Updated News From Kaup
ಜೂನ್ 30 ರಂದು ಹಿರಿಯ ಪತ್ರಕರ್ತ ಕೆ.ಎಲ್.ಕುಂಡಂತಾಯರಿಗೆ ಪತ್ರಿಕಾ ದಿನದ ಗೌರವ ಪ್ರದಾನ
Posted On: 28 Jun 2022, 02:15 PM
ಉಡುಪಿ: ಹಿರಿಯ ಪತ್ರಕರ್ತ, ಯಕ್ಷಪ್ರಭಾ ಸಂಪಾದಕ ಕೆ.ಎಲ್.ಕುಂಡಂತಾಯ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ ಪತ್ರಿಕಾ ದಿನದ ಗೌರವವನ್ನು ಜೂನ್ ೩೦ ರಂದು ಅವರ ನಿವಾಸದಲ್ಲಿ ನಡೆಯುವ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಡಾ. ಹರಿಕೃಷ್ಣ ಪುನರೂರು ಅವರು ಹಿರಿಯ ಪತ್ರಕರ್ತ ಪ್ರತಿನಿಧಿ ಸಂಪಾದಕ ಡಾ. ಉದಯ ರವಿ ಅವರ ಅಧ್ಯಕ್ಷತೆಯಲ್ಲಿ ಪ್ರದಾನಿಸುವರು ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. 70 ರ ಹರೆಯದ ಧಣಿವರಿಯದ ಕುಂಡಂತಾಯ ಅವರು 20 ವರ್ಷಗಳ ಕಾಲ ಉದಯವಾಣಿ ದೈನಿಕದಲ್ಲಿ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿ ಇದೀಗ ಕಟೀಲು ಕ್ಷೇತ್ರದಿಂದ ಪ್ರಕಟವಾಗುವ ಯಕ್ಷಪ್ರಭಾ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರಂತರ ಶೋಧನೆಯ, ಸಂಶೋಧನೆಯ ಮನೋಭಾವವುಳ್ಳ ಸಜ್ಜನ ಸಾಹಿತಿಯಾಗಿದ್ದಾರೆ. ವಿಶ್ವನಾಥ ಶೆಣೈ, ಕರುಣಾ ಸುರೇಶ್ ಪೈ, ಎಸ್.ಆರ್.ಬಂಡಿಮಾರ್, ಪುನೀತ್ ಎಂ, ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ, ಜನಾರ್ದನ ಕೊಡವೂರು, ರಾಕೇಶ್ ಕುಂಜೂರು ಸಹಿತ ಆಹ್ವಾನಿತ ಗಣ್ಯರು ಉಪಸ್ಥಿತರಿರುವರು. ಅಂಬಾತನಯ ಮುದ್ರಾಡಿ, ಎ.ಎಸ್.ಎನ್.ಹೆಬ್ಬಾರ್, ವಿದ್ವಾನ್ ಬಿ.ಚಂದ್ರಯ್ಯ, ಬಿ.ಎ.ಸನದಿ, ಮಲಾರ್ ಜಯರಾಮ ರೈ, ಎಂ.ವಿ.ಕಾಮತ್, ಸತೀಶ್ ಪೈ ಮಣಿಪಾಲ, ಕು.ಗೋ ಉಡುಪಿ, ಶ್ರೀನಿವಾಸ ರಾವ್ ಎಕ್ಕಾರು, ಕು.ಗೋ ಉಡುಪಿ, ಬಿ.ಸಿ.ರಾವ್ ಶಿವಪುರ, ನಾದವೈಭವಂ ಉಡುಪಿ ವಾಸುದೇವ ಭಟ್ ಸಹಿತ ಗಣ್ಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಉಡುಪಿ : ಬೆಂಗಳೂರನ್ನು ನಗರವನ್ನಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ - ಸಿಇಓ ಪ್ರಸನ್ನ ಹೆಚ್
