Updated News From Kaup

ನ. 30 - ಡಿ.1: ವೀರಮಾರುತಿ ಕ್ರಿಕೆಟರ್ಸ್ ಇವರ ವತಿಯಿಂದ ಹನುಮ ಟ್ರೋಫಿ -2024 ; ನೂತನ ಕಚೇರಿ ಉದ್ಘಾಟನೆ ; ಆಮಂತ್ರಣ ಪತ್ರ ಬಿಡುಗಡೆ

Posted On: 23-11-2024 07:14PM

ಹೆಜಮಾಡಿ : ವೀರಮಾರುತಿ ಕ್ರಿಕೆಟರ್ಸ್ ಇವರ ವತಿಯಿಂದ ನ. 30 ಮತ್ತು ಡಿ.1 ರಂದು ಹೆಜಮಾಡಿ ಮೈದಾನದಲ್ಲಿ ನಡೆಯಲಿರುವ ಕಡಲ ತೀರದ ಮುಗ್ಗೆರ್ಕಳ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟ ಹನುಮ ಟ್ರೋಫಿ -2024 ಇದರ ನೂತನ ಕಚೇರಿ ಉದ್ಘಾಟನೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ರೊಲ್ಪಿ ಡಿ ಕೋಸ್ತಾ ಹೆಜಮಾಡಿ , ಕೃಷ್ಣ. ಪಿ. ಬಂಗೇರ ಕಲ್ಲಟ್ಟೆ , ನವೀನ್ ಕುಮಾರ್ ಹೆಜಮಾಡಿ, ಗುರುಪ್ರಸಾದ್ ಜಿ. ಎಸ್ ಮಟ್ಟು , ರಾಜು ಎಲ್ ಐ ಸಿ ಹೆಜಮಾಡಿ ಹಾಗೂ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಜೀವನ್ ಪ್ರಕಾಶ್ ಮಟ್ಟು, ಗೌರವ ಅಧ್ಯಕ್ಷರಾದ ವಿಠಲ್ ಮಾಸ್ಟರ್ ಉಪಸ್ಥಿತರಿದ್ದರು. ತಂಡದ ಗೌರವ ಸಲಹೆಗರಾರು ನಿತಿನ್ ಕುಮಾರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನ.30 ರಂದು ಬೆಳಿಗ್ಗೆ 8 ಗಂಟೆಗೆ 6 ತಂಡಗಳ ಲೀಗ್ ಮಾದರಿಯ ಪಂದ್ಯಾಟ ಆರಂಭ ಗೊಂಡು, ಬೆಳಿಗ್ಗೆ 10 ಗಂಟೆಗೆ ಪಂದ್ಯಾಟದ ಉದ್ಘಾಟನೆ ಹಾಗೂ ಸಮುದಾಯದ ಆಟಗಾರದ ದಿ| ಹರೀಶ್ ಬಂಗೇರ ಮುಳೂರು ಮತ್ತು ದಿ| ಅಶ್ವಥ್. ಉಪ. ತಹಸೀಲ್ದಾರ್ ಉಡುಪಿ ಇವರುಗಳಿಗೆ ಶೃದ್ಧಾಂಜಲಿ ಅರ್ಪಣೆ ನಂತರ ವಿಶೇಷ ಆಕರ್ಷಣೆಯ ಟ್ರೋಫಿ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ, ಅಸೌಖ್ಯದ ಕುಟುಂಬಕ್ಕೆ ನೀಡುವ ಆಹಾರ ಕಿಟ್ ಕೊಡುಗೆ. ತದನಂತರ 6 ತಂಡದ ಹಾಗೂ ಆಯೋಜಕರಿಂದ ಧ್ವಜಾರೋಹಣ ಮುಖ್ಯ ಅತಿಥಿ ಗಣ್ಯರ ಸಮ್ಮುಖದಲ್ಲಿ ನೆರವೇರಲಿದೆ.

