Updated News From Kaup
ಹೋಟೆಲ್ನಲ್ಲಿ ಹೊಟ್ಟೆ ತುಂಬಾ ತಿಂದು ಹಣ ನೀಡದೆ ಮಾಲಿಕರಿಗೆ ಬೆದರಿಕೆ
Posted On: 06 Jul 2022, 12:00 PM
ಮಣಿಪಾಲ : ಹೋಟೆಲ್ ಗೆ ಆಗಮಿಸಿ ಹೊಟ್ಟೆ ತುಂಬಾ ತಿಂದು ಹಣವನ್ನು ಕೊಡದೆ ಹೋಟೆಲ್ ಮಾಲಿಕರಿಗೆ ಬೆದರಿಕೆಯೊಡ್ಡಿದ ಘಟನೆ ಮುರ್ಡೇಶ್ವರ ಭಟ್ಕಳ, ಉತ್ತರ ಕನ್ನಡ ಜಿಲ್ಲೆ ಇಲ್ಲಿ ಜುಲೈ 5ರಂದು ನಡೆದಿದೆ. ಹಬೀಬುಲ್ಲಾ ಇವರ ಹೋಟೆಲ್ ಗೆ ಮೊಹಮ್ಮದ್ ಅನ್ವರ್ ಎಂಬಾತ ಕಾರಿನಲ್ಲಿ ಬಂದು ತಿಂಡಿ ತಿಂದು ಚಾ ಕುಡಿದು ಅದರ ಹಣವನ್ನು ಪಾವತಿಸದೇ ಕಾರಿನ ಬಳಿ ಹೋದಾಗ ಮಾಲಿಕರು ಹಣವನ್ನು ಕೇಳಿದಾಗ ಕೈಯಿಂದ ಹೊಡೆದು ಅಡ್ಡಗಟ್ಟಿ ಪಿಸ್ತೂಲ್ ತರಹ ಇರುವ ಒಂದು ವಸ್ತುವನ್ನು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಂಬೂರು : ವ್ಯಕ್ತಿಯೋರ್ವ ಕಾಣೆ
Posted On: 06 Jul 2022, 11:37 AM
ಶಿರ್ವ : ಕಾಪು ತಾಲೂಕಿನ ಪಾಂಬೂರಿನ ಲಕ್ಷ್ಮಣ್ ರಾವ್ (66) ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಜಾತ ರಾವ್ ಎಂಬುವವರು ನೀಡಿದ ದೂರಿನಂತೆ ಅವರ ಗಂಡ ಶಿವರಾಯ ರಾವ್ ಮತ್ತು ತಂದೆ ಲಕ್ಷ್ಮಣ್ ರಾವ್ ರವರು ಉಡುಪಿ ಬನ್ನಂಜೆಯ ಕೆನರಾ ಬ್ಯಾಂಕ್ ವ್ಯವಹಾರದ ಬಗ್ಗೆ ಬಸ್ಸಿನಲ್ಲಿ ಬಂದವರು ಉಡುಪಿಯ ಕೆಎಂ ಮಾರ್ಗದ ಬಳಿ ಬಸ್ಸಿನಿಂದ ಇಳಿದಿದ್ದು, ಶಿವರಾಯ ರಾವ್‌ರವರು ಲಕ್ಷ್ಮಣ ರಾವ್‌ರವರನ್ನು ಅಲ್ಲಿಯೇ ನಿಲ್ಲಲು ಹೇಳಿ ರಾಧಾ ಮೆಡಿಕಲ್‌ಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ವಾಪಾಸು ಹಿಂತಿರುಗಿ ಬಂದು ನೋಡಿದಾಗ ಲಕ್ಷ್ಮಣ ರಾವ್‌ರವರು ಅಲ್ಲಿರಲಿಲ್ಲ. ಈವರೆಗೂ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.
