Updated News From Kaup
20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆ

Posted On: 19-01-2022 05:09PM
ಮಂಗಳೂರು : ಇಲ್ಲಿನ ಉತ್ತರ ಪೊಲೀಸ್ ಠಾಣೆಯಲ್ಲಿ 2000ನೇ ಇಸವಿಯಲ್ಲಿ ದಾಖಲಾದ ಪ್ರಕರಣದಲ್ಲಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಾರ್ಕಳದ ಬಜಗೋಳಿಯ ದಿಡಿಂಬಿಲ ಗುಡ್ಡೆ, ಹೈಸ್ಕೂಲು ಬಳಿ ನಿವಾಸಿ ಸಿ.ಎ.ಅಬ್ಬಾಸ್ ಪುತ್ರನಾದ ಆರೋಪಿ ಝಕಾರಿಯಾ ಎಂಬಾತನನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸು ನಿರೀಕ್ಷಕರಾದ ರಾಘವೇಂದ್ರ ಬೈಂದೂರು ಇವರ ಮಾರ್ಗದರ್ಶನದಂತೆ ಠಾಣಾ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಓಂದಾಸ್, ಪೊಲೀಸ್ ಕಾನ್ಸ್ಟೇಬಲ್ ಸಂಪತ್ ಇವರೊಂದಿಗೆ ಜನವರಿ 18ರಂದು ವಶಕ್ಕೆ ಪಡೆದಿರುತ್ತಾರೆ. ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೋಲಿಸರಿಗೆ ಮಂಗಳೂರು ಪೋಲಿಸ್ ಆಯುಕ್ತರಾದ ಶಶಿಕುಮಾರ್ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ 25ಲಕ್ಷ ರೂಪಾಯಿ ದೇಣಿಗೆ

Posted On: 19-01-2022 04:38PM
ಹೆಜಮಾಡಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಪ್ರಥಮ ಹಂತದಲ್ಲಿ 10 ಲಕ್ಷ, ದ್ವಿತೀಯ ಹಂತದಲ್ಲಿ 15 ಲಕ್ಷ ಒಟ್ಟು 25ಲಕ್ಷ ಮಂಜೂರು ಮಾಡಿದ್ದಾರೆ.
ಮಂಜೂರಾದ ಸಹಾಯಧನದ ಚೆಕ್ ನ್ನು ಧರ್ಮಾಧಿಕಾರಿಗಳ ಸಂಬಂಧಿ, ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ರತ್ನಾಕರ ರಾಜ್ ಬಲ್ಲಾಳ್ ರವರ ಉಪಸ್ಥಿತಿಯಲ್ಲಿ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲ್ಯಾನ್, ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕರಾದ ಗಣೇಶ್ ಬಿ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಉದ್ಯಮಿ ದಯಾನಂದ ಹೆಜಮಾಡಿ, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಿನರಾಜ್, ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸುಧಾಕರ್ ಕರ್ಕೆರ, ಉಡುಪಿ ತಾಲೂಕಿನ ಯೋಜನಾಧಿಕಾರಿಯವರಾದ ರಾಮ ಎಂ, ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಗಣ್ಯರ ಮತ್ತು ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.
ಕೆ.ಎಲ್.ಕುಂಡಂತಾಯರ 'ಧರ್ಮ ಜಾಗರ' ಬಿಡುಗಡೆ

Posted On: 18-01-2022 10:43AM
ಕಿನ್ನಿಗೋಳಿ : ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್.ನಂದೀಶ್ ಹಂಚೆ ಅವರು ಕೆ.ಎಲ್.ಕುಂಡಂತಾಯರ 'ಧರ್ಮ ಜಾಗರ' ಕೃತಿಯನ್ನು ಬಿಡುಗಡೆಗೊಳಿಸಿದರು.