ಡಿ.1, ಭಾನುವಾರ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ, ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮ M9 ಸ್ಪೋರ್ಟ್ಸ್ ಇದರಲ್ಲಿ ನೇರ ಪ್ರಸಾರದ ವೀಕ್ಷಣೆ ಗೆ ಅವಕಾಶ ಇದೆ ಎಂದು ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಧನಂಜಯ ರವರು ತಿಳಿಸಿದರು.

ಕಾಪುವಿನಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಜಯೋತ್ಸವ

Posted On: 23-11-2024 06:51PM

ಕಾಪು : ಹೈವೋಲ್ವೇಜ್ ಕ್ಷೇತ್ರವಾದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್‌ ಗೆಲುವಿನ ಪ್ರಯುಕ್ತ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ಪೇಟೆಯಲ್ಲಿ ಶನಿವಾರ ಸಂಜೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮಾತನಾಡಿ, ಬಿಜೆಪಿ ಪಕ್ಷದ ಪ್ರಮುಖರು ಸಾಕಷ್ಟು ಆಪಾದನೆಗಳನ್ನು ಮಾಡಿದ್ದಾರೆ. ಎಲ್ಲಾ ಆಪಾದನೆಗಳಿಗೆ ಜನ ಅಂತಿಮ ತೀರ್ಮಾನ ನೀಡಿದ್ದಾರೆ. ಕರ್ನಾಟಕದ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು, ಮಹಾಜನತೆ ಸಂಪೂರ್ಣ ಆಶೀರ್ವಾದ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದರು.

ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ನವೀನ್ ಎನ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಶರ್ಫುದ್ದೀನ್ ಶೇಕ್ , ಶಾಂತಲತಾ ಶೆಟ್ಟಿ, ಅಶ್ವಿನಿ, ಶೇಖರ ಹೆಜಮಾಡಿ, ಶಿವಾಜಿ ಸುವರ್ಣ, ದೀಪಕ್ ಕುಮಾರ್ ಎರ್ಮಾಳು, ಅಬ್ದುಲ್ ಹಮೀದ್, ಸುಧೀರ್ ಹೆಜಮಾಡಿ, ಅಮೀರ್ ಮೊಹಮ್ಮದ್, ಮನ್ಸೂರ್, ಆಸೀಫ್ ಮೂಳೂರ್, ಹಮೀದ್ ಮೂಳೂರು, ಸತೀಶ್ಚಂದ್ರ, ಅಶೋಕ್ ನಾಯರಿ, ಶೋಭಾ, ರಾಧಿಕ, ರಾಜೇಶ್ ರಾವ್, ಫರ್ಝಾನ ಮತ್ತಿತರರು ಉಪಸ್ಥಿತರಿದ್ದರು.

