Updated News From Kaup

ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ

Thumbnail
Posted On: 13 Aug 2022, 10:25 PM

ಕಾಪು : ತಾಲೂಕಿನ ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಒಂದು ಮಗುಚಿ ಬಿದ್ದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ಮರದ ತುಂಡುಗಳನ್ನು ಹೇರಿಕೊಂಡು ಸಾಗುತ್ತಿದ್ದ ಟೆಂಪೋ ಪಲ್ಟಿಯಾಗಿದೆ. ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಪಡುಬಿದ್ರಿ : ಹಿಂದು ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ

Thumbnail
Posted On: 13 Aug 2022, 10:13 PM

ಪಡುಬಿದ್ರಿ : ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಶನಿವಾರ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು. ಪಡುಬಿದ್ರಿಯ ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರದಲ್ಲಿ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ಪಂಜಿನ ಮೆರವಣಿಗೆಯು ಪಡುಬಿದ್ರಿ ಪೇಟೆಯಲ್ಲಿ ಸಮಾಪನಗೊಂಡಿತು. ಕಾರ್ಯಕ್ರಮವನ್ನು ಹಿಂದು ಮುಖಂಡ ಗಣರಾಜ್ ಭಟ್ ಕೆದಿಲ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ ತಾಯಿ ಭಾರತಿ ಘೋಷಣೆ, ಕೈಯಲ್ಲಿ ಪಂಜು ಅಖಂಡ ಭಾರತದ ಕಲ್ಪನೆಗೆ ನಾಂದಿ. ದೇಶಕ್ಕಾಗಿ ಶ್ರಮಿಸಿದ ಮಹನೀಯರ ಶ್ರಮ, ಬಲಿದಾನ ನಮ್ಮ ಜೀವನಕ್ಕೆ ನಾಂದಿ ಬುನಾದಿ ಎಂಬ ಸತ್ಯ ಸಂಗತಿಯನ್ನು ಅರಿವು ಮಾಡುವುದಕ್ಕೆ ಈ ಅಖಂಡ ಭಾರತ ಸಂಕಲ್ಪ ದಿನ. ಇಂದಿನ ಪಠ್ಯ ಪುಸ್ತಕದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬ್ರಿಟಿಷರಿಂದ ಬಂತೆಂದಿದೆ. ಆದರೆ ಈ ಸ್ವಾತಂತ್ರ್ಯ ಯಾರ ಸೊತ್ತು ಅಲ್ಲ. ಇದು ಬ್ರಿಟಿಷರ ಭಿಕ್ಷೆಯಲ್ಲ ನಮ್ಮವರ ರಕ್ತ ಹರಿಸಿ ಗಳಿಸಿದ ಸ್ವಾತಂತ್ರ್ಯ. ಸ್ವಾತಂತ್ರ್ಯವೆಂದರೆ ಬ್ರಿಟಿಷರೊಂದಿಗಿನ ಹೋರಾಟವೆಂದು ಪಠ್ಯ ಪುಸ್ತಕ ತೋರಿಸುತ್ತದೆ. ಸತ್ಯ ಸಂಗತಿಗಳನ್ನು ಮರೆಮಾಚಲಾಗಿದೆ. ಅದನ್ನು ಲೋಕಕ್ಕೆ ಸಾರ ಬೇಕಾಗಿದೆ. ಇದನ್ನೆಲ್ಲ ನೆನಪಿಸಲು ಅಖಂಡ ಭಾರತ ಸಂಕಲ್ಪ ಎಂದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾರಾಯಣ್ ರಾವ್ ಶಿವಾಲಯ, ಶಂಕರ್ ಕಂಚಿನಡ್ಕ, ರಿಕೇಶ್ ಕಡೆಕಾರು, ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರಸಾದ್ ಪಲಿಮಾರು ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ : ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಪ್ಪೆ ಚಿಪ್ಪಲ್ಲಿ ಅರಳಿದ ಭಾರತ

