Updated News From Kaup

ಬಿರುವೆರ್ ಕಾಪು ಸೇವಾ ಸಮಿತಿ ಉದ್ಘಾಟನೆ, ಸಮ್ಮಾನ ಸಮಾರಂಭ, ಸಹಾಯ ಹಸ್ತಾಂತರ

Posted On: 28-01-2022 10:26PM

ಮೂಳೂರು : ನಾರಾಯಣಗುರುಗಳ ತತ್ವಾದರ್ಶಗಳು ಅಜರಾಮರ. ಅವುಗಳನ್ನು ಸಂಘ ಸಂಸ್ಥೆಗಳು ಪ್ರಚುರಪಡಿಸಬೇಕಾದ ಅನಿವಾರ್ಯತೆಯಿದೆ. ಬಿರುವೆರ್ ಕಾಪು ಸೇವಾ ಸಮಿತಿಯು ಸಮಾಜಮುಖಿ ಚಿಂತನೆಯ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದು ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು. ಅವರು ಮೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ಜರಗಿದ ಬಿರುವೆರ್ ಕಾಪು ಸೇವಾ ಸಮಿತಿಯ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಮೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಪೂಜಾರಿ ರಾಜಮನೆ ಮೂಳೂರು ಬಿರುವೆರ್ ಕಾಪು ಸೇವಾ ಸಮಿತಿಯನ್ನು ಉದ್ಘಾಟಿಸಿದರು.

ಬಿರುವೆರ್ ಕಾಪು ಸೇವಾ ಸಮಿತಿಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ದುಂದು ವೆಚ್ಚಗಳಿಗಳಿಗೆ ಕಡಿವಾಣ ಹಾಕಿ ಅದರಿಂದ ಉಳಿಸಿದ ಹಣವನ್ನು ಸಮಾಜಕಾರ್ಯಗಳಿಗೆ ಉಪಯೋಗಿಸುವ ಬಗ್ಗೆ ಚಿಂತಿಸಬೇಕಾಗಿದೆ. ಸಂಘಟನೆಗಳ ಮೂಲಕ ನಮ್ಮ ಸಂಸ್ಕೃತಿ, ಆಚರಣೆಗಳ ಬಗೆಗೂ ಬೆಳಕು ಚೆಲ್ಲುವ ಅನಿವಾರ್ಯತೆಯಿದೆ ಎಂದರು. ವಕೀಲರಾದ ಸಂಕಪ್ಪ ಅಮೀನ್ ಮಾತನಾಡಿ ಸಂಘ ಸಂಸ್ಥೆಗಳು ಶಾಶ್ವತ. ಸಂಘಟನೆಗಳು ನಿಂತ ನೀರಾಗದೆ ಹರಿಯುವಂತಾಗಬೇಕು ಆಗ ಮಾತ್ರ ಅದರ ಉದ್ದೇಶ ಈಡೇರಿದಂತೆ ಎಂದರು.

