Updated News From Kaup
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಉಡುಪಿಗೆ ಅಂಗಾರ, ದಕ್ಷಿಣ ಕನ್ನಡಕ್ಕೆ ಸುನೀಲ್ ಕುಮಾರ್, ಉತ್ತರ ಕನ್ನಡಕ್ಕೆ ಕೋಟಾ ಶ್ರೀನಿವಾಸ ಪೂಜಾರಿ

Posted On: 24-01-2022 05:56PM
ಉಡುಪಿ : ರಾಜ್ಯದ 28 ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಇದರಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ಸುನೀಲ್ ಕುಮಾರ್, ಉಡುಪಿ ಜಿಲ್ಲೆಗೆ ಎಸ್. ಅಂಗಾರ, ಕೋಟಾ ಶ್ರೀನಿವಾಸ ಪೂಜಾರಿ ಅವರು ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.
ಕಟಪಾಡಿ : ಶಿಲಾನ್ಯಾಸ ಕಾರ್ಯಕ್ರಮ

Posted On: 22-01-2022 03:58PM
ಕಟಪಾಡಿ : ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿ ಇಲ್ಲಿಯ ಮಾಯಂದಾಲ್ ಗುಡಿ, ಕಾಂತೇರಿ ಧೂಮಾವತಿ ಗುಡಿ, ಬೊಬ್ಬರ್ಯ ಗುಡಿ ಹಾಗೂ ಸಮುದಾಯ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜನವರಿ 23, ಆದಿತ್ಯವಾರ ಪೂರ್ವಾಹ್ನ ಗಂಟೆ 11ಗಂಟೆಗೆ ಜರಗಲಿದೆ.
ಅಧ್ಯಕ್ಷತೆಯನ್ನು ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಶೋಕ್ ಎನ್ ಪೂಜಾರಿ ವಹಿಸಲಿದ್ದು, ಅತಿಥಿಗಳಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೂಡಬೆಟ್ಟುವಿನ ಆಡಳಿತ ಮೊಕ್ಕೇಸರರಾದ ಗೋವಿಂದಾಸ್ ಶೆಟ್ಟಿ, ಕಟಪಾಡಿ ಬೀಡು, ಗರಡಿ ಜೀರ್ಣೋದ್ಧಾರ ಸಮಿತಿ, ಮುಂಬೈ ಅಧ್ಯಕ್ಷರಾದ ಗೋಪಾಲ್ ಕಾಂಚನ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಮಹಿಳೆಗೆ ಚೂರಿ ಇರಿತ, ಪ್ರಾಣಾಪಾಯದಿಂದ ಪಾರು

Posted On: 22-01-2022 12:56PM
ಕಾಪು : ಇಲ್ಲಿನ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿ'ಸೋಜಾ(35) ಅವರಿಗೆ ನೆರೆ ಮನೆಯಾತ ಚೂರಿಯಿಂದ ಇರಿದ ಘಟನೆ ಕಳೆದ ರಾತ್ರಿ ನಡೆದಿದೆ.
ರೀನಾರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತದ ಚಟ ಹೊಂದಿದ್ದ ನೆರೆಮನೆಯ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯು ಕ್ಷುಲ್ಲಕ ಕಾರಣಗಳಿಗಾಗಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
ರೀನಾ ಇನ್ನೋರ್ವ ಮಹಿಳೆಯೊಂದಿಗೆ ತನ್ನ ಮನೆ ಬಳಿ ಮಾತನಾಡುತ್ತಿದ್ದಾಗ ಏಕಾಏಕಿ ಬಂದ ವ್ಯಕ್ತಿ ಹೊಟ್ಟೆಗೆ ಇರಿದಿದ್ದಾನೆ. ರೀನಾ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೋಲಿಸರ ಮೇಲೆ ಹಲ್ಲೆ : ಆರೋಪಿಗಳ ಬಂಧನ

Posted On: 22-01-2022 10:51AM
ಮಂಗಳೂರು : ಇಲ್ಲಿನ ಪೂರ್ವ ಪೋಲಿಸ್ ಠಾಣೆ, ಕದ್ರಿ ಇಲ್ಲಿಯ ಪೋಲಿಸರಾದ ಶಿವಾನಂದ ಮತ್ತು ಬೀರೇಂದ್ರ ದ್ವಿಚಕ್ರ ವಾಹನದಲ್ಲಿ ವಾಮಂಜೂರಿನ ತಮ್ಮ ವಸತಿ ಗೃಹಕ್ಕೆ ತೆರಳುತ್ತಿರುವ ಸಮಯ ರಾತ್ರಿಯ 10ಗಂಟೆಯ ಸುಮಾರಿಗೆ ಯೆಯ್ಯಾಡಿ ಜಂಕ್ಷನ್ ಸಮೀಪ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಡೆದು ನಿಲ್ಲಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಪ್ರಕರಣ ಪೂರ್ವ ಪೋಲಿಸ್ ಠಾಣೆ, ಕದ್ರಿ ಇಲ್ಲಿ ದಾಖಲಾಗಿದೆ.
ಹಲ್ಲೆ ಮಾಡಿದ ಆರೋಪಿಗಳಾದ ಡ್ಯಾನಿ ಮತ್ತು ಮ್ಯಾಕ್ಸಿಮಾ ನೊರೊನ್ಹರನ್ನು ಬಂಧಿಸಲಾಗಿದೆ.
ಜಿಲ್ಲೆಯಲ್ಲಿ 4253 ಯುವ ಮತದಾರರ ನೋಂದಣಿ

Posted On: 21-01-2022 09:49PM
ಉಡುಪಿ : ಜಿಲ್ಲೆಯಲ್ಲಿ ಈ ಸಾಲಿನ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ 4253 ಯುವ ಮತದಾರರು ನೋಂದಣಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ಹಾಲ್ನಲ್ಲಿ, ಭಾರತೀಯ ಚುನಾವಣಾ ಆಯೋಗವು 1-1-2022 ನ್ನು ಅರ್ಹತಾ ದಿನವನ್ನಾಗಿಟ್ಟುಕೊಂಡು ಸಿದ್ಧಪಡಿಸಿರುವ ಭಾವಚಿತ್ರವುಳ್ಳ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ, ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 4,87,676 ಪುರುಷರು, 5,25,155 ಮಹಿಳಾ ಮತದಾರರು, ಇತರೆ 11 ಸೇರಿದಂತೆ ಒಟ್ಟು 10,12,842 ಮತದಾರರಿದ್ದು, ಈ ಬಾರಿಯ ಪರಿಷ್ಕರಣೆ ಸಂದರ್ಭದಲ್ಲಿ ಹೊಸ ಸೇರ್ಪಡೆಗಾಗಿ 7862, ಹೆಸರು ತೆಗೆದು ಹಾಕಲು 16815, ತಿದ್ದುಪಡಿಗಾಗಿ 2962, ವಿಧಾನಸಭಾ ವ್ಯಾಪ್ತಿಯಲ್ಲಿ ಬದಲಾವಣೆಗಾಗಿ 552 ಅರ್ಜಿಗಳು ಸ್ವೀಕೃತವಾಗಿದ್ದು, 4253 ಯುವ ಮತದಾರರು ನೋಂದಣಿಯಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗಾಗಿ 4 ದಿನಗಳ ವಿಶೇಷ ಅಭಿಯಾನ ನಡೆಸಲಾಗಿದ್ದು, ಮನೆ ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಸಹ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಅಲ್ಲದೆ ಜಿಲ್ಲಾ ಮಟ್ಟದ ಮತದಾರರ ಸಹಾಯವಾಣಿ ಕೆಂದ್ರದ ಉಚಿತ ಸಹಾಯವಾಣಿ ಸಂಖ್ಯೆ 1950 ಮತದಾರರಿಗೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ ಎಂದರು. ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ನೀಡಿದ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿಯ ಸಾಫ್ಟ್ ಪ್ರತಿಯನ್ನು ಸಿ.ಡಿ ಮೂಲಕ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲೆಯ ಬಿ.ಜೆ.ಪಿ., ಕಾಂಗ್ರೆಸ್, ಜೆಡಿಎಸ್, ಮತ್ತು ಸಿಪಿಐ(ಎಂ) ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ

Posted On: 21-01-2022 09:42PM
ಉಡುಪಿ : ಜನವರಿ 26 ರಂದು ನಡೆಯುವ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಣೆ ಕುರಿತಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ಅದ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ಹಾಲ್ನಲ್ಲಿ ಇಂದು ಸಭೆ ನಡೆಯಿತು.
ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕೋವಿಡ್ ಮಾರ್ಗಸೂಚಿಗಳ ಅನ್ವಯ ಅಜ್ಜರಕಾಡು ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಆಯೋಜಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್, ಕರಾವಳಿ ಕಾವಲು ಪಡೆ, ಅಗ್ನಿಶಾಮಕ, ಗೃಹರಕ್ಷಕ, ಅರಣ್ಯ ಮತ್ತು ಅಬಕಾರಿ ಇಲಾಖೆಯಿಂದ ಮತ್ತು ಕಾಲೇಜು ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಪಥ ಸಂಚಲನ ಏರ್ಪಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೃಷಿಕರಿಗೆ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿಕಲಚೇತನ ವಿದ್ಯಾರ್ಥಿಗಳಿಗೆ ಸನ್ಮಾನಿಸುವಂತೆ ತಿಳಿಸಿದರು. ಕೋವಿಡ್ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡದಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಗಣರಾಜ್ಯೋತ್ಸವ ಕಾರ್ಯಕ್ರಮದ ನೇರ ಪ್ರಸಾರವನ್ನು ವೆಬ್ಕಾಸ್ಟಿಂಗ್ ಮೂಲಕ ಪ್ರಸಾರ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ಆಯೋಜಿಸಲು ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹನೀಯರ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತ: ಜಿಲ್ಲಾಧಿಕಾರಿ ಕೂರ್ಮಾರಾವ್ .ಎಂ

Posted On: 21-01-2022 09:37PM
ಉಡುಪಿ : ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಮಹನೀಯ ವ್ಯಕ್ತಿಗಳಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಅವರು ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಹಾಗೂ ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರು ಜಾತಿ ಧರ್ಮ ಬೇಧವಿಲ್ಲದೇ ಮಾಡಿರುವ ತ್ರಿವಿಧ ದಾಸೋಹ ಸೇವೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿಲಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಹಾಗೂ ದಾಸೋಹ ದಿನ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಮಹನೀಯ ವ್ಯಕ್ತಿಗಳು ನೀಡಿರುವ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಹಾಗೂ ತಮ್ಮ ದೈನಂದಿನ ಕರ್ತವ್ಯಗಳಲ್ಲಿ ಅಳವಡಿಸಿಕೊಂಡು ಅದರಂತೆ ನಡೆಯಬೇಕು. ಇಂತಹ ವ್ಯಕ್ತಿಗಳ ಜೀವನ ಚರಿತ್ರೆಯ ಬಗ್ಗೆ ಅರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣನಾಥ ಎಕ್ಕಾರು, ಪ್ರಜಾಪ್ರಭುತ್ವದ ಮೂಲ ಉದ್ದೇಶವಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವವನ್ನು ಶರಣರು ಮತ್ತು ಅನೇಕ ಮಹನೀಯರು 800 ವರ್ಷಕ್ಕೂ ಮೊದಲೇ ತಿಳಿಸಿದ್ದರು. ವಿಶ್ವ ಮಾನವ ತತ್ವದ ಪ್ರತಿಪಾದನೆ ಮಾಡಿದ್ದರು ಎಂದರು. ಅಂಬಿಗರ ಚೌಡಯ್ಯ ಅವರು, ಸಮಾಜದಲ್ಲಿನ ಅಸಮಾನತೆ ಬಗ್ಗೆ ನೇರ, ದಿಟ್ಟವಾಗಿ ನುಡಿದಿದ್ದು, ಅವರ ಸಂದೇಶಗಳಲ್ಲಿ ವಾಸ್ತವಿಕತೆ, ವೈಚಾರಿಕತೆ, ಜ್ಞಾನ ಎಲ್ಲವೂ ಇದೆ. ಅಂತರಂಗ ಶುದ್ಧತೆಯೇ ನಿಜವಾದ ಮಾನವ ಧರ್ಮ ಎಂದಿದ್ದರು.
ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರು, ಸಮಾಜವೇವೆಯ ಸಿದ್ಧಾಂತವನ್ನು ಕಾಯಕವನ್ನಾಗಿ ಮಾಡಿಕೊಂಡು, ಜನಸಾಮಾನ್ಯರಿಗಾಗಿ ನಾಡಿನಾದ್ಯಂತ ಹಲವು ಕೆರೆ, ಬಾವಿಗಳನ್ನು ನಿರ್ಮಿಸಿ, ಶರಣ ಪರಂಪರೆಯಲ್ಲಿ ಮಾನವ ಸೇವೆಯ ಮೂಲಕ ಸಮಾಜಸೇವೆಯನ್ನು ಪರಿಚಯಿಸಿದ್ದರು ಎಂದರು. ಮಹಾಯೋಗಿ ವೇಮನ ಅವರು ಕವಿ, ಯೋಗಿ, ತತ್ವಜ್ಞಾನಿ, ದಾರ್ಶನಿಕರಾಗಿದ್ದು, ಸುಸಂಸ್ಕೃತ ಬದುಕಿನ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಎಂದರು. ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಕುರಿತು ಮಾತನಾಡಿದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಲಕ್ಷಾಂತರ ಮಂದಿಗೆ ಉಚಿತ ಶಿಕ್ಷಣ, ವಸತಿ, ಆಹಾರ ಒದಗಿಸುವ ಮೂಲಕ ಶಿವಕುಮಾರ ಸ್ವಾಮೀಜಿ ಅವರು ನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಹೆಚ್ಚಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು. ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು 60 ನೇ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ಭಜನಾ ಸಂಭ್ರಮ

Posted On: 21-01-2022 09:28PM
ಉಡುಪಿ : ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು 60 ನೇ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ಭಜನಾ ಸಂಭ್ರಮಕ್ಕೆ ವಿಘ್ನವಿನಾಶಕ ವಿಘ್ನೇಶ್ವರನಿಗೆ ಗಣಹೋಮ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 4 ದಿನಗಳ ಕಾಲ ನಗರ ಭಜನೆ ನಡೆಯಲಿದೆ.
25 ನೇ ತಾರೀಕಿನಂದು ಸಂಜೆ 4ಗಂಟೆಗೆ ಪರಮಪೂಜ್ಯ ಕೇಮಾರು ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ , ಖ್ಯಾತ ವಿಮರ್ಶಕರೂ, ವಾಗ್ಮಿಯೂ ಆದ ಶ್ರೀಕಾಂತ ಶೆಟ್ಟಿ ಇವರಿಂದ ಭಜನಾ ಸಂಸ್ಕಾರ ಕುರಿತಂತೆ ವಿಶ್ಲೇಷಣೆ, ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ 60 ಗಂಟೆಗಳ ನಿರಂತರ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
26 ನೇ ತಾರೀಕಿನಂದು ಬೆಳಿಗ್ಗೆ ಸತ್ಯನಾರಾಯಣ ಪೂಜೆ. 27 ನೇ ತಾರೀಕಿನಂದು ಬೆಳಿಗ್ಗೆ ಶ್ರೀ ಶನಿಕಲ್ಪೋಕ್ತ ಪೂಜೆ ನಡೆಯಲಿದೆ ಎಂದು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು ಇದರ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ

Posted On: 21-01-2022 09:14PM
ಮಂಗಳೂರು : ಕುದ್ರೋಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಸುಮಾರು 5 ತಿಂಗಳಿನಿಂದ ಸೂಫಿಯಾ ಬೇಗಂ ಮತ್ತು ಆಕೆಯ ಗಂಡ ವಾಸ್ತವ್ಯ ಮಾಡಿಕೊಂಡಿರುತ್ತಾರೆ. ಜನವರಿ 21ರಂದು ಸೂಫಿಯಾ ಬೇಗಂ ಮಲಗಿದ್ದ ಕೋಣೆಯ ಕಿಟಕಿಯ ಕಬ್ಬಿಣದ ಸರಳಿಗೆ ಚೂಡಿದಾರದ ಶಾಲನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.
ಆಕೆಯ ಗಂಡ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಸೂಫಿಯಾ ಬೇಗಂ ಮನೆಯಲ್ಲೇ ಇರುವುದಾಗಿದೆ. ಜನವರಿ 20ರಂದು ರಾತ್ರಿ ಎಂದಿನಂತೆ ಗಂಡ, ಹೆಂಡತಿ ಊಟ ಮಾಡಿ ಮಲಗಿದ್ದು, 21 ರ ಮುಂಜಾನೆ 4ಗಂಟೆಗೆ ಇಬ್ಬರೂ ಎದ್ದು ಅಡುಗೆ ಕೆಲಸ ಮಾಡಿ ಮಲಗಿರುತ್ತಾರೆ. ಬೆಳಿಗ್ಗೆ 07.45 ಗಂಟೆಗೆ ಆಕೆಯ ಗಂಡ ಎಚ್ಚರಗೊಂಡು ನೋಡಿದಾಗ ಹೆಂಡತಿ ಸೂಫಿಯಾ ಬೇಂಗಂ ಮಲಗಿದ್ದ ಕೋಣೆಯ ಕಿಟಕಿಯ ಕಬ್ಬಿಣದ ಸರಳಿಗೆ ಚೂಡಿದಾರದ ಶಾಲನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿದ್ದು, ಅವರನ್ನು ಕರೆದಾಗ ಸ್ಪಂದಿಸದೇ ಇದ್ದ ಕಾರಣ ಕೂಡಲೇ ಆಕೆಯ ಕುತ್ತಿಗೆಗೆ ಕಟ್ಟಿದ್ದ ಶಾಲನ್ನು ಬಿಚ್ಚಿ ನೆಲದಲ್ಲಿ ಮಲಗಿಸಿರುತ್ತಾರೆ.