ನ. 23 : ಸಚಿವ ಮಂಕಾಳ ವೈದ್ಯರಿಂದ ಪಡುಬಿದ್ರಿ ಬೀಚ್ ಕಾರ್ನಿವಲ್ ಉದ್ಘಾಟನೆ

Posted On: 22-11-2024 10:29AM

ಪಡುಬಿದ್ರಿ : ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆಗಳ ಸಹಕಾರದೊಂದಿಗೆ 50ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಜೇಸಿಐ ಪಡುಬಿದ್ರಿ ಆತಿಥ್ಯದಲ್ಲಿ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್ ಮತ್ತು ಮುಖ್ಯ ಬೀಚ್‌ಗಳಲ್ಲಿ ನ. 23 ಹಾಗೂ 24ರಂದು ವಿವಿಧ ಕ್ರೀಡೆಗಳು, ಪ್ರವಾಸೋದ್ಯಮ ಹಾಗೂ ಸಂಸ್ಕೃತಿಗಳ ಅನಾವರಣಗೊಳಿಸುವುದಕ್ಕಾಗಿ 'ಬ್ರಾಂಡ್ ಪಡುಬಿದ್ರಿ' ಮೂಲಕ ಜನತೆಗಾಗಿ ತೆರೆದುಕೊಳ್ಳಲಿರುವ ಪಡುಬಿದ್ರಿ ಬೀಚ್ ಕಾರ್ನಿವಲ್ - 2024ನ ಉದ್ಘಾಟನೆಯನ್ನು ರಾಜ್ಯ ಮೀನುಗಾರಿಕಾ, ಬಂದರು ಸಚಿವ ಮಂಕಾಳ ವೈದ್ಯ ಅವರು ನ.23ರಂದು ಸಂಜೆ 6 ಗಂಟೆಗೆ ನೆರವೇರಿಸಲಿರುವುದಾಗಿ ಪಡುಬಿದ್ರಿ ಜೇಸಿಐ ಅಧ್ಯಕ್ಷ ಸಂಜೀತ್ ಎರ್ಮಾಳ್ ಅವರು ತಿಳಿಸಿದರು. ಅವರು, ಕಾಪು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ನ. 23ರಂದು ಬೆಳಿಗ್ಗೆ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಯೋಜನೆಯಲ್ಲಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ 2, 3 ಹಾಗೂ 5 ಕಿಮೀಗಳ ರಾಷ್ಟ್ರೀಯ ಜೂನಿಯರ್, ಸೀನಿಯರ್ ಓಪನ್ ವಾಟರ್ ಸೀ ಸ್ವಿಮ್ಮಿಂಗ್ ಸ್ಪರ್ಧೆಗಳು ನಡೆಯಲಿವೆ. ನ. 24ರಂದು ಬೆಳಿಗ್ಗೆ ಉಡುಪಿ ರನ್ನಸ್೯ ಕ್ಲಬ್ ಸಹಭಾಗಿತ್ವದಲ್ಲಿ ಮುಕ್ತ ಹಾಗೂ ವಿಶೇಷ ಬರಿಗಾಲಲ್ಲಿ ಸಮುದ್ರ ತೀರದ ಮ್ಯಾರಾಥಾನ್ ಓಟವನ್ನು ಸಂಘಟಿಸಲಾಗಿದೆ. ಇವುಗಳಲ್ಲದೇ ಬೀಚ್ ಕಬಡ್ಡಿ, ಗಾಳ ಹಾಕಿ ಹಾಗೂ ಸಾಂಪ್ರದಾಯಿಕ ಮೀನು ಹಿಡಿಯುವ ಸ್ಪರ್ಧೆ, ಅಮ್ಯೂಸ್‌ಮೆಂಟ್ ಗೇಮ್ಸ್, ಸೀ ವಾಟರ್ ಸರ್ಫಿಂಗ್ ಮುಂತಾದ ಸಾಹಸೀ ಕ್ರೀಡೆಗಳನ್ನೂ ಆಯೋಜಿಸಲಾಗಿದೆ. ಅಂದು ಸಂಜೆ ಸ್ಥಳೀಯ ಪ್ರತಿಭೆಗಳ ಅನಾವರಣದೊಂದಿಗೆ ಆರಂಭಗೊಳ್ಳುವ ಸಭಾವೇದಿಕೆಯಲ್ಲಿ ಸಂಜೆ 5ಗಂಟೆಗೆ ಪಡುಬಿದ್ರಿ ಜೇಸಿಐನ 50ನೇ ಸಂಭ್ರಮಾಚರಣೆಯೂ ನಡೆಯಲಿದೆ. ಜೇಸಿಐ ಇಂಡಿಯಾದ ರವಿಶಂಕರ್ ಸತ್ಯಮೂರ್ತಿ ಸಹಿತ ವಿವಿಧ ಗಣ್ಯರು ಉಪಸ್ಥಿತರಿರುವರು ಎಂದೂ ಅವರು ತಿಳಿಸಿದರು.

