾದ್ ಸೂಡ, ರಕ್ಷಿತ್ ಕಡಂಬು , ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೈ ಭರತ್ ಹೆಗ್ಡೆ, ಹಿಂದೂಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇದರ ಪದಾಧಿಕಾರಿಗಳು , ನವೋದಯ ಸಂಘ ದುರ್ಗಾನಗರ ಇದರ ಪದಾಧಿಕಾರಿಗಳು , ಸದಸ್ಯರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಕಾಪು : ಕೊಪ್ಪಲಂಗಡಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ - ಸಾವು

Posted On: 27-09-2022 10:33AM

ಕಾಪು : ಇಲ್ಲಿನ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಮೃತ್ತ ವ್ಯಕ್ತಿಯನ್ನು ಕೊಪ್ಪಲಂಗಡಿ ನಿವಾಸಿ 48 ವರ್ಷದ ಕಿಶೋರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅವರು ತನ್ನ ಮನೆ ಕಡೆ ಬರಲು ರಸ್ತೆ ಪಕ್ಕ ನಿಂತಿದ್ದಾಗ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆ ಸಾಗುತ್ತಿದ್ದ ಇನ್ನ ಗ್ರಾಮದ ನಿವಾಸಿ ಶ್ರೇಯಸ್ ಅವರ ಬೈಕ್ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಿಶೋರ್ ಶೆಟ್ಟಿ, ಮೃತಪಟ್ಟರೆ, ಶ್ರೇಯಸ್ ತೀವ್ರ ಗಾಯಗೊಂಡು ಉಡುಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಪು ಠಾಣಾಧಿಕಾರಿ ಶ್ರೀಶೈಲ ಮುರುಗೋಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದರು.

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ಹಿಂದೂ ಸಮಾಜೋತ್ಸವದ ಕಾರ್ಯಾಲಯ ಉಧ್ಘಾಟನೆ

Posted On: 26-09-2022 07:51PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ನವೆಂಬರ್ 27 ರಂದು ಜರಗಲಿರುವ ಹಿಂದೂ ಸಮಾಜೋತ್ಸವದ ಕಾರ್ಯಾಲಯ ಉಧ್ಘಾಟನೆ ಇಂದು ನಡೆಯಿತು.

ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಕಾರ್ಯಾಲಯ ಉದ್ಘಾಟನೆ ಮಾಡಿದರು.ವಿಶ್ವ ಹಿಂದೂ ಪರಿಷದ್ ಮಟ್ಟಾರು ಘಟಕ ಉಪಾಧ್ಯಕ್ಷ ಜಗದೀಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಬಜರಂಗದಳ ಉಡುಪಿ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ,ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಧರ್ಮಾಚಾರ್ಯ ಪ್ರಮುಖ್ ವೇದಮೂರ್ತಿ ಪ್ರಸನ್ನ ಭಟ್, ಶಿರ್ವ ವಲಯ ಅಧ್ಯಕ್ಷ ವಿಖ್ಯಾತ್ ಭಟ್, ಮಟ್ಟಾರು ಘಟಕ ಬಜರಂಗದಳ‌ ಸಹಸಂಚಾಲಕ ಮಂಜುನಾಥ ನಾಯಕ್, ಮಾತೃಶಕ್ತಿ ಪ್ರಮುಖ್ ಸುಲೋಚನಾ ಆಚಾರ್ಯ, ಸಹಪ್ರಮುಖ್ ಲಲಿತಾ ಶೆಟ್ಟಿ,ದುರ್ಗಾವಾಹಿನಿ ಸಹಸಂಚಾಲಕಿ ರಾಜಶ್ರೀ ಪೂಜಾರಿ, ಕಾರ್ಯಾಲಯ ಪ್ರಮುಖ್ ಸಂಪತ್ ರಾವ್, ಶಿರ್ವ ಸಹಕಾರಿ ವ್ವವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ ನಾಯಕ್, ಶ್ರೀನಿವಾಸ ಶೆಣೈ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು ಸ್ವಾಗತಿಸಿ,ರಂಜಿತ್ ಶೆಟ್ಟಿ ವಂದಿಸಿದರು.

ಕಾಪು : ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜನ ನೇಮೋತ್ಸವ

Posted On: 26-09-2022 07:47PM

ಕಾಪು : ಇಲ್ಲಿನ ಶ್ರೀ ಹಳೇಮಾರಿಯಮ್ಮ ದೇವಸ್ಥಾನದ ಬಳಿಯ ಶ್ರೀ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಭಾನುವಾರ ರಾತ್ರಿ ಕೊರಗಜ್ಜ ದೈವದ ನೇಮೋತ್ಸವ ವಿಜೃಂಭಣೆಯಿಂದ ಜರಗಿತು.

