Updated News From Kaup

ಪಡುಬಿದ್ರಿ ಸಿ.ಎ.ಸೊಸೈಟಿ ಚುನಾವಣೆ : ವೈ. ಸುಧೀರ್ ಕುಮಾರ್ ನೇತೃತ್ವದ ತಂಡ ಜಯ

Posted On: 28-01-2025 07:58PM

ಪಡುಬಿದ್ರಿ : ಎರಡು ದಶಕಗಳ ಕಾಲ ಅವಿರೋಧ ಆಯ್ಕೆಯ ಮೂಲಕ ನಡೆಯುತ್ತಿದ್ದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಆಡಳಿತ ಮಂಡಳಿಗೆ ಮಂಗಳವಾರ ಪಡುಬಿದ್ರಿ ಬಂಟರ ಸಂಘದ ಸಭಾಂಗಣದಲ್ಲಿ ಜರಗಿದ ಚುನಾವಣೆಯಲ್ಲಿ ವೈ. ಸುಧೀರ್ ಕುಮಾರ್ ನೇತೃತ್ವದ ಬಣ ಜಯ ಗಳಿಸಿದೆ.

ಒಟ್ಟು 13 ಆಡಳಿತ ಮಂಡಳಿಯ ಸದಸ್ಯರಲ್ಲಿ ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳಿದ್ದು, ಇಬ್ಬರು ಮೊದಲೇ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಸಹಕಾರಿ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸಿ ಎಂ ಚುನಾವಣಾಧಿಕಾರಿಯಾಗಿದ್ದು, ಆಯ್ಕೆಗೊಂಡ ಸದಸ್ಯರ ಹೆಸರನ್ನು ಘೋಷಿಸಿದರು. ಒಟ್ಟು 3,200 ಮತಗಳಲ್ಲಿ 1,935 ಮತದಾನವಾಗುವ ಮೂಲಕ ಶೇ.60. ಮತದಾನವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವೈ ಸುಧೀರ್ ಕುಮಾರ್, ಚುನಾವಣೆಗೆ ಮೊದಲು ಹಲವಾರು ಸುಳ್ಳು ಅಪಪ್ರಚಾರಗಳನ್ನು ಮಾಡಿದ್ದರೂ, ಇಂದಿನ ಗೆಲುವು ಸತ್ಯಕ್ಕೆ ಸಂದ ಜಯ. ಮತ ಚಲಾಯಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಮುಂದಿನ 5 ವರ್ಷಗಳ ಅವಧಿಗೆ ಗುರುರಾಜ ಪೂಜಾರಿ, ವೈ ಸುಧೀರ್ ಕುಮಾರ್, ಜಿತೇಂದ್ರ ಫುರ್ಟಾಡೊ, ಮಾಧವ ಆಚಾರ್ಯ, ವಾಸುದೇವ, ರಾಜಾರಾಮ ರಾವ್, ಹಸನ್ ಬಾವ, ರೋಹಿಣಿ ಎ., ಕುಸುಮಾ ಕರ್ಕೇರ, ಗಿರೀಶ್ ಫಲಿಮಾರು, ಶಿವರಾಮ ಎನ್ ಶೆಟ್ಟಿ, ಕೃಷ್ಣ ಬಂಗೇರ, ಕಾಂಚನಾ ಆಯ್ಕೆಯಾಗಿದ್ದಾರೆ.

ಪಡುಬಿದ್ರಿ ಸಿ.ಎ.ಸೊಸೈಟಿ ಚುನಾವಣೆ : ಹಲವು ವರ್ಷಗಳ ಅವಿರೋಧ ಆಯ್ಕೆಯ ಕಸರತ್ತಿಗೆ ಬ್ರೇಕ್ ಹಾಕಿದ ಪಡುಬಿದ್ರಿ ಸಹಕಾರಿ ಜನಪರ ಒಕ್ಕೂಟ

