Updated News From Kaup
ಮಟ್ಟಾರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ - ದಶಮಾನೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಜನಜಾಗೃತಿ ಅಭಿಯಾನ

Posted On: 20-03-2022 10:29PM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದಶಮಾನೋತ್ಸವದ ಪ್ರಯುಕ್ತ ಬೃಹತ್ ಸ್ವಚ್ಛತಾ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಜರಗಿತು.

ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ್ ನಾಯಕ್, ಆಶಾ ಆಚಾರ್ಯ, ಮಮತಾ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಅಧ್ಯಕ್ಷರಾದ ಜಯಪ್ರಕಾಶ್ ಪ್ರಭು, ಮಟ್ಟಾರು ಘಟಕ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಜಗದೀಶ ಆಚಾರ್ಯ, ಸಂಚಾಲಕ ವಿಶ್ವನಾಥ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ನಾಯಕ್, ರಾಜೇಶ್ ನಾಯ್ಕ್, ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರು ಮತ್ತು ನಾಗರಿಕರು ಪಾಲ್ಗೊಂಡಿದ್ದರು. ಅಟ್ಟಿಂಜ ಸೇತುವೆಯಿಂದ ಮಟ್ಟಾರು ಯು.ಬಿ.ಎಂ.ಸಿ ಶಾಲೆಯ ವರೆಗೆ ಸ್ವಚ್ಛತೆ ಮಾಡಲಾಯಿತು.
ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಕಾಪು -ಪಡು ವತಿಯಿಂದ ಜರಗಲಿರುವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Posted On: 20-03-2022 11:53AM
ಕಾಪು : ಕಾಪು -ಪಡು ಇಲ್ಲಿನ ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಇದರ ಆಶ್ರಯದಲ್ಲಿ ಏಪ್ರಿಲ್ 16, ಶನಿವಾರ ಮಧ್ಯಾಹ್ನ 12: 30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮ ಮತ್ತು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮಂಡಳಿ ಇವರಿಂದ ಸಾರ್ವಜನಿಕ ಹರಕೆಯ ಯಕ್ಷಗಾನ ಬಯಲಾಟ ಶ್ರೀ ಶನೀಶ್ವರ ಮಹಾತ್ಮೆ ಜರಗಲಿದೆ. ಈ ಪ್ರಯುಕ್ತ ಮಾಚ್೯ 20 ರಂದು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷ ಅನಿಲ್ ಕುಮಾರ್ , ಹೊಸ ಮಾರಿಗುಡಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ದಾರದ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ ಶೆಟ್ಟಿ ಬಾಲಾಜಿ, ಪುರಸಭಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಮತ್ತು ಕ್ಲಬ್ ನ ಕೋಶಾಧಿಕಾರಿ ಅನಿಲ್ ಕುಮಾರ್ ಪಾಡಿಮನೆ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಕಲ್ಯಾಣಪುರ : ಕರಾವಳಿಯಿಂದ ಕಾಶ್ಮೀರಕ್ಕೆ ಕಾಲ್ನಡಿಗೆಯಲ್ಲಿ ಕ್ರಮಿಸಿ ಹುಲಿವೇಷದ ಸಾಂಸ್ಕೃತಿಕ ಸೊಗಡನ್ನು ಪ್ರದರ್ಶಿಸಿದ ಹರ್ಷೆಂದ್ರ ಆಚಾರ್ಯಗೆ ಸನ್ಮಾನ

Posted On: 20-03-2022 09:23AM
ಉಡುಪಿ : ಉಡುಪಿ ಕರಾವಳಿಯಿಂದ ಭಾರತದ ತುತ್ತ ತುದಿಯ ಕಾಶ್ಮೀರದವರೆಗೆ ಒಂಟಿಯಾಗಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ, ಅಲ್ಲಿ ಹುಲಿವೇಷದ ಸಾಂಸ್ಕೃತಿಕ ಸೊಗಡನ್ನು ಪ್ರದರ್ಶನಗೈದು ಮೆಚ್ಚುಗೆ ಗಳಿಸಿದ ವಿಶೇಷ ವ್ಯಕ್ತಿತ್ವದ ಹರ್ಷೆಂದ್ರ ಆಚಾರ್ಯ ಎಮ್ ಜಡ್ಡು ಬ್ರಹ್ಮಾವರ ಇವರನ್ನು ರೋಟರಿ ಕ್ಲಬ್ ಕಲ್ಯಾಣಪುರದ ವತಿಯಿಂದ ಇತ್ತೀಚೆಗೆ ಗುರುತಿಸಿ ಅಭಿನಂದಿಸಲಾಯಿತು.
