Updated News From Kaup

ಚಾಲಕನ ಅಜಾಗರೂಕತೆಯಿಂದ ಮನೆಯ ಅಂಗಳದಲ್ಲಿ ನಿಂತಿದ್ದ ವ್ಯಕ್ತಿಗೆ ಪಿಕ್ ಅಪ್ ವಾಹನ ತಾಗಿ ಸಾವು

Posted On: 15-01-2022 11:50PM

ಮಂಗಳೂರು : ಶಕ್ತಿನಗರದ ಕಕ್ಕೆಬೆಟ್ಟು ಕಾರ್ಮಿಕ ಕಾಲನಿ ಎಂಬಲ್ಲಿ ಕೊರಗಪ್ಪ (85) ರವರು ಮನೆಯ ಅಂಗಳದಲ್ಲಿದ್ದ ಸಮಯ ಟೈಲ್ಸ್ ತುಂಬಿಕೊಂಡು ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲಕ ಮೋಹನ್ ರವರು ಹಿಂದಕ್ಕೆ ತೆಗೆಯುವ ಸಮಯದಲ್ಲಿ, ವಾಹನದ ಹಿಂದುಗಡೆ ನಿಂತಿದ್ದ ಕೊರಗಪ್ಪನವರ ತಲೆಯ ಭಾಗಕ್ಕೆ ತಾಗಿ ಬಿದ್ದು ಗಾಯಗೊಂಡಿದ್ದರು.

ಚಿಕಿತ್ಸೆಗಾಗಿ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ.

ಈ ಬಗ್ಗೆ ಪಿಕ್ ಅಪ್ ವಾಹನದ ಚಾಲಕ ಮೋಹನ್ ರವರ ವಿರುದ್ದ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಧುರೀಣ ಡಾ| ಕೆ. ಪ್ರಭಾಕರ ಶೆಟ್ಟಿ ನಿಧನ

Posted On: 15-01-2022 11:22PM

ಕಾಪು : ಕಾಪುವಿನ ಹಿರಿಯ ವೈದ್ಯ, ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಗೌರವಾಧ್ಯಕ್ಷ, ಪ್ರಶಾಂತ್ ಹಾಸ್ಪಿಟಲ್‌ನ ಸಂಸ್ಥಾಪಕ ಡಾ| ಕೆ. ಪ್ರಭಾಕರ ಶೆಟ್ಟಿ (81) ಅವರು ಜನವರಿ 15ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಕಾಪು ಗೋವಿಂದ ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷೆ ಶೋಭಾ ಪಿ. ಶೆಟ್ಟಿ ಮತ್ತು ಪುತ್ರ ಗೃಹರಕ್ಷಕದಳದ ಉಡುಪಿ ಜಿಲ್ಲಾ ಕಮಾಂಡೆಂಟ್ / ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಡಾ| ಕೆ. ಪ್ರಶಾಂತ್ ಶೆಟ್ಟಿ ಅವರನ್ನು ಅಗಲಿದ್ದಾರೆ.

ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿದ್ದ ಅವರು ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ದೇವಸ್ಥಾನದ ಅಭಿವೃದ್ಧಿಗಾಗಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ್ದರು. ಕಾಪು ಶಾಂತಿ ಪಾಲನಾ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಹಲವು ವರ್ಷಗಳ ಹಿಂದೆ ಸಂಭವಿಸಿದ್ದ ಕೋಮು ಘರ್ಷಣೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು. ಉಳಿಯಾರಗೋಳಿ ದಂಡತೀರ್ಥ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕತ್ವವನ್ನು ವಹಿಸಿಕೊಂಡ ಅವರು ಬಳಿಕ ಗ್ರಾಮೀಣ ವಿದ್ಯಾರ್ಥಿಗಳ ಅವಶ್ಯಕತೆಗನುಣವಾಗಿ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆ ಮತ್ತು ದಂಡತೀರ್ಥ ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ, ಪ್ರಸ್ತುತ ಗೌರವಾಧ್ಯಕ್ಷರಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಶಕ್ತಿಮೀರಿದ ಶ್ರಮ ವಹಿಸಿದ್ದರು. ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ, ಕಾಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಉಡುಪಿ ಜಿಲ್ಲಾ ಖಾಸಗಿ ಆಸ್ಪತ್ರೆಗಳ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಐಎಂಎ ಕರಾವಳಿ ಇದರ ಅಧ್ಯಕ್ಷರಾಗಿ, ಉಡುಪಿ ಕರಾವಳಿ ಐಎಂಎ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಹಿಂದ್ ಕುಷ್ಠ ನಿವಾರಣಾ ಸಂಘ ಕಾಪು ಘಟಕದ ಗೌರವ ವೈದ್ಯಾಧಿಕಾರಿಯಾಗಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಲಹಾ ಸಮಿತಿಯ ಸದಸ್ಯರಾಗಿ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ವೀಕ್ಷಕ ವಿಭಾಗದ ಸದಸ್ಯರಾಗಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷರಾಗಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಜೀವ ಸದಸ್ಯರಾಗಿ, ಕಾಪು ಲಯನ್ಸ್ ಕ್ಲಬ್‌ನ ಸ್ಥಾಪಕರಾಗಿ, ಅಧ್ಯಕ್ಷರಾಗಿ, ಜಿಲ್ಲಾ ಕ್ಯಾಬಿನೆಟ್ ಸದಸ್ಯರಾಗಿ, ಭಾರತೀಯ ಜೀವ ವಿಮಾ ನಗಮದ ವೈದ್ಯಕೀಯ ಪರಿವೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.

