Updated News From Kaup

ಡಿಸೆಂಬರ್ 31 : ಮೂಳೂರು ಮೂಲ್ಯ ಮನೆಯಲ್ಲಿ ಸಿರಿ ಸಿಂಗಾರದ ನೇಮೋತ್ಸವ

Thumbnail
Posted On: 14 Dec 2022, 02:33 PM

ಕಾಪು : ತಾಲೂಕಿನ ಮೂಳೂರು ಮೂಲ್ಯ ಮನೆ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ದೈವಗಳ ಹರಕೆಯ ಸಿರಿ ಸಿಂಗಾರದ ನೇಮೋತ್ಸವ ಡಿಸೆಂಬರ್ 31, ಶನಿವಾರದಂದು ಜರಗಲಿದೆ. ಅದೇ ದಿನ ಬೆಳಿಗ್ಗೆ 11:30ಗೆ ಚಪ್ಪರ ಮುಹೂರ್ತ, ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ, ಸಂಜೆ 7 ಗಂಟೆಗೆ ಬಾಳು ಭಂಡಾರ ಹೊರಡುವುದು. ರಾತ್ರಿ 9ಕ್ಕೆ ಸರಿಯಾಗಿ ಮೈಸಂದಾಯ, ಜುಮಾದಿ, ಜುಮಾದಿ ಬಂಟ, ಪಂಜುರ್ಲಿ,ಗುಳಿಗ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಮೂಳೂರು ಮೂಲ್ಯ ಮನೆಯ ಮುಕ್ಕಾಲ್ದಿ ಅರುಣ್ ಕುಲಾಲ್ ಹಾಗೂ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪಲಿಮಾರು : ಕೈ ತೋಟ ಕ್ರಾಂತಿಯಾಗಲಿ ಕಾರ್ಯಕ್ರಮ

Thumbnail
Posted On: 11 Dec 2022, 07:08 PM

ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇವರ ಸಹಯೋಗದಲ್ಲಿ ಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಕೈ ತೋಟ ಕ್ರಾಂತಿಯಾಗಲಿ ಕಾರ್ಯಕ್ರಮದಡಿ ವಿಷಮುಕ್ತ ಆಹಾರ ನಮ್ಮದಾಗಲಿ ಎಂಬ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹರಿಕೃಷ್ಣ ಕಾಮತ್ ಮಾತನಾಡಿ ನಾವು ಸೇವಿಸುವ ಪ್ರತಿಯೊಂದು ಆಹಾರವು ಇಂದು ರಾಸಾಯನಿಕ ಪದಾರ್ಥಗಳಿಂದ ತಯಾರಾಗುತ್ತಿದ್ದು ಕನಿಷ್ಠ ನಾವು ನಮಗೆ ಬೇಕಾದ ತರಕಾರಿಯನ್ನಾದರೂ ನಮ್ಮ ಮನೆಯಂಗಳದಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆದು ಆರೋಗ್ಯ ಕಾಪಾಡಿಕೊಳ್ಳುವ. ಇಲ್ಲವಾದಲ್ಲಿ ಮುಂದೊಂದು ದಿನ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗಬಹುದು ಮತ್ತು ಸಾವಯವ ಪದ್ದತಿಯಲ್ಲಿ ಯಾವ ರೀತಿ ಕೈ ತೋಟ ಮಾಡಬಹುದು ಎಂದು ಮಾಹಿತಿ ನೀಡಿದರು. ಈ ಸಂದರ್ಭ ಪಲಿಮಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು, ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ, ಉಪಾಧ್ಯಕ್ಷ ರಾದ ರಾಜೇಂದ್ರ ಬಲ್ಲಾಳ್, ಗುರುರಾಜ್ ಭಟ್, ಆಶಾ, ದೀಪಕ್ ಕಾಂಜರ್ ಕಟ್ಟೆ, ವಸಂತ್ ಸನಿಲ್, ಹೊೖಗೆ ಫ್ರೆಂಡ್ಸ್ ಹೊೖಗೆ (ರಿ) ಪಲಿಮಾರ್ ಇದರ ಅಧ್ಯಕ್ಷರಾದ ರಾಘವೇಂದ್ರ ಜೆ ಸುವರ್ಣ, ಕಾರ್ಯದರ್ಶಿ ಸತೀಶ್ ಕುಮಾರ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಾವಯವ ಕೃಷಿಯ ಬಗ್ಗೆ ಮೂರು ಕೈಪಿಡಿಯನ್ನು ಪರಿಚಯಿಸಿ ಭಾಗವಹಿಸಿದ ಆಸಕ್ತರಿಗೆ ತರಕಾರಿ ಬೀಜ ಹಾಗೂ ಗಿಡಗಳನ್ನು ಉಚಿತವಾಗಿ ನೀಡಲಾಯಿತು. ಅರುಣ್ ಎಸ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಪಡುಬಿದ್ರಿ : ರಸ್ತೆ ಸುರಕ್ಷತೆ ಹಾಗೂ ಅಪರಾಧ ತಡೆ ಮಾಸ ಜಾಗೃತಿ ; ಬೈಕ್ ರ‌್ಯಾಲಿ

