Updated News From Kaup
ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನ - ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳ ವಿಲೇವಾರಿ
Posted On: 26 Jun 2022, 07:05 PM
ಮಂಗಳೂರು : ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ಪೈಕಿ ಪ್ರಸ್ತುತ ಠಾಣೆಯಲ್ಲಿ ವಿಲೇವಾರಿಯ ಸಲುವಾಗಿ ಬಾಕಿ ಇರುವ ಮಾದಕ ವಸ್ತುಗಳನ್ನು ವಿಲೇವಾರಿಗೊಳಿಸುವ ಪ್ರಕ್ರಿಯೆ ಇಂದು ನಡೆಯಿತು. ಈ ಸಂಬಂಧ ಮಾನ್ಯ ನ್ಯಾಯಾಲಯಗಳಿಂದ ಆದೇಶವನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಮಾದಕ ದ್ರವ್ಯ ವಿಲೇವಾರಿ ಸಮಿತಿಯ ಅಧ್ಯಕ್ಷರಾದ ಸೋನವಣೆ ಋಷಿಕೇಶ್ ಭಗವಾನ್ ಐಪಿಎಸ್, ಮತ್ತು ಸದಸ್ಯರುಗಳಾದ ಶಿವಾಂಶು ರಜಪೂತ್ ಐಪಿಎಸ್, ಸಹಾಯಕ ಪೊಲೀಸ್ ಅಧೀಕ್ಷಕರು ಬಂಟ್ವಾಳ ಉಪವಿಭಾಗ ಮತ್ತು ಡಾ. ಗಾನ ಪಿ ಕುಮಾರ್, ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪ ವಿಭಾಗರವರ ಸಮಕ್ಷಮದಲ್ಲಿ ವಿವಿಧ ಠಾಣೆಯ 11 ಪ್ರಕರಣಗಳಲ್ಲಿ ಸುಮಾರು ರೂ 23,75,300/- ಮೌಲ್ಯದ 53 ಕೆ.ಜಿ 128 ಗ್ರಾಂ ಮಾದಕ ವಸ್ತು ಗಾಂಜಾವನ್ನು ಮತ್ತು ಸುಮಾರು ರೂ 30,00,000/- ಮೌಲ್ಯದ 120 ಗ್ರಾಂ ಹೆರಾಯಿನ್ ನ್ನು ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ, ಸಂಸ್ಕರಣೆ ಮತ್ತು ವಿಲೇವಾರಿ ಘಟಕವಾದ ಮೆ|| ರಾಮ್ಕಿ ಎನರ್ಜಿ ಮತ್ತು ಎನ್ವಿರೋನ್ಮೆಂಟ್ ಲಿ. ರವರಿಗೆ ಹಸ್ತಾಂತರಿಸಿ ನಾಶಪಡಿಸಲಾಯಿತು.
ಗ್ರಾಮ ಒನ್ ಕೇಂದ್ರಗಳಲ್ಲಿ ವಿವಿಧ ಸೇವೆ
Posted On: 24 Jun 2022, 06:43 PM
ಉಡುಪಿ : ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಗ್ರಾಮ ಒನ್ ಯೋಜನೆಯಡಿ ಎಲ್ಲ ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳೆ ವಿಮೆ, ವಿದ್ಯುತ್ ಬಿಲ್ ಪಾವತಿ, ಕೆ.ಎಸ್.ಆರ್.ಟಿ.ಸಿ ಬಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯಗಳನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಅವಘಡ - ವ್ಯಕ್ತಿ ಮೃತ