ಮುಂಬೈ ಉದ್ಯಮಿ ಶ್ರೀನಿವಾಸ್ ಎನ್ ಕಾಂಚನ್ ಅವರಿಗೆ ರಾಷ್ಟ್ರೀಯ ನಿರ್ಮಾಣ ರತನ್ ಅವಾರ್ಡ್
Posted On: 06 Jul 2022, 08:28 AM
ಕಾಪು : ಅಖಿಲ ಭಾರತ ಉದ್ಯಮ ಅಭಿವೃದ್ಧಿ ಸಂಘವು ಮುಂಬೈ ಉದ್ಯಮಿ ಕನ್ನಡಿಗ ಶ್ರೀನಿವಾಸ್ ಎನ್ ಕಾಂಚನ್ ಅವರಿಗೆ 'ರಾಷ್ಟ್ರೀಯ ನಿರ್ಮಾಣ ರತನ್ ಅವಾರ್ಡ್ ಫ಼ಾರ್ ಇಂಡಸ್ಟ್ರಿ ಡೆವಲಪ್ಮೆಂಟ್' ಎಂಬ ರಾಷ್ಟ್ರೀಯ ಪ್ರಶಸ್ತಿಯ ಗೌರವ ಪಡೆದರು. ಶ್ರೀನಿವಾಸ್ ಕಾಂಚನ್ ಅವರು ಹಿಂದುಳಿದ ಪ್ರದೇಶವಾದ ಮಹಾರಾಷ್ಟ್ರ ದ ನಾಸಿಕ್ ಗ್ರಾಮೀಣ ಪ್ರದೇಶದಲ್ಲಿ ಪಂಚಾವಟಿ ವಲ್ವೇಸ್ ಆಂಡ್ ಫ್ಲಾಲೆಂಗ್ಸ್ ಎಂಬ ಕಾರ್ಖಾನೆಯನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಶ್ರಮಿಸಿರುವದರಿಂದ ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರ ಉದ್ಯೋಗ ವೃದ್ಧಿಯಲ್ಲಿ ಅವರ ಪುತ್ರ ಸಾಯಿಪ್ರಸಾದ್ ಸಹಾಯ ಮಾಡುತ್ತಿದ್ದಾರೆ.
ಮಂಗಳೂರಿನಲ್ಲಿ 518 ವಿದೇಶಿ ಪ್ರಜೆಗಳ ವಿಚಾರಣೆ
Posted On: 04 Jul 2022, 10:55 PM
ಮಂಗಳೂರು : ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವ ಕಾರ್ಯ ಸಾಗಿದ್ದು, ಕಳೆದ ಒಂದು ವಾರದಲ್ಲಿ 4 ಸಾವಿರ ಮಂದಿಯ ದಾಖಲೆ ಪರಿಶೀಲಿಸಲಾಗಿದೆ. ಈ ಪೈಕಿ ಸೂಕ್ತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ 518 ಮಂದಿ ವಲಸೆ ಕಾರ್ಮಿಕರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಸೋಮವಾರ ನಗರದ ರೊಸಾರಿಯೊ ಶಾಲೆಯ ಸಭಾಂಗಣದಲ್ಲಿ ಪೊಲೀಸರು ಬೆಳಗ್ಗಿನಿಂದಲೇ ಪ್ರತಿಯೊಬ್ಬ ವಲಸೆ ಕಾರ್ಮಿಕರ ದಾಖಲೆ ಪರಿಶೀಲನೆ ಕಾರ್ಯ ನಡೆಸಿದ್ದಾರೆ. ನಗರದಲ್ಲಿ ಬಾಂಗ್ಲಾ ಮತ್ತಿತರ ದೇಶಗಳ ಕಾರ್ಮಿಕರು ಅಕ್ರಮವಾಗಿ ನೆಲೆಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಈ ದಾಖಲೆ ಪರಿಶೀಲನೆ ಕಾರ್ಯ ನಡೆದಿದೆ. ಈ ಸಂದರ್ಭ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಲಾದ ಕಾರ್ಯಾಚರಣೆಯ ವೇಳೆ 4000 ಮಂದಿಯ ದಾಖಲೆ ಪರಿಶೀಲನೆ ನಡೆಸಲಾಗಿದೆ. ಅವರಲ್ಲಿ ಸರಿಯಾದ ದಾಖಲೆಗಳಿಲ್ಲದೆ, ಅನುಮಾನಸ್ಪದ ರೀತಿಯಲ್ಲಿ ಕಂಡುಬಂದವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದರು. ಗೃಹ ಸಚಿವರು ಇತ್ತೀಚೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪರಿಶೀಲನಾ ಸಭೆಯ ಸಂದರ್ಭ ನೀಡಿದ ಆದೇಶದಂತೆ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ಸಾಗಿದೆ. ಪ್ರತಿಯೊಬ್ಬ ವಲಸೆ ಕಾರ್ಮಿಕರ ಮೇಲೂ ವಿಶೇಷ ನಿಗಾ ಇಡಲಾಗಿದೆ ಎಂದರು. ಮುಖ್ಯವಾಗಿ ಚುನಾವಣಾ ಗುರುತಿನ ಚೀಟಿ, ಆಧಾರ್‌ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದೆ. ಆದರೆ ಅವುಗಳನ್ನು ಕೂಡಾ ನಕಲಿಯಾಗಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅದನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿಯೂ ಮೊಬೈಲ್ ನಂಬರಗಳ ಮೂಲಕ ಅವರ ಪರಿಶೀಲನೆ ನಡೆಸಲಾಗುತ್ತಿದೆ. 20ಕ್ಕೂ ಅಧಿಕ ವಿಷಯಗಳ ಮೇಲೆ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.