ಕಿನ್ನಿಗೋಳಿಯ 'ಅನಂತಪ್ರಕಾಶ ಪುಸ್ತಕಮನೆ' ಆಯೋಜಿಸಿದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ' ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ'ಯನ್ನು ಡಾ.ನಂದೀಶ ಹಂಚೆ ಅವರು ಉದ್ಘಾಟಿಸಿದ ಸಂದರ್ಭದಲ್ಲಿ 'ಧರ್ಮ ಜಾಗರ' ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್.ಖಂಡಿಗೆ, ಕಿನ್ನಿಗೋಳಿ ಪ.ಪಂ.ಮುಖ್ಯಾಧಿಕಾರಿ ಸಾಯೀಶ್ ಚೌಟ, ಕೆ.ಎಲ್.ಕುಂಡಂತಾಯ, ಹಿರಿಯ ಸಾಹಿತಿ - ವಿದ್ವಾಂಸ ಶ್ರೀಧರ ಡಿ.ಎಸ್ , ಸಾಹಿತಿ, ಚಿಂತಕ ಎಕ್ಕಾರು ಉಮೇಶರಾವ್, ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ, ಗಾಯತ್ರೀ ಉಡುಪ, ನಿವೃತ್ತ ಪಾಂಶುಪಾಲರಾದ ಸುದರ್ಶನ ವೈ.ಎಸ್, ಗುರುರಾಜ ಮಂಜಿತ್ತಾಯ ಮುಂತಾದವರು ಉಪಸ್ಥಿತರಿದ್ದರು.
ನಮ್ಮ 'ಪರ್ವ'ಗಳು ಅಥವಾ 'ಹಬ್ಬ'ಗಳ ಆಚರಣೆ ಕುರಿತು ಸಣ್ಣ ಸಣ್ಣ ಪುಸ್ತಕ ಪ್ರಕಟಿಸುವ ಉದ್ದೇಶದಂತೆ ಮೂರು ತಿಂಗಳಲ್ಲಿ ಮೂರು ಕೃತಿಗಳು ಬಿಡುಗಡೆಗೊಂಡಿವೆ. ನವರಾತ್ರಿ ಹಾಗೂ ಒಂಬತ್ತು ದುರ್ಗಾ ಸನ್ನಿಧಾನಗಳ ಕುರಿತ ಮಾಹಿತಿ ಇರುವ 'ನವನವ ದುರ್ಗಾ'. ದೀಪಾವಳಿ ಹಾಗೂ ಗೋಪೂಜೆ ,ತುಳಸಿ ಪೂಜೆ ,ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಕುರಿತ ಮಾಹಿತಿಗಳಿರುವ 'ಸೊಡರ ಹಬ್ಬ' ಈಗಾಗಲೇ ಬಿಡುಗಡೆಯಾಗಿದೆ. 'ಧರ್ಮ ಜಾಗರ'ದಲ್ಲಿ ಷಷ್ಠಿ ,ಮಕರ ಸಂಕ್ರಮಣ , ಶಿವ ರಾತ್ರಿ ಪರ್ವಗಳ ಹಾಗೂ ಆಚಾರ್ಯ ಮಧ್ವರ ಕುರಿತಂತೆ ಹದಿನೆಂಟು ಲೇಖನಗಳಿವೆ.
ಕಾಪು ಶಾಸಕರಿಂದ 6 ಲಕ್ಷ ರೂ.ಗಳ ಮೀನುಗಾರಿಕಾ ಪರಿಹಾರ ಚೆಕ್ ಹಸ್ತಾಂತರ

Posted On: 17-01-2022 06:07PM
ಹೆಜಮಾಡಿ : ಇತ್ತೀಚಿಗೆ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿ ಸಮೀಪ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಹೆಜಮಾಡಿ ಕೋಡಿ ನಿವಾಸಿ ಭಾಸ್ಕರ್ ಪುತ್ರನ್ ರವರ ಪುತ್ರ ಜಯಂತ್ ರವರು ನೀರು ಪಾಲಾಗಿ ಮೃತರಾಗಿದ್ದರು.
