Updated News From Kaup
ಎರ್ಮಾಳು ತೆಂಕ ಹಾಗೂ ಬಡಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Posted On: 29 Jul 2025, 09:13 PM
ಎರ್ಮಾಳು : ಜನ ಕಲ್ಯಾಣಕ್ಕೆ ಪೂರಕವಾದ ಸೇವೆಯನ್ನು ಜನಾರ್ಧನ ಜನ ಕಲ್ಯಾಣ ಸಮಿತಿ ಮಾಡುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸಮಾಜದ ಋಣ ತೀರಿಸುವ ಕಾರ್ಯ ಸಮಿತಿ ಮಾಡುತ್ತಿದೆ ಎಂದು ಎರ್ಮಾಳು ಜನಾರ್ಧನ ದೇವಳದ ಅರ್ಚಕರಾದ ವಿಷ್ಣುಮೂರ್ತಿ ಭಟ್ ಹೇಳಿದರು. ಅವರು ಮಂಗಳವಾರ ಜನಾರ್ಧನ ಜನಕಲ್ಯಾಣ ಸೇವಾ ಸಭಾಂಗಣದಲ್ಲಿ ಶ್ರೀ ಜನಾರ್ಧನ ದೇವಸ್ಥಾನ ಹಾಗೂ ಶ್ರೀ ಜನಾರ್ಧನ ಜನ ಕಲ್ಯಾಣ ಸೇವಾ ಸಮಿತಿ (ರಿ.) ಎರ್ಮಾಳು ವತಿಯಿಂದ 2024-25ರ ಶೈಕ್ಷಣಿಕ ವರ್ಷದಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಗಳಿಸಿದ 5ನೇ ತರಗತಿಯಿಂದ ಪಿಯುಸಿವರೆಗಿನ ಎರ್ಮಾಳು ತೆಂಕ ಹಾಗೂ ಬಡಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿದರು. ಜನಾರ್ಧನ ಜನ ಕಲ್ಯಾಣ ಸೇವಾ ಸಮಿತಿ ಅಧ್ಯಕ್ಷರಾದ ಸುರೇಶ್ ಜಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಋಣಾತ್ಮಕವನ್ನು ಯೋಚಿಸದೆ ಧನಾತ್ಮಕ ಚಿಂತನೆಯ ಮೂಲಕ ಜೀವನದಲ್ಲಿ ಮುಂದೆ ಬರಬೇಕು ಎಂದು ಹೇಳಿದರು. ಸಿ.ಎ.ಪರೀಕ್ಷೆಯಲ್ಲಿ ತೇರ್ಗಡೆಯಾದ ಅನುಷಾ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. 2024-25ರ ಶೈಕ್ಷಣಿಕ ವರ್ಷದಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಗಳಿಸಿದ 5ನೇ ತರಗತಿಯಿಂದ ಪಿಯುಸಿವರೆಗಿನ 100 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉಪಾಧ್ಯಕ್ಷ ರತ್ನಾಕರ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಎಲ್ಯದಡಿ, ಶಶಿಧರ ಶೆಟ್ಟಿ, ಯಶೋಧರ ಶೆಟ್ಟಿ, ಜ್ಯೋತಿ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ, ರಾಕೇಶ್ ಎಲ್ ಶೆಟ್ಟಿ, ತೆಂಕ ಗ್ರಾ.ಪಂ ಅಧ್ಯಕ್ಷೆ ಸುರೇಖ, ಸಮಿತಿಯ ಟ್ರಸ್ಟಿಗಳು ಉಪಸ್ಥಿತರಿದ್ದರು. ಅಮೃತ ಪ್ರಾರ್ಥಿಸಿದರು. ಸುರೇಶ್ ಜಿ ಶೆಟ್ಟಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು. ಓಂಕಾರ್ ಕಲಾ ಸಂಗಮ ಪಡುಬಿದ್ರಿ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಕಾಪು ತಾಲೂಕಿನಾದ್ಯಂತ ಸಂಭ್ರಮದ ನಾಗರಪಂಚಮಿ ಆಚರಣೆ
Posted On: 29 Jul 2025, 03:29 PM
