Updated News From Kaup

ಕಾಪು ಶ್ರೀ ಹೊಸ ಮಾರಿಗುಡಿಗೆ ಶ್ರೀ ಕ್ಷೇತ್ರ ದಂಡತೀರ್ಥ ಮಠದಿಂದ ಬೃಹತ್ ಶೋಭಾಯಾತ್ರೆ

Posted On: 09-02-2025 09:22PM

ಕಾಪು : ಜೀರ್ಣೋದ್ದಾರದೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನೂತನ ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಗಂಟೆ, ಸಹಿತ ಸ್ವರ್ಣಾಭರಣಗಳ ಶೋಭಾಯಾತ್ರೆಯು ಭಾನುವಾರ ನಡೆಯಿತು. ಕೃಷ್ಣಾಪುರ ಮಠದ ಶ್ರೀ ವಿದ್ಯಾಶ್ರೀ ಸಾಗರ ಸ್ವಾಮೀಜಿ ಸ್ವರ್ಣ ಗದ್ದುಗೆಯನ್ನು ಅನಾವರಣಗೊಳಿಸಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಪುರಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ನೇತೃತ್ವದಲ್ಲಿ ಭಕ್ತಾಧಿಗಳ ಸಹಕಾರದೊಂದಿಗೆ ಅರ್ಪಿಸಲ್ಪಟ್ಟ ಸ್ವರ್ಣ ಗದ್ದುಗೆ ಮತ್ತು ಮಾರಿಯಮ್ಮ ದೇವಿಯ ಚಿನ್ನದ ಮುಖ, ದಾನಿ ಮುಂಬಯಿಯ ಉದ್ಯಮಿ ತೋನ್ಸೆ ಆನಂದ ಎಂ. ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ ಅವರು ನೀಡಿದ ಮಂಗಳೂರು ಎಸ್.ಎಲ್. ಶೇಟ್ ಜುವೆಲ್ಲರ್ಸ್ನಲ್ಲಿ ನಿರ್ಮಾಣಗೊಂಡಿರುವ ರಜತ ರಥ, ಮುಂಬಯಿ ಉದ್ಯಮಿ ಅರವಿಂದ್ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಸಮರ್ಪಿಸುವ ಅಯೋಧ್ಯೆ ಮಾದರಿಯ ಬೃಹತ್ ಗಂಟೆ, ಉಳಿಯಾರಗೋಳಿ ದಿ. ಸುಂದರ ಶೆಟ್ಟಿ ಮತ್ತು ದಿ. ರಾಧಾ ಸುಂದರ ಶೆಟ್ಟಿ ಅವರ ಮಕ್ಕಳು ಹಾಗೂ ಮೂಳೂರು ಸುಧಾಕರ ಹೆಗ್ಡೆ ಮತ್ತು ರಂಜನಿ ಸುಧಾಕರ ಹೆಗ್ಡೆ ದಂಪತಿ ಸಮರ್ಪಿಸುವ ರಾಜಗೋಪುರದ ಮಹಾದ್ವಾರದ ಬಾಗಿಲು ಹಾಗೂ ಉಚ್ಚಂಗಿ ದೇವಿಯ ಚಿನ್ನದ ಪಾದಪೀಠ ಮತ್ತು ಚಿನ್ನದ ಮುಖದ ಶೋಭಾಯಾತ್ರೆಯು ಶ್ರೀ ಕ್ಷೇತ್ರ ದಂಡತೀರ್ಥ ಮಠದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಕಾಪು ಪೇಟೆಯ ಮೂಲಕ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಸಾಗಿತು. ಸಾವಿರಾರು ಭಕ್ತರು ಹೆದ್ದಾರಿ ಇಕ್ಕೆಲಗಳಲ್ಲಿ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.

ಮೆರವಣಿಗೆಯಲ್ಲಿ ಕುಣಿತ ಭಜನೆ, ಡೋಲು ವಾದನ, ಮಕ್ಕಳಿಂದ ಜಾಗಟೆ ಮತ್ತು ಶಂಖನಾದ, ಹುಲಿ ವೇಷ, ಮರಕಾಲು ಕುಣಿತ, ಕೀಲು ಕುದುರೆ, ಯಕ್ಷಗಾನ ನೃತ್ಯ ರೂಪಕ ಸಹಿತ ವಿವಿಧ ವೇಷಗಳು, ವಿವಿಧ ಸಮಾಜದ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ವಿ. ಸುನೀಲ್ ಕುಮಾರ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಧಾನ ತಂತ್ರಿ ಕೊರಂಗ್ರಪಾಡಿ ಕುಮಾರ ಗುರು ತಂತ್ರಿ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಾರ್ಯನಿರ್ವಹಣಾಧಿಕಾರಿ ಕೆ. ರವಿಕಿರಣ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿ ಅಧ್ಯಕ್ಷ ರವಿಸುಂದರ್ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣ ಮೆರವಣಿಗೆ ಸಮಿತಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

ಕಾಂತಾವರ ಕುಲಾಲ ಸಂಘದ ಉದ್ಘಾಟನೆ, ಲಾಂಛನ ಬಿಡುಗಡೆ, ಸನ್ಮಾನ, ನೂತನ ಪದಾಧಿಕಾರಿಗಳ ಆಯ್ಕೆ

Posted On: 09-02-2025 07:32AM

ಕಾರ್ಕಳ : ತಾಲೂಕಿನ ಕಾಂತಾವರದ ಬೇಲಾಡಿಯ ಶ್ರೀ ಪುಂಡರೀಕ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಘದ ಅಧ್ಯಕ್ಷರಾದ ವಿಠಲ ಮೂಲ್ಯ ಬೇಲಾಡಿ ಅಧ್ಯಕ್ಷತೆಯಲ್ಲಿ ಸಂಘದ ಉದ್ಘಾಟನೆ ನಡೆಯಿತು.