ನೂರಾರು ಭಕ್ತಾದಿಗಳು ಆಗಮಿಸಿ ಶ್ರೀ ದೈವದ ಕರಿಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

ಈ ಸಂದರ್ಭ ಗುರುವ ಹಾಗೂ ಮೆನ್ಕು ಕುಟುಂಬಸ್ಥರು ಮತ್ತು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

ಕಾಪು ಗ್ರಾಮದಾದ್ಯಂತ ಇಂದು ತೆನೆ ಹಬ್ಬ ಆಚರಣೆ

Posted On: 26-09-2022 07:33PM

ಕಾಪು : ಗ್ರಾಮದಾದ್ಯಂತ ಸೋಮವಾರ ತೆನೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮಸ್ಥರು ಮತ್ತು ಪುರೋಹಿತರು ಗದ್ದೆಯಿಂದ ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ತೆನೆಗಳನ್ನು ಸಂಗ್ರಹಿಸಿ, ಪಲ್ಲಕ್ಕಿಯಲ್ಲಿ ಕಾಪುವಿನ ಸಾವಿರ ಸೀಮೆಯ ಒಡೆಯ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನಕ್ಕೆ ತರಲಾಯಿತು.

ದೇವಳದ ಪ್ರಧಾನ ಅರ್ಚಕ ಜನಾರ್ಧನ ತಂತ್ರಿಯವರು ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ಗ್ರಾಮದ ಜನರಿಗೆ ತೆನೆಗಳನ್ನು ವಿತರಿಸಿದರು.

ಈ ಸಂದರ್ಭ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು, ತೆನೆ ಸ್ವೀಕರಿಸಿದರು.

ಕೊಂಕಣಿ ನಾಟಕ ಸಭಾ : ಕಿರು ನಾಟಕ ಸ್ಫರ್ಧೆಯಲ್ಲಿ ಶಂಕರಪುರ ಕಲಾರಾಧನ್ ಪ್ರಥಮ ಸ್ಥಾನ

Posted On: 25-09-2022 10:20PM

ಕಾಪು : ಇತ್ತೀಚೆಗೆ ಮಂಗಳೂರಿನ ಕೊಂಕಣಿ ನಾಟಕ ಸಭಾ ನಡೆಸಿದ ಕಿರು ನಾಟಕ ಸ್ಫರ್ಧೆಯಲ್ಲಿ ಭಾಗವಹಿಸಿದ ಶಂಕರಪುರದ ಇಗರ್ಜಿಯ ಕಲಾರಾಧನ್ ಸಂಘಟನೆಯ ವೆಚಿಕ್ ಪೂತ್ ಪ್ರಥಮ ಸ್ಥಾನವನ್ನು ಪಡೆದಿದೆ.

ವಾಲ್ ಸ್ಟನ್ ಡೇಸ ರಚಿಸಿದ ಈ ಕಿರು ನಾಟಕವನ್ನು ಕಲಾ ಚತುರ ಗಣೇಶ್ ರಾವ್ ಎಲ್ಲೂರುರವರು ನಿರ್ದೇಶಿಸಿದ್ದಾರೆ.ಅನಿಲ್ಡಾ ನೊರೊನ್ನಾ,ಶ್ರಾಯನ್ ಲೋಬೊ,ಅನ್ಸಿಲ್ಲಾ ಕೊರೆಯಾ,ನೊಯೆಲ್ ಡಿಸಿಲ್ವಾ ಮತ್ತು ವಾಲ್ ಸ್ಟನ್ ಡೇಸ ಅಭಿನಯಿಸಿ,ಜೀವನ್ ಮತ್ತು ಕ್ಲೈವ್ ಸಂಗೀತ ನಿರ್ವಹಿಸಿದ್ದಾರೆ. ವ್ಯವಸ್ಥಾಪಕರಾಗಿ ಪೀಟರ್ ಮಾರ್ಟಿಸ್ ರವರು ಸಹಕರಿಸಿದರು.

ಪ್ರಸ್ತುತ ದಿನಗಳಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗಿ ಕುಟುಂಬ ಮತ್ತು ಸಮಾಜಕ್ಕೆ ಕಂಟಕರಾಗಿ ಬದುಕುವ ಯುವಜನರ ಕಥಾ ವಸ್ತುವಿರುವ ಈ ಕಿರು ನಾಟಕ ಜನ ಮೆಚ್ಚುಗೆಯನ್ನು ಪಡೆಯಿತು.