ಕಾಪು : ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ನಾಗರಪಂಚಮಿಯನ್ನು ಕಾಪು ತಾಲೂಕಿನಾದ್ಯಂತ ಭಕ್ತರು ತಮ್ಮ ಮೂಲ ನಾಗಬನಗಳಿಗೆ ಭೇಟಿಯಿತ್ತು, ತನು ತಂಬಿಲಾದಿ ಸೇವೆ ನೀಡಿ ಸಂಭ್ರಮದಿಂದ ಆಚರಿಸಿದರು. ಕಾಪು ತಾಲೂಕಿನ ಹೆಜಮಾಡಿ, ಪಡುಬಿದ್ರಿ, ಎಲ್ಲೂರು, ಉಚ್ಚಿಲ, ಶಿರ್ವ, ಕಾಪು ಸೇರಿದಂತೆ ವಿವಿದೆಡೆ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಯಿತು. ಹಾಲು, ಹೂ, ಸಿಯಾಳ, ಅರಶಿನ ವ್ಯಾಪಾರ ಭರ್ಜರಿಯಾಗಿದ್ದು, ಮಳೆ ಇಲ್ಲದ ಕಾರಣ ಹೆಚ್ಚಿನ ಜನರು ನಾಗಬನಗಳಿಗೆ ಭೇಟಿ ನೀಡಲು ಉಪಯುಕ್ತವಾಯಿತು. ವಾಹನ ಸಂಚಾರ ಹೇರಳವಾಗಿತ್ತು. ಬೆಳಗ್ಗಿನ ಹೊತ್ತು ಪಡುಬಿದ್ರಿ ಜಂಕ್ಷನ್ ನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಸ್ವಲ್ಪ ಕಾಲ ಉಂಟಾಗಿತ್ತು.
ಕಾಪು ಶಾಸಕರು ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಲಿ : ವಿನಯ ಕುಮಾರ್ ಸೊರಕೆ
Posted On: 29 Jul 2025, 09:28 AM
ಕಾಪು : ಸರಕಾರದಿಂದ ಅನುದಾನ ಬರುತ್ತಿಲ್ಲ ಎನ್ನುತ್ತಲೇ ಸಮಯ ಕಳೆಯುತ್ತಿರುವ ಕಾಪು ಶಾಸಕರು ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸುವುದು ಸೂಕ್ತ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಪು ತಾಲೂಕಿನ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸುವ ಮೂಲಕ ನಮಗೆ ದಾರಿ ತೋರಿಸಿ ಕೊಟ್ಟಿದ್ದರು. ಅವರು ನೀಡಿದ ಅವಕಾಶವನ್ನು ಬಳಸಿಕೊಂಡು ನಾವು ಕೂಡಾ ಪ್ರತಿಭಟನೆ ನಡೆಸಿದ್ದೇವೆ. ಜನರ ಮುಂದೆ ಸತ್ಯದರ್ಶನ ಮಾಡಿಸಿಕೊಟ್ಟಿದ್ದೇವೆ ಎಂದರು. ಕಾಪು ಶಾಸಕರು ರಾಜ್ಯ ಸರಕಾರವು ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಅವರಿಗೆ ಶಾಸಕರ ನಿಧಿ, ಅಲ್ಪಸಂಖ್ಯಾತರ ನಿಧಿ, ಲೋಕೋಪಯೋಗಿ ಇಲಾಖೆ ಸಹಿತ ಇತರ ಇಲಾಖೆಗಳ ಅನುದಾನ ಹಾಗೂ ತಾ.ಪಂ., ಜಿ. ಪಂ., ನಿಧಿಯೂ ಸಿಕ್ಕಿದೆ. ಆದರೂ ಸರಕಾರದಿಂದ ಅನುದಾನ ಬರುತ್ತಿಲ್ಲ ಎನ್ನುತ್ತಲೇ ಸಮಯ ಕಳೆಯುತ್ತಿರುವ ಶಾಸಕರು ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸುವುದು ಸೂಕ್ತ ಎಂದು ಸೊರಕೆ ಹೇಳಿದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಕಾಪು ದಿವಾಕರ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ಜಿತೇಂದ್ರ ಪುರ್ಟಾಡೋ, ಶಾಂತಲತಾ ಶೆಟ್ಟಿ, ಮಹಮ್ಮದ್ ನಿಯಾಝ್, ಶರ್ಪುದ್ದೀನ್ ಶೇಖ್ ಉಪಸ್ಥಿತರಿದ್ದರು.