Thumbnail
Posted On: 13 Aug 2022, 02:20 PM

ಉಡುಪಿ : ಇಲ್ಲಿಯ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅವರು ತಮ್ಮ ಮನೆಯಲ್ಲಿ ಕಪ್ಪೆಚಿಪ್ಪುಗಳ ಮೂಲಕ ಭಾರತ ಭೂಪಟವನ್ನು ರಚಿಸಿ, ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಸ್ಥಳೀಯವಾಗಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ, ಅತ್ಯಂತ ವಿಶಿಷ್ಟ , ಆಕರ್ಷಕ ಮತ್ತು ಎಲ್ಲರಿಗೂ ಮಾದರಿಯಾಗುವಂತೆ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಆಚರಿಸಿದ್ದಾರೆ.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಅಂತಾರಾಷ್ಟ್ರೀಯ ಯುವ ದಿನ ಆಚರಣೆ

Thumbnail
Posted On: 13 Aug 2022, 02:06 PM

ಉಡುಪಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಉಡುಪಿಯ ಸಂತ ಸಿಸಿಲಿ ಪದವಿಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ದೇಶದ ಸ್ವಾತಂತ್ರ್ಯದ ಅಮೃತೋತ್ಸವದ ಸಂಭ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ನಾಯಕ ಮತ್ತು ನಾಯಕಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಭಾರತೀಯ ಜೀವ ವಿಮಾ ನಿಗಮ ಕಾಪು ಶಾಖೆಯ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಎನ್ ಕೆ, ವಿದ್ಯಾರ್ಥಿಗಳು ದೇಶದ ಬೆನ್ನೆಲುಬು. ದೇಶ ಅಭಿವೃದ್ಧಿ ಪಥಕ್ಕೆ ಸಾಗುವಂತಾಗಲು ನಾವೆಲ್ಲರೂ ಕೈಜೋಡಿಸಬೇಕು. ನಮ್ಮ ದೇಶದಲ್ಲಿ ರೈತರು ಮತ್ತು ಸೈನಿಕರಂತೆ ನಾವು ನಮ್ಮ ದೇಶಕ್ಕೆ ಸೇವೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿ ಮಣಿಪಾಲ ಎಚ್ ಪಿ ಆರ್ ವಿದ್ಯಾಸಂಸ್ಥೆಯ ಪ್ರೊಫೆಸರ್ ಹರಿಪ್ರಸಾದ್ ರೈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯವನ್ನು ತಿಳಿಸಿದರು. ಸಂಪನ್ಮೂಲ ಅತಿಥಿ ಜೆಸಿಐ ಇಂಡಿಯಾ ಇದರ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮೌಲ್ಯಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ವಲಯ ಎರಡರ ಅಧ್ಯಕ್ಷ ಜೋನ್ ಫೆರ್ನಾಂಡಿಸ್, ಕಾಲೇಜಿನ ಪ್ರಾಂಶುಪಾಲೆ ಸಿ. ರಚನ, ಕಾರ್ಯಕ್ರಮದ ನಿರ್ದೇಶಕ ವಿವೇಕ್ ಮೆಂಡೋನ್ಸಾ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿದರೆ, ಕಾರ್ಯದರ್ಶಿ ಸ್ಟೀವನ್ ಕುಲಾಸೊ ನಿರೂಪಿಸಿದರು. ಉಪನ್ಯಾಸಕಿ ವಸಂತಿ ಅಂಬಲ್ಪಾಡಿ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಸದಸ್ಯರಾದ ಹೆನ್ರಿ ಡಿಸೋಜಾ, ಗೋಡ್ ಫ್ರಿ ಡಿಸೋಜ, ಜೆರಾಲ್ಡ್ ಪಿರೇರಾ, ರೊನಾಲ್ಡ್ ರೆಬೆಲ್ಲೋ, ರೋಶನ್ ಕ್ರಾಸ್ತಾ, ಅನಿಲ್ ಮಿನೇಜಸ್, ಪ್ರೇಮ್ ಮಿನೇಜಸ್, ಫ್ರಾಂಕಿ ಕರ್ಡೋಜಾ ಮತ್ತಿತರರು ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ವಿಶೇಷ ಬಹುಮಾನ

