Updated News From Kaup

ಇನ್ನಂಜೆ : ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Posted On: 09-01-2022 10:05PM

ಕಾಪು : ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್, ಸರಕಾರಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ, ಯುವತಿ ಮಂಡಲ (ರಿ.) ಇನ್ನಂಜೆ, ಬಿಲ್ಲವ ಸಂಘ (ರಿ.)ಇನ್ನಂಜೆ , ಜೆಸಿಐ ಶಂಕರಪುರ, ರಿಕ್ಷಾ ಚಾಲಕರು ಮತ್ತು ಮಾಲಕರು ಶಂಕರಪುರ, ಯುವ ಸೇನಾ ಮಡುಂಬು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಇನ್ನಂಜೆಯ ದಾಸ ಭವನದಲ್ಲಿ ಜರಗಿತು.

ಕಾರ್ಯಕ್ರಮವನ್ನು ರಾಘವೇಂದ್ರ ರಾವ್ ಎರ್ಮಾಳ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಗೆಸ್ಟ್ ರಿಲೇಷನ್ ಮ್ಯಾನೇಜರ್ ರಾಘವೇಂದ್ರ ನಾಯಕ್ ಅಜೆಕಾರ್ ರಕ್ತದಾನದ ಮಹತ್ವ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸರಕಾರಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ ಇದರ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ.ವೀಣಾ ರಕ್ತದಾನದ ಬಗೆಗಿನ ತಪ್ಪು ಕಲ್ಪನೆಗಳ ಬಗ್ಗೆ ತಿಳಿಸಿದರು.

ಯುವತಿ ಮಂಡಲದ ಗೌರವ ಸಲಹೆಗಾರರಾದ ಶ್ವೇತ ಎಲ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸತೀಶ್ ಎನ್. ಪೂಜಾರಿ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಸೇಲ್ಸ್ ಮ್ಯಾನೇಜರ್ ಆಗಿರುವ ನಿತಿನ್ ಶೇಟ್, ಬಿಲ್ಲವ ಸಂಘ ಇನ್ನಂಜೆ ಅಧ್ಯಕ್ಷರಾದ ಸದಾಶಿವ ಪೂಜಾರಿ, ಶಂಕರಪುರ ರಿಕ್ಷಾ ಚಾಲಕರು ಮತ್ತು ಮಾಲಕರು ಸಂಘದ ಅಧ್ಯಕ್ಷರಾದ ಕರುಣಾಕರ ದೇವಾಡಿಗ, ಜೆಸಿಐ ಶಂಕರಪುರ ಜಾಸ್ಮಿನ್ ಅಧ್ಯಕ್ಷರಾದ ಜಗದೀಶ್ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವತಿ ಮಂಡಲದ ಅಧ್ಯಕ್ಷರಾದ ಆಶಾ ನಾಯಕ್ ಸ್ವಾಗತಿಸಿ, ಸ್ಥಾಪಕಾಧ್ಯಕ್ಷರಾದ ಸುಮಲತಾ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀ ನಾಯಕ್ ವಂದಿಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ

Posted On: 08-01-2022 07:35PM

ಶಿರ್ವ: ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಜನವರಿ 13ರಂದು ಮಂಗಳೂರಿನ ಪ್ರತಿಷ್ಠಿತ ದಿಯಾ ಸಿಸ್ಟಮ್ ಸಂಸ್ಥೆ(ಗ್ಲೋಟಚ್ ಟೆಕ್ನಾಲಜೀಸ್)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ನಡೆಸಲು ಉದ್ದೇಶಿಸಿದೆ.

ಈಗಾಗಲೇ ಬಿಸಿಎ, ಬಿಎಸ್ಸಿ (ಸಿ. ಎಸ್),ಬಿಇ( ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ( ಸಿ ಎಸ್),ಎಂಎಸ್ಸಿ, ಎಂಸಿಎ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಪೂರ್ವಹ್ನ 9.00 ಗಂಟೆಗೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ಸಂದರ್ಶನ ನಡೆಯಲಿದೆ.