ಕಾರ್ಯಕ್ರಮದಲ್ಲಿ ಸಂಘದ ನೂತನ ಲಾಂಛನ ಬಿಡುಗಡೆ, ನೂತನ ಪದಾಧಿಕಾರಿಗಳ ಆಯ್ಕೆ, ಸನ್ಮಾನವು ಕುಲಾಲ ಸಮುದಾಯದ ಪ್ರಮುಖರ ಉಪಸ್ಥಿತಿಯಲ್ಲಿ ನಡೆಯಿತು.

ಫೆ. 10 ರಿಂದ 16 : ಪರಿಚಯ ಪ್ರತಿಷ್ಠಾನ, ಪಾಂಬೂರು ಪ್ರಸ್ತುತಿಯಲ್ಲಿ ಪರಿಚಯ ರಂಗೋತ್ಸವ 2025

Posted On: 08-02-2025 07:22PM

ಶಿರ್ವ : ಬೆಳ್ಳೆ ಗ್ರಾಮದ ಪಾಂಬೂರಿನಲ್ಲಿ ಪರಿಚಯ ಪ್ರತಿಷ್ಠಾನ (ರಿ) ಪಾಂಬೂರು ಇದರ ಆಶ್ರಯದಲ್ಲಿ ಫೆ. 10 ಸೋಮವಾರದಿಂದ ಫೆ. 16 ಭಾನುವಾರ ಪರ್ಯಂತ 7 ದಿನಗಳ "ಪರಿಚಯ ರಂಗೋತ್ಸವ 2025" ಪಾಂಬೂರು ರಂಗಪರಿಚಯದಲ್ಲಿ ನಡೆಯಲಿದೆ.

ಶನಿವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಮಾಹಿತಿ ನೀಡಿದರು. ರಂಗಪರಿಚಯದಲ್ಲಿ ಪ್ರತೀದಿನ ಸಾಯಂ ಗಂಟೆ 6.30 ರಿಂದ ಏಳು ದಿನಗಳ ಪರ್ಯಂತ ಕನ್ನಡ, ತುಳು, ಕೊಂಕಣಿ ಭಾಷೆಗಳ ಏಳು ನಾಟಕಗಳು ಪ್ರದರ್ಶನಗೊಳ್ಳಲಿವೆ. ಫೆ. 10 ಸೋಮವಾರ, ರಂಗಾಯಣ ಮೈಸೂರು ಪ್ರಸ್ತುತ ಪಡಿಸುವ ಕನ್ನಡ ನಾಟಕ "ಮೈ ಫ್ಯಾಮಿಲಿ", ಫೆ. 11 ಮಂಗಳವಾರ, ಸುಮನಸಾ ಕೊಡವೂರು, ಉಡುಪಿ ಪ್ರಸ್ತುತಪಡಿಸುವ ತುಳು ನಾಟಕ "ಈದಿ", ಫೆ. 12 ಬುಧವಾರ, ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ, ಮಂಗಳೂರು ಮತ್ತು ಅಸ್ತಿತ್ವ ಮಂಗಳೂರು ಪ್ರಸ್ತುತಪಡಿಸುವ ಕೊಂಕಣಿ ನಾಟಕ ಪಯ್ಸ್, ಫೆ. 13 ಗುರುವಾರ, ಸ್ಪಿನ್ನಿಂಗ್ ಟ್ರೇ ಥಿಯೇಟರ್ ಕಂ. ಬಿಜಾಪುರ ಪ್ರಸ್ತುತಪಡಿಸುವ ಕನ್ನಡ ನಾಟಕ "ಅನಾಮಿಕನ ಸಾವು", ಫೆ. 14. ಶುಕ್ರವಾರ, ಸಂಕಲ್ಪ, ಮೈಸೂರು ಪ್ರಸ್ತುತಪಡಿಸುವ ಕನ್ನಡ ನಾಟಕ "ಜೊತೆಗಿರುವನು ಚಂದಿರ", ಫೆ. 15. ಶನಿವಾರ, ಮಂದಾರ, ಬೈಕಾಡಿ ಪ್ರಸ್ತುತಪಡಿಸುವ ಕನ್ನಡ ನಾಟಕ "ಬೆತ್ತಲಾಟ", ಫೆ. 16 ಭಾನುವಾರ, ಕಲಾಕುಲ್, ಮಂಗಳೂರು ಪ್ರಸ್ತುತಪಡಿಸುವ ಕೊಂಕಣಿ ನಾಟಕ "ಸಾತ್ತೊ ಉಪಾದೆಸ್" ಪ್ರದರ್ಶನಗೊಳ್ಳಲಿವೆ.

