Updated News From Kaup

ಉಕ್ರೇನ್ನಲ್ಲಿ ಇರುವವರು, ಅಲ್ಲಿ ಸಿಲುಕಿಕೊಂಡಿರುವ ಜನರ ಕುಟುಂಬಸ್ಥರು ನೇರವಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಮನವಿ

Posted On: 24-02-2022 10:10PM

ಮಂಗಳೂರು: ರಷ್ಯಾ-ಉಕ್ರೇನ್ ಸಂಘರ್ಷವು ಸಮರದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಜನರು ನೆಲೆಸಿದ್ದರೆ ಅಥವಾ ಅಲ್ಲಿ ಸಿಲುಕಿ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ನೀಡುವಂತೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜನತೆಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಯಾರಾದರೂ ನಮ್ಮವರು ಅಲ್ಲಿ ಸಮಸ್ಯೆಗೆ ಸಿಲುಕಿದ್ದರೆ ಮಾಹಿತಿ ನೀಡಿ, ಅಲ್ಲಿ ಇರುವವರು ಹಾಗೂ ಅಲ್ಲಿ ಸಿಲುಕಿಕೊಂಡಿರುವ ಜನರ ಕುಟುಂಬಸ್ಥರು ನೇರವಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ರವರು ಜಿಲ್ಲಾಧಿಕಾರಿಯವರ ಕಚೇರಿ, ರಜತಾದ್ರಿ ಮಣಿಪಾಲದಲ್ಲಿ ತೆರೆದಿರುವ ಕಂಟ್ರೋಲ್ ರೂಂ. ಸಂಖ್ಯೆ 1077 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಭಾರತದ ದೂತಾವಾಸ ಮತ್ತು ಸರ್ಕಾರದ ಜೊತೆ ಸಂಪರ್ಕದಲ್ಲಿರಲು ವಿದೇಶಾಂಗ ಇಲಾಖೆಯ 1800118797 (Toll free), +91-11-23012113, +91-11 23014104, +91-11-23017905 ಸಂಪರ್ಕ ಸಂಖ್ಯೆಗೆ ಕರೆ Fax: +91-11-23088124, Email: situationroom@mea.gov.in ಮೂಲಕ ಮಾಹಿತಿ ನೀಡಲು ಸರ್ಕಾರ ಸೂಚಿಸಿದೆ.

ರಶ್ಮಿ ಸನಿಲ್ ರಿಗೆ ಚಂದನ ಸಾಹಿತ್ಯ ಜ್ಯೋತಿ ರಾಜ್ಯ ಪ್ರಶಸ್ತಿ

Posted On: 24-02-2022 05:24PM

ಮಂಗಳೂರು : ಲೇಖಕಿ, ಬರಹಗಾರ್ತಿ, ನೃತ್ಯಪಟು, ನಿರೂಪಕಿ ರಶ್ಮಿ ಸನಿಲ್ ಇವರ ಗಣನೀಯ ಸೇವೆಯನ್ನು ಗುರುತಿಸಿ ಚಂದನ ಸಾಹಿತ್ಯ ವೇದಿಕೆ ಸುಳ್ಯ ವತಿಯಿಂದ ಫೆಬ್ರವರಿ 20ರಂದು ಚಂದನ ಸಾಹಿತ್ಯ ಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಂ. ಕಾಮ್ ಪದವೀಧರೆಯಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಶ್ಮಿ ಸನಿಲ್ ಅವರು, ಕನ್ನಡ ತುಳು ಭಾಷೆಯಲ್ಲಿ ಹಿಡಿತವನ್ನು ಹೊಂದಿದ್ದು ನೂರಾರು ಕವನ ರಚಿಸಿ ಮನೆ ಮಾತಾದವರು, 70 ಕ್ಕೂ ಹೆಚ್ಚು ಅಂತರ್ಜಾಲ ಹಾಗೂ ನೇರ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರೌಢಿಮೆ ತೋರಿರುವ ಇವರು ತನ್ನ ಕವನಗಳಿಗಾಗಿ 300 ಕ್ಕೂ ಅಧಿಕ ಬಹುಮಾನ ಪಡೆದುಕೊಂಡವರು.

ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವರು. ಯುವವಾಹಿನಿ, ರೋಟರಿ, ಮಹಿಳಾ ಮಂಡಳಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್, ಕಥಾಬಿಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ, ಪುತ್ತೂರು ಸಾಹಿತ್ಯ ವೇದಿಕೆ, ಚಂದನ ಸಾಹಿತ್ಯ ವೇದಿಕೆ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳ ಸದಸ್ಯೆ ಕೂಡ ಆಗಿದ್ದಾರೆ.

ಈ ಸಂದರ್ಭದಲ್ಲಿ ಭೀಮರಾವ್ ವಾಷ್ಟರ್ , ನಾರಾಯಣ ಕುಕ್ಕುವಳ್ಳಿ , ವೈಲೇಶ್ ಪಿ. ಕೊಡಗು, ಹಾಜಿ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಭಾರತ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ್ ಬಸ್ರೂರು

Posted On: 24-02-2022 04:37PM

ಉಡುಪಿ : ಸುದ್ದಿ ಕಿರಣ ಟಿವಿ ವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕ್ರತ ಇಲಾಖೆಯ ವತಿಯಿಂದ ಕೊಡ ಮಾಡಲ್ಪಡುವ ಭಾರತ ಸೇವಾ ರತ್ನ ಪ್ರಶಸ್ತಿಯನ್ನು ಚಂದ್ರಶೇಖರ ಬಸ್ರೂರು ಇವರಿಗೆ ನೀಡಿ ಗೌರವಿಸಲಾಯಿತು.

ಫೆಬ್ರವರಿ 20ರಂದು ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣ ಬೆಂಗಳೂರು ರಲ್ಲಿ ನಡೆದ ಸುದ್ದಿ ಕಿರಣ ಟಿ.ವಿ ವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವತಿಯಿಂದ ಭಾರತ ಸೇವಾ ರತ್ನ ಪ್ರಶಸ್ತಿ ೨೦೨೨ ನ್ನು ಚಂದ್ರಶೇಖರ ಬಸ್ರೂರು ಇವರಿಗೆ ನೀಡಿ ಗೌರವಿಸಲಾಯಿತು.

ರಂಗಭೂಮಿ ಕಲಾವಿದರಾಗಿ, ನಾಟಕ ರಚನೆ ಹಾಗೂ ನಿದೇ೯ಶಕರು, ಸಿನಿಮಾ ನಟ, ನಿದೇ೯ಶಕ,ವನಿಮಾ೯ಪಕರಾಗಿ, ಸಾವ೯ಜನಿಕ ಹೋರಾಟದಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸಿರುತ್ತಾರೆ.