ಸಮ್ಮಾನ : 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಉಡುಪಿಯ ವಕೀಲರಾದ ಸಂಕಪ್ಪ ಅಮೀನ್, ಕಾಪುವಿನ ವೃತ್ತ ನಿರೀಕ್ಷಕರಾದ ಪ್ರಕಾಶ್ ರನ್ನು ಸನ್ಮಾನಿಸಲಾಯಿತು. ಸಹಾಯ ಹಸ್ತ : ಆರೋಗ್ಯ, ಮನೆ ನಿರ್ಮಾಣ ಇತ್ಯಾದಿ ಫಲಾನುಭವಿಗಳಿಗೆ ಒಟ್ಟು 60 ಸಾವಿರ ರೂಪಾಯಿ ಸಹಾಯ ಧನ ಹಸ್ತಾಂತರಿಸಲಾಯಿತು. ಇದೆ ಸಂರ್ಭದಲ್ಲಿ ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯನ್ನು ಮೂಳೂರು ಬಿಲ್ಲವ ಸಂಘದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿರುವೆರ್ ಕಾಪು ಸೇವಾ ಸಮಿತಿಯ ಉಪಾಧ್ಯಕ್ಷರಾದ ಗಣೇಶ್ ಕೋಟ್ಯಾನ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾಪು ಬಿಲ್ಲವರ ಸಹಾಯಕ ಸಂಘದ ಗೌರವ ಅಧ್ಯಕ್ಷರಾದ ಪ್ರಭಾಕರ್ ಎಸ್ ಪೂಜಾರಿ, ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಮುಂಬಯಿ ಸಮಿತಿ ಅಧ್ಯಕ್ಷ ಎನ್.ಜಿ. ಪೂಜಾರಿ, ಬಿರುವೆರ್ ಕಾಪು ಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಬಿರುವೆರ್ ಕಾಪು ಸೇವಾ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪುರುಷೋತ್ತಮ ಸಾಲ್ಯಾನ್ ಸ್ವಾಗತಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವಿಸಿದರು. ಜೊತೆ ಕಾರ್ಯದರ್ಶಿ ಅತಿಥ್ ಸುವರ್ಣ ಪಾಲಮೆ ನಿರೂಪಿಸಿದರು. ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು ವಂದಿಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

Posted On: 27-01-2022 08:06PM

ಶಿರ್ವ : 73 ನೇ ಗಣರಾಜ್ಯೋತ್ಸವ ದಿನದಂದು ಶಿರ್ವ-ಮಂಚಕಲ್ ಲಯನ್ಸ್ ಕ್ಲಬ್ ಹಾಗೂ ಶಿರ್ವ ಸಂತ ಮೇರಿ ಕಾಲೇಜಿನ ‌ಎನ್ ಸಿ ಸಿ, ಎನ್ ಎಸ್ ಎಸ್, ರೆಂಜರ್ಸ್ ಮತ್ತು ರೋವರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ಶಿರ್ವದ ಪ್ರವಾಸಿ ಮಂದಿರ ವಠಾರವನ್ನು ಸ್ವಚ್ಛಗೊಳಿಸುವ ಶ್ರಮದಾನ ಕಾರ್ಯಕ್ರಮ ನಡೆಯಿತು.

ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತ, ಸುರಕ್ಷ , ಕಂಪನಿ ಸಾರ್ಜೆಂಟ್ ಕ್ವಾಟರ್ಮಸ್ಟರ್ ಮೋಹಿತ್ ಎನ್ ಸಾಲಿಯಾನ್, ಕಾರ್ಪೊರಲ್ ಧೀರಜ್ ಆಚಾರ್ಯ, ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್,ಎನ್‌ಎಸ್‌ಎಸ್ ಸ್ವಯಂಸೇವಕರು- ವೈಷ್ಣವಿ, ಮಿನಾಜ್, ಸಿಂಚನಾ, ಶ್ರೇಯಸ್, ಮೊಹಮ್ಮದ್ ಅಫ್ನಾನ್, ರೋವರ್ ಸ್ವಯಂಸೇವಕ - ಡಾರಿಲ್, ಜಾನ್ಸಿ ಸಹಕರಿಸಿದ್ದರು. ಒಟ್ಟು 50 ವಿದ್ಯಾರ್ಥಿಗಳು ಭಾಗವಹಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಾ. ಹೆರಾಲ್ಡ್ ಐವನ್ ಮೋನಿಸ್, ಪ್ರಾದ್ಯಾಪಕರುಗಳಾದ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್‌ಕುಮಾರ್, ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರೇಮನಾಥ್, ರಕ್ಷಾ , ರೋವರ್ಸ್ ಸ್ಕೌಟ್ ಲೀಡರ್ ಪ್ರಕಾಶ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯಶೋದ, ಶಿರ್ವ- ಮಂಚಕಲ್ ಲಯನ್ಸ್ ಕ್ಲಬಿನ ಅಧ್ಯಕ್ಷ ಅನಿಲ್ ಡಿ'ಸೋಜ ಕಾರ್ಯದರ್ಶಿ ಚಾರ್ಲ್ಸ್ ಮೋಹನ್ ನೊರೊನ್ಹ ಹಾಗೂ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮರಾಯ ಪಾಟ್ಕರ್ ಭಾಗವಹಿಸಿ ಗ್ರಾಮದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು ಕೈ ಜೋಡಿಸಬೇಕೆಂದು ಕರೆಯಿತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಶಿರ್ವ ಗ್ರಾಮ ಪಂಚಾಯತ್ ಸದಸ್ಯ ನ್ಯಾಯವಾದಿ ವಿಲ್ಸನ್ ರೋಡ್ರಿಗಸ್ ರವರು ಕಾರ್ಯಕ್ರಮದ ಮೇಲ್ವಿಚಾರಿಕೆಯನ್ನು‌ ವಹಿಸಿದ್ದರು.

