Updated News From Kaup

ಕಾಪು ವಿಧಾನಸಭಾ ಕ್ಷೇತ್ರದ ದಕ್ಷಿಣ ವಿಭಾಗದ ಜನತಾದಳ ಪಕ್ಷದ ಅಧ್ಯಕ್ಷರಾಗಿ ಭರತ್ ಕುಮಾರ್ ಶೆಟ್ಟಿ ಆಯ್ಕೆ

Posted On: 11-04-2022 10:00PM

ಕಾಪು : ಜನತಾದಳ( ಜಾತ್ಯತೀತ) ಕಾಪು ವಿಧಾನಸಭಾ ಕ್ಷೇತ್ರದ ದಕ್ಷಿಣ ವಿಭಾಗದ ಅಧ್ಯಕ್ಷರನ್ನಾಗಿ ಭರತ್ ಕುಮಾರ್ ಶೆಟ್ಟಿ ಕಾಪುರವರನ್ನು ಜಿಲ್ಲಾಧ್ಯಕ್ಷರಾದ ಯೋಗಿಶ್ ವಿ ಶೆಟ್ಟಿಯವರು ನೇಮಕಾತಿ ಮಾಡಿರುತ್ತಾರೆ.

ಭರತ್ ಕುಮಾರ್ ಶೆಟ್ಟಿಯವರು ಉದ್ಯಮಿಯಾಗಿದ್ದು, ಪಕ್ಷದಲ್ಲಿ ಸಕ್ರಿಯರಾಗಿದ್ದು ಅತ್ಯುತ್ತಮ ಸಮಾಜ ಸೇವಕರಾಗಿದ್ದಾರೆ.

ಮಂಗಳೂರು : ಯುವತಿಯರಿಬ್ಬರು ಸಮುದ್ರ ಪಾಲು

Posted On: 10-04-2022 04:56PM

ಸುರತ್ಕಲ್ : ಇಲ್ಲಿಗೆ ಸಮೀಪದ ಎನ್ಐಟಿಕೆ ಬೀಚ್ ನಲ್ಲಿ ಬೆಂಗಳೂರು ಮೂಲದ ಯುವತಿಯರಿಬ್ಬರು ಸಮುದ್ರ ಪಾಲಾದ ಘಟನೆ ಏಪ್ರಿಲ್ 10ರಂದು ನಡೆದಿದೆ.

ಮೃತರಾದವರನ್ನು ಬೆಂಗಳೂರಿನ ಶಕ್ತಿ ನಗರದ ವೈಷ್ಣವಿ (21) ಎಂದು ಗುರುತಿಸಲಾಗಿದ್ದು, ಈಕೆ ಎಜೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಿಇ ವಿದ್ಯಾರ್ಥಿ.

ಮತ್ತೋರ್ವಳು ಬೆಂಗಳೂರಿನ ನಿವಾಸಿ ತ್ರಿಶಾ (15) 9ನೇ ತರಗತಿ ತೇರ್ಗಡೆಯಾಗಿದ್ದು, ಈಗ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದಾಳೆ.

ಪಂಚಲಿಂಗೇಶ್ವರ ರಥೋತ್ಸವದಂದು ಸಾರ್ವಜನಿಕರ ಮನಸೂರೆಗೊಂಡ ಜಾನಪದ ವೈಭವ

Posted On: 09-04-2022 10:35PM

ಬಾರ್ಕೂರು : ಇಲ್ಲಿನ ಶ್ರೀ ಪಂಚಲಿಂಗೇಶ್ವರ ದೇವಾಲಯದ ರಥೋತ್ಸವದ ಪ್ರಯುಕ್ತ ಏಪ್ರಿಲ್ 8ರಂದು ಜಾನಪದ ವೈಭವ ಜರಗಿತು.