Posted On: 27 Jun 2022, 11:31 PM
ಉಡುಪಿ : ಮಣ್ಣಿನ ಕೋಟೆಯಿಂದ ಕಟ್ಟಿದ ಹಳ್ಳಿ ಪ್ರದೇಶವಾಗಿದ್ದ ಬೆಂದಕಾಳೂರನ್ನು ನಗರವಾಗಿ ನಿರ್ಮಿಸಿದ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರಿಂದ, ಬೆಂಗಳೂರು ನಗರ ಇಂದು ದೇಶ-ವಿದೇಶಿಗರಿಗೆ ಚಿರಪರಿಚಿತವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಕೆಂಪೇಗೌಡರು ಶೌರ್ಯ, ಸಾಹಸ, ದೂರದೃಷ್ಠಿಗೆ ಹೆಸರಾಗಿದ್ದು, ವಿಜಯನಗರ ಅರಸರ ಒಪ್ಪಿಗೆಯೊಂದಿಗೆ ಯಲಹಂಕದಲ್ಲಿ ಜಾತ್ಯಾತೀತ ನಗರವನ್ನು ನಿರ್ಮಿಸಿದರು. ಬೆಂಗಳೂರು ನಗರವನ್ನು ಜಾತಿ ಆಧಾರಿತವನ್ನಾಗಿ ಮಾಡದೇ ವೃತ್ತಿ ಆಧಾರಿತ ಭೂಮಿಯನ್ನಾಗಿ ಮಾಡಿದರು. ಒಂದು ಕಾಲದಲ್ಲಿ ಕಾಡಿನಿಂದ ಕೂಡಿದ್ದ ಬೆಂಗಳೂರು ಪ್ರದೇಶಕ್ಕೆ ಕೋಟೆ ನಿರ್ಮಿಸಿ, ನಗರವನ್ನಾಗಿ ಮಾಡಿ, ಅದರ ಅಭಿವೃದ್ಧಿಗೆ ಕಾರಣರಾದ ನಾಡಪ್ರಭುವಿಗೆ ಗೌರವ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಮಾತನಾಡಿ, ಕೆಂಪೇಗೌಡರನ್ನು ಜನತೆ ಇಂದಿಗೂ ನೆನೆಯಲು ಕಾರಣ ಅವರ ವ್ಯಕ್ತಿತ್ವ ಹಾಗೂ ಅಸಾಧಾರಣ ಸಾಧನೆಯಾಗಿದೆ. ಅಂದಿನಿಂದ ಇಂದಿನವರೆಗೂ ಬೆಂಗಳೂರು ಹಂತಹಂತವಾಗಿ ಅಭಿವೃದ್ಧಿಯತ್ತ ಸಾಗುತ್ತಾ ಬಂದಿದ್ದು, ಕೆಂಪೇಗೌಡರ ಕುಟುಂಬವೂ ಕೂಡ ತ್ಯಾಗ ಬಲಿದಾನಕ್ಕೆ ಹೆಸರುವಾಸಿಯಾಗಿತ್ತು ಎಂದರು. ಕೆಂಪೇಗೌಡರ ಜೀವನಚರಿತ್ರೆ ಮತ್ತು ಅವರ ಸಾಧನೆಗಳ ಕುರಿತು ಮಾತನಾಡಿದ ಜಿಲ್ಲಾ ಒಕ್ಕಲಿಗ ಸಮುದಾಯದ ಅಧ್ಯಕ್ಷ ಸಿದ್ಧರಾಜು, ತನ್ನನ್ನು ಬೇಟೆಯಾಡಲು ಬಂದಂತಹ ನಾಯಿಯನ್ನು ಮೊಲವೊಂದು ಧೈರ್ಯದಿಂದ ಅಟ್ಟಿಸಿಕೊಂಡು ಹೋಗಿ ಎದುರಿಸುತ್ತಿದ್ದ ದೃಶ್ಯ ಕೆಂಪೇಗೌಡರನ್ನು ವೀರಭೂಮಿ ಕಟ್ಟಲು ಪ್ರೇರೇಪಿಸಿತು ಎಂದು ಇತಿಹಾಸ ತಿಳಿಸುತ್ತದೆ. ನಾಲ್ಕೂ ದಿಕ್ಕಿನಲ್ಲೂ ಗಡಿ ರೇಖೆಯನ್ನು ಗುರುತಿಸಲು ಎತ್ತುಗಳಿಗೆ ನೇಗಿಲನ್ನು ಕಟ್ಟಿ ಎತ್ತುಗಳು ನಿಲ್ಲುವ ಪ್ರದೇಶವನ್ನು ಗಡಿ ಪ್ರದೇಶ ಎಂದು ನಿರ್ಧರಿಸಿ, ಅದರ ಒಳಗೆ ಬೆಂಗಳೂರು ನಗರವನ್ನು ನಿರ್ಮಿಸಿದರು ಎಂಬ ಕಥೆಗಳು ಇವೆ. ವೃತ್ತಿಗೆ ಪ್ರಾಶಸ್ತ್ಯ ನೀಡಿ, ಕೆಂಪೇಗೌಡರು ಕೋಟೆಯನ್ನು ನಿರ್ಮಿಸಿದರು. ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯ ಪಾತ್ರಕೂಡ ಅವಿಸ್ಮರಣೀಯವಾದುದು ಎಂದರು. ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಒಕ್ಕಲಿಗ ಸಮುದಾಯದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಸಿ.ಜಿ.ಕೆ ರಂಗ ಪ್ರಶಸ್ತಿ-2022 ಪುರಸ್ಕೃತರಾದ ನಟ, ರಂಗನಿರ್ದೇಶಕ, ರಂಗಸಂಘಟಕ ಪ್ರದೀಪ್ ಚಂದ್ರ ಕುತ್ಪಾಡಿ
Posted On: 27 Jun 2022, 11:22 PM
ಉಡುಪಿ : ನಮ ತುಳುವೆರ್ ಕಲಾ ಸಂಘಟನೆ (ರಿ.) ನಾಟ್ಕದೂರು, ಮುದ್ರಾಡಿ ಆಯೋಜನೆಯಲ್ಲಿ ಸಂಸ ಥಿಯೇಟರ್, ಬೆಂಗಳೂರು - ಕರ್ನಾಟಕ ಬೀದಿ ನಾಟಕ ಅಕಾಡೆಮಿ ಮತ್ತು ಎಂ.ಜಿ.ಎಂ ಕಾಲೇಜು, ಉಡುಪಿ ಸಹಭಾಗಿತ್ವದಲ್ಲಿ ಸಿ.ಜಿ.ಕೆ ಬೀದಿರಂಗ ದಿನ ಪ್ರಯುಕ್ತ ಜೂನ್ 26 ರಂದು ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಸಿ.ಜಿ.ಕೆ ರಂಗ ಪ್ರಶಸ್ತಿ-2022 ನ್ನು ನಟ, ರಂಗನಿರ್ದೇಶಕ, ರಂಗಸಂಘಟಕ ಪ್ರದೀಪ್ ಚಂದ್ರ ಕುತ್ಪಾಡಿ ಇವರಿಗೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ನಮ ತುಳುವೆರ್ ಕಲಾ ಸಂಘಟನೆ (ರಿ.) ತಂಡದಿಂದ ಗುರುರಾಜ ಮಾರ್ಪಳ್ಳಿ ರಚನೆ ಮತ್ತು ನಿರ್ದೇಶನದ ಅವ್ವ ನನ್ನವ್ವ ನಾಟಕದ 75ನೇ ಪ್ರದರ್ಶನ ಜರಗಿತು.
