Updated News From Kaup

ಕಳತ್ತೂರು : ಸಮಾನ ಮನಸ್ಕರ ತಂಡದಿಂದ ಮನೆ ಹಸ್ತಾಂತರ

Posted On: 14-03-2022 08:11PM

ಕಾಪು : ಸಮಾನ ಮನಸ್ಕರ ತಂಡದಿಂದ ಶಶಿಧರ್ ಪುರೋಹಿತ್ ಕಟಪಾಡಿ ಇವರ ನೇತೃತ್ವದಲ್ಲಿ ಹಾಗೂ ಮಾಧವ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ಸಂತೋಷ ಆಚಾರ್ಯ ಕಳತ್ತೂರು ಇವರ ಪರಿಕಲ್ಪನೆಯಲ್ಲಿ ೧೦೮ ಕಳತ್ತೂರಿನ ನಿವಾಸಿ ಲೀಲಾರವರ ವಾಸಿಸಲು ಅತಂತ್ರವಾಗಿದ್ದ ಮನೆಯನ್ನು ಮರು ನಿರ್ಮಾಣಗೊಳಿಸಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯರು, ದಾನಿಗಳು ಉಪಸ್ಥಿತರಿದ್ದರು.

ಮಂಗಳೂರು : ಪಿಂಗಾರ ಸಾಹಿತ್ಯ ಬಳಗದಿಂದ ಸಾಹಿತ್ಯ ಸಂಭ್ರಮ, ಕವಿಗೋಷ್ಠಿ, ಸಾಧಕಿಗೆ ಸನ್ಮಾನ

Posted On: 14-03-2022 07:48PM

ಮಂಗಳೂರು : ಪಿಂಗಾರ ಸಾಹಿತ್ಯ ಬಳಗದ ರೇಮಂಡ್ ಡಿ ಕುನ್ಹಾ ತಾಕೊಡೆಯವರ ನೇತೃತ್ವದಲ್ಲಿ ಡಾ. ಸುರೇಶ ನೆಗಳಗುಳಿ ಸಂಚಾಲಕರಾಗಿ ,ಸಂದೇಶ ಪ್ರತಿಷ್ಠಾನ ಸಹಯೋಗದಲ್ಲಿ ಮಂಗಳೂರು ನಂತೂರು ಸಮೀಪದ ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಅಂತಾರಾಜ್ಯ ಮಟ್ಟದ ಮಾತೃಭಾಷಾ ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಾದ್ಯಂತ 50 ಕವಿಗಳು ತಮ್ಮ ಮಾತೃಭಾಷೆಯಲ್ಲಿ ಕವನಗಳನ್ನು ವಾಚಿಸಿದರು.

ರೇಮಂಡ್ ಡಿಕುನಾ ತಾಕೊಡೆ ಅವರು ಬರೆದ ಕೃತಿ "ಪತಿ ಪತ್ನಿ ಸುತಾಲಯ"ವನ್ನು ಖರೀದಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಧರ್ಮಪ್ರಾಂತ್ಯದ ಪಿಆರ್ ಓ ಹಾಗೂ ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ರೋಯ್ ಕ್ಯಾಸ್ತಲೀನೋ ಅವರು, ಸಾಹಿತ್ಯದ ಪ್ರೋತ್ಸಾಹವು ಕೃತಿಗಳನ್ನು ಖರೀದಿ ಮಾಡಿ ಮಾಡಲು ಸೂಚ್ಯವಾಗಿ ಹೇಳುವ ಈ ಉದ್ಘಾಟನೆ ಸರಿಯಾದ ‌ಕ್ರಮವಾಗಿದೆ ಹಾಗೂ ದುಂದು ವೆಚ್ಚಕ್ಕೆ ಹೋಗದೆ ಸರಳ ಸುಂದರ ಸಾಂಸ್ಕೃತಿಕ ಸಮಾರಂಭದ ಈ ಕಾರ್ಯಕ್ರಮ ಹಲವಾರು ಸಾಹಿತಿಗಳಿಗೆ ವೇದಿಕೆ‌ ಒದಗಿಸಿದ್ದು ಸ್ತುತ್ಯವಾಗಿದೆ ಎಂದರು.‌ ಅಭಿಮೊ‌ ಟೆಕ್ನಾಲಜಿ ಸಂಸ್ಥಾಪಕ ಮತ್ತು ಕರ್ನಾಟಕ ಕೊಂಕಣಿ ಎಕಾಡೆಮಿ ಸದಸ್ಯ ಉಳ್ಳಾಲದ ನವೀನ್ ನಾಯಕ್ ರವರು ಈ ರೀತಿಯ ಕನ್ನಡ ಬೆಳೆಸುವ ಕಾರ್ಯಕ್ರಮಕ್ಕೆ ಸದಾ ನೆರವು ನೀಡುವುದು ಪ್ರತಿಯೊಬ್ಬರ ಕೆಲಸ ಎಂದು ಸಹಕಾರ ವ್ಯಕ್ತಪಡಿಸಿದರು.