ಕುರ್ಕಾಲು : ಗ್ರಾಮ ಒನ್ ಉದ್ಘಾಟನೆ

Posted On: 26-01-2022 07:23PM

ಕಾಪು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆಯು ಕುರ್ಕಾಲು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಶಂಕರಪುರದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷರು ಮಹೇಶ್ ಶೆಟ್ಟಿ ಉದ್ಘಾಟಿಸಿದರು. ಸಾಯಿ ಈಶ್ವರ್ ಗುರೂಜಿ ,ಧರ್ಮದರ್ಶಿಗಳು ಶ್ರೀ ದ್ವಾರಕಮಯಿ ಸಾಯಿಬಾಬಾ ಮಂದಿರ ಶಂಕರಪುರ ಇವರು ಅಧ್ಯಕ್ಷತೆ ವಹಿಸಿ ಆಶೀರ್ವದಿಸಿದರು.

750ಕ್ಕೂ ಹೆಚ್ಚಿನ ಸೇವೆಗಳನ್ನು ಒಳಗೊಂಡ ಇದು ಗ್ರಾಮ ಒನ್ ಕೇಂದ್ರವಾಗಿದ್ದು ಆಧಾರ್ , ಇ-ಸ್ಟ್ಯಾಂಪ್ ಹಾಗು ಸೇವಾ ಸಿಂಧುವಿನ ಎಲ್ಲ ಸೇವೆಗಳನ್ನು ಗ್ರಾಮೀಣ ಭಾಗದ ನಾಗರಿಕರಿಗೆ ಹಲವು ಸೇವೆಗಳನ್ನು ಒದಗಿಸುವ ಸೇವಾ ವೇದಿಕೆ ಇದಾಗಿರುತ್ತದೆ. ರಾಜೇಶ್ ನಾಯ್ಕ್ ಇದರ ವ್ಯವಸ್ಥಾಪಕರಾಗಿರುತ್ತಾರೆ.

ಮುಖ್ಯ ಅಥಿತಿಗಳಾಗಿ ಕುರ್ಕಾಲು ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಾಧಿಕಾರಿ ಕ್ಲೆರೆನ್ಸ್ ಕಾರ್ನೆಲಿಯೋ, ಸಮಾಜ ಸೇವಕರು, ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ಸಮಾಜ ಸೇವಕರು ,ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ದಿವಾಕರ್ ಬಿ ಶೆಟ್ಟಿ, ಸಮಾಜ ಸೇವಕರು ,ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ದಿವಾಕರ್ ಡಿ ಶೆಟ್ಟಿ, ಅಮರನಾಥ ಬಿ. ಶೆಟ್ಟಿ ,ಐರೋಳಿ ನವ ಮುಂಬೈ ,ರವಿರಾಜ್ ಸಾಲ್ಯಾನ್ ಮಲ್ಪೆ, ಹಿರಿಯ ವಿ.ಎಲ್. ಇ. ಉಡುಪಿ, ಆರ್. ಕೆ. ಮೆಂಡನ್ ಮಲ್ಪೆ ಮತ್ತು ವಿನೇಶ್ ನಾಯ್ಕ್, ಚೈತ್ರ , ನಿಶಾ ಉಪಸ್ಥಿತರಿದ್ದರು.

