Updated News From Kaup
ಜೂನ್ 30 : ಶಿರ್ವದಲ್ಲಿ ಸಂಜೀವಿನಿ ಸಂತೆ
Posted On: 27 Jun 2022, 10:59 PM
ಶಿರ್ವ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಆದೇಶದಂತೆ ಸಂಜೀವಿನಿ ಒಕ್ಕೂಟಗಳ ಸಂಜೀವಿನಿ ಸಂತೆಯು ಜೂನ್ 30 ರಂದು ಶಿರ್ವ ಮಹಿಳಾ ಮಂಡಲದ ಮಹಿಳಾ ಸೌಧದಲ್ಲಿ ಬೆಳಿಗ್ಗೆ ಗಂಟೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಶಿರ್ವ ಗ್ರಾಮ ಪಂಚಾಯತ್ ಸೇರಿದಂತೆ ಮಜೂರು, ಮುದರಂಗಡಿ, ಕುತ್ಯಾರು, ಬೆಳ್ಳೆ, ಇನ್ನಂಜೆ ಗ್ರಾಮ ಪಂಚಾಯತ್ ಗಳ ಸಂಜೀವಿನಿ ಒಕ್ಕೂಟಗಳ ಸ್ವ ಸಹಾಯ ಸಂಘಗಳ ಸದಸ್ಯೆಯರು ಮನೆಯಲ್ಲೆ ತಯಾರಿಸಿದ, ಉತ್ಪಾದಿಸಿದ ಅಥವಾ ಬೆಳೆದ ಉತ್ಪನ್ನಗಳ ಮಾರಾಟ ಮಾಡಲು ಅವಕಾಶವನ್ನು ನೀಡುವ ಕಾರ್ಯಕ್ರಮ ಸಂಜೀವಿನಿ ಸಂತೆ. ಈ ಸಂತೆಯಲ್ಲಿ ನಮ್ಮ ದಿನಬಳಕೆಯ ವಸ್ತುಗಳು, ತರಕಾರಿ, ಬಟ್ಟೆ ಚೀಲಗಳು, ಪುಸ್ತಕ, ಸಾಂಬರು ಹುಡಿ ಹೀಗೆ ದಿನ ಬಳಕೆಯ 50ಕ್ಕೂ ಹೆಚ್ಚಿನ ಉತ್ಪನ್ನಗಳ ಮಾರಾಟ ನಡೆಯಲಿದೆ. ಆರು ಪಂಚಾಯತ್ ಗಳ ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿ ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟಮಾಡಲಿದ್ದಾರೆ. ಗ್ರಾಮ ಪಂ ಸದಸ್ಯರು, ಗ್ರಾಮಸ್ಥರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೀವಿನಿ ಸಂತೆಯ ಉತ್ಪನ್ನಗಳನ್ನು ಖರೀದಿಸಿ, ಪ್ರೋತ್ಸಾಹಿಸಿ ಸಂಜೀವಿನಿ ಸಂತೆಯನ್ನು ಯಶಸ್ವಿಗೊಳಿಸಬೇಕೆಂದು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಆರ್ ಪಾಟ್ಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ ಗ್ರಾಮ ಪಂಚಾಯತ್ : ತೆರಿಗೆ ಪಾವತಿಸಲು ಡಿಜಿಟಲ್ ವ್ಯವಸ್ಥೆ
Posted On: 27 Jun 2022, 10:48 PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ನ ಗ್ರಾಮಸ್ಥರಿಗೆ ತೆರಿಗೆ ಪಾವತಿ ಮಾಡಲು ಅನುಕೂಲವಾಗುವಂತೆ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ತಮ್ಮ ಮನೆ ತೆರಿಗೆಯನ್ನು ಗೂಗಲ್ ಪೇ ಮೂಲಕ ಪಾವತಿಸುವ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉದ್ಘಾಟಿಸಿದರು. ಗ್ರಾಮಸ್ಥರು ತಮ್ಮ ಕಟ್ಟಡ ತೆರಿಗೆ, ಮನೆ ತೆರಿಗೆ, ನೀರಿನ ಕರ ಇತ್ಯಾದಿಗಳನ್ನು ಪಾವತಿಸಲು ಈ ವ್ಯವಸ್ಥೆಯನ್ನು ಬಳಸಬಹುದಾಗಿದೆ. ಗೂಗಲ್ ಪೇ, ಪೇಟಿಯಂ, ಸ್ಕ್ಯಾನರ್ ಗಳನ್ನು ಅಳವಡಿಸಲಾಗಿದ್ದು ಈ ಮೂಲಕ ತೆರಿಗೆ ಪಾವತಿಸಿ ಸಂಬಂಧಿಸಿದ ರಶೀದಿಯನ್ನು ಸಿಬ್ಬಂದಿಯವರಿಂದ ಪಡೆಯಬಹುದಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ತಿಳಿಸಿದರು.