ಈ ಸಂದರ್ಭ ಪಿ ಕಾಳಿಂಗ ರಾವ್ ಪ್ರತಿಷ್ಠಾನ ಬೆಂಗಳೂರು ಇವರು ಏರ್ಪಡಿಸಿದ ಜಾನಪದ ವೈಭವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ನಾಡಿನ ಖ್ಯಾತ ಸುಗಮ ಸಂಗೀತ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಬಳಗದವರು ಜಾನಪದ ವೈಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಕಾಳಿಂಗ ರಾವ್ ಪ್ರತಿಷ್ಠಾನದ ವತಿಯಿಂದ ರಾಮಚಂದ್ರ ನಾಯಕ್ ಸರ್ಕಲ್ ಇನ್ಸ್ಪೆಕ್ಟರ್ ಆಂತರಿಕ ಭದ್ರತಾ ವಿಭಾಗ ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆ ಇವರು ಸನ್ಮಾನಿಸಿ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಸುಧಾಕರ ರಾವ್ ವಿಶ್ರಾಂತ ಮುಖ್ಯ ಶಿಕ್ಷಕರು ಮತ್ತು ಸಾಮಾಜಿಕ ಕಾರ್ಯಕರ್ತರು ಬಾರ್ಕೂರು ಹಾಗೂ ಉದ್ಯಮಿ ಸುರೇಶ್ ಗಾಣಿಗ ಮತ್ತು ಕಾಳಿಂಗ ರಾವ್ ಇವರ ಪುತ್ರ ಸಂತೋಷ್ ಕಾಳಿಂಗ ರಾವ್. ಬುಡಾನ್ ಸಾಹೇಬ್ ಪ್ರಸಾಧನ ವಿಭಾಗದ ಮುಖ್ಯಸ್ಥರಾದ ಶೌಕತ್ ಅಲಿ ಬಾರ್ಕೂರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಹಿರಿಯ ಗಾಯಕರು ಹಾಗೂ ಪಿ ಕಾಳಿಂಗ ರಾವ್ ಅವರ ಮೊಮ್ಮಗ ವಿಜಯ್ ಶಂಕರ್ ಸಂಯೋಜಿಸಿದರು. ಜಾನಪದ ವೈಭವ ಕಾರ್ಯಕ್ರಮಕ್ಕೆ ಸಹ ಗಾಯಕಿಯಾಗಿ ವಿಜಯಾ ಲಕ್ಷ್ಮಿ ಹಾವಾಂಜೆ, ಕೀಬೋರ್ಡ್ ಅಲ್ಲಿ ಚಂದ್ರ ಬೈಂದೂರು ಹಾಗೂ ಸುದರ್ಶನ ಮಲ್ಪೆ ತಬಲಾ ಮತ್ತು ಸತೀಶ್ ಆಚಾರ್ಯ ಬಸ್ರೂರು ರಿದಮ್ ಪ್ಯಾಡ್ ಅಲ್ಲಿ ಸಹಕರಿಸಿದರು.

ಉಚ್ಚಿಲ : ಮುಖ್ಯಮಂತ್ರಿ ಆಗಮನ - ಏಪ್ರಿಲ್ 11ಕ್ಕೆ ಮುಂದೂಡಿಕೆ

Posted On: 08-04-2022 03:41PM

ಉಚ್ಚಿಲ : ಇಲ್ಲಿನ ಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏಪ್ರಿಲ್ 9 ರಂದು 11 ಗಂಟೆಗೆ ನಡೆಯಬೇಕಿರುವ ಮುಖ್ಯಮಂತ್ರಿಗಳು ಪಾಲ್ಗೊಳ್ಳಬೇಕಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಏಪ್ರಿಲ್ 11 ರಂದು ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ.

ನಾಳೆಯ ಉಳಿದ ಎಲ್ಲಾ ಕಾರ್ಯಕ್ರಮಗಳು ಯಥಾವತ್ತಾಗಿ ಜರಗಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಸ್ತೆಗಳ ಬ್ಲಾಕ್ಸ್ಪಾಟ್ನಲ್ಲಿ ಅಪಘಾತವಾಗಿ ಜೀವಹಾನಿಯಾದಲ್ಲಿ ಅಧಿಕಾರಿಗಳ ವಿರುದ್ಧ ಪ್ರಕರಣ : ಜಿಲ್ಲಾಧಿಕಾರಿ ಎಚ್ಚರಿಕೆ