ಜಿಲ್ಲೆಯಲ್ಲಿ 73995 ಮಕ್ಕಳಿಗೆ ಪೋಲಿಯೋ ಲಸಿಕೆ : ಕೂರ್ಮಾರಾವ್ ಎಂ

Posted On: 22-02-2022 08:11PM

ಉಡುಪಿ : ಫೆಬ್ರವರಿ 27 ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜಿಲ್ಲೆಯ 0-5 ವರ್ಷದೊಳಗಿನ 73995 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 0-5 ವರ್ಷದೊಳಗೆ ಗ್ರಾಮೀಣ ಪ್ರದೇಶದ 61105 ಮತ್ತು ನಗರ ಪ್ರದೇಶದ 12890 ಸೇರಿದಂತೆ ಒಟ್ಟು 73995 ಮಕ್ಕಳಿಗೆ ಫೆಬ್ರವರಿ 27 ರಂದು ಪಲ್ಸ್ ಪೋಲಿಯೋ ಲಸಿಕೆ ನೀಡಲು, ಗ್ರಾಮೀಣ ಪ್ರದೇಶದಲ್ಲಿ 571 ಹಾಗೂ ನಗರ ಪ್ರದೇಶದಲ್ಲಿ 91 ಸೇರಿದಂತೆ ಒಟ್ಟು 662 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಇದಲ್ಲದೆ 6 ಮೊಬೈಲ್ ಟೀಮ್ ಮತ್ತು 36 ಟ್ರಾನ್ಸಿಟ್ ಬೂತ್ಗಳನ್ನು ಹಾಗೂ ಎಲ್ಲಾ ಟೋಲ್ಗೇಟ್ಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗುವುದು ಎಂದರು. ಲಸಿಕಾ ಕಾರ್ಯಕ್ರಮದಲ್ಲಿ 2794 ಲಸಿಕಾ ಸ್ವಯಂಸೇವಕರು ಮತ್ತು 125 ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದು, ಆರೋಗ್ಯ, ಪಂಚಾಯತ್ ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ ಇಲಾಖೆ ಮತ್ತು ಇತರೆ ಇಲಾಖೆಗಳು, ರೋಟರಿ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿಲ್ಲೆಯ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಉದ್ಘಾಟಣೆಯನ್ನು ಫೆಬ್ರವರಿ 27 ರಂದು ಬೆಳಗ್ಗೆ 8 ಗಂಟೆಗೆ ಸರಕಾರಿ ಕೂಸಮ್ಮ ಶಂಭುಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆ ಉಡುಪಿಯಲ್ಲಿ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು, ತಮ್ಮ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಹಾಕಿಸಿ, ಮಕ್ಕಳನ್ನು ಪೋಲಿಯೋದಿಂದ ರಕ್ಷಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂ.ಜಿ.ರಾಮ, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪಡುಬಿದ್ರಿ : ಈಜಾಡಲು ಸಮುದ್ರಕ್ಕಿಳಿದ ವಿದ್ಯಾರ್ಥಿ ನೀರು ಪಾಲು, ಇಬ್ಬರ ರಕ್ಷಣೆ

Posted On: 19-02-2022 10:57PM

ಪಡುಬಿದ್ರಿ : ಇಲ್ಲಿನ ಬೀಚ್ನಲ್ಲಿ ಈಜಾಡಲು ಹೋದ ಮೂವರು ಯುವಕರಲ್ಲಿ ಓರ್ವ ವಿದ್ಯಾರ್ಥಿ ನೀರುಪಾಲದ ಘಟನೆ ಶನಿವಾರ ಸಂಜೆ ಕಾಡಿಪಟ್ನ ಎಂಬಲ್ಲಿ ನಡೆದಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮೂವರು ಯುವಕರು ಸ್ನೇಹಿತರಾಗಿದ್ದು, ಸಂಜೆ ಸಮುದ್ರಕ್ಕೆ ಇಳಿದ್ದಿದ್ದು, ಸಮುದ್ರದ ಬೃಹತ್ ಅಲೆಗೆ ಸಿಕ್ಕಿ ಮೂವರೂ ಕೂಡ ನೀರುಪಾಲಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಮೀನುಗಾರರು ಇಬ್ಬರನ್ನು ರಕ್ಷಿಸಿದ್ದಾರೆ.

ನೀರು ಪಾಲದ ಯುವಕ ಧನುಷ್ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಬಳಿಯ ನಿವಾಸಿಯಾಗಿದ್ದು, ಈತ ನಿಟ್ಟೆ ಕಾಲೇಜಿನ ಡಿಗ್ರಿ ವಿದ್ಯಾರ್ಥಿ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸತತ ಹಡುಕಾಟದ ತರುವಾಯ ಇಂದು ಸಂಜೆ ವಿದ್ಯಾರ್ಥಿಯ ಮೃತದೇಹ ದೊರೆತಿದ್ದು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.

