Updated News From Kaup

ಎಎಪಿ ಪಕ್ಷದ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಕಲಂಬಾಡಿ ಪದವು ಮಂಜುನಾಥ್ ಕುಲಾಲ್ ಆಯ್ಕೆ

Thumbnail
Posted On: 31 Jul 2022, 11:04 PM

ಕಾರ್ಕಳ : ಭಾರತೀಯ ರಾಷ್ಟ್ರೀಯ ಪಕ್ಷ ಆಮ್ ಆದ್ಮಿ ಪಕ್ಷ ಇದರ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಕಲಂಬಾಡಿ ಪದವು ಇಲ್ಲಿಯ ಮಂಜುನಾಥ್ ಕುಲಾಲ್ ಇವರು ಆಯ್ಕೆಯಾಗಿರುತ್ತಾರೆ.

ಮಣಿಪಾಲದ ಟಿ ಮೋಹನ್ ದಾಸ್ ಎಂ ಪೈ ವಿಧಿವಶ

Thumbnail
Posted On: 31 Jul 2022, 10:22 PM

ಮಣಿಪಾಲ : ಇಲ್ಲಿನ ಡಾ.ಟಿ ಎಂ ಎ ಪೈ ಅವರ ಹಿರಿಯ ಪುತ್ರ ಟಿ ಮೋಹನ್ ದಾಸ್ ಎಂ ಪೈ ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. 1933 ರ ಜೂನ್ 20 ರಂದು ಜನಿಸಿದ್ದರು. ಅವರು ಡಾ.ಟಿ ಎಂ ಎ ಪೈ ಫೌಂಡೇಶನ್ ಮಣಿಪಾಲ ಮತ್ತು ಎಂಜಿಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಮಣಿಪಾಲದ ವಿವಿಧ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

ಪ್ರವೀಣ್ ನೆಟ್ಟಾರ್ ಮನೆಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಭೇಟಿ

Thumbnail
Posted On: 31 Jul 2022, 07:06 PM

ಕಾಪು : ದುಷ್ಕರ್ಮಿಗಳಿಂದ ಹತ್ಯೆಯಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಅವರ ಮನೆಗೆ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಭೇಟಿ ನೀಡಿ ಅವರ ಪೋಷಕರು, ಪತ್ನಿ ಮತ್ತು ಇತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಬಜರಂಗದಳ ಸಂಚಾಲಕನ ಮನೆಗೆ ಬಂದ ಅಪರಿಚಿತ ಯುವಕರು ; ಠಾಣೆಯಲ್ಲಿ ದೂರು ದಾಖಲು

Thumbnail
Posted On: 31 Jul 2022, 06:27 PM

ಕಾಪು : ಇಲ್ಲಿನ ಬಜರಂದದಳದ ಸಂಚಾಲಕರಾದ ಸುಧೀರ್ ಸೋನುರವರ ಮನೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ನಿಮ್ಮ ಬಳಿ ಮಾತನಾಡಲಿದೆ ನಿಮ್ಮನ್ನು ಆಶಿಫ್ ಎನ್ನುವವರು ಕಾರಿನಲ್ಲಿ ಕಾಯುತ್ತಿದ್ದಾರೆ ಎಂದು ಹೇಳುತ್ತಿದ್ದಂತೆ ಅನುಮಾನಗೊಂಡ ಸುಧೀರ್ ಸೋನುರವರು ಕೂಡಲೇ ಬರುವುದಿಲ್ಲ ಎಂದು ನಿರಾಕರಿಸಿದ ಘಟನೆ ಇಂದು ನಡೆದಿದೆ. ಇಬ್ಬರು ಅಪರಿಚಿತ ಯುವಕರ ಚಲನವಲನಗಳಿಂದ ಅನುಮಾನಗೊಂಡ ಸುಧೀರ್ ಸೋನು ಮತ್ತು ಅವರ ಪತ್ನಿ ಬರುವುದಿಲ್ಲ ಎಂದು ಹೇಳಿ ಕಳುಹಿಸಿದರು. ಅಪರಿಚಿತರು ಹೋಗುವಾಗ ಅವರ ಬಳಿ ಇದ್ದ ಆಯುಧಗಳನ್ನು ಗಮನಿಸಿದ ಸುಧೀರ್ ಸೋನುರವರು ಕೂಡಲೇ ಕಾಪು ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೋಲಿಸರು ಕಾರ್ಯಪ್ರವತ್ತರಾಗಿ ಆಶೀಫ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಆಗಸ್ಟ್ 31 : ಕಳತ್ತೂರು ಜ್ಯೋತಿನಗರ ಶ್ರೀ ಗಣೇಶೋತ್ಸವ ಸಮಿತಿಯ 32ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ

Thumbnail
Posted On: 31 Jul 2022, 04:06 PM

ಕಾಪು : ಕಳತ್ತೂರು ಶ್ರೀ ಗಣೇಶೋತ್ಸವ ಸಮಿತಿಯ 32ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಆಗಸ್ಟ್ 31, ಬುಧವಾರದಂದು ಶ್ರೀ ಶೈಲಾ ಮಂಟಪ ಜ್ಯೋತಿನಗರದಲ್ಲಿ ಕೇಶವ ತಂತ್ರಿಯವರ ನೇತೃತ್ವದಲ್ಲಿ ನೆರವೇರಲಿದೆ. ಆಗಸ್ಟ್ 28ರ ಬೆಳಿಗ್ಗೆ 9 ರಿಂದ ಊರಿನವರಿಗೆ ಹಾಗೂ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ, ಆಗಸ್ಟ್ 31ರಂದು ಪೂಜಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ರಾತ್ರಿ ಮಂಗಲಮೂರ್ತಿಯ ಜಲದಿವಾಸ ನಡೆದು ಎಲ್ಲಾ ಕಾರ್ಯಕ್ರಮ ಅಂದು ಸಮಾಪ್ತಿಗೊಳ್ಳಲಿದೆ ಎಂದು ಸಮಿತಿಯ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಆಕ್ಷೇಪಾರ್ಹ ಪೋಸ್ಟ್ : ಸಾಮಾಜಿಕ ‌ಜಾಲತಾಣಗಳ ಬಗ್ಗೆ ನಿಗಾ ; ಐದು ಪ್ರಕರಣ ದಾಖಲು

Thumbnail
Posted On: 31 Jul 2022, 03:52 PM

ಮಂಗಳೂರು : ಬೆಳ್ಳಾರೆಯ ಪ್ರವೀಣ್ ಮತ್ತು ಸುರತ್ಕಲ್ ಫಾಝಿಲ್ ಹತ್ಯೆಗೆ ಪ್ರತೀಕಾರವೆನಿಸುವ ಆಕ್ಷೇಪಾರ್ಹ ಪೋಸ್ಟ್‌ಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಿದ್ದ ಬಗ್ಗೆ ಐದು ಪ್ರಕರಣ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್, ಇನ್ಟ್ಸಾ ಗ್ರಾಮ್, ಟೆಲಿಗ್ರಾಮ್, ಮೆಸೆಂಜರ್ ಇತ್ಯಾದಿಗಳ ಮೇಲೆ ನಿಗಾ ಇರಿಸಲಾಗಿದೆ. ಇನ್ನು ಮಂಗಳೂರಿನಲ್ಲಿ ನಡೆದಿರುವ ಒಂದು ಕೊಲೆಗೆ ಪ್ರತಿಕಾರವಾಗಿ 10 ಕೊಲೆ, ಉಳಿದಂತೆ ನಿರ್ದಿಷ್ಟ ಜಾತಿ ಮತ್ತು ಸಮುದಾಯ ಗುರಿಯಾಗಿರಿಸಿಕೊಂಡು ಹತ್ಯೆಗೆ ಕರೆ, ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬುವುದಾಗಿ ರಾಜ್ಯ ಗುಪ್ತಚರ ದಳ ಮಾಹಿತಿ ಎಂಬುವುದಾಗಿ ಸುಳ್ಳು ಸಂದೇಶಗಳ ಬಗ್ಗೆ ದೂರು ದಾಖಲಾಗಿದೆ.

ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆ ; ಅಧ್ಯಕ್ಷರಾಗಿ ನಡಿಮನೆ ದೇವರಾಜ ರಾವ್ ಪುನರಾಯ್ಕೆ