Thumbnail
Posted On: 11 Dec 2022, 06:33 PM

ಪಡುಬಿದ್ರಿ : ಇಲ್ಲಿನ ಪೊಲೀಸ್ ಠಾಣೆ, ರೋಟರಿ ಕ್ಲಬ್ ಪಡುಬಿದ್ರಿ, ರೋಟರಿ ಸಮುದಾಯದಳ ಪಡುಬಿದ್ರಿ, ಇನ್ನರ್‌ವೀಲ್ ಕ್ಲಬ್ ಪಡುಬಿದ್ರಿ ಜಂಟಿ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ ಹಾಗೂ ಅಪರಾಧ ತಡೆ ಮಾಸ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಬೈಕ್ ರ್ಯಾಲಿಗೆ ಆದಿತ್ಯವಾರ ಪಡುಬಿದ್ರಿ ಪೇಟೆಯಲ್ಲಿ ಕಾಪು ವೃತ್ತನಿರೀಕ್ಷಕರಾದ ಕೆ.ಸಿ. ಪೂವಯ್ಯ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ರಸ್ತೆಯಲ್ಲಿ ವಾಹನ ಚಲಾಯಿಸುವವರು ತಮ್ಮ ಸುರಕ್ಷತೆಯ ಜೊತೆಗೆ ವಾಹನಗಳ ದಾಖಲೆಯನ್ನು ಇಟ್ಟುಕೊಳ್ಳಬೇಕಾಗಿದೆ. ಇದರ ಬಗೆಗಿನ ಜಾಗೃತಿ ಅನಿವಾರ್ಯ ಎಂದರು. ರಸ್ತೆ ಸುರಕ್ಷತೆ ಹಾಗೂ ಅಪರಾಧ ತಡೆ ಮಾಸ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಬೈಕ್ ರ‌್ಯಾಲಿಯು ಪಡುಬಿದ್ರಿ ಪೇಟೆಯಿಂದ ಪ್ರಾರಂಭಗೊಂಡು ಕೆಳಗಿನ ಪೇಟೆಯಾಗಿ ಬೀಚ್ ರಸ್ತೆಯ ಮೂಲಕ ಸಾಗಿ ಬೀಚ್ನಲ್ಲಿ ಸಮಾಪನಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪಡುಬಿದ್ರಿಯ ಅಧ್ಯಕ್ಷರಾದ ಗೀತಾ ಅರುಣ್ ವಹಿಸಿದ್ದರು. ಈ ಸಂದರ್ಭ ಪಡುಬಿದ್ರಿ ಪೊಲೀಸ್ ಠಾಣೆ ಠಾಣಾಧಿಕಾರಿ ಪುರುಷೋತ್ತಮ್, ಅಪರಾಧ ವಿಭಾಗದ ಪ್ರಕಾಶ್, ರೋಟರಿ ವಲಯ-5 ಸಹಾಯಕ ಗವರ್ನರ್ ಡಾ. ಶಶಿಕಾಂತ್ ಕಾರಿಂಕ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಪದ್ರ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ತಾಲೂಕ್ ಪಂಚಾಯತ್ ಮಾಜಿ ಸದಸ್ಯರಾದ ನವೀನ್ ಚಂದ್ರ ಜೆ ಶೆಟ್ಟಿ, ರಿಕ್ಷಾ ಯೂನಿಯನ್ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ರೋಟರಿ ವಲಯ 5 ರ ಪೂರ್ವ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ರಮೀಜ್ ಹುಸೇನ್, ಕಾಪುವಿನ ಎಲ್ಐಸಿ ಅಭಿವೃದ್ಧಿ ಅಧಿಕಾರಿ ರಮೇಶ್ ಯು, ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ ಅಧ್ಯಕ್ಷೆ ವಿಮಲ ಕೆ ಸಾಲ್ಯಾನ್, ರೋಟರಿ ಸಮುದಾಯದಳ ಅಧ್ಯಕ್ಷೆ ದೀಪಾಶ್ರೀ ಕರ್ಕೇರ, ಸುಧಾಕರ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ಕನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Thumbnail
Posted On: 10 Dec 2022, 11:36 AM

ಕಟಪಾಡಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾಪು ತಾಲೂಕು ಘಟಕದ 4 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಸ್ ವಿ ಎಸ್ ಪದವಿ ಪೂರ್ವ ಕಾಲೇಜ್ ಇಲ್ಲಿ ಶನಿವಾರ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಬಹುಭಾಷಾ ಸಾಹಿತಿ ಕ್ಯಾಥ್ರಿನ್ ರೊಡ್ರಿಗಸ್ ಸಭಾಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ನಾಸಿಕ್ ಬ್ಯಾಂಡ್, ಚೆಂಡೆ, ಭಾರತ ಸೇವಾದಳ, ಹುಲಿವೇಷ, ಜಾನಪದ ನೃತ್ಯ, ಸ್ಕೌಟ್ ಗೈಡ್ಸ್ ತಂಡ, ವಿವಿಧ ಶಾಲಾ ಮಕ್ಕಳು, ತಾಲೂಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಉದ್ಘಾಟನೆಗೊಂಡಿತು. ಸಮ್ಮಾನ, ಪುಸ್ತಕ ಬಿಡುಗಡೆ : ಗೋವಾ ವಿಮೋಚನಾ ಹೋರಾಟಗಾರ ವಿಠಲ ಕಿಣಿಯವರನ್ನು ಸನ್ಮಾನಿಸಲಾಯಿತು. ಅತಿಥಿಗಳ ಸಮ್ಮುಖ ಲೇಖಕರ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಉಡುಪಿ ಜಿಲ್ಲಾ ಘಟಕದ ಮತ್ತು ಕಾಪು ತಾಲೂಕು ಘಟಕದ ಪದಾಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

ಡಿಸೆಂಬರ್ 11 : ಕಂಬಳಕಟ್ಟ ಮನೆಯ ಸಿರಿ ಕುಮಾರ ದೈವಳ ಕಂಬಳ

Thumbnail
Posted On: 09 Dec 2022, 11:28 PM

ಉಡುಪಿ : ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಿರಿ ಕುಮಾರ ದೈವಳ ಕಂಬಳವು ಡಿಸೆಂಬರ್ 11, ಭಾನುವಾರದಂದು ಮಧ್ಯಾಹ್ನ ಗಂಟೆ 2ರಿಂದ ಆದಿ ಉಡುಪಿಯ ಕೊಡವೂರು ಕಂಬಳಕಟ್ಟೆ ಮನೆಯಲ್ಲಿ ಜರಗಲಿದೆ ಕಂಬಳ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಂಬಳ ಮನೆಯ ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪನ್ಯಾಸಕ ಸಂತೋಷ ಆಳ್ವಗೆ ಪಿಎಚ್ ಡಿ ಪದವಿ

Thumbnail
Posted On: 09 Dec 2022, 11:20 PM

ಕಟೀಲು : ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹಾಗೂ ಕಟೀಲು ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿ ಸಂತೋಷ ಆಳ್ವ ಅವರು ನಾಟಕ ಪರಂಪರೆ ಹಾಗೂ ಪ್ರಯೋಗ ವಿಷಯದಲ್ಲಿ ಡಾ. ಮಾಧವ ಪೆರಾಜೆ ಇವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇಲ್ಲಿಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿಯನ್ನು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರದಾನಿಸಿದರು. ಸಂತೋಷ್ ಆಳ್ವ ಇವರು ಕನ್ನಡ ಎಂಎ, ಇಂಗ್ಲಿಷ್ ಎಂಎ, ಬಿಎಡ್, ಎಂಎಡ್, ಎಂಫಿಲ್, ಪಿಎಚ್ ಡಿ ಪದವಿಗಳನ್ನು ಪಡೆದಿರುತ್ತಾರೆ.