ಫೆ. 10 ರಂದು ರಂಗಾಯಣ ಮೈಸೂರು ನಿರ್ದೇಶಕರಾದ ಸತೀಶ್ ತಿಪಟೂರು ಇವರಿಂದ ಉದ್ಘಾಟನೆಗೊಳ್ಳಲಿರುವ ರಂಗೋತ್ಸವವು ಫೆ. 16ರಂದು ಯಕ್ಷ ರಂಗಾಯಣ, ಕಾರ್ಕಳ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್ರವರ ಸಮಾರೋಪ ಸಂದೇಶದೊಂದಿಗೆ ಸಂಪನ್ನಗೊಳ್ಳಲಿದೆ. ಕನ್ನಡ ನಾಟಕಗಳ ಪ್ರಾಯೋಜಕತ್ವವನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿದ್ದು, ಇದರ ಸಹಾಯಕ ನಿರ್ದೇಶಕು ಶ್ರೀಮತಿ ಪೂರ್ಣಿಮಾರವರು ಮತ್ತು ಮಾನ್ಯ ಕೆ.ಎಸ್. ಶ್ರೀಧರಮೂರ್ತಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪ್ರತೀ ನಾಟಕಗಳು 90 ರಿಂದ 120 ನಿಮಿಷಗಳ ಕಾಲ ಮಿತಿಯ ನಾಟಕಗಳಾಗಿದ್ದು, ನಿಗದಿತ ಸಮಯದಲ್ಲೇ ಕಾರ್ಯಕ್ರಮಗಳು ಪ್ರಾರಂಭವಾಗಿ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳಲಿವೆ. ಕಲಾಸಕ್ತರಿಗೆ ಮುಕ್ತ ಅವಕಾಶವಿದೆ ಎಂದು ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಹೇಳಿದ್ದಾರೆ. ಮುಂದಿನ ಹಂತದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಾಹಿತಿ, ಜಾಗೃತಿ ಶಿಬಿರಗಳು, ಕಾರ್ಯಾಗಾರಗಳನ್ನು ನಡೆಸಲು ಒಳಾಂಗಣ ರಂಗಮಂದಿರ, ಕಲಾವಿದರಿಗೆ ವಸತಿ ವ್ಯವಸ್ಥೆ, ಇತ್ಯಾದಿಗಳನ್ನು ನಿರ್ಮಿಸುವ ಮಹತ್ತರ ಯೋಜನೆಯು ಸಂಸ್ಥೆಗಿದೆ ಎಂದರು. ಪರಿಚಯ ಪ್ರತಿಷ್ಠಾನ ಪಾಂಬೂರು ಇದರ ಅಧ್ಯಕ್ಷ ಅನಿಲ್ ಡೇಸಾ, ಟ್ರಸ್ಟಿಗಳಾದ ವಿಲ್ಸನ್ ಡಿಸೋಜಾ, ಅರುಳ್ ಡಿಸೋಜಾ ಮತ್ತು ಪೀಠರ್ ಓಸ್ತಾ ಉಪಸ್ಥಿತರಿದ್ದರು.

ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಸಂಪನ್ನ

Posted On: 07-02-2025 08:01PM

ಕಾಪು : ಜೀರ್ಣೋದ್ಧಾರಗೊಂಡ ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಗುರುವಾರ ನೆರವೇರಿತು. ದೇವಳದ ಪ್ರಧಾನ ತಂತ್ರಿಗಳಾದ ಕಳತ್ತೂರು ಉದಯ ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಮಂಜಿತ್ತಾಯರವರ ಸಹಭಾಗಿತ್ವದಲ್ಲಿ ಬ್ರಹ್ಮಕಲಶ ಮಹೋತ್ಸವ ಧಾರ್ಮಿಕ ವಿಧಿಗಳು ಸಂಪನ್ನಗೊಂಡವು. ಉತ್ಸವ ಬಲಿ, ಶ್ರೀ ಬ್ರಹಲಿಂಗೇಶ್ವರ, ನಾಗದೇವರಿಗೆ ಪೂಜೆ, ಪಲ್ಲಪೂಜೆ ನಡೆಯಿತು.

ದೇವರನ್ನು ವಿಶೇಷವಾಗಿ ಅಲಂಕರಿಸಿ ಮಹಾಪೂಜೆ ನೆರವೇರಿಸಲಾಯಿತು. ಸಹಸ್ರಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕರಂದಾಡಿಗುತ್ತು ಸತ್ಯಜಿತ್ ಶೆಟ್ಟಿ, ಕಾರ್ಯಾಧ್ಯಕ್ಷ ಕಿಶನ್ ಭಂಡಾರಿ ಕರಂದಾಡಿಗುತ್ತು, ಕೋಶಾಧಿಕಾರಿ ಪದ್ಮನಾಭ ಶಾನುಭಾಗ್, ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ರಾವ್, ಸಮಿತಿ ಗೌರವಾಧ್ಯಕ್ಷರಾದ ಲಕ್ಷ್ಮೀ ಜಯರಾಮ ಶೆಟ್ಟಿ, ಪಾಂಡುರಂಗ ಶ್ಯಾನುಭಾಗ್, ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮ ಮತ್ತು ಮಹಾ ಅನ್ನಸಂತರ್ಪಣೆಯ ಸೇವಾರ್ಥಿ ಅಕ್ಷಯ್ ಜೆ. ಶೆಟ್ಟಿ, ಉಪಾಧ್ಯಕ್ಷರಾದ ವಿಠಲ ಶೆಟ್ಟಿ ಪಡುಬರ್ಪಾಣಿ, ಭಾಸ್ಕರ್ ಶೆಟ್ಟಿ ಬರ್ಪಾಣಿ, ಪ್ರೇಮನಾಥ ಶೆಟ್ಟಿ ಗುಡ್ಡ ಶೆಟ್ರಮನೆ, ಭಾಸ್ಕರ್ ಶೆಟ್ಟಿ ಕೆಳಮನೆ, ವಿಜಯ ಶೆಟ್ಟಿ ಕಾರ್ಕಳ, ದಿನೇಶ್ ಶೆಟ್ಟಿ ಪಡುಮನೆ, ನಿರಂಜನ್ ಶೆಟ್ಟಿ ತೋಟದ ಮನೆ, ಮುದ್ದು ಪೂಜಾರಿ ಹಾಡಿಮನೆ, ಕಾರ್ಯದರ್ಶಿಗಳಾದ ವಾಸುದೇವ ರಾವ್, ಉಮೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಶ್ರೀಧರ ಶೆಟ್ಟಿಗಾರ್, ರಾಮಚಂದ್ರ ಆಚಾರ್ಯ, ಪ್ರಜ್ಞಾ ಮಾರ್ಪಳ್ಳಿ, ಸಲಹೆಗಾರರಾದ ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ರಾಘವೇಂದ್ರ ಭಟ್ ಉಳಿಯಾರು, ತ್ರಿವಿಕ್ರಮ ಭಟ್, ಹೇಮಲತಾ ಶೆಟ್ಟಿ, ಆಂತರಿಕ ಲೆಕ್ಕಪರಿಶೋಧಕರಾದ ರಾಜಶೇಖರ ರಾವ್, ನಿರ್ಮಲ್ ಕುಮಾರ್ ಹೆಗ್ಡೆ, ಗುರುರಾಜ ಐತಾಳ್, ಸತೀಶ್ ಕುಲಾಲ್ ಉಳಿಯಾರು, ಮುಂಬಯಿ ಸಮಿತಿ ಗೌರವಾಧ್ಯಕ್ಷ ವಿಠಲ ಎಸ್. ಶೆಟ್ಟಿ, ಅಧ್ಯಕ್ಷ ದಯಾನಂದ ಶೆಟ್ಟಿ ಬೋಳ, ಕಾರ್ಯಾಧ್ಯಕ್ಷರಾದ ರಮೇಶ್ ಕೋಟಿ ಹಾಡಿಮನೆ, ರತ್ನಾಕರ ಶೆಟ್ಟಿ ಕುಟಚಾದ್ರಿ, ಶುಶ್ರುತ್ ಶೆಟ್ಟಿ, ಸಂಯೋಜಕರಾದ ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ, ಗೌರವ ಸಲಹೆಗಾರರಾದ ಪ್ರಮುಖರಾದ ಯಾದವಕೃಷ್ಣ ಶೆಟ್ಟಿ ಶಿಬರೂರು, ಸುಭಾಶ್ಚಂದ್ರ ಹೆಗ್ಡೆ ದೊಡ್ಡಮನೆ, ಕಾರ್ಯದರ್ಶಿ ಶಶಿಧರ ಶೆಟ್ಟಿ ತೋಕೂರುಗುತ್ತು, ಜ. ಕಾರ್ಯದರ್ಶಿಗಳಾದ ಸತೀಶ್ ಶೆಟ್ಟಿ, ರಮೇಶ್ ಶೆಟ್ಟಿ, ಸೀತಾರಾಮ ಶೆಟ್ಟಿ, ರವೀಂದ್ರ ಶೆಟ್ಟಿ, ಸಂಜೀವಿ ಶೆಟ್ಟಿ, ಕೋಶಾಧಿಕಾರಿ ವಿದ್ಯಾನಂದ ರೈ, ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ, ಭಾಸ್ಕರ್ ಕುಮಾರ್ ಕರಂದಾಡಿ, ಶರ್ಮಿಳಾ ಆಚಾರ್ಯ, ಶ್ಯಾಮ ಶೆಟ್ಟಿಗಾರ್, ಶಶಿಧರ ಶೆಟ್ಟಿ ಎರ್ಮಾಳು, ಚಂದ್ರಶೇಖರ ರಾವ್, ರವಿ ನಾಯ್ಕ್, ಶರತ್ ಶೆಟ್ಟಿಗಾರ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಗೋಪಾಲ್ ನಾಯ್ಕ್, ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಮುಂಬಯಿ ಸಮಿತಿ, ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಸ್ಥರು, ಊರ ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.

ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ಶ್ರೀ ಶಂಭುಕಲ್ಲು ವೀರಭದ್ರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ

Posted On: 07-02-2025 01:26PM

ಉಡುಪಿ : ಒಂದೇ ಜಾತಿ, ಒಂದೇ ಧರ್ಮ, ಒಬ್ಬರೇ ದೇವರು ಎಂಬ ಸಾರ್ವಕಾಲಿಕ ಸತ್ಯ ಸಂದೇಶದ ಯುಗ ಪ್ರವರ್ತಕ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮುಖ್ಯ ತತ್ವವಾಗಿಸಿಕೊಂಡು ಅಸ್ತಿತ್ವದಲ್ಲಿರುವ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉಡುಪಿ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರವರಿ 8 ಶನಿವಾರದಂದು ಉದ್ಯಾವರದ ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನದ ಬಳಿ 'ವರ್ಷದ ಹರ್ಷ' ಕಾರ್ಯಕ್ರಮ ಜರುಗಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

ಬೆಳಿಗ್ಗೆ ಗಂಟೆ 10:30 ಕ್ಕೆ ಗುರುಕಟ್ಟೆಯಲ್ಲಿ ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಇದರ ಅಧ್ಯಕ್ಷರಾದ ಬಿ ಎನ್ ಶಂಕರ ಪೂಜಾರಿ ಶ್ರೀ ನಾರಾಯಣ ಗುರುಗಳ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಂಜೆ 5 ಗಂಟೆಗೆ ಉದ್ಯಾವರ ಶ್ರೀ ಆದಿಶಕ್ತಿ ಕ್ಷೇತ್ರ ಬಯಲುಜಿಡ್ಡ ಇಲ್ಲಿಂದ ಮೆರವಣಿಗೆ ಮೂಲಕ ಶ್ರೀ ಆದಿ ಶಕ್ತಿ ದೇವಿಯ ಮೂರ್ತಿಯನ್ನು ಚೌಕಿಗೆ ತರಲಾಗುವುದು. ಬಳಿಕ 6 ಗಂಟೆಯಿಂದ ಖ್ಯಾತ ನಾದಸ್ವರ ವಾದಕರಿಂದ ನಾದಸ್ವರ ವಾದನ ಕಾರ್ಯಕ್ರಮ ಜರುಗಲಿದೆ.