ವಿಷಯ ತಿಳಿದ ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಮೃತರ ನಿವಾಸಕ್ಕೆ ತೆರಳಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ್ದರು. ಆ ನಿಟ್ಟಿನಲ್ಲಿ ಕುಟುಂಬ ವರ್ಗಕ್ಕೆ ತನ್ನ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಿಂದ ಸುಮಾರು 6 ಲಕ್ಷ ರೂಗಳನ್ನು ಮಂಜೂರು ಮಾಡಿ ಸ್ವತಃ ತಾನೇ ಮೃತರ ನಿವಾಸಕ್ಕೆ ತೆರಳಿ ಮಂಜೂರಾತಿ ಪತ್ರ ಕುಟುಂಬ ವರ್ಗಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ಸುವರ್ಣ, ಜನಾರ್ಧನ ಕೋಟ್ಯಾನ್, ಬಬಿತ, ರೋಷನ್ ಕಾಂಚನ್, ಸರಿನಾ, ಶರಣ್ ಮಟ್ಟು, ಸುಜಾತಾ, ನಳಿನಿ ಹಾಗೂ ಸ್ಥಳೀಯ ಪಕ್ಷದ ಪ್ರಮುಖರು ಸುಧಾಕರ್ ಕರ್ಕೇರ, ಹಿರಿಯರಾದ ಧನಂಜಯ ಗುರಿಕಾರ, ನಿತಿನ್ ಕುಮಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಶಿರ್ವ ಸಂತ ಮೇರಿ ಕಾಲೇಜಿನಲ್ಲಿ 74ನೇ ಸೇನಾ ದಿನಾಚರಣೆ

Posted On: 17-01-2022 06:01PM
ಶಿರ್ವ: ಈ ದಿನಗಳಲ್ಲಿ ರಾಷ್ಟ್ರದ ಭದ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬ ಯುವ ನಾಗರಿಕನ ಕರ್ತವ್ಯವಾಗಿದೆ. ರಾಷ್ಟ್ರೀಯ ಆಸ್ತಿಗಳು, ನೈಸರ್ಗಿಕ ಸಂಪನ್ಮೂಲಗಳು, ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಇಂದು ನಾವು ಸಶಸ್ತ್ರ ಪಡೆಗಳನ್ನು ಹೆಚ್ಚಿಸಬೇಕಾಗಿದೆ. ಸೇನೆ ತನ್ನ ನೆಲೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಪ್ರಜೆಗಳು ಮತ್ತು ಸರ್ಕಾರ ತಮ್ಮ ಸಂಪೂರ್ಣ ಸಹಕಾರವನ್ನು ನೀಡಿ ರಾಷ್ಟ್ರದ ಪ್ರಗತಿಗೆ ಕೈಜೋಡಿಸಬೇಕಾಗಿರುವುದು ಇಂದು ಅತಿ ಅಗತ್ಯವಾಗಿದೆ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಎನ್.ಸಿ.ಸಿ ಭೂಯುವ ಸೇನಾ ದಳದಿಂದ ಏರ್ಪಡಿಸಿದ 74ನೇ ಸೇನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಮುಂಡೆಲ್ ನ ಆಧ್ಯಾ ಫೌಂಡೇಶನ್ ಸೀನಿಯರ್ ಡೈರೆಕ್ಟರ್ ರಾಕೇಶ್ ಅಜಿಲ ಮಾತನಾಡಿದರು.
ಯುವಕರಲ್ಲಿ ದೇಶಭಕ್ತಿ,ಶಿಸ್ತು, ಸಮಯ ಪ್ರಜ್ಞೆ, ನಾಯಕತ್ವ ಗುಣಗಳನ್ನು ಹೆಚ್ಚಿಸುವಲ್ಲಿ ಎನ್.ಸಿ.ಸಿ ಸಹಾಯಕಾರಿಯಾಗುತ್ತದೆ.ಇಂದಿನ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ಪಡೆದು ಇತರರಿಗೆ ಮಾದರಿಯಾಗಬೇಕು ಹಾಗು ತಮ್ಮ ಅಮೂಲ್ಯ ಕೊಡುಗೆಯನ್ನು ಈ ದೇಶಕ್ಕೆ ನೀಡಬೇಕೆಂದು ಕಿವಿಮಾತು ಹೇಳಿದರು.