ಪುಷ್ಪಾನಂದ ಫೌಂಡೇಶನ್ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
Posted On: 27 Jun 2022, 09:41 PM
ಕಾಪು : ಪುಷ್ಪಾನಂದ ಫೌಂಡೇಶನ್ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯ 2022 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 85 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 3 ಆಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪುಷ್ಪಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಯಶ್ಪಾಲ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಂದೀಪ್ ಶೆಟ್ಟ 9880295376 ಲಕ್ಷ್ಮೀಕಾಂತ್ ಕೆ. 9964014603 ಚಿತ್ತನ್ ಪೂಜಾರಿ 9964379589 ಪ್ರವೀಣ್ ಪೂಜಾರಿ 9886619748 ಆಶ್ವಿನ್ ಪುತ್ರನ್ 9916664903 ಯೋಗೀಶ್ ಪೂಜಾರಿ 9945772113 ಬಾಲಕೃಷ್ಣ ಕೋಟ್ಯಾನ್ 9108298806
ಇನ್ನಂಜೆ : ಗೋವುಗಳಿಗೆ ಮೇವು ಕಾರ್ಯಕ್ರಮ
Posted On: 27 Jun 2022, 09:24 PM
ಕಾಪು : ಇನ್ನಂಜೆ ಯುವತಿ ಮಂಡಲ (ರಿ.) ಇನ್ನಂಜೆ ಮತ್ತು ಬಿಲ್ಲವ ಸೇವಾ ಸಂಘ ಇನ್ನಂಜೆ ಇವರ ಜಂಟಿ ಆಶ್ರಯದಲ್ಲಿ ಜೂನ್ 27ರಂದು ಗೋವುಗಳಿಗೆ ಮೇವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮೇವಿಗಾಗಿ ಹುಲ್ಲನ್ನು ಗ್ರೇಗೋರಿ ಮಥಾಯಸ್ ನೀಡಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಆಶಾ ನಾಯಕ್, ಸದಸ್ಯರಾದ ಲಕ್ಷ್ಮಿ, ಸುಮಲತಾ, ಅಕ್ಷತಾ ,ಸೌಮ್ಯ ಹಾಗೂ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಸದಾಶಿವ ಪೂಜಾರಿ, ಸದಸ್ಯರಾದ ಶೇಖರ್ ಪೂಜಾರಿ, ಸುಮತಿ ಹಾಗೂ ಮೋಹನ್, ನವನೀತ್, ಸುಶಾಂತ್, ಶಶಾಂಕ್, ಸಂಜೀವ ಮೂಲ್ಯ ಸಹಕಾರ ನೀಡಿದರು. ಮೇವನ್ನು ಕಾಪು ಗೋಶಾಲೆಗೆ ನೀಡಲಾಯಿತು.