ಸಂಜೆ 7 ಗಂಟೆಗೆ ನಡೆಯಲಿರುವ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿಗಳಾದ ರಾಜಶೇಖರ್ ಕೋಟ್ಯಾನ್, ಪ್ರಸಾದ್ ರಾಜ್ ಕಾಂಚನ್, ಸೂರ್ಯ ಪ್ರಕಾಶ್, ಹರಿಪ್ರಸಾದ್ ರೈ, ಪ್ರಮುಖರಾದ ಜಿತೇಂದ್ರ ಶೆಟ್ಟಿ, ನಿತೇಶ್ ಸಾಲ್ಯಾನ್, ಜಯಕರ್ ಶೇರಿಗಾರ್, ಉಲ್ಲಾಸ್ ಶೆಟ್ಟಿ, ರಘುನಾಥ್ ಮಾಬೆನ್, ರಿಯಾಝ್ ಪಳ್ಳಿ, ಕಿರಣ್ ಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ಆದಿಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಬಯಲುಜಿಡ್ಡ ಉದ್ಯಾವರ ಇವರಿಂದ ಶ್ರೀ ಶಂಭುಕಲ್ಲು ವೀರಭದ್ರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನವಾಗಲಿದೆ. ಪ್ರಖ್ಯಾತ ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರು ಪಾತ್ರ ವಹಿಸಲಿದ್ದು ಇತಿಹಾಸ ಪ್ರಸಿದ್ಧ ವೀರಭದ್ರ, ಮಹಾಕಾಳಿ, ಪಂಜುರ್ಲಿ ಮತ್ತು ಶ್ರೀ ಕ್ಷೇತ್ರದ ಇನ್ನಿತರ ದೈವ ದೇವರುಗಳ ವಿಶಿಷ್ಟ ರೋಚಕ ಸನ್ನಿವೇಶಗಳ ಮೇಲೆ ಆಧಾರಿತ ಕಥೆಯಾಗಿದ್ದು, ಈ ಯಕ್ಷಗಾನ ಪ್ರೇಕ್ಷಕ ವರ್ಗದವರಲ್ಲಿ ವಿಶೇಷ ಕುತೂಹಲ ಕೆರಳಿಸಿದೆ ಮತ್ತು ಯಕ್ಷಗಾನದ ಇತಿಹಾಸದಲ್ಲಿ ಒಂದು ಹೊಸ ದಾಖಲೆ ಬರೆಯುವ ಪ್ರದರ್ಶನ ಮೂಡಿಬರಲಿದೆ ಎಂದು ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಇದರ ಪ್ರಕಟಣೆ ತಿಳಿಸಿದೆ.

ಉಚ್ಚಿಲ ಪೇಟೆಯಲ್ಲಿನ ಸಮಸ್ಯೆ: ಸಮಿತಿ ಸ್ಥಳ ಪರಿಶೀಲನೆ ; ಸಭೆ ; ಜಿಲ್ಲಾಧಿಕಾರಿಗೆ ಶಿಫಾರಸು

Posted On: 06-02-2025 04:44PM

ಉಚ್ಚಿಲ : ಉಚ್ಚಿಲ ಪೇಟೆಯ ರಾ.ಹೆ.66 ರಲ್ಲಿ ನಿರಂತರ ಅಪಘಾತ ಮತ್ತು ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ರಚಿಸಿದ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಅಧ್ಯಕ್ಷತೆಯ ಸಮಿತಿಯು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಸಭೆ ನಡೆಸಲಾಯಿತು.

ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾತನಾಡಿ, ಅಪಘಾತ ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಪೋಲೀಸ್ ಇಲಾಖೆ ನಿರಂತರವಾಗಿ ರಸ್ತೆ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಇಂದಿನ ಸಭೆಯಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಶೀಘ್ರವಾಗಿ ಅವುಗಳನ್ನು ಅನುಷ್ಠಾನಕ್ಕೆ ತರಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಮಾತನಾಡಿ, ಜನರ ಜೀವ ಅಮೂಲ್ಯ. ಇಂದು ಸಮಿತಿಯು ಕೂಲಂಕಷವಾಗಿ ಸ್ಥಳ ಪರಿಶೀಲನೆ ನಡೆಸಿದೆ. ನಿರಂತರ ಅಪಘಾತಗಳಿಗೆ ಕಾರಣಗಳನ್ನು ಪತ್ತೆಹಚ್ಚಿದೆ. ಮುಂದೆ ಈ ರೀತಿ ಆಗದಂತೆ ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಹೆದ್ದಾರಿ ಸ್ಥಳದಲ್ಲಿಯೇ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಶೀಘ್ರವಾಗಿ ಕ್ರಮ ವಹಿಸಲು ತಿಳಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅವಘಡಗಳು ಗಣನೀಯವಾಗಿ ಕಡಿಮೆಯಾಗುವ ಭರವಸೆ ಇದೆ. ಏಕೆಂದರೆ ಜನರ ಜೀವ ಅಮೂಲ್ಯ ಎಂದರು.

ಸಮಿತಿಯ ಶಿಫಾರಸುಗಳು : ♦️ರಸ್ತೆಯಲ್ಲಿರುವ ಪ್ರಸ್ತುತ ಬೀದಿ ದೀಪಗಳನ್ನು ತೆಗೆದು ಹೆಚ್ಚು ಪ್ರಖರ ಬೀದಿ ದೀಪಗಳನ್ನು ಅಳವಡಿಸತಕ್ಕದ್ದು. ♦️ರಸ್ತೆಯ ಮದ್ಯ ಉಚ್ಚಿಲ ಪೇಟೆಯಲ್ಲಿ 200ಮೀ ಬ್ಯಾರಿಕೇಡ್ ನಿರ್ಮಿಸಿ ಜನರು ರಸ್ತೆ ದಾಟಲು ವ್ಯವಸ್ಥೆ ಮಾಡಿಕೊಡುವುದು. ♦️ಉಚ್ಚಿಲ ಪೇಟೆ ಮದ್ಯ ಭಾಗದಲ್ಲಿ ರಸ್ತೆ ಮೀಡಿಯನ್ ಓಪನ್ ಮಾಡಲು ಕ್ರಮವಹಿಸತಕ್ಕದ್ದು. ♦️ರಸ್ತೆಯಲ್ಲಿ ಬ್ಲಿಂಕರ್ ಗಳು, ಸುರಕ್ಷತಾ ಸೂಚನಾ ಫಲಕಗಳು, ವೇಗ ನಿಯಂತ್ರಣ ಸೂಚನಾ ಫಲಕಗಳು, ಎಚ್ಚರಿಕೆಯ ಫಲಕಗಳನ್ನು ಅಳವಡಿಸತಕ್ಕದ್ದು. ♦️ ಉಚ್ಚಿಲ ಪೇಟೆಯಲ್ಲಿ ಹೈ ಮಾಸ್ಟ್ ದೀಪ ಅಳವಡಿಸುವುದು ಇತ್ಯಾದಿ. ಸ್ಥಳ ಪರಿಶೀಲನಾ ವರದಿ ಮತ್ತು ಶಿಫಾರಸುಗಳನ್ನು ಸಮಿತಿಯು ಮಾನ್ಯ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಿದೆ.