ಮಾತೃಭೂಮಿಯ ರಕ್ಷಣೆ ಮತ್ತು ರಾಷ್ಟ್ರದ ಅಖಂಡತೆಯನ್ನು ಕಾಪಾಡಲು ಎಲ್ಲವನ್ನೂ ತ್ಯಜಿಸಿ, ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ವೀರ ಯೋಧರಿಗೆ ನಮನಗಳನ್ನು ಸಲ್ಲಿಸುತ್ತಾ ಹಾಗೆ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸಿದ ಸೇನೆಯ ವೀರ ಸೈನಿಕರನ್ನು ಗೌರವಿಸ ಬೇಕಾಗಿರೋದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು. ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ಮತ್ತು ಮಹತ್ವವನ್ನು ಕ್ಯಾಡೆಟ್ ರಿಯಾ ಸೆರೆನಾ ಡಿಸೋಜಾ ವಿವರಿಸಿದರು. ಈ ಸಂದರ್ಭದಲ್ಲಿ ಕಂಪನಿ ಸರ್ಜೆಂಟ್ ಕ್ವಾರ್ಟರ್ ಮಾಸ್ಟರ್ ಮೋಹಿತ ಎನ್ ಸಾಲಿಯಾನ್ ದೇಶಭಕ್ತಿ ಗೀತೆ ವನ್ನು ಹಾಡಿ ನೆರೆದವರನ್ನು ಪ್ರೇರೇಪಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್, ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ, ಎಲ್ಲಾ ಕ್ಯಾಡೆಟ್ ಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಾನ್ಸ್ ಕಾರ್ಪೋರಲ್ ಧೀರಜ್ ಆಚಾರ್ಯ, ಕ್ಯಾಡೆಟ್ ಅನುಪ್ ನಾಯಕ್, ದೀಪಕ್ ಮತ್ತಿತರರು ಸಹಕರಿಸಿದರು. ಕೆಡೆಟ್ ನವ್ಯ ಮತ್ತು ಬಳಗ ಪ್ರಾರ್ಥಿಸಿದರು. ಸಾರ್ಜೆಂಟ್ ನಿವೇದಿತಾ ರೆಬೆಲ್ಲೋ ಎಲ್ಲರನ್ನು ಸ್ವಾಗತಿಸಿ, ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ ವಂದಿಸಿ, ಕ್ಯಾಡೆಟ್ ಎಲ್ರುಷಾ ಮಿಲಿನಾ ಡೇಸ ಕಾರ್ಯಕ್ರಮವನ್ನು ಸಂಯೋಜಿಸಿದರು.
ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಶ್ರೀಧರ ಡಿ.ಎಸ್. ಅವರಿಗೆ ಸಮ್ಮಾನ

Posted On: 17-01-2022 05:56PM
ಸುರತ್ಕಲ್ : ತಡಂಬೈಲು ಶ್ರೀದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಏಳನೇ ವರ್ಷದ ತಾಳಮದ್ದಳೆ ಸಪ್ತಾಹದ ಸಮರೋಪ ಸಮಾರಂಭದಲ್ಲಿ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ , ಹಿರಿಯ ಯಕ್ಷಗಾನ ವಿದ್ವಾಂಸ,ಪ್ರಸಂಗಕರ್ತ,ಸಾಹಿತಿ ಶ್ರೀಧರ ಡಿ.ಎಸ್.ಅವರನ್ನು ಅಭಿನಂದಿಸಿ ಸಮ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ವಹಿಸಿದ್ದರು.
ನಿವೃತ್ತ ಉಪನ್ಯಾಸಕ ನಾರಾಯಣ ಹೆಗಡೆ ಉಡುಪಿ ಅವರು ಅಭಿನಂದನೆಯ ಮಾತುಗಳನ್ನಾಡಿದರು. ಯಕ್ಷಗಾನ ಸಂಘಟಕ ,ಜ್ಯೋತಿಷಿ ಶ್ರೀಮಧುಕರ ಭಾಗವತರು ಕುಳಾಯಿ, ಕಣಿಪುರ ಪತ್ರಿಕೆಯ ಸಂಪಾದಕ ನಾರಾಯಣ ಚೆಂಬಲ್ತಿಮಾರ್ ಮುಂತಾದವರು ಉಪಸ್ಥಿತರಿದ್ದರು.
ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಗುರುಗಳಾದ ಸುರತ್ಕಲ್ ವಾಸುದೇವ ರಾವ್, ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಸುಲೋಚನಾ ವಿ.ರಾವ್ ಉಪಸ್ಥಿತರಿದ್ದರು. ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸರ್ವ ಸದಸ್ಯರು ಭಾಗವಹಿಸಿದ್ದರು.