ನ. 23ರಂದು ಸಂಜೆ 7ಗಂಟೆಗೆ ಮಂಗಳೂರಿನ ರಿಫ್ಯೂಶನ್ ಬ್ಯಾಂಡ್ ಮೂಲಕ ಸಂಗೀತ ಪ್ರಸ್ತುತಿ ಇರಲಿದೆ. ನ.24ರಂದು ಸಂಜೆ 7ಗಂಟೆಗೆ ಮೂಡುಬಿದಿರೆಯ ಆಳ್ವಾಸ್ ಫೌಂಡೇಶನ್‌ನ ಸುಮಾರು 500 ವಿದ್ಯಾರ್ಥಿಗಳು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿರುವುದಾಗಿ ಸುದ್ದಿಗೋಷ್ಟಿಯಲ್ಲಿ ತಿಳಿಸಲಾಯಿತು.

ಸಂಜೀತ್ ಅವರೊಂದಿಗೆ ಜೇಸಿಐ ಪೂರ್ವ ವಲಯಾಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನ, ಪೂರ್ವಾಧ್ಯಕ್ಷರುಗಳಾದ ಶ್ರೀನಿವಾಸ ಶರ್ಮ, ಜಿತೇಂದ್ರ ಫುರ್ಟಾಡೋ, ರಮೇಶ್ ಯು., ವಿವೇಕ್ ಬಿ. ಎಸ್. ಉಪಸ್ಥಿತರಿದ್ದರು.

ಪಡುಬಿದ್ರಿಯಲ್ಲಿ ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ

Posted On: 21-11-2024 10:54PM

ಪಡುಬಿದ್ರಿ : ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಧನರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ನಿರ್ಮಾಣದ ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದ ಶೋಧನ್ ಶೆಟ್ಟಿ ನಾಯಕ‌ ನಟನಾಗಿರುವ ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ ಗುರುವಾರ ಬೆಳಗ್ಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಿತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ತುಳು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಯನ್ನು ವಿಶ್ವದಗಲ ಮೆಚ್ಚಿಕೊಂಡ ಅಸಂಖ್ಯ ಜನರಿದ್ದಾರೆ. ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕ, ಸಿನಿಮಾ ಮತ್ತು ತುಳು ಕಲಾವಿದರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಪಡುಬಿದ್ರಿಯ ಮಹಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈ ಸಿನಿಮಾ ಯಶಸ್ಸು ಕಾಣಲಿ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸವಾಗುತ್ತಿದೆ ಎಂದು ಶುಭ ಹಾರೈಸಿದರು. ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಕುಸಲ್ದರಸೆ ನವೀನ್ ಡಿ. ಪಡೀಲ್ ಶುಭ ಹಾರೈಸಿದರು.

ನಾಯಕ ನಟ ಶೋಧನ್ ಶೆಟ್ಟಿ ಮಾತನಾಡಿ, 2019ರಲ್ಲಿಯೇ ಸಿನಿಮಾ ಮಾಡಲು ತಯಾರಿ ಮಾಡಿದ್ದೆ. ಆದರೆ ಕಾರಣಾಂತರದಿಂದ ವಿಳಂಬವಾಯಿತು. ಈಗ ಕಾಲ ಕೂಡಿಬಂದಿದೆ. ನಿಮ್ಮೆಲ್ಲರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿ ಬರಲಿದೆ. ಭಾಗ 1ರ ಚಿತ್ರೀಕರಣ ಮುಗಿದ ಬಳಿಕ ಟೈಟಲ್ ಲಾಂಚ್ ಮಾಡಲಿದ್ದೇವೆ ಎಂದರು. ಉದ್ಯಮಿ ಪಲ್ಲವಿ ಸಂತೋಷ್ ಶೆಟ್ಟಿ ಕೆಮರಾ ಚಾಲನೆ ಮಾಡಿದರು. ಸಂದೀಪ್ ಉಡುಪಿ ಛಾಯಾಗ್ರಹಣ, ರವಿರಾಜ್ ಗಾಣಿಗ ಎಡಿಟರ್, ಪ್ರಸಾದ್ ಕೆ.ಶೆಟ್ಟಿ ಸಂಗೀತ ಸಂಯೋಜನೆ ಸಿನಿಮಾಕ್ಕಿರಲಿದೆ. ಕಲಾವಿದರಾಗಿ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ರಮೇಶ್ ಶೆಟ್ಟಿ, ಸೂರಜ್ ಸನಿಲ್, ನಿತೇಶ್ ಶೆಟ್ಟಿ, ಕೀರ್ತನಾ ಸಾಲಿಯಾನ್, ಶೋಭಾ ಪ್ರಿಯಾ ನಾಯರ್, ಸಂದೀಪ್ ಪೂಜಾರಿ ಬಣ್ಣ ಹಚ್ಚಲಿದ್ದಾರೆ. ಕಟೀಲು, ಪಡುಬಿದ್ರಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಪಡುಬಿದ್ರಿ ದೇವಸ್ಥಾನದ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ, ಉಮೇಶ್ ಶೆಟ್ಟಿ, ನಟ ಶೋಧನ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಡಾ. ಪ್ರತೀಕ್ಷಾ, ಡಾ. ನಿಖಿಲ್ ಶೆಟ್ಟಿ, ಸಂಜಯ್ ಶೆಟ್ಟಿ ಗೋಣಿಬೀಡು, ಡಾ. ವೈ.ಎನ್. ಶೆಟ್ಟಿ, ಮಿಥುನ್, ನವೀನ್ ಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಕುಳಾಯಿ, ವಿಠಲ್ ಶೆಟ್ಟಿ, ಶಾಂತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.

