Updated News From Kaup
ಉಚ್ಚಿಲ ಅಪಘಾತ : ಅಪ್ಪ, ಮಗನ ಬಲಿ ಪಡೆದ ಲಾರಿಯ ಚಾಲಕ 16 ವರ್ಷದ ಬಾಲಕ !

Posted On: 16-09-2022 05:11PM
ಉಚ್ಚಿಲ : ಅಪ್ಪ ಮತ್ತು ಮಗನ ಸಾವಿಗೆ ಕಾರಣವಾಗಿ ಅಪಘಾತ ಎಸಗಿ ಪರಾರಿಯಾದ 14 ಚಕ್ರದ ಲಾರಿಯನ್ನು 16 ವರ್ಷದ ಬಾಲಕ ಚಲಾಯಿಸುತ್ತಿದ್ದ ಬಗ್ಗೆ ಆಘಾತಕಾರಿ ಸುದ್ದಿ ಪೋಲಿಸರಿಂದ ತಿಳಿದು ಬಂದಿದೆ.
ರಾತ್ರಿ ಇಡೀ ಬಾಲಕ ಲಾರಿಯನ್ನು ಚಲಾಯಿಸಿದ್ದು, ಬಳಿಕ ಬಾಲಕನು ಡಿವೈಡರ್ ಮೇಲೆ ಲಾರಿಯನ್ನು ಹತ್ತಿಸಿ ಕಂಬಕ್ಕೆ ಢಿಕ್ಕಿ ಹೊಡೆದು ಸುಮಾರು ಒಂದೂವರೆ ಕಿ.ಮೀ. ಕ್ರಮಿಸಿದ ಬಳಿಕ ನಿಲ್ಲಿಸಿ ಚಾಲಕ ಶೇಖರ್ಗೆ ವಿಷಯವನ್ನು ತಿಳಿಸಿದ್ದ. ನಿದ್ದೆಯ ಮಂಪರಿನಲ್ಲಿದ್ದ ಬಾಲಕನಿಗೆ ತಾನು ರಸ್ತೆ ಬದಿಯಲ್ಲಿನ ಮಣ್ಣು ರಸ್ತೆಯಲ್ಲಿ ನಿಂತಿದ್ದ ತಂದೆ-ಮಗನಿಗೆ ಢಿಕ್ಕಿಯಾದ ಬಗ್ಗೆ ಅರಿವಿಗೇ ಬಂದಿರಲಿಲ್ಲ.
ಚಾಲಕ ಶೇಖರ್ನನ್ನು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕನನ್ನು ಖಾಸಗಿ ಬಾಲ ಮಂದಿರಕ್ಕೆ ಕಳುಹಿಸಲಾಗಿದ್ದು, ಆತನ ತಂದೆಯ ಆಗಮನದ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಚಾಲಕ ಶೇಖರ್ನ ಚಾಲನ ಪರವಾನಿಗೆಯನ್ನು ಹಾಗೂ ಗೂಡ್ಸ್ ಸಾಗಾಟದ ಏಜೆನ್ಸಿಯನ್ನೂ ರದ್ದು ಗೊಳಿಸಲು ಪೊಲೀಸರು ಕ್ರಮ ಕೈಗೊಂಡಿರುವುದಾಗಿ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಕಾಪು ಸಿಪಿಐ ಪೂವಯ್ಯ ತಿಳಿಸಿದ್ದಾರೆ.
ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿನ ಉಚ್ಚಿಲದಲ್ಲಿ ಎರಡು ಕಿಲೋಮಿಟರ್ ಉದ್ದದ ಸರ್ವಿಸ್ ರಸ್ತೆಯ ಕಾಮಗಾರಿ ಮೂರು ವರ್ಷಗಳಿಂದ ಪೂರ್ತಿಯಾಗದೆ ಉಳಿದಿವೆ. ಇಲ್ಲಿ ಸಂಭವಿಸುವ ಯಾವುದೇ ಹೆದ್ದಾರಿ ಅಪಘಾತಗಳಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ನವಯುಗ ನಿರ್ಮಾಣ ಕಂಪೆನಿಯನ್ನೂ ಹೊಣೆಗಾರರನ್ನಾಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಿಜೆಪಿಯಿಂದ ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ ಅಭಿಯಾನ ಆಯೋಜನೆ

Posted On: 16-09-2022 04:48PM
ಕಾಪು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ವತಿಯಿಂದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸೇವಾ ಪಾಕ್ಷಿಕ ಅಭಿಯಾನ ಆಯೋಜಿಸಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಕೆ ರಾಘವೇಂದ್ರ ಕಿಣಿಯವರು ಕಾಪು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ರವರ ನೇತೃತ್ವದಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ವೈಶಿಷ್ಟ ಪೂರ್ಣ ಸೇವಾ ಕಾರ್ಯ ಹಮ್ಮಿಕೊಂಡಿದ್ದು ಅದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ ೨೫ರಂದು ಭಾರತೀಯ ಜನಸಂಘದ ಸಂಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನ ಹಾಗೂ ಅಕ್ಟೋಬರ್ ೨ರಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಆಚರಿಸಲಾಗುವುದು.