ಅಭ್ಯರ್ಥಿಗಳು ಆಧಾರ್ ಕಾರ್ಡ್, ಮೂಲ ಅಂಕಪಟ್ಟಿ, ಪದವಿ ಪ್ರಮಾಣ ಪತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7975230201ಗೆ ಸಂಪರ್ಕಿಸಬಹುದು ಮತ್ತು ಈ ಲಿಂಕಿನ ಮೂಲಕ CLICK HERE.. ನೋಂದಾಯಿಸಿಕೊಳ್ಳಬಹುದು ಎಂದು ಪ್ರಾಂಶುಪಾಲರು ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ದ.ಕ ಮತ್ತು ಉಡುಪಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಯಲ್ಲಿ ಸಿಗಲಿದೆ ಕುಚ್ಚಲಕ್ಕಿ‌

Posted On: 08-01-2022 06:00PM

ಮಂಗಳೂರು : ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿರುವ, ಸ್ಥಳೀಯ ಕುಚ್ಚಲಕ್ಕಿ ಪ್ರಭೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ (MSP) ಖರೀದಿ ಮಾಡಿ ಪಡಿತರದ ಮೂಲಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವಿತರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಪಡಿತರದ ಮೂಲಕ ಕುಚ್ಚಲ್ಲಕ್ಕಿಯನ್ನು ವಿತರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಬೇಡಿಕೆಯನ್ನು ಸಲ್ಲಿಸಿದ್ದರು. ಈ ಕುರಿತಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಶೋಭಾ ಕರಂದ್ಲಾಜೆಯವರು, ಕೇಂದ್ರದ ಸದರಿ ಇಲಾಖಾ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ಮೇಲ್ಕಂಡ ಬೇಡಿಕೆಯನ್ನು ಅನುಮೋದಿಸುವಂತೆ ಕೋರಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಮನವಿಯನ್ನು ಪರಿಗಣಿಸಿದ ಪಿಯೂಷ್ ಗೋಯಲ್ ಅವರು ಜನವರಿ 06ರಂದು ಕೇಂದ್ರ ಸಚಿವೆ, ಶೋಭಾ ಕರಂದ್ಲಾಜೆಯವರಿಗೆ ಪತ್ರ ಬರೆದು, ಮೇಲ್ಕಾಣಿಸಿದ ಕುಚ್ಚಲಕ್ಕಿ ಪ್ರಭೇಧಗಳನ್ನು MSP ಮೂಲಕ ಖರೀದಿ ಮಾಡಿ ಪಡಿತರದ ಮೂಲಕ ವಿತರಿಸಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.

ಕೇಂದ್ರದ ಈ ಅನುಮತಿಯೊಂದಿಗೆ ಉಡುಪಿ-ದಕ್ಷಿಣ ಕನ್ನಡದ ರೈತರ ಕೃಷಿ ಉತ್ಪಾದನೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯಾದ ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸುವ ಬೇಡಿಕೆಗೆ ಪುಷ್ಟಿ ಸಿಕ್ಕಿದೆ. ಸ್ಥಳೀಯ ರೈತರ ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದಂತಾಗಿದೆ.

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ, ಶಂಕರಪುರ : 36ನೇ ವರ್ಷದ ವಾರ್ಷಿಕ ಮಹಾಪೂಜೆ

Posted On: 08-01-2022 02:59PM

ಕಾಪು : ಚಂದ್ರಹಾಸ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ಇಂದು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ, ಶಂಕರಪುರದಲ್ಲಿ 36ನೇ ವರ್ಷದ ವಾರ್ಷಿಕ ಮಹಾಪೂಜೆಯು ಜರಗಿತು. ‌

ಇದರ ಪ್ರಯುಕ್ತ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಹಾಗೂ ರಾತ್ರಿ ಗಂಟೆ 8.00ಕ್ಕೆ ಶಂಕರಪುರ ಅಯ್ಯಪ್ಪ ಶಿಬಿರದಲ್ಲಿ ನಡೆಯುವ ಪಡಿಪೂಜೆ ಮತ್ತು ಮಹಾಪೂಜೆ ಜರಗಲಿದೆ ಎಂದು ಶ್ರೀ ಅಯ್ಯಪ್ಪ ಭಕ್ತವೃಂದ ಶಂಕರಪುರ – ಮುಂಬಯಿ ಪ್ರಕಟನೆಯಲ್ಲಿ ತಿಳಿಸಿದರು.

ಅವರಾಲು : 11ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Posted On: 08-01-2022 12:44PM

ಪಡುಬಿದ್ರಿ : ಫಲಿಮಾರು ವ್ಯಾಪ್ತಿಯ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅವರಾಲು, ಅಡ್ಕ ಇವರ ವತಿಯಿಂದ 11ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಜನವರಿ 14, ಶುಕ್ರವಾರ ಜರಗಲಿದೆ.