Thumbnail
Posted On: 12 Aug 2022, 11:39 PM

ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯ 2021-22ನೇ ವಾರ್ಷಿಕ ಸಾಲಿನ ಬ್ಯಾಂಕಿಂಗ್ ವ್ಯವಹಾರದಲ್ಲಿ ಗಳಿಸಿದ ಪ್ರಗತಿಯನ್ನು ಗುರುತಿಸಿ ಆಗಸ್ಟ್ 5ರಂದು ಮಂಗಳೂರು ಕೊಡಿಯಾಲ್ ಬೈಲ್ ನ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ಜರಗಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2021-22 ನೇ ಸಾಲಿನ ಮಹಾಸಭೆಯಲ್ಲಿ 2021-22 ನೇ ಸಾಲಿನ ಜಿಲ್ಲಾ ಬ್ಯಾಂಕಿನ ವಿಶೇಷ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಉಡುಪಿ ಜಿಲ್ಲೆಯಲ್ಲಿಯೇ ಹಲವಾರು ವರ್ಷಗಳಿಂದ ಸತತವಾಗಿ 25% ಡಿವಿಡೆಂಡ್ ನೀಡುತ್ತಿರುವ ಏಕೈಕ ಸಂಸ್ಥೆಯಾಗಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು 2021-22 ನೇ ಸಾಲಿನಲ್ಲಿ 100 ಕೋಟಿ ಠೇವಣಿ ಗುರಿ ಸಾಧನೆಯನ್ನು ತಲುಪಿದ್ದು ಪ್ರಪಥಮವಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ರೂಪಾಯಿ 1,00,000/ ವಿಶೇಷ ಬಹುಮಾನವನ್ನು ಕೂಡ ಪಡೆಯಿತು. ಮಂಗಳೂರು ಕೊಡಿಯಾಲ್ ಬೈಲ್ ನ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಪರವಾಗಿ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಿಶ್ಚಿತಾ ಪಿ.ಎಚ್. ರವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಮ್. ಎನ್. ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಹಾಗೂ ವಿಶೇಷ ಬಹುಮಾನವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಕ್ಷ್ಮೀ ನಾರಾಯಣ ಜಿ.ಎನ್‌., ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಲಾವಣ್ಯ ಕೆ.ಆರ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಹಾಗೂ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ. ಇದರ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಗ್ರಾಮ-1 : ತಿರಂಗ ಧ್ವಜ ವಿತರಣೆ

Thumbnail
Posted On: 12 Aug 2022, 11:20 PM

ಉಡುಪಿ‌ :ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರಲು ಖಾಸಗಿ ಸಹಭಾಗಿತ್ವದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಅನುಷ್ಟಾನಗೊಳಿಸಲು ಗ್ರಾಮ-1 ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದ್ದು, ಉಡುಪಿ ಜಿಲ್ಲೆಯಲ್ಲೂ ಸಹ ಹಲವು ಗ್ರಾಮ-1 ಕೇಂದ್ರಗಳು ಪ್ರಾರಂಭಗೊಂಡು ಸಕ್ರಿಯವಾಗಿರುತ್ತದೆ. 75 ನೇ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದ ಅಂಗವಾಗಿ "ಹರ್‌ ಘರ್‌ ತಿರಂಗ್‌" ಯೋಜನೆಯನ್ನು ಭಾರತ ಸರ್ಕಾರವು ರೂಪಿಸಿದ್ದು, ಉಡುಪಿ ಜಿಲ್ಲೆ ಅಲೆವೂರು, ಶಿರ್ವ, ವಾರಂಬಳ್ಳಿ, ವರಂಗ, ಯೆಡ್ತಾಡಿ, 80- ಬಡಗಬೆಟ್ಟು, ಮುದ್ರಾಡಿ ಹಾಗೂ ಕೆಮ್ಮಣ್ಣು ಗ್ರಾಮ-1 ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ತಿರಂಗ ಧ್ವಜವನ್ನು ವಿತರಣೆ ಮಾಡಲಾಯಿತು.

ಕಾಪು ಜಿ.ಎಸ್. ಬಿ ಸಮಾಜ ಬಾಂಧವರಿಂದ ಸಮುದ್ರ ಪೂಜೆ

Thumbnail
Posted On: 12 Aug 2022, 08:45 PM

ಕಾಪು : ಅನಾದಿ ಕಾಲದಿಂದ ಹಿರಿಯರ ಮಾರ್ಗದರ್ಶನದಂತೆ ಕಾಪುವಿನ ಜಿ.ಎಸ್. ಬಿ ಸಮಾಜ ಬಾಂಧವರಿಂದ ನಡೆಯುತ್ತಿದ್ದ ಸಮುದ್ರ ಪೂಜೆ ಆಗಸ್ಟ್ 11ರಂದು ನೆರವೇರಿತು. ಸಮುದ್ರ ಪೂಜೆಯು ಶ್ರಾವಣ ಪೂರ್ಣಿಮಾ ದಿನ ಹಯಗ್ರೀವ ಜಯಂತಿಯಂದು ನೆರವೇರಿಸುವುದು ವಾಡಿಕೆ. ಕಾಪು ವೆಂಕಟರಮಣ ದೇವಾಲಯದಿಂದ ಪೇಟೆಯವರೆಲ್ಲ ಸೇರಿಕೊಂಡು ಮೆರವಣಿಗೆಯಲ್ಲಿ ಹೋಗುವ ವಾಡಿಕೆ ಇದೆ.

ಕಟಪಾಡಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಎಸ್ ವಿ ಎಸ್ ಪ್ರೌಢಶಾಲೆಯ ಮಕ್ಕಳಿಗೆ ಉಚಿತ ತ್ರಿವರ್ಣ ಧ್ವಜ ವಿತರಣೆ

Thumbnail
Posted On: 12 Aug 2022, 08:30 PM

ಕಟಪಾಡಿ : ದೇಶವು ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಿದ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ "ಹರ್ ಘರ್ ತಿರಂಗಾ" (ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ) ಅಭಿಯಾನವು ಆಗಸ್ಟ್ 13ರಿಂದ ಆಗಸ್ಟ್ 15ರ ವರೆಗೆ ದೇಶಾದ್ಯಂತ ನಡೆಯಲಿದೆ. ಈ ಪ್ರಯುಕ್ತ ಕಟಪಾಡಿಯ ಎಸ್ ವಿ ಎಸ್ ಪ್ರೌಢಶಾಲಾ - ಕಾಲೇಜು ಹಳೆವಿದ್ಯಾರ್ಥಿಗಳ ವತಿಯಿಂದ ಎಸ್ ವಿ ಎಸ್ ಪ್ರೌಢಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ತ್ರಿವರ್ಣ ಧ್ವಜವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ತಂತ್ರಿ, ಪ್ರಾಧ್ಯಾಪಕರಾದ ವಿಜಯ, ವಿವೇಕಾನಂದ ಹಾಗೂ 1997-2002ರ ವರ್ಷದ ಎಸ್ ವಿ ಎಸ್ ಪ್ರೌಢಶಾಲಾ - ಕಾಲೇಜು ಹಳೆವಿದ್ಯಾರ್ಥಿಗಳು, ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಘವೇಂದ್ರ ಯತಿ ಸಾರ್ವಭೌಮರು - "ಶುಭಯೋಗ ತರುವ ಯೋಗಿ"

