Updated News From Kaup
ಕಾಪು ಕ.ಸಾ.ಪ.ದಿಂದ ತಾಲೂಕಿನ ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ
Posted On: 30 Jun 2025, 07:22 PM
ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ಘಟಕದ ವತಿಯಿಂದ ಕಾಪು ಕಂದಾಯ ತಾಲೂಕು ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜು.12, ಶನಿವಾರ ಅಪರಾಹ್ನ ಗಂಟೆ 2 ಕ್ಕೆ ಕಟಪಾಡಿ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಭಾಷಣ ಸ್ಫರ್ಧೆ ಏರ್ಪಡಿಸಲಾಗಿದೆ. ಈ ಸ್ಫರ್ಧೆಯಲ್ಲಿ "ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯ ಮಹತ್ವ " ಮತ್ತು "ಕೃಷಿಯ ಕಡೆಗೆ ಯುವಕರು - ಸವಾಲುಗಳು ಮತ್ತು ಅವಕಾಶಗಳು" ಎಂಬ ಎರಡು ವಿಷಯಗಳಲ್ಲಿ ಸ್ಫರ್ಧಾ ದಿನ ಚೀಟಿ ಎತ್ತುವ ಮೂಲಕ ಒಂದು ವಿಷಯದಲ್ಲಿ ಭಾಷಣ ಸ್ಫರ್ಧೆ ಏರ್ಪಡುತ್ತದೆ. (ಸಮಯದ ಮಿತಿ 4+1=5 ನಿ.) ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಜುಲೈ 8 ಕೊನೆಯ ದಿನವಾಗಿರುತ್ತದೆ. ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು[94817 60611] ಸ್ಫರ್ಧಾ ಸಂಯೋಜಕರಾಗಿದ್ದು, ಸ್ಫರ್ಧಾರ್ಥಿಗಳು ಕಾಲೇಜಿನ ದೃಢೀಕರಣ ಪತ್ರದೊಂದಿಗೆ ಆ ದಿನ ಕನಿಷ್ಠ 15 ನಿಮಿಷ ಮುಂಚಿತವಾಗಿ ಸ್ಫರ್ಧಾಸ್ಥಳದಲ್ಲಿ ಹಾಜರಿರಬೇಕು ಎಂದು ಕಾಪು ತಾಲೂಕು ಅಧ್ಯಕ್ಷರ ಪ್ರಕಟನೆ ತಿಳಿಸಿದೆ.
ಪಡುಬಿದ್ರಿ :ಕಾಡಿಪಟ್ನ ಮೊಗವೀರ ಮಹಾಸಭಾ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಅಶೋಕ್ ಸಾಲ್ಯಾನ್ ಪುನರಾಯ್ಕೆ
Posted On: 29 Jun 2025, 10:09 PM
ಪಡುಬಿದ್ರಿ : ಇಲ್ಲಿನ ಕಾಡಿಪಟ್ನ ಮೊಗವೀರ ಮಹಾಸಭಾ ಆಡಳಿತ ಮಂಡಳಿಗೆ 2025-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಹಾಲಿ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್ ಮೂರನೇ ಅವಧಿಗೆ ಅಧ್ಯಕ್ಷರಾಗಿ ಮಹಾಸಭೆಯಲ್ಲಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಹೇಮಚಂದ್ರ ಸಾಲ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿಯಾಗಿ ಅಶೋಕ್ ಬಂಗೇರ, ಜೊತೆ ಕಾರ್ಯದರ್ಶಿಯಾಗಿ ಶರತ್ ಕರ್ಕೇರ ಮತ್ತು ಸತೀಶ್ ಸಾಲ್ಯಾನ್ ಜೊತೆ ಕೋಶಾಧಿಕಾರಿಯಾಗಿ ಸತೀಶ್ ಕೆ. ಸುವರ್ಣ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಗುರುಪ್ರಸಾದ್, ವಿಶ್ವಾಸ್ ವಿ.ಅಮೀನ್, ಸಾಗರ್ ಕರ್ಕೇರ , ಉದಯ ಸಾಲ್ಯಾನ್, ನಾರಾಯಣ್ ಎಮ್.ಕರ್ಕೇರ, ಜೀವನ್ ಎಸ್ ಸುವರ್ಣ, ಜೀವನ್ ಕೆ .ಸುವರ್ಣ, ಜಗದೀಶ್ ಬಂಗೇರ , ಮಿಥನ್ ಸಾಲ್ಯಾನ್, ಅಕ್ಷಿತ್ ಎ.ಕರ್ಕೇರ, ದೇವರಾಜ್ ಬಂಗೇರ,ತನುಜ್ ಕರ್ಕೇರ ಆಯ್ಕೆಗೊಂಡರು.
ಶಿರ್ವ ಸಹಕಾರಿ ವ್ಯವಸಾಯಿಕ ಸಂಘ : ವನಮಹೋತ್ಸವ ಆಚರಣೆ
Posted On: 28 Jun 2025, 10:52 PM
ಶಿರ್ವ : ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘ (ನಿ.) ಶಿರ್ವ ವತಿಯಿಂದ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ, ಕುತ್ಯಾರು ಇಲ್ಲಿ ಅಂತರಾಷ್ಟ್ರೀಯ ಸಹಕಾರಿ ವರ್ಷ - 2025 ನ್ನು ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. "ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸಬಲ್ಲವು" ಎನ್ನುವ ವಿಶ್ವಾಸದೊಂದಿಗೆ ಏಕ್ ಪೇಡ್ ಮಾ ಕೆ ನಾಮ್ ಎನ್ನುವ ಪರಿಕಲ್ಪನೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವನಮಹೋತ್ಸವದ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ವಿವಿಧ ಹಣ್ಣುಗಳ ಸಸಿಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷರಾದ ವೀರೇಂದ್ರ ಪಾಟ್ಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ, ಶಾಲಾ ಮುಖ್ಯೋಪಾಧ್ಯಾಯಿನಿ ಶರ್ಮಿಳಾ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ಪ್ರತಿನಿಧಿಯವರಾದ ಬಾಲಗೋಪಾಲ ಬಲ್ಲಾಳ್, ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಎಲ್ಲಾ ನಿರ್ದೇಶಕರು, ಶಾಲಾ ಅಧ್ಯಾಪಕ ವೃಂದದವರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಾನಿಲ್ತಾರು ಕುಲಾಲ ಸಂಘದ 37 ನೇ ವರ್ಷದ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 28 Jun 2025, 10:47 PM
ಕಾರ್ಕಳ : ತಾಲೂಕಿನ ನಾನಿಲ್ತಾರು ಕುಲಾಲ ಸಂಘದ 37 ನೇ ವರ್ಷದ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆಯನ್ನು ಶನಿವಾರ ಬಿಡುಗಡೆ ಮಾಡಲಾಯಿತು. ಜುಲೈ ತಿಂಗಳ 13 ಭಾನುವಾರ ಸಂಘದ ಸಮುದಾಯ ಭವನದಲ್ಲಿ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸನ್ಮಾನ ನಡೆಯಲಿದ್ದು ಸ್ವಜಾತಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿವಂತೆ ಸಂಘದ ಅಧ್ಯಕ್ಷರಾದ ಜಯರಾಮ್ ಕುಲಾಲ್ ಅಗ್ಗರಟ್ಟ ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಪು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ದಕ್ಷಿಣ, ಉತ್ತರ, ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ
Posted On: 28 Jun 2025, 10:38 PM
ಕಾಪು : ಕಾಪು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಹಮ್ಮದ್ ನಿಯಾಝ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ದಕ್ಷಿಣ, ಉತ್ತರ ಅಧ್ಯಕ್ಷರುಗಳಾದ ಗೌರೀಶ್ ಹಾಗೂ ಶರತ್ ನಾಯಕ್ ಮತ್ತು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ಶನಿವಾರ ಕಾಪು ರಾಜೀವ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಆಡಳಿತಾರೂಢ ಮೋದಿ ಸರಕಾರದಿಂದ ಸಂವಿಧಾನಕ್ಕೆ ಧಕ್ಕೆ ತರುವಂತಾಗಿದೆ. ಜನಪರ ಆಶಯಕ್ಕೆ ಕಾಂಗ್ರೆಸ್ ನಿಂದ ಸಂವಿಧಾನ ತಿದ್ದುಪಡಿ ಆಗಿದೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ ನೀಡಿದ ಪಕ್ಷ. ಶೇ.40 ರಷ್ಟು ಯುವಕರ ಸೇರ್ಪಡೆಯಾದಾಗ ಮಾತ್ರ ಪಕ್ಷ ಬೆಳವಣಿಗೆ ಸಾಧ್ಯ. ದೇಶದ ಸಂವಿಧಾನ ನಮ್ಮ ಸಿದ್ಧಾಂತ. ಬಿಜೆಪಿಯಿಂದ ಸಂವಿಧಾನದ ಮೂಲ ಅಂಶ ಸಮಾಜವಾದಿ, ಜಾತ್ಯಾತೀತ ತೆಗೆದು ಹಾಕಲು ಚಿಂತನೆಯಾಗಿದೆ. ಸಂವಿಧಾನಕ್ಕೆ ಧಕ್ಕೆ ಬಂದರೆ ನಾವೆಲ್ಲರೂ ವಿರೋಧಿಸಲು ಅಣಿಯಾಗಬೇಕಿದೆ ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮಾತನಾಡಿ, ಯುವ ಕಾಂಗ್ರೆಸ್ ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಕಾಂಗ್ರೆಸ್ ಹಿರಿಯರ ಮಾರ್ಗದರ್ಶನದಲ್ಲಿ ಯುವಕರನ್ನು ಪಕ್ಷದೆಡೆ ಆಕರ್ಷಿಸುವ ಕಾರ್ಯ ಮಾಡಬೇಕಾಗಿದೆ ಎಂದು ಯು ಕಾಂಗ್ರೆಸ್ ತಂಡವನ್ನು ಅಭಿನಂದಿಸಿದರು. ಮಹಮ್ಮದ್ ನಿಯಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಕಾಪು ಬ್ಲಾಕ್ (ದ) ಅಧ್ಯಕ್ಷ ವೈ. ಸುಕುಮಾರ್, ಕಾಪು ಬ್ಲಾಕ್ (ಉ)ಅಧ್ಯಕ್ಷ ಸಂತೋಷ್ ಕುಲಾಲ್, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ನವೀನ್ ಸುವರ್ಣ, ಕಾಪು ದಿವಾಕರ ಶೆಟ್ಟಿ, ಅರ್ಜುನ್, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ಹಸನಬ್ಬ ಶೇಕ್, ರಮೀಝ್ ಹುಸೇನ್, ವಿಶ್ವಾಸ್ ಅಮೀನ್, ಅಝೀಝ್, ನವೀನ್ ಎನ್ ಶೆಟ್ಟಿ, ದೀಪಕ್ ಕೋಟ್ಯಾನ್, ಹರೀಶ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು.
ನಾಡಪ್ರಭು ಕೆಂಪೇಗೌಡರ ಆದರ್ಶ ನಮ್ಮೆಲ್ಲರಿಗೆ ದಾರಿದೀಪ : ತಹಶಿಲ್ದಾರ್ ಡಾ.ಪ್ರತಿಭಾ ಆರ್.
Posted On: 27 Jun 2025, 08:26 PM
ಕಾಪು : ನಾಡಪ್ರಭು ಕೆಂಪೇಗೌಡರ ಆದರ್ಶ ಮುಂದಿನ ಪೀಳಿಗೆಗೆ ದಾರಿದೀಪದಂತೆ. ಅವರ ದೂರದೃಷ್ಟಿಯನ್ನು ನಮ್ಮ ಇಂದಿನ ಯುವ ಪೀಳಿಗೆ ಮಾದರಿಯಾಗಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಹಶಿಲ್ದಾರ್ ಪ್ರತಿಭಾ ಆರ್ ಕರೆ ನೀಡಿದರು. ಕಾಪು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಜಯಂತಿಯ ಅಂಗವಾಗಿ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ನಡೆಸಲಾಗಿತ್ತು. ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ನಾಡ ಪ್ರಭು ಕೆಂಪೇಗೌಡರ ಕುರಿತು ಭಾಷಣ ಮತ್ತು ದೇಶಭಕ್ತಿಗೀತೆ ಹಾಡಿದರು. ಪುರಸಭಾ ಅಧ್ಯಕ್ಷರಾದ ಹರಿಣಾಕ್ಷಿಯವರು ಮಾತನಾಡಿ "ಕೆಂಪೇಗೌಡರ ಆಡಳಿತ ಕಾಲ ಅತ್ಯಂತ ಸುಭಿಕ್ಷವಾಗಿತ್ತು. ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದಾರೆ. ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಪುರಸಭಾ ಚೀಫ್ ಆಫೀಸರ್ ನಾಗರಾಜ್, ಪುರಸಭಾ ಅದ್ಯಕ್ಷೆ ಹರಿಣಾಕ್ಷಿ, ಪುರಸಭಾ ಉಪಾಧ್ಯಕ್ಷರಾದ ಸರಿತಾ, ಸ್ಥಾಯಿ ಸಮಿತಿ ಅಧ್ತಕ್ಷರಾದ ಅನಿಲ್, ಪುರಸಭಾ ಸದಸ್ಯರು, ಉಪ ತಹಶಿಲ್ದಾರ್ ಗಳಾದ ದೇವಕಿ, ರವಿಕಿರಣ್, ಅಶೋಕ್ ಕೋಟೆಕಾರ್ , ರೆವಿನ್ಯೂ ಇನ್ಸ್ ಪೆಕ್ಟರ್ ಇಜ್ಜಾರ್ ಸಾಬಿರ್, ಕಾಪು ದಂಡತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ನೀಲಾನಂದ ನಾಯ್ಕ್, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಗ್ರೆಟ್ಟಾ ಮೊರಸ್, ತಾಲ್ಲೂಕು ಕಚೇರಿ ಸಿಬ್ಬಂದಿ, ಗ್ರಾಮಾಡಳಿತಾಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಹಾಜರಿದ್ದರು. ದೇವಿಚರಣ್ ಕಾರ್ಯಕ್ರಮ ನಿರೂಪಿಸಿದರು. ಲೋಕನಾಥ್ ಸ್ವಾಗತಿಸಿ, ದೇವಕಿ ವಂದಿಸಿದರು.
ಬಂಟಕಲ್ಲು : ಶ್ರೀ ಯತಿ ಗುರುರಾಯ ತಂಡದ ಆಶ್ರಯದಲ್ಲಿ ಕೆಸರುಡ್ ಒಂಜಿ ದಿನ ಕಾರ್ಯಕ್ರಮ ಸಂಪನ್ನ
Posted On: 25 Jun 2025, 09:52 AM
ಬಂಟಕಲ್ಲು : ಇಲ್ಲಿನ ಶ್ರೀ ಯತಿ ಗುರುರಾಯ ತಂಡ ಆಶ್ರಯದಲ್ಲಿ ಕೆಸರುಡ್ ಒಂಜಿ ದಿನ ಕಾರ್ಯಕ್ರಮ 92 ನೇ ಹೇರೂರಿನ ವಿಜಯ್ ಧೀರಜ್ ಇವರ ಗದ್ದೆಯಲ್ಲಿ ನಡೆಯಿತು. ಹೇರೂರು ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಸ್ವಾಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಕೃಷಿ ವೃತ್ತಿಯನ್ನು ನಡೆಸುತ್ತಿದ್ದ ಶ್ರೀಮತಿ ಅಪ್ಪಿ ಸೇರಿಗಾರ್ತಿಯವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿಯ ಉಪಾಧ್ಯಕ್ಷ ಮಾಧವಾಚಾರ್ಯ, ಮಹಿಳಾ ಬಳಗದ ಉಪಾಧ್ಯಕ್ಷೆ ಸುನಿತಾ ಜಯ ಸೇರಿಗಾರ್, ಹೇರೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಮಂಜುಳಾ ಶೆಟ್ಟಿ, ಮಜೂರು ಗ್ರಾಮ ಪಂಚಾಯತ್ ಸದಸ್ಯ ವಿಜಯ ಧೀರಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರ್ವಿ ನಾಯಕ್ ಪ್ರಾರ್ಥಿಸಿದರು. ತಂಡದ ಅಧ್ಯಕ್ಷೆ ಅನಿತಾ ಉಮೇಶ್ ಸ್ವಾಗತಿಸಿದರು. ಬಹುಮಾನದ ವಿವರಣೆಯನ್ನು ಕಾರ್ಯದರ್ಶಿ ವಿದ್ಯಾಶ್ರೀ ಆಚಾರ್ಯ ವಾಚಿಸಿದರು. ಜ್ಯೋತಿ ಶ್ರೀಪತಿ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಂದಿಕೂರು ರೈಲ್ವೇ ಸಂಪರ್ಕ ಸೇತುವೆ ಸಂಸದ, ಶಾಸಕರಿಂದ ವೀಕ್ಷಣೆ
Posted On: 20 Jun 2025, 04:25 PM
ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ರೈಲ್ವೇ ಸಂಪರ್ಕ ಸೇತುವೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಾನಿಯಾಗಿದ್ದು ಈ ಸಂಬಂಧ ಶುಕ್ರವಾರದಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣವೇ ಸೇತುವೆ ಇಕ್ಕೆಲಗಳಲ್ಲಿ ನಿಂತ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಜೊತೆಗೆ ಮಳೆ ಕಡಿಮೆಯಾದ ಕೂಡಲೇ ರಸ್ತೆ ದುರಸ್ತಿ ಕಾರ್ಯವನ್ನು ನಿರ್ವಹಿಸಲು ಸಂಭಂದಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ ಪೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಹಾಗೂ ಪಲಿಮಾರು ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಕಾಪು : ಇನ್ನಂಜೆ ಗ್ರಾಮದ ಯುವಕ ಆತ್ಮಹತ್ಯೆ
Posted On: 20 Jun 2025, 03:21 PM
ಕಾಪು : ಕ್ಯಾಟರಿಂಗ್ ವೃತ್ತಿ ಮಾಡುತ್ತಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇನ್ನಂಜೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ರಾಕೇಶ್ (32) ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದರು. ಕೆಲವೊಮ್ಮೆ ಕೆಲಸದ ನಿಮಿತ್ತ ಹೊರಗೆ ಹೋದಾಗ 2-3 ದಿನ ಬಿಟ್ಟು ಮನೆಗೆ ಬರುತ್ತಿದ್ದರು. ಎಂದಿನಂತೆ ಕೆಲಸದ ಬಗ್ಗೆ ಹೊರಗೆ ಹೋದವರು ಜೂ.18ರ ರಾತ್ರಿ 9:30 ಗಂಟೆಗೆ ಮನೆಗೆ ಬಂದಿದ್ದು, ಜೂ.19 ರಂದು ಬೆಳಿಗ್ಗೆ 8:30 ಗಂಟೆ ಸಮಯದವರೆಗೂ ರೂಮ್‌ನಿಂದ ಹೊರಗೇ ಬರದೇ ಇರುವುದನ್ನು ನೋಡಿ ಅವರ ತಂದೆ ರಮೇಶ್ ರವರು ಬಾಗಿಲು ಬಡಿದಾಗ ಪ್ರತಿಕ್ರಿಯೆ ಬಾರದಿದ್ದನ್ನು ಕಂಡು ನೆರೆಮನೆಯವರಾದ ವಿಜಯ್ ಹಾಗೂ ಸಂಬಂಧಿಕರಾದ ಉಮೇಶ್ ರವರನ್ನು ಮನೆಗೆ ಕರೆಯಿಸಿ, ರೂಮಿನ ಹಿಂಬದಿಯಲ್ಲಿನ ಕಿಟಕಿ ಗ್ಲಾಸ್ ಅನ್ನು ಹೊಡೆದು ಕೋಲು ಹಾಕಿ ರೂಮ್ ಬಾಗಿಲ ಚಿಲಕವನ್ನು ತೆಗೆದು ರೂಮ್ ಒಳಗೆ ಹೋಗಿ ನೋಡುವಾಗ ರಾಕೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸನ್ ಶೈನ್ ಸೀನಿಯರ್ ಚೇಂಬರ್ ಬಂಟಕಲ್ಲು : ಅಧ್ಯಕ್ಷರಾಗಿ ರಮೇಶ್ ಬಂಟಕಲ್ ಆಯ್ಕೆ
Posted On: 20 Jun 2025, 03:03 PM
ಶಿರ್ವ : ಸನ್ ಶೈನ್ ಸೀನಿಯರ್ ಚೇಂಬರ್ ಬಂಟಕಲ್ಲು ಇದರ 2025- 26 ನೇ ಸಾಲಿನ ಅಧ್ಯಕ್ಷರಾಗಿ ಸೀನಿಯರ್ ರಮೇಶ್ ಬಂಟಕಲ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸೀನಿಯರ್ ರವೀಂದ್ರ ಪಾಟ್ಕರ್, ಖಜಾಂಜಿಯಾಗಿ ಸೀನಿಯರ್ ವಿಘ್ನೇಶ್ ಶೆಟ್ಟಿ ಇವರು ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