ಅರ್ಜಿ ವಿಲೇವಾರಿಯಲ್ಲಿ ಶಿರ್ವ ಗ್ರಾಮ ಒನ್ ಕೇಂದ್ರ ಪ್ರಥಮ
Posted On: 04 Jul 2022, 09:08 PM
ಕಾಪು : ಉಡುಪಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಅತೀ ಹೆಚ್ಚಿನ ಅರ್ಜಿ ವಿಲೇವಾರಿಯಲ್ಲಿ ಮಾಡಿದ ಶಿರ್ವ ಗ್ರಾಮ ಒನ್ ಕೇಂದ್ರ ಮೊದಲ ಸ್ಥಾನ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಎಡಿಸಿ ವೀಣಾ ಬಿ.ಎನ್ ಇವರು ಅಭಿನಂದಿಸಿ, ಟ್ರೋಫಿಯನ್ನು ನೀಡಿ ಗೌರವಿಸಿದರು.
92 ಹೇರೂರು : ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಮಾಹಿತಿ ಕಾರ್ಯಗಾರ
Posted On: 04 Jul 2022, 08:48 PM
ಕಾಪು, ಜು.4 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಅಂಗನವಾಡಿ ಕೇಂದ್ರ 92 ಹೇರೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ 92 ಹೇರೂರು ಗ್ರಾಮದಲ್ಲಿ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಸದಸ್ಯರಾದ ಮಂಜುಳ ಗಣೇಶ್ ನೆರವೇರಿಸಿ ಇಲಾಖೆಯಲ್ಲಿ ಸಿಗುವ ಮಾಹಿತಿಯನ್ನು ಹಾಗೂ ಸೇವೆಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಇವರು ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುವುದು. ಇದರ ಅಂಗವಾಗಿ ಜೂನ್ 27 ರಿಂದ ಜುಲೈ 10 ರವರೆಗೆ ಕುಟುಂಬ ಕಲ್ಯಾಣದ ಮಹತ್ವ ಮತ್ತು ಜನಸಂಖ್ಯೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಸೇವೆಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಕುಟುಂಬ ಯೋಜನೆಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಜೂರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಧೀರಜ್ ಮಾತನಾಡಿ ಕುಟುಂಬ ಯೋಜನೆ ಅನುಸರಿಸುವುದರಿಂದ ಆದರ್ಶ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಮುದಾಯ ಆರೋಗ್ಯ ಅಧಿಕಾರಿ ಡಯಾನ, ಆಶಾ ಕಾರ್ಯಕರ್ತೆ ವಿನೋದ, ಅಂಗನವಾಡಿ ಶಿಕ್ಷಕಿ ಬಬಿತ, ಸಹಾಯಕಿ ಪವಿತ್ರ, ಮಕ್ಕಳ ಪೋಷಕರು, ಗರ್ಭಿಣಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಶೋಧಾ ನಿರೂಪಿಸಿ, ವಂದಿಸಿದರು.