Thumbnail
Posted On: 12 Aug 2022, 07:40 PM

ಸತ್ಯ-ಧರ್ಮ ಮಗ್ನರಾಗಿ ಭಜಿಸಿದವರಿಗೆ ಕಲ್ಪವೃಕ್ಷವಾಗಿ ನಮಿಸಿದವರಿಗೆ ಕಾಮಧೇನುವಾಗಿ ಕೋಟ್ಯಂತರ ಭಕ್ತ-ಶಿಷ್ಯ ಸಂದೋಹವನ್ನು ಪೊರೆಯುತ್ತಾರೆ ಎಂಬ ವಿಶ್ವಾಸಕ್ಕೆ ಪಾತ್ರರಾದವರು ಶ್ರೀ ರಾಘವೇಂದ್ರ ಗುರು ಸಾರ್ವಭೌಮರು. ಗುರುರಾಯರೆಂದೊ, ರಾಯರೆಂದೊ ಕರೆಯಲ್ಪಡುವ ಈ ಮಹಾಗುರುವಿನ ಆರಾಧನಾ ಮಹೋತ್ಸವ ನಾಡಿನಾದ್ಯಂತ ಶ್ರದ್ಧಾಭಕ್ತಿಯೊಂದಿಗೆ ಆಚರಿಸಲ್ಪಡುವುದು. ಈ ಪರ್ವ ದಿನಗಳ ಸಂಭ್ರಮ, ಮುಗ್ಧ ಭಕ್ತಿಯ ಹಿನ್ನೆಲೆಯಲ್ಲಿದೆ ಪವಿತ್ರವಾದ ಹಾಗೂ ಗುರುತರವಾದ ಗುರು-ಶಿಷ್ಯ ಅನುಬಂಧ, ಇದು ಅವರ್ಣನೀಯ ಸಂಬಂಧವೊಂದರ ವಿರಾಡ್ ದರ್ಶನ. ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸ ಕೃಷ್ಣದೇವರಾಯನ ವೈಣಿಕ ವಿದ್ಯಾಗುರು ಕೃಷ್ಣಾಚಾರ್ಯರ ವಂಶಸ್ಥ ತಿಮ್ಮಣ್ಣಾಚಾರ್ಯ ಮತ್ತು ಗೋಪಿಕಾ ದಂಪತಿಗೆ ವೆಂಕಟೇಶ ಜ್ಯೇಷ್ಠ ಪುತ್ರ. ಹುಟ್ಟಿದ್ದು ಕಾವೇರಿ ನದಿಯ ದಡದ ಒಂದು ಗ್ರಾಮ.ಯತಿಯಾಗಿ ವಿಶ್ವಹಿತ ಬಯಸಿ ವಿಶ್ವಧರ್ಮದ ಉದ್ಧಾರಕನಾಗಿ ದುಡಿದು ,ಚಲನಶೀಲ ಬದುಕಿಗೆ ನಿಶ್ಚಿತ ಧ್ಯೇಯ ಧೋರಣೆಗಳು ಬೇಕು ಎಂಬ ಘೋಷ ಮೊಳಗಿಸುತ್ತಾ ವರ್ತಮಾನದ ಜೀವನ ಉನ್ನತ ಮೌಲ್ಯಗಳ ಅವಲಂಬಿತವಾಗಿರಬೇಕೆಂದು ಸಾರಿದರು.ಕೊನೆಗೊಮ್ಮೆ ಅಂದರೆ ಕಾಲ ಸನ್ನಿಹಿತವಾದಾಗ ತುಂಗೆಯ ದಡದಲ್ಲಿ ನೆಲೆಯನ್ನು ಕಂಡುಕೊಂಡರು ಶ್ರೀ ರಾಘವೇಂದ್ರ ಮಹಾಸ್ವಾಮಿಗಳವರು. ಶ್ರೀಮೂಲ ರಾಮದೇವರು ಶ್ರೀ ರಾಘವೇಂದ್ರ ಯತಿ ಸಾರ್ವಭೌಮರ ಪರಂಪರೆಗೆ ಆರಾಧ್ಯ ದೇವರು.ಮರ್ಯಾದಾ ಪುರುಷೋತ್ತಮನಾಗಿ ಮನುಕುಲಕ್ಕೆ ಆದರ್ಶ ವ್ಯಕ್ತಿತ್ವವೊಂದನ್ನು ಪ್ರಕಟಿಸಿದ ಮಹಾನುಭಾವ ರಾಮ,ಶ್ರೀರಾಮನಾದ, ಭಗವಾನ್ ಶ್ರೀರಾಮಚಂದ್ರನೇ ಆದ.ಇಂತಹ ಅಪ್ರತಿಮ ಪ್ರತಿಮೆಯ ಆರಾಧಕರಾದ ರಾಯರು ಮನುಕುಲದ ಉತ್ಕ್ರಾಂತಿಯನ್ನು ಒಂದು ದಿವ್ಯ ಮನಃಸ್ಥಿತಿಯ ವ್ಯಾಖ್ಯಾನ ಮತ್ತು ಮಾನವ ಮನಸ್ಸುಗಳಲ್ಲಿ ಸ್ಥಾಪಿಸುವ ಕಾರ್ಯ ನಿರ್ವಹಿಸಿದರು.ಶ್ರೀ ರಾಮ ಒಂದು ಸಂದೇಶ, ರಾಯರು ಈ ಪ್ರಭೆಯ ಅಥವಾ ಮೌಲ್ಯದ ಪ್ರಚಾರಕ.