ಆರೋಗ್ಯ ತಪಾಸಣಾ ಶಿಬಿರ, ಲಸಿಕಾ ಅಭಿಯಾನ, ರಕ್ತದಾನ ಶಿಬಿರ, ಕಮಲೋತ್ಸವ, ಅಶ್ವಥ ಮರ ನೆಡುವ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಅಂಗನವಾಡಿ ಸೇವಾ ದಿವಸ್, ಕ್ಷಯರೋಗ ನಿರ್ಮೂಲನ ದಿವಸ ಸಹಿತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಸಹ ವಕ್ತಾರ ಶಿವಕುಮಾರ್, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಿ ಜಿ ಸುವರ್ಣ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿಯೂರು, ಮಂಡಲ ಕಾರ್ಯದರ್ಶಿ ಗೋಪಾಲ್ ಕೃಷ್ಣರಾವ್, ಸಮರ್ಥ್ ಶೆಟ್ಟಿ, ಪ್ರತಾಪ್ ಶೆಟ್ಟಿ, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಜೆಡಿಎಸ್ ಪಕ್ಷದ ಸಾಮಾನ್ಯ ಸಭೆ, ಪಕ್ಷ ಸೇರ್ಪಡೆ ಕಾರ್ಯಕ್ರಮ

Posted On: 16-09-2022 04:37PM
ಕಾಪು : ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಪಕ್ಷದ ಸಾಮಾನ್ಯ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮವು ಬುಧವಾರ ಬೆಳಿಗ್ಗೆ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾಪು ಮಹಾಬಲ ಮಾಲ್ ನ ಪಕ್ಷ ಕಚೇರಿಯಲ್ಲಿ ಜರಗಿತು.
ಸಭೆಯಲ್ಲಿ ಬೂತ್ ಮಟ್ಟದ ಸಭೆ ನಡೆಸುವ ಬಗ್ಗೆ ಚರ್ಚಿಸಲಾಯಿತು. ಕಾಪು ವಿಧಾನಸಭಾ ಕ್ಷೇತ್ರದ ಉತ್ತರ ವಲಯದ ಅಧ್ಯಕ್ಷರಾದ ಇಕ್ಬಾಲ್ ಅತ್ರಾಡಿ ಮತ್ತು ದಕ್ಷಿಣ ವಲಯದ ಭರತ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಪುರಸಭೆ ಸದಸ್ಯರಾದ ಉಮೇಶ್ ಕರ್ಕೇರ, ಸಂಕಪ್ಪ ಎ, ಸಂಜಯಕುಮಾರ್, ಕಾರ್ಕಳ ಬ್ಲಾಕ್ ಅಧ್ಯಕ್ಷರಾದ ಶ್ರೀಕಾಂತ್ ಹೆಬ್ರಿ, ಮನ್ಸೂರ್ ಇಬ್ರಾಹಿಂ,ಹುಸೇನ್ ಹೈಕಾಡಿ ಮತ್ತಿರರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂಧರ್ಭ ಶ್ರೀ ಫೈಝಮ್ ಮತ್ತು ಅವಿನಾಶ್ ರವರೂ ಸೇರಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಮಾಜದ ಹಲವಾರು ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿಯವರು ಯುವಕರಿಗೆ ಶಾಲು ಹೊದಿಸಿ, ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು ಮತ್ತು ಪಕ್ಷ ಸಂಘಟನೆಗೆ ಒತ್ತು ನೀಡುವರೆ ಕರೆ ನೀಡಿದರು.
ಸಭೆಯಲ್ಲಿ ನಾಯಕರುಗಳಾದ ಸುಧಾಕರ್ ಶೆಟ್ಟಿ, ಇಸ್ಮಾಯಿಲ್ ಪಲಿಮಾರ್, ಚಂದ್ರಹಾಸ ಎರ್ಮಾಳ್,ವೆಂಕಟೇಶ್ ಎಂ ಟಿ, ಅಬ್ದುಲ್ ರಜಾಕ್ ಉಚ್ಚಿಲ, ರಂಗಾ ಕೋಟ್ಯಾನ್, ದೇವರಾಜ್ ಕಾಪು,ಸುರೇಶ ದೇವಾಡಿಗ, ಇಬ್ರಾಹಿಂ ತವಕ್ಕಲ್, ಮಹಮ್ಮದ್ ರಫೀಕ್, ಶಂಶುದ್ದಿನ್, ಬಿ ಕೆ ಮಹಮ್ಮದ್, ಅಬ್ಬಾಸ್ ಹಾಜೀ, ಪ್ರಶಾಂತ್ ಭಂಡಾರಿ,ಸಾರ್ಫಾಜ್ ಮಲ್ಲಾರ್,ರವಿಚಂದ್ರ ಶೆಟ್ಟಿ, ಯು ಎ ರಶೀದ್, ಮತ್ತು ಪಕ್ಷ ಕಾರ್ಯಕರ್ತರು ಹಾಜರಿದ್ದರು.