Posted On: 28-01-2025 02:23PM

ಪಡುಬಿದ್ರಿ : ನಾಲ್ಕು ಶಾಖೆ ಹಾಗೂ ಒಂದು ಕೇಂದ್ರ ಕಚೇರಿಯನ್ನು ಹೊಂದಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಸುಮಾರು ಎರಡು ದಶಕಗಳ ಕಾಲ ನಿರ್ದೇಶಕರ ಚುನಾವಣೆ ನಡೆಯದೆ ಕೆಲವು ಬಾರಿ ನಾಮಪತ್ರ ಸಲ್ಲಿಕೆಯಾದರೂ ಕೊನೆ ಕ್ಷಣದಲ್ಲಿ ಹಿಂತೆಗುವ ಪ್ರಕ್ರಿಯೆ ಮೂಲಕ ಅವಿರೋಧ ಆಯ್ಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಾಗುತ್ತಿತ್ತು. ಆದರೆ ಈ ಬಾರಿ ಮುಂದೆಯೂ ಅಧಿಕಾರದ ಹಪಾಹಪಿಯಲ್ಲಿರುವ ತಂಡಕ್ಕೆ ಟಕ್ಕರ್ ನೀಡಲು ಪಡುಬಿದ್ರಿ ಸಹಕಾರಿ ಜನಪರ ಒಕ್ಕೂಟದ ನೇತೃತ್ವದಲ್ಲಿ ಜ.28ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 13 ನಿರ್ದೇಶಕರ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ತಂಡ 13, ಹೊಸ ತಂಡ ಕೊನೆ ಕ್ಷಣದಲ್ಲಿ ಕೇವಲ 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆ ಮೂಲಕ ಸಂಪೂರ್ಣ ಹಿಡಿತವಲ್ಲದಿದ್ದರೂ ಆಡಳಿತದಲ್ಲಿ ಸ್ವಲ್ಪ ಮಟ್ಟಿನ ಹಿಡಿತದ ಸಾಧನೆಗೆ ಮುಂದಾಗಿದೆ. ಪ್ರಸ್ತುತ ಆಡಳಿತದ ತಂಡದಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಬಲಿತರಿದ್ದು ಕೆಲವು ಸದಸ್ಯರ ಬದಲಾವಣೆ ಮಾಡಿದ್ದು, ಚುನಾವಣೆಗಿಳಿದ ಹೊಸ ತಂಡದಲ್ಲಿ ಕಾಂಗ್ರೆಸ್ ನ ಬೆಂಬಲಿತರ ಜೊತೆಗೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.

ಈ ಬಾರಿ ಸಾಮಾನ್ಯ ವರ್ಗದಲ್ಲಿ 11 ಮಂದಿ, ಮಹಿಳಾ ಮೀಸಲು, ಹಿಂದುಳಿದ ವರ್ಗ, ಸಾಮಾನ್ಯ ವರ್ಗಗಳಲ್ಲಿ 2-3 ಮಂದಿ ಸ್ಪರ್ಧಿಸಿದ್ದಾರೆ. ಈ ಬಾರಿಯು ಜನಪರ ಒಕ್ಕೂಟ ತಂಡದ ಮಹಿಳಾ ಅಭ್ಯರ್ಥಿಗಳು ನಾಮಪತ್ರ ವಾಪಾಸು ಪಡೆಯುವಂತೆ ಆಡಳಿತದಲ್ಲಿದ್ದ ತಂಡದ ಕೆಲವರು ಒತ್ತಡ ಹಾಕಿದ್ದಾರೆ. ಪೋಲಿಸ್ ವರಿಷ್ಠಾಧಿಕಾರಿಗೆ ದೂರು ನೀಡುವ ಬಗ್ಗೆಯೂ ಜನಪರ ಒಕ್ಕೂಟ ಎಚ್ಚರಿಸಿದೆ. ಹಾಲಿ ತಂಡದ ಪ್ರಕಾರ ಈ ಸಂಘವು ತಮ್ಮ ಅವಧಿಯಲ್ಲಿಯೇ ಪ್ರಗತಿ ಪಥ ಕಂಡಿದ್ದು, ಮುಂದೆಯೂ ಪ್ರಗತಿ ಸಾಧಿಸಲಿದೆ ಎಂದು ಹೇಳಿಕೊಂಡರೆ, ಹೊಸ ತಂಡವು ನಾವು ಪ್ರಗತಿ ಬಯಸುವವರು. ಅಲ್ಲಿಯ ಅವ್ಯವಹಾರಗಳನ್ನು ಜನರಿಗೆ ತಿಳಿಸುವ ಜೊತೆಗೆ ಅವೆಲ್ಲವುಗಳನ್ನು ಪ್ರಶ್ನಿಸಿ, ನ್ಯಾಯದ ದಾರಿಯಲ್ಲಿ ಸಾಗಲಿದ್ದೇವೆ ಎನ್ನುತ್ತಾರೆ.

ಒಟ್ಟಿನಲ್ಲಿ ಹಾಲಿ ತಂಡಕ್ಕೆ ಪ್ರತಿಷ್ಟೆಯ ಕಣವಾಗಿದ್ದು, ಹೊಸ ತಂಡಕ್ಕೆ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸದಿದ್ದರೂ, ಕೆಲವು ಸ್ಥಾನಗಳನ್ನಾದರು ಪಡೆಯಲು ಕಾತುರರಾಗಿದ್ದಾರೆ.