ಈ ಕಲ್ಪನೆ ಮತ್ತು ಅನುಸಂಧಾನಗಳೇ ನಮ್ಮ ಸಂಸ್ಕೃತಿಯ ಹೆಚ್ಚುಗಾರಿಕೆ,ಗುರುವಿನಿಂದ ಭವರೋಗ ಕಳೆದುಕೊಳ್ಳುವುದು ಸಾಧುವಾದ ವಿಧಾನವೇ ಹೌದಲ್ಲ. ನಾವು ಯಾವುದರ ಮುಂದೆ ಲಘುವಾಗುತ್ತೇವೆಯೋ ನಮ್ಮ ಮುಂದಿರುವುದು, ಅದು ‘ಗುರು’. ದೊಡ್ಡದು,ಆಶ್ರಯ ಸ್ಥಾನ, ಶಿಸ್ತಿನ ನೆಲೆ, ಜ್ಞಾನ ರಾಶಿ ಎಂಬಿತ್ಯಾದಿ ಅರ್ಥಾನುಸಂಧಾನಗಳಿಂದ ಗುರುವನ್ನು ಸ್ವೀಕರಿಸಿದರೆ ಅಥವಾ ಆವಾಹಿಸಿಕೊಂಡರೆ ಈ ಗುರುವಲ್ಲದೆ ಬೇರೆ ಯಾರು ನಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಬಲ್ಲರು? 'ಅನ್ಯಥಾ ಶರಣಂ ನಾಸ್ತಿ' ಎಂಬ ಭಾವದೊಂದಿಗೆ ಗುರುವಿಗೆ ಶರಣು. ಯೋಗಿಯಾದರೂ ಶುಭಯೋಗವನ್ನು ಅನುಗ್ರಹಿಸುವ ಶಿಷ್ಯ ವಾತ್ಸಲ್ಯವಿರುವ ಶ್ರೀ ಗುರುರಾಘವೇಂದ್ರ ಸ್ವಾಮಿಗಳು ಭಕ್ತಜನ ಮಂದಾರ, ದೀನ ಜನ ದಯಾಸಾಗರ. ಸತ್ಯಜ್ಞಾನ - ಪರಮಾತ್ಮಾನುಭವ ಸಿದ್ಧಿಗೆ ಗುರುವೇ ಪರಮೋಚ್ಚ ಸಾಧನ. ಗುರುಕೃಪೆಯಿಂದ ಭವದಲ್ಲಿ ಬದುಕಿ ಭವಸಾಗರವನ್ನು ಉತ್ತರಿಸಬಹುದು. ಇದು ಭಾರತೀಯ ಚಿಂತನೆ. ಆದುದರಿಂದಲೇ ನಮ್ಮ ಸಂಸ್ಕೃತಿಯಲ್ಲಿ ‘ಗುರು’ ಸಾಕ್ಷಾತ್ ಪರಬ್ರಹ್ಮ. ತಂದೆ, ಅಮ್ಮ, ಬಂಧು, ಮಿತ್ರ, ನ್ಯಾಯ ನಿಷ್ಠುರನಾಗಿ ‘ವಿದ್ಯೆ’ ಎಂಬ ಅಮೇಯ ಸತ್ಯ ತಿಳಿವಳಿಕೆಯನ್ನು ಬೋಧಿಸುತ್ತಾ ಮಾನವ ಸ್ವರೂಪವನ್ನು ತಿದ್ದಿ ನಿಯಮಿತಗೊಳಿಸುವವ ಗುರು. ಹಾಗಾಗಿ ಆರಂಭವೇ ಶ್ರೀ ಗುರುಭ್ಯೋ ನಮಃ ಎಂದಲ್ಲವೇ ? ಒಡನಾಟ, ಅನುಸರಿಸುವಿಕೆಗಳು ಕಾರಣವಾಗಿ, ಪ್ರೀತಿ ವಿಶ್ವಾಸಗಳೇ ಪೂರಕವಾಗಿ ಗುರು ಪರಮ ಆಪ್ತನಾಗುತ್ತಾನೆ. ಆತ್ಮೀಯತೆ ಗುರುವಿನಿಂದ ಸನ್ಮಾರ್ಗ, ಕಷ್ಟಗಳಿಗೆ ಪರಿಹಾರ, ನಿರಾತಂಕ ಬದುಕಿಗೆ ಸತ್ಪಥ ಮುಂತಾದುವುಗಳನ್ನು ನಿರೀಕ್ಷಿಸುವಂತೆ ಪ್ರೇರೇಪಿಸುತ್ತದೆ. ಬಹುಶಃ ಇದೇ ಗುರು-ಶಿಷ್ಯ ಸಂಬಂಧದ ಅನನ್ಯತೆ. ನಿಷ್ಕಲ್ಮಶ ಭಕ್ತಿಗೆ ಒಲಿಯುವ ರಾಯರು ಮಂತ್ರಾಲಯದಲ್ಲಿ ವೃಂದಾವನಸ್ಥರಾಗಿಯೇ ಇದ್ದುಕೊಂಡು ಪವಾಡಗಳ ಮೂಲಕ, ಪ್ರತ್ಯಕ್ಷ ಪ್ರಮಾಣಗಳ ಹಾಗೂ ಅನುಭವ ರೂಪದಲ್ಲಿ ಭಕ್ತಕೋಟಿಯನ್ನು ಅನುಗ್ರಹಿಸುತ್ತಾರೆ ಎಂಬುದು ನಂಬಿಕೆ. ಈ ಪ್ರತೀತಿಯನ್ನು ಒಪ್ಪಿದವರು, ಅನುಗ್ರಹೀತರಾದವರ ಸಂಖ್ಯೆ ಅಪಾರ. ಅವರವರ ಭಾವಕ್ಕೆ, ಭಕ್ತಿಗೆ ತೆರನಾಗಿ ಭಗವಂತ. ಅಥವಾ ಭಗವಂತ ರೂಪಿ ಗುರು. ತತ್ತ್ವ ಜ್ಞಾನಿಯಾಗಿ ,ಅಪಾರ ವಾಙ್ಮಯ ನಿರ್ಮಾಪಕರಾಗಿ ,ಪವಾಡಗಳನ್ನು ಮೆರೆದು ಅವಧೂತರಾಗಿ ಲೋಕಕ್ಕೆ ಒಳಿತನ್ನು ಬಯಸಿದರು‌. ನಾಸ್ತಿಕ ಯುಗದಲ್ಲೂ ಆಸ್ತಿಕತೆಯನ್ನು ಪೋಷಿಸಿದರು.