ಉದ್ಯಾವರ ನದಿಯಲ್ಲಿ ಅಪರಿಚಿತ ಶವ ಪತ್ತೆ

Posted On: 21-11-2024 07:12PM

ಉದ್ಯಾವರ : ಇಲ್ಲಿನ ಕಾನಕೊಡ ಪಡುಕೆರೆ ಪಾಪನಾಷಿನಿ‌ ನದಿಯ ಪಶ್ಚಿಮ ಬದಿಯಲ್ಲಿ 35 ರಿಂದ 40 ವರ್ಷದ ಗಂಡಸಿನ ಮೃತದೇಹ ಪತ್ತೆ ಆಗಿದ್ದು, ಗುರುತು ಪತ್ತೆಗಾಗಿ ಕಾಪು ಪೊಲೀಸರು ಮನವಿ ಮಾಡಿದ್ದಾರೆ.

ಮೃತ ವ್ಯಕ್ತಿ ಆಕಾಶ ನೀಲಿ ಬಣ್ಣದ ಟೀಶರ್ಟ್, ಕಡು ನೀಲಿ ಬಣ್ಣದ ಬರ್ಮುಡಾ ಚಡ್ಡಿ, ಕೆಂಪು ಬಣ್ಣದ ಎಡಗೈಯಲ್ಲಿ ಕಪ್ಪು ರಬ್ಬರ್ ಬ್ಯಾಂಡ್ ಇದ್ದು, ಬಲಗೈಯಲ್ಲಿ ಕೆಂಪು ಬಣ್ಣದ ನೂಲು ಕಟ್ಟಿರುತ್ತಾನೆ. ಕೆಂಪು ಬಣ್ಣದ ಒಳ ಚಡ್ಡಿ ಧರಿಸಿರುತ್ತಾನೆ.

ಮೃತದೇಹ ಸಾಗಿಸಲು ಸೂರಿ ಶೆಟ್ಟಿ ಮತ್ತು ನಾಗರಾಜ್ ಸಹಕರಿಸಿದ್ದರು.

ನವೆಂಬರ್ 24 : ಉದ್ಯಾವರದಲ್ಲಿ ಎಚ್ ಪಿ ಆರ್ ಫಿಲಂಸ್ ಆದರ್ಶ ದಂಪತಿ ಸ್ಪರ್ಧೆ

Posted On: 21-11-2024 05:47PM

ಉಡುಪಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ವಾರ್ಷಿಕ ವಿವಿಧ ಸೇವಾ ಮತ್ತು ಸಾಮಾಜಿಕ ಚಟುವಟಿಕೆಗಳ ಸಹಾಯಾರ್ಥವಾಗಿ ಎಚ್ ಪಿ ಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆ ನವಂಬರ್ 24ರಂದು ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದೆ. 25 ಸ್ಪರ್ಧಿಗಳು ಭಾಗವಹಿಸುತ್ತಿರುವ ಈ ಸ್ಪರ್ಧೆಯು ಮೂರು ಸುತ್ತುಗಳಲ್ಲಿ ನಡೆಯಲಿದ್ದು, ಕ್ಷಣ ಕ್ಷಣಕ್ಕೂ ಕುತೂಹಲದೊಂದಿಗೆ ಸಂಗೀತ ಸುಧೆ, ಹಾಸ್ಯ ಲಹರಿ, ಸಾಂಸ್ಕೃತಿಕ ವೈಭವದೊಂದಿಗೆ ಅದ್ದೂರಿಯಾಗಿ ನಡೆಯಲಿದೆ.

ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಮಹಮದ್ ಹನೀಫ್ ಎಮ್'ಜೆಎಫ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಲಯನ್ಸ್ ಮತ್ತು ಸಾಮಾಜಿಕ ನಾಯಕರುಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜೆಸಿಐನ ರಾಷ್ಟ್ರೀಯ ತರಬೇತುದರಾಗಿರುವ ಜೆಸಿ ರಾಜೇಂದ್ರ ಭಟ್ ಕಾರ್ಯಕ್ರಮದ ನಿರೂಪಣೆ ನಡೆಸಲಿದ್ದು, ವಿಶೇಷ ಆಕರ್ಷಣೆಯಾಗಿ ತುಳುರಂಗಭೂಮಿಯ ಪ್ರಭುದ್ಧ ಹಾಸ್ಯ ಮತ್ತು ಚಲನಚಿತ್ರ ನಟರಾದ ಅರವಿಂದ ಬೋಳಾರ್, ದಾಯ್ಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಗಿನ್ನೆಸ್ ದಾಖಲೆ ಖ್ಯಾತಿಯ ಯೋಗರತ್ನ ತನುಶ್ರೀ ಪಿತ್ರೋಡಿ, ಖ್ಯಾತ ಜೀವ ರಕ್ಷಕ ಈಶ್ವರ ಮಲ್ಪೆ ಮತ್ತು ಮಿಡಲ್ ಕ್ಲಾಸ್ ಫ್ಯಾಮಿಲಿ ಚಲನಚಿತ್ರ ತಂಡ ಹಾಜರಿರಲಿದ್ದಾರೆ.

ಪ್ರತಿಷ್ಠಿತ ಎಚ್'ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯು ಉಚಿತ ಪ್ರವೇಶವಾಗಿದ್ದು, ಪ್ರಥಮ ಬಹುಮಾನ ರೂ. 15,000 ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ತೃತೀಯ ಬಹುಮಾನ ರೂ. 7500 ವೆಚ್ಚದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ಫೈನಲ್ ಸ್ಪರ್ಧಿಗಳಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರತಿಷ್ಠಿತ ಕಂಪನಿಗಳ ಗಿಫ್ಟ್ ವೋಚರ್ ಲಭಿಸಲಿದೆ.

ಲಯನ್ಸ್ ಕ್ಲಬ್ ಮತ್ತು ಸಾರ್ವಜನಿಕರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಹೆಸರು ನೋಂದಾಯಿಸಲು ಕಾರ್ಯಕ್ರಮದ ಸಂಚಾಲಕ ಲಯನ್ ಸ್ಟೀವನ್ ಕುಲಾಸೊ (9901701381) ಇವರನ್ನು ಸಂಪರ್ಕಿಸಬಹುದಾಗಿದೆ. ಮಾತ್ರವಲ್ಲದೆ ಕರಾವಳಿಯ ಮಾಂಸಾಹಾರಿ, ಸಸ್ಯಾಹಾರಿ, ಮೀನು ಮತ್ತು ತಂಪು ಪಾನೀಯಗಳು ಲಭ್ಯವಿದ್ದು, ಪ್ರೇಕ್ಷಕರಿಗೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪ್ರಕಟನೆ ತಿಳಿಸಿದೆ.