ಉದ್ಯಾವರದ ಸುರೇಶ್ ಬಂಗೇರ ಶಬರಿಮಲೆಯಲ್ಲಿ ಹೃದಯಘಾತದಿಂದ ಸಾವು

Posted On: 16-01-2022 07:35PM
ಉಡುಪಿ : ಜಿಲ್ಲೆಯ ಉದ್ಯಾವರ ಅಯ್ಯಪ್ಪಸ್ವಾಮಿ ಮಂದಿರದಿಂದ ಹೊರಟ ಅಯ್ಯಪ್ಪಸ್ವಾಮಿ ಸುರೇಶ್ ಬಂಗೇರ ( 52) ಶಬರಿಮಲೆಯಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ಉದ್ಯಾವರ ಅಯ್ಯಪ್ಪ ಮಂದಿರದಿಂದ ಮಹಾಪೂಜೆ ಮಾಡಿ ಇರುಮುಡಿ ಕಟ್ಟಿ ನಿನ್ನೆ ರೈಲು ಮುಖಾಂತರ 32 ಸ್ವಾಮಿಗಳ ಜೊತೆ ಹೊರಟಿದ್ದರು. ಶಬರಿಮಲೆಯ ಗಣೇಶ ಬೆಟ್ಟ ಹತ್ತುವ ವೇಳೆ ಹೃದಯಘಾತವಾಗಿ ಸಾವನ್ನಪ್ಪಿದ್ದಾರೆ.
ಮೃತದೇಹ ಪಂಪೆಯಲ್ಲಿ ಚಿಕಿತ್ಸಾ ಕೇಂದ್ರದಲ್ಲಿದ್ದು, ನಾಳೆ ಅವರ ಮೃತದೇಹ ಉದ್ಯಾವರ ಅವರ ನಿವಾಸಕ್ಕೆ ಬರಲಿದೆ.
ಉದ್ಯಾವರ ಸಂಪಿಗೆ ನಗರದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.
ಮೋಕ್ಷಗಿರಿಯಲ್ಲಿ ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ಭಾಗವಧ್ವಜ ಕಟ್ಟೆಯನ್ನು ಮರುಸ್ಥಾಪಿಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು

Posted On: 16-01-2022 07:16PM
ಉಡುಪಿ : ಜಿಲ್ಲೆಯಲ್ಲಿ ಒಂದು ದೊಡ್ಡ ಮಟ್ಟಿನಲ್ಲಿ ಸದ್ದು ಮಾಡಿದ್ದ ಕುಂತಲ ನಗರ ಗ್ರಾಮದಲ್ಲಿ ಮೋಕ್ಷಗಿರಿ ಎಂಬ ಪರ್ವತದಲ್ಲಿ 2 ತಿಂಗಳ ಹಿಂದೆಯಷ್ಟೇ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ಸ್ಥಾಪಿಸಿದ್ದ ಭಾಗವಧ್ವಜ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದರು.
ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೋಕ್ಷಗಿರಿ ಘಟಕದ ಕಾರ್ಯಕರ್ತರು ದ್ವಜಕಟ್ಟೆಯನ್ನು ಮರುಸ್ಥಾಪಿಸಿದರು .ಕಟ್ಟೆಯನ್ನು ದ್ವOಸ ಮಾಡಿದ ಕಿಡಿಗೇಡಿಗಳಿಗೆ ಕಾರ್ಯಕರ್ತರು ಸ್ಪಷ್ಟ ಎಚ್ಚರಿಕೆಯನ್ನು ಕೂಡ ನೀಡಿದರು. ಮುಂದಿನದಿನಗಳಲ್ಲಿ ಕಿಡಿಗೇಡಿಗಳು ಬಾಲ ಬಿಚ್ಚಿದಲ್ಲಿ ಅವರ ಮನೆಯನ್ನು ಕೇಸರಿಮಯ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಹಿಂಪ ಉಡುಪಿ ಜಿಲ್ಲಾ ಸೇವಾ ಪ್ರಮುಖ್ ದೀಪಕ್ ಮೂಡುಬೆಳ್ಳೆ, ಉಡುಪಿ ಬಜರಂಗದಳ ಗ್ರಾಮಾಂತರ ಪ್ರಖಂಡ ಸಂಚಾಲಕರಾದ ಅನಿಲ್ ಅತ್ರಾಡಿ, ಶಿರ್ವ ವಲಯಧ್ಯಕ್ಷರಾದ ವಿಖ್ಯಾತ್ ಭಟ್, ಮೋಕ್ಷಗಿರಿ ವಿಂಹಿಪ ಅಧ್ಯಕ್ಷರಾದ ಅಶೋಕ್ ಶೆಟ್ಟಿ , ಬಜರಂಗದಳ ಸಂಚಾಲಕರಾದ ನಿಶಾಂತ್ ಪೂಜಾರಿ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೇಂದ್ರ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಕಡೆಗಣಿಸಿರುವುದು ಅವರ ಬೋಧನೆಗಳನ್ನು ಕಡೆಗಣಿಸಿದಂತೆ : ವಿನಯ್ ಕುಮಾರ್ ಸೊರಕೆ