Posted On: 07-04-2022 09:26PM

ಉಡುಪಿ : ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ರಸ್ತೆ ಬ್ಲಾಕ್ಸ್ಪಾಟ್ಗಳನ್ನು ಸಂಬಂಧಪಟ್ಟ ಹೆದ್ದಾರಿ ಇಲಾಖೆಗಳ ಅಧಿಕಾರಿಗಳು 15 ದಿನಗಳಲ್ಲಿ ತೆರವುಗೊಳಿಸಬೇಕು. 15 ದಿನದ ನಂತರ ಆ ಪ್ರದೇಶದಲ್ಲಿ ಅಪಘಾತ ಸಂಭವಿಸಿ ಜೀವಹಾನಿಯಾದಲ್ಲಿ ರಸ್ತೆಯನ್ನು ನಿರ್ಮಿಸಿ, ನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169 ಎ ರಲ್ಲಿ ಒಟ್ಟು 33 ಅಪಘಾತ ಸಂಭವಿಸುವ ಬ್ಲಾಕ್ಸ್ಪಾಟ್ಗಳನ್ನು ಗುರುತಿಸಿದ್ದು, ಈ ಪ್ರದೇಶದಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಿದ್ದು, ಇದುವರೆಗೆ ಅಗತ್ಯ ಕ್ರಮ ಕೈಗೊಳ್ಳದ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಇನ್ನು 15 ದಿನದಲ್ಲಿ ಈ ಎಲ್ಲಾ ಪ್ರದೇಶಗಳಲ್ಲಿ ಅಗತ್ಯ ದುರಸ್ಥಿ ಕಾರ್ಯ ಕೈಗೊಂಡು ವರದಿ ನೀಡಬೇಕು. ದುರಸ್ಥಿ ಮಾಡದೇ ಈ ಪ್ರದೇಶದಲ್ಲಿ ಅಪಘಾತ ಸಂಭವಿಸಿ, ಜೀವ ಹಾನಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ, ಸಾವಿಗೆ ಕಾರಣವಾದ ಕುರಿತು ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. ಬ್ಲಾಕ್ಸ್ಪಾಟ್ಗಳ ದುರಸ್ಥಿ ಮಾಡುವ ಕುರಿತಂತೆ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರಿಗೆ ಮತ್ತು ಪ್ರಾದೇಶಿಕ ನಿರ್ದೇಶಕರುಗಳಿಗೂ ಸಹ ಪತ್ರ ಬರೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯೊಳಗಿನ ಇತರೆ ರಸ್ತೆಗಳಲ್ಲಿಯೂ ಇರುವ ಬ್ಲಾಕ್ಸ್ಪಾಟ್ಗಳಲ್ಲಿ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳ ನಿರ್ಲಕ್ಷದಿಂದ ಅಪಘಾತಗಳು ಸಂಭವಿಸಿ ಜೀವ ಹಾನಿಯಾದರೆ, ಮರಳಿ ವ್ಯಕ್ತಿಯ ಜೀವ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಇತ್ತೀಚೆಗೆ ಸಂತೆಕಟ್ಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಬಲಿಯಾದ ಪೊಲೀಸ್ ಅಧಿಕಾರಿ ಮತ್ತು ಮಗಳ ಸಾವಿನ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ಮಣಿಪಾಲದ ಟೈಗರ್ ಸರ್ಕಲ್ ಬಳಿ ಅಳವಡಿಸಿರುವ ಸಿಗ್ನಲ್ನಿಂದ ರಸ್ತೆಯ ಬಲ ಮತ್ತು ಎಡ ಬದಿಯ ಕ್ರಾಸ್ಗಳಿಂದ ಬರುವ ವಾಹನ ಸವಾರರಿಗೆ ಸಿಗ್ನಲ್ ಇಲ್ಲದೇ ಇರುವುದರಿಂದ ತೀವ್ರ ತೊಂದರೆಯಾಗುತ್ತಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತರಿಗೆ ಸೂಚಿಸಿದರು. ಮಣಿಪಾಲದ ಈಶ್ವರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮೀಸಲಿಟ್ಟ ಪ್ರದೇಶದಲ್ಲಿರುವ ರಿಕ್ಷಾ ನಿಲ್ದಾಣ ತೆರವುಗೊಳಿಸುವ ಬಗ್ಗೆ ಬಂದಿರುವ ದೂರಿನ ಕುರಿತಂತೆ ನಗರಸಭೆ, ಆರ್.ಟಿ.ಓ, ಪೋಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದರು. ಲಕ್ಷ್ಮೀಂದ್ರ ನಗರದ ಬಳಿ ಯೂಟರ್ನ್ ನಿರ್ಮಾಣದ ಅಗತ್ಯತೆ ಬಗ್ಗೆ ಎಸ್ಪಿ ವಿಷ್ಣುವರ್ಧನ್ ತಿಳಿಸಿದರು. ಕೂಡಲೇ ಇಲ್ಲಿ ಯೂಟರ್ನ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿಯಿಂದ ಶಿರೂರುವರೆಗೆ ಅಗತ್ಯವಿರುವೆಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಎಸ್ಪಿ ತಿಳಿಸಿದರು. ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ 2021-22 ನೇ ಸಾಲಿನಲ್ಲಿ 18754 ವಾಹನ ತಪಾಸಣೆ ಮಾಡಿ, 2731 ಪ್ರಕರಣ ದಾಖಲಿಸಿ, 192 ವಾಹನ ಮುಟ್ಟುಗೂಲು ಹಾಕಿ, ತೆರಿಗೆ 79,81,250 ರೂ. ಹಾಗೂ ದಂಡ, 105,77,020 ರೂ. ಸೇರಿದಂತೆ ಒಟ್ಟು 1,85,58.270 ರೂ. ಅನ್ನು ವಸೂಲು ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ, ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿಗಳ ಭೇಟಿ - ಪೂರ್ವಭಾವಿ ಸಭೆ