ಅಂದು ಬೆಳಿಗ್ಗೆ 6.30ರಿಂದ ಸ್ಥಳ ಶುದ್ಧಿ, ಕಲಶ ಪ್ರತಿಷ್ಠೆ ಸಹಸ್ರ ನಾಮಾರ್ಚನೆ, ಗಣಹೋಮ, ಬೆಳಿಗ್ಗೆ 9ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 12.30 ರಿಂದ ದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಜಮಾಡಿ : ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವಕ್ಕೆ ಶಾಸಕರ ಭೇಟಿ

Posted On: 08-01-2022 11:12AM

ಹೆಜಮಾಡಿ : ಇಲ್ಲಿನ ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವಕ್ಕೆ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಆಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಗರಡಿಯ ಆಡಳಿತ ಮಂಡಳಿಯ ಪ್ರಮುಖರು, ಊರ - ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

ಜನಪ್ರತಿನಿಧಿಗಳ ಮೌನ - ತುಳುನಾಡಿನ ದೈವಾರಾಧನೆಯ ಆಚರಣೆ, ನಂಬಿಕೆಯನ್ನು ಮುಗಿಸುವ ಹುನ್ನಾರವೇ ?

Posted On: 07-01-2022 10:41PM

ಉಡುಪಿ : ಸರಕಾರದ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಆದೇಶದಿಂದ ದೈವಾರಾಧಕರಿಗೆ ಸಮಸ್ಯೆಯಾಗಿದ್ದು ಇದನ್ನು ಕೂಡಲೇ ಪರಿಹರಿಸುವಂತೆ ಸರಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಅಖಿಲ ಭಾರತ ದೈವಾರಾಧಕರ ಒಕ್ಕೂಟ ಉಡುಪಿ - ಮಂಗಳೂರು ಇವರ ವತಿಯಿಂದ ಪಾಂಗಾಳ ಗುಡ್ಡೆಗರಡಿಯಲ್ಲಿ ಸಮಾಲೋಚನಾ ಸಭೆ ಜರಗಿತು.

ಈ ಸಂದರ್ಭ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಂಗಾಳ ಗುಡ್ಡೆ ಗರಡಿಮನೆ ಸುಧಾಕರ ಡಿ. ಅಮೀನ್ ದೈವಾರಾಧನೆ ಕ್ಷೇತ್ರವನ್ನು ಅವಲಂಭಿಸಿರುವ ಎಲ್ಲಾ ವರ್ಗದವರೂ ಕೊರೊನಾ‌ ಕಾರಣದಿಂದಾಗಿ ಎರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದು, ಈ‌ ಪರಿಸ್ಥಿತಿ ಇದೀಗ ಮೂರ‌ನೇ ವರ್ಷಕ್ಕೆ ಕಾಲಿಟ್ಟಿದೆ. ದೈವಾರಾಧನೆಯ ಎಲ್ಲಾ ಆಚರಣೆಗಳೂ ಹಿಂದಿನಂತೆಯೇ ನಡೆಯುವಂತಾಗಲು ಅವಕಾಶ ಮಾಡಿ ಕೊಡುವಂತೆ ಜಿಲ್ಲೆಯ ಎಲ್ಲಾ‌ ಜನಪ್ರತಿನಿಧಿಗಳ ಬೆಂಬಲ ಪಡೆದು, ಅಧಿಕಾರಿ ವರ್ಗ ಮತ್ತು ಸರಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಮನವಿ ನೀಡಬೇಕಿದೆ ಎಂದರು.