ಉಡುಪಿಯಿಂದ ಬಹುತೇಕ ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿ ಮಾರ್ಗಗಳ ಮುಖೇನ ದಿನಕ್ಕೆ ಸರಿ ಸುಮಾರು ಬೆಳಗಿನ 6 ಘಂ. ಯಿಂದ ಸಂಜೆ 6. ಘಂಟೆ ಯವರೆಗೆ ಕಾಲ್ನಡಿಗೆಯಲ್ಲಿ ಸಾಗುವ ಮೂಲಕ ಕಾಶ್ಮೀರವನ್ನು ಯಶಸ್ವಿಯಾಗಿ ತಲುಪಿ ಕಿರಿಯ ವಯಸ್ಸಿನ ಇವರ ಸಾಧನೆ ಅತ್ಯಂತ ಶ್ಲಾಘನೀಯ.
ಸನ್ಮಾನ ಸ್ವೀಕರಿಸಿದ ಇವರು, ತನ್ನ ಮುಂದಿನ ದಿನಗಳಲ್ಲಿ ರಸ್ತೆ ಮಾರ್ಗವಾಗಿ ಸೈಕ್ಲಿಂಗ್ ಮೂಲಕ ಉಡುಪಿಯಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವ ಯೋಜನೆಗೆ, ಸಿದ್ದತೆ ಹಾಗೂ ಅಭ್ಯಾಸಕ್ಕೆ ಪ್ರೋತ್ಸಾಹ ಮಾಡುತ್ತಿರುವ ಕ್ಲಬ್ ನ ಸದಸ್ಯರು ಗಳಿಗೆ ಕ್ರತಜ್ಞತೆ ಸಲ್ಲಿಸಿದರು.
ಅಧ್ಯಕ್ಷರಾದ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್, ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜಾರಾಂ ಭಟ್, ವಲಯ ಸೇನಾನಿ ಬ್ರಯಾನ್ ಡಿಸೋಜ, ಮಾಜಿ ಸಹಾಯಕ ಗವರ್ನರ್ ಎಮ್ ಮಹೇಶ್ ಕುಮಾರ್ ನಿಯೋಜಿತ ಅಧ್ಯಕ್ಷೆ ಶಾರ್ಲೆಟ್ ಲೂವಿಸ್ ಮತ್ತಿತರ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಲೆನ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.
ಪ್ರೊಫೆಸರ್ ಮೇಟಿ ಮುದಿಯಪ್ಪ ವಿಧಿವಶ

Posted On: 18-03-2022 05:23PM
ಉಡುಪಿ : ಉತ್ತಮ ಸಾಹಿತಿ , ರಂಗನಟ, ಶಿಕ್ಷಕ , ಭಾಷಣಕಾರ, ಪರಿಸರ ಪ್ರೇಮಿ, ಸಂಘಟಕ ,ಚಲನ ಚಿತ್ರ ನಟ ಪೊ. ಮೇಟಿ ಮುದಿಯಪ್ಪ ಅಲ್ಪ ಕಾಲದ ಅಸೌಖ್ಯದಿಂದ ವಿಧಿವಶರಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕ ಕಳೆದ ೩೫ ವರುಷಗಳಿಂದ ಶಿಷ್ಯರ ಮೆಚ್ಚಿನ ಗುರುಗಳಾಗಿ ಸೇವೆ ಸಲ್ಲಿಸಿದ್ದು ಈಗಲೂ ಹೋದಕಡೆಗಳೆಲ್ಲ ಶಿಷ್ಯವೃಂದ ಇವರನ್ನು ಗೌರವಿಸುವುದು ಇವರ ಜನಪ್ರಿಯತೆಗೆ ಸಾಕ್ಷಿ.
ತಮ್ಮ ಸರಳ ಗುಣ ದಿಂದ ಎಲ್ಲರೊಂದಿಗೆ ಬೆರೆಯುವ ಮೇಟಿ ಯವರು ಕಿರಿಯರೆಂಬ ಬೇಧ ಭಾವವಿಲ್ಲದೆ ಪ್ರತಿಭೆಗೆ ಮನ್ನಣೆ ಹಾಗು ಪ್ರೋತ್ಸಾಹ ಕೊಡುವ ಸ್ನೇಹ ಜೀವಿ. ಸದಾ ಹಸನ್ಮುಖಿ ತಮ್ಮ ವಿಶಿಷ್ಟ ಪೋಷಾಕಿನಿಂದ ನೆನಪಿನಲ್ಲಿ ಉಳಿಯುತ್ತಾರೆ. ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಮಾನವೀಯ ಮೌಲ್ಯಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದು ಬಹಳಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಲೋಕಕ್ಕೆ ತಮ್ಮದೆ ಆದ ಕೊಡುಗೆ ನೀಡಿದ ಮೇಟಿಯವರ ಹಲವಾರು ಕೃತಿಗಳು ಲೋಕಾರ್ಪಣೆ ಗೊಂಡಿದೆ . ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕೂಡ ಇವರು ಗಮನಾರ್ಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ . ಉಧ್ಘೋಷ , ಕಡಲಾಳದ ಮುತ್ತು ನನ್ನೊಳಗಿನ ಕವಿತೆ ,ಮಾನವೀಯತೆಯ ಸುತ್ತ ಮುತ್ತ , ಕಡ್ಯಾವ ನೆನಪು ಇವರ ಕೃತಿಗಳಲ್ಲಿ ಕೆಲವು.