ಇನ್ನಂಜೆ : ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯ ನೂತನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಆಯ್ಕೆ
Posted On: 27 Jun 2022, 11:09 PM
ಕಾಪು : ತಾಲೂಕಿನ ಇನ್ನಂಜೆಯ ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯ 2022-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಕ್ಷ್ಮಣ್ ಕೆ ಶೆಟ್ಟಿ, ಕಾರ್ಯದರ್ಶಿಯಾಗಿ ಕೃಷ್ಣ ವಿ ಶೆಟ್ಟಿ ಮತ್ತು ಕೋಶಾಧಿಕಾರಿಯಾಗಿ ಸಂತೋಷ್ ಎಸ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.
ಜೂನ್ 30 : ಶಿರ್ವದಲ್ಲಿ ಸಂಜೀವಿನಿ ಸಂತೆ
Posted On: 27 Jun 2022, 10:59 PM
ಶಿರ್ವ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಆದೇಶದಂತೆ ಸಂಜೀವಿನಿ ಒಕ್ಕೂಟಗಳ ಸಂಜೀವಿನಿ ಸಂತೆಯು ಜೂನ್ 30 ರಂದು ಶಿರ್ವ ಮಹಿಳಾ ಮಂಡಲದ ಮಹಿಳಾ ಸೌಧದಲ್ಲಿ ಬೆಳಿಗ್ಗೆ ಗಂಟೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಶಿರ್ವ ಗ್ರಾಮ ಪಂಚಾಯತ್ ಸೇರಿದಂತೆ ಮಜೂರು, ಮುದರಂಗಡಿ, ಕುತ್ಯಾರು, ಬೆಳ್ಳೆ, ಇನ್ನಂಜೆ ಗ್ರಾಮ ಪಂಚಾಯತ್ ಗಳ ಸಂಜೀವಿನಿ ಒಕ್ಕೂಟಗಳ ಸ್ವ ಸಹಾಯ ಸಂಘಗಳ ಸದಸ್ಯೆಯರು ಮನೆಯಲ್ಲೆ ತಯಾರಿಸಿದ, ಉತ್ಪಾದಿಸಿದ ಅಥವಾ ಬೆಳೆದ ಉತ್ಪನ್ನಗಳ ಮಾರಾಟ ಮಾಡಲು ಅವಕಾಶವನ್ನು ನೀಡುವ ಕಾರ್ಯಕ್ರಮ ಸಂಜೀವಿನಿ ಸಂತೆ. ಈ ಸಂತೆಯಲ್ಲಿ ನಮ್ಮ ದಿನಬಳಕೆಯ ವಸ್ತುಗಳು, ತರಕಾರಿ, ಬಟ್ಟೆ ಚೀಲಗಳು, ಪುಸ್ತಕ, ಸಾಂಬರು ಹುಡಿ ಹೀಗೆ ದಿನ ಬಳಕೆಯ 50ಕ್ಕೂ ಹೆಚ್ಚಿನ ಉತ್ಪನ್ನಗಳ ಮಾರಾಟ ನಡೆಯಲಿದೆ. ಆರು ಪಂಚಾಯತ್ ಗಳ ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿ ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟಮಾಡಲಿದ್ದಾರೆ. ಗ್ರಾಮ ಪಂ ಸದಸ್ಯರು, ಗ್ರಾಮಸ್ಥರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೀವಿನಿ ಸಂತೆಯ ಉತ್ಪನ್ನಗಳನ್ನು ಖರೀದಿಸಿ, ಪ್ರೋತ್ಸಾಹಿಸಿ ಸಂಜೀವಿನಿ ಸಂತೆಯನ್ನು ಯಶಸ್ವಿಗೊಳಿಸಬೇಕೆಂದು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಆರ್ ಪಾಟ್ಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ ಗ್ರಾಮ ಪಂಚಾಯತ್ : ತೆರಿಗೆ ಪಾವತಿಸಲು ಡಿಜಿಟಲ್ ವ್ಯವಸ್ಥೆ
