Updated News From Kaup

ಮೇ 6 : ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣಯಂತ್ರ ವಿತರಣಾ ಶಿಬಿರ

Thumbnail
Posted On: 29 Apr 2022, 05:40 PM

ಉಡುಪಿ : ಸಂದೀಪ್ ಶೆಟ್ಟಿ ಕಲ್ಲಪಾಪು, 80 ಬಡಗಬೆಟ್ಟು, ಮುಕೇಶ್ ಕುಮಾರ್ ಕೆರೆಕಾಡು, ಮೂಲ್ಕಿ ಸಹಕಾರದಲ್ಲಿ ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆ ಮೈಸೂರು, ಆದಿತ್ಯ ಟ್ರಸ್ಟ್ (ರಿ.) ನಕ್ರೆ, ಕಾರ್ಕಳ ಸಹಯೋಗದೊಂದಿಗೆ ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣಯಂತ್ರ ವಿತರಣಾ ಶಿಬಿರ ಮೇ 6ರಂದು ಉಡುಪಿ ಗ್ರಾಮೀಣ ಬಂಟರ ಸಂಘದ ಸಭಾ ಭವನ, ಕುಂತಳನಗರ ಇಲ್ಲಿ ಜರಗಲಿದೆ. ಫಲಾನುಭವಿಗಳು ಶಿಬಿರಕ್ಕೆ ಬರುವಾಗ ತರಬೇಕಾದ ದಾಖಲೆಗಳು : 1. ಇತ್ತೀಚಿನ ಭಾವಚಿತ್ರ 2 ಪ್ರತಿ 2. ಆಧಾರ್ ಕಾರ್ಡಿನ ನಕಲು 2ಪ್ರತಿ 3. ಬಿ. ಪಿ. ಎಲ್. ಕಾರ್ಡಿನ ನಕಲು 2ಪ್ರತಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 90084 44076 / 98457 81211

ಚೆನ್ನಿಬೆಟ್ಟು ಫ್ರೆಂಡ್ಸ್ ಕಡ್ತಲ - 15ನೇ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಗಾನ ಶ್ರೀ ದೇವಿ ಮಹಾಂಕಾಳಿ ಮಹಾತ್ಮೆ

Thumbnail
Posted On: 29 Apr 2022, 05:30 PM

ಉಡುಪಿ : ಚೆನ್ನಿಬೆಟ್ಟು ಫ್ರೆಂಡ್ಸ್ ಕಡ್ತಲ, ಎಳ್ಳಾರೆ ಗ್ರಾಮಸ್ಥರು ಇವರ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀಕ್ಷೇತ್ರ ಮಡಾಮಕ್ಕಿ ಮೇಳದರಿಂದ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಶ್ರೀ ದೇವಿ ಮಹಾಂಕಾಳಿ ಮಹಾತ್ಮೆ ಏಪ್ರಿಲ್ 30 ಶನಿವಾರ, ರಾತ್ರಿ 9.30ಕ್ಕೆ ಕಡ್ತಲ ಚೆನ್ನಿಬೆಟ್ಟು ಅಂಗನವಾಡಿ ವಠಾರದಲ್ಲಿ ನಡಯಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು -ಮನ -ಧನಗಳಿಂದ ಕಾರ್ಯಕ್ರಮದಲ್ಲಿ ಸಹಕರಿಸಬೇಕೆಂದು ಚೆನ್ನಿಬೆಟ್ಟು ಫ್ರೆಂಡ್ಸ್ ಕಡ್ತಲ,ಎಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರ್ಮಾಳು ಮೂಡಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ ನಿಧನ