ಆಲಸಿಗಳಿಗೆ ಸಲ್ಲದ ಒಲ್ಲದ ಒಲಿಯದ ವಲಸೆ ನಗರಿ ಮುಂಬಯಿ

Posted On: 14-09-2022 09:30PM
ಮುಂಬಯಿಯಲ್ಲಿ ಸಲ್ಲದವ ಎಲ್ಲೂ ಸಲ್ಲನು ಎಂಬ ಮಾತೊಂದು ಜನಜನಿತವಾಗಿದೆ. ಮುಂಬಯಿಯಲ್ಲಿ ಬದುಕನ್ನು ಒಗ್ಗಿಸಿಕೊಳ್ಳದವರು ಪ್ರಪಂಚದ ಯಾವ ಮೂಲೆಯಲ್ಲೂ ಒಗ್ಗಿಸಿಕೊಳ್ಳುವುದು ಕಷ್ಟ ಸಾಧ್ಯ. ಎಂದೂ ಮಲಗದ ನಗರಿ ಮುಂಬೈ ಎಂಥವರಿಗೂ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ. ತನ್ನಿಂದ ತಾನಾಗಿ ಶಿಸ್ತಿನ, ಕ್ರಮಬದ್ಧವಾದ ದಿನಚರಿಗೆ ಒಗ್ಗಿಸಿ, ಬಗ್ಗಿಸಿ, ದಂಡಿಸಿ, ದುಡಿಸಿಕೊಳ್ಳುವ ಅಗೋಚರ ಶಕ್ತಿ ಸಪ್ತ ದ್ವೀಪಗಳ ನಗರದಲ್ಲಿ ಸುಪ್ತವಾಗಿದೆ. ಪ್ರಥಮ ಸಲ ಮುಂಬೈ ನಗರಿಗೆ ಬಂದವರಿಗೆ ಕಣ್ಣು ಕಟ್ಟಿ ಮೂರು ಸುತ್ತು ತಿರುಗಿಸಿ ಬಿಟ್ಟ ಅನುಭವವಾಗುತ್ತದೆ. ಊರಲ್ಲಿ ಸೂರ್ಯಕಿರಣ ಬೀಳುವ ಬಾವಿಯ ಶುದ್ಧೋದಕ ಕುಡಿದವರಿಗೆ ಮಹಾನಗರದ ಕ್ಲೋರಿನ್ ಮಿಶ್ರಿತ ಕುಡಿಯುವ ನೀರು ಒಂದು ತರ ಘಮಿಸುತ್ತದೆ. ಕುಚ್ಚಲಕ್ಕಿಯ ಅನ್ನ ಉಂಡವರಿಗೆ ಬೆಳ್ತಿಗೆ ಅಕ್ಕಿಯ ಊಟ ರುಚಿಸುವುದಿಲ್ಲ. ಚಾಳ್ ವ್ಯವಸ್ಥೆ ಅಥವಾ ಮ್ಹಾಡದ ವಸತಿ ಸಂಕುಲಗಳಲ್ಲಿ ಅನೇಕ ರಾಜ್ಯದ ವಲಸಿಗರಿರುತ್ತಾರೆ. ನೆರೆಹೊರೆಯಲ್ಲಿ ಉತ್ತರ ಭಾರತೀಯರಿದ್ದರೆ; ಸಾಸಿವೆ ಎಣ್ಣೆಯನ್ನು ನಖಶಿಖಾಂತ ಪೋಸಿಕೊಳ್ಳುವುದು ಮಾತ್ರವಲ್ಲ ಎಲ್ಲ ವ್ಯಂಜನ, ಮೇಲೋಗರಕ್ಕೂ ಉಪಯೋಗಿಸುತ್ತಾರೆ. ಊರಿನಲ್ಲಿ ಶುದ್ಧ ತೆಂಗಿನ ಎಣ್ಣೆ, ಎಳ್ಳಿನ ಎಣ್ಣೆ ಉಪಯೋಗಿಸುತ್ತಿದ್ದವರಿಗೆ ಸಾಸಿವೆ ಎಣ್ಣೆಯ ವಿಪರೀತ ಘಮ ನಾಸಿಕವನ್ನು ಹೊಕ್ಕಿ ತಲೆ ಸಿಡಿಯತೊಡಗುತ್ತದೆ. ಘಟ್ಟ ಪ್ರದೇಶದ ಮರಾಠಿಗರು ಇದ್ದರೆ; ಸತಾರಿ, ಪಂಡಾರಪುರಿ ತಂಬಾಕನ್ನು ಸುಟ್ಟು ಹಲ್ಲುಜ್ಜುವ ಮಿಶ್ರಿಯನ್ನು ತಯಾರಿಸುವಾಗ ಬರುವ ಕಟುವಾಸನೆ ಸಹಿಸಲು ಅಸಾಧ್ಯವಾಗುತ್ತದೆ. ಬುಧವಾರ, ಶುಕ್ರವಾರ ಹಾಗೂ ರವಿವಾರಗಳಲ್ಲಿ ಸುಕ್ಕ (ಒಣ) ಬೊಂಬಿಲ್ ಮೀನನ್ನು ಪದಾರ್ಥಕ್ಕಾಗಿ ತವದಲ್ಲಿ ಕರಿಯುವಾಗ ಮೂಗಿನ ಹೊಳ್ಳೆಗಳು ನಲುಗಲಾರಂಭಿಸುತ್ತವೆ.

