Updated News From Kaup

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪಿಯ ಬಂಧನ

Posted On: 07-01-2022 05:08PM

ಮಂಗಳೂರು : ಯುವಕನೋರ್ವ ನೆರೆಮನೆಯ 4ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಉರ್ವ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜನವರಿ 5ರಂದು ನಿತೇಶ್ ರಿತಿನ್ @ ನಿತಿನ್ (19) ಎಂಬಾತ ಮನೆಗೆ ನೆರೆಮನೆಯ ನಗರದ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕಿಯು ಟಿವಿ ನೋಡಲು ಹೋದಾಗ ಲೈಂಗಿಕ ಕಿರುಕುಳ ನೀಡಿದ್ದು, ಹೆದರಿದ ಮಗು ಅಲ್ಲಿಂದ ಓಡಿ ತನ್ನ ಮನೆಯೊಳಗಡೆಗೆ ಹೋಗಿದ್ದು, ಬಳಿಕ ಆರೋಪಿತನು ಬಾಲಕಿಯ ಮನೆಯೊಳಗೆ ಅಕ್ರಮ ಪ್ರವೇಶಿಸಿ ಮಗುವಿಗೆ ನಡೆದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುತ್ತೆನೆ ಎಂಬುದಾಗಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಈ ಬಗ್ಗೆ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಉರ್ವ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿತನನ್ನು ದಸ್ತಗಿರಿ ಮಾಡಲಾಗಿದೆ.

ಕಳತ್ತೂರು ಪುಂಚಲಕಾಡು ಆಟೋ ರಿಕ್ಷಾ ನಿಲ್ದಾಣಕ್ಕೆ ನಾಮಫಲಕ ಅಳವಡಿಕೆ

Posted On: 04-01-2022 02:02PM

ಕಾಪು: ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಂಚಲಕಾಡು ಇಲ್ಲಿಯ ರಿಕ್ಷಾ ನಿಲ್ದಾಣಕ್ಕೆ ಹೊಸ ನಾಮ ಫಲಕ ಅಳವಡಿಸಲಾಯಿತು.

ಈ ಸಂದರ್ಭ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 4 ದಿನದಲ್ಲಿ 60,000 ಮಕ್ಕಳಿಗೆ ಕೋವಿಡ್ ಲಸಿಕೆ : ಶಾಸಕ ರಘುಪತಿ ಭಟ್

Posted On: 03-01-2022 06:16PM

ಉಡುಪಿ : ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಸುಮಾರು 60,000 ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು 4 ದಿನಗಳಲ್ಲಿ ಸಂಪೂರ್ಣವಾಗಿ ನೀಡುವ ಗುರಿ ಹೊಂದಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು ನಗರದ ನಿಟ್ಟೂರು ಪ್ರೌಢಶಾಲೆಯಲ್ಲಿ ನಡೆದ, 15 ರಿಂದ 18 ವರ್ಷಗೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ವರಿಗೆ ಮೊದಲನೇ ಡೋಸ್ ಕೋವಿಡ್ ಲಸಿಕೆಯನ್ನು 96.3% ಹಾಗೂ ಎರಡು ಡೋಸ್ಗಳನ್ನು 84.3% ನೀಡಿದ್ದು, 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ನಿಂದ ರಕ್ಷಣೆ ನೀಡಲು ಲಸಿಕೆ ನೀಡುವ ಕಾರ್ಯವನ್ನು ಪ್ರಸ್ತುತ ಆರಂಭಿಸಿದ್ದು, ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಇದು ಅತ್ಯಂತ ಸುರಕ್ಷಿತವಾಗಿದೆ. ಅರ್ಹ ಎಲ್ಲಾ ಮಕ್ಕಳು ಕೋವಿಡ್ ಲಸಿಕೆ ಪಡೆಯುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು. ಪೋಷಕರು ಸಹ ಈ ಕಾರ್ಯಕ್ರಮಕ್ಕೆ ಸಹಕರಿಸಬೇಕು. ಮುಂದಿನ ದಿನಗಳಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಕೂಡ ಲಸಿಕೆ ಬರಲಿದೆ ಎಂದು ಶಾಸಕರು ಹೇಳಿದರು.

ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಕೋವಿಡ್ ಹರಡುವುದನ್ನು ನಿಯಂತ್ರಿಸಲು ಎಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯುವುದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಿದ್ದಲ್ಲಿ ಮಾತ್ರ ಇದರ ನಿಯಂತ್ರಣ ಸಾಧ್ಯವಾಗಲಿದೆ. ಪರ್ಯಾಯ ಮಹೋತ್ಸವ ಕಾರ್ಯಕ್ರಮದಲ್ಲಿ ಸಹ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದವರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ರಘುಪತಿ ಭಟ್ ಹೇಳಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಮಕ್ಕಳು ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ನಿಂದ ಸಂಪೂರ್ಣ ಸುರಕ್ಷೆ ಪಡೆಯಲಿದ್ದು, ಭೌತಿಕವಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಲಿದೆ. ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸುವ ಎಲ್ಲಾ ಮಾರ್ಗಸೂಚಿಗಳನ್ನು ಮತ್ತು ಕೋವಿಡ್ ಸಮುಚಿತ ವರ್ತನೆಗಳನ್ನು ಎಲ್ಲಡೆ ಪಾಲಿಸಬೇಕು. ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯಬೇಕು ಮತ್ತು ರೋಗ ಲಕ್ಷಣಗಳಿದ್ದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ನಗರಸಭಾ ಸದಸ್ಯ ಗಿರಿಧರ ಆಚಾರ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ನಿಟ್ಟೂರು ಪ್ರೌಢಶಾಲೆಯ ಪ್ರಾಂಶುಪಾಲೆ ಅನಸೂಯ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ, ನಾಗಭೂಷಣ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ವಂದಿಸಿದರು.

ಆಸಕ್ತಿಯುತ ಕ್ಷೇತ್ರದಲ್ಲಿ ಉದ್ಯೋಗ ಪಡೆಯಿರಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 03-01-2022 06:12PM