ಕಾಪು ಕುಲಾಲ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಆಯ್ಕೆ
Posted On: 27 Jun 2022, 09:16 PM
ಕಾಪು : ಇಲ್ಲಿನ ಕುಲಾಲ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚಿಗೆ ಸಂಘದ ಕಚೇರಿಯಲ್ಲಿ ಜರಗಿತು. ಸಂಘದ ಮುಂದಿನ ಕಾರ್ಯ ಅವಧಿಗೆ ಸಂದೀಪ್ ಬಂಗೇರ ಶಂಕರಪುರ ಅಧ್ಯಕ್ಷರಾಗಿ ಮರು ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಮೂಲ್ಯ ಎಲ್ಲೂರು ಆಯ್ಕೆಯಾಗಿದ್ದಾರೆ. ಈ ಹಿಂದೆ ಇದ್ದ ಕಾರ್ಯಕಾರಿಣಿ ಸಮಿತಿಯನ್ನು ಮುಂದುವರೆಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಕಾಪು ಕುಲಾಲ ಸಂಘ ಪ್ರಕಟನೆಯಲ್ಲಿ ತಿಳಿಸಿದೆ.
ಪೆರ್ಡೂರು : ಅನಿಯಮಿತ ವಿದ್ಯುತ್ ಕಡಿತ - ಮನವಿ, ಪ್ರತಿಭಟನೆಯ ಎಚ್ಚರಿಕೆ
Posted On: 27 Jun 2022, 08:39 PM
ಉಡುಪಿ : ಪೆರ್ಡೂರು ಮೆಸ್ಕಾಂ ವ್ಯಾಪ್ತಿಯ ಬೆಳ್ಳರ್ಪಾಡಿ, 41ನೇ ಶಿರೂರು ಹಾಗೂ ಬೈರಂಪಲ್ಲಿ ಯಲ್ಲಿ ಅನಿಯಮಿತ ವಿದ್ಯುತ್ ಕಡಿತವನ್ನು ವಿರೋಧಿಸಿ ಬೈರಂಪಲ್ಲಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಪೆರ್ಡೂರು ಮೆಸ್ಕಾಂ ಕಚೇರಿಗೆ ತೆರಳಿ ಪೆರ್ಡೂರು ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಮೆಸ್ಕಾಂ ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಫೋನ್ ಸಂಭಾಷಣೆ ಮುಖಾಂತರ ಮಾತನಾಡಿ ಇನ್ನು ಇದೇ ರೀತಿ ಮುಂದುವರೆದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಲಾಯಿತು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಲೂ, ಬೈರಂಪಲ್ಲಿ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಸಾಂತ್ಯಾರು, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಮರ್ ಕುಲಾಲ್ ಬೈರಂಪಲ್ಲಿ, ಕಾಪು ಉತ್ತರ ವಲಯದ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ನಿತಿನ್ ಕುಮಾರ್ ಶೆಟ್ಟಿ ಬೆಳ್ಳರ್ಪಾಡಿ, ಬೈರಂಪಳ್ಳಿಯುವ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ್ ಕುಲಾಲ್ ಕಾಂಗ್ರೆಸ್ ಮುಖಂಡರುಗಳಾದ ಉದಯಕುಮಾರ್, ಕೃಷ್ಣನಂದ ನಾಯಕ್ ಹಾಗೂ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನ - ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳ ವಿಲೇವಾರಿ
Posted On: 26 Jun 2022, 07:05 PM