Posted On: 07-04-2022 09:20PM

ಉಡುಪಿ : ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 11 ರಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಈ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧ್ಯಕ್ಷತೆಯಲ್ಲಿ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ಪೂರ್ವಭಾವಿ ಸಭೆ ಇಂದು ನಡೆಯಿತು.

ಮುಖ್ಯಮಂತ್ರಿಗಳು ಏಪ್ರಿಲ್ 11 ರಂದು ಬೆಳಗ್ಗೆ 12 ಗಂಟೆಗೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 2.30 ಕ್ಕೆ ಉಡುಪಿಯಲ್ಲಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಲಿದ್ದು, ಗ್ರಂಥಾಲಯದಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಪ್ರತಿಮೆ ಅನಾವರಣ ಮಾಡಲಿದ್ದು, ಗ್ರಂಥಾಲಯಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ನಿರ್ಮಿತಿ ಕೇಂದ್ರ ಮತ್ತು ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೇಳಿದರು.

ನಂತರ 3.30 ಕ್ಕೆ ಬನ್ನಂಜೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಉದ್ಘಾಟಿಸಲಿದ್ದು, ನಂತರ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಪಘಾತ ರಹಿತ ಬಸ್ ಚಾಲನೆ ಮಾಡಿದ ಚಾಲಕರಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದು, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದರು. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ವೀಣಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತೆ ವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 07-04-2022 09:15PM

ಉಡುಪಿ : ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ತಹಶೀಲ್ದಾರ್ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದರು. ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಗ್ರಾಮಗಳು ಮತ್ತು ನಗರ ಪ್ರದೇಶದ ವಾರ್ಡ್ಗಳ ಪಟ್ಟಿ ಮಾಡಿಕೊಂಡು, ಆ ಪ್ರದೇಶಗಳಲ್ಲಿ ಈ ಬಾರಿ ಸಮಸ್ಯೆ ತಲೆದೋರದಂತೆ, ನೀರಿನ ಸರಬರಾಜು ಮಾಡಲು ತಕ್ಷಣದಿಂದಲೇ ಯೋಜನೆ ರೂಪಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಮಸ್ಯೆ ಕಂಡು ಬಂದಲೇ ನೀರು ಸರಬರಾಜು ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರದಂತೆ ಸಾಕಷ್ಟು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಬೆಳೆಹಾನಿ, ಪ್ರಾಕೃತಿಕ ವಿಕೋಪ ಹಾನಿಯ ವಿವರಗಳನ್ನು ದಾಖಲಿಸಲು ವೆಬ್ ಆಧಾರಿತ ತಂತ್ರಜ್ಞಾನ ಇದ್ದು, ಇದರಲ್ಲಿಯೇ ಎಲ್ಲಾ ಹಾನಿಯ ವಿವರಗಳನ್ನು ದಾಖಲಿಸಿ. ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಸಲುವಾಗಿ, ನಿರ್ಮಿಸಲು ಉದ್ದೇಶಿಸಿರುವ ಡಿಜಿಟಲ್ ರೇಡಿಯೋ ಟವರ್ ಮತ್ತು ಸೈರನ್ ಟವರ್ಗಳನ್ನು ಅಳವಡಿಸಲು, ಈಗಾಗಲೇ ಗುರುತಿಸಲಾಗಿರುವ ಸ್ಥಳದಲ್ಲಿ ಶೀಘ್ರದಲ್ಲಿ ಟವರ್ ಅಳವಡಿಕೆ ಕಾರ್ಯಗಳನ್ನು ಪೂರ್ಣಗೊಳಿಸಿ ಎಂದು ತಿಳಿಸಿದರು.