Posted On: 27 Jun 2022, 10:48 PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ನ ಗ್ರಾಮಸ್ಥರಿಗೆ ತೆರಿಗೆ ಪಾವತಿ ಮಾಡಲು ಅನುಕೂಲವಾಗುವಂತೆ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ತಮ್ಮ ಮನೆ ತೆರಿಗೆಯನ್ನು ಗೂಗಲ್ ಪೇ ಮೂಲಕ ಪಾವತಿಸುವ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉದ್ಘಾಟಿಸಿದರು. ಗ್ರಾಮಸ್ಥರು ತಮ್ಮ ಕಟ್ಟಡ ತೆರಿಗೆ, ಮನೆ ತೆರಿಗೆ, ನೀರಿನ ಕರ ಇತ್ಯಾದಿಗಳನ್ನು ಪಾವತಿಸಲು ಈ ವ್ಯವಸ್ಥೆಯನ್ನು ಬಳಸಬಹುದಾಗಿದೆ. ಗೂಗಲ್ ಪೇ, ಪೇಟಿಯಂ, ಸ್ಕ್ಯಾನರ್ ಗಳನ್ನು ಅಳವಡಿಸಲಾಗಿದ್ದು ಈ ಮೂಲಕ ತೆರಿಗೆ ಪಾವತಿಸಿ ಸಂಬಂಧಿಸಿದ ರಶೀದಿಯನ್ನು ಸಿಬ್ಬಂದಿಯವರಿಂದ ಪಡೆಯಬಹುದಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ತಿಳಿಸಿದರು.
ಪುಷ್ಪಾನಂದ ಫೌಂಡೇಶನ್ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
Posted On: 27 Jun 2022, 09:41 PM
ಕಾಪು : ಪುಷ್ಪಾನಂದ ಫೌಂಡೇಶನ್ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯ 2022 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 85 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 3 ಆಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪುಷ್ಪಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಯಶ್ಪಾಲ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಂದೀಪ್ ಶೆಟ್ಟ 9880295376 ಲಕ್ಷ್ಮೀಕಾಂತ್ ಕೆ. 9964014603 ಚಿತ್ತನ್ ಪೂಜಾರಿ 9964379589 ಪ್ರವೀಣ್ ಪೂಜಾರಿ 9886619748 ಆಶ್ವಿನ್ ಪುತ್ರನ್ 9916664903 ಯೋಗೀಶ್ ಪೂಜಾರಿ 9945772113 ಬಾಲಕೃಷ್ಣ ಕೋಟ್ಯಾನ್ 9108298806
ಇನ್ನಂಜೆ : ಗೋವುಗಳಿಗೆ ಮೇವು ಕಾರ್ಯಕ್ರಮ
Posted On: 27 Jun 2022, 09:24 PM
ಕಾಪು : ಇನ್ನಂಜೆ ಯುವತಿ ಮಂಡಲ (ರಿ.) ಇನ್ನಂಜೆ ಮತ್ತು ಬಿಲ್ಲವ ಸೇವಾ ಸಂಘ ಇನ್ನಂಜೆ ಇವರ ಜಂಟಿ ಆಶ್ರಯದಲ್ಲಿ ಜೂನ್ 27ರಂದು ಗೋವುಗಳಿಗೆ ಮೇವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮೇವಿಗಾಗಿ ಹುಲ್ಲನ್ನು ಗ್ರೇಗೋರಿ ಮಥಾಯಸ್ ನೀಡಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಆಶಾ ನಾಯಕ್, ಸದಸ್ಯರಾದ ಲಕ್ಷ್ಮಿ, ಸುಮಲತಾ, ಅಕ್ಷತಾ ,ಸೌಮ್ಯ ಹಾಗೂ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಸದಾಶಿವ ಪೂಜಾರಿ, ಸದಸ್ಯರಾದ ಶೇಖರ್ ಪೂಜಾರಿ, ಸುಮತಿ ಹಾಗೂ ಮೋಹನ್, ನವನೀತ್, ಸುಶಾಂತ್, ಶಶಾಂಕ್, ಸಂಜೀವ ಮೂಲ್ಯ ಸಹಕಾರ ನೀಡಿದರು. ಮೇವನ್ನು ಕಾಪು ಗೋಶಾಲೆಗೆ ನೀಡಲಾಯಿತು.