ಕಲ್ಲುಗುಡ್ಡೆ ಕೊರಗಜ್ಜ ಸೇವಾಸಮಿತಿ ಅಧ್ಯಕ್ಷರಾಗಿ ಸುಧೀರ್ ಸೋನು ಪೂಜಾರಿ ಆಯ್ಕೆ
Posted On: 04 Jul 2022, 08:28 PM
ಕಾಪು : ಕೊರಗಜ್ಜ ಸೇವಾ ಸಮಿತಿ ಕಲ್ಲುಗುಡ್ಡೆ ಇದರ 2022-2024ನೇ ಸಾಲಿನ ಅಧ್ಯಕ್ಷರಾಗಿ ಸುಧೀರ್ ಸೋನು ಪೂಜಾರಿ, ಕಾರ್ಯದರ್ಶಿಯಾಗಿ ಅರವಿಂದ್ ಕೋಟ್ಯಾನ್ ಮತ್ತು ಕೋಶಾಧಿಕಾರಿಯಾಗಿ ಮನೋಹರ್ ಕಲ್ಲುಗುಡ್ಡೆ ಹಾಗೂ ಪದಾಧಿಕಾರಿಗಳನ್ನು ಜೂನ್ 29ರಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರುಗಳು ಎರಡು ವರ್ಷದವರೆಗೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕೊರಗಜ್ಜ ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪಡುಬಿದ್ರಿ : ರೋಟರಿ ಕ್ಲಬ್ ಪದಗ್ರಹಣ ; ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಗೀತಾ ಅರುಣ್
Posted On: 04 Jul 2022, 07:30 PM
ಪಡುಬಿದ್ರಿ : ಸ್ನೇಹ ಮತ್ತು ಏಕತೆಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಆರಂಭಗೊಂಡಿರುವ ರೋಟರಿಯು ಮುಂದೆ ಸೇವೆ ಮತ್ತು ವಿಭಿನ್ನತೆಯಲ್ಲಿ ಏಕತೆಯೊಂದಿಗೆ ಒಗ್ಗೂಡಿ ಮುನ್ನಡೆಯುತ್ತಿದೆ ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲೆ ಡಾ| ಪ್ರೀತಿ ಮೋಹನ್ ಹೇಳಿದರು. ಅವರು ಶನಿವಾರ ಪಡುಬಿದ್ರಿಯ ರೋಟರಿ ಕ್ಲಬ್ ಪಡುಬಿದ್ರಿಯ ಪ್ರಥಮ ಮಹಿಳಾ ಅಧ್ಯಕ್ಷೆಯಾದ ಗೀತಾ ಅರುಣ್ ಅವರ ಪದಗ್ರಹಣ ಸಮಾರಂಭದ ಪದಪ್ರಧಾನ ಅಧಿಕಾರಿಯಾಗಿ ಮಾತನಾಡಿದ ಅವರು, ಸಮುದಾಯದ ಅವಶ್ಯಕತೆಗಳನ್ನು ಗ್ರಹಿಸಿ ಜನಸೇವೆಗೈಯ್ಯವುದೇ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಧ್ಯೇಯವಾಗಿದೆ ಎಂದರು. ಸ್ಪಂದನಾ ಗೃಹಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತಾಡಿದ ವಲಯ ಸೇನಾನಿ ವಿಘ್ನೇಶ್ ಶೆಣೈ ನೂತನ ಪಡುಬಿದ್ರಿ ರೋಟರಿ ತಂಡಕ್ಕೆ ಶುಭ ಹಾರೈಸಿದರು. ನೂತನ ಅಧ್ಯಕ್ಷೆಯಾಗಿ ಪದಗ್ರಹಣವನ್ನು ಮಾಡಿದ ಗೀತಾ ಅರುಣ್ ತಮ್ಮ ತಂಡದ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ಪಡುಬಿದ್ರಿ ರೋಟರಿ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ನಿಯಾಜ್ ಅಧ್ಯಕ್ಷತೆಯನ್ನು ವಹಿಸಿ ತನ್ನ ಒಂದು ವರ್ಷದ ಅವಧಿಯಲ್ಲಿ ತನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು. ಇಂಟರ್ಯಾಕ್ಟ್ ಕ್ಲಬ್ಬಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದು ದಿ| ವೈ. ಹಿರಿಯಣ್ಣ ಮತ್ತು ದಿ| ಮೀರಾ ಹಿರಿಯಣ್ಣ ಸ್ಮಾರಕ ರೋಲಿಂಗ್ ಶೀಲ್ಡನ್ನು ಎರ್ಮಾಳು ಬಡಾ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗವು ತನ್ನದಾಗಿಸಿಕೊಂಡಿತು. ಪ್ರತಿಭಾವಂತ ಯುವ ಸಾಧಕರಾಗಿರುವ ರೂಪಾ ವಸುಂಧರ ಆಚಾರ್ಯ, ಸ್ವಾತಿ ಗಣೇಶ್, ವೈಷ್ಣವಿ ರಾವ್, ಸುಶ್ಮಿತಾ ದೇವಾಡಿಗ, ಧನುಷ್ ಸಾಲ್ಯಾನ್, ಯಶಸ್ವಿನಿ ಭಂಡಾರಿ, ಶ್ಲಾಘ ಸಾಲಿಗ್ರಾಮ ಅವರನ್ನು ಸಮ್ಮಾನಿಸಲಾಯಿತು. ಸಂಸ್ಥೆಗೆ ನೂತನ ಸದಸ್ಯರನ್ನಾಗಿ ರಂಜನಿ, ಸುನಿಲ್ ಕುಮಾರ್, ಗಣೇಶ್ ಶೆಟ್ಟಿಗಾರ್ ಹಾಗೂ ದಿನೇಶ್ ಪೂಜಾರಿ ಅವರನ್ನು ಅತಿಥಿಗಳು ಸೇರ್ಪಡೆಗೊಳಿಸಿದರು. ಮಹಮ್ಮದ್ ನಿಯಾಜ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಬಿ. ಎಸ್. ಆಚಾರ್ಯ ವರದಿ ವಾಚಿಸಿದರು. ಯಶೋದಾ ಹಾಗೂ ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಜ್ಯೋತಿ ಮೆನನ್ ವಂದಿಸಿದರು
ಉದ್ಯಾವರ : ಮಳೆಗಾಲದ ಸಮಸ್ಯೆ - ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದಿಂದ ಪಂಚಾಯತ್ಗೆ ಮನವಿ
Posted On: 04 Jul 2022, 07:01 PM
ಉದ್ಯಾವರ : ಇಲ್ಲಿನ ಕುಟುಂಬವೊಂದರ ಹಿರಿಯ ನಾಗರಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಮಳೆಗಾಲದಲ್ಲಿ ತುಂಬಿ ಹರಿಯುವ ನೀರಿನಿಂದ ನಡೆದಾಡಲು ಆಗುವ ಅಡೆತಡೆಗಳ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉದ್ಯಾವರ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಲಾಯಿತು. ಮಳೆಗಾಲದ ಸಮಯದಲ್ಲಿ ತುಂಬಿ ಹರಿಯುವ ನೀರಿನಿಂದ ನಡೆದಾಡಲು ಕಷ್ಟಕರ ಜೀವನವಾಗಿದೆ. ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರ ಪ್ರಾಣಕ್ಕೆ ಕುತ್ತು ತರುವ ಹಾಗೂ ರಾತ್ರಿ ಹೊತ್ತಿನಲ್ಲಿ ವಿಷ ಜಂತುಗಳ ಆಟ ಹೆಚ್ಚಾಗಿರುವುದರಿಂದ ಪ್ರಾಣಕ್ಕೆ ಅಪಾಯ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀರಲ್ಲಿ ಓಡಾಡುವುದರಿಂದ ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೆ ರೋಗ ಬರುವಂತಹ ಸಾಧ್ಯತೆ ಇದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಸ್ಥಳೀಯ ಪಂಚಾಯತಿ ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ ಎರಡು ವರ್ಷದ ಹಿಂದೆ ಗಮನಕ್ಕೆ ತಂದಿರುತ್ತೇವೆ. ಆದರೆ ಇದುವರೆಗೆ ಯಾವುದೇ ಪ್ರಯೋಜನ ಆಗಲಿಲ್ಲ. ಈ ಸ್ಥಳಕ್ಕೆ ಶಾಶ್ವತ ಪರಿಹಾರ ಸಿಗಬೇಕೆಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಸಮಸ್ಯೆಗೊಳಗಾದ ಕುಟುಂಬ ವರ್ಗ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ದೈವಾರಾಧಕರಿಗೆ ವಿಶೇಷ ಪಿಂಚಣಿ : ಜಯನ್ ಮಲ್ಪೆ ಆಗ್ರಹ