Thumbnail
Posted On: 31 Jul 2022, 03:31 PM

ಕಾಪು : ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ನಡಿಮನೆ ದೇವರಾಜ ರಾವ್ ಅವರು ಪುನರಾಯ್ಕೆಗೊಂಡಿದ್ದು ದೇಗುಲದ ಆಡಳಿತಾಧಿಕಾರಿ ಮಮತಾ ವೈ. ಶೆಟ್ಟಿ ಅವರು ಜುಲೈ 29 ರಂದು ಅಧಿಕಾರ ಹಸ್ತಾಂತರಿಸಿದರು. ದೇಗುಲದ ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ಮತ್ತು ಅರ್ಚಕ ವಿಶ್ವನಾಥ ಉಡುಪ ಅವರ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿ, ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸಲಾಯಿತು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂಜೀವ ಶೆಟ್ಟಿ ಪಣಿಯೂರು, ಲೋಕೇಶ್ ಶೆಟ್ಟಿ ಬೆಳಪುಗುತ್ತು, ಬಾಲಕೃಷ್ಣ ಪಣಿಯೂರು, ಗ್ರಾಮದ ಪ್ರಮುಖರಾದ ಸತೀಶ್ ಕುಂಡಂತಾಯ, ಪ್ರಕಾಶ್ ರಾವ್ ಪಠೇಲ್, ಶ್ರೀಧರ ಮಂಜಿತ್ತಾಯ, ಸುದರ್ಶನ್ ವೈ.ಎಸ್., ಮನೋಹರ್ ರಾವ್ ಪಣಿಯೂರು, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ದಿನೇಶ್ ಕುಂಜೂರು, ರಾಕೇಶ್ ಕುಂಜೂರು, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ದೇವಸ್ಥಾನದ ಪ್ರಬಂಧಕ ರಾಘವೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶಿರ್ವ : ಹಲವರ ತ್ಯಾಗ, ಬಲಿದಾನಗಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಮೂಲ್ಯ ಕೊಡುಗೆ - ಮುದ್ದು ಮೂಡುಬೆಳ್ಳೆ

Thumbnail
Posted On: 31 Jul 2022, 03:08 PM

ಶಿರ್ವ: 11ನೇ ವಯಸ್ಸಿಗೆ ಮುಂಬಯಿಗೆ ತೆರಳಿ, ಆರ್ಥಿಕ ಸಂಕಷ್ಟಗಳನ್ನು ಎದುರಿಸಿ, ರಾತ್ರಿ ಶಾಲೆಯಲ್ಲಿ ಕಲಿತು, ಮುಂಬಯಿ ಶಿವಾಜಿ ಪಾರ್ಕಿನಲ್ಲಿ ಮಹಾತ್ಮಾ ಗಾಂಧೀಜಿಯವರ ಭಾಷಣವನ್ನು ಆಲಿಸಿ ಪ್ರಭಾವಿತಗೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರು, ಹಲವಾರು ಚಳುವಳಿಗಳಲ್ಲಿ ಪಾಲ್ಗೊಂಡವರು, ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಭೂಗತರಾಗಿ ಚಳವಳಿಗಳನ್ನು ಮುಂದುವರೆಸಿದವರು, ಕೃಷ್ಣಮೆನನ್ ರವರ ಆಪ್ತರಾಗಿ ಸಕ್ರಿಯರಾಗಿದ್ದವರು ಎಸ್ಕೆ. ಸುವರ್ಣ‌ರವರು. ಇಂಥ ಹಲವರ ತ್ಯಾಗ, ಬಲಿದಾನಗಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಮೂಲ್ಯ ಕೊಡುಗೆಗಳಾಗಿದ್ದು, ಶಾಶ್ವತ ಮೌಲ್ಯ ಹೊಂದಿರುವಂತದ್ದಾಗಿವೆ ಎಂದು ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಿರಿಯ ಉದ್ಘೋಷಕರು, ಕನ್ನಡ, ತುಳು ಸಾಹಿತಿ ಆಗಿರುವ ಮುದ್ದು ಮೂಡುಬೆಳ್ಳೆ ನುಡಿದರು. ಅವರು ಪಡುಬೆಳ್ಳೆ ನಾರಾಯಣಗುರು ಪ್ರೌಢಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ವತಿಯಿಂದ ಜರಗಿದ ಸ್ವಾತಂತ್ರ್ಯ ಹೋರಾಟಗಾರ, ಪಾರಂಪರಿಕ ವೈದ್ಯ ಪಂಡಿತ್ ಎಸ್.ಕೆ. ಸುವರ್ಣ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ‌ ಸಲ್ಲಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತಾಂಜಲಿ ಸರಣಿಯ ಅಂಗವಾಗಿ ಜರಗಿದ ಸಂಸ್ಮರಣಾ ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ವಹಿಸಿದ್ದರು. ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ, ಪಂಡಿತ್ ಎಸ್.ಕೆ. ಸುವರ್ಣ ಅವರ ಪುತ್ರ ಬೆಳ್ಳೆ ಸಿಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್. ಸುವರ್ಣ, ಡಾ. ಅಭಿನವ್ ಎಸ್. ಸುವರ್ಣ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಜಿನರಾಜ್ ಸಾಲ್ಯಾನ್, ತಾಪಂ ಮಾಜಿ ಸದಸ್ಯೆ ಗೀತಾ ವಾಗ್ಳೆ, ಜಿಪಂ ಮಾಜಿ ಸದಸ್ಯೆ ಐಡಾ ಗಿಬ್ಬ ಡಿಸೋಜ, ಗ್ರಾಪಂ ಮಾಜಿ ಸದಸ್ಯ ಗಿಬ್ಬ ಡಿಸೋಜ, ಡಿಎಸ್ಎಸ್ ಹಿರಿಯ ಕಾರ್ಯಕರ್ತ ಎಂ. ರಮೇಶ್ ಬೆಳ್ಳೆ, ಲಿಯೋ ಅರಾಹ್ನಾ ಬೆಳ್ಳೆ ಉಪಸ್ಥಿತರಿದ್ದರು. ಶ್ರೀ‌ ನಾರಾಯಣ ಗುರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಎಸ್. ಸ್ವಾಗತಿಸಿ, ಪ್ರಸ್ತಾವಿಸಿದರು. ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ನಿರೂಪಿಸಿದರು.