ಉಡುಪಿ : ಉದ್ಯೋಗಾಕಾಂಕ್ಷಿಗಳು ತಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು. ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲಭಿವೃಧ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಸಂಜೀವಿನಿ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಮತ್ತು ವೈಶಿಷ್ಠಪೂರ್ಣ ವ್ಯಕ್ತಿತ್ವ ಹಾಗೂ ಆಸಕ್ತಿಯನ್ನು ಹೊಂದಿದ್ದು, ತಮಗೆ ಸರಿ ಹೊಂದುವ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವುದರಿಂದ ಆ ಉದ್ಯೋಗದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾದ್ಯವಾಗಲಿದೆ. ಕೋವಿಡ್ನಿಂದ ಅನೇಕ ಮಂದಿ ಉದ್ಯೋಗ ವಂಚಿತರಾಗಿದ್ದು, ಉದ್ಯೋಗಾಕಾಂಕ್ಷಿಗಳು ಉದ್ಯೋಗಮೇಳದಲ್ಲಿ ಭಾಗವಹಿಸುವ ಕಂಪೆನಿಗಳಲ್ಲಿ ತಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಯಿರುವ ಕ್ಷೇತ್ರದ ಉದ್ಯೋಗಗಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಉದ್ಯೋಗ ಮೇಳದ ಕುರಿತ ಅತೀ ಕಡಿಮೆ ಅವಧಿಯಲ್ಲಿ 1558 ಮಂದಿ ಉದ್ಯೋಗಾಕಾಂಕ್ಷಿಗಳು ನೊಂದಾಯಿಸಿಕೊಂಡಿದ್ದು, ಇಂದಿನ ಉದ್ಯೋಗ ಮೇಳದಲ್ಲಿ ಭಾಗವಹಿಸಿರುವ ವಿವಿದ ಕಂಪನಿಗಳಲ್ಲಿ ಸುಮಾರು 2000 ದಷ್ಟು ಉದ್ಯೋಗ ಲಭ್ಯತೆಗಳಿದ್ದು, ಅಭ್ಯರ್ಥಿಗಳು ಉತ್ತಮ ರೀತಿಯಲ್ಲಿ ತಮ್ಮ ಪ್ರತಿಭೆ ತೋರುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ನ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ವಿವಿಧ ತರಬೇತಿ ಕಾರ್ಯಕ್ರಮಗಳು, ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಉದ್ಯೋಗ ಒದಗಿಸಲು ಪ್ರಯತ್ನಿಸಲಾಗುತ್ತಿದ್ದು, ಉದ್ಯಮಿಯಾಗು ಎಂಬ ಯೋಜನೆಯಡಿ, ಮೊಬೈಲ್ ಕ್ಯಾಂಟೀನ್, ಚಿಕ್ಕಿ ಘಟಕ ಸ್ಥಾಪನೆಗೆ ನೆರವು ನೀಡಲಾಗಿದ್ದು, ಉದ್ಯೋಗ ಪಡೆಯುವುದರಿಂದ ವ್ಯಕ್ತಿಯ ಆದಾಯ ಮತ್ತು ಜಿಲ್ಲೆಯ ತಲಾ ಆದಾಯ ಹೆಚ್ಚಳವಾಗಲಿದೆ ಎಂದರು. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಜಗದೀಶ್ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ನ ಗ್ರಾಮೀಣ ಜೀವನೋಪಾಯ ಅಭಿಯಾನದ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಸ್ವಾಗತಿಸಿದರು, ನವ್ಯಾ ವಂದಿಸಿದರು. ಪ್ರಭಾಕರ ಆಚಾರ್ ನಿರೂಪಿಸಿದರು. ಉದ್ಯೋಗಮೇಳದಲ್ಲಿ ಜಿಲ್ಲೆಯ ಮತ್ತು ರಾಜ್ಯದ ವಿವಿಧ 20 ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿದ್ದವು.