ಜಲಸಾಧಕ, ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕರಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ

Posted On: 25-01-2022 10:57PM

ಮಂಗಳೂರು: ಗುಡ್ಡಕ್ಕೆ ಸುರಂಗ ಕೊರೆದು ಜೀವಜಲ ಪಡೆದು ಬೋಳುಗುಡ್ಡೆಯಲ್ಲಿ ಹಸಿರೆಬ್ಬಿಸಿದ ಅಪರೂಪದ ಸಾಹಸಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಅಡ್ಯನಡ್ಕ ಸಮೀಪದ ಅಮೈ ನಿವಾಸಿ 77 ವರ್ಷದ ಮಹಾಲಿಂಗ ನಾಯ್ಕ ಕೃಷಿಗೆ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದು ನೀರು ಪಡೆದು, ಅದನ್ನು ಕೆರೆಯಲ್ಲಿ ಸಂಗ್ರಹಿಸಿ ಅದನ್ನು ಗುರುತ್ವ ಬಲದ ಮೂಲಕ ತುಂತುರು ನೀರಾವರಿಯಾಗಿ ಕೃಷಿಗೆ ಹರಿಸಿ ಯಶಸ್ವಿಯಾದವರು.

ಮೊದಲು ಅಡಕೆ, ತೆಂಗಿನ ಮರ ಏರುತ್ತ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡವರು 40 ವರ್ಷ ಹಿಂದೆ ಸ್ವಂತ ತೋಟದ ಕನಸುಕಂಡಿದ್ದರು, ಆದರೆ ಅವರಲ್ಲಿ ಭೂಮಿ ಇರಲಿಲ್ಲ. ಅವರು ಕೂಲಿಗೆ ಹೋಗುತ್ತಿದ್ದ ಅಮೈ ಮಹಾಬಲ ಭಟ್ಟರೇ 2 ಎಕರೆ ಭೂಮಿಯನ್ನು ನಾಯ್ಕರಿಗೆ ನೀಡಿದರು. ಹೀಗೆ 1978ರಲ್ಲಿ ಅವರಿಗೆ ಭೂಮಿ ಸಿಕ್ಕಿತು. ಆದರೆ ಬೋಳುಗುಡ್ಡ ಜಾಗವದು, ಅಲ್ಲಿ ನೀರು ಸಿಗುವ ಸಾಧ್ಯತೆ ಇಲ್ಲ. ಹಾಗೆ ಮೆಲ್ಲನೆ ಗುಡಿಸಲು ಕಟ್ಟಿದರು, ಕುಡಿಯುವ ನೀರಿಗಾಗಿ ಪಕ್ಕದ ಮನೆಯ ಅವಲಂಬನೆ. ಅಲ್ಲಿ ಬಾವಿ ತೋಡುವುದೂ ಅಸಾಧ್ಯ. ಹಾಗಾಗಿ ಇದ್ದ ದಾರಿ ಒಂದೇ ಸುರಂಗ ಕೊರೆಯುವುದು. ಅರ್ಧದಿನ ಕೂಲಿ ಕೆಲಸ, ಉಳಿದ ಹೊತ್ತು ರಾತ್ರಿಯೂ ಸೇರಿ ಸುರಂಗ ಕೊರೆತ. ಸೀಮೆ ಎಣ್ಣೆ, ತೆಂಗಿನೆಣ್ಣೆ ದೀಪದ ಬೆಳಕಲ್ಲೇ ಸುರಂಗ ಕೊರೆದರು.