ಅಖಿಲ ಭಾರತ ದೈವಾರಾಧಕರ ಒಕ್ಕೂಟದ ಉಪಾಧ್ಯಕ್ಷ ಯೋಗಿಶ್ ಪೂಜಾರಿ, ಕುಕ್ಕೆಹಳ್ಳಿ ಕೊರಗಜ್ಜ ದೇವಸ್ಥಾನದ ಮುಖ್ಯಸ್ಥ ಕೃಷ್ಣ ಕುಲಾಲ್, ಕಾರ್ಕಳ ದೈವಾರಾಧಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಮಾಳ, ಬೈರಂಪಳ್ಳಿ ಭೂತರಾಜ ದೇವಸ್ಥಾನದ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಹಿರಿಯಡಕ ಕಲ್ಕುಡ ದೈವಸ್ಥಾನದ ಮುಖ್ಯಸ್ಥ ಸುಧಾಕರ ಶೆಟ್ಟಿ ತಂಗಣ, ಹೆಬ್ರಿ ಘಟಕದ ಅಧ್ಯಕ್ಷ ಸುಕುಮಾರ್ ಪೂಜಾರಿ, ಕಾರ್ಕಳ ದೈವಾರಾಧಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಮಾಳ, ದೊಡ್ಡಣ್ಣಗಯಡ್ಡೆ ಪಂಚ ಜುಮಾದಿ ದೇವಸ್ಥಾನದ ಗುರಿಕಾರ ನಿತಿನ್ ಪೂಜಾರಿ, ಪಾಣಾರ ಸಂಘದ ಜಿಲ್ಲಾಧ್ಯಕ್ಷ ಪಾಂಡು ಪಾಣಾರ, ಪಂಬದ ಸಮುದಾಯದ ಮುಖಂಡ ಮಾಧವ ಪಂಬದ, ನಲಿಕೆ ಸಮುದಾಯದ ಮುಖಂಡ ನಾರಾಯಣ ಪಾಣಾರ, ದೇವಾಡಿಗ ಸಮುದಾಯದ ಮುಖಂಡ ಉದಯ ಶೇರಿಗಾರ್ ಅಲೆವೂರು, ಪರವ ಸನುದಾಯದ ಮುಖಂಡ ನರಸಿಂಹ ಪರವ ಮೊದಲಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿ, ಕಾರ್ಕಳ, ಹೆಬ್ರಿ, ಕಾಪು, ಬ್ರಹ್ಮಾವರ ತಾಲೂಕಿನ ವಿವಿಧೆಡೆಗಳ ದೈವಾರಾಧಕ ಸಂಘಟನೆಯ ಪದಾಧಿಕಾರಿಗಳು, ದೈವಾರಾಧಕರು, ಸಮುದಾಯಗಳ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ತುಳುನಾಡ ದೈವಾರಾಧಕರ ಸಂಘದ ಜಿಲ್ಲಾಧ್ಯಕ್ಷ ವಿನೋದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವೀಕೆಂಡ್ ಕಫ್ಯೂ೯: ಬಂಟಕಲ್ಲು ಅಯ್ಯಪ್ಪ ಶಿಬಿರದಲ್ಲಿ ಜರಗಲಿದ್ದ ಮಹಾಪೂಜೆ, ಅನ್ನಸಂತರ್ಪಣೆ, ಶನಿಕಥಾ ಪಾರಾಯಣವು ಸೋಮವಾರಕ್ಕೆ ಮುಂದೂಡಿಕೆ

Posted On: 07-01-2022 08:17PM

ಕಾಪು : ಸಾರ್ವಜನಿಕ ಗಣೇಶೋತ್ಸವ ವೇದಿಕೆ, ಬಂಟಕಲ್ಲು ಇಲ್ಲಿನ ಅಯ್ಯಪ್ಪ ಶಿಬಿರದಲ್ಲಿ ಜನವರಿ 6 ಮತ್ತು 7ರಂದು ನಡೆಯುವ ಕಾರ್ಯಕ್ರಮಗಳು ಎಂದಿನಂತೆ ಜರಗಿದೆ.

ಶನಿವಾರ ಮತ್ತು ಭಾನುವಾರ ವೀಕೆಂಡ್ ಕಫ್ಯೂ೯ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿ, ಶನಿವಾರದ ಜರಗಲಿದ್ದ ಅಯ್ಯಪ್ಪಸ್ವಾಮಿ ಮಹಾಪೂಜೆ, ಅನ್ನಸಂತರ್ಪಣೆ ಮತ್ತು ಶನಿಕಥಾ ಪಾರಾಯಣವು ಜನವರಿ 10, ಸೋಮವಾರ ಮಧ್ಯಾಹ್ನ ನಡೆಯಲಿದೆ. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ, ಅಯ್ಯಪ್ಪ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯ : ಕೇಂದ್ರ ಸರಕಾರದ ಆದೇಶ, ಜನವರಿ 11ರಿಂದ ಅನ್ವಯ