ಮರಾಠಿ, ಹಿಂದಿ ಬಾರದವರು ರೈಲ್ವೆ ನಿಲ್ಮನೆಗೆ ಬಂದಾಗ; ಬಂದು ಹೋಗುವ ರೈಲುಗಳ ವಿವರಣೆಯ ಉದ್ಘೋಷಣೆಯು ಒಂದು ವಿಶಿಷ್ಟವಾದ ಅನುಭವ ನೀಡುತ್ತದೆ. ಮುಂಬಯಿ ನಗರದ ನಾಡಿಯಾಗಿರುವ ರೈಲು ಪ್ರಯಾಣವು ಒಂದು ವಿಚಿತ್ರಲೋಕವನ್ನೇ ತೆರಿದಿಡುತ್ತದೆ. ಜೀವನ ಪರ್ಯಂತ ಪ್ರಯಾಣಿಸಿದರೂ ನಿತ್ಯವೂ ನೂತನವಾದ ಅನುಭವ. ನೀವು ಉದ್ದವಾಗಿದ್ದರೆ ನೇತಾಡುವ ಸಂಕಲೆಗಳು ತಲೆಗೆ ಬಡಿಯುತ್ತವೆ. ಗಿಡ್ಡವಾಗಿದ್ದರೆ ಜನಜಂಗುಳಿಯಿಂದ ಉಸಿರುಗಟ್ಟುತ್ತದೆ. ತೋರವಾಗಿದ್ದರೆ ಹತ್ತಾರು ಮೊಣಕೈಗಳ ತಿವಿತದ ಅನುಭವವಾಗುತ್ತದೆ. ಎಣ್ಣೆ, ಅತ್ತರು, ಶರಾಬು, ಬೀಡಿ, ಸಿಗರೇಟ್, ಮಾವ, ಗುಡ್ಕ, ಬೀಡಾಗಳ ಸುವಾಸನೆಗಳು ಬೆವರಿನೊಂದಿಗೆ ಬೆರೆತು ಸಂಮಿಶ್ರಣಗೊಂಡು ವಿಚಿತ್ರವಾದ ಮತ್ಯಾವುದೋ ಒಂದು ವಾಸನೆಯಾಗಿ ಮಾರ್ಪಟ್ಟು ವ್ಯಾಪಿಸುತ್ತದೆ. ಈ ಪರಿಮಳಕ್ಕೆ ಶ್ವಾಸದ ಮೇಲಿಟ್ಟ ವಿಶ್ವಾಸವೇ ರೋಧಿಸುತ್ತದೆ. ರೈಲು ಹತ್ತುವ ಮತ್ತು ಇಳಿಯುವ ಕೆಲಸವೂ ಸಾಮಾನ್ಯದಲ್ಲ. ನೀವು ನೀವಾಗಿ ಹತ್ತುವುದಿಲ್ಲ, ಇಳಿಯುವುದಿಲ್ಲ. ಜನಸಮೂಹದ ಒಂದಂಗವಾಗಿರಬೇಕಾಗುತ್ತದೆ. ಇತ್ತೀಚೆಗೆ ಕಡಿಮೆಯಾಗಿರುವ, ಒಂದು ಕಾಲದಲ್ಲಿ ಉದ್ಯೋಗವೇ ಆಗಿದ್ದ ಪಿಕ್-ಪಾಕೆಟ್ ಯಕ್ಷಿಣಿಯಿಂದ ರಕ್ಷಿಸಿಕೊಂಡು ಪ್ರಯಾಣಿಸುವುದು ಹಗ್ಗದ ಮೇಲಿನ ನಡಿಗೆಯಾಗುತ್ತದೆ. ಬಾಗಿಲಲ್ಲಿ ನಿಂತರೆ ಕೈಸೋತು ಕಾಲುಜಾರುವ ಭಯ. ವಿದ್ಯುತ್ ಕಂಬಗಳಿಂದ ರಕ್ಷಿಸಿಕೊಳ್ಳುವ ಸರ್ಕಸ್ ಗೊತ್ತಿರಬೇಕು.
ಏನ್ನೆಲ್ಲ ಸಮಸ್ಯೆಗಳಿದ್ದರೂ, ಅಪವಾದಗಳಿದ್ದರೂ ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಬೆವರಿನ ಬೆಲೆ ತಿಳಿದಿದೆ. ಬೆವರು ಹರಿಸಿದರೆ ಕಡೆಗೊಂದು ದಿನ ನೆಲೆಯನ್ನು ಒದಗಿಸುತ್ತದೆ. ದುಡಿಯುವವರ ರಟ್ಟೆಬಲ, ಜಾಣ್ಮೆ, ಮಾತಿನಕಲೆ, ಕ್ರಿಯಾಶೀಲತೆ, ನಾಯಕತ್ವ, ಪರಿಸ್ಥಿಯ ನಿಭಾವಣೆ, ತಾಳ್ಮೆ, ಸಹನೆ, ಪರಿಶ್ರಮಗಳಿಗೆ ಅನುಗುಣವಾದ ಮೌಲ್ಯಮಾಪನವಾಗುತ್ತದೆ. ಅದರಂತೆ ಪ್ರತಿಫಲ ದೊರೆಯುತ್ತದೆ. ಅನಾಮಿಕರಾಗಿದ್ದವರು ಸತ್ಸಮಯದಲ್ಲಿ ಖ್ಯಾತರಾಗುತ್ತಾರೆ. ಬಡವ ಬಲ್ಲಿದನಾಗುತ್ತಾನೆ. ಬಲ್ಲಿದ ಬಳಲಿ ಬಲಗುಂದಿ ಬಡವನಾಗುತ್ತಾನೆ. ನದಿ, ಋಷಿ, ಸ್ತ್ರೀ ಮೂಲಗಳಂತೆ ಹಣದ ಮೂಲವನ್ನು ಮುಂಬಯಿಯಲ್ಲಿ ಯಾರು ಜಾಲಾಡುವುದಿಲ್ಲ. ತಂತಮ್ಮ ಜೇಬಿನ ಭಾರಕ್ಕನುಗುಣವಾದ ಊಟ, ತಿಂಡಿ, ತೀರ್ಥ, ಬಟ್ಟೆಬರೆ, ಸೂರುಗಳು ಲಭಿಸುತ್ತವೆ. ಇಲ್ಲಿ ಕೇವಲ ಎರಡ್ಮೂರು ದೊಡ್ಡ ಬಾಳೆ ಹಣ್ಣು ಅಥವಾ ವಡಪಾವು ತಿಂದು ಬದುಕುವ ಕುಚೇಲರಿಂದ ಹಿಡಿದು ಚಿನ್ನದ ಬಟ್ಟಲು ತಟ್ಟೆಗಳಲ್ಲಿ ಷಡ್ರಸ ಭೋಜನ ಮಾಡುವ ಕುಬೇರರೂ ಇದ್ದಾರೆ. ಅಮ್ಚಿ ಮುಂಬಯಿ ಹಲವಾರು ಅಗ್ನಿ ದಿವ್ಯಗಳಿಗೆ ಒಳಪಟ್ಟಿದೆ. ಭೀಕರವಾದ ಕೋಮು ಗಲಭೆಗಳು, ಭಯಾನಕ ಸರಣಿ ಬಾಂಬ್ ಸ್ಪೋಟಗಳು, ಭಯೋತ್ಪಾದಕರ ದಾಳಿ, ನೆರೆ ಹಾವಳಿ ಇತ್ಯಾದಿಗಳು. ಆದರೆ ಒಂದೆರಡು ದಿನಗಳಲ್ಲಿ ಮುಂಬಯಿ ಸೆಟೆದು ನಿಲ್ಲುತ್ತದೆ. ಬಾಳಿನ ಬಂಡಿ ಹಳಿ ಮೇಲೆ ಓಡತೊಡಗುತ್ತದೆ.