ಸಮಿತಿಯ ಸದಸ್ಯರಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಪಿ.ಡಿ. ಜಾವೇದ್, ಆರ್ ಟಿ ಒ ಅಧಿಕಾರಿ ಎಲ್ ಬಿ ನಾಯಕ್, ಮೆಸ್ಕಾಂ ಎಇಇ ಅರವಿಂದ್, ಸದಸ್ಯ ಕಾರ್ಯದರ್ಶಿ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನಕುಮಾರ್, ಕಾಪು ವೃತ್ತನಿರೀಕ್ಷಕಿ ಜಯಶ್ರೀ, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

ಕಾಪು  ಶ್ರೀ ಹೊಸ ಮಾರಿಗುಡಿ : ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ  ನವಚಂಡೀಯಾಗ ಸಂಪನ್ನ

Posted On: 04-02-2025 07:00PM

ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಮಂಗಳವಾರ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವ ಚಂಡೀಯಾಗ ನೆರವೇರಿತು. ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ, ಪ್ರಧಾನ ಆರ್ಚಕರಾದ ವೇದಮೂರ್ತಿ ಕಲ್ಯ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ನವ ಚಂಡೀಯಾಗದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ಬೆಳಿಗ್ಗೆ ನವಚಂಡೀಯಾಗ ಆರಂಭ, ಕಲ್ಪೋಕ್ತ ಪೂಜೆ, ಪೂರ್ಣಾಹುತಿ, ಧಾರ್ಮಿಕ ಸಭಾ ಕಾರ್ಯಕ್ರಮ, ವಾಗೀಶ್ವರಿ ಪೂಜೆ, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ಹಾಗೂ ಅನ್ನಪ್ರಸಾದ ವಿತರಣೆ ನಡೆಯಿತು. ನವದುರ್ಗಾ ಲೇಖನ ಯಜ್ಞದ ಮತ್ತು ನವ ಚಂಡೀಯಾಗದ  ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು.  

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್, ವಿಧಾನಪರಿಷತ್‌ ಸದಸ್ಯ   ಡಾ. ಮಂಜುನಾಥ್ ಭಂಡಾರಿ, ಕಾಪು ತಹಶೀಲ್ದಾರ್‌ ಡಾ. ಮನಮೋಹನ್‌ ಶೆಟ್ಟಿ, ಶಶಿಧರ ಶೆಟ್ಟಿ, ಪ್ರತಿಭಾ ಆರ್‌, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್‌, ಉಪಾಧ್ಯಕ್ಷ  ಹರಿಯಪ್ಪ ಕೋಟ್ಯಾನ್, ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಅಡ್ಯಂತಾಯ, ಉದಯ್ ಕುಮಾ‌ರ್ ಶೆಟ್ಟಿ ಮುನಿಯಾಲು, ಪ್ರಭಾಕರ ಶೆಟ್ಟಿ ಮಂಡಗದ್ದೆ, ಕೃಷ್ಣ ಶೆಟ್ಟಿ ಮುಂಬಯಿ, ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲಬಟ್ಟು, ಡಾ. ದೇವಿಪ್ರಸಾದ್‌ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್‌ ವಿ. ಶೆಟ್ಟಿ, ಕೋಶಾಧಿಕಾರಿ ಕೆ ವಿಶ್ವನಾಥ್‌, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್‌, ಸಂಚಾಲಕ ಸುವರ್ಧನ್‌ ನಾಯಕ್‌, ಮಹಿಳಾ ಪ್ರಧಾನ ಸಂಚಾಲಕಿ ಗೀತಾಂಜಲಿ ಎಂ ಸುವರ್ಣ, ಸಂಚಾಲಕಿ ಸಾವಿತ್ರಿ ಗಣೇಶ್‌, ಸಂಘಟನಾ ಕಾರ್ಯದರ್ಶಿ ಸಂದೀಪ್‌ ಕುಮಾರ್‌ ಮಂಜ, ಕಾಪು ದಿವಾಕರ ಶೆಟ್ಟಿ,  ಉಪಸ್ಥಿತರಿದ್ದರು.

ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ರಘುಪತಿ ಭಟ್‌ ಸ್ವಾಗತಿಸಿದರು. ಕೆ. ವಾಸುದೇವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗೀಶ್‌ ಶೆಟ್ಟಿ ವಂದಿಸಿದರು

ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಮೂಡುಕರೆ ಹೆಜಮಾಡಿ : ನೇಮೋತ್ಸವದ ಸಭೆ ; ನೂತನ ಸಮಿತಿ ರಚನೆ

Posted On: 02-02-2025 02:41PM

ಪಡುಬಿದ್ರಿ : ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಮೂಡುಕರೆ ಹೆಜಮಾಡಿ ಇದರ ನೇಮೋತ್ಸದ ಕುರಿತ ಸಭೆಯು ಭಾನುವಾರ ದೈವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.