ಎರಡು ತಂಡಗಳು ಗೆಲುವು ನಮ್ಮದೆ ಎನ್ನುವ ವಿಶ್ವಾಸದಲ್ಲಿ ಪ್ರಚಾರ ನಿರತರಾಗಿದ್ದಾರೆ. ಭೃಷ್ಟಾಚಾರ ರಹಿತವಾಗಿ ಸಂಘಕ್ಕೆ ದುಡಿಯುವ, ಊರಿನ ಅಭಿವೃದ್ಧಿಯ ಚಿಂತನೆಯೊಂದಿಗೆ ಸದಸ್ಯರಿಗೆ ಅನುಕೂಲಕರವಾದ ಯೋಜನೆಯನ್ನು ರೂಪಿಸಿ, ಸಹಕಾರಿ ತತ್ವಗಳ ಆಶಯದಂತೆ ನಡೆಯಲಿ ಎಂದು ಸಾರ್ವಜನಿಕರ ಆಶಯವಾಗಿದೆ‌.

ಮಹಾಕುಂಭಮೇಳದ ಮಹಾ ಸಂವಾದದಲ್ಲಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ

Posted On: 27-01-2025 05:30PM

ಶಿರ್ವ : ಶ್ರೀ ಕೃಷ್ಣನ ಜನ್ಮ ಭೂಮಿಯನ್ನು ಮುಕ್ತಗೊಳಿಸುವ ಬಗ್ಗೆ ಫೆ.1ರಂದು ಮಹಾಕುಂಭಮೇಳದಲ್ಲಿ ಜರಗಲಿರುವ ಮಹಾ ಸಂವಾದದಲ್ಲಿ ಶ್ರೀ ಕೃಷ್ಣ ಜನ್ಮ ಭೂಮಿ ನ್ಯಾಸ್(ರಿ.) ಕರ್ನಾಟಕದ ರಾಜ್ಯಾಧ್ಯಕ್ಷರಾದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟನೆ ತಿಳಿಸಿದೆ.

ಕಸಾಪ ಉಡುಪಿ ತಾಲೂಕು : ಡಿಸಿ ಕಚೇರಿಯ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರ

Posted On: 26-01-2025 07:23PM

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಇದರ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾದ ರಾಜ್ಯದ ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಕಸಾಪ ಉಡುಪಿ ತಾಲೂಕಿನಿಂದ ಮತ್ತಷ್ಟು ಪುಸ್ತಕಗಳನ್ನು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿಯವರಿಗೆ ಹಸ್ತಾಂತರಿಸಲಾಯಿತು.

ಈ ಸಂದಭ೯ದಲ್ಲಿ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಮನೆಯೇ ಗ್ರಂಥಾಲಯದ ಸಂಚಾಲಕ ರಾಘವೇಂದ್ರ ಪ್ರಭು, ಕವಾ೯ಲು ಮುಂತಾದವರಿದ್ದರು.

ಕಾಪು ತಾಲೂಕು ಮಟ್ಟದ 76ನೇ ಗಣರಾಜ್ಯೋತ್ಸವ

Posted On: 26-01-2025 07:18PM

ಕಾಪು : ತಾಲೂಕು ಆಡಳಿತ ಸೌಧದಲ್ಲಿ ರವಿವಾರ ತಾಲೂಕು ಮಟ್ಟದ 76ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಧಾಕರ್ ಸಾಲಿಯಾನ್, ನೀಲಾನಂದ ನಾಯಕ್, ಸೂರಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷರಾದ ಸರಿತಾ ಶಿವಾನಂದ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ತಹಶೀಲ್ದಾರರಾದ ಪ್ರತೀಭಾ ಆರ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಕಾಪು ಪುರಸಭೆಯ ಮುಖ್ಯಾಧಿಕಾರಿ ನಾಗರಾಜ್, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲರಾದ ಗೋಪಾಲಕೃಷ್ಣ ಗಾವ್ಕಂರ್, ಕಾಪು ಪುರಸಭೆಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜ.27 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಚಪ್ಪರ ಮೂಹೂರ್ತ

Posted On: 25-01-2025 09:32PM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಜನವರಿ 27, ಸೋಮವಾರ ಬೆಳಿಗ್ಗೆ ಗಂಟೆ 9:09ಕ್ಕೆ ಸರಿಯಾಗಿ ಚಪ್ಪರ ಮೂಹೂರ್ತ ನಡೆಯಲಿದೆ.

