Updated News From Kaup

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ

Thumbnail
Posted On: 03 Aug 2022, 09:48 PM

ಶಿರ್ವ : ಮಂಗಳೂರಿನ ಪ್ರತಿಷ್ಠಿತ ಗ್ಲೋಟಚ್ ಟೆಕ್ನಾಲಜೀಸ್ (ದಿಯಾ ಸಿಸ್ಟಮ್ ಸಂಸ್ಥೆ)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವೂ ಈಗಾಗಲೇ ಬಿಸಿಎ, ಬಿಎಸ್ಸಿ (ಸಿ.ಎಸ್, ಸ್ಟಾಟಿಸ್ಟಿಕ್ಸ್, ಎಲೆಕ್ಟ್ರಾನಿಕ್ಸ್), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ( ಸಿ.ಎಸ್),ಎಂಎಸ್ಸಿ, ಎಂಸಿಎ, ಬಿಇ,ಬಿಟೆಕ್ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಶಿರ್ವ ಸಂತ ಮೇರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗ,ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶ ವತಿಯಿಂದ ಆಗಸ್ಟ್ 03ರಂದು ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ನಡೆಯಿತು. ಇದು ಸ್ಪರ್ಧಾತ್ಮಕ ಯುಗ ಎಂದು ತಿಳಿದಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಗೆದ್ದವರು ಒಂದು ಸ್ಪೂರ್ತಿದಾತರಾದರೆ ಸೋತವರು ಅನುಭವಗಳ ಮೂಲಕ ಸವಾಲುಗಳನ್ನು ಎದುರಿಸಿ ಗೆಲ್ಲಬೇಕು ಹಾಗೆ ಶಿಕ್ಷಣದ ಜೊತೆಗೆ ಪ್ರತಿಯೊಬ್ಬ ಅಭ್ಯರ್ಥಿಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗಿರುವ ಕೌಶಲಗಳನ್ನು ಕಲಿತು ಉದ್ಯೋಗವನ್ನು ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಗ್ಲೋಟಚ್ ಟೆಕ್ನಾಲಜೀಸ್ ಮ್ಯಾನೇಜರ್ ಎಚ್.ಆರ್ ಶ್ರೀ ಎಬಿನೇಜರ್ ರಾಜಾರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ | ಹೆರಾಲ್ಡ್ ಐವನ್ ಮೋನಿಸ್ ರವರು ಇಂದಿನ ಕಾಲದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಳು ಲಭ್ಯವಿದ್ದು ಅದರ ಮಾಹಿತಿಯನ್ನು ಸೂಕ್ತವಾಗಿ ಪಡೆದು - ಸೂಕ್ತ ತಯಾರಿಕೆಯನ್ನು ಮಾಡಿಕೊಂಡು ಇಂತಹ ಕ್ಯಾಂಪಸ್ ಸಂದಶ೯ಗಳು ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆಯನ್ನು ಕ್ಲಪ್ತ ಸಮಯದಲ್ಲಿ ಒದಗಿಸಿ ಕೊಡುವ ಮೂಲಕ ವೃತ್ತಿ ಬದುಕಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಇದರ ಸದುಪಯೋಗವನ್ನು ಹೆಚ್ಚು ಅಭ್ಯರ್ಥಿಗಳು ಪಡೆದುಕೊಳ್ಳ ಬೇಕೆಂದು ಕಿವಿ ಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಗ್ಲೋಟಚ್ ಟೆಕ್ನಾಲಜೀಸ್ ಸಂಸ್ಥೆಯ ಸೀನಿಯರ್ ರೆಕ್ರೂಟ್ಮೆಂಟ್ ಟೀಮ್ ಏಂಜೆಲಾ ಅಲ್ವಾರೆಸ್, ಶ್ರದ್ಧ ರಾಯ್ಕರ್, ಟೆಕ್ನಿಕಲ್ ಇಂಟರ್ವ್ಯೂವರ್ ಸುರೇಶ್ ರೈ , ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ, ಉಪನ್ಯಾಸಕಿ ದಿವ್ಯಶ್ರೀ ಬಿ, ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಅನುಪ್ ನಾಯಕ್, ಎಲ್ಲ ತೃತಿಯ ಬಿಸಿಎ ವಿದ್ಯಾರ್ಥಿಗಳು ಸಹಕರಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಪ್ಲೇಸ್‌ಮೆಂಟ್ ಸೆಲ್ಲಿನ ಸಂಯೋಜಕಿ ತನುಜ ಎನ್ ಸುವರ್ಣ ವಂದಿಸಿದರು.