ಹೆಜಮಾಡಿ ಗರಡಿ ಮನೆತನದ ಮುಖ್ಯಸ್ಥರಾದ ರವಿ ಶೆಟ್ಟಿ ಮುಂಬೈ ಇವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ದೈವಸ್ಥಾನದ ನೂತನ ಸಮಿತಿಯನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗರಡಿ ಮನೆತನದ ರವೀಂದ್ರ ಶೆಟ್ಟಿಯವರನ್ನು ಸಮಿತಿಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸುಧೀಶ್ ಶೆಟ್ಟಿ, ಮಹೇಶ್ ಶೆಟ್ಟಿ, ಸುರೇಶ್ ದೇವಾಡಿಗ, ರಾಧಾಕೃಷ್ಣ ಮಲ್ಯ, ಶ್ರೀನಿವಾಸ ಪೂಜಾರಿ ಹಾಗೂ ಮೂಡುಕರೆ ಗ್ರಾಮಸ್ಥರು ಹಾಗೂ ದೈವಸ್ಥಾನದ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಶಿರ್ವ ಸಿ.ಎ.ಸೊಸೈಟಿ ಚುನಾವಣೆ : ಕುತ್ಯಾರು ಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ ಜಯ

Posted On: 02-02-2025 11:27AM

ಶಿರ್ವ : ಭಾರೀ ಕುತೂಹಲ ಮೂಡಿಸಿದ್ದ ಶಿರ್ವ ಸಹಕಾರಿ ವ್ಯವಸಾಯಿಕ ಸಂಘ(ನಿ.) ಶಿರ್ವ ಇದರ ಆಡಳಿತ ಮಂಡಳಿಗೆ ಶನಿವಾರ ನಡೆದ ಚುಣಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದ ಬಿಜೆಪಿ ಹಾಗೂ ಸಹಕಾರ ಭಾರತಿ ಬೆಂಬಲಿತ ಕುತ್ಯಾರು ಪ್ರಸಾದ್ ಶೆಟ್ಟಿ ನೇತೃತ್ವದ ತಂಡ 12 ಸ್ಥಾನಗಳಲ್ಲಿ 11 ಸ್ಥಾನವನ್ನು ಗಳಿಸುವ ಮೂಲಕ ದ್ವಿತೀಯ ಅವಧಿಗೆ ಆಡಳಿತದ ಚುಕ್ಕಾಣಿಯನ್ನು ಹಿಡಿದಿದೆ.

ಚುನಾವಣಾ ಅಧಿಕಾರಿಯಾಗಿ ರೋಹಿತ್ ಪ್ರ.ದ.ಸಹಾಯಕರು, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಉಡುಪಿ ಇವರು ಕರ್ತವ್ಯ ನಿರ್ವಹಿಸಿದ್ದರು.

ಸಾಮಾನ್ಯ ಸ್ಥಾನದಲ್ಲಿ ಕುತ್ಯಾರು ಪ್ರಸಾದ್ ಎಸ್.ಶೆಟ್ಟಿ, ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ರಂಜಿತ್ ಪ್ರಭು ಮಟ್ಟಾರು, ಉಮೇಶ ಆಚಾರ್ಯ, ಪುರುಶೋತ್ತಮ ಶೆಟ್ಟಿಗಾರ್, ಸುಂದರ ಮೂಲ್ಯ. ಮಹಿಳಾ ಮೀಸಲು ಸ್ಥಾನದಲ್ಲಿ ವಾರಿಜ ಆರ್ ಕಲ್ಮಾಡಿ, ವೇದಾವತಿ ಆಚಾರ್ಯ, ಹಿಂದುಳಿದ ಪ್ರವರ್ಗ ಎಯಲ್ಲಿ ವಿಜಯ ಪೂಜಾರಿ, ಹಿಂದುಳಿದ ಪ್ರವರ್ಗ ಬಿಯಲ್ಲಿ ಹರಿಣಾಕ್ಷ ಶೆಟ್ಟಿ, ಪರಿಶಿಷ್ಠ ಜಾತಿ ವಿಭಾಗದಲ್ಲಿ ಕೃಷ್ಣ ಮುಖಾರಿ, ಪರಿಶಿಷ್ಠ ಪಂಗಡದಲ್ಲಿ ಗಣೇಶ್ ನಾಯ್ಕ್ ಆಯ್ಕೆಯಾಗಿದ್ದಾರೆ.

ಕಾರ್ಯಕರ್ತರ ಪರಿಶ್ರಮವೇ ವಿಜಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕುತ್ಯಾರು ಪ್ರಸಾದ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಜೇತರನ್ನು ಅಭಿನಂದಿಸಿದರು.

ಸುಳ್ಳು ಹೇಳಿಕೆಗಳ ಮೂಲಕ ಜನರ ಹಾದಿ ತಪ್ಪಿಸುತ್ತಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ : ಅನಿತ ಡಿಸೋಜ

Posted On: 01-02-2025 04:12PM

ಕಾರ್ಕಳ : ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಒಲೈಕೆ ನೀತಿ ಎಂಬ ಸುಳ್ಳು ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಜನರು ಸ್ವಯಂ ಪ್ರೇರಿತರಾಗಿ ಧ್ವನಿ ಎತ್ತಬೇಕು ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜಾ ಬೆಳ್ಮಣ್ ಆಗ್ರಹಿಸಿದ್ದಾರೆ.

