Updated News From Kaup

ರಾಷ್ಟ್ರೀಯ ಬಿಲ್ಲವ ಮಹಾಮಂಡಲದಿಂದ ಸಾಧಕರಿಗೆ ಸನ್ಮಾನ

Posted On: 21-01-2025 09:37PM

ಕಾಪು : ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ) ಮುಲ್ಕಿ ದ.ಕ. ಇದರ ಅರ್ಧ ವಾರ್ಷಿಕ ಪ್ರಾದೇಶಿಕ ಮಹಾಸಭೆ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಅಭಿನಂದನಾ ಮತ್ತು ಸಾಧಕರ ಸನ್ಮಾನ ಸಮಾರಂಭವು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಮುದರಂಗಡಿ ಇದರ ಸಭಾಗೃಹದಲ್ಲಿ ಜರಗಿತು.

ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮುಲ್ಕಿ ಇದರ ಅಧ್ಯಕ್ಷರಾದ ರಾಜಶೇಖರ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ, 2024ನೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ 3 ಬಿಲ್ಲವ ಸಂಘಗಳಿಗೆ, ವಿವಿಧ ಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡ 12 ಮಂದಿ ಸಾಧಕರಿಗೆ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ, ಸಮಾಜ ಸೇವಕಿ ಗೀತಾಂಜಲಿ ಸುವರ್ಣ, ಸಾವಿತ್ರಿ ಗಣೇಶ್ ಸೇರಿದಂತೆ ಸಂಘಟನಾತ್ಮಕವಾಗಿ ಸಾಮಾಜಿಕವಾಗಿ ಮಹಾಮಂಡಲದ ಜೊತೆ ಸಮಾಜದಲ್ಲಿ ಸೇವೆಗೈಯುತ್ತಿರುವ ಆಯ್ದ 12 ಮಂದಿ ಮಹಿಳೆಯರಿಗೆ ಗೌರವ ಅಭಿನಂದನೆಯು ಜರಗಿತು.

ಈ‌ ಸಂದರ್ಭ ಮಹಾಮಂಡಲದ ಸದಸ್ಯ ಸಂಘದ ಪ್ರತಿನಿಧಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

50ನೇ ಹುಟ್ಟು ಹಬ್ಬದ ಪ್ರಯುಕ್ತ ಆಶ್ರಮಗಳಿಗೆ ರೂ.50 ಸಾವಿರ ಮೌಲ್ಯದ ದಿನಸಿ‌ ಸಾಮಾಗ್ರಿ‌ ವಿತರಿಸಿದ ಗಿರೀಶ್ ರಾವ್

Posted On: 21-01-2025 09:20PM

ಉಡುಪಿ : ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಗುರಿಕಾರ ಗಿರೀಶ್ ರಾವ್ ರವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿಯ ಕಾರ್ತಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಹೊಸ ಬದುಕು ಹಾಗು ಕೌಡೂರಿನ ಹೂಸ ಬೆಳಕು ಆಶ್ರಮಕ್ಕೆ ಒಟ್ಟು ಸುಮಾರು ರೂ. 50,000 ವೆಚ್ಚದ ದಿನಸಿ ಸಾಮಗ್ರಿಗಳನ್ನು ನೀಡಿ ಆಶ್ರಮ ವಾಸಿಗಳೂಂದಿಗೆ ಹುಟ್ಟು ಹಬ್ಬ ಆಚರಿಸಿದರು.