ವಿಕೋಪಕ್ಕೆ ಸಿಲುಕಿದವರನ್ನು ರಕ್ಷಿಸಲು ರಕ್ಷಣಾ ಕಾರ್ಯದಲ್ಲಿ ತೊಡಗುವ ಸಂಬಂಧಪಟ್ಟ ಇಲಾಖೆಗಳು, ತಮಗೆ ಅಗತ್ಯವಿರುವ ರಕ್ಷಣಾ ಉಪಕರಣಗಳ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ, ಅವುಗಳನ್ನು ಸರಬರಾಜು ಮಾಡಲಾಗುವುದು. ಈಗಾಗಲೇ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಖಾತೆಯಲ್ಲಿ ವಿಕೋಪ ನಿರ್ವಹಣೆಗೆ ಮೊತ್ತವನ್ನು ಹಂಚಿಕೆ ಮಾಡಿದ್ದು, ಜಿಲ್ಲಾ ಪ್ರಾಕೃತಿಕ ವಿಕೋಪದ ನಿಧಿಯಲ್ಲಿ ಸಾಕಷ್ಟು ಅನುದಾನವಿದ್ದು, ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪಡೆಯ ಎಸ್ಪಿ ಅಂಶು ಕುಮಾರ್, ಅಪರ ಜಿಲ್ಲಾಧಿಕಾರಿ ವೀಣಾ, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಎಎಸ್ಪಿ ಸಿದ್ಧಲಿಂಗಪ್ಪ, ರಾಜ್ಯ ಯೋಜನಾ ಅನುಷ್ಠಾನ ಘಟಕದ ಯೋಜನಾ ವ್ಯವಸ್ಥಾಪಕ ಡಾ.ರಾಜ್ಕುಮಾರ್ ಪೂಜಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷರಾಗಿ ಕಿರಣ್ ಪೂಜಾರಿ ಆಯ್ಕೆ

Posted On: 07-04-2022 08:05PM

ಕುಂದಾಪುರ: ಇಲ್ಲಿನ ತಾಲೂಕು ಪತ್ರಕರ್ತರ ಸಂಘ (ರಿ) ಕುಂದಾಪುರ ಫೀಲೋಮಿನಾ ಕಮರ್ಷಿಯಲ್ ಪಾರ್ಕ್ ಕುಂದಾಪುರ ಸಂಘದ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಕಿರಣ್ ಪೂಜಾರಿ, ಕಾರ್ಯದರ್ಶಿಯಾಗಿ ಸಂತೋಷ ಪಟೇಲ್, ಗೌರವಾಧ್ಯಕ್ಷರಾಗಿ ಎಸ್ ಸತೀಶ್ ಕುಮಾರ್ ಕೋಟೇಶ್ವರ ಹಾಗೂ ಪದಾಧಿಕಾರಿಗಳ ಆಯ್ಕೆ ಸಂಘದ ಸರ್ವ ಸದಸ್ಯರಿಂದ ಮಾಡಲಾಯಿತು.

ಕಾನೂನು ಸಲಹೆಗಾರರಾಗಿ ರವಿಕಿರಣ್ ಮುರ್ಡೇಶ್ವರ ಮತ್ತು ಸೋಮನಾಥ ಹೆಗ್ಡೆ ಮತ್ತು ಸಂಘದ ಗೌರವ ಸಲಹೆಗಾರರಾಗಿ ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕರಾದ ಟಿ. ಪಿ. ಮಂಜುನಾಥ್, ಉಪಾಧ್ಯಕ್ಷರಾಗಿ ಪ್ರದೀಪ್ ಪಟೇಲ್, ದಯಾನಂದ್ ನಾಯಕ್ ಮತ್ತು ಎಸ್ ಕೃಷ್ಣ ಮರಕಾಲ ಬೀಜಾಡಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ದಾಮೋದರ್ ಮೊಗವೀರ, ಪುರುಷೋತ್ತಮ್ ಪೂಜಾರಿ, ಜನಾರ್ಧನ್ ಕೆ. ಎಮ್ ಉಪಸ್ಥಿತರಿದ್ದರು.