ದಾಂಪತ್ಯದಲ್ಲಿ ಜೊತೆಯಾಗಿ ಸಾವಿನಲ್ಲೂ ಜೊತೆಯಾದ ದಂಪತಿ

Thumbnail
Posted On: 03 Aug 2022, 07:43 PM

ಕಾಪು‌ : ಮಾನವ ಜೀವನದಲ್ಲಿ ಸಾವು ನಿಶ್ಚಿತ. ಆದರೆ ತಮ್ಮ ಪ್ರೀತಿ ಪಾತ್ರರ ಜೊತೆಗೆ ಸಾವು ವಿರಳ. ಅಂತಹ ಘಟನೆ ಬೆಳಪುವಿನಲ್ಲಿ ನಡೆದಿದೆ. ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಜೊತೆಯಾದ ದಂಪತಿ. ಸಾವಿನಲ್ಲೂ ಜೊತೆಯಾದ ದಂಪತಿಯ ಮೃತದೇಹವನ್ನು ಮಕ್ಕಳು ಮತ್ತು ಕುಟುಂಬಸ್ಥರು ಜೊತೆ ಸೇರಿ ಸಾಮಾಜಿಕ ಕಾರ್ಯಕರ್ತ ಸೂರಿ ಶೆಟ್ಟಿ ನೇತೃತ್ವದಲ್ಲಿ ಬೆಳಪು ಧೂಮಪ್ಪ ಶೆಟ್ಟಿ ಮನೆ ಬಳಿಯ ಜಮೀನಿನಲ್ಲಿ ಸಿದ್ಧಪಡಿಸಿದ ಚಿತೆಯಲ್ಲಿ ಜೋಡಿಯಾಗಿಯೇ ಅಂತ್ಯಕ್ರಿಯೆ ನಡೆಸಲಾಯಿತು.

92 ಹೇರೂರು ಗ್ರಾಮದಲ್ಲಿ ಗಿಡಬೆಳೆಸಿ ಬಹುಮಾನ ಗೆಲ್ಲಿ ಕಾರ್ಯಕ್ರಮ

Thumbnail
Posted On: 02 Aug 2022, 10:10 PM

ಕಾಪು : ಲಯನ್ಸ್ ಕ್ಲಬ್ ಬಂಟಕಲ್ಲು ಬಿ.ಸಿ.ರೋಡ್ ಇವರ ನೇತೃತ್ವದಲ್ಲಿ ಕಾಪು ತಾಲೂಕಿನ ಮಜೂರು ಪಂಚಾಯತ್ ವ್ಯಾಪ್ತಿಯ 92 ಹೇರೂರು ಗ್ರಾಮದಲ್ಲಿ ಗಿಡ ಬೆಳೆಸಿ ಮೂರು ವರ್ಷಗಳ ನಂತರ ಬಹುಮಾನ ಗೆಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಧೀರಜ್ ಮತ್ತು ಮುಂಬಯಿ ಉದ್ಯಮಿ ಉದಯ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ನೆರವೇರಿದ ಈ ಕಾರ್ಯಕ್ರಮ ಗ್ರಾಮದ ಜನರ ಪ್ರಶಂಸೆಗೆ ಪಾತ್ರವಾಯಿತು. ಗ್ರಾಮದ ಮನೆಗಳಿಗೆ ಲಕ್ಷ್ಮಣ ಫಲವನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ ಮಾಜಿ ‌ಅಧ್ಯಕ್ಷರಾದ ಎಡ್ವರ್ಡ್ ಮೆನೇಜಸ್, ಪ್ರಸ್ತುತ ಅಧ್ಯಕ್ಷರಾದ ವಿಲ್ಫಡ್೯ ಪಿಂಟೊ ಜನರಿಗೆ ಗಿಡದ ಮಹತ್ವ, ಅದರ ಪೋಷಣೆಯ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ವಿಜಯ್ ಧೀರಜ್ ಮಾತನಾಡಿ ಮೂರು ವರ್ಷಗಳ ಕಾಲ ಮಕ್ಕಳಂತೆ ಗಿಡವನ್ನು ಬೆಳೆಸಿ ತದನಂತ ಆ ಗಿಡವೇ ನಿಮಗೆ ಆಸರೆಯಾಗುತ್ತದೆ. ಮೂರು ವರ್ಷಗಳ ನಂತರ ಚೆನ್ನಾಗಿ ಪಾಲನೆ ಪೋಷಣೆ ಮಾಡಿದ ಗ್ರಾಮದ 10 ಜನರನ್ನು ಗೌರವಿಸಲಾಗುವುದು ಎಂದು ಹೇಳಿದರು. ಲಯನ್ಸ್ ಕ್ಲಬ್ ಬಂಟಕಲ್ಲು ಕಾರ್ಯದರ್ಶಿ ಉಮೇಶ್ ಕುಲಾಲ್ ವಂದಿಸಿದರು. ಲಯನ್ಸ್ ಕ್ಲಬ್ ಬಂಟಕಲ್ಲು ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಮಿಸ್ ಇಂಡಿಯಾ ಸಿನಿ ಶೆಟ್ಟಿ - ಉಂಡಾರು ದೇವಳಕ್ಕೆ ಭೇಟಿ

Thumbnail
Posted On: 02 Aug 2022, 06:09 PM

ಕಾಪು : ಮಿಸ್ ಇಂಡಿಯಾ ಪಟ್ಟವನ್ನು ಗೆದ್ದು ಮನೆಮಾತಾಗಿರುವ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬುವಿನ ಸದಾನಂದ ಶೆಟ್ಟಿ ಮತ್ತು ಹೇಮ ಶೆಟ್ಟಿ ದಂಪತಿಗಳ ಪುತ್ರಿ ಸಿನಿ ಶೆಟ್ಟಿಯವರು ತನ್ನ ಹುಟ್ಟೂರಿನ ಗ್ರಾಮ ದೇವರಾಗಿರುವ ಉಂಡಾರು ವಿಷ್ಣುಮೂರ್ತಿ ದೇವರ ಸನ್ನಿಧಾನಕ್ಕೆ ಆಗಮಿಸಿ ದೇವರ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಿನಿ ಶೆಟ್ಟಿ ಕುಟುಂಬಸ್ಥರು, ಗ್ರಾಮಸ್ಥರು ಸೇರಿದಂತೆ ದೇವಳದ ಕಮಿಟಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು

ರೋಟರಾಕ್ಟ್ ಕ್ಲಬ್ ಸುಭಾಷ್ ನಗರ ಪದಗ್ರಹಣ

Thumbnail
Posted On: 01 Aug 2022, 11:02 PM

ಶಿರ್ವ : ರೋಟರಾಕ್ಟ್ ಕ್ಲಬ್ ಸುಭಾಷ್ ನಗರದ 2022-23 ನೇ ವರ್ಷಕ್ಕೆ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 30ರಂದು ರೋಟರಿ ಭವನ ಶಂಕರಪುರ ಇಲ್ಲಿ ಜರಗಿತು. ನೂತನ 2022-23ನೇ ಸಾಲಿನ ಅಧ್ಯಕ್ಷರಾಗಿ‌ ಶ್ವೇತ ಪೂಜಾರಿ, ಕಾರ್ಯದರ್ಶಿ ಯಜ್ಞೇಶ್ ಎಂ ಹೆಗ್ಡೆ ಇವರಿಗೆ ರೋಟರಿ ಶಂಕರಪುರದ ಅಧ್ಯಕ್ಷರಾದ ಗ್ಲಾಡ್ಸನ್ ಕುಂದರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ರೋಟರಾಕ್ಟ್ ಪ್ರತಿನಿಧಿ ಮಹಾಲಸಾ ಕಿಣಿ, ಉಪ DRCC RI DIST 3182 ಇದರ ಚಂದ್ರ ಪೂಜಾರಿ, DRCC RI DIST 3182 ಜೈ ವಿಠ್ಠಲ್, ಕ್ಲಬ್ ಅಧ್ಯಕ್ಷರಾದ ‌ಡೇನಿಯಲ್ ಸಿ ಅಮ್ಮಣ್ಣ, 2020-21ನೇ ಸಾಲಿನ ಕವನ್ ಪೂಜಾರಿ, ಕಾರ್ಯದರ್ಶಿ ಪ್ರೀತೇಶ್ ನೊರೊನ್ಹಾ ಉಪಸ್ಥಿತರಿದ್ದರು.

ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

Thumbnail
Posted On: 01 Aug 2022, 10:53 PM

ಶಿರ್ವ : ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಕಂಪ್ಯೂಟರ್ಗಳನ್ನು ಬಳಸಲಾಗಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಹೊಂದುವುದು ಅವಶ್ಯಕ. ವಿದ್ಯಾರ್ಥಿಗಳು ಕಂಪ್ಯೂಟರ್‌ಗಳ ಸದುಪಯೋಗ ದಿಂದ ಉತ್ತಮ ಉಪಾದಿ ಹಾಗೂ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಇವತ್ತು ಕಂಪ್ಯೂಟರ್ ಒಂದು ಮೂಲಭೂತ ಅಗತ್ಯ ವಸ್ತುವಾಗಿದೆ. ಶಿಕ್ಷಣ ,ಆರೋಗ್ಯ ,ಪ್ರಾಕೃತಿಕ ಹಿನ್ನಲೆಯಲ್ಲಿ ಕರ್ಣಾಟಕ ಬ್ಯಾಂಕ್ ತನ್ನದೇ ಆದ ಕೊಡುಗೆಯನ್ನು ಈ ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ಇಲ್ಲಿನ ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ನೀಡಲಾದ 5 ಕಂಪ್ಯೂಟರ್ ಗಳನ್ನು ಕರ್ಣಾಟಕ ಬ್ಯಾಂಕ್ ಉಡುಪಿ ರೀಜನಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಾಜ್ ಗೋಪಾಲ್ ಬಿ. ಅವರು ಮುಖ್ಯ ಅತಿಥಿಯಾಗಿ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಾಚಾರ್ಯ ಡಾ| ಹೆರಾಲ್ಡ್ ಐವನ್ ಮೋನಿಸ್ ಅವರು ಸಮಾಜ ಕಾಯ೯ ಕೆಲಸಗಳಲ್ಲಿ ಕರ್ಣಾಟಕ ಬ್ಯಾಂಕ್ ಸದಾ ಮುಂದು ಎಂದು ನಮ್ಮ ಕಾಲೇಜಿಗೆ ಕಂಪ್ಯೂಟರ್ ಗಳನ್ನು ಕೊಡುಗೆ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಮ್ಯಾನೇಜರ್ ಮತ್ತು ಅವರ ಸಿಬ್ಬಂದಿ ವಗ೯ದವರನ್ನು ಅಭಿನಂದಿಸಿದರು ಸಂತಮೇರಿ ಮತ್ತು ಡಾನ್ ಬಾಸ್ಕೋ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿವಂದನೀಯ ಡಾ| ಲೆಸ್ಲಿ ಸಿ.ಡಿಸೋಜ ರವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ತಮಗೆ ಪ್ರತ್ಯೇಕ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಸಮಾಜದ ಋಣವನ್ನು ಸದಾ ತಮ್ಮ ಗಮನದಲ್ಲಿಟ್ಟುಕೊಂಡು ಮುಂದೆ ಸಮಾಜಕ್ಕೆ ತಮ್ಮಿಂದ ಎಷ್ಟು ಸಾಧ್ಯವೊ ಅಷ್ಟನ್ನು ಸಮಾಜಕ್ಕೆ ಹಿಂತಿರುಗಿಸಬೇಕು ಹಾಗೂ ಸಮಾಜಮುಖಿ ಕೆಲಸದಲ್ಲಿ ಒಂದು ಹೆಜ್ಜೆ ಮುಂದಿರಬೇಕೆಂದೂ ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕೆಂದು ತಮ್ಮ ಆಶಿವ೯ಚನದಲ್ಲಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಶಿರ್ವ ಬ್ರಾಂಚಿನ ಮ್ಯಾನೇಜರ್ ಜನಾರ್ಧನ್, ಕ್ಲೆರಿಕಲ್ ಸ್ಟಾಫ್ ಶ್ರೀನಿವಾಸ ಪೈ, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಧಾತ್ ಶೆಟ್ಟಿ, ಅಲಿಸ್ಟರ್ ಸುಜಾಯ್ ಡಿಸೋಜಾ ಮತ್ತು ಅರುಣ್ ಸಹಕರಿಸಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಪ್ರಕಾಶ್ ವಂದಿಸಿದರು. ಉಪನ್ಯಾಸಕಿ ದಿವ್ಯಶ್ರೀ ಬಿ ಕಾರ್ಯಕ್ರಮ ಸಂಯೋಜಿಸಿದರು.