ಈ ಸಂದರ್ಭ ಅವರ ಸಹವರ್ತಿ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ನಟರಾಜ್ ಪಿ.ಎಸ್. ರವರು ಮಾತನಾಡಿ, ದಾನವೆಂದರೆ ಕೇವಲ ಹಣವನ್ನು ಸಹಾಯ ರೂಪದಲ್ಲಿ ನೀಡುವುದು ಮಾತ್ರವಲ್ಲದೆ ದಾನದ ನಿಜವಾದ ಅರ್ಥವೆಂದರೆ ಸೇವೆಗೆ ತನ್ನ ಶಕ್ತಿ ಸಮಯ ಮತ್ತು ಸಂಪನ್ಮೂಲಗಳನ್ನು ನಿಸ್ವಾರ್ಥವಾಗಿ ಕೊಡುಗೆ ನೀಡುವುದಾಗಿದೆ. ದಾನ ಮಾಡುವುದರಿಂದ ಆತ್ಮದ ಶುದ್ದೀಕರಣ ಮತ್ತು ಸಂಪತ್ತಿನ ಜೊತೆಗೆ ಸಂತೋಷವನ್ನು ಪಡೆಯಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ಮನೋ ಇಂಗಿತ ಇಂದಿನ ಯುವ ಜನತೆಯಲ್ಲಿ ಮೂಡಿ ಬರಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ. ತನುಶ್ರೀ ರಾವ್, ಮೂರನೇ ಗುರಿಕಾರ ಮುರುಡಿ ಜಗದೀಶ್ ರಾವ್, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಹೊಸ ಬದುಕು ಸಂಸ್ಥೆಯ ನಿರ್ವಾಹಕರಾದ ವಿನಯಚಂದ್ರ, ರಾಜಶ್ರೀ ಮತ್ತು ಕೌಡೂರು ಹೊಸ ಬೆಳಕು ಆಶ್ರಮದ ನಿರ್ವಾಹಕರಾದ ತನುಲಾ ಉಪಸ್ಥಿತರಿದ್ದರು.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ದಾರು ಮುಹೂರ್ತ, ವೀಳ್ಯ ಪ್ರದಾನ

Posted On: 20-01-2025 09:10PM

ಪಡುಬಿದ್ರಿ : ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ಬ್ರಹ್ಮಕಲಶೋತ್ಸವದ ಪೂರ್ವಭಾವೀ ದಾರು ಮುಹೂರ್ತ ಹಾಗೂ ಶಿಲ್ಪಿಗಳಿಗೆ ವೀಳ್ಯ ಪ್ರದಾನ ಸಮಾರಂಭವು ಜರಗಿತು.

ಪಡುಬಿದ್ರಿಯ ಗುಂಡ್ಲಾಡಿ ಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಶಿಲೆಗಳು ಹಾಗೂ ದಾರುಖಂಡಗಳನ್ನು ದೇವಸ್ಥಾನಕ್ಕೆ ತರಲಾಯಿತು.

ಬಳಿಕ ಶ್ರೀ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್ ಹಾಗೂ ವೈ. ಗುರುರಾಜ ಭಟ್‌ರವರ ಉಪಸ್ಥಿತಿಯಲ್ಲಿ ಶ್ರೀ ದೇವಸ್ಥಾನದ ಧ್ವಜಸ್ತಂಭದ ಎದುರು ಆದ್ಯ ಗಣಪತಿ ಪ್ರಾರ್ಥನೆಯ ಮೂಲಕ ದಾರು ದೇವತೆಗಳಿಗೆ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ತದನಂತರ ಜೀರ್ಣೊದ್ಧಾರ ಕಾರ್ಯಗಳ ಗುತ್ತಿಗೆದಾರ ಸುಜಯ ಕುಮಾರ್ ಶೆಟ್ಟಿ ಕಾರ್ಕಳ, ವಾಸ್ತು ಶಿಲ್ಪಿ ಕುಡುಪು ಕೃಷ್ಣರಾಜ ತಂತ್ರಿ, ಶಿಲ್ಪಿಗಳಿಗೆ ವೀಳ್ಯ ಪ್ರದಾನ ಮಾಡಲಾಯಿತು.

ಈ ಸಂದರ್ಭ ಉಡುಪಿ ಚಿಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದ.ಕ., ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಶ್ರೀ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಅನುವಂಶಿಕ ಆಡಳಿತ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ದೇಗುಲದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

ಜ.21 : ಕಾಪು ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆ

Posted On: 20-01-2025 06:45PM

ಕಾಪು : ಕಾಪು ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆಯು ಜ.21, ಮಂಗಳವಾರ ಕಾಪು ತಹಶಿಲ್ದಾರ್ ರವರ ಅಧ್ಯಕ್ಷತೆಯಲ್ಲಿ ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಅಹವಾಲನ್ನು ಸಲ್ಲಿಸುವವರು ಆಗಮಿಸುವಂತೆ ಕಾಪು ತಹಶಿಲ್ದಾರ್ ಡಾ. ಪ್ರತಿಭ ಆರ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 22: ಕುಲಾಲ ಸಂಘ ಪೆರ್ಡೂರು ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಯೋಗದಲ್ಲಿ ಆರೋಗ್ಯ ಶಿಬಿರ