ಜನ ವಿರೋಧಿ ಆಡಳಿತ ನೀಡಿ ಅಧಿಕಾರವನ್ನು ಕಳೆದುಕೊಂಡ ನಂತರ ಬಿಜೆಪಿ ಪಕ್ಷದ ನಾಯಕರಾದ ಸುನಿಲ್ ಕುಮಾರ್ ರವರು ರಾಜ್ಯ ಸರಕಾರದ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಒಂದು ಕಡೆ ಸರಕಾರದ ಬೊಕ್ಕಸ ಖಾಲಿಯಾಗಿದೆ, ಅಭಿವೃದ್ಧಿಗೆ ಹಣವೇ ಇಲ್ಲ ಅಂತ ಆರೋಪ ಮಾಡುತ್ತಿದ್ದ ಇವರ ನಾಲಿಗೆ, ಇನ್ನೊಂದು ಕಡೆ ಕಾರ್ಕಳಕ್ಕೆ ಏಷ್ಟು ಕೋಟಿ ಬಿಡುಗಡೆಯಾಗಿದೆ ಅಂತ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ತನ್ನ ಪ್ರಯೋಗಲಯ ಮಾಡಿ ಜಾತಿ, ಧರ್ಮ, ಗೋ ಹತ್ಯೆ, ಹಲಾಲ್, ಜಟ್ಕಾ, ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡಿ ಪ್ರಯೋಜನ ಪಡೆದಿರುವುದು ಎಲ್ಲಾ ಜಾತಿ, ಧರ್ಮ, ಕುಲ, ಗೋತ್ರದ ಜನಸಾಮಾನ್ಯರ ಗಮನದಲ್ಲಿದೆ. ನಿಮ್ಮ ಆಲೋಚನೆಯಲ್ಲಿ ಎಲ್ಲಾ ಹಿಂದುಗಳು, ನಿಮ್ಮ ಕಪಟ ನಾಟಕ ಅರಿಯದ ಮುಗ್ದರು ಎಂದಿರಬಹುದು. ಆದರೆ ಅವರು ಮೂರ್ಖರಂತೂ ಅಲ್ಲಾ ಅನ್ನುವುದು ನಮ್ಮ ನಂಬಿಕೆ. ನೀವು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರಿ. ಅವಿಭಜಿತ ದಕ್ಷಿಣ ಕನ್ನಡಲ್ಲಿ ಬಹುತೇಕ ಗೋ ಹತ್ಯೆ, ಗೋ ಸಾಗಾಟದಲ್ಲಿ ಬಿಜೆಪಿ ಬೆಂಬಲಿತರೇ ಜಾಸ್ತಿ ಸಿಕ್ಕಿಕೊಂಡಿರೋದು ಹಾಗಾಗಿ ನಿಮಗೆ ಕಾಣಿಸುವುದಿಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.

ಗೋಮಾಂಸ ರಫ್ತಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂಬುದನ್ನು ಮರೆತಿರುವ ಶಾಸಕ ಸುನಿಲ್ ಕುಮಾರ್ ಅವರು ಮಾನಸಿಕ ಅಸ್ವಸ್ಥನೊಬ್ಬನು ಕೆಚ್ಚಲು ಕೊಯ್ದ ಘಟನೆಯನ್ನು ಹಿಡಿದುಕೊಂಡು ಹಿಂದುಗಳ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದೇಶದ ಈಶಾನ್ಯ ರಾಜ್ಯಗಳು ಮತ್ತು ಗೋವಾಗಳಲ್ಲಿ ಗೋಮಾಂಸ ತಿನ್ನುವವರ ಪರವಾಗಿ ಇವರದೇ ಪಕ್ಷ ಇದೆ. ಇಲ್ಲಿ ಗೋಮಾತೆಯ ಮೇಲೆ ವಿಶೇಷ ಮಮತೆ ಇರುವಂತಹ ನಾಟಕವನ್ನು ಆಡುತ್ತಿದ್ದಾರೆ. ಕರ್ನಾಟಕದಲ್ಲಿ ಇವರೇ ಬೆಳೆದು ಬಂದ ಸಂಘಟನೆಯ ಸದಸ್ಯರು ಗೋ ಸಾಗಾಟ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿದಂತ ಹಲವಾರು ಪ್ರಕರಣಗಳು ದಾಖಲಾಗಿವೆ. ಬಡವರು ಮನೆ ಕಟ್ಟಲು ಆಗುತ್ತಿರುವ ಸಮಸ್ಯೆ, ನಿಮ್ಮ ಸರಕಾರ ಇರುವಾಗಲೂ ಇತ್ತು. ಮಂತ್ರಿ ಸ್ಥಾನದಲ್ಲಿ ಇದ್ದ ನೀವು ಯಾಕೆ ಆ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸಲಿಲ್ಲ. ರೇಷನ್ ಕಾರ್ಡ್ ತೊಂದರೆಯಾಗಿರುವುದು ನಿಮ್ಮ ಕೇಂದ್ರ ಸರಕಾರದ ನೀತಿಯಿಂದ ಹೊರತು ರಾಜ್ಯ ಸರಕಾರದ ತಪಲ್ಲ. ಆದರೂ ರಾಜ್ಯ ಕಾಂಗ್ರೆಸ್ ಸರಕಾರ ರೇಷನ್ ಕಾರ್ಡ್ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಕಾಂಗ್ರೆಸ್ ಸರಕಾರ ಬಂದಮೇಲೆ ಹಾಲಿನ ದರ ಏರಿಕೆಯಾಗಲೇ ಇಲ್ಲ, ನೀವು ಹಾಲಿನ ದರ ಏರಿಕೆಯಾಗಿದೆಯಂತ ಜನರಿಗೆ ಸುಳ್ಳು ಹೇಳುತ್ತಿದ್ದೀರಿ. ರಾಜ್ಯ ಸರಕಾರದ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಜಾರಿ ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ಸರಕಾರ ಉತ್ತಮವಾಗಿ ಮಾಡುತ್ತಿದೆ. ಇದನ್ನು ಕಂಡು ಸಹಿಸದ ನೀವು ಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದೀರಿ. ನಿಮ್ಮ ಈ ಕುತಂತ್ರ ಕಾರ್ಕಳ ಜನರ ಮುಂದೆ ಎಲ್ಲಾ ಸಮಯದಲ್ಲೂ ನಡೆಯುವುದಿಲ್ಲ ಎಂದು ತಾವು ಮನಗಣಬೇಕು. ಎಚ್ಚೆತ್ತು ಕೊಳ್ಳಿ ಸುನಿಲ್ ಕುಮಾರ್ ಅವರೇ, ದೇವರು ಕೈ ಬಿಟ್ಟಲ್ಲಿ ನಿಮ್ಮ ರಾಜಕೀಯ ಇತಿಶ್ರೀ ಯಾಗುವುದು ಖಂಡಿತಾ ಎಂದು ಅನಿತಾ ಡಿಸೋಜ ತಿಳಿಸಿದ್ದಾರೆ.