ಹೈದರಾಬಾದ್ ಕರ್ನಾಟಕದಿಂದ ಬಂದು ರಂಗದ ಬಗ್ಗೆ ಇರುವ ಪ್ರಾವಿಣ್ಯತೆಯಿಂದ ಉಡುಪಿಯ ಪ್ರತಿಷ್ಠಿತ ರಂಗಭೂಮಿ (ರಿ ) ನಡೆಸುವ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ತೀರ್ಪುಗಾರರಲ್ಲಿ ಓರ್ವರಾಗಿ ಭಾಗವಹಿಸಿದ ನಂತರ ರಂಗಭೂಮಿ (ರಿ.) ಉಡುಪಿಯ ಖಾಯಂ ಸದಸ್ಯರಾದದ್ದು ವಿಶೇಷ. 1985 ರಿಂದ ರಂಗಭೂಮಿ (ರಿ.) ಉಡುಪಿಯ ಒಡನಾಡಿಯಾಗಿದ್ದು ಅಂದಿನಿಂದ ಇಂದಿನವರೆಗೂ ರಂಗಚಟುವಟಿಕೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಸ್ವತಃ ನಟನಾಗಿದ್ದ ಮೇಟಿಯವರು ರಂಗಭೂಮಿ(ರಿ.) ಉಡುಪಿಯ ನಾಟಕಗಳಾದ ನಾಗಮಂಡಲ,ಗಾಂಧಿ ನಗರ ,ಚಮ್ಮಾರನ ಚಾಲಾಕಿ ಹೆಂಡತಿ,ಹೇಮಂತ ,ಸೂರ್ಯ ಶಿಕಾರಿ, ಪರಿಹಾರ ಹೀಗೆ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ ಹಾಗೂ ರಾಜ್ಯದ ಹೊರರಾಜ್ಯದಲ್ಲಿ ನಡೆದ ಪ್ರದರ್ಶನಗಳಲ್ಲಿ ರಂಗಭೂಮಿ (ರಿ.) ಉಡುಪಿಯನ್ನು ಪ್ರತಿನಿಧಿಸಿದ್ದಾರೆ .ಮೂರು ದಶಕಕ್ಕೂ ಹೆಚ್ಚು ಉಡುಪಿಯ ರಂಗಭೂಮಿಯ ಜೊತೆ ಜೊತೆಯಾಗಿ ನಡೆದಿದ್ದು ಹಲವಾರು ಸಲ ರಂಗಭೂಮಿ ಕಾರ್ಯಕ್ರಮಕ್ಕೆ ಸಂಚಾಲಕರಾಗಿ ಕಾರ್ಯಕ್ರಮವನ್ನು ಚೆಂದಗಾಣಿಸಿ ಕೊಟ್ಟಿದ್ದಾರೆ.
ಸಾಮಾನ್ಯ ಸದಸ್ಯರಾಗಿ , ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ, ಜೊತೆ ಕಾರ್ಯದರ್ಶಿಗಳಾಗಿ ತನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ರಂಗಭೂಮಿ ಸಾಗಿ ಬಂದ ದಾರಿಯಲ್ಲಿ ತಮ್ಮ ಹೆಜ್ಜೆ ಗುರುತನ್ನೂ ಮೂಡಿಸಿರುತ್ತಾರೆ.