ಮಂಗಳೂರು - ಉಡುಪಿ ನಡುವೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ಸು ಸಂಚಾರ ಪ್ರಾರಂಭಕ್ಕೆ ಜಯರಾಮ ಆಚಾರ್ಯ ಕಾಪು ಆಗ್ರಹ
Posted On: 29 Jul 2025, 09:20 AM
ಕಾಪು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮಂಗಳೂರು ಮತ್ತು ಉಡುಪಿ ನಡುವೆ (ಪರಿಸರ ಸ್ನೇಹಿ)ಎಲೆಕ್ಟ್ರಿಕ್ ಬಸ್ಸು ಸಂಚಾರ ಪ್ರಾರಂಭಿಸಲು ಸಾಮಾಜಿಕ ಕಾರ್ಯಕರ್ತ ಜಯರಾಮ ಆಚಾರ್ಯ ಕಾಪು ಆಗ್ರಹಿಸಿದ್ದಾರೆ. 45 ಆಸನಗಳು ಮತ್ತು 60-70 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುವ ಆರಾಮದಾಯಕ ಎಲೆಕ್ಟ್ರಿಕ್ ಬಸ್ (ಹವಾನಿಯಂತ್ರಿತ) ಪರಿಸರ ಸ್ನೇಹಿ ಮಂಗಳೂರು ಡಿಪೋದಲ್ಲಿ ಲಭ್ಯವಿದ್ದು, ಉಡುಪಿ ಮತ್ತು ಮಂಗಳೂರು ಮದ್ಯೆ ಓಡಾಟ ಪ್ರಾರಂಭಿಸಬೇಕು. ಒಟ್ಟು 55 ಕಿಮೀ ದೂರವಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಈ ಹಿಂದೆ ವೊಲ್ವಾ ಬಸ್ಸು ನಿಲುಗಡೆ ಇದ್ದ ಹಾಗೆ ನಿಲುಗಡೆ ನೀಡಬೇಕು. ಇದರಿಂದ ಮಂಗಳೂರು ಮತ್ತು ಉಡುಪಿ ನಡುವಿನ ದೈನಂದಿನ ಪ್ರಯಾಣಿಕರಿಗೆ, ಸಾರ್ವಜನಿಕರಿಗೂ, ಹೆಚ್ಚು ಅನುಕೂಲವಾಗಲಿದೆ. ಈ ಬಗ್ಗೆ ಸಮಾಜಸೇವಕರಾದ ಕಾಪು ಜಯರಾಮ ಆಚಾರ್ಯರವರು ಕರ್ನಾಟಕ ಸರಕಾರದ ಟ್ರಾನ್ಸ್ಪೋರ್ಟ್ ಮತ್ತು ಮುಜುರಾಯಿ ಇಲಾಖೆ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದ್ದಾರೆ.