ದಾರಿಹೋಕರ ನೀರಡಿಕೆಗಾಗಿ ಎಲ್ಲ ಹೋಟೆಲುಗಳಲ್ಲಿ ತಾಟು ತುಂಬ ನೀಟಾಗಿ ನಿಲ್ಲಿಸಿದ ಲೋಟಗಳಲ್ಲಿ ನೀರನ್ನು ತುಂಬಿಸಿಡುತ್ತಾರೆ. ರೈಲಿನ ಎರಡನೆ ದರ್ಜೆಯ ಬೋಗಿಯಲ್ಲಿ ಮೂರು ಮಂದಿ ಕೂರುವ ಸೀಟಿನಲ್ಲಿ ನಾಲ್ಕನೆಯವನು ಕುಳಿತುಕೊಳ್ಳ ತಕ್ಕದ್ದು. ದೂರದಿಂದ ಕುಳಿತುಕೊಂಡು ಬಂದವರು ಇಳಿಯಲು ನಾಲ್ಕಾರು ನಿಲ್ದಾಣಗಳು ಇರುವಾಗಲೇ ಎದ್ದು ನಿಂತು ಬೇರೆಯವರಿಗೆ ಕೂರಲು ಅನುವು ಮಾಡ ತಕ್ಕದ್ದು. ಪ್ರಥಮ ದರ್ಜೆ ಬೋಗಿಯಲ್ಲಿ ನಾಲ್ಕನೆಯವನು ಕುಳಿತುಕೊಳ್ಳುವ ಸೌಲಭ್ಯ ಇಲ್ಲವೇ ಇಲ್ಲ. ಬೀಡಾ ಅಂಗಡಿಯಲ್ಲಿ ತಂಬಾಕು ತಿನ್ನುವವರಿಗೆ ಸುಣ್ಣ ಉಚಿತವಾಗಿ ನೀಡ ತಕ್ಕದ್ದು. ಇವೆಲ್ಲ ಒಂದು ರೀತಿಯ ಅಲಿಖಿತ ನಿಯಮಗಳು ಓಬೀರಾಯನ ಕಾಲದಿಂದ ಚಾಲ್ತಿಯಲ್ಲಿವೆ. ಒಟ್ಟಿನಲ್ಲಿ ಮುಂಬಯಿ ಶಿವ ಶರಣರ ವಚನದಂತೆ. ಕಾಯಕವನ್ನೇ ಕೈಲಾಸ ಮಾಡಿಕೊಂಡರೆ ಸಲಹುತ್ತದೆ. ಅಸನಕ್ಕೆ, ವಸನಕ್ಕೆ, ವ್ಯಸನಕ್ಕೆ ಸ್ಪಂದಿಸುತ್ತದೆ. ನೆಲೆಯೂರಲು ಸೆಲೆಯಾಗುತ್ತದೆ. ಪರಿಶ್ರಮವನ್ನು ತ್ಯಜಿಸಿ, ಸದಾ ವಿಶ್ರಾಂತಿಗಾಗಿ ಹಾತೊರೆಯುವ ಆಲಸಿಗರಿಗೆ ಮುಂಬಾ ಮಾತೆ ಒಲಿಯುವುದಿಲ್ಲ. ಪರಿಶ್ರಮಿಗಳ ಕೈ ಬಿಡುವುದಿಲ್ಲ. ಬರಹ : ಉದಯ ಶೆಟ್ಟಿ, ಪಂಜಿಮಾರು
ಕಟಪಾಡಿ : ಬಿಜೆಪಿ - ಮಹಾಶಕ್ತಿಕೇಂದ್ರ ಸಭೆ

Posted On: 14-09-2022 09:26PM
ಕಟಪಾಡಿ : ಇಲ್ಲಿಯ ಬಿಜೆಪಿ ಪಕ್ಷದ ಮಹಾಶಕ್ತಿಕೇಂದ್ರ ಸಭೆ ಇಂದು ಕಟಪಾಡಿಯಲ್ಲಿ ನಡೆಯಿತು. ಪ್ರಧಾನಿ ಮೋದಿ ಜನ್ಮದಿನದಿಂದ ಗಾಂಧಿಜಯಂತಿ ತನಕ ಪಕ್ಷ ಕೊಟ್ಟ ಕಾರ್ಯಕ್ರಮಗಳು ಹಾಗೂ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆದು ಮಾಹಿತಿ ವಿನಿಮಯ ಮಾಡಿಕೊಂಡು ಮುಂಬರುವಂತಹ ಯಾವುದೇ ಚುನಾವಣೆಗಳಿಗೆ ಪಕ್ಷ ಸಂಪೂರ್ಣ ಸನ್ನಧ್ಧವಾಗುವಲ್ಲಿ ಮಾಡಬೇಕಾದ ಚಟುವಟಿಕಗಳ ಬಗ್ಗೆ ಚರ್ಚಿಸಲಾಯಿತು.