Posted On: 20-01-2025 06:34PM

ಉಡುಪಿ : ಕುಲಾಲ ಸಂಘ (ರಿ.) ಪೆರ್ಡೂರು ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಯೋಗದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ, ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮ ಕುಲಾಲ ಸಮುದಾಯ ಭವನ, ಬುಕ್ಕಿಗುಡ್ಡೆ ಪೆರ್ಡೂರು ಇಲ್ಲಿ ಜ.22 ರಂದು ನಡೆಯಲಿದ್ದು, ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಕೇಂದ್ರ ಉಕ್ಕು, ಬೃಹತ್ ಕೈಗಾರಿಕಾ ಸಚಿವರಿಗೆ ಆಮಂತ್ರಣ

Posted On: 20-01-2025 06:30PM

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ ಪ್ರತಿಷ್ಠಾಧಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರಗಲಿದ್ದು ಆ ಪ್ರಯುಕ್ತ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್. ಡಿ ಕುಮಾರಸ್ವಾಮಿಯವರಿಗೆ ಶ್ರೀ ಕ್ಷೇತ್ರದ ಆಮಂತ್ರಣ ಪತ್ರಿಕೆ ನೀಡಲಾಯಿತು.

ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಎಚ್. ಡಿ ಕುಮಾರಸ್ವಾಮಿಯವರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಮನವಿಯನ್ನು ನೀಡುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಸಂಚಾಲಕ ಉದಯ ಶೆಟ್ಟಿ ಭಾರ್ಗವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆ ಖಂಡಿಸಿ, ಹೆದ್ದಾರಿ ತಡೆ, ಪ್ರತಿಭಟನಾ ಸಭೆ

Posted On: 20-01-2025 05:26PM

ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತ ಸಹಿತ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಆಗ್ರಹಿಸಿ ಸೋಮವಾರ ಉಚ್ಚಿಲ ನಾಗರಿಕ ಹೋರಾಟ ಸಮಿತಿ ವತಿಯಿಂದ ಸೋಮವಾರ ರಾಷ್ಟ್ರೀಯ ಹೆದ್ದಾರಿ 66 ತಡೆದು, ಹೆದ್ದಾರಿ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.

ಉಚ್ಚಿಲ ಪೇಟೆಯಲ್ಲಿ ಕ್ರಾಸಿಂಗ್ ವ್ಯವಸ್ಥೆ, ಎರ್ಮಾಳು ಡಿವೈಡರಿನಿಂದ ಆಲ್ ಇಹ್ಸಾನ್ ಶಾಲೆಯ ಡಿವೈಡೆರ್ ತನಕ ಹೆದ್ದಾರಿ ಮಧ್ಯೆ ಹೆದ್ದಾರಿ ದೀಪ ಅಳವಡಿಕೆ, ಉಚ್ಚಿಲ ಪೇಟೆಯಲ್ಲಿ ಹೈಮಾಸ್ಕ್ ದೀಪ ಅಳವಡಿಕೆ, ಹೆದ್ದಾರಿಯಲ್ಲಿ ಜೀಬ್ರಾ ಕ್ರಾಸಿಂಗ್, ಸಮರ್ಪಕ ಕ್ರಾಸಿಂಗ್ ವ್ಯವಸ್ಥೆ, ಸರ್ವಿಸ್ ರಸ್ತೆ ಡಿವೈಡರಿಗೆ ಸ್ಪೀಡ್ ಬ್ರೇಕರ್ ಅಳವಡಿಕೆ ಇದೇ ಮುಂತಾದ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸಂದರ್ಭ ಉಚ್ಚಿಲ ಪೇಟೆಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಲಾಯಿತು.