ಉದ್ಯಮಿ ನಿಶಾಂತ್ ವಿ. ಅಂಚನ್ ಅವರಿಗೆ ಸಾಧನಾಶ್ರೀ ಪುರಸ್ಕಾರ
Posted On: 29 Jul 2025, 08:59 AM
ಕಾಪು : ಜೇಸಿಐ ಮಡಂತ್ಯಾರು ಘಟಕದ ಆಶ್ರಯದಲ್ಲಿ ರವಿವಾರ ನಡೆದ ವಲಯ 15ರ "ಮೃದಂಗ" ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಮುಂಡ್ಕೂರು ಭಾರ್ಗವ ಘಟಕದ ಉಪಾಧ್ಯಕ್ಷ, ಉದ್ಯಮಿ ನಿಶಾಂತ್ ವಿ. ಅಂಚನ್ ಅವರನ್ನು ಜೇಸಿಐ ಸಾಧನಾಶ್ರೀ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಜೇಸಿಐ ವಲಯ 15ರ ವಲಯಾಧ್ಯಕ್ಷ ಅಭಿಲಾಶ್ ಬಿ.ಎ., ವ್ಯವಹಾರ ವಿಭಾಗದ ವಲಯ ನಿರ್ದೇಶಕ ಅಶೋಕ್ ಗುಂಡ್ಯಲ್ಕೆ, ವಲಯ ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ ಸಾಧನಾಶ್ರೀ ಪ್ರಶಸ್ತಿ ಪ್ರಧಾನಿಸಲಾಯಿತು. ನಿಕಟ ಪೂರ್ವ ವಲಯಾಧ್ಯಕ್ಷ ಗಿರೀಶ್ ಎಸ್.ಪಿ., ಪೂರ್ವ ವಲಯಾಧ್ಯಕ್ಷ ಸಂಪತ್ ಸುವರ್ಣ, ವಲಯಾಧಿಕಾರಿ ಗಣೇಶ್ ಆಚಾರ್ಯ, ಜೇಸಿಐ ಮುಂಡ್ಕೂರು ಭಾರ್ಗವದ ಅಧ್ಯಕ್ಷ ವಸಂತ್ ಪೂಜಾರಿ, ಜೇಸಿಐ ಮಡಂತ್ಯಾರು ಅಧ್ಯಕ್ಷೆ ಅಮಿತಾ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.
ಕಾಪು : ಹೇರೂರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾಗಿ ರಾಜೇಶ್ ಐ ದೇವಾಡಿಗ ಹೇರೂರು ಆಯ್ಕೆ
Posted On: 29 Jul 2025, 08:57 AM
ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92 ಹೇರೂರು ಗ್ರಾಮದ ಹೇರೂರು ಫ್ರೆಂಡ್ಸ್ ಕ್ಲಬ್ ಇದರ ನೂತನ ಅಧ್ಯಕ್ಷರಾಗಿ ತುಳು ನಾಟಕ ಬರಹಗಾರ ರಾಜೇಶ್ ಐ ದೇವಾಡಿಗ ಇವರು ಅವಿರೋಧವಾಗಿ ಆಯ್ಕೆಯಾಗಿದ್ಧಾರೆ. ಕಾರ್ಯದರ್ಶಿಯಾಗಿ ಸುಮಿತ್ ಶೆಟ್ಟಿ, ಕೋಶಾಧಿಕಾರಿಯಾಗಿ ಸುಧೀರ್ ಆಯ್ಕೆಯಾಗಿರುತ್ತಾರೆ. ಗೌರವ ಅಧ್ಯಕ್ಷರಾಗಿ ನಿರ್ಗಮನ ಅಧ್ಯಕ್ಷರಾದ ಸುರೇಶ್ ಮೂಲ್ಯ ಇವರು ತಮಗೆ ಸಹಕಾರ ನೀಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು. ನೂತನ ಅಧ್ಯಕ್ಷರಾದ ರಾಜೇಶ್ ಇವರು ಮುಂದಿನ ವರ್ಷದಲ್ಲಿ ಸಂಸ್ಥೆಯನ್ನು ಉತ್ತುಂಗಕ್ಕೆ ಏರಿಸುವ ಭರವಸೆ ನೀಡಿದರು. ಸರ್ವ ಸದಸ್ಯರ ಸಹಕಾರ ಆಶಿಸಿದರು. ರವಿ ದೇವಾಡಿಗ ಪ್ರಾರ್ಥಿಸಿ, ರಾಜೇಶ್ ಜೋಗಿ ಕಾರ್ಯಕ್ರಮ ನಿರೂಪಿಸಿ, ವಿಜಯ್ ಧೀರಜ್ ರವರು ವಂದಿಸಿದರು.