Posted On: 23 Jun 2022, 11:27 PM
ಸುರತ್ಕಲ್ : ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಕೌಂಟರ್ ವೇಟ್ ತಾಗಿ ವ್ಯಕ್ತಿಯೋರ್ವ ಗಾಯಗೊಂಡಿದ್ದು ಗಾಯಾಳುವನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತ ಪಟ್ಟಿರುವ ಘಟನೆ ಜೂನ್ 22 ರಂದು ನಡೆದಿದೆ. ಮೃತ ವ್ಯಕ್ತಿ ಕೇಶವ (47) ಕುತ್ತೆತ್ತೂರು ಗ್ರಾಮದ ಎಂ ಆರ್ ಪಿ ಎಲ್ ವರ್ಕ್ ಶಾಪ್ ಬಳಿ ಗುತ್ತಿಗೆ ಆಧಾರದಲ್ಲಿ ರಿಗ್ಗರ್ ಕೆಲಸ ಮಾಡಿಕೊಂಡಿದ್ದರು. ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಟ್ರೇಲರ್ ನಲ್ಲಿ ಇದ್ದ ಕೌಂಟರ್ ವೇಟ್ ನ್ನು ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಕೌಂಟರ್ ವೇಟ್ ತಾಗಿ ಈ ಅವಘಡ ಸಂಭವಿಸಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಒದಗಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
Posted On: 23 Jun 2022, 08:43 PM
ಉಡುಪಿ : ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ದಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಮ್ಯಾನ್ಯವಲ್ ಸ್ಕ್ಯಾವೆಂಜರ್ ಪದ್ದತಿಯನ್ನು ಸಂಪೂರ್ಣವಾಗಿ ನಿಷೇಧಿಸಿ, ಕಾಯಿದೆ ಹಾಗೂ ನಿಯಮಗಳನ್ನು ಜಾರಿಗೆ ತರುವುದರೊಂದಿಗೆ , ಈ ವೃತ್ತಿಯಲ್ಲಿ ತೊಲಗಿಸಬೇಕು, ಒಂದೊಮ್ಮೆ ಕಾಯಿದೆಯನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಕಾನೂನಿಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮ್ಯಾನ್ಯುವಲ್ ಸ್ಕ್ಯಾವೆಂಜರ್ ವೃತ್ತಿಯಿಂದ ಹೊರ ಬಂದಿರುವವರಿಗೆ ಸೂಕ್ತ ಪುರ್ನವಸತಿ ಒದಗಿಸಬೇಕು , ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸಫಾಯಿ ಕರ್ಮಚಾರಿ ಅವರಿಗೆ ನಿವೇಶನ ಮಂಜೂರಾತಿಯನ್ನು ಪ್ರಥಮಾದ್ಯತೆಯ ಮೇಲೆ ನೀಡಬೇಕು ಎಂದು ಸೂಚಿಸಿದರು. ಮ್ಯಾನ್ಯುವಲ್ ಸ್ಕ್ಯಾವೆಂಜರ್ ನಿಂದ ಮೃತಪಟ್ಟ ಕಾರ್ಮಿಕರ ಕುಟುಂಬದ ಅವಲಂಬಿತ ಸದಸ್ಯರುಗಳಿಗೆ ಗುರುತಿನ ಚೀಟಿ ಹಾಗೂ ಪುರ್ನವಸತಿ ಕಲ್ಪಿಸುವ ಕಾರ್ಯವಾಗಬೇಕು ಎಂದರು. ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರ, ವೈಯಕ್ತಿಕವಾಗಿ , ಸಫಾಯಿ ಕರ್ಮಚಾರಿಗಳ ಸ್ವ ಸಹಾಯ ಗುಂಪುಗಳಿಂದ , ಖಾಸಗಿ ಏಜೆನ್ಸಿ ಗುತ್ತಿಗೆದಾರರಿಂದ ಹೊಸ ಯಂತ್ರಗಳನ್ನು ಖರೀದಿ ಮಾಡಲು ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುವುದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ 3 ತಿಂಗಳಿಗೊಮ್ಮೆ ಸಾಮಾನ್ಯ ಅರೋಗ್ಯ ತಪಾಸಣೆ ಹಾಗೂ ವಾರ್ಷಿಕವಾಗಿ ಎರಡು ಬಾರಿ ಸಂಪೂರ್ಣ ದೇಹ ಪರೀಕ್ಷೆಯನ್ನು ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಮಾಡಿಸಿ, ವರದಿಯನ್ನು ಜಿಲ್ಲಾ ಜಾಗೃತಿ ಸಮಿತಿಗೆ ನೀಡಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಲೋರ್ಸ್ ಹಾಗೂ ಕ್ಲೀನರ್ ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಅರ್ಹ ವ್ಯಕ್ತಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು , ಜಾಗೃತ ಸಮಿತಿ ಸದಸ್ಯರುಗಳಾದ ವೈ.ಲಕ್ಷ್ಮಣ್ , ಗಣೇಶ್, ಅನಿತಾ, ಹಾಗೂ ಎಲ್ಲಾ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಇಂಡಿಯಾ ಬುಕ್ ಆಫ್ ರೆಕಾಡ್೯ನಲ್ಲಿ ಕಾಪುವಿನ ಶಶಾಂಕ್ ಎಸ್. ಸಾಲಿಯಾನ್ ಕಲಾಕೃತಿ ; 13,940 ಮೊಳೆಗಳಲ್ಲಿ ಮೂಡಿದ ಆನೆ
Posted On: 23 Jun 2022, 08:38 PM
ಕಾಪು : ಗ್ರಾಮೀಣ ಪ್ರತಿಭೆಯಾಗಿರುವ ಶಶಾಂಕ್, ಕೇರಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಗರ್ಭಿಣಿ ಆನೆಯ ಸಾವಿಗೆ ಮರುಕ ಪಟ್ಟು ಮೊಳೆಗಳ ಜೋಡಣೆಯೊಂದಿಗೆ ಆನೆಯ ಕಲಾಕೃತಿ ರಚಿಸಿದ್ದಾರೆ. ಇದೊಂದು ಅಪೂರ್ವ ಸಾಧನೆಯಾಗಿದ್ದು, ಅವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವುದು ಕಾಪುವಿನ ಜನತೆಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಕಲಾ ಪ್ರೋತ್ಸಾಹಕ ಗುರುಚರಣ್ ಪೊಲಿಪು ಹೇಳಿದರು. ಅವರು ಕಾಪುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭ ಯುವ ಕಲಾವಿದ ಶಶಾಂಕ್ ಎಸ್. ಸಾಲಿಯಾನ್ ಮಾತನಾಡಿ, ಕೇವಲ ಮೊಳೆಗಳನ್ನು ಬಳಸಿಕೊಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಕಲಾಕೃತಿ ಮಾಡಿರುವ ದಾಖಲೆ ಇಲ್ಲದಿರುವುದನ್ನು ತಿಳಿದುಕೊಂಡಿದ್ದೆ. ಮೊದಲಾಗಿ 2,000 ಮೊಳೆ ಬಳಸಿ ಸಣ್ಣ ಗಾತ್ರ ಕಲಾಕೃತಿ ರಚಿಸುವ ಯೋಜನೆ ಹಾಕಿಕೊಂಡಿದ್ದೆ. ಆದರೆ ತಂದೆ-ತಾಯಿ ಪ್ರೋತ್ಸಾಹ, ಸ್ನೇಹಿತರಾದ ಧೀರಜ್, ಸೌರಭ್, ಗೌರವ್, ಮನೀಶ್, ಶಶ್ಮಿತಾ ಮತ್ತು ಜೋಸ್ವಿನ್ ಸಹಕಾರದಿಂದ ಬೃಹತ್ ಗಾತ್ರದ ಕಲಾಕೃತಿ ಮಾಡಲು ಮುಂದಾದೆ. ಕಲಾಕೃತಿ ರಚಿಸಲು ಸುಶಾಂತ್ ಶೆಟ್ಟಿ, ಶಶ್ಮಿತಾ ಸಾಲಿಯಾನ್, ಐಶ್ವರ್ಯ ಮತ್ತು ಶ್ರೀಶ ಶೆಟ್ಟಿ ಪ್ರಾಯೋಜಕತ್ವ ವಹಿಸಿ ಇನ್ನಷ್ಟು ಉತ್ತೇಜಿಸಿದರು. ಅರ್ಧ ಇಂಚಿನ 13,940 ಮೊಳೆಗಳನ್ನು ಬಳಸಿಕೊಂಡು ಫೋಮ್ ಶೀಟ್‌ನಲ್ಲಿ 9 ಗಂಟೆಯಲ್ಲಿ ಆನೆಯ ಕಲಾಕೃತಿ ರಚಿಸಲಾಗಿದೆ. ಬ್ರಶ್ ಮತ್ತು ಬಣ್ಣಗಳನ್ನು ಉಪಯೋಗಿಸದೇ ಬಿಡಿಸಿರುವ ಕಲಾಕೃತಿಯ ಚಿತ್ರೀಕರಣದ ದಾಖಲೆಗಳನ್ನು ಆನ್ ಲೈನ್ ಮೂಲಕವಾಗಿ ಸಲ್ಲಿಸಿದ್ದು, ಅದನ್ನು ಪರೀಕ್ಷಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ದಾಖಲೆ ಸಂದೇಶ ರವಾನಿಸಿದೆ. ವಾರದೊಳಗೆ ದಾಖಲೆ ಪ್ರಮಾಣ ಪತ್ರ ರವಾನಿಸುವುದಾಗಿಯೂ ತಿಳಿಸಿದೆ ಎಂದರು. ಶಾಲಾ ದಿನಗಳಲ್ಲಿಯೇ ಕಲಾಕೃತಿ ರಚನೆ ಹವ್ಯಾಸವನ್ನು ಬೆಳೆಸಿಕೊಂಡಿದ್ದ ನಾನು. ಆವೆ ಮಣ್ಣಿನ ಕಲಾಕೃತಿ, ಪೇಂಟಿಂಗ್, ವಾಟರ್ ಕಲರ್, ಆಕ್ರಾಲಿಕ್ ಹೀಗೆ ವಿಭಿನ್ನ ಕಲಾ ಪ್ರಕಾರಗಳಲ್ಲಿ ಕಲಾಕೃತಿ ರಚನೆಯಲ್ಲಿ ತೊಡಗಿರುವುದಾಗಿ ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಶಶಾಂಕ್ ತಾಯಿ ಪುಷ್ಪಾ ಉಪಸ್ಥಿತರಿದ್ದರು.
ಜೂನ್ 24 : ಕಾಪು ಡಿವಿಷನ್ ಎಸ್ಸೆಸ್ಸೆಫ್ - ಸುಹ್ಬಾ ಕ್ಯಾಂಪ್
Posted On: 22 Jun 2022, 11:14 PM
ಕಾಪು : ರಾಜ್ಯ ಎಸ್ಸೆಸ್ಸೆಫ್ ಮಹಾತ್ವಾಕಾಂಕ್ಷೆಯ ಯೋಜನೆಯ ಸನ್ನದ್ಧ ಕಾರ್ಯಕರ್ತರ ಪಡೆಯನ್ನು ಮುಂದಿನ ಪೀಳಿಗೆಗಾಗಿ ಸಕ್ರೀಯ ಕಾರ್ಯಾಚರಣೆಗೆ ಸಿದ್ಧಪಡಿಸುವ ಉದ್ದೇಶದೊಂದಿಗೆ ರಾಜ್ಯ ಕ್ಯೂಡಿ ಉಪಸಮಿತಿ ಅಧೀನದಲ್ಲಿ ಸುಹ್ಬಾ ಕ್ಯಾಂಪ್ ರಾಜ್ಯಾದ್ಯಂತ ನಡೆಯುತ್ತಿರುವ ಅಂಗವಾಗಿ ಎಸ್ಸೆಸ್ಸೆಫ್ ಕಾಪು ಡಿವಿಷನ್ ವತಿಯಿಂದ 