Posted On: 07-01-2022 06:55PM

ಬೆಂಗಳೂರು : ದೇಶದಲ್ಲಿ ಕೊರೋನಾ ಜೊತೆಗೆ ಒಮಿಕ್ರಾನ್ ದಿನೇ ದಿನೇ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆ ಕೇಂದ್ರ ಸರ್ಕಾರ ಅನೇಕ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದೀಗ ಕೇಂದ್ರ ಸರಕಾರ ವಿದೇಶದಿಂದ ಭಾರತಕ್ಕೆ ಆಗಮಿಸುವಎಲ್ಲಾ ವಿದೇಶಿ ಪ್ರಯಾಣಿಕರಿಗೆ 7 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. ಈ ಕುರಿತುಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವ ಕೇಂದ್ರ ಸರ್ಕಾರ, ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ಆರ್ ಟಿ ಪಿಸಿಆರ್ ಪರೀಕ್ಷೆಗೆ ಒಳಪಟ್ಟು, ನೆಗೆಟಿವ್ ದೃಢಪಟ್ಟರೂ 7 ದಿನಗಳ ಕಡ್ಡಾಯ ಹೋಂ ಕ್ವಾರಂಟೈನ್ ಆಗುವಂತೆ ಆದೇಶಿಸಿದೆ.

7 ದಿನಗಳ ಹೋಂ ಕ್ವಾರಂಟೈನ್ ಮುಕ್ತಾಯಗೊಂಡ ಬಳಿಕ ಮತ್ತೆ ಆರ್ ಟಿ ಪಿಸಿಆರ್ ಪರೀಕ್ಷೆಯ ಮೂಲಕ ಕೋವಿಡ್ ಪರೀಕ್ಷೆಗೆ ಒಳಪಟ್ಟು, ಸಿಕ್ಕ ವರದಿಯನ್ನುಕಡ್ಡಾಯವಾಗಿ ಸುವಿಧ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡುವಂತೆ ತಿಳಿಸಿದೆ. ಅದನ್ನು ಆಯಾ ರಾಜ್ಯ ಸರ್ಕಾರಗಳು ಮೇಲ್ವಿಚಾರಣೆ ಮಾಡುತ್ತವೆ. ಒಂದು ವೇಳೆ ಪಾಸಿಟಿವ್‌ ಬಂದರೆ ಅವರ ಮಾದರಿಗಳನ್ನು ಇಂಡಿಯನ್‌ ಸಾರ್ಸ್‌-ಕೋವಿ-2 ಜಿನೊಮಿಕ್ಸ್‌ ಕನ್ಸಾರಿಟಿಂ(INSACOG) ಪ್ರಯೋಗಾಲಯದ ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಬಳಿಕ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ಆನ್‌ಲೈನ್‌ನಲ್ಲಿ ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂಘೋಷಣೆ ನಮೂನೆ ಮತ್ತು ನೆಗೆಟಿವ್‌ ಆರ್‌ಟಿ-ಪಿಸಿಆರ್‌ ವರದಿಯನ್ನು ಸಲ್ಲಿಸಬೇಕು. ವಿಮಾನ ನಿಲ್ದಾಣದಲ್ಲಿಆರೋಗ್ಯ ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಥರ್ಮಲ್ ಸ್ಕ್ರೀನಿಂಗ್ ನಡೆಸುತ್ತಾರೆ. ಈ ವೇಳೆ ರೋಗಲಕ್ಷಣ ಕಂಡುಬರುವ ತಕ್ಷಣವೇ ಪ್ರತ್ಯೇಕಿಸಿ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಗುತ್ತದೆ.ಈ ವೇಳೆ ಪಾಸಿಟಿವ್‌ ಬಂದರೆ ಅಂತಹವರ ಸಂಪರ್ಕಕ್ಕೆ ಬಂದಿದ್ದವರನ್ನು ಗುರುತಿಸಲಾಗುತ್ತದೆ. ಈ ನಿಯಮ 2022ರ ಜವನರಿ 11 ರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನ್ವಯವಾಗಲಿದೆ.

ನೊಂದ ಮಹಿಳೆಯರು ಉಚಿತ ಸಹಾಯವಾಣಿ ಸಂಖ್ಯೆ 181 ಸಂಪರ್ಕಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 07-01-2022 06:37PM