ಪರ್ಯಾಯೋತ್ಸವ ಸುವ್ಯವಸ್ಥಿತವಾಗಿ ನಡೆಸಲು ಎಲ್ಲಾ ಕ್ರಮ ಕೈಗೊಳ್ಳಿ : ಸಚಿವ ಸುನಿಲ್ ಕುಮಾರ್

Posted On: 03-01-2022 05:35PM

ಉಡುಪಿ : ಪರ್ಯಾಯ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಕಾರ್ಯಕ್ರಮವು ಅತ್ಯಂತ ಸುವ್ಯವಸ್ಥಿತವಾಗಿ ನಡೆಯಲು ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಸೂಚನೆ ನೀಡಿದರು. ಅವರು ಇಂದು ,ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಶ್ರೀಕೃಷ್ಣ ಮಠದ ಪರ್ಯಾಯ ಕುರಿತಂತೆ ನಡೆದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀಕೃಷಮಠದ ಪರ್ಯಾಯ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ಹಿನ್ನಲೆ , ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ, ವಾಹನಗಳ ಸುಗಮ ಸಂಚಾರ, ವಾಹನ ನಿಲುಗಡೆ, ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಅಗತ್ಯ ಮುನ್ನೆಚ್ಚರಿಕ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಪರ್ಯಾಯ ಕಾರ್ಯಕ್ರಮದ ಹಿನ್ನಲೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯ ಮಂತ್ರ್ರಿಗಳೊಂದಿಗೆ ಚರ್ಚಿಸಿ , ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ಹಾಗೂ ತ್ಯಾಜ್ಯ ವಿಲೇವಾರಿ ವಾಹನಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬೇಕು, ಸಾರ್ವಜನಿಕರ ಉಪಯೋಗಕ್ಕಾಗಿ ಹೆಚ್ಚುವರಿ ಶೌಚಾಲಯಗಳ ನಿರ್ಮಾಣ ಮಾಡುವುದರೊಂದಿಗೆ ಅವುಗಳಿಗೆ ನೀರಿನ ವ್ಯವಸ್ಥೆ ,ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದ ಅವರು, ನಗರದ ರಸ್ತೆ ನಿರ್ಮಾಣ ಸೇರಿದಂತೆ ದುರಸ್ತಿ ಕಾರ್ಯಗಳನ್ನು ಈ ತಿಂಗಳ 10 ರೊಳಗೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು. ಪೊಲೀಸ್ ಇಲಾಖೆಯವರು ವಾಹನಗಳ ಸುಗಮ ಸಂಚಾರ ಸೇರಿದಂತೆ ಅವುಗಳ ನಿಲುಗಡೆಗೆ ಸೂಕ್ತ ಸ್ಥಳಗಳನ್ನು ಗುರುತಿಸುವುದರೊಂದಿಗೆ ವಾಹನ ದಟ್ಟಣೆಯಾಗದಂತೆ ನೋಡಿಕೊಳ್ಳಬೇಕು ಅಗತ್ಯವಿದ್ದಲ್ಲಿ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ ರನ್ನು ನಿಯೋಜನೆಗೊಳಿಸಬೇಕು ,ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಕೆ ಮಾಡಬೇಕು, ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು. ಪರ್ಯಾಯ ಮೆರವಣಿಗೆ ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಟ್ಯಾಬ್ಲೋ ಗಳನ್ನು ಇಲಾಖೆಗಳು ಸಿದ್ದಪಡಿಸುವುದರೊಂದಿಗೆ , ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದ ಅವರು ರಾಜ್ಯ ಹಾಗೂ ಹೊರರಾಜ್ಯದ ಸಾಂಸ್ಕೃತಿಕ ಕಲಾತಂಡಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಧಿಕಾರಿಗಳಿಗೆ ಸೂಚಿಸಿದರು.

ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳು ಕಡ್ಡಾಯವಾಗಿ 2 ಡೋಸ್ ಕೋವಿಡ್ 19 ಲಸಿಕೆಯನ್ನು ಪಡೆದಿರಬೇಕು, ಮಾಸ್ಕ್ ಧರಿಸುವುದರೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಎಚ್ಚರವಹಿಸಬೇಕು ಎಂದರು, ಭಕ್ತಾದಿಗಳ ಸಂಚಾರಕ್ಕೆ ಅನುಗುಣವಾಗಿ ಸಾರಿಗೆ ವಾಹನಗಳನ್ನು ವ್ಯವಸ್ಥೆ ಮಾಡಬೇಕೆಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆರೋಗ್ಯ ಇಲಾಖೆವತಿಯಿಂದ ನಿಗದಿತ ಸ್ಥಳಗಳಲ್ಲಿ ಕೋವಿಡ್ ಲಸಿಕೆಗಳನ್ನು ನೀಡಲು ಲಸಿಕಾ ಕೇಂದ್ರಗಳನ್ನು ತೆರೆಯಬೇಕು, ಹೆಚ್ಚಿನ ಕೋವಿಡ್ ತಪಾಸಣೆ ಯನ್ನು ನಡೆಸಬೇಕು, ಆಂಬುಲೆನ್ಸ್ ಸೇರಿದಂತೆ ಅಗ್ನಿ ಅವಘಡಗಳು ನಡೆದಲ್ಲಿ ತಕ್ಷಣ ಸ್ಪಂದಿಸಲು ಸನ್ನದ್ಧರಾಗಿ ಇರಬೇಕೆಂದು ಸೂಚನೆ ನೀಡಿದರು. ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ವಿವಿದ ದಾನಿಗಳು ಮತ್ತು ಸಂಘ ಸಂಸ್ಥೆಗಳು ನೀಡಿರುವ 11 ಆಂಬುಲೆನ್ಸ್ ಗಳ ಪೂರ್ಣ ಪ್ರಮಾಣದ ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲೆಯ ವಿವಿಧ ಕೋ ಆಪರೇಟಿವ್ ಸೊಸೈಟಿಗಳು ನಿಭಾಯಿಸಬೇಕು ಎಂಬ ಸಚಿವರ ಮನವಿಗೆ , ಸಹಕಾರಿ ಸಂಘಗಳ ಮುಖ್ಯಸ್ಥರು ಸ್ಪಂದಿಸದ್ದು, ಈ ಕಾರ್ಯದ ಉಸ್ತುವಾರಿಯನ್ನು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂದಕರು ವಹಿಸಕೊಳ್ಳುವಂತೆ ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಹೆಚ್ಚಾತ್ತಿದ್ದು, ಈ ಸಂಖ್ಯೆಯು ಎಂ.ಐ.ಟಿ. ಪರಿಸರದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಭಾಗದಲ್ಲಿ ಹೆಚ್ಚು ಹೆಚ್ಚು ಪರೀಕ್ಷೆಯನ್ನು ಮಾಡುವುದರೊಂದಿಗೆ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡುವುದರ ಜೊತೆಗೆ ಕಂಟೈನ್ಮೆಂಟ್ ಝೋನ್ ಗಳನ್ನಾಗಿ ಘೋಷಿಸಿ ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 15 ರಿಂದ 18 ವರ್ಷದೊಳಗಿನವರಿಗೆ ಶಾಲೆಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ರೂಪಿಸಬೇಕು , ಲಸಿಕೆ ನೀಡಿದ ನಂತರ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು, ಲಸಿಕೆ ನೀಡುವ ಸಂದರ್ಭದಲ್ಲಿ ಪೋಷಕರು ಹಾಜರಿರುವಂತೆ ನೋಡಿಕೊಳ್ಳಬೇಕು, ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವಾರ್ಡನ್ ಗಳು ನಿಗಾ ವಹಿಸಬೇಕು ಎಂದರು. ಸಭೆಯಲ್ಲಿ ಉಡುಪಿ ಶಾಸಕ ಹಾಗೂ ಪರ್ಯಾಯ ಸಮಿತಿ ಗೌರವಾಧ್ಯಕ್ಷ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಉಳ್ಳಾಲ : ಐಸಿಸ್ ಸಂಪರ್ಕದ ಹಿನ್ನೆಲೆ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮಗನ ಸೊಸೆಯ ಬಂಧನ

Posted On: 03-01-2022 05:09PM

ಮಂಗಳೂರು: ಐಸಿಸ್ ಉಗ್ರರೊಂದಿಗೆ ಸಂಬಂಧದ ಆರೋಪದಡಿ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮಗ ಬಿ.ಎಂ ಬಾಷಾ ಅವರ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಅವರನ್ನು ರಾಷ್ಟ್ರೀಯ ತನಿಖಾದಳ (ಎನ್‌ಐಎ) ಇಂದು ಉಳ್ಳಾಲದ ಮನೆಯಿಂದ ಬಂಧಿಸಿದೆ.