ಯು.ಟಿ ಖಾದರ್ ಮತ್ತು ಎಸ್.ಐ.ಓ ಕರ್ನಾಟಕದ ನಿಯೋಗದಿಂದ ಉನ್ನತ ಶಿಕ್ಷಣ ಸಚಿವರ ಭೇಟಿ

Posted On: 17-02-2022 10:02PM

ಮಂಗಳೂರು : ವಿಧಾನಸಭೆಯ ವಿಪಕ್ಷ ಉಪನಾಯಕ ಯು. ಟಿ. ಖಾದರ್ ಮತ್ತು ಎಸ್.ಐ.ಓ ಕರ್ನಾಟಕದ ನಿಯೋಗದಿಂದ ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಅಶ್ವಥ್ ನಾರಾಯಣ ಅವರನ್ನು ವಿಧಾನಸಭೆಯ ಕಚೇರಿಯಲ್ಲಿ ಭೇಟಿ ಮಾಡಿ ಪದವಿ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸುತ್ತಿರುವುದರ ಕುರಿತು ಚರ್ಚಿಸಲಾಯಿತು.

ರಾಜ್ಯದಲ್ಲಿ ನಡೆಯುತ್ತಿರುವ ಸಮವಸ್ತ್ರದ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನ ಮಧ್ಯಂತರ ಆದೇಶವು ತಳಮಟ್ಟದಲ್ಲಿ ವಿವಿಧ ಗೊಂದಲಗಳಿಗೆ ಕಾರಣವಾಗಿದ್ದು, ರಾಜ್ಯದ ಕೆಲವು ಪದವಿ ಕಾಲೇಜುಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುತ್ತಿರುವ ಬಗ್ಗೆ ವರದಿಯಾಗಿದ್ದು ಅದರ ಬಗ್ಗೆ ಉನ್ನತ ಶಿಕ್ಷಣದ ಇಲಾಖೆಯಿಂದ ಸ್ಪಷ್ಟವಾದ ಮಾರ್ಗದರ್ಶನವನ್ನು ಕಾಲೇಜುಗಳಿಗೆ ನೀಡುವಂತೆ ಆಗ್ರಹಿಸಲಾಯಿತು.

ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಘನತೆಯ ವ್ಯಕ್ತಿತ್ವವನ್ನು ಇದು ಉಲ್ಲಂಘಿಸುತ್ತದೆ ಹಾಗೂ ಈ ಪ್ರಕ್ರಿಯೆಯೂ ಸಾಮಾಜಿಕವಾಗಿ ಸಭ್ಯತೆಯನ್ನು ಮೀರುವ ನಡೆಯಾಗಿದ್ದು ಇದು ಖಂಡನೀಯವಾಗಿದೆ.

ಈ ಸಂದರ್ಭದಲ್ಲಿ ಸಚಿವ ಅಶ್ವಥ್ ನಾರಾಯಣ ರವರು ನಿರ್ದಿಷ್ಟ ಸಮವಸ್ತ್ರ ನಿಗದಿಪಡಿಸಿರುವ ಕಾಲೇಜುಗಳನ್ನು ಹೊರತು ಪಡಿಸಿ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಿಜಾಬ್ ಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಮೂಡಿಸಬಾರದೆಂದು ಸ್ಪಷ್ಟವಾಗಿ ತಿಳಿಸಿದ್ದು ಕೆಲವು ಕಾಲೇಜುಗಳಲ್ಲಿ ಅಲ್ಲಿನ ಆಡಳಿತ ಮಂಡಳಿಯು ಸಮವಸ್ತ್ರ ನಿಗದಿಪಡಿಸಿದ್ದಲ್ಲಿ ಕೋರ್ಟ್ ಆದೇಶವನ್ನು ಪರಿಗಣಿಸಿ ಸೌಹಾರ್ದಯುತವಾಗಿ ಅನುಷ್ಠಾನ ಮಾಡಬೇಕು ಎಂದರು, ಶಾಲಾ ಅಥವಾ ಕಾಲೇಜಿನ ಗೇಟಿನ ಬಳಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ತಡೆಯುವಂತಿಲ್ಲ, ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರವೇಶಿಸಬಹುದಾಗಿದೆ, ಅಲ್ಲದೇ ಈ ಆದೇಶವು ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ಯು.ಟಿ ಖಾದರ್ ನೇತೃತ್ವದ ಶಾಸಕರ ನಿಯೋಗವು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ಭೇಟಿ ಮಾಡಿ ಸಮವಸ್ತ್ರದ ವಿವಾದದ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಾಂಜಾ ಸಾಗಾಟ ಮಾಡುತ್ತಿದ್ದ ಕಾರು ಸಹಿತ ಇಬ್ಬರ ಸೆರೆ 2.220 ಕೆಜಿ ಗಾಂಜಾ ವಶಕ್ಕೆ