ಕಾರ್ಕಳ : ಇನ್ನಾ ಬಳಿ ಸುರತ್ಕಲ್ ಫಾಜಿಲ್ ಕೊಲೆಗೆ ಬಳಸಿದ ಕಾರು ಪತ್ತೆ

Thumbnail
Posted On: 31 Jul 2022, 02:59 PM

ಕಾರ್ಕಳ : ತಾಲೂಕಿನ ಇನ್ನಾ ಕಡಕುಂಜ ಹಾಡಿ ಬಳಿ ಸುರತ್ಕಲ್ ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕಾರು ಎನ್ನಲಾದ ಇಯೊನ್ ಕಾರು ಪತ್ತೆಯಾಗಿದೆ. ಇದು ಪಡುಬಿದ್ರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸೈ ಪುರುಪೋತ್ತಮ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಆಗಮಿಸುವ ಹಿನ್ನಲೆಯಲ್ಲಿ ಕಾರನ್ನು ಯಾರೂ ಸ್ಪರ್ಶಿಸಬಾರದೆಂದು ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಸ್ಥಳೀಯರ ಪ್ರಕಾರ ನಾಲ್ಕು ದಿನಗಳಿಂದ ಈ ಕಾರು ಈ ಭಾಗದಲ್ಲಿ ಅನಾಥ ಸ್ಥಿತಿಯಲ್ಲಿದ್ದು, ಅಷ್ಟಾಗಿ ಗಮನಿಸಿರಲಿಲ್ಲ. ಇವತ್ತು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಕಾಪು ಶಾಸಕರಿಂದ 2 ಲಕ್ಷದ ಪರಿಹಾರ ಚೆಕ್ ಹಸ್ತಾಂತರ

Thumbnail
Posted On: 30 Jul 2022, 08:10 PM

ಕಾಪು : ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಉಳಿಯಾರಗೋಳಿ ರಘು ಪೂಜಾರಿ ಮನೆಗೆ ಭೇಟಿ ನೀಡಿ 2 ಲಕ್ಷ ಮೊತ್ತದ ಪರಿಹಾರ ಚೆಕ್ ಹಸ್ತಾಂತರಿಸಿದರು. ಕಳೆದ ದೀಪಾವಳಿ ಸಂದರ್ಭದಲ್ಲಿ ಕಾಪು ತಾಲೂಕು ಉಳಿಯಾರಗೋಳಿ ಗ್ರಾಮದ ರೋಹಿತ್ ರವರು ಮನೆಯ ಅಂಗಳದಲ್ಲಿಯೇ ಹಾವು ಕಡಿತದಿಂದಾಗಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಮನೆಗೆ ತೆರಳಿ ಮಾನ್ಯ ಶಾಸಕರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಸರಕಾರದಿಂದ ಸುಮಾರು 2 ಲಕ್ಷ ರೂ.ಗಳನ್ನು ಮಂಜೂರಾತಿ ಮಾಡಿಸಿ ಇದರ ಮಂಜೂರಾತಿ ಪತ್ರವನ್ನು ಮೃತ ರೋಹಿತ್ ತಂದೆ ರಾಘು ಕೆ ಪೂಜಾರಿ ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾಪು ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಕಂದಾಯ ನೀರಿಕ್ಷಕರು ಸುಧೀರ್ ಕುಮಾರ್ ಶೆಟ್ಟಿ, ಹೊಸಮಾರಿಗುಡಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ರಮೇಶ್ ಹೆಗ್ಡೆ, ಪುರಸಭೆ ಸದಸ್ಯರಾದ ಸುರೇಶ್ ದೇವಾಡಿಗ, ಲತಾ ದೇವಾಡಿಗ, ಪ್ರದೀಪ್ ಹಾಗೂ ಸ್ಥಳೀಯರಾದ ರಮೇಶ್ ಶೆಟ್ಟಿ, ಉಪಸ್ಥಿತರಿದ್ದರು.