ಬಳಿಕ ಸ್ನೇಹಿತರಿಗೆ ಹಾಗೂ ನೆರೆಹೊರೆಯವರಿಗೆ ತಿಳಿಸಿದ್ದು ಅವರು ಬಂದು ನೋಡಿ ಪರೀಕ್ಷಿಸಿದಾಗ ಸೂಫಿಯಾ ಬೇಗಂ ರವರ ದೇಹವು ತಣ್ಣಗಾಗಿದ್ದು, ಮೃತಪಟ್ಟಂತೆ ಕಂಡುಬಂದಿರುತ್ತದೆ. ಮೃತ ಸೂಫಿಯಾ ಬೇಗಂ ಮೃತ ಶರೀರದ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ದೂರುದಾರ ವಿನಂತಿಸಿದ್ದಾರೆ.
ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಹನಿಟ್ರಾಪ್ ಮಾಡುತ್ತಿದ್ದ ದಂಪತಿಗಳ ಸೆರೆ

Posted On: 21-01-2022 08:28PM
ಮಂಗಳೂರು : ನಗರದ ಪದವಿನಂಗಡಿನ ಬಾಡಿಗೆ ಮನೆಯೊಂದಕ್ಕೆ ದಂಪತಿಗಳ ನಡುವಿನ ಸಮಸ್ಯೆಯನ್ನು ಪರಿಹಾರ ಮಾಡಲು ಮನೆಯಲ್ಲಿ ಪೂಜೆ ಮಾಡಬೇಕೆಂದು ಪುರೋಹಿತರನ್ನು ಕರೆಯಿಸಿ ಹನಿಟ್ರಾಪ್ ಮಾಡಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ದಂಪತಿ ಆರೋಪಿಗಳನ್ನು ದಸ್ತಗಿರಿ ಮಾಡಿ ಹನಿಟ್ರಾಪ್ ಪ್ರಕರಣವೊಂದನ್ನು ಭೇದಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯ ಪುರೋಹಿತ ಹಾಗೂ ಜ್ಯೋತಿಷ್ಯ ಶಾಸ್ತ್ರ ವೃತ್ತಿಯ ವ್ಯಕ್ತಿಯೋರ್ವರನ್ನು ಭೇಟಿಯಾಗಿದ್ದ ದಂಪತಿಗಳು ತಮ್ಮ ಮನೆಯಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಮನೆಯಲ್ಲಿ ಪೂಜೆಯನ್ನು ಮಾಡಿಕೊಡಬೇಕೆಂದು ಪುರೋಹಿತರನ್ನು ಮನೆಗೆ ಕರೆಯಿಸಿಕೊಂಡು ಮನೆಯಲ್ಲಿರುವ ಸಮಯ ಪುರೋಹಿತರ ಜೊತೆಗಿರುವ ಫೋಟೋ ಮತ್ತು ವೀಡಿಯೋವನ್ನು ತೆಗೆದು ನಂತರ ಈ ವೀಡಿಯೋ ಹಾಗೂ ಫೋಟೋವನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹಲವು ಬಾರಿ ಹೆದರಿಸಿ, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ, ಹಣದ ಬೇಡಿಕೆ ಇಟ್ಟು ರೂ 15 ಲಕ್ಷ ನಗದು ಹಣ ಹಾಗೂ ಸುಮಾರು 34 ಲಕ್ಷ ರೂಪಾಯಿಗಳನ್ನು ಆರೋಪಿಗಳು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಕೈಗೊಂಡ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತ್ರತ್ವದ ತಂಡ ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ಪಡೆದು ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಾದ ಭವ್ಯ (30)- ಮೇನ್ನ, ನೀಡತಾ, ಮೈಲಾಪುರ ಗ್ರಾಮ, ಶನಿವಾರ ಸಂತೆ, ಸೋಮವಾರಪೇಟೆ, ಕೊಡಗು ಜಿಲ್ಲೆ. ಪ್ರಸ್ತುತ ವಾಸ ಫ್ಲಾಟ್ ನಂಬ್ರ: 104, ಮೇರಿಹಿಲ್ ವ್ಯೂ ಆಪಾರ್ಟ್ ಮೆಂಟ್, ಮೇರಿಹಿಲ್ ಮಂಗಳೂರು. ವೃತ್ತಿ ಮನೆ ವಾರ್ತೆ. ಕುಮಾರ್ @ ರಾಜು (35)-ಅರಕಲಗೂಡು ತಾಲೂಕು, ಹಾಸನ ಜಿಲ್ಲೆ ಪ್ರಸ್ತುತ ಫ್ಲಾಟ್ ನಂಬ್ರ: 104, ಮೇರಿಹಿಲ್ ವ್ಯೂ ಆಪಾರ್ಟ್ ಮೆಂಟ್, ಮೇರಿಹಿಲ್ ಮಂಗಳೂರು. ವೃತ್ತಿ ಕಾರು ಚಾಲಕ. ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿಗಳು ಇತರ ಕೆಲವು ವ್ಯಕ್ತಿಗಳಿಗೆ ಇದೇ ರೀತಿ ಹನಿಟ್ಯ್ರಾಪ್ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ. ಆರೋಪಿಗಳ ವಶದಿಂದ ರೂ 37,000/- ಮೌಲ್ಯದ ಎರಡು 2 ಚಿನ್ನದ ರಿಂಗ್, ನಗದು ಹಣ ರೂ. 31,000/-ರೂ ಮತ್ತು 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ಜೊತೆ ಇತರರು ಕೂಡಾ ಭಾಗಿಯಾಗಿ ಹಣವನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ. ಆರೋಪಿಗಳು ಇನ್ನಷ್ಟು ಹಣಕ್ಕಾಗಿ ಪೊಲೀಸರ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರ, ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಬೆದರಿಕೆ ಹಾಕಿರುವುದಲ್ಲದೇ ಇನ್ನಷ್ಟು ಹಣವನ್ನು ನೀಡದೇ ಇದ್ದರೆ ಸುದ್ದಿ ಮಾಧ್ಯಮಗಳಲ್ಲಿ ಫೋಟೋ ಮತ್ತು ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಆರೋಪಿಗಳ ಪೈಕಿ ಕುಮಾರ್ ನು ತನ್ನ ಹೆಸರನ್ನು ರಾಜು ಎಂದು ತಿಳಿಸಿ ಮಧ್ಯವರ್ತಿಯಾಗಿ ದೂರುದಾರರ ಜೊತೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ಲಾನ್ ಮಾಡಿಕೊಂಡು ಹಣ ವಸೂಲಿ ಮಾಡಿರುವುದಾಗಿದೆ.
ಹನಿಟ್ರಾಪ್ ಮಾಡಿ ಸುಲಿಗೆ ಮಾಡಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನವನ್ನು ಸಾಗಿಸುತ್ತಿದ್ದರು. ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದ ಆರೋಪಿಗಳು ಈ ಕೃತ್ಯವೆಸಗಿದ ನಂತರ ದೂರುದಾರರ ಸುಲಿಗೆ ಮಾಡಿದ ಹಣದಲ್ಲಿ ರೂ 10 ಲಕ್ಷ ಹಣವನ್ನು ನೀಡಿ ಫ್ಲಾಟ್ ವೊಂದನ್ನು ಲೀಸ್ ಗೆ ಪಡೆದುಕೊಂಡಿರುವುದಲ್ಲದೇ, ಈ ಫ್ಲಾಟ್ ಗೆ ಸುಮಾರು 7 ಲಕ್ಷ ಮೌಲ್ಯದ ಮನೆ ಸಾಮಾಗ್ರಿಗಳನ್ನು ಖರೀದಿಸಿರುತ್ತಾರೆ. ಅಲ್ಲದೇ ಹೊಸ ದ್ವಿಚಕ್ರ ವಾಹನವೊಂದನ್ನು ಖರೀದಿಸಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿರುತ್ತದೆ. ಆರೋಪಿಗಳ ಪೈಕಿ ಭವ್ಯಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 5 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿರುತ್ತದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ಯವರಾದ ರಾಜೇಂದ್ರ ಬಿ, ಪ್ರದೀಪ ಟಿ ಆರ್ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.