ಕಾಪುವಿನ ಪ್ರಥಮ ಚಿನ್ನದ ಪದಕ ಪುರಸ್ಕೃತ ವೈದ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು 55 ವರ್ಷಗಳ ಸುದೀರ್ಘ ಗ್ರಾಮೀಣ ಸೇವೆಗಾಗಿ ಹಲವು ಗೌರವ - ಸಮ್ಮಾನಗಳಿಗೆ ಪಾತ್ರರಾಗಿದ್ದಾರೆ. ಮಂಗಳೂರು ಬಂಟರ ಮಾತೃ ಸಂಘದಿಂದ ಚಿನ್ನದ ಪದಕ, ಲಯನ್ಸ್ ಸೇವಾ ಪುರಸ್ಕಾರ, ಗ್ರಾಮೀಣ ಸೇವೆಗಾಗಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಸಿಂಡಿಕೇಟ್ ಬ್ಯಾಂಕ್, ರೋಟರಿ ಕ್ಲಬ್ ಸಹಭಾಗಿತ್ವದ ಹೊಸ ವರ್ಷದ ಸಾಧನಾ ಪ್ರಶಸ್ತಿ, ಕರ್ನಾಟಕ ಸ್ಟೇಟ್ ಮೆಡಿಕಲ್ ಅಸೋಸಿಯೇಶನ್, ಐ.ಎಮ್.ಎ. ಉಡುಪಿ ಕರಾವಳಿಯಿಂದ ಸಮ್ಮಾನ, ಕಾಪು ತುಳುಕೂಟ, ಉಡುಪಿ ಜಯಂಟ್ಸ್ ಸಂಸ್ಥೆಗಳಿಂದ ಸಮ್ಮಾನ, ಶೀರೂರು ಮಠದಿಂದ ಶ್ರೀ ಕೃಷ್ಣ ವಿಠಲ ಪರಮಾನುಗ್ರಹ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಮೊದಲಾದ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕುಂತಳನಗರ ಭಾರತೀ ಹಿ.ಪ್ರಾ. ಶಾಲೆಯ ಬಯಲು ರಂಗ ಮಂಟಪಕ್ಕೆ ಶಿಲಾನ್ಯಾಸ

Posted On: 15-01-2022 05:32PM

ಕಟಪಾಡಿ : ಕರಾವಳಿ ಅಭಿವೃದ್ಧಿ ಪ್ರಾಧಿಕಾರಿಂದ 25 ಲಕ್ಷ ರೂಪಾಯಿ ಮತ್ತು ಮಣಿಪುರ ಗ್ರಾಮ ಪಂಚಾಯತ್ ಶೇ.5ರ ಜಂಟಿ ಅನುದಾನದಲ್ಲಿ ಕುಂತಳನಗರ ಭಾರತೀ ಹಿ.ಪ್ರಾ. ಶಾಲೆಯ ಬಯಲು ರಂಗ ಮಂಟಪಕ್ಕೆ ಶಾಸಕ ಲಾಲಾಜಿ ಆರ್ ಮೆಂಡನ್ ಶಿಲಾನ್ಯಾಸಗೈದರು. ಈ ಸಂದರ್ಭ ಮಾತನಾಡಿದ ಅವರು ಮಣಿಪುರ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಡಿ 10 ಲಕ್ಷ ರೂ. ಅನುದಾನವನ್ನು ಒದಗಿಸಲು ಬದ್ಧ ಎಂದರು.

ಶಂಕುಸ್ಥಾಪನೆ ನಡೆಸಿದ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಮಾತನಾಡಿ, ಜನರ ನಿರೀಕ್ಷೆಗೆ ಆದ್ಯತೆಯನ್ನು ನೀಡಿ 19 ಶಾಸಕರ ವಿಶ್ವಾಸಗಳಿಸಿ ಬಯಲು ರಂಗಮಂಟಪಕ್ಕೆ 23.75 ಲಕ್ಷ ರೂ. ಅನುದಾನವನ್ನು ಹೊಂದಿಸಿಕೊಳ್ಳಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಅವಶ್ಯಕವಾದ ಬಯಲು ರಂಗ ಮಂಟಪ ಗ್ರಾಮದ ಕೇಂದ್ರವಾಗಿ ಬೆಳೆದು ಬರಲಿದೆ. ಮಣಿಪುರ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೂ ಅನುದಾನ ಒದಗಿಸಲು ಬದ್ಧ ಎಂದರು.