Posted On: 04 Jul 2022, 05:46 PM
ಶಿರ್ವ : ಜೀವನವಿಡೀ ದೈವಾರಾಧನೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ದೈವಾರಾಧಕರಿಗೆ ಇಳಿ ವಯಸ್ಸಿನಲ್ಲಿ ಸರಕಾರ ವಿಶೇಷ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಹಿರಿಯ ದಲಿತ ಚಿಂತಕ, ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದರು. ಅವರು ಜು. ೩ರಂದು ಮೂಡುಬೆಳ್ಳೆ ಕಾಡಬೆಟ್ಟು ಪಂಜುರ್ಲಿ ದೈವಸ್ಥಾನದ ಆವರಣದಲ್ಲಿ ಪಾಣಾರಾ ಯಾನೆ ನಲಿಕೆ ಸಮಾಜ ಸೇವಾ ಸಂಘ ಮೂಡುಬೆಳ್ಳೆ ಘಟಕ ಮತ್ತು ಗಾಂಧೀ ವಿಚಾರ ವೇದಿಕೆ ಉಡುಪಿ ಜಿಲ್ಲಾ ಘಟಕ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ 'ಸನ್ಮತಿ' ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಖ್ಯಾತ ಮನೋವೈದ್ಯರಾದ ಡಾ. ಪಿವಿ ಭಂಡಾರಿ ಮಾತನಾಡಿ, ಹೆಚ್ಚುತ್ತಿರುವ ಕೀಳರಿಮೆಯ ಮನಸ್ಥಿತಿಗೆ ಜನರು ಪರಸ್ಪರ ಹೋಲಿಕೆ ಮಾಡಿಕೊಳ್ಳುತ್ತಿರುವುದೇ ಕಾರಣವಾಗಿದ್ದು, ವ್ಯಕ್ತಿಯು ತನ್ನನ್ನು ಇರುವಂತೆ ಸ್ವೀಕರಿಸಿ ಮುನ್ನಡೆದಾಗ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದರು. ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ ಕಾನೂನು ಅರಿವು ಮೂಡಿಸಿದರು. ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಶುಭಾಶಂಸನೆಗೈದರು. ಪಾಣಾರ ಸಂಘದ ಹಿರಿಯ ದೈವಾರಾಧಕ ಶಿವ ಪಾಣಾರ ಶಿರ್ವ ಅವರನ್ನು ಸಮ್ಮಾನಿಸಲಾಯಿತು. ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಗಣೇಶ ಗಂಗೊಳ್ಳಿ ಅವರು ಗೀತ ಗಾಯನ ನಡೆಸಿಕೊಟ್ಟರು. ಸುದೀಪ್ ಭೀಮವಾಣಿ ಮೊಳಗಿಸಿದರು. ಪಾಣಾರ ಸಂಘದ ಗೌರವಾಧ್ಯಕ್ಷ ಸುಧಾಕರ ಪಾಣಾರ, ಪಂಜುರ್ಲಿ ದೈವಸ್ಥಾನದ ಪರಿಚಾರಕ ಶೇಖರ ಪಾಣಾರ್, ಉದ್ಯಮಿ ಎ.ಕೆ. ಆಳ್ವಾ, ಸಾಹಿತಿ ಆರ್.ಡಿ. ಪಾಂಬೂರು, ಗಾಂಧಿ ವಿಚಾರ ವೇದಿಕೆಯ ಕಟೀಲು ಸೀತ್ಲ ರಂಗನಾಥ ರಾವ್ ಉಪಸ್ಥಿತರಿದ್ದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿ ನಿರೂಪಿಸಿದರು. ಗಾಂಧಿ ವಿಚಾರ ವೇದಿಕೆ ಉಡುಪಿ ಘಟಕದ ಅಧ್ಯಕ್ಷೆ ಸೌಜನ್ಯಾ ಶೆಟ್ಟಿ ವಂದಿಸಿದರು.