2022 ಜೂನ್ 24, ಶುಕ್ರವಾರ ಜೇಸಿಐ ಭವನ ಕಾಪುವಿನಲ್ಲಿ ನಡೆಯಲಿದೆ. ಡಿವಿಷನ್ ಅಧ್ಯಕ್ಷ ಮುಹಮ್ಮದ್ ಮುಸ್ತಫ ಸಖಾಫಿ ಅಧ್ಯಕ್ಷತೆಯಲ್ಲಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಶಿರ್ವ ಸ್ವಾಗತಿಸಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಉದ್ಘಾಟಿಸಲಿದ್ದಾರೆ. ರಾಜ್ಯ ಕ್ಯೂಡಿ ಕಾರ್ಯದರ್ಶಿ ಮುಸ್ತಫ ನಈಮಿ ಹಿಮಮಿ ಹಾವೇರಿ ವಿಷಯ ಮಂಡಿಸಲಿದ್ದು, ಜಿಲ್ಲಾ ಕ್ಯೂಡಿ ಕನ್ವೀನರ್ ಮುಹಿಯ್ಯುದ್ದೀನ್ ಸಖಾಫಿ ಪಯ್ಯಾರು, ರಾಜ್ಯ ಸದಸ್ಯ ಹಾಗೂ ಡಿವಿಷನ್ ಉಸ್ತುವಾರಿ ಮನ್ಸೂರ್ ಕೆಎಸ್ಸೆಮ್ ಉಡುಪಿ, ರಾಜ್ಯ ಸದಸ್ಯ ಮುಹಮ್ಮದ್ ರಕೀಬ್ ಕನ್ನಂಗಾರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೂರು ಹಾಗೂ ಡಿವಿಷನ್ ಸದಸ್ಯರು ಉಪಸ್ಥಿತರಿರುವರು. ಈ ಕ್ಯಾಂಪಿನಲ್ಲಿ ಡಿವಿಷನ್ ವ್ಯಾಪ್ತಿಯ ಶಾಖೆಗಳ ನೊಂದಾಯಿತ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕಾಪು ಡಿವಿಷನ್ ಕ್ಯೂಡಿ ಕಾರ್ಯದರ್ಶಿ ಆಸಿಫ್ ಬೆಳಪು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ನಲ್ಲಿ ಯೋಗ ದಿನಾಚರಣೆ
Posted On: 22 Jun 2022, 06:04 PM
ಕಾಪು : ಆನೆಗುಂದಿ ಶ್ರೀ ಸರಸ್ವತಿ ಎಜುಕೇಷನಲ್ ಟ್ರಸ್ಟ್ - ಅಸೆಟ್ ನ ಅಧೀನದಲ್ಲಿರುವ ಆನೆಗುಂದಿ ಸರಸ್ವತಿ ಪೀಠ ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಿರ್ವದ ಪತಂಜಲಿ ಯೋಗ ಸಮಿತಿಯ ಸದಸ್ಯರಾದ ರಮೇಶ್ ಸಾಲಿಯಾನ್ ಹಾಗೂ ಪ್ರಭಾಕರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ಆಸನಗಳ ಪ್ರದರ್ಶನದ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಆಸನಗಳನ್ನು ಮಾಡಿದರು. ಪ್ರಾಂಶುಪಾಲ ಗುರುದತ್ತ ಸೋಮಯಾಜಿ ಅಂತಾರಾಷ್ಟ್ರೀಯ ಯೋಗ ದಿನದ ಮಹತ್ವ ತಿಳಿಸಿದರು. ನಿಕಟಪೂರ್ವ ಅಧ್ಯಕ್ಷ ವಿದ್ವಾನ್ ಶಂಭುದಾಸ್ ಗುರೂಜಿ, ಶಿಕ್ಷಕಿ ರಜೀಶ್ಮಾ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ , ಕನ್ನಡ ಅಧ್ಯಾಪಕ ಮಂಜುನಾಥ್ ಶೇಟ್ ಮತ್ತು ಶಿಕ್ಷಕವೃಂದದವರು ಪಾಲ್ಗೊಂಡಿದ್ದರು.
ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿ : ಮಟ್ಟಾರು ರತ್ನಾಕರ ಹೆಗ್ಡೆ
Posted On: 21 Jun 2022, 09:43 PM
ಉಡುಪಿ : ಇಂದಿನ ಯಾಂತ್ರಿಕ ಬದುಕಿನಲ್ಲಿ, ದೇಹಕ್ಕೆ ಸೂಕ್ತ ವ್ಯಾಯಾಮ ದೊರೆಯದೇ, ನಾವುಗಳು ಅನೇಕ ರೋಗಗಳಿಂದ ಬಳಲುತ್ತಿದ್ದು, ದೈನಂದಿನ ಬದುಕಿನಲ್ಲಿ ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಎನ್.ಸಿ.ಡಿ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪರ್ಯಾಯ ಕೃಷ್ಣಾಪುರ ಮಠ ಉಡುಪಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ ಇಂದು ಯೋಗವು ಇಡೀ ವಿಶ್ವಕ್ಕೆ ಹರಡಿದ್ದು, ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ದಿನದ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯವಂತರಾಗಿ ಆಸ್ಪತ್ರೆಗಳಿಂದ ದೂರ ಉಳಿಯಲು ಸಾಧ್ಯವಾಗಲಿದೆ. ಯೋಗಾಭ್ಯಾಸ ನಿತ್ಯ ಜೀವನದ ಭಾಗವಾಗಬೇಕು ಎಂದರು. ಯೋಗ ಭಾರತೀಯ ಪ್ರಾಚೀನ ಪರಂಪರೆಯ ಅತ್ಯಮೂಲ್ಯ ಕೊಡುಗೆಯಾಗಿದೆ. ಯೋಗಾಭ್ಯಾಸವನ್ನು ವಿಶ್ವದೆಲ್ಲೆಡೆ ಅನುಸರಿಸುತ್ತಿದ್ದಾರೆ. ಮುಂದುವರೆದ ದೇಶಗಳಲ್ಲೊಂದಾದ ಅಮೇರಿಕದಲ್ಲಿ ಸಹ ಯೋಗದ ಸೆಂಟರುಗಳು ನಿರಂತರವಾಗಿವೆ ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಯೋಗವು ವಿಶ್ವಕ್ಕೆ ಭಾರತ ನೀಡಿರುವ ಅತ್ಯುತ್ತಮ ಕೊಡುಗೆ. ಯೋಗದ ಮೂಲಕ ಪ್ರತಿಯೊಬ್ಬರೂ ತಮ್ಮನ್ನು ತಾವು ಅರಿತುಕೊಳ್ಳಲು ಹಾಗೂ ಉತ್ತಮ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಲು ಸಾಧ್ಯ. ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಯೋಗ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಯೋಗಾಸನದ ವಿವಿಧ ಆಸನಗಳನ್ನು ಅಭ್ಯಾಸ ಮಾಡಲಾಯಿತು. ಯೋಗ ಶಿಕ್ಷಕ ಬಿರಾದರ್ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಹಾಗೂ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಸ್ವಾಗತಿಸಿದರು.