Posted On: 17-02-2022 11:34AM

ಮಂಗಳೂರು :ಕೇರಳದ ಕುಂಜತ್ತೂರು ಪರಿಸರದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡಿಕೊಂಡು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಫೆಬ್ರವರಿ 16ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ನಾರ್ಲ ಪಡೀಲ್ ರಾಮನಗರ ಎಂಬಲ್ಲಿ ಕಾರಿನಲ್ಲಿ ಅಕ್ರಮ ಮಾದಕ ವಸ್ತುವಾದ ಗಾಂಜಾವನ್ನು ಕೇರಳದಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತ್ರತ್ವದ ತಂಡ ದಾಳಿ ನಡೆಸಿ ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಮಿಂಜ ಗ್ರಾಮ, ಹೊಸಂಗಡಿಯ ಪ್ರಫುಲ್ ರಾಜ್ (23), ಮತ್ತು ಬಂಟ್ವಾಳ ತಾಲೂಕಿನ ಬೊಳಿಯಾರು, ಸಜಿಪ ಗ್ರಾಮದ ಅವಿನಾಶ್ (24) ಎಂಬವರನ್ನು ದಸ್ತಗಿರಿ ಮಾಡಿ ಅವರ ವಶದಿಂದ 2.220 ಕೆಜಿ ತೂಕದ ಗಾಂಜಾ, ನಗದು ರೂ. 1200/- 2 ಮೊಬೈಲ್ ಫೋನ್ ಗಳು ಹಾಗೂ ಮಾರುತಿ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಒಟ್ಟು ಮೌಲ್ಯ ರೂ. 5,50,400/-ಆಗಬಹುದು. ಆರೋಪಿಗಳ ಪೈಕಿ ಅವಿನಾಶ್ ಎಂಬಾತನು ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಕಾರಿ ವಾಹನಕ್ಕೆ ಹಾನಿಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದನು.

ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ಯವರಾದ ರಾಜೇಂದ್ರ ಬಿ, ಪ್ರದೀಪ ಟಿ ಆರ್ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

ಕಟಪಾಡಿ : ಮಕ್ಕಳ ಗ್ರಾಮ ಸಭೆಯಲ್ಲಿ ಬಾಲ ಪ್ರತಿಭೆಗಳಿಗೆ ಸನ್ಮಾನ

Posted On: 16-02-2022 05:11PM

ಕಟಪಾಡಿ : ಇಲ್ಲಿನ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷರಾದ ಇಂದಿರಾ ಎಸ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಜರಗಿತು.