ಮಾಜಿ ಸಚಿವರೊಂದಿಗೆ ಅನುಚಿತ ವರ್ತನೆಗೈದ ಶಿರ್ವ ಪಿಡಿಓರವರನ್ನು ತಕ್ಷಣ ಅಮಾನತುಗೊಳಿಸಬೇಕು - ಕಾಪು ಬ್ಲಾಕ್ ಯುವಕಾಂಗ್ರೆಸ್ ( ದಕ್ಷಿಣ ) ಅಧ್ಯಕ್ಷ ರಮೀಝ್ ಹುಸೈನ್

Posted On: 05-04-2022 10:07PM

ಕಾಪು : ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಕಟ್ಟಿದ್ದಾರೆ ಅನ್ನೋ ನೆಪದಲ್ಲಿ, ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರ ಮನೆಯನ್ನು ಬಿಜೆಪಿಯವರ ಕುಮ್ಮಕ್ಕಿನಿಂದ ಶಿರ್ವ ಗ್ರಾಮಪಂಚಾಯತ್ ಪಿಡಿಓ ,ಕಾಪು ತಹಶೀಲ್ದಾರ್ ಆದೇಶದ ನೆಪವನ್ನು ಇಟ್ಟುಕೊಂಡು ಮನೆ ಧ್ವಂಸಗೊಳಿಸಿದ್ದು, ಈ ವಿಚಾರದಲ್ಲಿ ಸ್ಪಷ್ಟನೆ ಕೇಳಲು ತೆರಳಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರ ಜೊತೆ ಅಮಾನವೀಯ ವರ್ತನೆ ತೋರಿ ಹಲ್ಲೆಗೆ ಯತ್ನಿಸಿದ ಪಿಡಿಓ ರವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಕಾಪು ಯುವಕಾಂಗ್ರೆಸ್ ಒತ್ತಾಯಿಸಿದೆ.

ಈ ಮಧ್ಯೆ ಈ ವಿಚಾರದಲ್ಲಿ ಸೊರಕೆಯವರು ಮಾಧ್ಯಮ ಹೇಳಿಕೆ ನೀಡುತ್ತಿದ್ದ ಸಂದರ್ಭ ಏಕಾಏಕಿ ಬಿಜೆಪಿ ಗೂಂಡಾಗಳು, ಘೋಷಣೆ ಕೂಗುತ್ತಾ, ಸೊರಕೆಯವರ ಮಾತಿಗೆ ಅಡ್ಡಿಪಡಿಸಿದ್ದು, ಬಡಕುಟುಂಬದ ಮನೆಯನ್ನು ದ್ವಂಸಗೊಳಿಸುವಲ್ಲಿ ಬಿಜೆಪಿಯ ಕೈವಾಡ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಶಿರ್ವ ಪಿಡಿಓ ಜೊತೆ ಸೇರಿ ಯಾವುದೇ ನೋಟಿಸ್ ನೀಡದೆ ಮನೆಯನ್ನು ದ್ವಂಸಗೊಳಿಸಿದ್ದು ಅತ್ಯಂತ ಖಂಡನೀಯ ಆ ಕುಟುಂಬ ಮನೆ ಇಲ್ಲದೆ ಈಗ ಬೀದಿಪಾಲಾಗಿದೆ. ಬಿಜೆಪಿಯವರಿಗೆ ನೈತಿಕತೆ ಇದ್ದರೆ ನೊಂದ ಮಹಿಳೆಯ ಕುಟುಂಬದ ಜೊತೆ ಇದ್ದು ಮನೆ ನಿರ್ಮಾಣ ಕಾರ್ಯದಲ್ಲಿ ನೈತಿಕ ಬೆಂಬಲ ಸೂಚಿಸಬೇಕು. ಕೂಡಲೇ ಆ ಬಡಕುಟುಂಬಕ್ಕೆ ಮನೆಯನ್ನು ಪಂಚಾಯತಿ ವತಿಯಿಂದಲೇ ನಿರ್ಮಾಣ ಮಾಡಿಕೊಡಬೇಕು ಎಂದು ಕಾಪು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಕಾಯಕಲ್ಪ ನಿಟ್ಟಿನಲ್ಲಿ ಜನತಾ ಜಲಧಾರೆ ರಥ ಯಾತ್ರೆ ಉಡುಪಿಗೆ : ಯೋಗೀಶ ವಿ ಶೆಟ್ಟಿ