ಲಸಿಕೆ ನೀಡುವುದರಿಂದ ಮಕ್ಕಳಿಗೆ ಕೋವಿಡ್ನಿಂದ ಸಂಪೂರ್ಣ ಸುರಕ್ಷೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 17-03-2022 03:15PM
ಉಡುಪಿ : ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ಇಂದಿನಿಂದ 12 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತವಾಗಿ ಕೋರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತಿದ್ದು, ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಇದನ್ನು ಮುಂಜಾಗ್ರತೆಯಾಗಿ ಎಲ್ಲಾ ರೀತಿಯಲ್ಲಿ ಪರೀಕ್ಷೆಗಳಿಗೆ ಒಳಪಡಿಸಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಖಾತ್ರಿಯಾಗಿರುವುದರಿಂದ, ಜಿಲ್ಲೆಯ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆ ಕೊಡಿಸುವ ಮೂಲಕ ಮಕ್ಕಳನ್ನು ಕೋವಿಡ್ನಿಂದ ಸಂಪೂರ್ಣ ಸುರಕ್ಷೆ ಒದಗಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಅಜ್ಜರಕಾಡುವಿನ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನಡೆದ, 12 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಲಸಿಕೆ ಕೊಡಿಸಲು ಎಲ್ಲಾ ಪೋಷಕರು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಮಕ್ಕಳ ಪೋಷಕರ ಸಭೆಗಳನ್ನು ನಡೆಸಿ, ಅಗತ್ಯ ಮಾಹಿತಿ ನೀಡುವಂತೆ ಎಲ್ಲಾ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. 2008 ರಿಂದ 2010 ರ ಮಾರ್ಚ್ 15 ರೊಳಗೆ ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದು, ಮೊದಲ ಡೋಸ್ ಪಡೆದ 28 ದಿನಗಳ ನಂತರ 2 ನೇ ಡೋಸ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ನೀಡುವಲ್ಲಿ 100% ಸಾಧನೆ ಆಗಿದ್ದು, 12 ರಿಂದ 14 ವರ್ಷದವರೆಗಿನ ಮಕ್ಕಳ ಲಸಿಕೆ ನೀಡುವಲ್ಲಿ ಸಹ 100% ಸಾಧನೆ ಮಾಡಲು ಹಾಗೂ ಉಡುಪಿ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯಾಗಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಆಯುಷ್ ಆಸ್ಪತ್ರೆಯ ವೈದ್ಯ ಡಾ.ದಿನಕರ ಡೋಂಗ್ರೆ, ಜಿಲ್ಲಾಸ್ಪತ್ರೆಯ ವೈದ್ಯ ಡಾ. ಚಂದ್ರಶೇಖರ ಅಡಿಗ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಯಾಕೂಬ್ ಖಾದರ್ ಗುಲ್ವಾಡಿ ಅವರ ನಿರ್ದೇಶನದ ಗೋ ಕೊರೋನಾ ವೀಡಿಯೋ ಗೀತೆಯನ್ನು ಬಿಡುಗಡೆಗೊಳಿಸಲಾಯಿತು.
ವಿದ್ಯಾರ್ಥಿ ಆತ್ಮಹತ್ಯೆ : ಡೊನೇಷನ್ ಪಡೆದು ಉತ್ತಮ ಶಿಕ್ಷಣ ನೀಡದ ಕಾಲೇಜು ಮುಖ್ಯಸ್ಥ ಮತ್ತು ಪರೀಕ್ಷೆಗೆ ಕುಳಿತುಕೊಳ್ಳಲು ಬಿಡದ ಪ್ರಾಧ್ಯಾಪಕನ ವಿರುದ್ಧ ದೂರು ದಾಖಲು

Posted On: 16-03-2022 11:04PM
ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಹೊಟೆಲ್ ಮ್ಯಾನೇಜ್ಮೆಂಟ್ ಕಾಲೇಜು ಡೊನೇಷನ್ ಪಡೆದು ಉತ್ತಮ ಶಿಕ್ಷಣ ನೀಡದಿರುವ ಮತ್ತು ಅಲ್ಲಿನ ಪ್ರಾಧ್ಯಾಪಕರೋರ್ವರ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೈದ ಪ್ರಕರಣ ಉರ್ವ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರು ನಗರದ ಕುಮಾರಸ್ವಾಮಿ ಬಡಾವಣೆಯ ನಿವಾಸಿಯಾದ ಭರತ್ ಭಾಸ್ಕರ್ (20) 2020-21ನೇ ಸಾಲಿನಲ್ಲಿ ಹೆಚ್ಚಿನ ಡೊನೇಷನ್ ನೀಡಿ ಮಂಗಳೂರು ನಗರದ ಹೊಟೆಲ್ ಮ್ಯಾನೇಜ್ಮೆಂಟ್ ಕಾಲೇಜೊಂದಕ್ಕೆ ಸೇರುತ್ತಾನೆ. ಆದರೆ ಅಲ್ಲಿಯ ಪ್ರಾಧ್ಯಾಪಕರು ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡದೆ, ಅಲ್ಲಿನ ಪ್ರಾಧ್ಯಾಪಕರೋರ್ವರು ಪ್ರಾಜೆಕ್ಟ್ ವಕ್೯ ಸರಿಯಿಲ್ಲ ಎಂಬ ನೆಪದಲ್ಲಿ ಪರೀಕ್ಷೆಗೆ ಕುಳಿತುಕೊಳ್ಳಲಾಗದು ಎಂದು ಮನೆಗೆ ಕಳುಹಿಸಿರುತ್ತಾರೆ.