ಮಕ್ಕಳ ಆರೋಗ್ಯಕರ ಬೆಳವಣಿಗೆಯಲ್ಲಿ ಪೌಷ್ಟಿಕ ಆಹಾರ ಸೇವನೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಅಪೌಷ್ಟಿಕತೆ ನಿವಾರಣೆಗೆ ಕ್ರಮ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಪ್ರೇಮಾನಂದ ಕಲ್ಮಾಡಿ ಯವರು ಆಗಮಿಸಿದ್ದರು. ಮಕ್ಕಳ ರಕ್ಷಣಾ ಘಟಕದ ಕಪಿಲ, ಮಕ್ಕಳ ಸಹಾಯವಾಣಿಯಿಂದ ತ್ರಿವೇಣಿ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕಿ ಪ್ರಭಾಕಲಾ, ಮಕ್ಕಳ ನಾಯಕ ರಾದ ಸಮೀಕ್ಷಾ, ಗಣ್ಯ, ಅಂಜಲಿ, ಕವನ, ರೋಷನಿ ಹಾಗೂ ಪಂಚಾಯತ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ : ಸಭೆಯಲ್ಲಿ ಹಲವು ಪ್ರಶಸ್ತಿ ಗಳನ್ನು ಪಡೆದ ಬಾಲ ಪ್ರತಿಭೆಗಳಾದ ಕೆ.ಪ್ರಥಮ ಕಾಮತ್ ( ಜಾದೂ, ಕ್ಲೇ ಮಾಡೆಲಿಂಗ್), ಯಶಸ್ ಪಿ. ಸುವರ್ಣ (ಕೊಳಲು ವಾದನ), ಮಾಣಿಕ್ ಸುವರ್ಣ ( ಕರಾಟೆ) ಹಾಗೂ ಎಸ್. ಎಸ್. ಎಲ್. ಸಿ. ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಕುಮಾರಿ ಅನುಶ್ರೀ ಇವರನ್ನು ಸನ್ಮಾನಿಸ ಲಾಯಿತು. ಸದಸ್ಯರಾದ ಪ್ರಭಾ ಶೆಟ್ಟಿ, ಫ್ಲಾವಿಯಾ, ಶಾಲಿನಿ, ಆಗ್ನೇಸ್ ರವರು ಸನ್ಮಾನ ಪತ್ರ ವಾಚಿಸಿದರು. ಪಂಚಾಯತ್ ಉಪಾಧ್ಯಕ್ಷರಾದ ಅಬುಬಕರ್ ಎ. ಆರ್. ಸಾಂದರ್ಭಿಕವಾಗಿ ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು. ಪಂಚಾಯತ್ ಸದಸ್ಯರಾದ ಫ್ಲಾವಿಯಾ ಮಿನೇಜಸ್ ಸ್ವಾಗತಿಸಿದರು. ಪಂಚಾಯಿತಿ ಕಾರ್ಯದರ್ಶಿ ವಸಂತಿಯವರು ವಂದಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು.

ದುಬೈ: ಫೆಬ್ರವರಿ 19ರಂದು ವಿಜಯ್ ಪ್ರಕಾಶ್ ಸಂಗೀತ ಸಂಜೆ 'ನೀನೇ ರಾಜಕುಮಾರ'!

Posted On: 16-02-2022 11:59AM

ದುಬೈ : ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಸ್ವರ ಮಾಂತ್ರಿಕ ಎಸ್. ಪಿ. ಬಾಲಸುಬ್ರಹ್ಮಣ್ಯಂರವರ ಸ್ಮರಣಾರ್ಥ ವಿಜಯ್ ಪ್ರಕಾಶ್ ಸಂಗೀತ ಸಂಜೆ ಕಾರ್ಯಕ್ರಮ 'ನೀನೇ ರಾಜಕುಮಾರ' ದುಬೈನಲ್ಲಿ 2022 ಫೆಬ್ರವರಿ 19 ರಂದು ಸಂಜೆ 6 ಗಂಟೆಗೆ ಸರಿಯಾಗಿ ಅಲ್ ನಸರ್ ಲೀಸರ್ ಲ್ಯಾಂಡ್ ನಲ್ಲಿ ನಡೆಯಲಿದ್ದು. ಪೂರ್ವ ಸಿದ್ಧತೆಗಳು ಭರದಿಂದ ಸಾಗಿದೆ.

ಕೋವಿಡ್ ಸಂಕಷ್ಟಗಳ ನಂತರ ನಡೆಯುತ್ತಿರುವ ಪ್ರಥಮ ಕನ್ನಡ ಸಂಗೀತ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಮತ್ತು ಅನುರಾಧ ಭಟ್, ಮೇಘನಾ ಭಟ್, ದುಬೈ ಉದ್ಯಮಿ, ಗಾಯಕ ಹರೀಶ್ ಶೇರಿಗಾರ್ ಹಾಗೂ ಹತ್ತಕ್ಕೂ ಹೆಚ್ಚು ಸಂಗೀತಗಾರರು ಭಾಗವಹಿಸಲಿದ್ದು, ಈ ಸಂಗೀತ ಕಾರ್ಯಕ್ರಮದ ನಿರೂಪಣೆಯನ್ನು ನಿರೂಪಕಿ ಅನುಪಮ ಭಟ್, ಆರ್ ಜೆ ಎರಾಲ್ ನಡೆಸಿಕೊಡಲಿದ್ದಾರೆ.