Posted On: 05-04-2022 06:44PM

ಉಡುಪಿ : ರಾಜ್ಯದ ನೆಲ-ಜಲದ ಚಿಂತನೆಯೊಂದಿಗೆ ಕುಡಿಯುವ ನೀರು, ನೀರಾವರಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ರಾಜ್ಯದ ಹಾಗೂ ಉಡುಪಿ ಜಿಲ್ಲೆಯಲ್ಲಿ ನೆನೆಗುಂದಿಗೆ ಬಿದ್ದ ನೀರಾವರಿ ಯೋಜನೆಗಳು ಮತ್ತು ನದಿ ನೀರು ಪಶ್ಚಿಮಕ್ಕೆ ಹರಿದು ಸಮುದ್ರಕ್ಕೆ ಸೇರುವುದನ್ನು ತಡೆದು ಕೃಷಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ನಮ್ಮ ಸರಕಾರದ ಮುಂದಿನ ಕಾಳಜಿ ಇದೆ. ಹಿಂದೆಯೂ ನಮ್ಮ ಸರಕಾರ ನೀರಾವರಿ ವ್ಯವಸ್ಥೆಯನ್ನು ನಮ್ಮ ನಾಯಕರು ಮಾಡಿದ್ದಾರೆ ಇದರ ಅಂಗವಾಗಿ ಜನರು ಪಕ್ಷಾತೀತವಾಗಿ ಬೆಂಬಲ ಕೋರುವಂತೆ ನಾಯಕರಿಗೆ, ಕಾರ್ಯಕರ್ತರಿಗೆ ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ ವಿ ಶೆಟ್ಟಿ ಕರೆ ನೀಡಿದರು. ಅವರು ಏಪ್ರಿಲ್ 4 ರಂದು ಜಿಲ್ಲೆಯ ಪಕ್ಷದ ಕಚೇರಿಯಲ್ಲಿ ನಡೆದ ಜಿಲ್ಲಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ಜಲವಿವಾದ ಸುಳಿಯಲ್ಲಿ ಸಿಕ್ಕಿ ರಾಜ್ಯಕ್ಕೆ ಅನ್ಯಾಯವಾಗಿದೆ, ಮತ್ತು ಕೆಲವೊಂದು ಜಲವಿವಾದಗಳು ಸುಪ್ರೀಂ ಕೋರ್ಟಿನಲ್ಲಿ ನೆರೆ ರಾಜ್ಯಗಳ ತಕರಾರಿನಿಂದ ನೆನೆಗುದಿಗೆ ಬಿದ್ದಿದೆ. ವ್ಯವಸಾಯಕ್ಕೆ ನೀರುಣಿಸಲು ನಿರ್ಮಿಸಿರುವ ಕಾಲುವೆಗಳು ಮತ್ತು ವಿತರಣಾ ನಾಲೆಗಳನ್ನು ಪುನಶ್ಚೇತನ ಆಧುನೀಕರಣ ಗೊಳಿಸದೆ ರೈತರಿಗೆ ಸದುಪಯೋಗ ಪಡೆಯಲು ಆಗುತ್ತಿಲ್ಲ. ಈ ಯೋಜನೆ ಗಳಿಗೆ ಕಾಯಕಲ್ಪ ಕಲ್ಪಿಸಿ ರಾಜ್ಯದ ನದಿಗಳಲ್ಲಿ ದೊರೆಯುವ ನೀರನ್ನು ಸದ್ಬಳಕೆ ಮಾಡಿ, ಕರ್ನಾಟಕ ಜನತೆಗೆ ಜಲ ಶಾಮಲ, ಸಸ್ಯಶಾಮಲ ವಾಗಿಸಲು ಜನತಾದಳ ಕಟಿಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ಕುಡಿಯುವ ನೀರು ಮತ್ತು ರೈತರ ಜಮೀನುಗಳಿಗೆ ನೀರುಣಿಸಲು ಜನತಾದಳ ಪಕ್ಷದ ವತಿಯಿಂದ ಕಾಯಕಲ್ಪ ಮಾಡಲಾಗುವುದು. ಕನ್ನಡನಾಡಿನ ಜಲಸಂಪನ್ಮೂಲ ರಾಜ್ಯದ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಆಧ್ಯಾರ್ಪಣೆ, ಇದು ಪಕ್ಷದ ದೃಢಸಂಕಲ್ಪ. ನಮ್ಮ ಜಿಲ್ಲೆಗೆ ಜಲಧಾರೆ ಯಾತ್ರೆಯ ವಾಹನವು ಎಪ್ರಿಲ್ ತಿಂಗಳಲ್ಲಿ ಆಗಮಿಸಲಿದ್ದು, ಕಲಶಕ್ಕೆ ವಾರಾಹಿ,ಸೌಪರ್ಣಿಕಾ ನದಿ, ಸೀತಾನದಿ, ಶಾಂಭವಿ ನದಿ, ನೇತ್ರಾವತಿ ನದಿಯ ನೀರನ್ನು ಶೇಖರಿಸಿ, ಬೆಂಗಳೂರು ತಲುಪಿ, ರಾಜ್ಯದ ಇತರ ಕಡೆಗಳಿಂದ ಆಗಮಿಸುವ ಜಲಧಾರೆಯ ಕಲಶ ದೊಂದಿಗೆ ಅರಮನೆ ಮೈದಾನದಲ್ಲಿ ಬೃಹತ್ ಸಭೆ ಜರಗಿದ ನಂತರ, ಜೆಪಿ ಭವನದ ರಾಜ್ಯ ಪಕ್ಷ ಕಚೇರಿಯಲ್ಲಿ ವರ್ಷಪೂರ್ತಿ ಕಲಶಕ್ಕೆ ಪೂಜೆಗಳು ನಡೆಯಲಿದ್ದು, ಜಲಯಾತ್ರೆಯ ಕಾರ್ಯಕ್ರಮಕ್ಕೆ ಸರ್ವರ ಸಹಕಾರವನ್ನು ಕೋರಿದರು.