ಕುತ್ಯಾರು : ಆನೆಗುಂದಿ ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ಜೆಇ ಲಸಿಕಾ ಅಭಿಯಾನ ಉದ್ಘಾಟನೆ

Thumbnail
Posted On: 09 Dec 2022, 10:55 PM

ಕುತ್ಯಾರು : ಕಾಪು ತಾಲೂಕಿನ ಆನೆಗುಂದಿ ಶ್ರೀ ಸರಸ್ವತೀ ಎಜುಕೇಷನ್ ಟ್ರಸ್ಟ್ ನ ಅಧೀನ ಸಂಸ್ಥೆಯಾದ ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲಿನಲ್ಲಿ ಜಪಾನೀಸ್ ಎನ್ ಸೆಫಲೈಟಿಸ್ (ಜೆಇ) ಲಸಿಕಾ ಅಭಿಯಾನದ ಉದ್ಘಾಟನೆಯನ್ನು ಶಿರ್ವ ಪ್ರಾಥಮಿಕ ಅರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಸುಬ್ರಮಣ್ಯ ರಾವ್ ನೆರವೇರಿಸಿದರು. ಮೆದುಳು ಜ್ವರದ ವಿರುದ್ಧ ಹೋರಾಡಲು ಜೆಇ ಲಸಿಕಾಕರಣವನ್ನು ಹಾಕಿಸಿಕೊಳ್ಳಲು ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಗುರುದತ್ತ ಸೋಮಯಾಜಿ, ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗ, ಸ್ಥಳೀಯ ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹ ಶಿಕ್ಷಕ ಸುಧೀರ್ ಕೈರಬೆಟ್ಟು ನಿರೂಪಿಸಿದರು. ಸಹಾಯಕ ಪ್ರಾಂಶುಪಾಲೆ ಸಂಗೀತಾ ವಂದಿಸಿದರು.

ಪಡುಬಿದ್ರಿ : ಕಾಪು ಶಾಸಕರಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನಾಲ್ಕು ಕೊಠಡಿಗಳ ಶಿಲಾನ್ಯಾಸ

Thumbnail
Posted On: 09 Dec 2022, 10:49 PM

ಪಡುಬಿದ್ರಿ : ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ವಿವೇಕ ಶಾಲಾ ಕೊಠಡಿಗಳ ಶಿಲಾನ್ಯಾಸ ಮತ್ತು ನೂತನ ಶೌಚಾಲಯ ಉದ್ಘಾಟನೆಯನ್ನು ಶುಕ್ರವಾರ ಕಾಪು ಶಾಸಕರಾದ ಲಾಲಾಜಿ ಮೆಂಡನ್ ನೆರವೇರಿಸಿದರು. ಶಾಸಕರ ಶಿಫಾರಸ್ಸಿನ ಮೇರೆಗೆ ವಿವೇಕ ಶಾಲಾ ಕೊಠಡಿಗಳನ್ನು 55.6 ಲಕ್ಷ ವೆಚ್ಚದಲ್ಲಿ (ನಾಲ್ಕು ಕೊಠಡಿಗಳು) ನಿರ್ಮಾಣವಾಗಲಿದೆ. ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಉಪಾಧ್ಯಕ್ಷರಾದ ಯಶೋಧ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೃಷ್ಣ ಬಂಗೇರ, ಶಿಕ್ಷಣ ಇಲಾಖೆ ಸಂಯೋಜಕ ಶಂಕರ್ ಸುವರ್ಣ, ಪ್ರಾಥಮಿಕ ಮುಖ್ಯ ಶಿಕ್ಷಕ ಕೃಷ್ಣಾನಂದ, ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರಸನ್ನ, ಕಾಲೇಜು ಪ್ರಾಂಶುಪಾಲೆ ಅನುರಾಧ, ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಶೆಟ್ಟಿ ಹೇಮಚಂದ್ರ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ವಿನಯ, ರವೀಂದ್ರ, ಭಾರತಿ, ಲೋಕೇಶ್ ಕಂಚಿನಡ್ಕ, ಗುತ್ತಿಗೆದಾರರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಪು : ಕೊಪ್ಪಲಂಗಡಿಯಲ್ಲಿ ಪಾದಚಾರಿ ಮಹಿಳೆಗೆ ಶಾಲಾ ವಾಹನ ಡಿಕ್ಕಿ ; ಸ್ಥಳದಲ್ಲೇ ಸಾವು