ಜೂನ್ 26 : ಪಡುಬಿದ್ರಿ ಗ್ರಾಮೀಣ ಕಾಂಗ್ರೇಸ್ ವತಿಯಿಂದ ಚಿಂತನ ಮಂಥನ ಸಭೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
Posted On: 21 Jun 2022, 08:04 PM
ಪಡುಬಿದ್ರಿ : ಗ್ರಾಮೀಣ ಕಾಂಗ್ರೇಸ್ ಸಮಿತಿ, ಪಡುಬಿದ್ರಿ ಇದರ ವತಿಯಿಂದ ಚಿಂತನ ಮಂಥನ ಸಭೆ ಜೂನ್ 26, ಆದಿತ್ಯವಾರದಂದು ಸಂಜೆ 4.30ಕ್ಕೆ ಸಾಯಿ ಆರ್ಕೇಡ್ ಸಭಾಂಗಣ, 3ನೇ ಮಹಡಿ ಮಾರ್ಕೇಟ್ ರಸ್ತೆ, ಪಡುಬಿದ್ರಿ ಇಲ್ಲಿ ಜರಗಲಿದೆ. ಈ ಸಂದರ್ಭ ಸಾಧಕರಿಗೆ ಸನ್ಮಾನ, ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯೊಳಗೆ ವಾಸ್ತವ್ಯವಿರುವ 2021-22ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 550ಕ್ಕೂ ಮೇಲ್ಪಟ್ಟು ಅಂಕಗಳಿಸಿದವರಿಗೆ ಪ್ರತಿಭಾ ಪುರಸ್ಕಾರ, ಪಕ್ಷದ ಹಿರಿಯ ಮುಖಂಡರಿಗೆ ಸನ್ಮಾನ, ಪಕ್ಷದ ಸಂಘಟನಾತ್ಮಕ ಕಾರ್ಯದ ಬಗ್ಗೆ ಚಿಂತನ ಮಂಥನ, ಪಕ್ಷದ ಮಾಜಿ ಹಿರಿಯ ಗ್ರಾ.ಪಂ. ಸದಸ್ಯರು, ಅಧ್ಯಕ್ಷರುಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಗ್ರಾಮೀಣ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕರುಣಾಕರ್ ಪೂಜಾರಿ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪ್ರಕಟನೆ : ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯೊಳಗೆ ವಾಸ್ತವ್ಯವಿರುವ 2021-22ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ(ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ) 550ಕ್ಕೂ ಮೇಲ್ಪಟ್ಟು ಅಂಕಗಳಿಸಿದವರು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು ಜೂನ್ 24ರ ಮೊದಲು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿ ಗಣೇಶ್ ಕೋಟ್ಯಾನ್ : 9900555542 ತಸ್ನಿನ್ ಅರಾ : 8861183491
ಉಡುಪಿ ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿಗಳ ಭ್ರಷ್ಟಚಾರ, ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ ; ಜಿಲ್ಲಾಧಿಕಾರಿಗಳಿಂದ ತನಿಖೆಯ ಭರವಸೆ
Posted On: 21 Jun 2022, 03:36 PM
ಉಡುಪಿ : ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿಗಳ ಭ್ರಷ್ಟಚಾರ ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಉಡುಪಿ ಜಿಲ್ಲೆಯ ಅರ್ ಟಿ ಐ ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟನೆ, ಅರ್ ಪಿ ಐ ಪಕ್ಷ , ಕುಂದಾಪುರ ಕನತಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಉಡುಪಿ ಜಿಲ್ಲಾಡಳಿತ ಕಚೇರಿ ಎದುರುಗಡೆ ದಿನ ಪೂರ್ತಿ ಪ್ರತಿಭಟನೆಯನ್ನು ನಡೆಸಿದರು. ಜಿಲ್ಲೆಯಲ್ಲಿ ವಿವಿಧ ಇಲಾಖೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದು, ಈ ಬಗ್ಗೆ ಹಲವು ದೂರುಗಳನ್ನು ವಿವಿಧ ಸಂಘಟನೆಗಳು ದೂರು ನೀಡಿದರು, ಯಾವುದೇ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಸಂಘಟನೆಗಳು ಪ್ರತಿಭಟನೆಗಿಳಿದಿದ್ದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಮೆಡಿಕಲ್ ಮಾಫಿಯ ,ಕುಂದಾಪುರ ತಹಶಿಲ್ದಾರರ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ,ಬ್ರಹ್ಮಾವರ ಸೀತಾನದಿ ಕಳಪೆ ರಸ್ತೆ ಹಗರಣ , ಮೀಸಲು ಅರಣ್ಯ ಭೂಮಿಯನ್ನು ನಾಶ ಪಡಿಸಿ ಪರಿಶಿಷ್ಟ ಪಂಗಡದ ನಿಧಿ ದುರುಪಯೋಗ ಪಡಿಸಿಕೊಂಡು ರಸ್ತೆ ನಿರ್ಮಾಣ, ಬೈಂದೂರಿನಲ್ಲಿ ಉಪ ತಹಶೀಲ್ದಾರ್ ಭೂ ಕಬಳಿಕೆ ಪ್ರಕರಣ, ಆಯುಷ್ಮಾನ್ ಯೋಜನೆ ಸಮಪರ್ಕವಾಗಿ ಜಾರಿಯಾಗದ ಬಗ್ಗೆ , ನ್ಯಾಯಾಲಯದ ಆದೇಶಗಳನ್ನು ಅಧಿಕಾರಿಗಳು ಸರಿಯಾಗಿ ಪಾಲನೆ ಮಾಡದಿರುವ ಬಗ್ಗೆ ಸೇರಿದಂತೆ ಭ್ರಷ್ಟ ಅಧಿಕಾರಿಗಳ ವಿರುದ್ದ ಕ್ರಮಗಳನ್ನು ಕೈಗೊಳ್ಳುವಂತೆ ನೂರಾರು ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು. ಬೆಳಿಗ್ಗಿನಿಂದಲೂ ಪ್ರತಿಭಟನೆ ನಡೆಸಿದರೂ ಕೂಡ ಜಿಲ್ಲಾಡಳಿತ ಮಾತ್ರ ಪ್ರತಿಭಟನಕಾರರ ಕಡೆಗೆ ತಲೆ ಎತ್ತಿಯೂ ನೋಡದಿರುವುದು ಪ್ರತಿಭಟನಾಕಾರರ ಅಕ್ರೋಶಕ್ಕೆ ಕಾರಣವಾಯ್ತು. ಜಿಲ್ಲಾಧಿಕಾರಿಗಳು ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಜಿಲ್ಲಾಡಳಿತದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಭ್ರಷ್ಟರನ್ನು ಜಿಲ್ಲಾಡಳಿತ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತ ಸ್ಪಂದಿಸುವವರೆಗೂ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ ಕಾರ್ಯಕರ್ತರು ಪ್ರತಿಭಟನಾ ಸ್ಥಳದಿಂದ ಕದಲದೆ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ರಾತ್ರಿವರೆಗೂ ಧರಣಿ ಮುಂದುವರೆಸಿದ್ದರು. ಪೋಲೀಸರು ಹಾಗೂ ಇತರ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಸಾಧ್ಯವಾಗಲಿಲ್ಲ. ಭಾರೀ ಗಾಳಿ ಮಳೆಯನ್ನು ಲೆಕ್ಕಿಸದೇ ಪಟ್ಟು ಹಿಡಿದು ತಡವರಾತ್ರಿವರೆಗೂ ಧರಣಿ ಮುಂದುವರೆಸಿದ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಕೊನೆಗೂ ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಸ್ಥಳಕ್ಕೆ ಬಂದು ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಿದರು. ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈಗ ನೀಡಿರುವ ದೂರುಗಳ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.ಭ್ರಷ್ಟ ಅಧಿಕಾರಿಗಳ ವಿರುದ್ದ ತನಿಖೆ ನಡೆಸುತ್ತೇವೆ ,ಜಿಲ್ಲಾಡಳಿತಕ್ಕೆ ಸಮರ್ಪಕವಾದ ಮಾಹಿತಿಗಳನ್ನು ನೀಡುವಂತೆಯೂ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಶೇಖರ್ ಹಾವಂಜೆ, ಆರ್. ಟಿ. ಐ ಸಂಘಟನೆಯ ಸತೀಶ್ ಪೂಜಾರಿ , ಸದಾಶಿವ ಶೆಟ್ಟಿ, ಜಯಕರ್ ನಾಯ್ಕ್ , ಸಂಜೀವ ನಾಯ್ಕ್ , ಕಿರಣ್ ಪೂಜಾರಿ, ರಮೇಶ್, ಕೆ ಅರ್ ಎಸ್ ಪಕ್ಷದ ಅಶೋಕ್ ಕಾಡಬೆಟ್ಟು, ಇಕ್ಬಾಲ್ ಕುಂಜಿಬೆಟ್ಟು, ಸದಾಶಿವ ಕೋಟೆಕಾರ್, ಪುರುಷೋತ್ತಮ, ಮತ್ತಿತರರು ಉಪಸ್ಥಿತರಿದ್ದರು.