ಶಾಲಾಡಳಿತ ಮಂಡಳಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಬಯಲು ರಂಗ ಮಂಟಪ ನಿರ್ಮಾಣಕ್ಕೆ ಅನುದಾನ ಒದಗಿಸಲು ಸಹಕರಿಸಿದ ಮಟ್ಟಾರು ರತ್ನಾಕರ್ ಹೆಗ್ಡೆ, ಕ್ಷೇತ್ರ ಶಾಸಕ ಲಾಲಾಜಿ ಆರ್ ಮೆಂಡನ್, ಮಣಿಪುರಗ್ರಾಮ ಪಂಚಾಯತ್‌ಗೆ ಕೃತಜ್ಞತೆ ಸಲ್ಲಿಸಿದರು. ಮಣಿಪುರ ಗ್ರಾ.ಪಂ. ಅಧ್ಯಕ್ಷ ಹಸನ್ ಶೇಕ್ ಅಹಮದ್‌, ಪ್ರಮುಖರಾದ ರಾಘು ಪೂಜಾರಿ ಕಲ್ಮಂಜೆ, ನ್ಯಾಯವಾದಿ ಎನ್.ಕೆ. ಆಚಾರ್ಯ ಮಾತನಾಡಿದರು.

ಅರ್ಚಕ ವೇ|ಮೂ|ಗಣೇಶ್ ಭಟ್ ಶಿಲಾನ್ಯಾಸ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಕರಾಮ ಶೆಟ್ಟಿ, ಗ್ರಾ.ಪಂ ಉಪಾಧ್ಯಕ್ಷೆ ವಿನ್ನಿಫ್ರೆಡ್ ಡಿಸೋಜ, ಸದಸ್ಯರುಗಳಾದ ಸಂತೋಷ್ ಶೆಟ್ಟಿ, ಆಶಾ ಶೇಖರ್, ಡೆನ್ಜಿಲ್ ಡಿಸೋಜ, ಜಾನ್ ಸಿಕ್ವೇರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಸಲಹೆಗಾರ ಭೂವರಾಹ ಆಚಾರ್ಯ, ಗುರುರಾಜ್ ಭಟ್, ಮುಂಬಯಿ ಉದ್ಯಮಿ ಅಶೋಕ್ ಶೆಟ್ಟಿ ತೋಟದಮನೆ ವೇದಿಕೆಯಲ್ಲಿದ್ದರು. ಮಣಿಪುರ ಗ್ರಾ.ಪಂ ಪಿಡಿಓ ಮೋಹನ್ ರಾವ್ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಆಚಾರ್ಯ ವಂದಿಸಿದರು. ಪ್ರಧಾನ ಅಧ್ಯಾಪಕಿ ಶ್ರೀಮತಿ ವೈ. ನಿರೂಪಿಸಿದರು.

ಉಚ್ಚಿಲದ ಕುಂಜೂರು ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ

Posted On: 15-01-2022 12:49PM

ಕಾಪು : ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲದ ಕುಂಜೂರು ಸಮೀಪದ ರೈಲ್ವೆ ಹಳಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ರಾಜೇಶ್ ಶೆಟ್ಟಿ (35) ಎಂದು ಗುರುತಿಸಲಾಗಿದ್ದು, ರೈಲ್ವೆ ಹಳಿಯ ಸಮೀಪದಲ್ಲಿಯೇ ಈತನ ಮನೆಯಿದ್ದು, ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಪಡುಬಿದ್ರಿ ಪೋಲೀಸರು ಆಗಮಿಸಿ ತನಿಖೆ ಮುಂದುವರಿಸಿದ್ದಾರೆ, ಛಿದ್ರ ಛಿದ್ರವಾದ ಮೃತ ಶರೀರವನ್ನು ಆಸಿಫ್ ಆಪದ್ಬಾಂಧವರವರ ತಂಡ ಕಾರ್ಯಾಚರಿಸಿ ಪಡುಬಿದ್ರಿ ಶವಾಗಾರಕ್ಕೆ ರವಾನಿಸಲಾಗಿದೆ.

ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷ ಆಚರಣೆ

Posted On: 15-01-2022 10:44AM

ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ನ ಸದಸ್ಯರು ಮತ್ತು ಕುಟುಂಬದವರಿಂದ ಇತ್ತೀಚೆಗೆ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಕೆ. ಪದ್ಮನಾಭ ಕಾಂಚನ್ ರವರು ಕ್ರಿಸ್ಮಸ್ ಹಬ್ಬದ ಆಚರಣೆಯ ಹಿನ್ನೆಲೆ ಮತ್ತು ಸಂಪ್ರದಾಯಗಳ ಕುರಿತು ಮಾತನಾಡಿ ವಿಶ್ವ ಶಾಂತಿ, ಸೌಹಾರ್ದತೆ ಬಗ್ಗೆ ಮಾತನ್ನಾಡಿದರು. ಇನ್ನೋರ್ವ ಮುಖ್ಯ ಅತಿಥಿ, ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜರಾಮ ಭಟ್ ಅವರು ಮಾತನಾಡಿ ಕ್ಲಬ್ ನ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕ್ಲಾರೆನ್ಸ್ ಡಿಸೋಜ ಮತ್ತು ಸೇವಾಧಾಮ ವಿಶೇಷ ಪುನರ್ವಸತಿ ಸಂಸ್ಥೆಯ ರಾಯನ್ ಫೇರ್ನಾಂಡಿಸ್ ಇವರನ್ನು ಸನ್ಮಾನಿಸಲಾಯಿತು ಹಾಗೂ ಸಂಸ್ಥೆಯ ಚಟುವಟಿಕೆಗೆ ರೂ.5000 ದೇಣಿಗೆ ವಿತರಿಸಲಾಯಿತು.

ರೀನಾ ಶೆಟ್ಟಿ ಹಾಗೂ ಲಿಯೋ ಅಂದ್ರಾದೆಯವರು, ಸದಸ್ಯರಿಗೆ ವಿವಿಧ ಮನೋರಂಜನಾ ಆಟಗಳನ್ನು ನಡೆಸಿಕೊಟ್ಟರು. ಕ್ಲಬ್ ನ ಅಧ್ಯಕ್ಷ ಶಂಭು ಶಂಕರ್ ರವರು ಸ್ವಾಗತಿಸಿದರು. ಅಲೆನ್ ಲೂವಿಸ್ ಮತ್ತು ಗಿರೀಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ವಂದಿಸಿದರು.

ಜಿಲ್ಲೆಯ ಪ.ಜಾತಿ, ಪಂಗಡದ ಎಲ್ಲಾ ವಸತಿ ರಹಿತರಿಗೆ ಭೂಮಿ ನೀಡಲು ಕ್ರಮ

Posted On: 14-01-2022 09:12PM

ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ವಸತಿ ರಹಿತ ಪ.ಜಾತಿ ಮತ್ತು ಪಂಗಡದ ಅರ್ಹ ಎಲ್ಲಾ ಕುಟುಂಬಗಳಿಗೆ ಭೂಮಿ ನೀಡುವ ಕುರಿತಂತೆ, ಲಭ್ಯವಿರುವ ಭೂಮಿಯ ಪ್ರಮಾಣ ಕುರಿತು 15 ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ಹಾಲ್ನಲ್ಲಿ, ಉಡುಪಿ ಜಿಲ್ಲೆಯ ಡಿಸಿ ಮನ್ನಾ ಜಾಗದ ಸಮಸ್ಯೆ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಪ.ಜಾತಿ ಮತ್ತು ಪಂಗಡದ ಕುಟುಂಬ ತಮಗೆ ಸ್ವಂತ ಜಾಗ ಇಲ್ಲ ಎನ್ನುವಂತಾಗಬಾರದು. ಆದ್ದರಿಂದ ಜಿಲ್ಲೆಯಲ್ಲಿ ಲಭ್ಯವಿರುವ ಡಿಸಿ ಮನ್ನಾ ಭೂಮಿ, ಕಂದಾಯ ಭೂಮಿಯ ವಿವರಗಳನ್ನು ಸಂಗ್ರಹಿಸಿ ಅದರಲ್ಲಿ ಪ.ಜಾತಿ ಪಂಗಡದ ಜನತೆಗೆ ನೀಡಬಹುದಾದ ಭೂಮಿಯ ಪ್ರಮಾಣ ಮತ್ತು ಖಾಸಗಿಯವರಿಂದ ಖರೀದಿಸಿ ನೀಡಬಹುದಾದ ಭೂಮಿ ಮತ್ತು ಭೂ ಒಡೆತನ ಯೋಜನೆಯ ಮೂಲಕ ನೀಡಬಹುದಾದ ಭೂಮಿಯ ಬಗ್ಗೆ ಎಲ್ಲಾ ತಾಲೂಕುವಾರು ಸಮಗ್ರ ವಿವರಗಳನ್ನು ನೀಡುವಂತೆ ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ ಭೂಮಿಯ ಅಗತ್ಯತೆ ಇರುವ ಪ.ಜಾತಿ, ಪಂಗಡದದರ ಸಂಖ್ಯೆ, ಈಗಾಗಲೇ ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಪ.ಜಾತಿ ಪಂಗಡದವರ ವಿವರ, ಇವರಿಗೆ ನೀಡಲು ಅಗತ್ಯವಿರುವ ಭೂಮಿಯ ಪ್ರಮಾಣ ಕುರಿತಂತೆ ಎಲ್ಲಾ ಗ್ರಾಮ ಮತ್ತು ತಾಲೂಕುವಾರು ವಿವರಗಳನ್ನು ಸಂಗ್ರಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಪ.ಜಾತಿ ಮತ್ತು ಪಂಗಡದವರಿಗೆ ಖಾಸಗಿಯವರಿಂದ ಭೂಮಿ ಖರೀದಿಸಿ ನೀಡುವ ಕುರಿತಂತೆ ಹಣದ ಕೊರತೆ ಇಲ್ಲ. ಇದಕ್ಕಾಗಿ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆದ್ದರಿಂದ ಶೀಘ್ರದಲ್ಲಿ ಭೂಮಿಯನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪಂಗಡದ ಯಾವುದೇ ಕುಟುಂಬ ಸ್ವಂತ ಭೂಮಿಯಿಲ್ಲದಂತೆ ಇರಬಾರದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರ್ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ಹೊರ ಜಿಲ್ಲೆಗಳಿಂದ ಭತ್ತ ಖರೀದಿಗೆ ಅನುಮತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Posted On: 14-01-2022 09:06PM