ಮಹಿಳಾ ದಿನಾಚರಣೆಯ ಪ್ರಯುಕ್ತ ಶೈಕ್ಷಣಿಕ ಸಾಧಕಿ ಹಾಗೂ ಸಾಮಾಜಿಕ‌ ಕಾರ್ಯಕರ್ತೆ‌ ರಾಣಿ ಪುಷ್ಪಲತಾ ದೇವಿಯವರಿಗೆ‌ ಅವರ ಸಾಧನೆಗಳನ್ನು ಗುರುತಿಸಿ 'ಕಲಾ‌ ಕುಸುಮ' ಎಂಬ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು. ಅವರು ಮಾತನಾಡುತ್ತ ತನಗೆ‌ ಸನ್ಮಾನ ‌ಪಡೆವ ಆಸೆ ಆಸಕ್ತಿ ಯಾವುದೂ ಇಲ್ಲ. ಅರ್ಹರಿಗೆ ಸನ್ಮಾನ ‌ನೀಡುವುದಷ್ಟೇ ಗೊತ್ತು. ಆದರೂ‌ ಆತ್ಮೀಯರ ಒಲ್ಲೆ ಎನ್ನಲು ಮನಸ್ಸು ಬರದೆ ಸ್ವೀಕರಿಸಿದ ಈ ಗೌರವ‌ಸ್ಮರಣೀಯ ಎಂದರು. ಸಾಮಾಜಿಕ‌ ಕಾರ್ಯಕರ್ತ, ಗಾಯಕ ಗಂಗಾಧರ ಗಾಂಧಿಯವರು ತಾವು ಇನ್ನೂರಕ್ಕೂ ಹೆಚ್ಚು ಮಂದಿಗೆ ಪ್ರಶಸ್ತಿ ಕೊಟ್ಟಿದ್ದೇವೆ.‌ ಪ್ರಶಸ್ತಿಯು ಅರ್ಹತೆಗೆ ಸಂದ ಗೌರವವಾಗಿರಬೇಕು.‌ ಜ್ಞಾನಿಯಾದವನು ಹೇಗೆ ತಾನು ಇನ್ನೂ ಅಪೂರ್ಣ ಎಂದು ಭಾವಿಸುತ್ತಾನೆಯೋ ಹಾಗೆ ರಾಣಿಯವರ ಮನಸ್ಥಿತಿ ಅಷ್ಟೆ.ಅವರಿಗೆ ಕೊಡುವ ಪ್ರಶಸ್ತಿಯು ಅತಿ ಮೌಲ್ಯಾಧಾರಿತವೇ ಆಗಿದೆ. ಪ್ರಸ್ತುತ ಕಾಲದಲ್ಲಿ ಪ್ರಶಸ್ತಿಗಳ ಮಾರಾಟವೇ ನಡೆಯುತ್ತಿದ್ದು ಅದಕ್ಕೆ ಮುಗಿ‌ಬೀಳುವವರನ್ನು ನೋಡುವಾಗ ಅಸಹ್ಯ ಎನಿಸುತ್ತದೆ. ಇದಾದರೆ ಹಾಗಲ್ಲ. ಅರಿವಿಗೂ ಬರದೆ ಸಂದ ಗೌರವ ಎಂದರು. ರೇಮಂಡ್ ಡಿಕುನ್ಹಾ ತಾಕೊಡೆಯವರು ಆಗಾಗ ಸಾಹಿತ್ಯ ಗೋಷ್ಠಿ ನಡೆಸುವ ಉದ್ದೇಶ, ಹೊಸಬರಿಗೆ ಪ್ರೇರಣೆ ಮತ್ತು ಸಾಹಿತ್ಯ ಚಲಾವಣೆಗಾಗಿ ಡಾ ಸುರೇಶ ನೆಗಳಗುಳಿ ಯವರೊಡನೆ ಜಂಟಿಯಾಗಿ ಸಮಾರಂಭ ಸನ್ನಾಹ ಅಭ್ಯಾಸವಾಗಿ ಬಿಟ್ಟಿದೆ. ಇದು ಮುಂದುವರಿಯಲಿದೆ ಎಂದರು. ಕಥಾ ಬಿಂದು ಪ್ರಕಾಶನದ ಪಿ.ವಿ.ಪ್ರದೀಪ್ ಕುಮಾರ್ ಮಾತನಾಡುತ್ತಾ ಸಾಹಿತ್ಯ ಸಮ್ಮೇಳನದ ಅಗತ್ಯ ಮತ್ತು ತನ್ನ ಉತ್ಸಾಹ ಇವುಗಳ ಸಾರಾಂಶ ತಿಳಿಸಿದರು. ಈ ಕವಿಗೋಷ್ಠಿ- ಅಧ್ಯಕ್ಷತೆ ವಹಿಸಿರುವ ಸುಶೀಲಾ ಭಟ್ ಪಾತನಡ್ಕ, ಇವರು ನೆಗಳಗುಳಿ ತವರಿನವರು ಈಗ ಕೇರಳದಲ್ಲಿ ಇದ್ದರೂ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.ಬಾ ಕಾ ಹು ಎಂಬ ಬಾಳೆ ಕಾಯಿಯ ಹುಡಿಯಂದ ಶ್ಯಾವಿಗೆಸಂಡಿಗೆ ಮಾಡುವ ಅವಿಷ್ಕಾರವನ್ನು ಹತ್ತುವರ್ಷದ ಹಿಂದೆಯೇ ಮಾಡಿದ್ದರಲ್ಲದೆ ತತ್ಸಂಬಂಧೀ ಪುಸ್ತಕ,ಹಲವೆಡೆ ಕಾರ್ಯಾಗಾರ,ರೇಡಿಯೋ ಸಂದರ್ಶನ ಸಹಿತ ಮಾಡಿದವರು.

ಆದರೆ ಸರಕಾರ ಮಾತ್ರ ಅಷ್ಡಾಗಿ ಗುರುತಿಸಲಿಲ್ಲ. ಮಾವು ಮತ್ತು ಅದರ ವ್ಯಂಜನಗಳ ಬಗೆಗೂ ಪುಸ್ತಕ ಬರೆದಿರುವರು.ಎಳವೆಯಲ್ಲಿಯೇ ನವಭಾರತ ಪತ್ರಿಕೆಯವರಿಂದ "ನಗೆಬಂಧು" ಎಂಬ ಕಾವ್ಯ ನಾಮ ಪಡೆದವರು.ಈ. ಇಳಿ ಹರೆಯದಲ್ಲಿ ಇನ್ನೂ ಸಾಹಿತ್ಯ ಚಟುವಟಿಕೆ ಮುಂದುವರಿಸುತ್ತಾ ಇರುವುದು ಅವರ ಧೀ ಶಕ್ತಿಗೆ ನಿದರ್ಶನ ಎಂದು ಡಾ ಸುರೇಶ ನೆಗಳಗುಳಿ ಯವರು ವಿಶ್ಲೇಷಿಸಿದರು. ಕವಿಗೋಷ್ಠಿಯ ಅಧ್ಯಕ್ಷ ಪೀಠದಿಂದ ಮಾತನಾಡುತ್ತಾ ಸುಶೀಲಾ ಎಸ್ ಎನ್ ಭಟ್ ರವರು, ಮಹಿಳಾ ಸ್ವಾತಂತ್ಯ, ಮಹಿಳಾ ಶೋಷಣೆ ಇತ್ಯಾದಿಗಳು‌ ಹೆಚ್ಚಾಗದಿರಲು ಸಾಹಿತ್ಯದಲ್ಲಿ ಆ ಕುರಿತಾದ ಬರಹಗಳು ಬರ ಬೇಕು. ಮಹಿಳೆ ಅಬಲೆ ಅನ್ನುವ ಮಾತು ಅಸಂಗತ.ಮಹಿಳೆ ಇಲ್ಲದೆ ಮನೆ ಬೆಳಗದು ಹಾಗೆಯೇ ಮಾತೃ ಭಾಷೆ ಕೂಡ ,ಮಾತೆಯಂತೆ,ಮಹಿಳೆಯಂತೆ ಜೀವನ ಬೆಳಗಲು ಪೂರಕ.ಹಾಗಾಗಿಯೇ ಮಾತೃ ಭಾಷೆಯ ಮೌಲ್ಯ ಅರಿತು ಬಾಳುವ ಕಿವಿ ಮಾತು ಹೇಳಿ ಹವ್ಯಕ ಹಾಗೂ ಕನ್ನಡ ಭಾಷೆಯ ಸ್ವರಚಿತ ಕವನ ವಾಚಿಸಿದರು. ಕವಿಗಳ ಕವನಗಳನ್ನು ಮನಸಾರೆ ಕೊಂಡಾಡಿದರು. ಅನಂತರ ನಡೆದ ಕವಿಗೋಷ್ಠಿಯಲ್ಲಿ ಡಾ ಸುರೇಶ ನೆಗಳಗುಳಿ, ರೇಮಂಡ್ ಡಿ ಕುನ್ಹ ತಾಕೊಡೆ, ಶಿವರಾಜ್ ದೇವರಗುಡಿ, ಅರ್ಚನಾ ಕುಂಪಲ, ಫೆಲ್ಸಿ ಲೋಬೋ, ಗುಣಾಜೆ ರಾಮಚಂದ್ರ ಭಟ್, ಉಮೇಶ ಕಾರಂತ, ಮಾರ್ಸೆಲ್ ಡಿಸೋಜ, ಜೂಲಿಯೆಟ್ ಫೆರ್ನಾಂಡಿಸ್, ಶಿವಪ್ರಸಾದ ಕೊಕ್ಕಡ, ವಾಣಿ‌ಲೋಕಯ್ಯ, ಹಿತೇಶ್ ಕುಮಾರ್ ಎ, ವೆಂಕಟೇಶ ಗಟ್ಟಿ, ವಿಂಧ್ಯ ಎಸ್ ರೈ, ರಶ್ಮಿ ಸನಿಲ್, ಸುಹಾನಾ ಸಯ್ಯದ್, ರವಿ ಕುಮಾರ್ ನಾಗರ ಹಳ್ಳಿ, ಪ್ರೇಮ್ ಮೊರಾಸ್, ಉಮೇಶ್ ಶಿರಿಯಾ, ಎಸ್ ಕೆ ಕುಂಪಲ, ಜಯರಾಮ ಪಡ್ರೆ, ಜಯಾನಂದ ಪೆರಾಜೆ, ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಜಯಾನಂದ ಪೆರಾಜೆ, ಗೀತಾ ಲಕ್ಷ್ಮೀಶ, ರೇಖಾ ಸುದೇಶ ರಾವ್, ಬದ್ರುದ್ದೀನ್ ಕೂಳೂರು, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯಾ ಗೋಪಾಲ್, ಮಲ್ಲೇಶ್ ಜಿ ಹಾಸನ, ಸುನೀತಾ ಪಿ.ವಿ., ಸುಮಂಗಲಾ ದಿನೇಶ ಶೆಟ್ಟಿ, ಮನ್ಸೂರ್ ಮುಲ್ಕಿ, ಡಾ ವಾಣಿಶ್ರೀ ಕಾಸರಗೋಡು, ಗುರುರಾಜ ಎಂ ಆರ್, ಪ್ರಕಾಶ ಪಡಿಯಾರ್ ಮರವಂತೆಯವರು ಅವರವರ ಮಾತೃಭಾಷೆಯ ಕವನಗಳನ್ನು ವಾಚಿಸಿದರು ವಾಚಿಸಿದ ಎಲ್ಲಾ ಕವಿಗಳಿಗೆ ಪುಸ್ತಕ ಮತ್ತು ಅಭಿನಂದನಾ ಪತ್ರವನ್ನು ಮುಖ್ಯ ಉಪಸ್ಥಿತಿ ಹೊಂದಿದ್ದ ಅಭಾಸಾಪ ರಾಜ್ಯ ಕಾರ್ಯದರ್ಶಿ ಸಂಚಾಲಕ ರಘುನಂದನ್ ಭಟ್ ಮತ್ತು‌ ದ ಕ ಜಿಲ್ಲಾದ್ಯಕ್ಷ ‌ಪ್ರೊ.‌ ಮಾಧವ ಇವರು ಅರ್ಹರಿಗೆ ಹಸ್ತಾಂತರಿಸಿದರು. ನತಾಲಿಯ ಡಿಕುನಾ ವಂದಿಸಿದರು, ರಿಯಾನಾ ಡಿ ಕುನ್ಹಾ ನಿರೂಪಿಸಿದರು.

92ನೇ ಹೇರೂರು :ಬಂಟಕಲ್ಲು- ವಿಕಾಸ ಸೇವಾ ಸಮಿತಿ, ದಾನಿಗಳ ನೆರವಿನಿಂದ ನೀಡಲ್ಪಟ್ಟ 5 ನಾಮ ಫಲಕದ ಅನಾವರಣ

Posted On: 13-03-2022 09:26PM

ಕಾಪು : ನಾನೇ ಎಂಬ ಭಾವವನ್ನು ಬಿಟ್ಟು ನಾವು ಎಂಬ ಭಾವನೆ ಇದ್ದರೆ ದೈವಾನುಗ್ರಹ ಸದಾ ನಮಗಿರುತ್ತದೆ ಎಂದು ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮಾನಾಥ ಶೆಟ್ರವರು ಹೇಳಿದರು.

ಅವರು ಬಂಟಕಲ್ಲು- ವಿಕಾಸ ಸೇವಾ ಸಮಿತಿ 92ನೇ ಹೇರೂರು ಇದರ ವತಿಯಿಂದ ದಾನಿಗಳ ನೆರವಿನಿಂದ ಕೊಡಮಾಡಿದ 5 ನಾಮ ಫಲಕದ ಅನಾವರಣವನ್ನು ನೇರವೇರಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೇರೂರು ಗ್ರಾಮ ಪಂಚಾಯತ್ ಸದಸ್ಯ ವಿಜಯ ಧೀರಜ್ ರವರು ಮಾತನಾಡಿ ಸ್ಥಾಪನೆಗೊಂಡು 2 ವರ್ಷಗಳ ಅವಧಿಯಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಸಾರ್ವಜನಿಕರ ಸಹಕಾರ ನಿಮಗೆ ಸದಾ ಇರಲಿ ಎಂದು ಶುಭ ಹಾರೈಸಿದರು.

ಸಮಿತಿಯ ಗೌರವಾಧ್ಯಕ್ಷ ಗಣಪತಿ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ವಿಜಯಾ ವಿಘ್ನೇಶ್ವರ ಆಚಾರ್ಯ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಮಾಧವ ಆಚಾರ್ಯ ಸ್ವಾಗತಿಸಿದರು. ಮಹಿಳಾ ಬಳಗದ ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯೆ ಮಂಜುಳಾ ಗಣೇಶ್ ಆಚಾರ್ಯ ವಂದಿಸಿದರು.

ಶಿರ್ವದ ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗದ ವತಿಯಿಂದ ಧರ್ಮಜಾರಂದಾಯ ದೈವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

Posted On: 13-03-2022 02:45PM

ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಶಿರ್ವ ಶ್ರೀ ಧರ್ಮಜಾರಂದಾಯ ನೇಮೋತ್ಸವದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಸತತ ಮೂರು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಯಿತು.

ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ| ಪಾಸ್ಕಲ್‌ ಡೇಸಾ ನಿಧನ

Posted On: 13-03-2022 02:39PM

ಶಿರ್ವ: ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ| ಪಾಸ್ಕಲ್‌ಡೇಸಾ (67) ಅವರು ಮಾ. 13ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ನಿವೃತ್ತ ಶಿಕ್ಷಕಿ ಪ್ರಸಿಲ್ಲಾ ಡೇಸಾ ,ಪುತ್ರ ಆರ್ಥೋಪೇಡಿಕ್‌ ಸರ್ಜನ್‌ ಡಾ| ಪ್ರಶಾಂತ್‌ ಡೇಸಾ ಮತ್ತು ಪುತ್ರಿ ವೈದ್ಯೆ ಡಾ|ಪ್ರೀಮಾ ಡೇಸಾ ಅವರನ್ನು ಅಗಲಿದ್ದಾರೆ.

ಶಿರ್ವ ಸಂತ ಮೇರಿ ಕಾಲೇಜಿನಲ್ಲಿ 35 ವರ್ಷಗಳ ಕಾಲ ವಾಣಿಜ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಅವರು ಪ್ರಭಾರ ಪ್ರಾಂಶುಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮಂಗಳೂರು ವಿವಿ ವಾಣಿಜ್ಯ ಪರೀಕ್ಷಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ರು. ಕಾಲೇಜಿನಲ್ಲಿ 1984ರಲ್ಲಿ ಎನ್‌ಸಿಸಿ ಘಟಕ ಪ್ರಾರಂಭವಾದಂದಿನಿಂದ 29 ವರ್ಷಗಳ ಕಾಲ ಎನ್‌ಸಿಸಿ ಘಟಕವನ್ನು ಮುನ್ನಡೆಸಿ ಮೇಜರ್‌ ಆಗಿ ನಿವೃತ್ತರಾಗಿದ್ದರು.

ಕಾಲೇಜಿನ ಎನ್.ಸಿ.ಸಿ ಘಟಕ ಮತ್ತು ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 24 ರಕ್ತದಾನ ಶಿಬಿರಗಳನ್ನು ಆಯೋಜಿಸಿ ಕೆಎಂಸಿ ಬ್ಲಡ್‌ ಬ್ಯಾಂಕ್‌ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಬ್ಯಾಂಕ್‌ಗೆ ಸಾವಿರಾರು ಯೂನಿಟ್‌ ರಕ್ತ ವನ್ನು ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ರೋಟರಿ ಕಲ್ಯಾಣಪುರದಿಂದ ವಿಶ್ವ ಮಹಿಳಾ ದಿನಾಚರಣೆ ; ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

Posted On: 12-03-2022 11:11PM

ಉಡುಪಿ : ರೋಟರಿ ಕಲ್ಯಾಣಪುರದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ 2022 ಪ್ರಯುಕ್ತ ಮಾಚ್೯ 10ರಂದು ಕ್ಲಬ್ ನ ಸಭಾಂಗಣದಲ್ಲಿ ಅಧ್ಯಕ್ಷರಾದ ಶಂಭು ಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ, ಉಪ್ಪೂರು, ಮತ್ತು ಹಾವಂಜೆ ಗ್ರಾಮದ 11 ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಅವರ ಸೇವೆಯನ್ನು ಗುರುತಿಸಿ ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಾಜಾರಾಂ ಭಟ್, ನಿಕಟಪೂರ್ವ ಜಿಲ್ಲಾ ಗವರ್ನರ್ ಪದ್ಮನಾಭ ಕಾಂಚನ್, ಸಹಾಯಕ ಗವರ್ನರ್ ರವರು ಭಾಗವಹಿಸಿ ಶುಭ ಹಾರೈಸಿದರು.

ನಿಯೋಜಿತ ಅಧ್ಯಕ್ಷರಾದ ಶಾರ್ಲೆಟ್ ಲೂವಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಸೇನಾನಿ ಬ್ರಯಾನ್ ಡಿಸೋಜರವರು ಮಹಿಳಾ ದಿನಾಚರಣೆ ಮಹತ್ವದ ಕುರಿತು ಮಾತನಾಡಿದರು. ವೃತ್ತಿ ಸೇವೆ ನಿರ್ದೇಶಕರಾದ ಶಂಕರ್ ಸುವರ್ಣ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಅಲೆನ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ವಂದಿಸಿದರು.

ಮಾಚ್೯ 13 : ಪಾಂಗಾಳ ಬ್ರಹ್ಮಲಿಂಗೇಶ್ವರ ಆದಿ‌ ಆಲಡೆಯಲ್ಲಿ ಹರಕೆಯ ಉತ್ಸವ, ರಂಗಪೂಜೆ, ಬ್ರಹ್ಮಮಂಡಲ ಸೇವೆ

Posted On: 12-03-2022 11:04PM

ಪಾಂಗಾಳ : ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದ ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಾಚ್೯ 13, ಭಾನುವಾರದಂದು ವೈಭವದ ಒಂದು ದಿನದ ಹರಕೆಯ ಉತ್ಸವವು ಮಂಡೇಡಿ ಬಾಲಟ್ಟ ಮನೆ ಕಲ್ಯಾಣಿ ಶೆಟ್ಟಿ ಹಾಗೂ ಇವರ ಕುಟುಂಬಸ್ಥರ ಸೇವಾರ್ಥವಾಗಿ ಜರಗಲಿದೆ.

ಬೆಳಗ್ಗೆ ಪಂಚ ವಿಂಶತಿ ಕಲಶ ಪ್ರಧಾನ ಹೋಮ , ಗಣಯಾಗ ದಿಂದ ಪ್ರಾರಂಭಗೊಂಡು 10:00 ಗಂಟೆಗೆ ಕಲಶಾಭಿಷೇಕ ನಂತರ 11 ಗಂಟೆಗೆ ಮಹಾಪೂಜೆ ನಡೆದು ಬಲಿ ಹೊರಟು ಪಲ್ಲಪೂಜೆ ನಡೆದು ಸರಿಯಾಗಿ 12:30 ಗೆ ಬ್ರಾಹ್ಮಣ ಸುಹಾಸಿನಿ ಆರಾಧನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿರುವುದು. ರಾತ್ರಿ 07:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಟು ರಾತ್ರಿ 08-30 ಕ್ಕೆ ವೈಭವದ ಬೈಗಿನ ಬಲಿಯು ನಡೆಯಲಿರುವುದು.

ರಾತ್ರಿ 11 ಕ್ಕೆ ರಂಗಪೂಜೆ , ರಾತ್ರಿ 12 ಕ್ಕೆ ವೈಭವದ ಬ್ರಹ್ಮಮಂಡಲ ಸೇವೆ ನಡೆದು ರಾತ್ರಿ 3:30 ಕ್ಕೆ ಶ್ರೀ ಭೂತಬಲಿ ಮೂಲಕ ಒಂದು ದಿನದ‌ ಶೈವೋತ್ಸವವು ಸಮಾಪ್ತಿಯಾಗುತ್ತದೆ.

ಭಕ್ತಾದಿಗಳು , ಆದಿ ಭಜಕರು ಕುಟುಂಬ ಸಮೇತರಾಗಿ ಆಗಮಿಸಿ , ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ , ನಾಗದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಸೇವಾರ್ಥಿಗಳು ಹಾಗೂ ದೇವಸ್ಥಾನದ ಪತ್ರಿಕಾ ಪ್ರಕಟಣೆಯು ತಿಳಿಸಿದೆ.

ಸಾರ್ವಜನಿಕರಿಗೆ ಕಂದಾಯ ಸೇವೆಗಳು ಸಮರ್ಪಕವಾಗಿ ತಲುಪಬೇಕು : ಶಾಸಕ ರಘುಪತಿ ಭಟ್

Posted On: 12-03-2022 08:00PM

ಉಡುಪಿ : ಸಾರ್ವಜನಿಕರಿಗೆ ಕಂದಾಯ ಇಲಾಖೆ ವ್ಯಾಪ್ತಿಯ ಎಲ್ಲಾ ಸೇವೆಗಳನ್ನು ಸಮರ್ಪಕವಾಗಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ , ಸಕಾಲದಲ್ಲಿ ಒದಗಿಸುವ ಮೂಲಕ, ಕಂದಾಯ ಸಮಸ್ಯೆಗಳನ್ನು ಸಮರ್ಪಕ ರೀತಿಯಲ್ಲಿ ಬಗೆಹರಿಸಲು, ಅಧಿಕಾರಿಗಳು ಪ್ರಾಮಾಣಿಕ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆಯಡಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ರೈತರ ಮನೆಗಳಿಗೆ, ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತೆರಳಿ ವಿತರಿಸಿ, ನಂತರ ತೆಂಕನಿಡಿಯೂರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ರೂಪಿಸಿರುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯು ಸಾರ್ವಜನಿಕರಿಗೆ ಬಹುಪಯೋಗಿ ಮತ್ತು ದೂರದೃಷ್ಠಿ ಹೊಂದಿರುವ ಜನಪರ ಕಾರ್ಯಕ್ರಮವಾಗಿದ್ದು, ಹಲವು ವರ್ಷಗಳಿಂದ ಕಂದಾಯ ಇಲಾಖೆಯಿಂದ, ತಮಗೆ ಅಗತ್ಯವಿರುವ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡಿರುವ ರೈತರ ಮನೆ ಬಾಗಲಿಗೆ ತೆರಳಿ , ಅವರಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಉಚಿತವಾಗಿ ನೀಡುತ್ತಿರುವುದು ದೇಶದಲ್ಲೇ ಪ್ರಥಮವಾಗಿದೆ ಎಂದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುವುದರ ಮೂಲಕ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೇವೆಗಳನ್ನು ಉತ್ತಮ ರೀತಿಯಲ್ಲಿ ತಲುಪಿಸಲು ಸಾಧ್ಯವಾಗಲಿದೆ, ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಕಡತ ವಿಲೇವಾರಿ ಕಾರ್ಯಕ್ರಮ ಅಯೋಜಿಸುವ ಮೂಲಕ ಹಲವು ವರ್ಷಗಳಿಂದ ಬಾಕಿ ಇರುವ ಸಾರ್ವಜನಿಕರ ಕಡತಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲಾಗುವುದು ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಅಗತ್ಯ ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ನಿಗಧಿತ ಶುಲ್ಕ ಪಾವತಿ ಮತ್ತು ಕಾಯುವ ಪರಿಸ್ಥಿತಿ ಇತ್ತು, ಆದರೆ ಈ ಯೋಜನೆಯ ಮೂಲಕ ರೈತರ ಮನೆ ಬಾಗಿಲಿಗೆ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,ಅಟ್ಲಾಸ್/ ಹಿಸ್ಸಾ ಸ್ಕೆಚ್ ಗಳನ್ನು ಉಚಿತವಾಗಿ ತಲುಪಿಸಲಾಗುತ್ತಿದೆ. ಈಗ ನೀಡಲಾಗುತ್ತಿರುವ ದಾಖಲಾತಿಗಳಲ್ಲಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಸಹ ಅವಕಾಶವಿದೆ. ಬಹುತೇಕ ಸಾರ್ವಜನಿಕರು ತಮಗೆ ಸಂಬಂಧಿಸಿದ ಕಂದಾಯ ದಾಖಲೆಗಳು ಇರುವ ಬಗ್ಗೆ ಮಾಹಿತಿ ಇಲ್ಲದೇ, ವ್ಯಾಜ್ಯದ ಸಂದರ್ಭದಲ್ಲಿ ನ್ಯಾಯಾಲಯಗಳಲ್ಲಿ ತೊಂದರೆಗೀಡಾಗಬೇಕಾದ ಪರಿಸ್ಥಿತಿಗಳಿದ್ದು, ಈ ಯೋಜನೆಯ ಮೂಲಕ ಅತ್ಯವಶ್ಯಕ ಅಗತ್ಯ ದಾಖಲೆಗಳನ್ನು ಉಚಿತವಾಗಿ, ಮನೆ ಬಾಗಿಲಿನಲ್ಲಿಯೇ ಪಡೆಯಲು ಸಾಧ್ಯವಾಗಿದ್ದು, ಜಿಲ್ಲೆಯ 267 ಗ್ರಾಮಗಳಲ್ಲಿ ಸಾರ್ವಜನಿಕರಿಗೆ ದಾಖಲೆಗಳನ್ನು ವಿತರಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಸುರೇಶ್, ಉಪಾಧ್ಯಕ್ಷ ಅರುಣ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಉಡುಪಿ ತಹಸೀಲ್ದಾರ್ ಅರ್ಚನಾ ಭಟ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ವಂದಿಸಿದರು.

ಮಾಚ್೯ 12ರಂದು ಕಾಪು ತಾಲೂಕಿನಲ್ಲಿ ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಗೆ ಚಾಲನೆ

Posted On: 11-03-2022 09:11PM

ಕಾಪು : ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ನಿಟ್ಟಿನಲ್ಲಿ ಕಂದಾಯದಾಖಲೆ ಮನೆಬಾಗಿಲಿಗೆ ಯೋಜನೆಯನ್ನು ಮಾಚ್೯ 12 ರಂದು ರಾಜ್ಯಾದ್ಯಂತ ಅನುಷ್ಠಾನ ಗೊಳಿಸಲಾಗುತ್ತಿದೆ.

ಅದರಂತೆ ಕಾಪು ತಾಲೂಕು ಮಟ್ಟದಲ್ಲಿ ಕಾಪು ಹೋಬಳಿಯ ಉಳಿಯಾರಗೋಳಿ ಗ್ರಾಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರ ಅಧ್ಯಕ್ಷತೆಯಲ್ಲಿ ಮಾಚ್೯ 12ರಂದು ಪೂರ್ವಾಹ್ನ 11ಘಂಟೆಗೆ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

ಅದೇ ದಿವಸ ಕಾಪು ತಾಲೂಕಿನ ಇತರೆ ಗ್ರಾಮಗಳಲ್ಲಿಯೂ ಸಹಾ ಗ್ರಾಮಕರಣಿಕರು ಹಾಗೂ ಗ್ರಾಮ ಸಹಾಯಕರು ಕಂದಾಯ ದಾಖಲೆಗಳನ್ನು ಮನೆಬಾಗಿಲಿಗೆ ವಿತರಿಸುವ ಕಾರ್ಯವನ್ನು ಮಾಡಲಿದ್ದಾರೆ ಎಂದು ಕಾಪು ತಹಶೀಲ್ದಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 13 : ಕಳತ್ತೂರು ಪೈಯಾರು ಶ್ರೀ ಮಲೆ ಧೂಮಾವತಿ ದೈವ ಸನ್ನಿಧಿಯಲ್ಲಿ ವಾರ್ಷಿಕ ಮಂಜ

Posted On: 11-03-2022 08:57PM

ಕಾಪು : ಕಳತ್ತೂರು ಪೈಯಾರು ಶ್ರೀ ಮಲೆಧೂಮಾವತಿ ದೈವ ಸನ್ನಿಧಿಯಲ್ಲಿ ವಾರ್ಷಿಕ ಮಂಜ (ಭೋಗ) ಹಾಗೂ ರಾತ್ರಿ ಅನ್ನದಾನ ಕಾರ್ಯಕ್ರಮ ಮಾರ್ಚ್ 13 ರಂದು ನಡೆಯಲಿದೆ.

ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಿ ಶ್ರೀ ದೈವದ ಗಂಧ ಪ್ರಸಾದವನ್ನ ಸ್ವೀಕರಿಸಬೇಕಾಗಿ ವಿನಂತಿಸಿದ್ದಾರೆ.