ಮಂಗಳೂರು : ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ಪೈಕಿ ಪ್ರಸ್ತುತ ಠಾಣೆಯಲ್ಲಿ ವಿಲೇವಾರಿಯ ಸಲುವಾಗಿ ಬಾಕಿ ಇರುವ ಮಾದಕ ವಸ್ತುಗಳನ್ನು ವಿಲೇವಾರಿಗೊಳಿಸುವ ಪ್ರಕ್ರಿಯೆ ಇಂದು ನಡೆಯಿತು. ಈ ಸಂಬಂಧ ಮಾನ್ಯ ನ್ಯಾಯಾಲಯಗಳಿಂದ ಆದೇಶವನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಮಾದಕ ದ್ರವ್ಯ ವಿಲೇವಾರಿ ಸಮಿತಿಯ ಅಧ್ಯಕ್ಷರಾದ ಸೋನವಣೆ ಋಷಿಕೇಶ್ ಭಗವಾನ್ ಐಪಿಎಸ್, ಮತ್ತು ಸದಸ್ಯರುಗಳಾದ ಶಿವಾಂಶು ರಜಪೂತ್ ಐಪಿಎಸ್, ಸಹಾಯಕ ಪೊಲೀಸ್ ಅಧೀಕ್ಷಕರು ಬಂಟ್ವಾಳ ಉಪವಿಭಾಗ ಮತ್ತು ಡಾ. ಗಾನ ಪಿ ಕುಮಾರ್, ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪ ವಿಭಾಗರವರ ಸಮಕ್ಷಮದಲ್ಲಿ ವಿವಿಧ ಠಾಣೆಯ 11 ಪ್ರಕರಣಗಳಲ್ಲಿ ಸುಮಾರು ರೂ 23,75,300/- ಮೌಲ್ಯದ 53 ಕೆ.ಜಿ 128 ಗ್ರಾಂ ಮಾದಕ ವಸ್ತು ಗಾಂಜಾವನ್ನು ಮತ್ತು ಸುಮಾರು ರೂ 30,00,000/- ಮೌಲ್ಯದ 120 ಗ್ರಾಂ ಹೆರಾಯಿನ್ ನ್ನು ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ, ಸಂಸ್ಕರಣೆ ಮತ್ತು ವಿಲೇವಾರಿ ಘಟಕವಾದ ಮೆ|| ರಾಮ್ಕಿ ಎನರ್ಜಿ ಮತ್ತು ಎನ್ವಿರೋನ್ಮೆಂಟ್ ಲಿ. ರವರಿಗೆ ಹಸ್ತಾಂತರಿಸಿ ನಾಶಪಡಿಸಲಾಯಿತು.
ಗ್ರಾಮ ಒನ್ ಕೇಂದ್ರಗಳಲ್ಲಿ ವಿವಿಧ ಸೇವೆ
Posted On: 24 Jun 2022, 06:43 PM
ಉಡುಪಿ : ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಗ್ರಾಮ ಒನ್ ಯೋಜನೆಯಡಿ ಎಲ್ಲ ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳೆ ವಿಮೆ, ವಿದ್ಯುತ್ ಬಿಲ್ ಪಾವತಿ, ಕೆ.ಎಸ್.ಆರ್.ಟಿ.ಸಿ ಬಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯಗಳನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಅವಘಡ - ವ್ಯಕ್ತಿ ಮೃತ
Posted On: 23 Jun 2022, 11:27 PM
ಸುರತ್ಕಲ್ : ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಕೌಂಟರ್ ವೇಟ್ ತಾಗಿ ವ್ಯಕ್ತಿಯೋರ್ವ ಗಾಯಗೊಂಡಿದ್ದು ಗಾಯಾಳುವನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತ ಪಟ್ಟಿರುವ ಘಟನೆ ಜೂನ್ 22 ರಂದು ನಡೆದಿದೆ. ಮೃತ ವ್ಯಕ್ತಿ ಕೇಶವ (47) ಕುತ್ತೆತ್ತೂರು ಗ್ರಾಮದ ಎಂ ಆರ್ ಪಿ ಎಲ್ ವರ್ಕ್ ಶಾಪ್ ಬಳಿ ಗುತ್ತಿಗೆ ಆಧಾರದಲ್ಲಿ ರಿಗ್ಗರ್ ಕೆಲಸ ಮಾಡಿಕೊಂಡಿದ್ದರು. ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಟ್ರೇಲರ್ ನಲ್ಲಿ ಇದ್ದ ಕೌಂಟರ್ ವೇಟ್ ನ್ನು ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಕೌಂಟರ್ ವೇಟ್ ತಾಗಿ ಈ ಅವಘಡ ಸಂಭವಿಸಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಒದಗಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