Posted On: 16-01-2022 06:13PM
ಗಣರಾಜ್ಯೋತ್ಸವ ಪೆರೇಡಿಗೆ ಕೇರಳ ಸರಕಾರವು ಕಳುಹಿಸಿದ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ತಡೆ ಹಿಡಿದಿರುವ ಕೇಂದ್ರದ ನಿಲುವು ಗುರುಗಳಿಗೆ ಹಾಗೂ ಹಿಂದುಳಿದ ವರ್ಗದವರಿಗೆ ತೋರಿಸಿದ ಅಗೌರವ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಜಾತಿ ಪದ್ಧತಿ ಬಲವಾಗಿ ಬೇರೂರಿದ್ದ ಸಮಯದಲ್ಲಿ ಸಮಾಜದ ಶೋಷಣೆಗೊಳಗಾದ ಜನರಿಗೆ ದೇವರ ಪಾರ್ಥನೆ ಮಾಡಲು ಹಾಗೂ ದೇವಸ್ಥಾನಕ್ಕೂ ಪ್ರವೇಶವಿಲ್ಲದ ಸಮಯದಲ್ಲಿ ಗುರೂಜಿ ಧ್ವನಿಯಾಗಿ ಆತ್ಮವಿಶ್ವಾಸ ತುಂಬಿದರು.ಅವರಲ್ಲಿ ಸಮಾನತೆಯ ಆಶಾಕಿರಣ ಬೀರಿ, ಶೋಷಣೆಗೊಳಗಾದ ಜನರಿಗೆ ಭರವಸೆ ನೀಡಿದರು.
ಒಂದೇ ಜಾತಿ,ಒಂದೇ ಮತ ಎಂಬ ವಿಶಾಲ ಸಂದೇಶ ನೀಡಿ, ಮಹಾ ಮಾನವತಾವಾದಿಯಾದ ಗುರುಗಳ ಸ್ತಬ್ದ ಚಿತ್ರವನ್ನು ಕಡೆಗಣಿಸಿರುವುದು ಅವರ ಬೋಧನೆಗಳನ್ನು ಕೇಂದ್ರ ಸರಕಾರ ಕಡೆಗಣಿಸಿದಂತಿದೆ.ಗುರುಗಳನ್ನು ಭಕ್ತಿಯಿಂದ ಆರಾಧಿಸುವ ಬಿಜೆಪಿ ನಾಯಕರ ಮೌನ ಹಿಂದುಳಿದವರ ಬಗ್ಗೆ ಹಾಗೂ ನಾರಾಯಣ ಗುರುಗಳ ಬಗ್ಗೆ ಅವರಿಗಿರುವ ಕಾಳಜಿಯನ್ನು ಅನುಮಾನದಿಂದ ನೋಡುವಂತಾಗಿದೆ ಎಂದಿದ್ದಾರೆ. ಬಿಜೆಪಿ ಸರಕಾರವು ರಾಜ್ಯ ಹಾಗೂ ದೇಶದ ಅಭಿವೃದ್ಧಿಯನ್ನು ಕಡೆಗಣಿಸಿ, ವಿರೋಧ ಪಕ್ಷದವರ ವಾಕ್ ಸ್ವಾತಂತ್ರ್ಯವನ್ನು ದಮನ ಮಾಡುತ್ತಿದೆ. ವಿರೋಧ ಪಕ್ಷದವರ ಮೇಲೆ ಸುಳ್ಳು ಸುಳ್ಳು ಕೇಸುಗಳನ್ನು ದಾಖಲಿಸುವುದರ ಮೂಲಕ ಜವಾಬ್ದಾರಿಯುತವಾಗಿ ಕೆಲಸ ಮಾಡುವ ವಿರೋಧ ಪಕ್ಷವನ್ನು ಬೆದರಿಸುತ್ತಿದೆ.ಕೋವಿಡ್ ನಿಯಮಾವಳಿಯನ್ನು ದುರುದ್ದೇಶಕ್ಕಾಗಿ ಉಪಯೋಗಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸನ್ನು ದಾಖಲಿಸುವುದರ ಜೊತೆಗೆ, ಕೋವಿಡ್ ನಿಯಮಾವಳಿಗಳು ಇದ್ದರು ಬಿಜೆಪಿಯ ಕಾರ್ಯಕ್ರಮಕ್ಕೆ ಯಾವುದೇ ಕೇಸ್ ನಿರ್ಬಂಧನೆ ಇಲ್ಲವಾಗಿದೆ,ಸಮಾಜದ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಸಮಾಜ ಕಲ್ಯಾಣ ಸಚಿವರ ಕ್ಷೇತ್ರದಲ್ಲಿ ಕೋಟದ ಕೊರಗ ಸಮಾಜದ ಮೇಲೆ ನಡೆದ ಘಟನೆ ಮತ್ತು ಇತ್ತೀಚಿಗೆ ನಡೆದ ಅವಳಿ ಕೊಲೆ ದೊಡ್ಡ ಸಾಕ್ಷಿ ಎಂದರು.