ಪ್ರತಿಭಟನಾ ಸಭೆಯಲ್ಲಿ ರಾಜಕೀಯ ಮುಖಂಡರಿಗೆ ಮತ್ತು ಅಧಿಕಾರಿ ವರ್ಗಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಜ್ ಉಚ್ಚಿಲ, ಯೋಗೀಶ್ ಶೆಟ್ಟಿ, ಶೇಖರ್ ಹೆಜಮಾಡಿ, ಎಂ.ಎ ಗಫರ್ ಸಹಿತ ಗಣ್ಯರು, ನಾಗರಿಕರು ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಬ್ರಹ್ಮಕಲಶೋತ್ಸವದ ಪ್ರಯುಕ್ತ ಹೊರೆ ಕಾಣಿಕೆಯ ಬಗ್ಗೆ ಸಮಾಲೋಚನಾ ಸಭೆ

Posted On: 19-01-2025 11:56PM

ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25 ರಿಂದ ಮಾ. 5 ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ. 22 ಮತ್ತು 23ರಂದು ಜರಗಲಿರುವ ಹೊರೆ ಕಾಣಿಕೆಯ ಬಗ್ಗೆ ಪೂರ್ವಭಾವಿಯಾಗಿ ಭಾನುವಾರ ಸಮಾಲೋಚನಾ ಸಭೆ ಕಾಪುವಿನ ವಿವೇಕ್ ಕಾಂಪ್ಲೆಕ್ಸ್ ನ ಸರೋಜ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರಗಿತು.

ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಭಕ್ತರು ತಮ್ಮ ಸಮಯದ ಜೊತೆಗೆ ಸಹಕಾರವನ್ನೂ ನೀಡಿ ಕಾಪು ಹೊಸ ಮಾರಿಗುಡಿಯ ಹೊರೆಕಾಣಿಕೆ ಮತ್ತು ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಬೇಕಿದೆ. ಪೂರ್ವಭಾವಿಯಾಗಿ ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದರು. ಹೊರೆ ಕಾಣಿಕೆ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೃಹತ್ ಹೊರೆ ಕಾಣಿಕೆಯನ್ನು ನಿರೀಕ್ಷಿಸಲಾಗಿದೆ. ಫೆ.22 ರಂದು ದ.ಕ ಜಿಲ್ಲೆಯಿಂದ ಮತ್ತು ಫೆ. 23 ರಂದು ಉಡುಪಿ ಜಿಲ್ಲೆಯಿಂದ ಹೊರೆಕಾಣಿಕೆಯು ಶ್ರೀ ಕ್ಷೇತ್ರಕ್ಕೆ ಬರಲಿದೆ. ಈಗಾಗಲೇ ಉಭಯ ಜಿಲ್ಲೆಯ ದೇವಳಗಳು, ಸಂಘ ಸಂಸ್ಥೆಗಳ ಸಹಕಾರ ಕೋರಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಊರಿನಲ್ಲೂ ಸಭೆ ನಡೆಸಲಾಗುವುದು ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾಪು ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಸ್ವರ್ಣ ಗದ್ದುಗೆ ಸಮಿತಿ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ, ಮೊಗವೀರ ಮಹಾಜನಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ಹೊರೆ ಕಾಣಿಕೆ ಸಮಿತಿ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ, ಹೆಜಮಾಡಿ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಮಹಿಳಾ ಸಂಚಾಲಕಿಯರಾದ ಡಾ. ಸುನೀತಾ ಶೆಟ್ಟಿ ಕರ್ಜೆ, ಕಸ್ತೂರಿ ಪಂಜ, ಲಕ್ಷ್ಮೀ ಜನಾರ್ಧನ ದೇವಳದ ಮೊಕ್ತೇಸರ ಮನೋಹರ ಶೆಟ್ಟಿ, ಕಾಪು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಹೊರೆ ಕಾಣಿಕೆ ಸಮಿತಿ ಕೋಶಾಧಿಕಾರಿಯಾಗಿ ಹರೀಶ್ ನಾಯಕ್, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಶೆಟ್ಟಿ ಪಾದೂರು ಮತ್ತಿತರರು, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಉಪಸ್ಥಿತರಿದ್ದರು.

ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ, ಪ್ರಸ್ತಾವನೆಗೈದರು. ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು.