ಮನನೊಂದ ಆತ ಬೆಂಗಳೂರಿನಲ್ಲಿರುವ ತಾಯಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸದ್ದನ್ನು ಕಂಡು ವಾಟ್ಸಾಪ್ ಸಂದೇಶದ ಮೂಲಕ ಈ ಕಾಲೇಜು ಸರಿಯಿಲ್ಲ ಹಾಗೂ ಕಾಲೇಜಿನಲ್ಲಿ ಪ್ರಾಧ್ಯಾಪಕರಿಲ್ಲ ಆದ್ದರಿಂದ ಈ ಲೋಕ ತ್ಯಜಿಸುತ್ತಿದ್ದೇನೆ ಎಂದಿದ್ದಾನೆ. ನಂತರ ಆತನ ಕಾಲೇಜಿನ ಪ್ರಾಧ್ಯಾಪಕರೋರ್ವರನ್ನು ಆತನ ಹೆತ್ತವರು ಸಂಪರ್ಕಿಸಿದಾಗ ಆತ ತಾನಿರುವ ರೂಮಿನಲ್ಲಿ ಆತ್ಮಹತ್ಯೆಗೈದ ಬಗ್ಗೆ ತಿಳಿದಿರುತ್ತದೆ.
ಈ ಬಗ್ಗೆ ಹೆತ್ತವರು ಡೊನೆಷನ್ ಪಡೆದು ಉತ್ತಮ ಶಿಕ್ಷಣ ನೀಡದ ಕಾಲೇಜಿನ ಮುಖ್ಯಸ್ಥ ಮತ್ತು ಅವಹೇಳನ ಮಾಡುತ್ತಿದ್ದ ಪ್ರಾಧ್ಯಾಪಕನ ಮೇಲೆ ಉರ್ವ ಠಾಣೆಯಲ್ಲಿ ಮಾಚ್೯ 16ರಂದು ದೂರು ದಾಖಲಿಸಿದ್ದಾರೆ.
ಕ್ಯಾನ್ಸರ್ ಇದೆಯೆಂದು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಉದ್ಯಮಿ

Posted On: 15-03-2022 10:09PM
ಮಂಗಳೂರು : ತನಗೆ ಕ್ಯಾನ್ಸರ್ ಇರುವ ಬಗ್ಗೆ ಮಾಹಿತಿ ಅರಿತು ಇದರಿಂದ ಮನನೊಂದು ಮಂಗಳೂರಿನ ಜವಳಿ ಸಂಸ್ಥೆಯ ಮಾಲಿಕರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಣ್ಣಗುಡ್ಡದಲ್ಲಿ ನಡೆದಿದೆ.
ಪ್ರಖ್ಯಾತ ಜವಳಿ ಸಂಸ್ಥೆ ಪಿ.ಕೆ ದೂಜಪೂಜಾರಿ ಇವರ ಭೂಮಿಕಾ ಜವಳಿ ಸಂಸ್ಥೆಯ ಮಾಲಿಕರಾದ ಸುಮ ಸತೀಶ್ ಮಾಚ್೯ 15ರ ಬೆಳಿಗ್ಗೆ ಮಣ್ಣಗುಡ್ಡದಲ್ಲಿರುವ ಅಭಿಮಾನ್ ಮ್ಯಾನ್ಷನ್ ನ ತಮ್ಮ ಗೃಹದ ಬಾಲ್ಕನಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಕಾಪು ಸುಗ್ಗಿ ಮಾರಿಪೂಜೆಗೆ ಕ್ಷಣಗಣನೆ : ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ

Posted On: 15-03-2022 07:07PM
ಕಾಪು : ಇಲ್ಲಿನ ಮಾರಿಯಮ್ಮನ ಗರ್ಭಗುಡಿ, ಉಚ್ಚಂಗಿ ಗರ್ಭಗುಡಿ, ಗೋಪುರಗಳು, ಮುಖಮಂಟಪ, ಸುತ್ತುಪೌಳಿ ಹಾಗೂ ಇನ್ನಿತರ ಅಭಿವೃದ್ಧಿ ಯೋಜನೆಗಳ ಸಂಕಲ್ಪದೊಂದಿಗೆ ಸುಮಾರು 30ಕೋಟಿ ರೂಪಾಯಿ ವೆಚ್ಚದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರಥಮ ಹಂತದ ಜೀರ್ಣೋದ್ದಾರ ಕೆಲಸಗಳು ಭರದಿಂದ ಸಾಗುತ್ತಿದ್ದು, ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರಕ್ಕೆ ಶಿಲಾಸೇವೆ ಸಮರ್ಪಣೆಗೆ ಸಂಕಲ್ಪಿಸಲಾಗಿದ್ದು ಅದಕ್ಕೆ ಪೂರಕವಾಗಿ ಮಾರ್ಚ್ 22 ಮತ್ತು 23ರಂದು ನಡೆಯಲಿರುವ ಸುಗ್ಗಿ ಮಾರಿಪೂಜೆಯಂದು ಭಕ್ತಾದಿಗಳಿಗೆ ಶಿಲಾಸೇವೆ ನೀಡಿ ಶಿಲಾ ಪುಷ್ಪ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ. ಮಾರಿಯಮ್ಮನ ಭಕ್ತರಿಗೆ ಶಿಲಾಸೇವೆ ಸಮರ್ಪಣೆಗೆ ವಿಶೇಷ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ದವಾಗಿ ನಡೆಸಲು ನಿರ್ಧರಿಸಲಾಗಿದೆ.
ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮಾ.22 ರಂದು ಮಾರಿಗುಡಿಗೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನ 12:30ಕ್ಕೆ ಅನ್ನಸಂತರ್ಪಣೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಸರತಿ ಸಾಲಿನಲ್ಲಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಮತ್ತು ಶಿಲಾಪುಷ್ಪ ಸಮರ್ಪಣೆ ಯೋಜನೆಯನ್ನು ಸಾಕಾರಗೊಳಿಸುವುದಕ್ಕಾಗಿ ಕಾಪು ಪುರಸಭಾ ವ್ಯಾಪ್ತಿಯ 23 ವಾರ್ಡ್ಗಳಿಂದ ಆರಿಸಲ್ಪಟ್ಟ 500ಕ್ಕೂ ಅಧಿಕ ಮಂದಿ ಸ್ವಯಂ ಸೇವಕರ ತಂಡವನ್ನು ರಚಿಸಲಾಗಿದ್ದು ಭಕ್ತಾದಿಗಳಿಗೆ ಅವರು ಸಂಪೂರ್ಣ ಸಹಕಾರ ನೀಡಲು ಬೇಕಾದ ತರಬೇತಿಯನ್ನು ನೀಡಲಾಗಿದೆ. ಕನಿಷ್ಠ 9 ಶಿಲಾಸೇವೆ ಮತ್ತು ಅದಕ್ಕಿಂತ ಹೆಚ್ಚಿನ ಶಿಲಾಸೇವೆ ನೀಡುವ ಭಕ್ತಾದಿಗಳನ್ನು ಅಮ್ಮನ ಸನ್ನಿದಿಯ ವೇದಿಕೆಯಲ್ಲಿ ಪ್ರಸಾದ ನೀಡಿ ಗೌರವಿಸಲಾಗುವುದು. 9 ಶಿಲಾ ಸೇವೆ (ರೂಪಾಯಿ 9,999) ಮತ್ತು ಅದಕ್ಕಿಂತ ಹೆಚ್ಚಿನ ಶಿಲಾ ಸೇವೆ ನೀಡುವ ಭಕ್ತರು ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಗೊಂಡು, ಅಮ್ಮನ ಕೃಪೆಗೆ ಪಾತ್ರರಾಗಬೇಕೆಂದು ಕೇಳಿ ಕೊಳ್ಳುತ್ತೇವೆ.
ಮಾರ್ಚ್ 22 ಮತ್ತು 23 ರಂದು ಜರಗಲಿರುವ ವಾರ್ಷಿಕ ಸುಗ್ಗಿ ಮಾರಿಪೂಜೆಯ ಸಂದರ್ಭ ಹಿಂದಿನಿಂದ ನಡೆದುಕೊಂಡು ಬಂದಿರುವ ಎಲ್ಲಾ ವಿಧಿವಿಧಾನಗಳನ್ನು ಯಾವುದೇ ತೊಂದರೆಯಾಗದಂತೆ ನಡೆಸಿಕೊಂಡು ಬರಲಾಗುವುದು. ಮಾರ್ಚ್ 22 ರ ಮಂಗಳವಾರ ಬೆಳಿಗ್ಗೆ 9ಗಂಟೆಯಿಂದ ಮಾರ್ಚ್ 23ರ ಸಂಜೆ 6 ಗಂಟೆಯವರೆಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ಸಿದ್ಧತೆಗಳನ್ನು ನಡೆಸಲಾಗಿದೆ. ಸ್ವಯಂ ಸೇವಕರು ಮಾತ್ರವಲ್ಲದೆ ಪೋಲಿಸ್ ಇಲಾಖೆ, ಗೃಹರಕ್ಷಕದಳ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಪೋಲಿಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು.
ಪಾರ್ಕಿಂಗ್ ಸೌಲಭ್ಯಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ಎರಡು ದಿನಗಳ ಕಾಲ ನಿರಂತರ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಊರ ಪರವೂರಿನ ಭಕ್ತಾಧಿಗಳು ನಮ್ಮೊಂದಿಗೆ ಕೈಜೋಡಿಸುವಂತೆ ವಿನಂತಿಸುತ್ತೇವೆ ಎಂದು ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ನಮಗೆ ನಿರಾಸೆಯಾಗಿದೆ : ಎಸ್. ಐ. ಓ. ಕರ್ನಾಟಕ

Posted On: 15-03-2022 02:45PM
ಉಡುಪಿ : ಕರ್ನಾಟಕದ ಹೈಕೋರ್ಟ್ ಇಂದು ನೀಡಿದ ತೀರ್ಪಿನಿಂದ ನಮಗೆ ನಿರಾಸೆಯಾಗಿದೆ. ಹಿಜಾಬ್ ಇತರರಿಗೆ ಹಾನಿ ಮಾಡುವುದಿಲ್ಲ ಅಥವಾ ಮನ ನೋಯಿಸುವುದಿಲ್ಲ ಎಂದು ಎಸ್. ಐ. ಓ. ಕರ್ನಾಟಕ ತಿಳಿಸಿದೆ.