ಕಾಲಾವಧಿ ಆಟಿ ಮಾರಿಪೂಜೆ : ಹರಕೆ ಕೋಳಿ ಸಮರ್ಪಣೆ ಕುರಿತು ಸ್ಪಷ್ಟೀಕರಣ
Posted On: 28 Jul 2025, 07:30 PM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ 2025ರ ಜುಲೈ 29 ಮತ್ತು 30ರಂದು ನಡೆಯಲಿರುವ ಕಾಲಾವಧಿ ಆಟಿ ಮಾರಿಪೂಜೆಯಲ್ಲಿ ಹರಕೆ ಕೋಳಿ ಸಮರ್ಪಿಸುವ ಬಗ್ಗೆ ಭಕ್ತರಿಗೆ ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಏರ್ಪಟ್ಟಿದ್ದು, ಈ ಹಿಂದೆ ತಾಯಿ ಮಾರಿಯಮ್ಮನಿಂದ ಊರಿನ ಕೋಳಿ ಹರಕೆಯಾಗಿ ಸಮರ್ಪಿಸುವ ಬಗ್ಗೆ ವಾಕ್ಷ್ಯ ಆಗಿದ್ದರೂ ಸಹ ಆಟಿ ಮಾರಿಪೂಜೆಯಲ್ಲಿ ಈ ಹಿಂದಿನಂತೆಯೇ ಹರಕೆಯ ಕೋಳಿಯನ್ನು ಸಮರ್ಪಿಸಬಹುದಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ ಮತ್ತು ಕಾರ್ಯನಿರ್ವಹಣಾಧಿಕಾರಿ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು ಇವರು ಸ್ಪಷ್ಟೀಕರಣ ನೀಡಿದ್ದಾರೆ. ಭಕ್ತಾದಿಗಳು ಸಹಕರಿಸಬೇಕಾಗಿ ವಿನಂತಿ.
ಅಂತರರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಯ್ಕೆ
Posted On: 26 Jul 2025, 08:11 PM
ಕಾಪು : ಅಮೆರಿಕಾದ ಬೋಸ್ಟನ್ ನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಶಾಸಕರ ಸಮಾವೇಶ ಸಂಸ್ಥೆಯ (NLC) ಆಶ್ರಯದಲ್ಲಿ ಅಮೆರಿಕಾದ ಬೋಸ್ಟನ್ ನಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷರ (ಸ್ಪೀಕರ್) ನೇತೃತ್ವದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನಕ್ಕೆ ಪ್ರಥಮ ಬಾರಿಗೆ ಆಯ್ಕೆಯಾಗಿರುವ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಅವಕಾಶ ಪಡೆದಿದ್ದಾರೆ. ಕರ್ನಾಟಕದ ವಿಧಾನಸಭೆಯ 224 ಸದಸ್ಯರುಗಳಲ್ಲಿ 14 ಶಾಸಕರು ಆಯ್ಕೆಯಾಗಿದ್ದು ಅದರಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕೂಡ ಓರ್ವರಾಗಿರುತ್ತಾರೆ. ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನೀತಿ ನಿರೂಪಕರು ಪಾಲ್ಗೊಳಲಿದ್ದು, ಪ್ರಜಾತಂತ್ರ ಗಟ್ಟಿಗೊಳಿಸುವಿಕೆಯಲ್ಲಿ ಶಾಸನ ಸಭೆಗಳ ಪಾತ್ರ ಶಾಸನ ಸಭೆಗಳಿಗೆ ಆರ್ಥಿಕ ಸ್ವಾಯತ್ತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಗೋಷ್ಠಿಗಳಿರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ಆಟಗಾರ ತನುಷ್ ಕೋಟ್ಯಾನ್ ಕಾಪು ಶ್ರೀ ಹೊಸ ಮಾರಿಗುಡಿ ಭೇಟಿ
Posted On: 26 Jul 2025, 08:05 PM