ಉಡುಪಿ : ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿನ ಜಿಲ್ಲೆಯ ಸ್ಥಳೀಯ ಕುಚ್ಚಲಕ್ಕಿ ಪ್ರಬೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಯ ಭತ್ತವನ್ನು ಜಿಲ್ಲೆಯ ಬಹುತೇಕ ರೈತರು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿದ್ದು, ಸ್ಥಳೀಯ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಈ ಭತ್ತವನ್ನು ರಾಜ್ಯದ ಬೇರೆ ಜಿಲ್ಲೆಗಳಿಂದ ಖರೀದಿಸುವ ಕುರಿತಂತೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶನ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಮೂಲಕ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿಯನ್ನು ನೀಡುವ ಕುರಿತಂತೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರವು ಭತ್ತ ಸಾಮಾನ್ಯ ದರ 1,940 ರೂ. ಹಾಗೂ ಗ್ರೇಡ್ ಎ ಭತ್ತಕ್ಕೆ 1,960 ರೂ. ದರ ನಿಗದಿಪಡಿಸಿ, ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಸ್ಥಳೀಯ ಕುಚ್ಚಲಕ್ಕಿ ಪ್ರಬೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಸ್ಥಳೀಯವಾಗಿ ಖರೀದಿಸಿ, ಸಂಸ್ಕರಿಸಿ, ಸ್ಥಳೀಯ ಪಡಿತರ ವ್ಯವಸ್ಥೆಯಲ್ಲಿ ಬಳಸಲು ಅನುಮತಿ ನೀಡಿದ್ದು, ಇದು ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ಜನತೆಯ ಬಹುವರ್ಷಗಳ ಬೇಡಿಕೆಯಾಗಿದ್ದು, ಸ್ಥಳೀಯ ರೈತರಿಗೆ ಸಹ ತಮ್ಮ ಬೆಳೆಗೆ ಉತ್ತಮ ದರ ಪಡೆಯಲು ಸಾಧ್ಯವಾಗಿದೆ. ಆದರೆ ಪ್ರಸ್ತುತ ವರ್ಷದಲ್ಲಿ ಕೇಂದ್ರದ ಆದೇಶ ಬರುವ ವೇಳೆಗೆ ಜಿಲ್ಲೆಯ ಬಹುತೇಕ ರೈತರು ತಾವು ಬೆಳೆದ ಭತ್ತವನ್ನು ಮಾರಾಟ ಮಾಡಿದ್ದು, ಇದರಿಂದ ಸ್ಥಳೀಯವಾಗಿ ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡಲು ಭತ್ತದ ಕೊರತೆಯಾಗುವುದರಿಂದ, ಇದೇ ತಳಿಯನ್ನು ಬೆಳೆದಿರುವ ರಾಜ್ಯದ ಶಿವಮೊಗ್ಗ, ಮಂಡ್ಯ, ಮೈಸೂರು ಮತ್ತಿತರ ಜಿಲ್ಲೆಗಳಿಂದ ಬೆಂಬಲ ಬೆಲೆ ಖರೀದಿಗೆ ಅನುಮತಿ ನೀಡುವ ಬಗ್ಗೆ ತಕ್ಷಣವೇ ಕೇಂದ್ರದ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಜಿಲ್ಲೆಯ ರೈತರು ತಮ್ಮಲ್ಲಿನ ಭತ್ತವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಫ್ರೂಟ್ಸ್ ತಂತ್ರಾಂಶದಲ್ಲಿ ತಕ್ಷಣದಿಂದಲೇ ನೊಂದಣಿಯನ್ನು ಮಾಡಿಕೊಳ್ಳುವಂತೆ ತಿಳಿಸಿದ ಸಚಿವರು, ಭತ್ತವನ್ನು ಸಂಸ್ಕರಿಸುವ ಕುರಿತಂತೆ ಸ್ಥಳೀಯ ಅಕ್ಕಿ ಗಿರಣಿಗಳ ಮಾಲೀಕರೊಂದಿಗೆ ಶೀಘ್ರದಲ್ಲಿ ಚರ್ಚೆ ನಡೆಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯಲ್ಲಿ ವರ್ಷಕ್ಕೆ ಅಗತ್ಯವಿರುವ ಸ್ಥಳಿಯ ಭತ್ತದ ಪ್ರಮಾಣ, ಇಲ್ಲಿ ಬೆಳೆಯುವ ಭತ್ತದ ಪ್ರಮಾಣ, ಕೊರತೆಯಾಗುವ ಭತ್ತದ ಪ್ರಮಾಣ ಮತ್ತು ಹೊರ ಜಿಲ್ಲೆಗಳಿಂದ ಖರೀದಿಗೆ ಅಗತ್ಯವಿರುವ ಭತ್ತದ ಪ್ರಮಾಣದ ಕುರಿತು ಸಮಗ್ರ ಅಂಕಿ ಅಂಶಗಳನ್ನು ಸಂಗ್ರಹಿಸುವಂತೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಸ್ಥಳೀಯ ರೈತರಿಂದ ಸಂಗ್ರಹಿಸುವ ಭತ್ತವನ್ನು ಸಂಗ್ರಹಿಸಲು ಮತ್ತು ಅದನ್ನು ಅಕ್ಕಿಯನ್ನಾಗಿ ಮಾರ್ಪಡಿಸಿ, ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಜಿಲ್ಲೆಯಲ್ಲಿಯೇ ದಾಸ್ತಾನು ಮಾಡಲು ಅಗತ್ಯವಿರುವ ಸುಸಜ್ಜಿತ ಖಾಯಂ ಅಕ್ಕಿ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಸೂಕ್ತ ಸ್ಥಳ ಗುರುತಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ರೈತರು ಬೆಳೆದ ಭತ್ತವನ್ನು ಸ್ಥಳೀಯವಾಗಿ ಬೆಂಬಲ ಬೆಲೆಯಲ್ಲಿ ಖರೀದಿಸುವುದರಿಂದ ರೈತರಿಗೂ ಲಾಭವಾಗುವ ಜೊತೆಗೆ ಸ್ಥಳೀಯ ಪಡಿತರ ಚೀಟಿದಾರರಿಗೆ ಉತ್ತಮ ಗುಣಮಟ್ಟದ ಕುಚ್ಚಲಕ್ಕಿಯನ್ನು ನೀಡಬಹುದಾಗಿದ್ದು, ಇದರಿಂದ ಮುಂದಿನ ದಿನದಲ್ಲಿ ರೈತರಿಗೆ ಸಹ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲು ಉತ್ತೇಜನ ದೊರೆಯುತ್ತದೆ ಎಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅವಿಭಜಿತ ಜಿಲ್ಲೆಯ ಜನತೆಯ ಬಹುವರ್ಷಗಳ ಈ ಬೇಡಿಕೆಯನ್ನು ಈಡೇರಿಸುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ನಡಹಳ್ಳಿ, ಉಪಾಧ್ಯಕ್ಷ ಕಿರಣ್ ಕೊಡ್ಗಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ನಿರ್ದೇಶಕಿ ಶಮ್ಲಾ ಇಕ್ಬಾಲ್, ಉಡುಪಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಆಹಾರ ಇಲಾಖೆಯ ಉಪ ನಿರ್ದೇಶಕ ಮೊಹಮದ್ ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.