ಅಧ್ಯಕ್ಷತೆಯನ್ನು ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ವಿಶ್ವನಾಥ ಕುರ್ಕಾಲು ವಹಿಸಿದ್ದರು. ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಜಿಲ್ಲಾ ಬಿಜೆಪಿ ಮಹಿಳಾಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ, ಸಹಕಾರ ಪ್ರಕೋಷ್ಠ ಜಿಲ್ಲಾ ಸಂಚಾಲಕರಾದ ಮುರಳೀಧರ ಪೈ, ಮಂಡಲ ಕಾರ್ಯದರ್ಶಿ ಮಾಲಿನಿ ಶೆಟ್ಟಿ ವಿವಿಧ ಶಕ್ತಿಕೇಂದ್ರ ಪ್ರಮುಖರು, ಪದಾಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಗುರುಕ್ರಪಾ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಿರ್ವ ಗ್ರಾಮ ಪಂಚಾಯತ್’ನ ನೂತನ ಅಧ್ಯಕ್ಷರಾಗಿ ರತನ್ ಶೆಟ್ಟಿ ಆಯ್ಕೆ

Posted On: 14-09-2022 09:21PM
ಶಿರ್ವ : ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ತೆರವುಗೊಂಡ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರತನ್ ಕುಮಾರ್ ಶೆಟ್ಟಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಕೆ.ಆರ್ ಪಾಟ್ಕರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಪಂಚಾಯತ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ರತನ್ ಕುಮಾರ್ ಶೆಟ್ಟಿ ಹಾಗೂ ಬಿಜೆಪಿ ಬೆಂಬಲಿತ ಶ್ರೀನಿವಾಸ ಶೆಣೈ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಈ ಚುನಾವಣೆಯ ಕಾಂಗ್ರೆಸ್ ಬೆಂಬಲಿತ ೧೯ ಮಂದಿ ಹಾಗೂ ಬಿಜೆಪಿ ಬೆಂಬಲಿತ ೧೫ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರತನ್ ಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ನ ೧೯ ಮತ ಹಾಗೂ ಬಿಜೆಪಿಯ ಓರ್ವ ಸದಸ್ಯರ ಅಡ್ಡ ಮತ ಪಡೆದು ೨೦ ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ೧೪ ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ.
ರತನ್ ಕುಮಾರ್ ಶೆಟ್ಟಿ ಅವರು ೩ ಬಾರಿ ಶಿರ್ವ ಗ್ರಾಮ ಪಂಚಾಯತ್ ನ ಸದಸ್ಯರಾಗಿದ್ದು, ೨ ಬಾರಿ ಪದವು ವಾರ್ಡ್ ನ ಸದಸ್ಯರಾಗಿದ್ದರು, ಪ್ರಸ್ತುತ ಕುಡ್ತ ಮಜಲು ವಾರ್ಡ್ ನ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಪದವು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾಣಾಧಿಕಾರಿಯಾಗಿ ಉಡುಪಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಚುನಾವಣೆಯ ಪ್ರಕ್ರಿಯೆ ನಡೆಸಿಕೊಟ್ಟರು.
ಕಾಪು : ಅಕ್ಷಯಧಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ - ವಾರ್ಷಿಕ ಮಹಾಸಭೆ

Posted On: 14-09-2022 08:42PM
ಕಾಪು : ಪರಿಸರದ ಜನಪ್ರಿಯ ಆರ್ಥಿಕ ಸಂಸ್ಥೆ ಅಕ್ಷಯಧಾರ ಕ್ರೆಡಿಟ್ ಸೊಸೈಟಿ ,ಇದರ 2021-22 ರ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 13 ರಂದು ಬೆಳ್ಳಿಗ್ಗೆ, ಕಾಪು ಭಾಸ್ಕರ ಸೌಧದಲ್ಲಿ ಅಧ್ಯಕ್ಷರಾದ ಲವ.ಎನ್.ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2022-23 ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಜೂರು ಮಾಡಲಾಯಿತು. ಈ ಸಂಧರ್ಭದಲ್ಲಿ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಅಂಕದೊಂದಿಗೆ ಉತೀರ್ಣಳಾದ ಕೀರ್ತನ ಯು.ಕುಂದರ್, ಬಿ.ಎಸ್.ಸಿ.ಯಲ್ಲಿ ಪ್ರಥಮ ರಾಂಕ್ ಪಡೆದ ಶ್ರಾವಿಕ ಶೆಟ್ಟಿ, ಎಸ್.ಎಸ್.ಎಲ್ ಸಿ.ಯಲ್ಲಿ ಪ್ರಥಮ ಶೇಣಿಯಲ್ಲಿ ತೇರ್ಗಡೆಯಾದ ಕೃತಿ.ಎಸ್.ಆಚಾರ್ಯ ಹಾಗೂ ಹೈದರಾಬಾದ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಯಾ ಪೂಜಾರಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯೊಂದಿಗೆ ಆರಂಭದ ದಿನದಿಂದಲೂ ಆರ್ಥಿಕ ವ್ಯವಹಾರ ಮಾಡುತ್ತಿರುವ, ಕೊಡುಗೈ ದಾನಿ ಚಂದ್ರ ಜಯ ಬಂಗೇರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಸದಸ್ಯರ ಪರವಾಗಿ ಸೀತಾಲಕ್ಷ್ಮಿ ವ್ಯಾಸ ರಾವ್, ವಿಠಲ್ ರಾವ್, ಸುಂದರ ಸುವರ್ಣ, ಸೀತಾರಾಮ ಸಾಲ್ಯಾನ್ ಮಾತನಾಡಿ ಸಲಹೆ,ಸೂಚನೆ ನೀಡಿದರು. ಲೆಕ್ಕ ಪರಿಶೋಧಕರಾದ ಅಜಿತ್ ಕುಮಾರ್ ಸೊಸೈಟಿಯ ಒಟ್ಟು ವ್ಯವಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಲಹೆ ನೀಡಿದರು. ಅಧ್ಯಕ್ಷೀಯ ಭಾಷಣ ಮಾಡಿದ ಲವ ಕರ್ಕೇರ "ಕಳೆದ 13 ವರ್ಷಗಳಿಂದ ನಮ್ಮ ಆರ್ಥಿಕ ಸಂಸ್ಥೆ ಶೇರುದಾರರ, ಗ್ರಾಹಕರ,ಠೇವಣಿದಾರರ ಹಿತೆಷಿಗಳ ಸಹಕಾರದಿಂದ ಮುನ್ನಡೆಯುತ್ತಿದ್ದು, ಸಂಸ್ಥೆಯು ಬಲಿಷ್ಠವಾಗಿ ಬೆಳೆಯುವಲ್ಲಿ ಮುಂದಕ್ಕೂ ಎಲ್ಲರೂ ಸ್ಪಂದಿಸಬೇಕು.ನಮ್ಮ ಸಂಸ್ಥೆ ಗ್ರಾಹಕರಿಗೆ, ಸಣ್ಣ ಉದ್ದಿಮೆದಾರರಿಗೆ ವಿವಿಧ ಸಾಲ, ಸೌಲಬ್ಯಗಳನ್ನು ನೀಡುತ್ತಿದ್ದು, ಇದರ ಪ್ರಯೋಜನವನ್ನು ಪಡೆಯುವುದರೊಂದಿಗೆ ತಮ್ಮ ಉದ್ದಿಮೆಯ ಜತೆ ಅಕ್ಷಯಧಾರ ಸೊಸೈಟಿಯನ್ನು ಬೆಳೆಸಬೇಕು" ಎಂದರು.