ಮೊದಲ ಸುರಂಗದಲ್ಲಿ ನೀರು ಸಿಗಲಿಲ್ಲ. ಆ ಬಳಿಕ ಸತತ 25 ಮೀಟರ್ ಉದ್ದದ ಐದು ಸುರಂಗಗಳನ್ನು ಕೊರೆದರೂ ನೀರು ಸಿಗದೆ ಊರಿನವರಿಂದ ಗೇಲಿಗೊಳಗಾಗುವ ಸ್ಥಿತಿ. ನಿರಾಶರಾಗದೆ 6ನೇ ಸುರಂಗದ ಕೆಲಸಕ್ಕೆ ಹೊರಟ ಅವರಿಗೆ ನೀರು ಸಿಕ್ಕಿತು. ಆದರೆ ಕೃಷಿಗೆ ಅದೂ ಸಾಲದು. ಅದರ ಪಕ್ಕ 7ನೇ ಸುರಂಗ ಕೊರೆದಾಗ ಉತ್ತಮ ನೀರಿನ ಸೆಲೆ ಸಿಕ್ಕಿತು. ಅದರಿಂದ ನೀರು ಸಂಗ್ರಹಿಸಲು ಮಣ್ಣಿನ ಕೆರೆ ನಿರ್ಮಿಸಿದರು. ಭತ್ತ, ಅಡಕೆ, ತೆಂಗು, ಬಾಳೆ ನೆಟ್ಟರು. ಆ ಮೂಲಕ ಯಶಸ್ವೀ ಜಲಸಾಧಕ, ಕೃಷಿಕರೆನಿಸಿಕೊಂಡವರಾಗಿದ್ದಾರೆ.

ಉಡುಪಿ : ರಾಷ್ಟ್ರೀಯ ಮತದಾರರ ದಿನಾಚರಣೆ

Posted On: 25-01-2022 08:28PM

ಉಡುಪಿ : ಪ್ರಜಾಪ್ರಭುತ್ವ ವ್ಯವಸ್ಥೆಯ ಮೊದಲ ಮತ್ತು ಪ್ರಮುಖ ಹೆಜ್ಜೆ ಮತದಾನ. ಆದ್ದರಿಂದ ಪ್ರತಿಯೊಬ್ಬ ಮತದಾರರು ತಮಗೆ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು, ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮತದಾರರು ತಮಗೆ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸುವ ಜೊತೆಗೆ ಅದನ್ನು ಯಾವುದೇ ಆಸೆ, ಅಮಿಷಗಳಿಗೆ ಒಳಗಾಗದೇ ಮತ ಚಲಾಯಿಸುವ ಭಾದ್ಯತೆಯನ್ನೂ ಸಹ ನಿಭಾಯಿಸಬೇಕು. ಇದರಿಂದ ಉತ್ತಮ ಸದೃಢ ಸರಕಾರ ರಚನೆ ಸಾಧ್ಯವಾಗುವುದರ ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆಯಲು ಸಾಧ್ಯವಾಗಲಿದೆ ಎಂದರು. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಯುವ ಮತದಾರರು ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೇ, ನಿರ್ಭಿತಿಯಿಂದ ಮತ ಚಲಾಯಿಸುವ ಮೂಲಕ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ವ್ಯಕ್ತಿಯನ್ನು ಅಯ್ಕೆ ಮಾಡಿಕೊಳ್ಳಬೇಕು. 18 ವರ್ಷ ಮೀರಿದ ತಮ್ಮ ಎಲ್ಲಾ ಸ್ನೇಹಿತರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿಯ ಕುರಿತು ಸಂದೇಹಗಳಿಗೆ ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆ 1950 ಸಂಪರ್ಕಿಸುವಂತೆ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು. ಮತದಾನವು ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಆಗಿದೆ. ಆದ್ದರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ, ಚುನಾವಣೆಯಲ್ಲಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದರ ಮೂಲಕ ದೇಶದ ಪ್ರಗತಿಗೆ ಕಾರಣರಾಗಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ನವೀನ್ ಭಟ್ ಮಾತನಾಡಿ, ಮಾದರಿ ಆಡಳಿತ ವ್ಯವಸ್ಥೆಗೆ, ಉತ್ತಮ ಚುನಾಯಿತ ಸರಕಾರ ರಚನೆ ಅಗತ್ಯವಿದ್ದು, ಇದಕ್ಕಾಗಿ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೇ ಮತದಾನ ಚಲಾಯಿಸುವುದು ಅಗತ್ಯವಾಗಿದೆ. ಚುನಾವಣೆಯಲ್ಲಿ ಪ್ರತೀ ಮತವೂ ನಿರ್ಣಾಯಕವಾಗಿದ್ದು, ಮತದಾರರು ತನ್ನ ಒಂದು ಮತದಿಂದ ಏನಾಗುತ್ತದೆ ಎಂಬ ಉದಾಸೀನ ತೋರದೇ, ಯಾವುದೇ ಮತ, ಧರ್ಮ ಜನಾಂಗ, ಭಾಷೆ ಅಥವಾ ಪ್ರೇರೇಪಣೆಗಳಿಂದ ಪ್ರಭಾವಿತರಾಗದೇ ಮತದಾನ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾತನಾಡಿ, ಮತದಾನ ಹಕ್ಕನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸರಕಾರ ರಚನೆಗೆ ಎಲ್ಲರೂ ಕೈ ಜೋಡಿಸಬೇಕು. ಮತದಾನ ಮಾಡಲು ಅನುಕೂಲವಾಗಲೆಂದು ಮತದಾನ ದಿನದಂದು ನೀಡುವ ರಜೆಯನ್ನು ದುರುಪಯೋಗಪಡಿಸಿಕೊಳ್ಳದೇ ಎಲ್ಲರೂ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಬೇಕು. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ಎಪಿಕ್ ಕಾರ್ಡ್ ಪಡೆಯುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಉಪಸ್ಥಿತರಿದ್ದರು. ಮತದಾರರ ಪಟ್ಟಿಯಲ್ಲಿ ಹೊಸದಾಗಿ ನೊಂದಣಿಯಾದ ಯುವ ಮತದಾರರಿಗೆ ಎಪಿಕ್ ಕಾರ್ಡ್ಗಳನ್ನು ವಿತರಿಸಲಾಯಿತು. ಮತದಾರರ ದಿನದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆ, ಪೋಸ್ಟರ್ ರಚನೆ ಮತ್ತು ಕ್ವಿಜ್ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿ, ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿದರು, ಡಯಟ್ನ ಅಶೋಕ್ ಕಾಮತ್ ನಿರೂಪಿಸಿದರು, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್ ವಂದಿಸಿದರು.