ದುಬೈನ ಪುನೀತ್ ರಾಜಕುಮಾರ್ ಅಭಿಮಾನಿಗಳು ಆಯೋಜಿಸುತ್ತಿರುವ ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು 0552443737, 0555592434, 050 3911719. ಅಥವಾ ನೇರವಾಗಿ www.eticketing.ae ಮೂಲಕ ಟಿಕೆಟ್ ಕಾದಿರಿಸಬಹುದು.

ಕಾಪು : ಪುರಸಭೆಯ ಆಧಾರ್ ತಿದ್ದುಪಡಿ ಕೇಂದ್ರದ ಪುನರಾರಂಭ ; ರಾಷ್ಟ್ರೀಯ ಹೆದ್ದಾರಿಯ ಬೀದಿ ದೀಪದ ಸರಿಪಡಿಸುವಿಕೆಗೆ ಆಗ್ರಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ

Posted On: 15-02-2022 06:29PM

ಕಾಪು : ಇಲ್ಲಿನ ಪುರಸಭೆಯಲ್ಲಿ ಸಾರ್ವಜನಿಕರ ಸೇವೆಗಾಗಿ ಇದ್ದಂಥ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡದೆ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರಗಳನ್ನು ಮುಚ್ಚಿದ್ದಾರೆ ಇದನ್ನು ಕೂಡಲೇ ಆರಂಭಿಸಬೇಕು. ಕಾಪು ಕ್ಷೇತ್ರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಒಂದು ಬದಿಯ ಬೀದಿ ದೀಪಗಳು ಉರಿಯುತ್ತಿಲ್ಲ ಇದನ್ನು ಸರಿಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಸಂತೋಷ್ ಆಗ್ರಹಿಸಿದ್ದಾರೆ.

ಕಾಪು ಪುರಸಭೆ ಹಾಗೂ ಕಾಪು ತಾಲೂಕಿಗೆ ಸಂಬಂಧಪಟ್ಟ ಸಾವಿರಾರು ಜನರು ಆಧಾರ ಕಾರ್ಡು ತಿದ್ದುಪಡಿಗಾಗಿ ಪರದಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ಕೊಟ್ಟು ಆಧಾರ್ ಕಾರ್ಡ್ ಕೇಂದ್ರವನ್ನು ಬಂದ್ ಮಾಡುವ ಮುಂಚೆ ಸಾರ್ವಜನಿಕರ ಗಮನಕ್ಕೆ ತಿಳಿಸಬೇಕಿತ್ತು. ಆದರೆ ನಿದ್ರೆಯಲ್ಲಿ ಇರುವ ಅಧಿಕಾರಿಗಳು ಗಮನಕ್ಕೆ ಬಂದ ಕೂಡಲೇ ಆಧಾರ್ ಕಾರ್ಡ್ ಕೇಂದ್ರವನ್ನು ಪುನರ್ ಆರಂಭಿಸಬೇಕು ಹಾಗೂ ಕಾಪು ಕ್ಷೇತ್ರಕ್ಕೆ ಸಂಬಂಧಪಟ್ಟ 66 ರಾಷ್ಟ್ರೀಯ ಹೆದ್ದಾರಿ ಯಲ್ಲಿ ಎರಡೂ ಬದಿಯಲ್ಲಿ ಇರುವಂಥ ದಾರಿದೀಪದಲ್ಲಿ ಒಂದು ಬದಿಯ ದಾರಿದೀಪಗಳು ಮಾತ್ರ ಉರಿಯುತ್ತಿದೆ. ಇನ್ನೊಂದು ಬದಿಯ ದಾರಿ ದೀಪಗಳು ಉರಿಯದೆ ನಿಂತಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ. ಆಧಾರ್ ಮತ್ತು ಬೀದಿ ದೀಪದ ಸಮಸ್ಯೆಗಳ ಬಗ್ಗೆ ಶಾಸಕರು ಮತ್ತು ಅಧಿಕಾರಿ ವರ್ಗಕ್ಕೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.