ಈ ಸಂದರ್ಭ ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀ ವಾಸುದೇವರಾವ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಕಾಂತ ಅಡಿಗರು, ಸಂದರ್ಭೋಚಿತವಾಗಿ ಮಾತನಾಡಿದರು.

ಸಭೆಯಲ್ಲಿ ರಾಜ್ಯ ಪದಾಧಿಕಾರಿಯಾದ ಗಂಗಾಧರ ಬಿರ್ತಿ, ಜಿಲ್ಲಾ ಪದಾಧಿಕಾರಿಗಳು,ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ, ಸಂದೇಶ್ ಭಟ್, ಶ್ರೀಕಾಂತ ಹೆಬ್ರಿ, ಬಾಲಕೃಷ್ಣ ಆಚಾರ್ಯ, ಮತ್ತು ಜಿಲ್ಲಾ ಯುವ ಅಧ್ಯಕ್ಷ ಸಂಜಯ ಕುಮಾರ್,ಮತ್ತು ಉದಯ ಆರ್ ಶೆಟ್ಟಿ, ರಮೇಶ್ ಕುಂದಾಪುರ, ವೆಂಕಟೇಶ್ ಎಂ ಟಿ, ಎಸ್. ಪಿ.ಬರ್ಬೊಸ, ಆರ್. ಎನ್.ಕೋಟ್ಯಾನ್, ದೇವರಾಜ ತೊಟ್ಟಮ್, ರಾಮರಾವ್, ಬಾಲಚಂದ್ರ ದೇವಾಡಿಗ, ಭರತ್ ಕುಮಾರ್ ಶೆಟ್ಟಿ, ಮಹೇಶ್ ಪರ್ಕಳ, ಸಂಪತ್, ವಿಶಾಲ್, ಆದಿತ್ಯ ಕುಮಾರ್, ಉದಯಕುಮಾರ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ರವರ ಸ್ವಾಗತಿಸಿ , ಜಿಲ್ಲಾ ಮಹಿಳಾ ಕಾರ್ಯಾಧ್ಯಕ್ಷರಾದ ಪೂರ್ಣಿಮಾ ಎಸ್ ನಾಯಕ್ ವಂದಿಸಿದರು.