Thumbnail
Posted On: 09 Dec 2022, 08:44 PM

ಕಾಪು : ಶಾಲಾ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕಾಪು ಕೊಪ್ಪಲಂಗಡಿ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತರನ್ನು ಕಾಪು ಮಲ್ಲಾರು ನಿವಾಸಿ ರವೀಂದ್ರನಾಥ ಶೆಟ್ಟಿಯವರ ಪತ್ನಿ ಸಪ್ನ (54) ಎಂದು ಗುರುತಿಸಲಾಗಿದೆ. ಅವರು ಕೊಪ್ಪಲಂಗಡಿಯಲ್ಲಿ ದಿನಸಿ ಅಂಗಡಿಗೆ ಹೋಗಿ ಹಿಂತಿರುಗಿ ಮನೆ ಕಡೆಗೆ ಹೋಗಲು ಕಮ್ಯುನಿಟಿ ಹಾಲ್ ಸಮೀಪ ರಸ್ತೆ ದಾಟಲು ನಿಂತಿದ್ದ ವೇಳೆ ಮಂಗಳೂರು ಕಡೆಯಿಂದ ಉಡುಪಿಯತ್ತ ಚಲಿಸುತ್ತಿದ್ದ ಖಾಸಗಿ ವಿದ್ಯಾಸಂಸ್ಥೆಯ ವಾಹನ ಡಿಕ್ಕಿಯಾಗಿದೆ. ಘಟನೆಯಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು : ಜಾಗತಿಕ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ದಯಾನಂದ ಕುಕ್ಕಾಜೆ

Thumbnail
Posted On: 08 Dec 2022, 10:52 PM

ಮಂಗಳೂರು : ಗ್ಲೋಬಲ್ ಟ್ಯಾಲೆಂಟ್ ಸರ್ಚ್ ಫರ್ಮ್ ಇನ್ನೋವೈಜ್ ಆರ್ಟ್ಸ್ ಅಂಡ್ ಕಲ್ಚರ್ ಆಯೋಜಿಸಿದ್ದ 2022 ರ ಜಾಗತಿಕ ಛಾಯಾಗ್ರಹಣ ಸ್ಪರ್ಧೆಯ ಸೀಸನ್ 3ರಲ್ಲಿ, ಖ್ಯಾತ ಪೋಟೋ ಜರ್ನಲಿಸ್ಟ್ ದಯಾನಂದ ಕುಕ್ಕಾಜೆ ಅವರು ’ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದಯಾನಂದ ಕುಕ್ಕಾಜೆ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಗಿದ್ದು. ಈ ಹಿಂದೆ ಇವರು ಅತ್ಯುತ್ತಮ ಆಕ್ಷನ್ ಛಾಯಾಗ್ರಹಣ ಪ್ರಶಸ್ತಿ ಮತ್ತು ಅತ್ಯುತ್ತಮ ಕ್ಯಾಂಡಿಡ್ ಛಾಯಾಗ್ರಹಣ ಪ್ರಶಸ್ತಿ ಪಡೆದಿದ್ದರು. ಗ್ಲೋಬಲ್ ಫೋಟೋಗ್ರಫಿ ಕಾಂಟೆಸ್ಟ್ 2022 ರ ಸೀಸನ್ -3 ಅನ್ನು ಭಾರತದ ಛಾಯಾಗ್ರಾಹಕರು ಮತ್ತು ಹಲವಾರು  ದೇಶಗಳ ಎನ್‌ಆರ್‌ಐಗಳ ನಡುವೆ ನಡೆಸಲಾಗಿತ್ತು. ಕುಕ್ಕಾಜೆ ಅವರು 12ಕ್ಕೂ ಹೆಚ್ಚು ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದು ತಮ್ಮ ಛಾಯಾಗ್ರಹಣ ಕೌಶಲ್ಯವನ್ನು ಪ್ರದರ್ಶಿಸಲು ಆರಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ.