Updated News From Kaup

ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಬೈಂದೂರಿನಲ್ಲಿ ಪರಿಸರ ರಕ್ಷಿಸಿ - ಜೀವನ ಉಳಿಸಿ ಅಭಿಯಾನ

Posted On: 11-03-2022 08:51PM

ಕುಂದಾಪುರ : ಕೃಷಿ ಮತ್ತು ಸಾಮಾನ್ಯ ಜನ ಜೀವನಕ್ಕೆ ಪೂರಕವಾಗಿರುವ ಅರಣ್ಯ ಭೂಮಿಯನ್ನು ಕೈಗಾರಿಕೆಗೆ ನೀಡುವುದು ಸೂಕ್ತವಲ್ಲ, ಕೈಗಾರಿಕೆಗೆಂದು ಅರಣ್ಯ ನಾಶ ಮಾಡುವುದರಿಂದ ಪ್ರಕೃತಿ ನಾಶದೊಂದಿಗೆ ಜನರ ನಿತ್ಯ ಜೀವನದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬರಡು ಭೂಮಿಯನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು ಎಂದು ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್. ವಿ. ಅಮೀನ್ ಹೇಳಿದರು. ಹಳಗೇರಿಯ ೫೩ ಎಕರೆ ದಟ್ಟ ಅರಣ್ಯ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಕಾದಿರಿಸಿರುವುದನ್ನು ಖಂಡಿಸಿ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ, ವನದುರ್ಗ ರೈತ ಶಕ್ತಿ ಗುಂಪು ಮತ್ತು ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆಯ ಸಹಯೋಗದಲ್ಲಿ ಗುರುವಾರ ನಾಗೂರಿನ ಮಹಾಲಸಾ ಕಲ್ಚರರ್ ಹಾಲ್ ನಲ್ಲಿ ನಡೆದ ಪರಿಸರ ರಕ್ಷಿಸಿ - ಜೀವನ ಉಳಿಸಿ ಅಭಿಯಾನ ಮತ್ತು ಬೃಹತ್ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನವಸತಿ ಇಲ್ಲದ ಪ್ರದೇಶ ಬಳಸಿ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಮಾತನಾಡಿ, ನಮಗೆ ಅರಣ್ಯವೂ ಬೇಕು, ಕೈಗಾರಿಕೆಯೂ ಬೇಕು; ಆದರೆ ಜನರ ಜೀವನಕ್ಕೆ ಸಮಸ್ಯೆಯನ್ನು ಉಂಟು ಮಾಡುವ ಪ್ರದೇಶದಲ್ಲಿ ಕೈಗಾರಿಕೆ ಸರಿಯಲ್ಲ. ಬೈಂದೂರಿನಲ್ಲಿ ಜನವಸತಿ ಇಲ್ಲದ ಜಾಗಗಳಿದ್ದು ಅಲ್ಲಿ ಕೈಗಾರಿಕೆಯನ್ನು ಪ್ರಾರಂಭಿಸಲು ನಮ್ಮ ಬೆಂಬಲ ಇರುತ್ತದೆ ಎಂದರು. ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟಿಯಾನ್ ಮಾತನಾಡಿ, ಕೈಗಾರಿಕೆಗೆ ನಮ್ಮ ವಿರೋಧ ಇಲ್ಲ. ಜನರಿಗೆ ತೊಂದರೆಯಾದಾಗ ನ್ಯಾಯ ಒದಗಿಸಲು ಹೋರಾಟ ನಡೆಸುವುದೇ ನಮ್ಮ ಗುರಿ; ಅದರಲ್ಲಿ ಯಶಸ್ವಿಯೂ ಆಗಿದ್ದೇವೆ ಎಂದರು. 'ಖಂಬದಕೋಣೆ ಗ್ರಾ.ಪಂ. ಅಧ್ಯಕ್ಷ ಸುಕೇಶ ಶೆಟ್ಟಿ ಮಾತನಾಡಿ, ಗ್ರಾ. ಪಂ. ನ ಗಮನಕ್ಕೆ ತರದೇ ಅಧಿಕಾರಿಗಳು ಈ ಪ್ರದೇಶವನ್ನು ಕೈಗಾರಿಕೆಗೆ ಕೊಟ್ಟಿದ್ದಾರೆ. ಇದಕ್ಕೆ ಎಲ್ಲ ಸದಸ್ಯರು ಸಂಪೂರ್ಣ ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದರು.

ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಅಖಿಕ ಭಾರತ ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಕ. ರಾ. ವೈ. ಸಂ., ಉಡುಪಿ ಜಿಲ್ಲಾಧ್ಯಕ್ಷ ಡಾ| ಸುಬ್ರಮಣ್ಯ ಭಟ್, ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಮುಂಬಯಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನ ದಾಸ್, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್, ಕಿರಿಮಂಜೇಶ್ವರ ಗ್ರಾ.ಪಂ.ಮಾಜಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಸದಸ್ಯ ಈಶ್ವರ ದೇವಾಡಿಗ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ನರಸಿಂಹ ಹಳಗೇರಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಉದಯ ಕುಮಾರ್ ಶೆಟ್ಟಿ ಅರಣ್ಯ ಪ್ರದೇಶದಲ್ಲಿ ಕೈಗಾರಿಕೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದರು.

ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆ ಪ್ರಮುಖ ಹೋರಾಟಗಾರ ನಳಿನ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ವನದುರ್ಗ ರೈತಶಕ್ತಿ ಗುಂಪು ಸಂಯೋಜಕ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್ ವಂದಿಸಿದರು ಅಗತ್ಯ ಬಿದ್ದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಸಭೆ ತೀರ್ಮಾನಿಸಿತು.

ಮಾಚ್೯ 13 : ಕಾಪು ಶ್ರೀ ಮಾರಿಯಮ್ಮ ದೇವಸ್ಥಾನದ ಆದಿಸ್ಥಳದಲ್ಲಿ ವಾರ್ಷಿಕ ಮಹೋತ್ಸವ

Posted On: 09-03-2022 10:43PM

ಕಾಪು : ಇಲ್ಲಿನ ಶ್ರೀ ಮಾರಿಯಮ್ಮ ದೇವಸ್ಥಾನದ ಆದಿಸ್ಥಳ ಶ್ರೀ ತ್ರಿಶಕ್ತಿ ಸನ್ನಿಧಾನ ಕೋಟೆಮನೆ ಇದರ ವಾರ್ಷಿಕ ಮಹೋತ್ಸವವು ಮಾಚ್೯13 ರಂದು ಜರಗಲಿದೆ.

ಮಹೋತ್ಸವದ ಪ್ರಯುಕ್ತ ಮಧ್ಯಾಹ್ನ 12:25 ಕ್ಕೆ ಚಂಡಿಕಾ ಪೂರ್ಣಾಹುತಿ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಹಾಗೂ ರಾತ್ರಿ 9:30 ಕ್ಕೆ ಜೋಡಿ ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಭಕ್ತಾಭಿಮಾನಿಗಳು ಆಗಮಿಸಿ ಗಂಧ-ಪ್ರಸಾದ ಸ್ವೀಕರಿಸುವಂತೆ ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ.

ಉಡುಪಿ : ಜಿಲ್ಲಾ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ

Posted On: 09-03-2022 06:11PM

ಉಡುಪಿ : ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವ ಸಮುದಾಯ ಹಾಗೂ ಯುವಕ ಹಾಗೂ ಯುವತಿ ಮಂಡಲಗಳ ಪಾತ್ರ ಬಹು ಮುಖ್ಯವಾಗಿದ್ದು, ವಿವೇಕಾನಂದರ ನುಡಿಯಂತೆ ಯುವ ಜನತೆಯಿಂದ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು. ಅವರು ಇಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆಡಿಟೋರಿಯಂನಲ್ಲಿ, ನೆಹರು ಯುವ ಕೇಂದ್ರ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೂರ್ಣಪ್ರಜ್ಞ ಕಾಲೇಜು ಉಡುಪಿ, ಪೂರ್ಣಪ್ರಜ್ಞ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಾಗೂ ಉಡುಪಿ ಜಿಲ್ಲೆಯ ಯುವಕ, ಯುವತಿ ಮತ್ತು ಮಹಿಳಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಸಮುದಾಯದಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಉಡುಪಿ ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲಾಡಳಿತ ಕೈಗೊಳ್ಳುವ ಕಾರ್ಯಗಳಿಗೆ ಯುವಜನತೆ ಸದಾಕಾಲ ಉತ್ತಮ ಬೆಂಬಲ ಮತ್ತು ಸಹಕಾರ ನೀಡುತ್ತಿದ್ದು, ಜಿಲ್ಲೆಯ ಯುವಕ ಯುವತಿ ಮಂಡಲಗಳು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಭಟ್ ಮಾತನಾಡಿ, ನೆಹರು ಯುವ ಕೇಂದ್ರದ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪಡೆದ ಹೆಬ್ರಿಯ ಶಾಂತಿನಿಕೇತನ ಯುವ ವೃಂದ, ಕುಡಿಬೈಲು, ಕುಚ್ಚೂರು ಸಂಸ್ಥೆಗೆ 75000 ಸಾವಿರ ರೂ. ನಗದು ಸಹಿತ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕ್ಲೀನ್ ಇಂಡಿಯಾ ಅಭಿಯಾನದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಜಿಲ್ಲೆಯ 3 ಯುವಕ ಸಂಘಗಳಿಗೆ ಪ್ರಶಸ್ತಿ ಪತ್ರ ಮತ್ತು ಆಯ್ದ ಯುವಕ-ಯುವತಿ ಸಂಘಗಳಿಗೆ ಕ್ರೀಡಾ ಸಾಮಗ್ರಿಯನ್ನು ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವಿನಯ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಪಿ ವಿ ಭಂಡಾರಿ, ರಾಯನ ಮಥಾಯಿಸ, ಪ್ರಶಾಂತ್ ನೀಲಾವರ, ನಿತ್ಯಾನಂದ ಭಟ್ ಉಪಸ್ಥಿತರಿದ್ದರು. ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೆಹರು ಯುವ ಕೇಂದ್ರ ಲೆಕ್ಕಾಧಿಕಾರಿ ವಿಷ್ಣುಮೂರ್ತಿ ವಂದಿಸಿ, ಪ್ರಾಧ್ಯಾಪಕ ಆಚಾರ್ಯ ನಿರೂಪಿಸಿದರು.

ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ ಮಹಿಳಾ ಬಳಗದ ಒಂಭತ್ತನೆ ವರ್ಷದ ವಾರ್ಷಿಕೋತ್ಸವ

Posted On: 09-03-2022 05:59PM

ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ ಶಿರ್ವ, ಮಹಿಳಾ ಬಳಗದ ವತಿಯಿಂದ ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಒಂಭತ್ತನೆ ವರ್ಷದ ವಾರ್ಷಿಕೋತ್ಸವವು ಜರಗಿತು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುದರಂಗಡಿ ಶ್ರೀ ದುರ್ಗಾ ಮಂದಿರದ ಅರ್ಚಕರಾದ ಶ್ರೀಧರ ಆಚಾರ್ಯರು ಮಾತನಾಡಿ ದೈವ ದೇವರ ಒಲುಮೆಯಿಂದ ಕಾರ್ಯಸಿದ್ಧಿಯಾಗುತ್ತದೆ. ಮನುಷ್ಯನ ಅತಿ ಆಸೆಯೆ ಅವನ ಅವನತಿಗೆ ಕಾರಣವಾಗುತ್ತದೆ. ನಮಗೆ ಭಗವಂತ ಎಷ್ಟು ದಯಪಾಲಿಸುತ್ತಾನೊ ಅದನ್ನು ಸಂತೋಷದಿಂದ ಸ್ವೀಕರಿಸಿ ನೆಮ್ಮದಿಯ ಜೀವನ ನಡೆಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ 14 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು ಮತ್ತು ಆರೋಗ್ಯ ನಿಧಿ ವಿತರಿಸಲಾಯಿತು. ಗೌರವಾಧ್ಯಕ್ಷ ಸುರೇಶ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಭಾಸ್ಕರ್ ಆಚಾರ್ಯ, ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ ರವಿ ಪುರೋಹಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿ, ವಾಸು ಆಚಾರ್ಯ ಪರ್ಕಳ ಪ್ರಾಸ್ತಾವನೆಗೈದರು. ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ ವಿದ್ಯಾರ್ಥಿ ವೇತನದ ಪಟ್ಟಿ ವಾಚಿಸಿದರು. ಶರ್ಮಿಳಾ ಸದಾಶಿವ ಆಚಾರ್ಯ ಬಹುಮಾನದ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಮಾಧವ ಆಚಾರ್ಯ ವರದಿ ವಾಚಿಸಿ, ಪ್ರೀತಂ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರೀತಿ ಆಚಾರ್ಯ ವಂದಿಸಿದರು.

ಮುದರಂಗಡಿ : ಜೋಜ್೯ ಮೆಂಡೋನ್ಸ ರಸ್ತೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹತ್ತು ಲಕ್ಷ ; ಕೊನೆಗೂ ಈಡೇರಿದ ಇಪ್ಪತ್ತೈದು ವರ್ಷಗಳ ಬೇಡಿಕೆ

Posted On: 09-03-2022 05:48PM

ಮುದರಂಗಡಿ : ಇಲ್ಲಿನ ಪಂಚಾಯತ್ ವ್ಯಾಪ್ತಿಯ ಮೂಡು ದಡ್ಡು ಕ್ರಿಶ್ಚಿಯನ್ ಕುಟುಂಬಗಳ ಸುಮಾರು ಇಪ್ಪತ್ತೈದು ವರ್ಷಗಳ ಬೇಡಿಕೆಯಾದ ದಿವಂಗತ ಜೋಜ್೯ ಮೆಂಡೋನ್ಸ ರಸ್ತೆಗೆ ಕಾಂಕ್ರಿಟೀಕರಣಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಶಾಸಕರಾದ ಲಾಲಾಜಿ. ಆರ್ ಮೆಂಡನ್ ರವರು ಉದ್ಘಾಟಿಸಿದರು.

ರಸ್ತೆಗೆ ಅನುದಾನ ತರುವಲ್ಲಿ ಶ್ರಮಿಸಿದ ಸೂಡ ಶಂಕರ್ ಕುಂದರ್ ಸ್ಥಳೀಯರಾದ ಫ್ರೀಡ ಮೆಂಡೋನ್ಸ, ಗುತ್ತಿಗೆದಾರ ಅಂಬಿಕಾ ಪ್ರಸಾದ್ ವಿಜಯಕೃಷ್ಣ ಸೂಡ, ಜಗದೀಶ್ ಆಚಾರ್ಯ, ಮುದರಂಗಡಿ ಪಂಚಾಯತ್ ಸದಸ್ಯರಾದ ಶಿವರಾಮ್ ಭಂಡಾರಿ, ಮುದರಂಗಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಹಿರಿಯ ನಾಗರಿಕರಾದ ಡೇವಿಡ್ ಕೊರೆಯಾ, ಸ್ಥಳೀಯರು ಉಪಸ್ಥಿತರಿದ್ದರು.

ಫಿಲೊಮಿನ ಮೆಂಡೋನ್ಸ ಸ್ವಾಗತಿಸಿ, ಜೇರಿ ಎಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಫಾ| ಜೆರೋಂ ಮೊಂತೇರೋ ವಂದಿಸಿದರು.

ಕೆಎಸ್ಟಿಎ ಕ್ಷೇತ್ರ ಸಮಿತಿ ಕಾಪು : ಟೈಲರ್ಸ್ ಡೇ ಕಾರ್ಯಕ್ರಮ

Posted On: 08-03-2022 06:10PM

ಕಾಪು : ಕೆಎಸ್ಟಿಎ ಕ್ಷೇತ್ರ ಸಮಿತಿ ಕಾಪು ವತಿಯಿಂದ ಮಾಚ್೯ 7ರಂದು ಟೈಲರ್ಸ್ ಡೇ ಕಾರ್ಯಕ್ರಮವು ಕಾಂಚನ್ ಮೂಲಸ್ಥಾನ ಸಭಾ ಭವನ ಕಾಪು ಇಲ್ಲಿ ಜರಗಿತು.

ಕಾರ್ಯಕ್ರಮವನ್ನು ಕೆಎಸ್ಟಿಎ ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಅಬ್ದುಲ್ ಖಾದರ್ ಉದ್ಘಾಟಿಸಿದರು.

ಕಾಪು ಕ್ಷೇತ್ರ ಸಮಿತಿಯ ಬಿ. ಕೆ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷರಾದ ಗುರುರಾಜ್ ಶೆಟ್ಟಿ ಉಡುಪಿ, ರಾಜ್ಯ ಸಮಿತಿಯ ಕೋಶಾಧಿಕಾರಿ ರಾಮಚಂದ್ರ ಉಡುಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಪಾಲನ್, ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ವಿಲಿಯಮ್ ಮಚಾದೋ, ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಆನಂದ ಪುತ್ರನ್, ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಮೃತಾಕ್ಷಿ ಶೆಟ್ಟಿ, ಕೆಎಸ್ಟಿಎ ಕಾಪು ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ರಮಾನಂದ್ ಬೆಳ್ಮಣ್, ಕೋಶಾಧಿಕಾರಿ ಸುರೇಶ್ ಶೆಟ್ಟಿಗಾರ್, ಪಡುಬಿದ್ರಿ ವಲಯದ ಅಧ್ಯಕ್ಷೆ ಮೋಹಿನಿ ಕುಂದರ್ , ಕಾಪು ವಲಯದ ಅಧ್ಯಕ್ಷೆ ಮೋಹಿನಿ ಸುವರ್ಣ, ಬೆಳ್ಮಣ್ ವಲಯದ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಶಿರ್ವ ವಲಯದ ಅಧ್ಯಕ್ಷ ಶ್ರೀನಿವಾಸ್ ಆಚಾರ್ಯ, ಕಟಪಾಡಿ ವಲಯದ ಅಧ್ಯಕ್ಷ ಶಾಹಿನಾ ಬೇಗಂ ಉಪಸ್ಥಿತರಿದ್ದರು.

ಕಾಪು ಕ್ಷೇತ್ರ ವಲಯ ಸಮಿತಿ ವತಿಯಿಂದ 50 ಜನ ಹಿರಿಯ ಸದಸ್ಯರಿಗೆ ಗೌರವಿಸಿ ಧನಸಹಾಯ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು. ಬಿ. ಕೆ ಶ್ರೀನಿವಾಸ್ ಪ್ರಾರ್ಥಿಸಿ, ಯೋಗೀಶ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮಾಚ್೯ 8 : ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಶಿರ್ವದಲ್ಲಿ 3 ನೇ ಸಂಜೀವಿನಿ ಸಂತೆ

Posted On: 07-03-2022 05:49PM

ಶಿರ್ವ : ಮಹಿಳಾ ಸ್ವ ಸಹಾಯ ಸಂಘಗಳ ಸಂಜೀವಿನಿ ಒಕ್ಕೂಟಗಳ 3ನೇ ಸಂಜೀವಿನಿ ಸಂತೆಯು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾಚ್೯ 8, ಮಂಗಳವಾರ ಶಿರ್ವ ಮಹಿಳಾ ಮಂಡಲದ ಮಹಿಳಾ ಸೌಧದಲ್ಲಿ ನಡೆಯಲಿದೆ.

ಶಿರ್ವ ಗ್ರಾಮ ಪಂಚಾಯತ್ ಸೇರಿದಂತೆ ಗ್ರಾಮ ಪಂಚಾಯತ್ ಮಜೂರು, ಗ್ರಾಮ ಪಂಚಾಯತ್ ಮುದರಂಗಡಿ, ಗ್ರಾಮ ಪಂಚಾಯತ್ ಕುತ್ಯಾರು, ಗ್ರಾ.ಪಂಚಾಯತ್ ಬೆಳ್ಳೆ ಹಾಗೂ ಇನ್ನಂಜೆ ಪಂಚಾಯತ್ ಗಳ ಸಂಜೀವಿನಿ ಒಕ್ಕೂಟಗಳ ಸ್ವ ಸಹಾಯ ಸಂಘಗಳ ಸದಸ್ಯೆಯರು ಮನೆಯಲ್ಲೆ ತಯಾರಿಸಿದ, ಉತ್ಪಾದಿಸಿದ, ಅಥವಾ ಬೆಳೆದ ಉತ್ಪನ್ನಗಳನ್ನು ಮಾರಾಟಮಾಡಲಿರುವರು.

ಶಿರ್ವ ಮಹಿಳಾ ಸೌಧದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಬೆಳಿಗ್ಗೆ ಗಂಟೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಡೆಯಲಿದೆ. ಈ ಸಂತೆಯಲ್ಲಿ ನಮ್ಮ ದಿನಬಳಕೆಯ ವಸ್ತುಗಳು, ತರಕಾರಿ, ಮಾಸ್ಕ್, ಬಟ್ಟೆ ಚೀಲಗಳು, ಪುಸ್ತಕ,ಸಾಂಬರು ಹುಡಿ ಹೀಗೆ 100 ಕ್ಕೂ ಹೆಚ್ಚಿನ ಉತ್ಪನ್ನಗಳ ಮಾರಾಟ ನಡೆಯಲಿದೆ. ಗ್ರಾಮಸ್ಥರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೀವಿನಿ ಸಂತೆಯ ಉತ್ಪನ್ನಗಳನ್ನು ಖರೀದಿಸಿ ಸಂಜೀವಿನಿ ಸಂತೆಯನ್ನು ಯಶಸ್ವಿಗೊಳಿಸಬೇಕೆಂದು ಶಿರ್ವ ಗ್ರಾ ಪಂ ಅಧ್ಯಕ್ಷ ಕೆ ಆರ್ ಪಾಟ್ಕರ್ ವಿನಂತಿಸಿಕೊಂಡಿದ್ದಾರೆ.

ಮಿಸ್ಟರ್ ಕರ್ನಾಟಕ ಮತ್ತು ಮಿಸ್ಟರ್ ಉಡುಪಿ - 2022 ಸ್ಫರ್ಧೆಯ ಮಾಸ್ಟರ್ ವಿಭಾಗದಲ್ಲಿ ಗೋವರ್ಧನ ಬಂಗೇರರಿಗೆ ಚಿನ್ನದ ಪದಕ

Posted On: 07-03-2022 05:02PM

ಉಡುಪಿ : ಇಲ್ಲಿನ ಸಂತಕಟ್ಟೆಯ ಮೌಂಟ್ ರೋಸರಿ ಚರ್ಚ್ ಮೈದಾನದಲ್ಲಿ ಮಾಂಡವಿ ಬಿಲ್ಡರ್ಸ್ ಹಾಗೂ ಇ-ಫಿಟ್ನೆಸ್ ಜಿಮ್ ಇವರು ಮಾರ್ಚ್ 5 ಮತ್ತು 6 ರಂದು ಆಯೋಜಿಸಿದ್ದ ಮಿಸ್ಟರ್ ಕರ್ನಾಟಕ - 2022 ಹಾಗೂ ಮಿಸ್ಟರ್ ಉಡುಪಿ - 2022 ಸ್ಫರ್ಧೆಯಲ್ಲಿ ಮಾಸ್ಟರ್ ವಿಭಾಗದಲ್ಲಿ ಗೋವರ್ಧನ ಬಂಗೇರ ಇವರಿಗೆ ಚಿನ್ನದ ಪದಕ ಲಭಿಸಿದೆ.

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ಸನ್ನಿಧಾನದೆಡೆಗೆ ನಮ್ಮ‌ ನಡಿಗೆ

Posted On: 06-03-2022 07:37PM

ಉಡುಪಿ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ಸನ್ನಿಧಾನದೆಡೆಗೆ ನಮ್ಮ‌ ನಡಿಗೆ ಪಂಚಮ‌ ವರ್ಷದ ಪಾದಯಾತ್ರೆಯು ಮಟ್ಟಾರ್ ನಿಂದ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಉಡುಪಿ ಇಲ್ಲಿಗೆ ನಡೆಯಿತು.

ಈ ಸಂದರ್ಭ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪಡುಬಿದ್ರಿ : ರಕ್ತದಾನ ಶಿಬಿರ ಹಾಗೂ ನೇತ್ರದಾನ ಅಭಿಯಾನಕ್ಕೆ ಚಾಲನೆ

Posted On: 06-03-2022 10:54AM

ಪಡುಬಿದ್ರಿ, ಮಾ.6 : ಜೆಸಿಐ ಪಡುಬಿದ್ರಿ ಮತ್ತು ಪಡುಬಿದ್ರಿ ವಲಯದ ಕ್ರಿಕೆಟ್ ತಂಡಗಳು ಹಾಗೂ ಜಿಲ್ಲಾಸ್ಪತ್ರೆ ಉಡುಪಿ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಬೋರ್ಡ್ ಶಾಲಾ ವಠಾರದಲ್ಲಿ ಜರಗಿದ ರಕ್ತದಾನ ಶಿಬಿರ ಹಾಗೂ ನೇತ್ರದಾನ ಅಭಿಯಾನವನ್ನು ಕರ್ನಾಟಕ ಸರಕಾರದ ಮಾಜಿ ನಗರಾಭಿವೃದ್ಧಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜೆಸಿಐ ಪಡುಬಿದ್ರಿ ಅಧ್ಯಕ್ಷರಾದ ಶರತ್ ಶೆಟ್ಟಿ ವಹಿಸಿದ್ದರು.

ಈ ಸಂದರ್ಭ ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಂಗಳೂರಿನ ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ನ ಪರ್ಚೇಸ್ ಮ್ಯಾನೇಜರ್ ಫಯಾಸ್ ಎಸ್. ಪಿ, ಉಡುಪಿ ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ಉಸ್ತುವಾರಿ ಡಾ|ವೀಣಾ, ಜೆಸಿಐನ ಸಂತೋಷ್ ಪೂಜಾರಿ, ಜೆಸಿಐ ಪಡುಬಿದ್ರಿ ಕಾರ್ಯದರ್ಶಿ ಸಂತೃಪ್ತಿ ಎಮ್. ಶೆಟ್ಟಿ, ಜೆಸಿಐ ಪಡುಬಿದ್ರಿ ನಿಕಟಪೂರ್ವ ಅಧ್ಯಕ್ಷರಾದ ಶಿವರಾಜ್, ಜೆಸಿಐನ ಪದಾಧಿಕಾರಿಗಳು, ಸದಸ್ಯರು, ಕ್ರಿಕೆಟ್ ತಂಡದ ಪ್ರತಿನಿಧಿಗಳು, ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.