ವೈಜ್ಞಾನಿಕ ಪ್ರಗತಿಯಲ್ಲೂ ಆಧ್ಯಾತ್ಮಿಕ ಸಿದ್ಧಿಯ ಮಹತ್ವವನ್ನು ತಿಳಿಸಿದರು.ಭೌತಿಕ ಪ್ರಗತಿ ,ವೈಜ್ಞಾನಿಕ ಮುನ್ನೋಟದಲ್ಲಿ ಧರ್ಮದ ಆಸಕ್ತಿ ಕಡಿಮೆಯಾಗದಂತೆ ಬೋಧಿಸಿದರು.ಇವರ ಮಹಿಮೆಗೆ ಸಮಾಜ ಬೆರಗಾಯಿತು.ಅನುಗ್ರಹದಿಂದ ಪಾವನವಾಯಿತು ಎಂಬುದು ಪ್ರತೀತಿ. ಆಚಾರ್ಯ ಮಧ್ವರ ತಾತ್ವಿಕ ಸಿದ್ಧಾಂತವನ್ನು ರಾಯರು ಮತ್ತೊಮ್ಮೆ ಭಾರತೀಯರ ಮುಂದೆ ಅನಾವರಣಗೊಳಿಸಿದರು.ಐವತ್ತಕ್ಕೂ ಹೆಚ್ಚಿನ ಧಾರ್ಮಿಕ ಗ್ರಂಥಗಳನ್ನು ರಚಿಸಿದರು.ಭಗವದ್ಗೀತೆಯ ಕುರಿತು ಮೂರು,ಉಪನಿಷತ್ತುಗಳ ಬಗ್ಗೆ ಹತ್ತು,ಬ್ರಹ್ಮಸೂತ್ರಗಳ ಮೇಲೆ ಏಳು ,ವಿಜಯ ತೀರ್ಥರ ಹದಿನೇಳು ಕೃತಿಗಳಿಗೆ ಟಿಪ್ಪಣಿ ,ಋಗ್ವೇದಕ್ಕೆ ಮಂತ್ರಾರ್ಥ ಮಂಜರಿ ,ಇತಿಹಾಸಕ್ಕೆ ಸಂಬಂಧಿಸಿದ ಮೂರು ಗ್ರಂಥಗಳು ರಾಯರ ಕೃತಿಗಳು.ಪರಿಮಳ, ಭಾವದೀಪ,ತತ್ತ್ವ ಮಂಜರಿ ,ತಂತ್ರ ದೀಪಿಕೆಗಳು ಜನಜನಿತವಾದ ಗ್ರಂಥಗಳು.ತಿಳಿಯಾದ ಶೈಲಿ,ಸರಳ ನಿರೂಪಣೆಯಿಂದ ರಾಘವೇಂದ್ರರ ಕವಿತ್ವ ಲೋಕಮಾನ್ಯ. ತಂಜಾವೂರಿನಲ್ಲೊಮ್ಮೆ ಬರಗಾಲ ಬಂದಾಗ ಅಲ್ಲಿಗೆ ಧಾವಿಸಿದ ರಾಯರು ಮೊಕ್ಕಾಂ ಹೂಡಿದರು.ಜಪಾನುಷ್ಠಾನ‌ ಪೂಜೆಗಳೊಂದಿಗೆ ನಿತ್ಯ ಸಾವಿರಾರು ಮಂದಿಗೆ ಅನ್ನದಾನ ಮಾಡಿದರು.ಭಗವಂತನನ್ನು ಭಕ್ತಿಯಿಂದಲೂ ಭಾವನಾತ್ಮಕವಾಗಿಯೂ ಸ್ವೀಕರಿಸಬೇಕು.,ಬೌದ್ಧಿಕ ಪರಿಪಕ್ವತೆ ಇರಲಿ ಎಂದು ಸಾರಿದರು.ವೈದಿಕ ವಿಚಾರ ಧಾರೆಯನ್ನು ವಿಶ್ವಧರ್ಮದ ವಿಚಾರಧಾರೆಯನ್ನು ವಿಶ್ವಧರ್ಮದ ವಿಶಾಲ ವೇದಿಕೆಯಲ್ಲಿ ನೆಲೆಗೊಳಿಸಿದರು.ಹರಿದಾಸರಿಗೆ ಮಾರ್ಗದರ್ಶಕ ಕೈದೀವಿಗೆಯಾದರು.ಮಂತ್ರಾಲಯದಲ್ಲಿ ಸಜೀವ ವೃಂದಾವನ ಪ್ರವೇಶ ಮಾಡಿದ ಶ್ರೀ ರಾಘವೇಂದ್ರರು ಶ್ರಾವಣ ಕೃಷ್ಣ ದ್ವಿತೀಯದಂದು ಶ್ರೀರಾಮನ ಪಾದಸೇರಿದರು. [ಆ.13,14,15 : ರಾಘವೇಂದ್ರ ಗುರುಸಾರ್ವಭೌಮರ ಆರಾಧನೋತ್ಸವ] ಬರಹ : ಕೆ.ಎಲ್.ಕುಂಡಂತಾಯ