ಇಂದು ಬೆಳಗ್ಗೆ ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಪುತ್ರ, ಬಿ.ಎಂ. ಬಾಷಾ ಮನೆಗೆ ಎನ್‌ಐಎ ನ ಸಹ ತನಿಖಾಧಿಕಾರಿ ಕೃಷ್ಣ ಕುಮಾರ್ ನೇತೃತ್ವದಲ್ಲಿ ಇತರ ಅಧಿಕಾರಿಗಳಾದ ಅಜಯ್ ಸಿಂಗ್ ಮತ್ತು ಮೋನಿಕಾ ಧಿಕ್ವಾಲ್ ಅವರ ತಂಡ ತೀವ್ರ ವಿಚಾರಣೆ ನಡೆಸಿ ದೀಪ್ತಿ ಅಲಿಯಾಸ್ ಮರಿಯಂಳನ್ನು ಬಂಧಿಸಿದ್ದಾರೆ. ನಂತರ ಮಂಗಳೂರು ನಗರದ ಜಿಲ್ಲಾಸ್ಪತ್ರೆ ವೆನ್ಲಾಕ್‌ಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ, ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಬಳಿಕ ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದುಕೊಂಡು ಹೋಗಲಿದ್ದಾರೆಂಬ ಮಾಹಿತಿ ವ್ಯಕ್ತವಾಗಿದೆ.

ಇದೇ ಕಳೆದ ಅಗಸ್ಟ್ 4ರಂದು ದಾಳಿ ನಡೆಸಿದ್ದ ಎನ್ ಐಎ ಅಧಿಕಾರಿಗಳು, ಅಂದು ಎರಡು ದಿನಗಳ ದಾಳಿಯ ಬಳಿಕ ಮಾಜಿ ಶಾಸಕ ಇದಿನಬ್ಬ ಅವರ ಪುತ್ರ ಬಿ.ಎಂ ಬಾಷಾ ಅವರ ಕಿರಿಯ ಪುತ್ರ ಅಬ್ದುಲ್ ರೆಹಮಾನರನ್ನು ಬಂಧಿಸಿದ್ದರು. ಈ ವೇಳೆ ಬಂಧಿತ ರೆಹಮಾನ್‌ನ ಪತ್ನಿ ದೀಪ್ತಿ ಆಲಿಯಾಸ್ ಮರಿಯಂ ಮೇಲೂ ಅನುಮಾನ ಬಂದಿತ್ತು. ಆದರೆ ಸಣ್ಣ ಮಗುವಿದ್ದ ಕಾರಣ ಎನ್‌ಐಎ ಕೇವಲ ವಿಚಾರಣೆ ನಡೆಸಿ ಬಿಟ್ಟಿತ್ತು. ಇದೀಗ ಮತ್ತೆ ಉಳ್ಳಾಲ ಮನೆಗೆ ಎನ್ ಐಎ ದಾಳಿ ನಡೆಸಿ ದೀಪ್ತಿ ಆಲಿಯಾಸ್ ಮರಿಯಂ ಬಂಧಿಸಿದೆ.

ಇದೀಗ ಉಗ್ರವಾದಿ ಗುಂಪು ಐಸಿಸ್ ಸಂಪರ್ಕ ಪಡೆದಿದ್ದು ಯುವಕರನ್ನು ಸೇರಿಸುವ ಜಾಲದಲ್ಲಿ ಇದ್ದಾಳೆ ಎನ್ನುವ ಶಂಕೆಯಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿ ಬಂಧಿಸಿದ್ದಾರೆ.