ಇತ್ತೀಚಿಗೆ ಬಿಜೆಪಿ ಕಾರ್ಯಕರ್ತರಿಂದಲೇ ಯಡಮೊಗ್ಗೆ ಉದಯ ಗಾಣಿಗರ ಕೊಲೆ ಮತ್ತು ಕೆಂಜೂರು ಪ್ರವೀಣ್ ಪೂಜಾರಿ ಕೊಲೆ ಎಲ್ಲವೂ ಹಿಂದುಳಿದ ವರ್ಗದವರ ಮೇಲೆ ನಡೆದ ದೌರ್ಜನ್ಯವಾಗಿದೆ,ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯನ್ನು ಭಕ್ತಿಯಿಂದ ಆರಾಧನೆ ಮಾಡುವ ಬಹುಸಂಖ್ಯೆಯ ಹಿಂದುಳಿದ ವರ್ಗದವರ ಮನಸಿನ ಭಾವನೆಗೆ ಧಕ್ಕೆಯಾಗಿದೆ ಇದೊಂದು ಗಂಭೀರ ವಿಷಯವಾಗಿದ್ದು ಸರಕಾರವು ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದು ಸೊರಕೆ ಆಗ್ರಹಿಸಿದ್ದಾರೆ.
ಸಮಾಜ್ಯೋದಾರಕ್ಕೆ ಶ್ರಮಿಸಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿರುವುದು ತಪ್ಪು: ಯೋಗೀಶ್ ಶೆಟ್ಟಿ

Posted On: 16-01-2022 12:02PM
ಕಾಪು : ಸಮಾಜ್ಯೋದಾರಕ್ಕೆ ಶ್ರಮಿಸಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳು ಜಾತಿ ಅಸಮಾನತೆ ನೀತಿ, ಒಂದೇ ಜಾತಿ ಒಂದೇ ಮತ ಒಬ್ಬರೇ ದೇವರು ಎಂದು ಸಾರಿ, ಜನರಿಗೆ ಆತ್ಮ ಬಲವನ್ನು ಮೂಡಿಸಿದವರು ಅಂಥವರ ಚಿತ್ರವಿದ್ದ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿರುವುದು ತಪ್ಪು ಎಂದು ಉಡುಪಿ ಜಿಲ್ಲಾ ಜನತಾದಳ ಪಕ್ಷವು ಖಂಡಿಸಿದೆ.
ಆಯ್ಕೆ ಸಮಿತಿಯಲ್ಲಿ ಸಮಾನ ಮನಸ್ಕರು ಇಲ್ಲದಿರುವುದು ಕಾರಣ ಕೇಂದ್ರ ಸರಕಾರದ ನಿರ್ಧಾರ ಸರಿಯಲ್ಲ,ಕೂಡಲೇ ಶ್ರೀ ನಾರಾಯಣ ಗುರುಗಳ ಚಿತ್ರವಿರುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪೆರೇಡ್ ಗೆ ಸಮಿತಿಯು ಅಂಗೀಕಾರ ಮಾಡಬೇಕು. ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಅವರು ಪತ್ರಿಕಾ ಪ್ರಕಟನೆಯ ಮೂಲಕ ಆಗ್ರಹಿಸಿದ್ದಾರೆ.