Thumbnail
Posted On: 29 Apr 2022, 03:06 PM

ಕಾಪು‌, ಏ.29 : ಎರ್ಮಾಳು ಮೂಡಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ (94) ಇಂದು ದೈವಾದೀನರಾದರು. ಎರ್ಮಾಳಿನ ಪ್ರತಿಷ್ಠಿತ ಬಂಟಮನೆತನದ ಜಗನ್ನಾಥ ಶೆಟ್ಟಿಯವರು ಕೃಷಿಕರಾಗಿ ಪ್ರಸಿದ್ಧರು. ಧಾರ್ಮಿಕ - ಸಾಂಸ್ಕೃತಿಕವಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸಕ್ರಿಯರಾಗಿದ್ದರು, ದೈವಸ್ಥಾನಗಳಲ್ಲಿ ತಮ್ಮ ಮನೆತನವನ್ನು ಪ್ರತಿನಿಧಿಸುತ್ತಿದ್ದರು. ಉಚ್ಚಿಲ ರೋಟರಿ ಸಂಸ್ಥೆ ಶೆಟ್ಟಿಯವರನ್ನು ಯಶಸ್ವೀ ಕೃಷಿಕನೆಂದು ಶ್ಲಾಘಿಸಿ ಸಮ್ಮಾನಿಸಿದೆ. ಜಗನ್ನಾಥ ಶೆಟ್ಟರು ಸರಳ ಸಜ್ಜನಿಕೆಯಿಂದ ಸಮಾಜದಲ್ಲಿ ಜನಪ್ರಿಯರಾಗಿದ್ದರು. ಅವರ ಅಂತ್ಯಕ್ರಿಯೆಯು ಎರ್ಮಾಳು ಮೂಡಬೆಟ್ಟು ಬರ್ಪಾಣಿ ಮನೆಯ‌ ಪರಿಸರದಲ್ಲಿ ಸಂಜೆ‌ ಗಂಟೆ 5 ರಿಂದ 6ರ ವೇಳೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಎಸ್. ಎಮ್. ಹೆಗಡೆ ಮತ್ತು ಕೆ. ಎಲ್. ಕುಂಡಂತಾಯರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

Thumbnail
Posted On: 29 Apr 2022, 01:58 PM

ಉಡುಪಿ : ಇಲ್ಲಿನ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಲೇಖಕ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಹಿರಿಯ ಅರ್ಥಧಾರಿ ಎಸ್. ಎಮ್. ಹೆಗಡೆ ಹಾಗೂ ಅರ್ಥಧಾರಿ, ಲೇಖಕ, ಚಿಂತಕ ಕೆ. ಎಲ್. ಕುಂಡಂತಾಯ ಆಯ್ಕೆಯಾಗಿದ್ದಾರೆ. ಸಂಸ್ಥೆಯ ತಾಳಮದ್ದಲೆ ಸಪ್ತಾಹ ಮೇ 23 ರಿಂದ ಆರಂಭವಾಗಲಿದ್ದು, ಮೇ 29 ಭಾನುವಾರ ಸಂಜೆ 5 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿರುವ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಸ್. ಎಮ್. ಹೆಗಡೆ ಮುಡಾರೆಯವರು ಪ್ರಶಸ್ತಿಗೆ ಆಯ್ಕೆಯಾದ ನಂತರ ನಮ್ಮನ್ನಗಲಿದ್ದು ಮರಣೋತ್ತರವಾಗಿ ಪ್ರದಾನ ಮಾಡಲಾಗುವುದು. ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ರೂ. 20,000/- ನಗದು ಪುರಸ್ಕಾರ ಒಳಗೊಂಡಿರುತ್ತದೆ.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮೈಸೂರು ಒಡೆಯರ ಭೇಟಿ

Thumbnail
Posted On: 29 Apr 2022, 01:48 PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮೈಸೂರು ಒಡೆಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಳದ ಪ್ರಮುಖರು ಉಪಸ್ಥಿತರಿದ್ದರು.