ನಾಳೆ ರಾಷ್ಟ್ರರಾಜಧಾನಿಯಲ್ಲಿ ಕಂಗೊಳಿಸಲಿದೆ ತುಳುನಾಡ ಕಂಗೀಲು

Posted On: 25-01-2022 08:19PM

ಕಾಪು : ನಾಳೆ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ನ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಕರ್ನಾಟಕದಿಂದ ಜಾನಪದ ಮತ್ತು ಶಾಸ್ತ್ರೀಯ ನೃತ್ಯ ತಂಡಗಳು ಭಾಗವಹಿಸಲಿದ್ದು, ಇದರಲ್ಲಿ ತುಳುನಾಡಿನ ಕಂಗೀಲು ನೃತ್ಯವು ನಾಳೆ ಪ್ರದರ್ಶನಗೊಳ್ಳಲಿದೆ.

ಉಡುಪಿಯ ಉಡುಪಿ ಫೀಟ್ಸ್ ತಂಡವು ಕಂಗೀಲು ನೃತ್ಯವನ್ನು ಪ್ರದರ್ಶಿಸಲಿದೆ. ನಾಲ್ಕು ಸುತ್ತಿನ ಸ್ಪರ್ಧೆಯನ್ನು ಎದುರಿಸಿ ಆಯ್ಕೆಯಾದ ಈ ತಂಡದಲ್ಲಿ 14 ಸದಸ್ಯರಿದ್ದಾರೆ. ಇವರೆಲ್ಲರೂ ಉಡುಪಿಯ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದಾರೆ.

ಈ ಮೂಲಕ ತುಳುನಾಡಿನ ಜಾನಪದ ಕಲೆಯು ರಾಷ್ಟ್ರ ರಾಜಧಾನಿಯ ಮೂಲಕ ಇಡೀ ದೇಶದ ಜನರ ಗಮನ ಸೆಳೆಯಲಿದೆ.