ಉಡುಪಿಯ ಪ್ರಖ್ಯಾತ ವಕೀಲರಾದ ಸಂಕಪ್ಪ.ಎ ಜೆಡಿಎಸ್ ಸೇರ್ಪಡೆ

Thumbnail
Posted On: 01 Aug 2022, 09:30 PM

ಉಡುಪಿ : ಇಲ್ಲಿಯ ಪ್ರಖ್ಯಾತ ವಕೀಲರು, ಬಿಲ್ಲವ ಮುಖಂಡರು, ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ಅಧ್ಯಕ್ಷರು ಅದ ಸಂಕಪ್ಪ.ಎ ಅವರಿಗೆ ಆಗಸ್ಟ್ 1 ರಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಜಾತ್ಯತೀತ ಜನತಾದಳ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್. ಎಲ್. ಬೋಜೆ ಗೌಡ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ನಾಯಕರಾದ ವಸಂತ ಪೂಜಾರಿ ಮಂಗಳೂರು, ಇಕ್ಬಾಲ್ ಮಂಗಳೂರು, ಇಕ್ಬಾಲ್ ಅತ್ರಾಡಿ, ಭರತ್ ಶೆಟ್ಟಿ, ಸಂಜಯ್, ಚಂದ್ರಹಾಸ್ ಮತ್ತು ರಜಾಕ್ ಉಪಸ್ಥಿತರಿದ್ದರು.

ಚಿತ್ರ ಕಲಾವಿದ ರಮೇಶ್ ಬಂಟಕಲ್ ಗೆ ಸನ್ಮಾನ

Thumbnail
Posted On: 01 Aug 2022, 09:05 PM

ಶಿರ್ವ : ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಪಡುಬೆಳ್ಳೆ ಇಲ್ಲಿ ಚಿತ್ರ ಕಲಾವಿದ ರಮೇಶ್ ಬಂಟಕಲ್ ಇವರ ದೈವಾರಾಧನೆ ಕಲಾಕೃತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಂಡ ನಿಮಿತ್ತ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಜಿನರಾಜ ಸಾಲಿಯಾನ್, ಅತಿಥಿ ಗಣ್ಯರು ಉಪಸ್ಥಿತರಿದ್ದರು.