ಕಾಪು ಕುಲಾಲ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಆಯ್ಕೆ
Posted On: 27 Jun 2022, 09:16 PM
ಕಾಪು : ಇಲ್ಲಿನ ಕುಲಾಲ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚಿಗೆ ಸಂಘದ ಕಚೇರಿಯಲ್ಲಿ ಜರಗಿತು. ಸಂಘದ ಮುಂದಿನ ಕಾರ್ಯ ಅವಧಿಗೆ ಸಂದೀಪ್ ಬಂಗೇರ ಶಂಕರಪುರ ಅಧ್ಯಕ್ಷರಾಗಿ ಮರು ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಮೂಲ್ಯ ಎಲ್ಲೂರು ಆಯ್ಕೆಯಾಗಿದ್ದಾರೆ. ಈ ಹಿಂದೆ ಇದ್ದ ಕಾರ್ಯಕಾರಿಣಿ ಸಮಿತಿಯನ್ನು ಮುಂದುವರೆಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಕಾಪು ಕುಲಾಲ ಸಂಘ ಪ್ರಕಟನೆಯಲ್ಲಿ ತಿಳಿಸಿದೆ.
ಪೆರ್ಡೂರು : ಅನಿಯಮಿತ ವಿದ್ಯುತ್ ಕಡಿತ - ಮನವಿ, ಪ್ರತಿಭಟನೆಯ ಎಚ್ಚರಿಕೆ
Posted On: 27 Jun 2022, 08:39 PM
ಉಡುಪಿ : ಪೆರ್ಡೂರು ಮೆಸ್ಕಾಂ ವ್ಯಾಪ್ತಿಯ ಬೆಳ್ಳರ್ಪಾಡಿ, 41ನೇ ಶಿರೂರು ಹಾಗೂ ಬೈರಂಪಲ್ಲಿ ಯಲ್ಲಿ ಅನಿಯಮಿತ ವಿದ್ಯುತ್ ಕಡಿತವನ್ನು ವಿರೋಧಿಸಿ ಬೈರಂಪಲ್ಲಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಪೆರ್ಡೂರು ಮೆಸ್ಕಾಂ ಕಚೇರಿಗೆ ತೆರಳಿ ಪೆರ್ಡೂರು ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಮೆಸ್ಕಾಂ ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಫೋನ್ ಸಂಭಾಷಣೆ ಮುಖಾಂತರ ಮಾತನಾಡಿ ಇನ್ನು ಇದೇ ರೀತಿ ಮುಂದುವರೆದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಲಾಯಿತು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಲೂ, ಬೈರಂಪಲ್ಲಿ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಸಾಂತ್ಯಾರು, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಮರ್ ಕುಲಾಲ್ ಬೈರಂಪಲ್ಲಿ, ಕಾಪು ಉತ್ತರ ವಲಯದ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ನಿತಿನ್ ಕುಮಾರ್ ಶೆಟ್ಟಿ ಬೆಳ್ಳರ್ಪಾಡಿ, ಬೈರಂಪಳ್ಳಿಯುವ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ್ ಕುಲಾಲ್ ಕಾಂಗ್ರೆಸ್ ಮುಖಂಡರುಗಳಾದ ಉದಯಕುಮಾರ್, ಕೃಷ್ಣನಂದ ನಾಯಕ್ ಹಾಗೂ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.