ನ.23 ಮತ್ತು 24 : ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ - ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್.

Posted On: 21-11-2024 11:23AM

ಕಾಪು : ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ಹೆಸರು ತೆಗೆದು ಹಾಕುವ ಕುರಿತು ನವೆಂಬರ್ 23 ಮತ್ತು 24 ರಂದು ಬೆಳೆಗ್ಗೆ 10 ರಿಂದ ಸಂಜೆ 5.30 ರವರೆಗೆ ಕಾಪು ತಾಲ್ಲೂಕಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೊದಲು ನವೆಂಬರ್ 9 ಮತ್ತು 10 ರಂದು ನಡೆದ ವಿಶೇಷ ಮತಪಟ್ಟಿ‌ ಪರಿಷ್ಕರಣೆಗೆ ಕಾಪು ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ವಿಶೇಷ ಅಭಿಯಾನದ ದಿನಗಳಂದು ಎಲ್ಲಾ BLO ಗಳು ತಮ್ಮ ಮತಗಟ್ಟೆಗಳಲ್ಲಿ ಉಪಸ್ಥಿತರಿದ್ದು, ಆನ್ ಲೈನ್ ಸಾಫ್ಟ್‌ವೇರ್ ಮೂಲಕ ಈ ಪ್ರಕ್ರಿಯೆ ಮಾಡಲಿದ್ದಾರೆ. 18 ತುಂಬಿದ ಹೊಸ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ BLO ಗಳ ಬಳಿ‌ ನಿಗದಿತ ನಮೂನೆ ತುಂಬಿ ಕೊಟ್ಟು ಹೆಸರು ಸೇರ್ಪಡೆ ಮಾಡಲು ತಿಳಿಸಿದೆ.

ನಮೂನೆಗಳು: ನಮೂನೆ 6 : ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅರ್ಜಿ ನಮೂನೆ 7 : ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆಕ್ಷೇಪಣೆಗಾಗಿ ಅರ್ಜಿ (ನಮೂನೆ 7 ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಅಥವಾ ಬೇರೊಬ್ಬ ವ್ಯಕ್ತಿಯ ಹೆಸರು ಅಥವಾ ಮರಣ ಹೊಂದಿದ್ದ ವ್ಯಕ್ತಿಯ ಹೆಸರನ್ನು ತೆಗೆದುಹಾಕುವಂತೆ ಕೋರಿ ಅರ್ಜಿ) ನಮೂನೆ 8 : ಮತದಾರರ ನಿವಾಸ ಬದಲಾವಣೆ/ ಪ್ರಸ್ತುತ ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿಗಾಗಿ/ ಬದಲಿ ಮತದಾರರ ಗುರುತಿನ ಚೀಟಿ ನೀಡುವಿಕೆಗಾಗಿ/ ಅಂಗವಿಕಲ ವ್ಯಕ್ತಿಯನ್ನು ಗುರುತಿಸುವುದಕ್ಕೆ ಅರ್ಜಿ

ನವೆಂಬರ್ 23 ಮತ್ತು 24 ರ ಶನಿವಾರ ಮತ್ತು ಭಾನುವಾರದಂದು ನಡೆಯಲಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಸದುಪಯೋಗಪಡಿಸಿಕೊಳ್ಳಲು ಕಾಪು ತಾಲೂಕು ತಹಶಿಲ್ದಾರ್ ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.22 - 24 : ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಕಾಲಭೈರವ ಜಯಂತಿ