ನಿರ್ದೇಶಕ ಶಿವರಾಮ ಆಚಾರ್ಯ ಸ್ವಾಗತಿಸಿದರು. ಕಾರ್ಯಧರ್ಶಿ ಅಮಿತಾ ದೇವದಾಸ್ ವಾರ್ಷಿಕ ವರದಿ ವಾಚಿಸಿದರೆ, ನಿರ್ದೇಶಕ ಜಗಧೀಶ ಮೆಂಡನ್ ಲೆಕ್ಕಪತ್ರ ಮಂಡಿಸಿದರು. ಸೊಸೈಟಿಯ ಉಪಾಧ್ಯಕ್ಷ ಮೊಹಮ್ಮದ್ ಇರ್ಫಾನ್, ನಿರ್ದೇಶಕರುಗಳಾದ ವಿಜಯ ಶೆಟ್ಟಿ, ಶಿವರಾಂ ಆಚಾರ್ಯ, ಉತ್ತಮ ಕುಮಾರ್, ದೀಪಾಲತಾ, ವಿಮಲ ದೇವಾಡಿಗ, ಯೋಗೇಶ್ ಪೂಜಾರಿ ಮಲ್ಲಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕ್ ನ ಸಿಬ್ಬಂದಿಗಳಾದ ಐರ್ವಿನ್ ಸೊನ್ಸ್ , ಸೌಮ್ಯ ಶೆಟ್ಟಿ ಸಹಕರಿಸಿದರು. ಮೊಹಮದ್ ಸಾದಿಕ್ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಈ ಬಾರಿಯ ಮಹಾಸಭೆಯಲ್ಲಿ ಶೇರುದಾರರು, ಗ್ರಾಹಕರು, ಪಿಗ್ಮಿ ಏಜೆಂಟರು ಮತ್ತಿತರರು ಉಪಸ್ಥಿತರಿದ್ದರು.
ಬಾಸ್ಕೆಟ್ ಬಾಲ್ ಪಂದ್ಯಾಟ : ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ಬಾಲಕಿಯರು ವಿಭಾಗಮಟ್ಟಕ್ಕೆ ಆಯ್ಕೆ

Posted On: 14-09-2022 08:36PM
ಕಾಪು : ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಇವರ ಸಹಯೋಗದಲ್ಲಿ ಆಯೋಜಿಸಿದ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ಬಾಲಕಿಯರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜೇತ ತಂಡದೊಂದಿಗೆ ಶಾಲಾ ಸಂಚಾಲಕರಾದ ವಂದನೀಯ ಫಾದರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಮುಖ್ಯೋಪಾದ್ಯಾಯಿನಿ ಸಿಸ್ಟರ್ ಸರಿತಾ ಡಿಸೋಜಾ, ದೈಹಿಕ ಶಿಕ್ಷಕರಾದ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಬಂಟಕಲ್ಲು ಬಿಸಿರೋಡ್ : ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Posted On: 14-09-2022 09:15AM
ಬಂಟಕಲ್ಲು : ಲಯನ್ಸ್ ಕ್ಲಬ್ ಬಂಟಕಲ್ಲು ಬಿಸಿರೋಡ್ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಪಾಂಬೂರು ಚರ್ಚ್ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ವಿಲ್ಫ್ರೆಡ್ ಪಿಂಟೋ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಎಮ್ ಜೆ ಎಫ್ ಲ.ಡಾ. ನೇರಿ ಕರ್ನೇಲಿಯೊ ಹಾಗೂ ಜಿಇಟಿ ಎಮ್ ಜೆ ಎಫ್ ಲ. ರಾಜೀವ್ ಕೋಟ್ಯಾನ್ ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಂಟಕಲ್ಲು , ಪಾಂಬೂರು , ಹೇರೂರು ಹಾಗೂ ಪಡುಬೆಳ್ಳೆ ಆಸುಪಾಸಿನ ಸುಮಾರು 8 ಶಾಲೆಯ ಎಂಬತ್ತು ಶಿಕ್ಷಕರನ್ನು ಹಾಗೂ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಂಟಕಲ್ಲು ಆಸುಪಾಸಿನ ಇಪ್ಪತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು. ಸರಕಾರಿ ಪ್ರಾಥಮಿಕ ಶಾಲೆ ರಾಜೀವ್ ನಗರ ಉಡುಪಿ ಇದರ ಹಿರಿಯ ಶಿಕ್ಷಕ ಬಂಟಕಲ್ಲು ಸತ್ಯ ಸಾಯಿ ಪ್ರಸಾದ್ ಅವರು ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಪಡೆದಿದ್ದು ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ವಿನ್ಸೆಂಟ್ ಆಳ್ವರವರು ಒಬ್ಬ ಉತ್ತಮ ಶಿಕ್ಷಕನ ಜವಾಬ್ದಾರಿ ಮತ್ತು ನಾವು ನಮ್ಮನ್ನು ಕೇಳಬೇಕು ಶಿಕ್ಷಕ ವೃತ್ತಿಗೆ ತಾನು ಎಷ್ಟು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ,ವಿದ್ಯಾರ್ಥಿಗಳ ಪ್ರಗತಿಯಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ಬಗ್ಗೆ ಮಾತನಾಡಿದರು. 