Posted On: 23 Jun 2022, 08:43 PM
ಉಡುಪಿ : ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ದಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಮ್ಯಾನ್ಯವಲ್ ಸ್ಕ್ಯಾವೆಂಜರ್ ಪದ್ದತಿಯನ್ನು ಸಂಪೂರ್ಣವಾಗಿ ನಿಷೇಧಿಸಿ, ಕಾಯಿದೆ ಹಾಗೂ ನಿಯಮಗಳನ್ನು ಜಾರಿಗೆ ತರುವುದರೊಂದಿಗೆ , ಈ ವೃತ್ತಿಯಲ್ಲಿ ತೊಲಗಿಸಬೇಕು, ಒಂದೊಮ್ಮೆ ಕಾಯಿದೆಯನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಕಾನೂನಿಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮ್ಯಾನ್ಯುವಲ್ ಸ್ಕ್ಯಾವೆಂಜರ್ ವೃತ್ತಿಯಿಂದ ಹೊರ ಬಂದಿರುವವರಿಗೆ ಸೂಕ್ತ ಪುರ್ನವಸತಿ ಒದಗಿಸಬೇಕು , ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸಫಾಯಿ ಕರ್ಮಚಾರಿ ಅವರಿಗೆ ನಿವೇಶನ ಮಂಜೂರಾತಿಯನ್ನು ಪ್ರಥಮಾದ್ಯತೆಯ ಮೇಲೆ ನೀಡಬೇಕು ಎಂದು ಸೂಚಿಸಿದರು. ಮ್ಯಾನ್ಯುವಲ್ ಸ್ಕ್ಯಾವೆಂಜರ್ ನಿಂದ ಮೃತಪಟ್ಟ ಕಾರ್ಮಿಕರ ಕುಟುಂಬದ ಅವಲಂಬಿತ ಸದಸ್ಯರುಗಳಿಗೆ ಗುರುತಿನ ಚೀಟಿ ಹಾಗೂ ಪುರ್ನವಸತಿ ಕಲ್ಪಿಸುವ ಕಾರ್ಯವಾಗಬೇಕು ಎಂದರು. ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರ, ವೈಯಕ್ತಿಕವಾಗಿ , ಸಫಾಯಿ ಕರ್ಮಚಾರಿಗಳ ಸ್ವ ಸಹಾಯ ಗುಂಪುಗಳಿಂದ , ಖಾಸಗಿ ಏಜೆನ್ಸಿ ಗುತ್ತಿಗೆದಾರರಿಂದ ಹೊಸ ಯಂತ್ರಗಳನ್ನು ಖರೀದಿ ಮಾಡಲು ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುವುದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ 3 ತಿಂಗಳಿಗೊಮ್ಮೆ ಸಾಮಾನ್ಯ ಅರೋಗ್ಯ ತಪಾಸಣೆ ಹಾಗೂ ವಾರ್ಷಿಕವಾಗಿ ಎರಡು ಬಾರಿ ಸಂಪೂರ್ಣ ದೇಹ ಪರೀಕ್ಷೆಯನ್ನು ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಮಾಡಿಸಿ, ವರದಿಯನ್ನು ಜಿಲ್ಲಾ ಜಾಗೃತಿ ಸಮಿತಿಗೆ ನೀಡಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಲೋರ್ಸ್ ಹಾಗೂ ಕ್ಲೀನರ್ ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಅರ್ಹ ವ್ಯಕ್ತಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು , ಜಾಗೃತ ಸಮಿತಿ ಸದಸ್ಯರುಗಳಾದ ವೈ.ಲಕ್ಷ್ಮಣ್ , ಗಣೇಶ್, ಅನಿತಾ, ಹಾಗೂ ಎಲ್ಲಾ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