ವಿದ್ಯಾರ್ಥಿಗಳನ್ನು ತಮ್ಮ ಆತ್ಮಸಾಕ್ಷಿ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಿಕೊಳ್ಳುವ ಸ್ಥಿತಿಗೆ ನ್ಯಾಯಾಲಯವು ತರಲಾರದು ಎಂದು ನಾವು ನಿರೀಕ್ಷಿಸಿದ್ದೇವು. ಧಾರ್ಮಿಕ ಆಚರಣೆಗಳು ವ್ಯಕ್ತಿ ಮತ್ತು ದೇವನ ನಡುವಿನ ಸಂಬಂಧದ ಮೂಲಭೂತ ಅಂಶವಾಗಿದೆ ಮತ್ತು ಎಲ್ಲರೂ ಇದನ್ನು ಗೌರವಿಸಬೇಕು ಎಂದು ಪತ್ರಿಕಾ ಪಕಟನೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆ ಕಟ್ಟುವುದು ಸುಲಭ, ಮುಂದುವರಿಸಿಕೊಂಡು ಹೋಗುವುದು ಕಷ್ಟ : ಶ್ವೇತಾ ಜೈನ್

Posted On: 15-03-2022 11:53AM
ಮಂಗಳೂರು : ಜೈನ ಧರ್ಮೀಯರು ಸಂಘಟಿತರಾಗಬೇಕು. ತಮ್ಮಲ್ಲಿ ಕರಗತವಾಗಿರುವ ನಾಯಕತ್ವ ಗುಣಗಳ ಮೂಲಕ ಸಮಾಜ ಸೇವಾ ಚಟುವಟಿಕೆಗಳನ್ನು ಸಕ್ರಿಯವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದು ಮೂಡುಬಿದಿರೆಯ ಹಿರಿಯ ನ್ಯಾಯವಾದಿ ಹಾಗೂ ಮಂಗಳೂರಿನ ಭಾರತೀಯ ಮಿಲನ್ ಸಹ ಕಾರ್ಯದರ್ಶಿ ಶ್ವೇತಾ ಜೈನ್ ಹೇಳಿದರು. ಬೆಳಗಾವಿ ನಗರದ ಯಳ್ಳೂರ ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ ದಶಮಾನೋತ್ಸವದಲ್ಲಿ ಅವರು ಮಾತನಾಡಿದರು.
ಜೈನ ಧರ್ಮದ ವೀರ ಪರಂಪರೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಅನೇಕ ಜೈನ ಅರಸರು ಆಳಿದ್ದರು. ಅಂಥ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದು ಬೆಳಗಾವಿಯಲ್ಲಿ ಜೈನ ಮೈತ್ರಿಕೂಟ ಸ್ಥಾಪನೆ ಮಾಡಿಕೊಂಡ ಈ ಸಂಘಟನೆ ಇಂದು ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಸಂಘ-ಸಂಸ್ಥೆ ಕಟ್ಟುವುದು ಸುಲಭ. ಆದರೆ, ಮುಂದುವರಿಸಿಕೊಂಡು ಹೋಗುವುದು ಕಷ್ಟ. ಉದ್ಯೋಗ ಸೇರಿದಂತೆ ವಿವಿಧ ಕೆಲಸ-ಕಾರ್ಯಕ್ಕೆ ಇಲ್ಲಿಗೆ ಬಂದು ಸಂಘ-ಸಂಸ್ಥೆ ಕಟ್ಟಿಕೊಂಡು ತಮ್ಮ ಮೂಲ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದಿಸಿದರು. ಜೈನ ಧರ್ಮ ಶ್ರೇಷ್ಠ ಧರ್ಮ. ಸಹಸ್ರಾರು ವರ್ಷಗಳ ಹಿಂದೆಯೇ ಪ್ರತಿಯೊಂದು ಜೀವಿಗಳಿಗೆ ಜೀವ ಇದೆ ಎಂದು ಪ್ರತಿಪಾದಿಸಿದೆ. ಮನಸ್ಸಿಗೆ ನೋವುಂಟು ಮಾಡುವುದು ಹಿಂಸೆ ಎಂದು ಭಗವಾನ್ ಮಹಾವೀರರು 2600 ವರ್ಷಗಳ ಹಿಂದೆ ಹೇಳಿದ್ದರು. ಅನ್ಯ ಧರ್ಮೀಯರು ಸಹಾ ಜೈನ ಧರ್ಮ ಶ್ರೇಷ್ಠ ಎಂದು ಹೇಳಿದ್ದಾರೆ. ಆದರೆ, ಇಂದು ಜೈನ ಧರ್ಮೀಯರು ತಮ್ಮ ಧರ್ಮದ ಬಗ್ಗೆ ಅರಿತುಕೊಳ್ಳದೇ ನಡೆದುಕೊಳ್ಳುತ್ತಿರುವುದು ಕಳವಳದ ಸಂಗತಿ. ಧರ್ಮ ಪಾಲನೆ ಮಾಡಬೇಕು. ನಮ್ಮ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಉತ್ತಮ ಸಂಸ್ಕಾರ ನೀಡಿದರೆ ಅವರು ಎಂದಿಗೂ ನಮ್ಮ ಕೈ ಬಿಟ್ಟು ಹೋಗಲಾರರು. ಸಂಸ್ಕಾರ ನೀಡುವ ಕೆಲಸ ಆಗಬೇಕು. ಜೈನರಲ್ಲಿ ನಾಯಕತ್ವ ಗುಣ ಸ್ವಾಭಾವಿಕವಾಗಿದ್ದು, ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಜೈನ ಬಾಂಧವರಿಗೆ ಕಿವಿಮಾತು ಹೇಳಿದರು. ಅಂತರ್ ಧರ್ಮ ವಿವಾಹಗಳು ಇತ್ತೀಚೆಗೆ ಜೈನ ಧರ್ಮೀಯರಲ್ಲಿ ಹೆಚ್ಚುತ್ತಿದೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳುವ ಅಗತ್ಯ ಇದೆ ಎಂದು ಗಮನ ಸೆಳೆದರು.
ಧಾರವಾಡ ಎಸ್ ಡಿಎಂ ಸೊಸೈಟಿಯ ಕಾರ್ಯದರ್ಶಿ ವಿ.ಜೀವಂಧರ ಕುಮಾರ್ ಮಾತನಾಡಿ, ಜೈನರಲ್ಲಿ ಯುವಕರನ್ನು ಸಂಘಟಿಸುವ ಕೆಲಸ ಆಗಬೇಕು. ಇಂಥ ಸಂಘಟನೆಗಳ ಅವಶ್ಯಕತೆ ಇಂದು ಬಹಳ ಇದೆ. ದಕ್ಷಿಣ ಕನ್ನಡ ಜೈನಮೈತ್ರಿಕೂಟದಂಥ ಸಂಘಟನೆಗಳಿಗೆ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು. ಬೆಳಗಾವಿಯ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ ಸ್ಥಾಪಕಾಧ್ಯಕ್ಷ ಶಿರ್ಲಾಲು ಬಿ. ಗುಣಪಾಲ ಹೆಗ್ಡೆ ಮಾತನಾಡಿ, ಬೆಳಗಾವಿಯಲ್ಲಿ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟ 12 ವರ್ಷಗಳ ಹಿಂದೆ ಹುಟ್ಟಿಕೊಂಡಿದೆ. ಹತ್ತು ಹಲವು ಸಾಮಾಜಿಕ ಕಾರ್ಯ ನಡೆಸಿಕೊಂಡು ಬರುತ್ತಿದೆ. ಒಂದು ಕುಟುಂಬದಂತೆ ಎಲ್ಲಾ ಸದಸ್ಯರು ದುಡಿಯುತ್ತಿದ್ದಾರೆ. ಭವಿಷ್ಯದ ದಿನಗಳಲ್ಲಿಯೂ ಜೈನ ಮೈತ್ರಿಕೂಟದ ಸೇವಾ ಕಾರ್ಯಗಳು ಸದಾ ಮುಂದುವರಿಯಲಿವೆ ಎಂದು ಹೇಳಿದರು.
ಬೆಳಗಾವಿ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ ಅಧ್ಯಕ್ಷ ಮಹಾವೀರ ಪೂವಣಿ ಅಧ್ಯಕ್ಷತೆ ವಹಿಸಿದ್ದರು. ಎಂ. ಅಜಿತ್ ಕುಮಾರ್ ಜೈನ್- ಶೋಭಾ ಜೈನ್ ದಂಪತಿ, ಅಣ್ಣಾಸಾಹೇಬ ಚೌಗುಲೆ- ಸರೋಜಿನಿ ಅಣ್ಣಾ ಸಾಹೇಬ್ ಚೌಗುಲೆ ದಂಪತಿಗಳನ್ನು ಸನ್ಮಾನಿಸಲಾಯಿತು. ರತ್ನಾ ಅಜ್ರಿ, ಎಂ.ಅಜಿತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.