ನಾಗರಪಂಚಮಿ : ಕರೆನಾಡಿನಲ್ಲಿ ನಾಗ ಆರಾಧನಾ ಪರ್ವ ದಿನವೇ? ನಾಗಬನಗಳ ಪುನರ್ ರಚನೆ ಅನಿವಾರ್ಯ

Thumbnail
Posted On: 01 Aug 2022, 08:46 PM

ನಾಗರಪಂಚಮಿ‌ ತುಳವರ "ನಾಗ ಆರಾಧನಾ" ಪರ್ವ ದಿನವೇ ? ಏನು ಪ್ರಶ್ನೆ ; ಶತಮಾನಗಳಿಂದ , ತಲೆಮಾರುಗಳಿಂದ, ಲಾಗಾಯ್ತಿನಿಂದ ನಡೆದು ಬರುತ್ತಿರುವ ಒಂದು ಆರಾಧನಾ ದಿನದ ಬಗ್ಗೆ ಇಂತಹ ಸಂಶಯ ಏಕೆ ? ಹೌದು..... ಕರೆನಾಡಿನ ಉಭಯ ಜಿಲ್ಲೆಗಳಲ್ಲಿ ರೂಢಿಯಲ್ಲಿರುವ ವೈವಿಧ್ಯಮಯ ನಾಗ ಉಪಾಸನಾ ಕ್ರಮಗಳ ಮಾಹಿತಿ ಸಂಗ್ರಹಿಸಿ ಕ್ಷೇತ್ರಕಾರ್ಯದ ಮೂಲಕ ದಾಖಲಿಸಿಕೊಂಡಾಗ ಈ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಮೇಲ್ನೋಟಕ್ಕೆ ಈ ಆರಾಧನಾ ಪ್ರಕಾರಗಳು ನಮ್ಮ ನಡುವೆ ಇದೆಯಾದರೂ ನಾವು ಗಮನಿಸಿಲ್ಲ ಅಷ್ಟೆ. ಏಕೆಂದರೆ ನಮಗೆ ನಮ್ಮದೇ ಶ್ರೇಷ್ಠ .ಬೇರೆ ಏನಿದ್ದರೂ ಅದು ನಮ್ಮ ಕ್ರಮದಷ್ಟು ಶಾಸ್ತ್ರೀಯವಾಗಿರಲಾರದು ಎಂಬ ಅಹಂ. ವರ್ಷದ ಸಂಭ್ರಮಗಳೆಲ್ಲ ತೆರೆದುಕೊಳ್ಳುವ ಪ್ರಾರಂಭದ ಹಬ್ಬ ನಾಗರಪಂಚಮಿ. ಆದುದರಿಂದ ತುಳುನಾಡಿನಲ್ಲೂ ಆಚರಣೆ ಪ್ರಶಸ್ತವೇ. ಆಗಮಿಸಿದವುಗಳಲ್ಲಿ ಹಲವು ವಿಚಾರಧಾರೆಗಳು ಒಪ್ಪಿತವಾಗಿವೆ, ಕೆಲವು ತಿರಸ್ಕರಿಸಲ್ಪಟ್ಟಿವೆ. ಅದರಲ್ಲಿ ನಾಗರಪಂಚಮಿ ಒಪ್ಪಿತವಾದುದು.ಏಕೆಂದರೆ ನಾಗ ಲೋಕಪ್ರಿಯ, ಮಾನವನಿಂದ ಮೊತ್ತಮೊದಲು ದೈವತ್ವಕ್ಕೆ ಏರಿದವ. ತನು - ತಂಬಿಲದಂತಹ ಪುರಾತನ ಕ್ರಮವನ್ನು ನಾವು ಬಿಟ್ಟವರಲ್ಲ . ನಾಗರಪಂಚಮಿಗೂ ನಮ್ಮ ಆರಾಧನೆ ತನು - ತಂಬಿಲವೇ. ಇಷ್ಟಕ್ಕೆ ನಮ್ಮ ಶ್ರದ್ಧೆ. ನಮ್ಮ ಭರವಸೆ ಮತ್ತು ವಿಶ್ವಾಸಗಳ ಮೂರ್ತ ಸ್ವರೂಪವಾದ ನಂಬಿಕೆಯೇ ನಾಗ ಉಪಾಸನೆಯ ಮೂಲ. ನಾಗ ಸಂತಾನ, ಸಂಪತ್ತು, ಕೃಷಿಸಮೃದ್ಧಿ ಅನುಗ್ರಹಿಸುವ ದೇದರು. ಹಾಗೆಯೇ ಚರ್ಮವ್ಯಾಧಿಗಳನ್ನು ನಿವಾರಿಸುವ ದೈವ. ಆದುದರಿಂದ ನಾಗ ನಂಬಿಕೆ ಗಾಢವಾಗಿದೆ. ಕರೆನಾಡಿನ ಮೂರು ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯಲ್ಲಿ ವಿಫುಲವಾದ ಆಧಾರಗಳು, ನಾಗರ ಪಂಚಮಿ ಆಚರಿಸದ ಬನಗಳಿರುವುದು ಗಮನಕ್ಕೆ ಬಂದಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಕೆಲವೊಂದು ಬನಗಳು ಪೂರಕವಾಗಿ ಒದಗುತ್ತವೆ. ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೆರಡು ಬನಗಳಲ್ಲಿ ನಾಗರಪಂಚಮಿ ಆಚರಣೆ ಇರುವುದಿಲ್ಲ (ಲೇಖಕನಿಗೆ ದೊರೆತುದು ಎರಡು ಮಾತ್ರ, ತುಂಬಾ ಇವೆ ಎಂದು ಹೇಳಲಾಗುತ್ತದೆ). ಈ ಬನಗಳೆಲ್ಲ ಪರಿಶಿಷ್ಟ ವರ್ಗದವರಿಂದ ಆರಾಧನೆಗೊಳ್ಳುವ ಬನಗಳು.ಇಂತಹ ಬನಗಳಲ್ಲಿ ನಡೆಯುವ ಪೂಜೆಗಳೆಲ್ಲ ಸರಳ - ಮುಗ್ಧ - ವಿಮರ್ಶೆಗಳಿಲ್ಲದ ಜನಪದರ ಪರಿಕಲ್ಪನೆಯವುಗಳು. ಇವು ವಿಕಾಸದಲ್ಲಿ‌ ಅಳಿದುಳಿದ ಆರಾಧನಾ ಕ್ರಮಗಳು. ಈ ಬನಗಳಲ್ಲಿ ಪೂಜಾಕ್ರಮವು ನಿರ್ದಿಷ್ಟ ಹಾಡಿನ ರೂಪದ ಪಠ್ಯವನ್ನು ಆಧರಿಸಿ ನೆರವೇರುತ್ತವೆ. ಅವುಗಳೆಲ್ಲ ಸಮೂಹ ಪೂಜಾಸ್ಥಾನಗಳು ಎಂಬುದು ಮಾತ್ರ ಗಮನಸೆಳೆಯುವ ಅಂಶ. ಈ ಸಂಗತಿಯು ಮಾನವ ತಾನು ಬಯಸಿದುದನ್ನೆಲ್ಲ ಒಂದೇ ವ್ಯವಸ್ಥೆಯ ಅಡಿಯಲ್ಲಿ ನೆಲೆಗೊಳಿಸಿ ನಿರಾಳವಾಗಿ ಬದುಕು ಕಟ್ಟಿದ ಕೃಷಿ ಸಂಸ್ಕೃತಿಯ ಆರಂಭದ ಕಾಲದವರೆಗೆ ಹಿಂದಕ್ಕೆ ಒಯ್ಯುತ್ತದೆ. ಇವು ಭಯದಿಂದ ಮತ್ತು ಉಪಕೃತನಾಗುವ ವೇಳೆ ಮಾನವನ ನಂಬಿಕೆಯಾಗಿ ಆರಂಭವಾದ ಆರಾಧನೆಗಳು. ಮೇಷ ಸಂಕ್ರಮಣ : ಉಡುಪಿ ಜಿಲ್ಲೆಯಲ್ಲಿ ಈ ಲೇಖಕ ಗುರುತಿಸಿದ ಸುಮಾರು ಹತ್ತು ನಾಗಸ್ಥಾನಗಳಲ್ಲಿ ಯಾವುದೇ ನಿರ್ದಿಷ್ಟವಾದ ಪಠ್ಯಗಳಿಲ್ಲದೆ ನೆರವೇರುವ ನಾಗ ಪೂಜೆಗಳು ಮೇಲೆ ವಿವರಿಸಿದ ಪೂಜಾ ವಿಧಾನಗಳಿಂದಲೂ ಪ್ರಾಚೀನವೆನ್ನ ಬಹುದಾದುವುಗಳು .ಇವು ನಿಜವಾಗಿಯೂ ಮುಗ್ಧ ಆಚರಣೆಗಳೇ ಆಗಿವೆ. ಬನದಲ್ಲಿ ಅಥವಾ ಮೂಲಸ್ಥಾನಗಳಲ್ಲಿ ಸೇರುವ ಮಂದಿ ಒಂದೇ ಕುಟುಂಬದವರೆಂದು ವಿಶ್ವಾಸವಿರುತ್ತದೆ. ಈ ನಾಗಾರಾಧನೆ ನಡೆಯುವುದು ವರ್ಷಕ್ಕೆ ಒಂದು ದಿನ ಒಮ್ಮೆ ಮಾತ್ರ. ಆ ದಿನ ನಾಗರಪಂಚಮಿಯಲ್ಲ. ಮೇಷ ಸಂಕ್ರಮಣದ ದಿನ. ಅಂದರೆ ತುಳುನಾಡಿನ ಪಗ್ಗು ತಿಂಗಳು ಬರುವ ಸಂಕ್ರಮಣ. ಇವುಗಳಲ್ಲಿ ಒಂದು ಬನದಲ್ಲಿ ಮಾತ್ರ ಬೇಷ ತಿಂಗಳ ಮೊದಲ ಗುರುವಾರ ನೆರವೇರುತ್ತವೆ, ಆದರೆ ನಾಗರ ಪಂಚಮಿ ಆಚರಣೆ ಇಲ್ಲ. ಮೂಲವನ್ನು ಅಥವಾ ಪ್ರಾಚೀನತೆಯನ್ನು ಆಚರಣೆಗಳ ನಿರ್ವಹಣಾ ವಿಧಾನದಿಂದಲೂ ಗ್ತಹಿಸಬಹುದಾದರೆ ಇವು ಈ ವರೆಗೆ ನಡೆದ ಸಂಶೋಧನೆಗಳಲ್ಲಿ ಪುರಾತನ ಕ್ರಮದ ಆಚರಣೆಗಳೆಂದು ಪರಿಗ್ರಹಿಸಬಹುದಾಗಿವೆ. ಇನ್ನು ಮುಂದೆ ಸಂಶೋಧನೆಗಳಲ್ಲಿ ಇದಕ್ಕೂ ಪೂರ್ವದ ಆಚರಣಾ ಪದ್ಧತಿಗಳು ದೊರೆಯಬಹುದು. ಇದು ವಿವರಣೆಗೆ ಬೇಕಾಗಿ ಮಾತ್ರ ಮಾಡಿದ ವಿಂಗಡನೆ. ಕರೆನಾಡಿನ ಉಭಯ ಜಿಲ್ಲೆಗಳಲ್ಲಿ ನಾಗರಪಂಚಮಿ ವರ್ಷದ ಪ್ರಾರಂಭದ ಪರ್ವದಿನವಾಗಿರಲಾರದು, ಕೃಷಿ ಆಧರಿತ ಜೀವನ ಕ್ರಮವಾಗಿರುವುದರಿಂದ ಯುಗಾದಿ ಮೊದಲ ಹಬ್ಬವಾಗಿದ್ದಿರ ಬಹುದು. ಯುಗಾದಿಯ ಆಚರಣೆಯಲ್ಲಿ ಕೃಷಿ ಚಟುವಟಿಕೆಯ ಪ್ರಾರಂಭದ ವಿಧಿಗಳು ನೆರವೇರುತ್ತವೆ. ವೈದಿಕ ಆಗಮನ : ವೈದಿಕದ ಆಗಮನದ ಬಳಿಕ ನಮ್ಮ ಸಮೂಹ ಪೂಜಾಸ್ಥಾನಗಳು ಅಥವಾ ಬ್ರಹ್ಮ ಪ್ರಧಾನವಾಗಿದ್ದ ಪೂಜಾಸ್ಥಾನಗಳಿಗೆ ವೈದಿಕರಿಗೆ ಪ್ರವೇಶ ಒದಗಿಸಲಾಯಿತು . ಈ ಪ್ರವೇಶಾವಕಾಶ ನಾವೇ ಕೊಟ್ಟಿದುದು ಹೊರತು ಅವರಾಗಿ ಪ್ರವೇಶಿಸಿದುದು ಅಲ್ಲ. ಕೃಷಿ ಪ್ರಧಾನವಾಗಿದ್ದ ಕಾಲದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಆಚರಣೆಗಳು ನೇರ್ಪುಗೊಂಡಿದ್ದು ಅದು ಮಳೆಗಾಲಕ್ಕೆ ಮೊದಲು, ಬೇಷತಿಂಗಳಲ್ಲಿ ಮೂಲಸ್ಥಾನಗಳಿಗೆ ಹೋಗಿ ನಾಗನಿಗೆ "ತನು ಹೊಯ್ಯಿಸಿ ತಂಬಿಲ ಕಟ್ಟಿಸಿ" ಬರುವ ಪದ್ದತಿಯೇ ಆಚರಣೆಯಾಗಿದ್ದಿರಬೇಕು ಎಂದು ಊಹಿಸಲಡ್ಡಿಯಿಲ್ಲ. ಕರೆನಾಡಿಗೆ ವಲಸೆ ಬಂದ ಮಂದಿಯಲ್ಲೂ ಪಂಚಮಿಯ ಗುರುತು ಇದ್ದು ನಮ್ಮ ನಾಗ ಪೂಜಾ ಉಪಕ್ರಮಕ್ಕೆ ನಾಗರಪಂಚಮಿ ಸೇರ್ಪಡೆಯಾಗಿರಬೇಕು . ಮಂಗಳೂರಿನಿಂದ ದಕ್ಷಿಣಕ್ಕೆ ತಲಪಾಡಿಯಿಂದ ಇಚ್ಲಾಡಿಯವರೆಗಿನ ಹದಿನೆಂಟು ಕೇಂದ್ರಗಳಲ್ಲಿ ಸರ್ಪಕೋಲ ನಡೆಯುತ್ತದೆ. ಈ ಯಾವ ಬನಗಳಲ್ಲೂ ನಾಗರಪಂಚಮಿ ಪ್ರಧಾನವಾದ ಆರಾಧನಾ ಪರ್ವದಿನವಾಗಿರಲಿಲ್ಲ. ಉಭಯ ಜಿಲ್ಲೆಗಳಲ್ಲಿ ಗುರುತಿಸಲಾದವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. ಬೇರೆ ಬೇರೆ ಕಾರಣದಿಂದ ವೈದಿಕವನ್ನು ಆಮಂತ್ರಿಸಲಾಗುತ್ತಿದೆ. ವೈದಿಕೀಕರಣವಾಗುತ್ತಿವೆ. ಬನಗಳನ್ನು ಕಡಿದು ನಾಗ ಗುಡಿ, ನಾಗವೇದಿಕೆ, ನಾಗ ಮಂದಿರಗಳನ್ನು ಕಟ್ಟುತ್ತಿರುವ ಮೂಲಕ ಬನಗಳು ನಾಶವಾಗುತ್ತಿವೆ ಪುನರ್ ರಚನೆಯ ಅಗತ್ಯವಿದೆ. ಪುನರ್ ರಚನೆಗೆ ನಾಗರಪಂಚಮಿ ದಿನ ನಾಗಬನಕ್ಕೆ ಅಥವಾ‌ ಮೂಲಕ್ಕೆ ಹೋಗುವಾಗ ಒಂದು ಗಿಡ ಕೊಂಡೊಯ್ಯಿರಿ ಬನದಲ್ಲಿ ನೆಟ್ಟು ಬನ ನಾಶವಾಗಿದ್ದರೆ ಪುನರ್ ರಚಿಸಿರಿ. ನಾಗ ಮತ್ತು ವೃಕ್ಷ ಅವಳಿ ಚೇತನಗಳು. ಇದೊಂದು ಪುರಾತನ ನಂಬಿಕೆ. ಅಂತರ್ಜಲ ವೃದ್ಧಿಗೆ, ಪರಿಶುದ್ಧ ಪರಿಸರಕ್ಕೆ ನಾಗಬನಗಳು ವನಗಳಾಗಿಯೇ ಉಳಿಯಬೇಕು. ಬರಹ : ಕೆ.ಎಲ್.ಕುಂಡಂತಾಯ