ವಿಜಯ್ ಕಾಂಚನ್ ರಿಗೆ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ

Posted On: 25-01-2022 07:57PM

ಮಂಗಳೂರು : 2021-22 ನೇ ಸಾಲಿನ ಭಾರತದ ಪ್ರತಿಷ್ಠಿತ ಗೌರವಾನ್ವಿತ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕಕ್ಕೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ವಿಜಯ್ ಕಾಂಚನ್ ಭಾಜನರಾಗಿದ್ದಾರೆ.

ಬೆಳ್ಮಣ್ಣು: ಎರಡು ಗ್ರಂಥಗಳ ಲೋಕಾರ್ಪಣೆ

Posted On: 25-01-2022 02:01PM

ಬೆಳ್ಮಣ್ಣು: ಲಯನ್ಸ್ ಕ್ಲಬ್ ಬೆಳ್ಮಣ್ಣು ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಲಯನ್ಸ್ ಭವನದಲ್ಲಿ, ಮುದ್ದಣ ಜಯಂತಿ ಮತ್ತು ಎರಡು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಲ|ಎನ್.‌ಸುಹಾಸ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಕ್ಷರಾದ ಡಾ. ಜಿ. ಎನ್. ಉಪಾಧ್ಯ ಅವರ 'ವಾಙ್ಮಯ ವಿವೇಕ' ಮತ್ತು ಡಾ. ಬಿ. ಜನಾರ್ದನ ಭಟ್ ಅವರ 'ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ' ಗ್ರಂಥಗಳು ಲೋಕಾರ್ಪಣೆಗೊಂಡವು.

ವಿದ್ವಾಂಸ ಕೆ. ಎಲ್. ಕುಂಡಂತಾಯ ಮತ್ತು ಲಯನ್ಸ್ ಕ್ಲಬ್ ಕಾರ್ಯದರ್ಶಿ, ಸಾಹಿತಿ ಲ| ಬಿ. ಸೀತಾರಾಮ ಭಟ್ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಅವರು ಮುಖ್ಯ ಅತಿಥಿಯಾಗಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಎನ್. ಶ್ಯಾಮಸುಂದರ ಶೆಟ್ಟಿಯವರು ಸ್ವಾಗತಿಸಿದರು. ಲಯನ್ಸ್ ಖಜಾಂಚಿ ಲ| ವಿ. ಕೆ. ರಾವ್ ಅವರು ವಂದನಾರ್ಪಣೆ ಸಲ್ಲಿಸಿದರು.

ನಂದಳಿಕೆಯ ಕವಿಮುದ್ದಣ ಮಿತ್ರಮಂಡಳಿಯ ಅಧ್ಯಕ್ಷರೂ ಆಗಿರುವ ಎನ್. ಸುಹಾಸ್ ಹೆಗ್ಡೆಯವರು ಮುದ್ದಣನ ನೆನಪಿನಲ್ಲಿ ಸಾಹಿತಿಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಗೌರವಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಕೆ. ಎಲ್. ಕುಂಡಂತಾಯ ಅವರು ಕೃತಿಗಳ ಮಹತ್ವವನ್ನು ತೆರೆದಿಟ್ಟರು. ಸುದರ್ಶನ ವೈ.ಎಸ್. ಅವರು ಶುಭಹಾರೈಸಿದರು. ಲೇಖಕ ಡಾ. ಬಿ. ಜನಾರ್ದನ ಭಟ್ ಅವರು ಈ ಕೃತಿಗಳ ರಚನೆಯ ಹಿನ್ನೆಲೆಯನ್ನು ವಿವರಿಸಿದರು.

ಅಸಹಾಯಕಳಾಗಿದ್ದ ಮೂಕ ಮಹಿಳೆಯನ್ನು ರಕ್ಷಿಸಿದ ವಿಶು ಶೆಟ್ಟಿ ಅಂಬಲಪಾಡಿ

Posted On: 25-01-2022 10:45AM

ಉಡುಪಿ : ಕಾಪು ಠಾಣಾ ವ್ಯಾಪ್ತಿಯ ಇನ್ನಂಜೆಯಲ್ಲಿ ತನ್ನವರು ಯಾರೂ ಇಲ್ಲದೆ ಅಸಹಾಯಕಳಾಗಿ ರೋಧಿಸುತ್ತಿದ್ದ ಮೂಕ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ನಿಟ್ಟೂರಿನ ಸಖಿ ಸೆಂಟರ್ ಗೆ ದಾಖಲಿಸಿದ ಘಟನೆ ಜನವರಿ 24ರಂದು ನಡೆದಿದೆ.

ಮಹಿಳೆ ನಳಿನಿ ದೇವಾಡಿಗ (45) ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತಿ ತೊರೆದಿದ್ದು ತಂದೆ ತಾಯಿ ಸಹೋದರ ಮೃತರಾಗಿದ್ದಾರೆ. ರಾತ್ರಿಯ ಹೊತ್ತು ಅಸಹಾಯಕಳಾಗಿ ರೋಧಿಸುತ್ತಿದ್ದಾಗ ಸ್ಥಳೀಯ ಮಹಿಳೆಯೊಬ್ಬರು ಉಪಚರಿಸಿ ಆಹಾರ ನೀಡಿದ್ದರು.

ಈ ಬಗ್ಗೆ ವಿಷಯ ತಿಳಿದ ವಿಶು ಶೆಟ್ಟಿ ತನ್ನ ವಾಹನದಲ್ಲಿ ತೆರಳಿ ಮಹಿಳೆಯನ್ನು ಇಲಾಖಾ ಸಿಬ್ಬಂದಿ ಪೂರ್ಣಿಮಾ ಸಹಕಾರದಿಂದ ರಕ್ಷಿಸಿ ಸಖಿ ಸೆಂಟರ್ ಗೆ ದಾಖಲಿಸಿದ್ದರು. ಬಾಯಿ ಬಾರದ ಅಸಹಾಯಕ ಮಹಿಳೆಗೆ ಭವಿಷ್ಯತ್ತಿನಲ್ಲಿ ಸಂಬಂಧಪಟ್ಟವರು ಅಥವಾ ಸಮಾಜ ಸಹಕರಿಸಿ ಮಹಿಳೆಯ ನೋವಿಗೆ ಸ್ಪಂದಿಸಬೇಕಾಗಿ ವಿಶು ಶೆಟ್ಟಿ ವಿನಂತಿಸಿದ್ದಾರೆ.

ಕೈ,ಕಾಲುಗಳಿಗೆ ಕಬ್ಬಿಣದ ಸರಪಳಿಯಿಂದ ಬೀಗ ಜಡಿದು ಅರಬ್ಬೀ ಸಮುದ್ರದಲ್ಲಿ ಈಜಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ಗಂಗಾಧರ್ ಜಿ. ಕಡೆಕಾರ್

Posted On: 24-01-2022 06:23PM

ಉಡುಪಿ : ಇಲ್ಲಿನ ಕಡೆಕಾರಿನ ನಿವಾಸಿ ಆದ ಗಂಗಾಧರ್ ಜಿ. ಕಡೆಕಾರ್ ಈ ಬಾರಿ ಕೈ ಮತ್ತು ಕಾಲುಗಳಿಗೆ ಕಬ್ಬಿಣದ ಸರಪಳಿಯಿಂದ ಬೀಗ ಜಡಿದು ಅರಬ್ಬೀ ಸಮುದ್ರದಲ್ಲಿ 3.5 ಕಿ.ಮಿ ಈಜಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಸಾಧನೆಯನ್ನು ತೋರಿಸಿರುತ್ತಾರೆ.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂದರ್ಭ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

66ರ ಹರೆಯದ ಗಂಗಾಧರ್ ಜಿ. ಕಡೆಕಾರ್ ರವರ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.