ಕಾಪು : ಭಾರತೀಯ ಕ್ರಿಕೆಟ್ ಆಟಗಾರ, ಮುಂಬೈ ತಂಡದಲ್ಲಿ ಮತ್ತು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಟಗಾರನಾಗಿ ಗುರುತಿಸಿಕೊಂಡಿದ್ದ ಕಾಪುವಿನ ಪಾಂಗಾಳ ಮೂಲದ ತನುಷ್ ಕೋಟ್ಯಾನ್ ಇಂದು ಕಾಪು ಮಾರಿಯಮ್ಮನ ದರುಶನ ಪಡೆದರು. ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಬಾಲ್ಯದಿಂದಲೂ ಇಲ್ಲಿಗೆ ಬರುತ್ತಿದ್ದೇನೆ, ಭಾರತೀಯ ತಂಡದಲ್ಲಿ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದೇನೆ, ದೇವಳದ ನವನಿರ್ಮಾಣ ಬಹಳಷ್ಟು ಸುಂದರವಾಗಿ ಮೂಡಿಬಂದಿದೆ, ದೇವಳದ ಕೆತ್ತನೆಗಳು ಮನಸೂರೆಗೊಳ್ಳುತ್ತವೆ, ಮುಂಬರುವ ಟೆಸ್ಟ್ ಪಂದ್ಯಾಟದಲ್ಲಿ 14 ಆಟಗಾರರಲ್ಲಿ ನಾನು ಕೂಡ ಒಬ್ಬ, ಈ ಪಂದ್ಯಾಟದಲ್ಲಿ ನನಗೂ ಕೂಡ ಅವಕಾಶ ಸಿಗಬೇಕೆಂದು ಶ್ರೀದೇವಿಯಲ್ಲಿ ಪ್ರಾರ್ಥಿಸಿದೆ ಎಂದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾಧವ ಆರ್. ಪಾಲನ್, ರವೀಂದ್ರ ಮಲ್ಲಾರ್, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯ ಮತ್ತು ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಪು ದಂಡತೀರ್ಥ ಪ.ಪೂ. ಕಾಲೇಜು : ಪ್ರತಿಭಾನ್ವೇಷಣ ಕಾರ್ಯಕ್ರಮ
Posted On: 26 Jul 2025, 04:45 PM
ಕಾಪು : ಇಲ್ಲಿನ ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾನ್ವೇಷಣ ಕಾರ್ಯಕ್ರಮವು ಶನಿವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಮಾರಂಭವನ್ನು ರಂಗಭೂಮಿ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಅನಾವರಣಗೊಳಿಸಬೇಕು. ಪ್ರಸ್ತುತ ವಿದ್ಯಾರ್ಥಿ ಸಮೂಹ ದುಶ್ಚಟಗಳಲ್ಲಿ ತೊಡಗಿ ತಮ್ಮ ಸುಂದರ ಭವಿಷ್ಯವನ್ನು ನಾಶಪಡಿಸುತ್ತಿರುವುದು ದುಃಖಕರ. ಹಾಗಾಗಿ ವಿದ್ಯಾರ್ಥಿಗಳು ಆರೋಗ್ಯಪೂರ್ಣ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನದ ಪರಿಪೂರ್ಣತೆಯ ಕಡೆಗೆ ಸಾಗಬೇಕೆಂಬ ಸಂದೇಶವನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕರಾದ ಡಾ. ಕೆ. ಪ್ರಶಾಂತ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಾಗ ನೈಜ ಪ್ರತಿಭೆ ಅರಳುತ್ತದೆ. ಶಾಲಾ-ಕಾಲೇಜುಗಳಲ್ಲಿ ಮೂಡಿಬಂದ ಉತ್ತಮ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ವ್ಯಕ್ತವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಂಶುಪಾಲರಾದ ನೀಲಾನಂದ್ ನಾಯ್ಕ್ ಮಾತನಾಡಿದರು. ಸಮಾರಂಭದಲ್ಲಿ ಆಡಳಿತಮಂಡಳಿಯ ಸದಸ್ಯೆ ಪನ್ನಾ ಪಿ. ಶೆಟ್ಟಿ, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ಉಪಸ್ಥಿತರಿದ್ದರು. ಕಾಲೇಜು ನಾಯಕ ಚಿರಾಗ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ನುವೈಮಾ ಮತ್ತು ಮಂತಸಾ ನಿರೂಪಿಸಿದರು. ವಿದ್ಯಾರ್ಥಿ ಸಫ್ವಾನ್ ವಂದಿಸಿದರು.