ಸಿ.ಇ.ಟಿ ಫಲಿತಾಂಶ : ಕಾರ್ಕಳ ಕ್ರಿಯೇಟಿವ್‌ ಪಿ ಯು ಕಾಲೇಜು ಪ್ರಥಮ ವರ್ಷದಲ್ಲಿಯೇ ಅಮೋಘ ಸಾಧನೆ

Thumbnail
Posted On: 01 Aug 2022, 01:52 PM

ಕಾರ್ಕಳ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ -2022 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್‌ ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆಗಳಿಸಿದ್ದಾರೆ. ರಾಜ್ಯದ ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಉಪಾಸನ ಬಿ ಪಿ ರಾಜ್ಯಕ್ಕೆ 42 ನೇ ರ‍್ಯಾಂಕ್‌ ಹಾಗೂ ಪಶುವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಯಲ್ಲಿ 103 ನೇ ರ‍್ಯಾಂಕ್‌ ಗಳಿಸಿರುತ್ತಾರೆ ಮತ್ತು ಮಧುಶ್ರೀ ವಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 72 ನೇ ರ‍್ಯಾಂಕ್‌, ಪಶುವೃದ್ಯಕೀಯ ಪ್ರಾಯೋಗಿಕದಲ್ಲಿ 126 ನೇ ರ‍್ಯಾಂಕ್‌. ಕಾಲೇಜಿನ ರಾಘವೇಂದ್ರ ತಾಳಿಕೋಟಿ ಪಶುವೈದ್ಯಕೀಯದಲ್ಲಿ ರಾಜ್ಯಕ್ಕೆ 110 ನೇ ರ‍್ಯಾಂಕ್‌, ಬಿ-ಫಾರ್ಮಾ ದಲ್ಲಿ 150 ನೇ ರ‍್ಯಾಂಕ್‌ , ಬಿ.ಎನ್‌.ವೈ.ಎಸ್‌ ವಿಭಾಗದಲ್ಲಿ 165 ನೇ ರ‍್ಯಾಂಕ್‌, ಕೃಷಿ ವಿಜ್ಞಾನದಲ್ಲಿ 186 ನೇ ರ‍್ಯಾಂಕ್‌ ಹಾಗೂ ಇಂಜಿನಿಯರಿಂಗ್ ನಲ್ಲಿ 636 ನೇ ರ‍್ಯಾಂಕ್‌ ಪಡೆದಿರುತ್ತಾರೆ. ಸಾತ್ವಿಕ್‌ ಶ್ರೀಕಾಂತ ಹೆಗಡೆ ಬಿ.ಎನ್‌.ವೈ.ಎಸ್‌ ನಲ್ಲಿ 116 ರ‍್ಯಾಂಕ್‌, ಪಶುವೈದ್ಯಕೀಯದಲ್ಲಿ 222 ನೇ ರ‍್ಯಾಂಕ್‌, ಬಿ.ಫಾರ್ಮಾ ದಲ್ಲಿ 383 ನೇ ರ‍್ಯಾಂಕ್‌ ಪಡೆದಿರುತ್ತಾರೆ. ಕುಮಾರಿ ಸಿಂಚನ ಕೆ ಎಸ್‌, ಬಿ.ಎನ್‌.ವೈ.ಎಸ್‌ ವಿಭಾಗದಲ್ಲಿ 745 ನೇ ರ‍್ಯಾಂಕ್‌, ಕೃಷಿ ವಿಜ್ಞಾನದಲ್ಲಿ 835 ನೇ ರ‍್ಯಾಂಕ್‌, ಅಗಸ್ತ್ಯ ಸಮ್ಯಕ್‌ ಜ್ಞಾನ್‌ ಕೃಷಿ ವಿಜ್ಞಾನದಲ್ಲಿ 679 ನೇ ರ‍್ಯಾಂಕ್‌, ಬಿ.ಎನ್‌.ವೈ.ಎಸ್‌ ವಿಭಾಗದಲ್ಲಿ 924 ನೇ ರ‍್ಯಾಂಕ್‌ ಹಾಗೂ ಅನ್ವಿನ್ ಬಿ ಪಿ ಇಂಜಿನಿಯರಿಂಗ್‌ ವಿಭಾಗದಲ್ಲಿ 681 ನೇ ರ‍್ಯಾಂಕ್‌ ಪಡೆದಿರುತ್ತಾರೆ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ರಾಜ್ಯ ಮಟ್ಟದ 1 ರಿಂದ 1000 ರ‍್ಯಾಂಕ್‌ ನ ಒಳಗೆ 31 ವಿದ್ಯಾರ್ಥಿಗಳು, 2000 ದ ಒಳಗೆ 66 ವಿದ್ಯಾರ್ಥಿಗಳು ರ‍್ಯಾಂಕ್‌ ನ್ನು ಗಳಿಸಿರುತ್ತಾರೆ. ತನ್ನ ಪ್ರಥಮ ವರ್ಷದ ಸಿ.ಇ.ಟಿ ಫಲಿತಾಂಶದಲ್ಲಿಯೇ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಈ ಅಮೋಘ ಸಾಧನೆ ದಾಖಲಿಸಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲೂ 100 ಶೇಕಡಾ ಫಲಿತಾಂಶ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಿ.ಇ.ಟಿ ಸಂಯೋಜಕರಾದ ಶ್ರೀ ಸುಜಯ್‌ ಬಿ ಟಿ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.