ಉಡುಪಿ : ವಿವಿಧ ಕಾರಣಗಳಿಂದ ನೊಂದ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ 24x7 ಕಾರ್ಯನಿರ್ವಹಿಸುವ ಉಚಿತ ದೂರವಾಣಿ ಸಂಖ್ಯೆ 181 ನ್ನು ಸಂಪರ್ಕಿಸಿ ತಮ್ಮ ದೂರುಗಳು ಸಲ್ಲಿಸಿ, ಅಗತ್ಯ ನೆರವು ಪಡೆಯುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನೊಂದ ಮಹಿಳೆಯರ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಖಿ ಒನ್ ಸ್ಟಾಪ್ ಸೆಂಟರ್ ಮತ್ತು ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರು ತುರ್ತು ಸಂದರ್ಭಗಳಲ್ಲಿ 181 ಉಚಿತ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ ಎಂದರು. ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯವಾಗಿದ್ದು, ಇದುವರೆಗೆ ಸಮಿತಿ ರಚಿಸದ ಇಲಾಖೆಗಳು ಮತ್ತು ಸಂಸ್ಥೆಗಳ ವರದಿ ಪಡೆದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಸಮಿತಿ ರಚಿಸಿರುವ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ನಿಗಧಿತವಾಗಿ ಸಮಸ್ಯೆಗಳನ್ನು ಆಲಿಸಿರುವ ಕುರಿತ ವರದಿ ಪಡೆಯುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಪುನಃ ಶಾಲೆಗೆ ಸೇರಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಶಾಲೆ ಬಿಟ್ಟ ಮಕ್ಕಳು ಬಾಲ ಕಾರ್ಮಿಕರು ಮತ್ತು ಬಾಲ್ಯ ವಿವಾಹಗಳಿಗೆ ಒಳಪಡುವ ಸಾಧ್ಯತೆಗಳಿದ್ದು, ಇಂತಹ ಮಕ್ಕಳ ಕುರಿತು ಸ್ಥಳೀಯವಾಗಿ ಅಂಗನವಾಡಿ ಮೇಲ್ವಿಚಾರಕರು ಮತ್ತು ಶಿಕ್ಷಣ ಇಲಾಖೆಯ ಸಿ.ಆರ್.ಪಿ ಗಳು ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಸಂಖ್ಯೆಯ ಜಾಗೃತಿ ಕಾರ್ಯಕ್ರಮಗಳನ್ನು ಎಲ್ಲಾ ಶಾಲೆಗಳಲ್ಲಿ ಆಯೋಜಿಸಿ ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕಾಣೆಯಾದ ಮಹಿಳೆ ಮತ್ತು ಮಕ್ಕಳ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ವರದಿ ಪಡೆಯುವಂತೆ ಹಾಗೂ ಮಹಿಳೆ ಮತ್ತು ಮಕ್ಕಳ ಹಕ್ಕುಗಳು ಮತ್ತು ಸುರಕ್ಷತೆಯ ಬಗ್ಗೆ ಇರುವ ಕಾನೂನುಗಳು ಮತ್ತು ಅವರ ಹಕ್ಕುಗಳ ಕುರಿತಂತೆ ಜಿಲ್ಲೆಯಾದ್ಯಂತ ವಲಸೆ ಕಾರ್ಮಿಕರು ವಾಸಿಸುವ ಪ್ರದೇಶಗಳು, ಪ್ರವಾಸಿ ತಾಣಗಳು ಮತ್ತಿತರ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ಶೀಘ್ರದಲ್ಲಿ ದಾಖಲಿಸಿ, ಕಾಲಮಿತಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು. ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತಂತೆ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವ್ಯಾಪಕ ಅರಿವು ಕಾರ್ಯಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿನ ಯುವಜನತೆ ಈ ಪಿಡುಗಿಗೆ ಒಳಗಾಗದಂತೆ ಎಚ್ಚವಹಿಸುವಂತೆ ತಿಳಿಸಿದರು. ಜಿಲ್ಲೆಯಲ್ಲಿನ ರಾಜ್ಯ ಮಹಿಳಾ ಕೇಂದ್ರದಲ್ಲಿನ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಿ, ನಿಲಯದಲ್ಲಿ ಅವರಿಗೆ ಉದ್ಯೋಗ ನೀಡಿ ಅವರು ಆರ್ಥಿಕವಾಗಿ ಗಳಿಸುವಂತೆ ಹಾಗೂ ಇಲ್ಲಿಂದ ಹೊರ ಹೋದ ನಂತರ ಸ್ವತಂತ್ರವಾಗಿ ಉದ್ಯೋಗ ಚಟುವಟಿಕೆ ಕೈಗೊಳ್ಳುವಂತೆ ತರಬೇತಿ ನೀಡಿ, ನಿಲಯದಲ್ಲಿ ಮಹಿಳೆಯರ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಶುಶ್ರೂಷಕರನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಡಿಹೆಚ್ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.