Posted On: 21-11-2024 10:53AM

ಶಿರ್ವ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ಸ್ವಾಮಿ ದೇವಸ್ಥಾನ ಇಲ್ಲಿ ನವೆಂಬರ್ 22 ಶುಕ್ರವಾರದಿಂದ 24 ಆದಿತ್ಯವಾರದವರೆಗೆ ಶ್ರೀಕಾಲಭೈರವ ಜಯಂತಿಯ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ನವೆಂಬರ್ 22ನೇ ಶುಕ್ರವಾರ ಸಂಜೆ ಕಟಪಾಡಿಯಿಂದ ಕಾಲಭೈರವ ಸ್ವಾಮಿಗೆ ಬೆಳ್ಳಿ ಕವಚ ಹಾಗೂ ಹೊರಕಾಣಿಕೆ ಮೆರವಣಿಗೆಯೊಂದಿಗೆ ಸಾಗಿ ಬರಲಿದೆ. 23ನೇ ಶನಿವಾರ ಬೆಳಗ್ಗೆ ಗಣ ಹೋಮ, ಕಲಶಾಭಿಷೇಕ 10ಗಂಟೆಗೆ ಅಘೋರ ಅಖಾಡ್ ನ ಅಘೋರಿಗಳಿಂದ ಅಘೋರ ಭೈರವ ಹವನ್ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಬಳಿಕ ಮಹಾಅನ್ನಸಂತರ್ಪಣೆ ನಡೆಯಲಿದೆ ರಾತ್ರಿ 7ಗಂಟೆಗೆ ಅಷ್ಟಭೈರವ ಬಲಿ ಸೇವೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.

ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ : ಕನಸುಗಳ ಪೆಟ್ಟಿಗೆ ವಿನೂತನ ಕಾರ್ಯಕ್ರಮ

Posted On: 20-11-2024 06:55AM

ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ಬ್ರಹ್ಮಾವರ ಮಟಪಾಡಿ ಶ್ರೀ ವಿಜಯ ಬಾಲನಿಕೇತನ ಮಕ್ಕಳ ಆಶ್ರಮದಲ್ಲಿ ಕನಸಿನ ಪೆಟ್ಟಿಗೆ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಫೌಂಡೇಶನ್ ನ ಮುಖ್ಯ ಪ್ರವರ್ತಕರಾದ ಡಾ. ಶಶಿಕಿರಣ್ ಶೆಟ್ಟಿ ಹೋಂ ಡಾಕ್ಟರ ಫೌಂಡೇಶನ್ ನಡೆದುಬಂದ ಹಾದಿ ಬಗ್ಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ವಿವಿಧ ಕಾನ್ಸೆಪ್ಟ್ ಗಳ ಮೂಲಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದರು.

ವೇದಿಕೆಯಲ್ಲಿ ಆಶ್ರಮದ ಅಧ್ಯಕ್ಷರಾದ ಗಿರಿಶ್ಚಂದ್ರ ಆಚಾರ್ಯ, ವಿಶ್ವನಾಥ್ ಶೆಟ್ಟಿ, ಜಯರಾಮ್ ನಾಯರಿ, ಮುದ್ದು ಜತ್ತನ್ನ ಪೂರ್ಣೇಶ್ ಶೆಟ್ಟಿ, ಬಂಗಾರಪ್ಪ ಡಾ. ಸುಮಾ ಶೆಟ್ಟಿ, ರಾಘವೇಂದ್ರ ಕವಾ೯ಲು ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಕ್ಕಳ ಕನಸುಗಳ ಪೆಟ್ಟಿಗೆಯಲ್ಲಿ ಬಂದ ವಸ್ತುಗಳನ್ನು ಮಕ್ಕಳಿಗೆ ನೀಡಲಾಯಿತು.

ಕಾಪು ಕೋಟೆ ಮನೆ ಹವಾಲ್ದಾರ್ ಸಂಜೀವ ಸೇರ್ವೇಗಾರ್ ನಿಧನ

Posted On: 19-11-2024 11:36PM

ಕಾಪು : ಕೋಟೆ ಮನೆ ಹವಾಲ್ದಾರ್ ಸಂಜೀವ ಸೇರ್ವೇಗಾರ್ (92) ರವರು ಮಂಗಳವಾರ ವಿಧಿವಶರಾಗಿದ್ದಾರೆ. ಕಾಪು ಮಾರಿಯಮ್ಮನ ನಿರಂತರ ಸೇವಾಕರ್ತರಾಗಿದ್ದರು.