2021-22 ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ಸುಮಾರು 17 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು . ಕಾರ್ಯಕ್ರಮವನ್ನು ಲ. ಅನಿತ ಡಿಸಿಲ್ವಾ ಮತ್ತು ಲ. ವಿಜಯ್ ಧೀರಜ್ ನಡೆಸಿಕೊಟ್ಟರು. ತನಿಷ್ಕಾ ಗೋಲ್ಡ್ & ಡೈಮೆಂಡ್ ಜ್ಯುವೆಲರಿ ಉಡುಪಿ ಕಾರ್ಯಕ್ರಮದ ಪ್ರಾಯೋಜಕತ್ವವಹಿಸಿದ್ದರು. ಲಯನ್ಸ್ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ ನೆರೆದಿರುವ ಎಲ್ಲಾ ಅತಿಥಿ ಹಾಗೂ ಶಿಕ್ಷಕ ವೃಂದ ಶಿಕ್ಷಕರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಲ. ಉಮೇಶ್ ಕುಲಾಲ್ ವಂದಿಸಿದರು.
ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವಸಂಗಮ ಮತ್ತು ಮಹಿಳಾ ಬಳಗದ ಮಹಾಸಭೆ

Posted On: 13-09-2022 10:35PM
ಶಿರ್ವ : ತಮ್ಮ ಹೆಸರು ಶಾಶ್ವತವಾಗಿ ನಿಲ್ಲಬೇಕಾದರೆ ಇಂತಹ ಸಂಸ್ಥೆಯ ಪ್ರತಿನಿಧಿ ಆಗಬೇಕು ಮತ್ತು ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದ್ದರೆ ಅವರನ್ನು ಸಂಸ್ಥೆಗಳಿಗೆ ಸೇರಿಸಬೇಕು ಎಂದು ಬಂಟಕಲ್ಲು ಶ್ರೀ ವಿಶ್ವಕರ್ಮ ಯುವಕ ಸೇವಾದಳದ ಅಧ್ಯಕ್ಷರಾದ ರಾಜೇಶ್ ಆಚಾರ್ಯ ಹೇಳಿದರು. ಅವರು ಶ್ರೀ ವಿಶ್ವಬ್ರಾಹ್ಮಣ ಯುವಸಂಗಮ (ರಿ.) ಮತ್ತು ಮಹಿಳಾ ಬಳಗ ಶಿರ್ವ ಇದರ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿರ್ವ ಎಸ್. ಕೆ. ಜಿ. ಬ್ಯಾಂಕ್ ನ ಪ್ರಬಂಧಕರಾದ ಕಸ್ತೂರಿ ದೇವರಾಜ್ ಆಚಾರ್ಯರು ದಶಮಾನೋತ್ಸವದ ಮೊದಲ ಕಾರ್ಯಕ್ರಮ ಗೋವಿಗಾಗಿ ಮೇವು ಲಾಂಛನ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸೃಜನ್ ಆಚಾರ್ಯ ಇವರನ್ನು ಅಭಿನಂದಿಸಲಾಯಿತು. ಅಧ್ಯಕ್ಷ ಉಮೇಶ್ ಆಚಾರ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಎಲ್ಲರೂ ಒಮ್ಮನಸ್ಸಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ದಶಮಾನೋತ್ಸವ ಯಶಸ್ವಿಗೊಳಿಸಬೇಕೆಂದು ಎಲ್ಲರ ಸಹಕಾರ ಕೋರಿದರು.
ಕಾರ್ಯದರ್ಶಿ ಪ್ರೀತಿ ಉಮೇಶ್ ವರದಿ ವಾಚಿಸಿದರು. ಶೋಭಾ ಶಂಕರ್ ಪರಿಚಯಿಸಿದರು. ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ ಲೆಕ್ಕಪತ್ರ ಮಂಡಿಸಿ ದಶಮಾನೋತ್ಸವ ಕಾರ್ಯಕ್ರಮದ ಸ್ಥೂಲ ಪರಿಚಯ ನೀಡಿದರು.
ಗೌರವಾಧ್ಯಕ್ಷ ಸುರೇಶ ಆಚಾರ್ಯ, ಮಹಿಳಾ ಬಳಗ ದ ಅಧ್ಯಕ್ಷೆ ಸುಮತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರ್ಮಿಳಾ ಆಚಾರ್ಯ ಪ್ರಾರ್ಥಿಸಿದರು. ಮಹಿಳಾ ಬಳಗದ ಉಪಾಧ್ಯಕ್ಷೆ ಮಂಜುಳಾ ಉಮೇಶ್ ಸ್ವಾಗತಿಸಿದರು. ಮಾಧವ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರೀತಮ್ ಆಚಾರ್ಯ ವಂದಿಸಿದರು.