ಜ.17 : ಕಚ್ಚೂರು ಮಾಲ್ತಿದೇವಿ ಬಬ್ಬುಸ್ವಾಮಿ ಮೂಲಕ್ಷೇತ್ರಕ್ಕೆ ಪಡುಬಿದ್ರಿ ವಲಯದಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ

Posted On: 16-01-2025 12:46PM

ಪಡುಬಿದ್ರಿ : ಕಚ್ಚೂರು ಶ್ರೀಮಾಲ್ತಿದೇವಿ ಶ್ರೀಬಬ್ಬುಸ್ವಾಮಿ ಮೂಲಕ್ಷೇತ್ರದ ವಾರ್ಷಿಕ ಜಾತ್ರೆ ಮಹೋತ್ಸವದ ಪ್ರಯುಕ್ತ ಹಸಿರು ಹೊರೆಕಾಣಿಕೆ ಸಮರ್ಪಣೆ ಜ.17ರಂದು ಮದ್ಯಾಹ್ನ 12 ಗಂಟೆಗೆ ಸರಿಯಾಗಿ ಪಡುಬಿದ್ರಿ ವಲಯ ಹೊರೆಕಾಣಿಕೆ ಸಮಿತಿಯ ನೇತೃತ್ವದಲ್ಲಿ ಪಡುಬಿದ್ರಿ ಶ್ರೀಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪಡುಬಿದ್ರಿ ಏಳು ಮಾಗಣೆ, ವಲಯದ ವಿವಿಧ ಕೋಡ್ದಬ್ಬು ದೈವಸ್ಥಾನಗಳ ಗುರಿಕಾರರು ಹತ್ತು ಸಮಸ್ತರು, ಮುಂಡಾಲ ಯುವ ವೇದಿಕೆ ಪಡುಬಿದ್ರಿ, ವಿವಿಧ ಭಜನಾ ಮಂಡಳಿಗಳು ಮತ್ತು ಸಂಘ-ಸಂಸ್ಥೆಗಳ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ಪಡುಬಿದ್ರಿ ವಲಯ ಹೊರೆಕಾಣಿಕೆ ಸಮಿತಿಯ ದಿನೇಶ್ ಕಂಚಿನಡ್ಕ, ರಾಜು ಹೆಜಮಾಡಿ, ರವಿ ಬೊಗ್ಗರಿಲಚ್ಚಿಲ್, ಪ್ರವೀಣ್ ಎರ್ಮಾಳು, ಪ್ರಸನ್ನ ಪಡುಬಿದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ : ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಜಾಥಾ

Posted On: 15-01-2025 09:28PM

ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ, ಪಡುಬಿದ್ರಿ ಪೊಲೀಸ್ ಠಾಣೆ, ಪಡುಬಿದ್ರಿ ಲಯನ್ಸ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಕರ್ನಾಟಕ ಪಬ್ಲಿಕ್ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬುಧವಾರ ಬೋಡ್೯ ಶಾಲಾ ಮೈದಾನದಿಂದ ಪಡುಬಿದ್ರಿ ಪೇಟೆ, ಮಾರ್ಕೆಟ್ ರಸ್ತೆಯ ಮೂಲಕ ಜಾಗೃತಿ ಜಾಥಾ ನಡೆಯಿತು.

ಕಾರ್ಯಕ್ರಮದ ವೇಳೆ ಹೆಲ್ಮೆಟ್ ಧರಿಸದ ಸವಾರನಿಗೆ ಹೊಸ ಹೆಲ್ಮೆಟ್ ವಿತರಿಸುವ ಮೂಲಕ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಜಾಗೃತಿ ಜಾಥಾದಲ್ಲಿ ಪಡುಬಿದ್ರಿ ಪೇಟೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ, ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ಬಳಕೆಯ ಬಗ್ಗೆ ಪಡುಬಿದ್ರಿ ಎಸ್‌ಐ ಪ್ರಸನ್ನ ಅವರು ಮಾಹಿತಿ ನೀಡಿದರು.

ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ತಸ್ನೀನ್ ಅರ‍್ಹಾ, ಪೂರ್ವಾಧ್ಯಕ್ಷ ರಮೀಝ್ ಹುಸೈನ್, ಗಣೇಶ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಪಿ. ಬಂಗೇರ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಅವಿನಾಶ್, ಸ್ನೇಹಾ, ಮುದರಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಿಯಾಝ್ ಮುದರಂಗಡಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ಗೀತಾ ಶೆಟ್ಟಿ, ಪ್ರಾಥಮಿಕ ವಿಭಾಗದ ಜಾನೆಟ್ ಕ್ಲಾರಾ, ರೋಟರಿ ಕ್ಲಬ್‌ನ ಪುಷ್ಪಾ, ಶೋಭಾ ಉಪಸ್ಥಿತರಿದ್ದರು.