ಎರ್ಮಾಳು : ಪುಷ್ಪಾನಂದ ಫೌಂಡೇಶನ್ ವತಿಯಿಂದ 325 ವಿದ್ಯಾರ್ಥಿಗಳಿಗೆ ರೂ. 3.75 ಲಕ್ಷದ ಪ್ರತಿಭಾ ಪುರಸ್ಕಾರ

Posted On: 25-09-2022 03:41PM

ಎರ್ಮಾಳು : ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಪುಷ್ಪಾನಂದ ಫೌಂಡೇಶನ್ ವತಿಯಿಂದ ಯಶ್ ಪಾಲ್ ಸುವರ್ಣ ರವರ ಸಮಾಜ ಮುಖಿ ಕಾರ್ಯ ಶ್ಲಾಘನೀಯವಾಗಿದ್ದು ಫೌಂಡೇಶನ್ ಮೂಲಕ ಸಮಾಜಮುಖಿ ಕಾರ್ಯಕ್ರಮಗಳು ನಿರಂತರ ಸಾಗಿ ಬರಲಿ ಎಂದು ಜನಾರ್ಧನ ಜನ ಕಲ್ಯಾಣ ಸೇವಾ ಸಮಿತಿಯ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಹೇಳಿದರು. ಎರ್ಮಾಳ್ ಜನಾರ್ದನ ದೇವಸ್ಥಾನದ ಜನಾರ್ದನ ಜನ ಕಲ್ಯಾಣ ಸಭಾಂಗಣದಲ್ಲಿ ಆಯೋಜಿಸಿದ್ದ ಪುಷ್ಪಾನಂದ ಫೌಂಡೇಶನ್ ವತಿಯಿಂದ ಪಡುಬಿದ್ರಿ, ಹೆಜಮಾಡಿ, ಪಲಿಮಾರು, ಎಲ್ಲೂರು, ಬೆಳಪು, ತೆಂಕ ಮತ್ತು ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ 325 ವಿದ್ಯಾರ್ಥಿಗಳಿಗೆ ರೂ. 3.75 ಲಕ್ಷದ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಶೀಲಾ ಕೆ ಶೆಟ್ಟಿ ಮಾತನಾಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಪುಷ್ಪಾನಂದ ಫೌಂಡೇಶನ್ ಸಮಾಜಮುಖಿ ಕಾರ್ಯಚಟುವಟಿಕೆ ಇತರರಿಗೂ ಪ್ರೇರಣೆಯಾಗಲಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುಷ್ಪನಂದ ಫೌಂಡೇಶನ್ ಪ್ರವರ್ತಕ ಯಶ್ ಪಾಲ್ ಎ. ಸುವರ್ಣ ಮಾತನಾಡಿ ಫೌಂಡೇಶನ್ ಮೂಲಕ ಕಾಪು ವಿಧಾನ ಸಭಾ ಕ್ಷೇತ್ರದ 26 ಗ್ರಾಮ ಪಂಚಾಯತ್ ಮತ್ತು ಪುರಸಭೆ ವ್ಯಾಪ್ತಿಯ ಸುಮಾರು 1500 ವಿದ್ಯಾರ್ಥಿಗಳಿಗೆ ರೂ. 15 ಲಕ್ಷ ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲು ಯೋಜನೆ ರೂಪಿಸಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಿದ್ದು, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಇನ್ನೂ ಉತ್ತಮ ಸಾಧನೆ ಮಾಡಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು.

ಸಮಾರಂಭದಲ್ಲಿ ಮುಂಬಯಿ ಉತ್ತರ ಬಿಜೆಪಿ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕೇಸರಿ ಯುವರಾಜ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನೀತಾ ಗುರುರಾಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಸ್ತೂರಿ ಪ್ರವೀಣ್, ಬಡಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಕುಂತಳ, ಪಡುಬಿದ್ರೆ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ಉದ್ಯಮಿ ಕಿಶೋರ್ ಶೆಟ್ಟಿ, ಜೇಸಿಐ ಪಡುಬಿದ್ರಿ ಅಧ್ಯಕ್ಷರಾದ ಶರತ್ ಶೆಟ್ಟಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಕಟಪಾಡಿ : ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ - ಪಂಡಿತ್ ದೀನ್ ದಯಾಳ್ ನುಡಿ ನಮನ

Posted On: 25-09-2022 03:13PM

ಕಟಪಾಡಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಸದಸ್ಯರಾಗಿ, ಸಂಘದ ಪ್ರಚಾರ ಕರಾಗಿ,ಜನಸಂಘದ ಸ್ಥಾಪನೆಗೆ ಕಾರಣಿಕರ್ತರಾಗಿ ನಂತರ ಅಖಂಡ ಭಾರತದ ನಿರ್ಮಾಣಕ್ಕಾಗಿ ಶ್ರಮಿಸಿ ಹಿಂದುತ್ವ ಸಿದ್ದಾಂತವನ್ನು ಪ್ರತಿಪಾದಿಸಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ 106 ನೇ ಜನ್ಮದಿನದ ಪ್ರಯುಕ್ತ ನುಡಿ ನಮನ ಕಾರ್ಯಕ್ರಮವು ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇವರ ವತಿಯಿಂದ ಸಂಘದ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ಹರಿಶ್ಚಂದ್ರ ಕೋಟ್ಯಾನ್, ವಾಸು ಪೂಜಾರಿ, ಮಾಜಿ ಪಂಚಾಯತ್ ಸದಸ್ಯರಾದ ಶ್ರೀಧರ್ ಮಾಬ್ಯಾನ್, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.