ಮಜೂರು : ಕಾಪು ತಾಲೂಕಿನ 52 ಕುಟುಂಬಕ್ಕೆ ರಂಜಾನ್ ಕಿಟ್ ವಿತರಣೆ

Thumbnail
Posted On: 27 Apr 2022, 06:05 PM

ಕಾಪು : ಮಲಬಾರ್ ಗೋಲ್ಡ್ & ಡೈಮಂಡ್ಸ್ ವತಿಯಿಂದ ಕಾಪು ತಾಲೂಕಿನ 52 ಕುಟುಂಬಕ್ಕೆ ರಂಜಾನ್ ಕಿಟ್ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಆರ್.ಕೆ ಗೆಸ್ಟ್ ಹೌಸ್ ಮಜೂರಿನಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಫಾರೂಕ್ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕಳೆದ ಹತ್ತಾರು ವರ್ಷದಲ್ಲಿ ಜಾತಿ ಭೇದವಿಲ್ಲದೆ ಹತ್ತಾರು ಸಾಮಾಜಿಕ ಕೆಲಸ, ಬಡವರ ಉದ್ದಾರದ ಕೆಲಸವನ್ನು ಮಾಡುತ್ತಿದೆ. ಕೊರೊನದ ಸಂದರ್ಭದಲ್ಲಿ ಇಡೀ ಜಿಲ್ಲೆಯ 7000 ಕ್ಕೂ ಮಿಕ್ಕಿ ಬಡ ಕುಟುಂಬವನ್ನು ಗುರುತಿಸಿ ಅಕ್ಕಿ ಹಾಗೂ ಜಿನಸು ಕಿಟ್ ವಿತರಿಸಿದ್ದು ನಿಜಕ್ಕೂ ಶ್ಲಾಘನೀಯ ಅದಲ್ಲದೆ ಉಚಿತ ಮೆಡಿಸಿನ್ ಕಿಟ್, ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ ,ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅರ್ಧದಲ್ಲಿ ನಿಂತ ಮನೆ ಪೂರ್ತಿಗೊಳಿಸಲು ಸಹಾಯಧನ, ಪಬ್ಲಿಕ್ ಟಿವಿ ಮುಖಾಂತರ ಬಂದ ಮನವಿಗೆ 100 ಟ್ಯಾಬ್ ವಿತರಿಸಿ ಬಡಮಕ್ಕಳ ವಿದ್ಯೆಗೆ ಪ್ರೋತ್ಸಾಹ, ಜಾತಿ ಬೇದವಿಲ್ಲದೆ ಪ್ರತಿಯೊಂದು ಜಾತಿಯ ಹಬ್ಬದ ಆಚರಣೆ, ರಾಷ್ಟೀಯ ಮಟ್ಟದ ಎಲ್ಲಾ ಹಬ್ಬದ ಆಚರಣೆ ನಿಜಕ್ಕೂ ಇವರ ಕೆಲಸ ದೇವರು ಹಾಗೂ ಸಮಾಜ ಮೆಚ್ಚುವಂತಹದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ಕಾಪು ಸಮಾಜ ಸೇವಾ ವೇದಿಕೆ ಗೌರವಾಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಚಂದ್ರನಗರ ಮಸ್ಜಿದ್ ಇ ನೂರ್ ಖತೀಬರಾದ ರಮೀಝ್ ಹನಫಿ, ಶರ್ಫುದ್ದಿನ್ ಶೇಖ್ ಮಜೂರು, ಬಿ.ಎ.ಫಕ್ರುದ್ದಿನ್ ಆಲಿ ಚಂದ್ರನಗರ, ಕಾಪು ಪುರಸಭೆ ಸದಸ್ಯ ನೂರುದ್ದಿನ್.ಅಹ್ಮದಿಮೋಹಲ್ಲ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಿಬ್ಬಂದಿ ಫಯಾಜ್ ಅಹ್ಮದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಳಚಿತು ಕುಲಾಲ ಸಮುದಾಯದ ಹಿರಿಯ ಕೊಂಡಿ - ಬೋಳ ಸಂಜೀವ ಕುಲಾಲ್ ವಿಧಿವಶ

Thumbnail
Posted On: 27 Apr 2022, 05:52 PM

ಕಾರ್ಕಳ : ಬೋಳ ಕುಲಾಲ ಸಂಘದ ಮಾಜಿ‌ ಅಧ್ಯಕ್ಷರು, ಹಿರಿಯರು, ಅನುಭವಿಗಳೂ ಆದ ಸಂಜೀವ ಕುಲಾಲ್ ಬೋಳ ಇವರು ಮುಂಬೈಯ ತಮ್ಮ ನಿವಾಸದಲ್ಲಿ ವಿಧಿವಶರಾದರು. ಇಳಿ ವಯಸಿನಲ್ಲೂ ಸದಾ ಲವಲವಿಕೆಯಿಂದ , ಉತ್ಸಾಹದಿಂದ ಸಮುದಾಯದ ಜನರು ದುರ್ಬಲರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಇಂದು ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ಅಗಲುವಿಕೆ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು, ಕುಲಾಲ ಸಂಘ (ರಿ ) ಕಾಪು ವಲಯವು ಮೃತರ ದಿವ್ಯ ಆತ್ಮಕ್ಕೆ ಚಿರಶಾಂತಿಯನ್ನು‌ ಕೋರಿದೆ.