ಕಾಪುವಿನ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ

Posted On: 24-01-2025 06:25PM

ಪಡುಬಿದ್ರಿ : ಬಡಾ ಗ್ರಾಮ ಉಚ್ಚಿಲದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರಂತರ ಅಪಘಾತ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ದಿನೇ ದಿನೇ ಅಪಘಾತಗಳು ಹೆಚ್ಚುತ್ತಿದ್ದು, ಇದರ ತಡೆಗೆ ಮುಂಜಾಗ್ರತಾ ಕ್ರಮ ಹಾಗೂ ಕೆಲವೊಂದು ತುರ್ತು ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ, ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ಕೆ, ತಹಶೀಲ್ದಾರರಾದ ಪ್ರತೀಭಾ ಆರ್, ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಇಲಾಖಾಧಿಕಾರಿಗಳು, ಉಚ್ಚಿಲ ನಾಗರಿಕ ಹೋರಾಟ ಸಮಿತಿಯವರು ಉಪಸ್ಥಿತರಿದ್ದರು.

ಪಡುಬಿದ್ರಿಯಲ್ಲಿ 16,62,804 ರೂ. ಮೌಲ್ಯದ ಗಾಂಜಾ ನಾಶ

Posted On: 24-01-2025 06:23PM

ಪಡುಬಿದ್ರಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 27 ಕೆಜಿ 970 ಗ್ರಾಂ 120 ಮಿಲಿಗ್ರಾಂ ತೂಕದ ಅಂದಾಜು 16,62,804 ರೂ. ಬೆಲೆಯ ಗಾಂಜಾವನ್ನು ನಾಶಪಡಿಸಲಾಯಿತು.

ನಂದಿಕೂರಿನ ಮೆ. ಆಯುಷ್ ಎನ್ವಿರೋಟೆಕ್ ಪ್ರೈ. ಲಿ. ಎಂಬಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು.

ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷರಾದ ಡಾ. ಅರುಣ್ ಕೆ., ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ಸದಸ್ಯರು ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಮತ್ತು ಅರವಿಂದ ಕಲಗುಜ್ಜಿ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಖ್ಯಾತ ಯಕ್ಷಗಾನ ಭಾಗವತ ಸುರೇಂದ್ರ ಪಣಿಯೂರುರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ

Posted On: 23-01-2025 09:14PM

ಕಾಪು : ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ಹಾಗೂ ಮೇಳದ ಯಜಮಾನರಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಸುರೇಂದ್ರ ಪಣಿಯೂರುರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು 2024 ಸಾಲಿನ ಡಾಕ್ಟರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಿದೆ.

ಸುರೇಂದ್ರ ಪಣಿಯೂರುರವರ ಯಕ್ಷಗಾನ ಮೇಳಗಳ ವಿಕಾಸ ಮತ್ತು ವರ್ತಮಾನದ ಬೆಳವಣಿಗೆ (ಉಡುಪಿ ಜಿಲ್ಲೆಯನ್ನು ಅನುಲಕ್ಷಿಸಿ) ಎಂಬ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು 2024 ಸಾಲಿನ ಡಾಕ್ಟರೇಟ್ ನೀಡಿ ಗೌರವಿಸಿದೆ.

ಸುರೇಂದ್ರ ಪಣಿಯೂರುರವರ ಸಾಧನೆಗೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ವಿಶ್ವಕರ್ಮ ಸಮಾಜ ಸೇವಾ ಸಂಘ ಕಡಂಬು ಮಟ್ಟಾರು ನೂತನ ಅಧ್ಯಕ್ಷರಾಗಿ ಮಂಜುನಾಥ್ ಆಚಾರ್ಯ ಆಯ್ಕೆ

Posted On: 21-01-2025 09:45PM

ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಕಡಂಬು ಮಟ್ಟಾರು ಇದರ 2025 -2026 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.

ನೂತನ ಅಧ್ಯಕ್ಷರಾಗಿ ಮಂಜುನಾಥ್ ಆಚಾರ್ಯ, ಕಾರ್ಯದರ್ಶಿಯಾಗಿ ಗಜಾನಂದ ಆಚಾರ್ಯ, ಕೋಶಾಧಿಕಾರಿಯಾಗಿ ಅವಿನಾಶ್ ಆಚಾರ್ಯ, ಗೌರವ ಅಧ್ಯಕ್ಷರಾಗಿ ಲಕ್ಷ್ಮಣ ಆಚಾರ್ಯ, ಸಾಮಾಜಿಕ ಕಾರ್ಯದರ್ಶಿಯಾಗಿ ದೀಕ್ಷಿತ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಮುಕೇಶ್ ಆಚಾರ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಜಾಲತಾಣದ ಪ್ರಮುಖರಾಗಿ ಸನತನ ಆಚಾರ್ಯ, ಭಜನಾ ಕಾರ್ಯದರ್ಶಿಯಾಗಿ ಸದಾನಂದ ಆಚಾರ್ಯ ಆಯ್ಕೆ ಆಗಿರುತ್ತಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.