ಕುಖ್ಯಾತ ಆರೋಪಿ ಆಕಾಶಭವನ ಶರಣ್ ಹಾಗೂ ಇತರ ನಾಲ್ವರ ಸೆರೆ

Posted On: 14-01-2022 02:17PM

ಮಂಗಳೂರು : ಇಲ್ಲಿನ ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿ 2 ತಿಂಗಳ ಹಿಂದೆ ಜೈಲ್ ನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆಕಾಶಭವನ ಶರಣ್ ಅಲಿಯಾಸ್ ರೋಹಿದಾಸ್ ಹಾಗೂ ಆತನ ಇತರ 4 ಸಹಚರರನ್ನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ‌.

ಪ್ರಕರಣದ ವಿವರ : ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಬ್ರಿಡ್ಜ್ ಬಳಿಯಲ್ಲಿ ಡಿಸೆಂಬರ್‌ 12 ರಂದು ರಾತ್ರಿ ಸುಮಾರು 11-30ಕ್ಕೆ ಹಳೆಯಂಗಡಿ ನಿವಾಸಿಯೊಬ್ಬರು ತನ್ನ ದ್ವಿಚಕ್ರ ವಾಹನದಲ್ಲಿ ಚೇಳಾರು ನಂದಿನಿ ಬ್ರಿಡ್ಜ್ ಪರಿಸರದಲ್ಲಿ ಹೋಗುತ್ತಿದ್ದ ಸಮಯ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ಮೊಬೈಲ್ ಫೋನ್, ನಗದು ರೂ. 3000/- ಹಾಗೂ ಕೆಎ-19-ಹೆಚ್ ಎ-3016 ಟಿವಿಎಸ್ ದ್ವಿಚಕ್ರವನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಈ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಈ ಪ್ರಕರಣದಲ್ಲಿ ಭಾಗಿಯಾದ ಮಂಗಳೂರಿನ ಆಕಾಶಭವನ ನಿವಾಸಿ ರೋಹಿದಾಸ್ ಅಲಿಯಾಸ್ ಶರಣ್ ಆಕಾಶಭವನ (38), ಕಂಕನಾಡಿ ನಿವಾಸಿ ಅನಿಲ್ ಕುಮಾರ್ ಸಾಲ್ಯಾನ್ @ ಅನಿಲ್ ಪಂಪ್ ವೆಲ್ (40), ಬಜ್ಪೆ ನಿವಾಸಿ ಸೈನಾಲ್ ಡಿ ಸೋಜಾ (22), ಬಂಟ್ವಾಳದ ಫರಂಗಿಪೇಟೆ ನಿವಾಸಿ ಪ್ರಸಾದ್ (39), ಜೆಪ್ಪಿನಮೊಗರು ನಿವಾಸಿ ಚೇತನ್ ಕೊಟ್ಟಾರಿ (35) ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ಪೈಕಿ ಆಕಾಶಭವನ ಶರಣ್ ಎಂಬಾತನು ಈ ಪ್ರಕರಣದ ಪ್ರಮುಖ ಸೂತ್ರದಾರಿಯಾಗಿದ್ದು, ಈತನು ಇತ್ತೀಚೆಗೆ ಜೈಲ್ ನಿಂದ ಜಾಮೀನು ಪಡೆದು ಬಿಡುಗಡೆಗೊಂಡವನು ತನ್ನ ಸಹಚರರೊಂದಿಗೆ ಸೇರಿ ಈ ಕೃತ್ಯವನ್ನು ಎಸಗಿರುವುದಾಗಿದೆ. ಈ ಕೃತ್ಯಕ್ಕೆ ಉಪಯೋಗಿಸಿದ ಬಿಳಿ ಬಣ್ಣದ ಮಹೇಂದ್ರ ಎಕ್ಸ್ ಯುವಿ ಕಾರು, 3 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಆಕಾಶಭವನ ಶರಣ್ ಅಲಿಯಾಸ್ ರೋಹಿದಾಸ್ ತನ್ನ ಸಹಚರರ ಮೂಲಕ ವಿರೋಧಿ ತಂಡದ ವ್ಯಕ್ತಿಯನ್ನು ಕೊಲೆ ಮಾಡಲು ಸಂಚು ರೂಫಿಸುತ್ತಿದ್ದ ವಿಚಾರಣೆ ವೇಳೆ ತಿಳಿದುಬಂದಿರುತ್ತದೆ. ಈತನ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದಾಖಲಾದ ಸುಲಿಗೆ ಪ್ರಕರಣದಲ್ಲಿ ಸುಲಿಗೆ ಮಾಡಿದ ಮೊಬೈಲ್ ಫೋನ್ ನಿಂದ ಆಕಾಶಭವನ ಶರಣ್ ನು ಬೆದರಿಕೆ ಹಾಕಿರುವ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರಿದಿದೆ.

ಕಾಪು : ಜನತಾದಳದ ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರಿಗೆ ಅಭಿನಂದನಾ ಸಮಾರಂಭ

Posted On: 13-01-2022 10:37PM

ಕಾಪು : ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಜನತಾದಳ (ಜಾತ್ಯತೀತ)ಪಕ್ಷದ ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರವರಿಗೆ ಅಭಿನಂದನಾ ಸಮಾರಂಭ ಹಾಗೂ ಪಕ್ಷದ ಅಭ್ಯರ್ಥಿಯಾಗಿ ಇತರೆ ವಾಡ್೯ಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ನಾಗರಿಕರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭವು ಜನವರಿ 12ರಂದು ಕೊಂಬಗುಡ್ಡೆ ವಾರ್ಡಿನಲ್ಲಿ ನಡೆಯಿತು.

ಸಮಾರಂಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವರಾವ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ರಾಜ್ಯ ನಾಯಕರಾದ ಉದಯ ಹೆಗ್ಡೆ ಮತ್ತು ರಾಜ್ಯ ಯುವ ಜನತಾದಳದ ಉಪಾಧ್ಯಕ್ಷರಾದ ಸೈಯದ್ ಶಾಹಿದ್ ರವರು ಮಾತನಾಡಿದರು. ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರವರು ಸನ್ಮಾನವನ್ನು ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ, ತನ್ನ ವಾರ್ಡಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುವ ಬಗ್ಗೆ ಭರವಸೆ ನೀಡಿದರು. ತನ್ನನ್ನು ಚುನಾಯಿಸಿದ ಮತದಾರರೆಲ್ಲರಿಗೂ, ಕಾರ್ಯಕರ್ತರಿಗೂ, ಸರ್ವರಿಗೂ ಧನ್ಯವಾದಗಳನ್ನು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರು ಮಾತನಾಡಿ ಜನತಾದಳ ಪಕ್ಷದ ಈವರೆಗಿನ ಸಾಧನೆ, ಮುಂದಿನ ಯೋಜನೆ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡರು ಈ ರಾಜ್ಯಕ್ಕೆ ಕೊಟ್ಟಂತಹ ಕಾರ್ಯಕ್ರಮಗಳು, ಪ್ರಾದೇಶಿಕ ಪಕ್ಷಗಳು ನಮಗೆ ಯಾವ ರೀತಿ ಅಗತ್ಯವಿದೆ ಎಂಬುದರ ಬಗ್ಗೆ ಮತ್ತು ಕುಮಾರಸ್ವಾಮಿಯವರ ಜನಪರ ಕಾರ್ಯಕ್ರಮಗಳು ಮತ್ತು ಕುಮಾರಸ್ವಾಮಿಯವರು 2023ಕ್ಕೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತನ್ನು ಹೇಳುತ್ತಾ, ಇನ್ನು ಮುಂದೆ ಕೊಂಬಗುಡ್ಡೆ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಉಮೇಶ್ ಕರ್ಕೇರರವರ ಒಟ್ಟಿಗೆ ತಾನು ಕೂಡ ಇದ್ದು ತಮ್ಮೆಲ್ಲರ ಕೆಲಸಮಾಡುತ್ತೇನೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಸಹಕರಿಸಿದ ಕಾರ್ಯಕರ್ತರಿಗೆ, ಮತದಾರ ಬಾಂಧವರಿಗೆ, ಊರಿನವರಿಗೆ ಧನ್ಯವಾದಗಳನ್ನು ಸಲ್ಲಿಸಿ ಯಾವತ್ತೂ ನಿಮ್ಮೆಲ್ಲರ ಸಹಕಾರ ನಮ್ಮ ಪಕ್ಷಕ್ಕೆ ಇರಲಿ ನಾವು ನಿಮ್ಮೊಂದಿಗಿದ್ದೇವೆ ಮುಂದಿನ ದಿನಗಳಲ್ಲಿ ಕಾಪು ಪುರಸಭೆಯ 23 ವಾರ್ಡ್ ಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕೆ ಇಳಿಸಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಷ್ಟೇ ಅಲ್ಲದೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿ ಪಕ್ಷವನ್ನು ಅಧಿಕಾರ ತರುವಲ್ಲಿ ನಾವು ಪ್ರಯತ್ನ ಮಾಡುತ್ತೇವೆ ನಮಗೆ ವಿಶ್ವಾಸ ಇದೆ ಎಂದರು. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಬದಿಗಿರಿಸಿ ಪ್ರಾದೇಶಿಕ ಪಕ್ಷಕ್ಕೆ ಮತದಾರರು ಮನ್ನಣೆ ಕೊಡುತ್ತಾರೆ. ನಮಗೆ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಊರಿನ ಪ್ರಮುಖ ಹಿರಿಯರು, ಪಕ್ಷದ ರಾಜ್ಯ, ಜಿಲ್ಲಾ ನಾಯಕರುಗಳು ಉಡುಪಿ ಜಿಲ್ಲೆಯ ವೀಕ್ಷಕರಾದ ಸುಧಾಕರ ಶೆಟ್ಟಿ, ಕಾಪು ಬ್ಲಾಕ್ ಕಾರ್ಯಾಧ್ಯಕ್ಷರಾದ ರಾಜು ಆರ್ ಪುತ್ರನ್, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಯರಾಮ ಆಚಾರ್ಯ ವಂದಿಸಿದರು.

ಉದ್ಯಾವರ : ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದ 77ನೇ ವಾರ್ಷಿಕ ಮಂಗಲೋತ್ಸವ

Posted On: 13-01-2022 08:50PM

ಉದ್ಯಾವರ : ಇಲ್ಲಿನ ಬಿಲ್ಲವ ಮಹಾಜನ ಸಂಘ (ರಿ.) ಇದರ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ 77ನೇ ವಾರ್ಷಿಕ ಮಂಗಲೋತ್ಸವವು ಜರಗಲಿದೆ.

ಜನವರಿ 3ರಿಂದ ಮೊದಲ್ಗೊಂಡು 12ರ ತನಕ ನಗರಭಜನೆ, 13ರಂದು ಮಧ್ಯಾಹ್ನ ಗಂಟೆ 12-15ಕ್ಕೆ ಕಲಶ ಪ್ರತಿಷ್ಠೆಯಾಗಿ ಮರುದಿನ 14, ಶುಕ್ರವಾರ ಪೂರ್ವಾಹ್ನ ಗಂಟೆ 9ರ ಪರ್ಯಂತ ನಡೆಯಲಿರುವ ಸಪ್ತಝಾಮದ ಶ್ರೀ ದೇವಿ ಭಜನಾ ಸಪ್ತಾಹ ಮಹೋತ್ಸವ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ‌.