ಮನೆ-ನಿವೇಶನ ರಹಿತ ಎಸ್ಸಿ ಕುಟುಂಬಗಳಿಗೆ ತ್ವರಿತ ನಿವೇಶನ ಹಂಚಿಕೆಗೆ ಕ್ರಮ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Thumbnail
Posted On: 26 Apr 2022, 05:07 PM

ಉಡುಪಿ : ರಾಜ್ಯದಲ್ಲಿ ಮನೆ ನಿವೇಶನ ಹೊಂದಿರದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳ ಪಟ್ಟಿಮಾಡಿ ಅವರಿಗೆ ತ್ವರಿತವಾಗಿ ನಿವೇಶನಗಳನ್ನು ಒದಗಿಸಲು ನಮ್ಮ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ನಾಲ್ಕು ವಿಭಾಗಗಳ ಒಂದೊಂದು ಜಿಲ್ಲೆಯನ್ನು ಮಾದರಿಯಾಗಿ ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಂತ ಪರಿಶಿಷ್ಟ ಜಾತಿಯ ಮನೆ/ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳಿಗೆ ಮನೆ ನಿವೇಶನಗಳನ್ನು ನೀಡಬೇಕು. ಈ ಮಹತ್ವದ ಕಾರ್ಯವನ್ನು ನಡೆಸಲು ಆರಂಭಿಕವಾಗಿ ನಾಲ್ಕು ವಿಭಾಗಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ನಾಲ್ಕು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ವಿಭಾಗದಲ್ಲಿ ಚಿತ್ರದುರ್ಗ, ಮೈಸೂರು ವಿಭಾಗದಲ್ಲಿ ಚಾಮರಾಜ ನಗರ, ಕಲಬುರ್ಗಿ ವಿಭಾಗದಲ್ಲಿ ರಾಯಚೂರು ಮತ್ತು ಬೆಳಗಾವಿ ವಿಭಾಗದಲ್ಲಿ ಹಾವೇರಿ ಜಿಲ್ಲೆಯಲ್ಲಿ ಇದನ್ನು ಪೈಲಟ್ ಆಗಿ ಅನುಷ್ಠಾನಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯದಲ್ಲೀಗ ಒಟ್ಟು 5.46 ಲಕ್ಷ ಕುಟುಂಬಗಳು ಮನೆ ನಿವೇಶನ ಹೊಂದಿಲ್ಲ. ಅವರಿಗೆ ಭೂಮಿ ಕೊಡುವುದು ಸರಕಾರದ ಜವಾಬ್ದಾರಿ. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆದ್ಯತೆಯಲ್ಲಿ ಶೀಘ್ರ ಮನೆ ಒದಗಿಸಲು, ಆಯ್ದ ಜಿಲ್ಲೆಗಳಲ್ಲಿ ಸರಕಾರಿ ಭೂಮಿ ಲಭ್ಯತೆ, ಮನೆ ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಬಳಿಕ ಪ್ರತೀ ಜಿಲ್ಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿವೇಶನ ಒದಗಿಸಲು ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡಿ, ಫಲಾನುಭವಿಗಳಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಲಹೆಗಾರ ನಿವೃತ್ತ ಅಧಿಕಾರಿ ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಪಿ., ಆಯುಕ್ತ ರಾಕೇಶ್ ಕುಮಾರ್, ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ಬಸವರಾಜ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಎರ್ಮಾಳ್ ಆಯ್ಕೆ

Thumbnail
Posted On: 26 Apr 2022, 02:43 PM

ಕಾಪು : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಎರ್ಮಾಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಪ್ರಧಾನ ಕಾರ್ಯದರ್ಶಿಯಾಗಿ ಪುಂಡಲೀಕ ಮರಾಠ, ಉಪಾಧ್ಯಕ್ಷರಾಗಿ ಹರೀಶ್ ಕಟಪಾಡಿ, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್,ಜೊತೆ ಕಾರ್ಯದರ್ಶಿ ವಿಜಯ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಸಂತೋಷ ನಾಯ್ಕ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷರಾದ ಅಲೆವೂರು ರಾಜೇಶ್ ಶೆಟ್ಟಿ ನೂತನ ಪಧಾದಿಕಾರಿಗಳನ್ನು ಘೋಷಣೆ ಮಾಡಿದರು. ಕಾಪು ತಾಲೂಕು ನಿಕಟಪೂರ್ವ ಅಧ್ಯಕ್ಷ ರಾಕೇಶ್ ಕುಂಜೂರು, ನಿಕಟಪೂರ್ವ ಕಾರ್ಯದರ್ಶಿ ಶಫಿ ಉಚ್ಚಿಲ ಉಪಸ್ಥಿತರಿದ್ದರು.