ಉಡುಪಿ ಜಿಲ್ಲಾ ಜೆಡಿಎಸ್ ವಿಕಲಚೇತನ ಘಟಕದ ಅಧ್ಯಕ್ಷರಾದ ವಿಲ್ಫ್ರೆಡ್ ವಿ ಗೋಮ್ಸ್ ವಿಧಿವಶ

Thumbnail
Posted On: 11 Aug 2022, 02:10 PM

ಕಾಪು : ಉಡುಪಿ ಜಿಲ್ಲಾ ಜೆಡಿಎಸ್ ವಿಕಲಚೇತನ ಘಟಕದ ಅಧ್ಯಕ್ಷರಾದ ವಿಲ್ಫ್ರೆಡ್ ವಿ ಗೋಮ್ಸ್ ವಿಧಿವಶರಾಗಿದ್ದಾರೆ. ವಿಲ್ಫ್ರೆಡ್ ವಿ ಗೋಮ್ಸ್ ಶಿರ್ವ ನಿವಾಸಿಯಾಗಿದ್ದು ಉಡುಪಿ ಜಿಲ್ಲೆಯ ವಿಕಲಚೇತನ ಸಂಘದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ವಿಕಲಚೇತನ ಒಕ್ಕೂಟದ ಸದಸ್ಯರಾಗಿ, ಸಮಾಜ ಸೇವೆಯನ್ನು ಸಲ್ಲಿಸುತ್ತಿದ್ದರು. ಪಕ್ಷದಲ್ಲಿ ಸಕ್ರಿಯರಾಗಿದ್ದು,1997ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗ್ಗಡೆ ಅವರಿಂದ ಸಮಾಜ ಸೇವೆಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು. ವಿಲ್ಫ್ರೆಡ್ ವಿ ಗೋಮ್ಸ್ ರವರ ನಿಧನಕ್ಕೆ ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರು ಸಂತಾಪ ವ್ಯಕ್ತಪಡಿಸಿದ್ದಾರೆ.