ಶಿರ್ವ : ಉಚಿತ ಹೃದಯ ತಪಾಸಣಾ ಶಿಬಿರ

Posted On: 03-01-2022 04:46PM

ಶಿರ್ವ : ಶಿವ೯ದಲ್ಲಿ , ಪ್ರಸ್ತುತ ಆರೋಗ್ಯ ಸಂಬಂಧಿ ವಿಚಾರದಲ್ಲಿ ಸದಾ ಎಚ್ಚರಿಕೆಯಿಂದ ಇರುವ ಅನಿವಾಯ೯ತೆ ಮತ್ತು ಅಗತ್ಯತೆ ಇಂದುನಮ್ಮ ಮುಂದಿದೆ. ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಅಬಾಲ ವೃದ್ಧರಾದಿಯಾಗಿ ಸಾವು ಸಂಭವಿಸುತ್ತದೆ ಈ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ಆರೋಗ್ಯ ವಂತ ಜನರು ಕೂಡ ತಮ್ಮ ಆರೋಗ್ಯವನ್ನು ತಜ್ಞ ವೈದ್ಯರಿಂದ ಸಕಾಲದಲ್ಲಿ ಪರೀಕ್ಷಿಸಿ ಹೃದಯದ ರೋಗಗಳಿಂದ ತಮ್ಮನ್ನು ರಕ್ಷಣೆ ಮಾಡಿಸಿಕೊಳ್ಳುವುದು ಬಹಳ ಮಹತ್ವದ ವಿಚಾರವಾಗಿದೆ ಎಂದು ಲಯನ್ಸ್ ಕ್ಲಬ್ ಶಿವ೯, ಸಂತ ಮೇರಿ ಮಹಾವಿದ್ಯಾಲಯ ಶಿವ೯,ಸಂತ ಮೇರಿ ಪಿಯು ಕಾಲೇಜು ಹಳೆವಿದ್ಯಾಥಿ೯ ಸಂಘ,ಸ್ತೃೀ ಸಂಘಟನೆ ಶಿವ೯,ಕಸ್ತೂರಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ , ಮಣಿಪಾಲ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಹೃದಯ ತಪಾಸಣಾ ಕಾಯ೯ಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತೀ ವಂದನೀಯ ಧರ್ಮ ಗುರುಗಳು ಅಲೆಕ್ಸಾಂಡರ್ ಡೆನಿಸ್ ಡೇಸಾರವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು.

ಕೆ ಎಂಸಿ ಮಣಿಪಾಲ ಇಲ್ಲಿಯ ವೈದ್ಯರಾದ ಡಾ. ಗೋಸಾವಿ ಸಿದ್ಧಾಥ್೯ ಹೃದಯ ತಪಾಸಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮೆಲ್ವಿನ್ ನೊರೊನ್ನ, ಪಿಯು ಸಂತಮೇರಿ ಕಾಲೇಜು ಹಳೆವಿದ್ಯಾಥಿ೯ ಸಂಘ ಅಧ್ಯಕ್ಷ ರು, ಜಾಜ್೯ ಅನಿಲ್ ಡಿ'ಸೋಜ ಅಧ್ಯಕ್ಷರು ಲಯನ್ಸ್ ಕ್ಲಬ್ ಶಿವ೯, ಜ್ಯೋತಿ ಡಿ'ಸೋಜ ,ಅಧ್ಯಕ್ಷರು ಸ್ತ್ರಿಸಂಘಟನೆ ಶಿವ೯, ಮಥಾಯಸ್ ಲೋಬೊ ಕಾಯ೯ದಶಿ೯ ಪಿಯು ಕಾಲೇಜು ಹಳೆವಿದ್ಯಾಥಿ೯ ಸಂಘ,ಶಿವ೯ ಕಾಲೇಜಿನ ಕ್ಷೇಮಪಾಲನಾ ಅಧಿಕಾರಿ ಯಶೋಧ , ಎನ್ ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ಎನ್ಎಸ್ಎಸ್ ಅಧಿಕಾರಿಗಳಾದ ಪ್ರೇಮನಾಥ್ ಕೋಟ್ಯಾನ್,ರಕ್ಷಾ , ರೋವರ್ಸ್ ರೇಂಜರ್ಸ್ ಲೀಡರ್ ಗಳಾದ ಪ್ರಕಾಶ್, ಸಂಗೀತ ಪೂಜಾರಿ, ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕ ವಿಠ್ಠಲ್ ನಾಯಕ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ ಒಂದರ ತನಕ ಸುಮಾರು 80 ಜನರು ಶಿಬಿರದ ಪ್ರಯೋಜವನ್ನು ತಮ್ಮ ಆರೋಗ್ಯತಪಾಸಣೆ ಮಾಡುವ ಮೂಲಕ ಪಡೆದುಕೊಂಡರು. ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತ , ಕಂಪನಿ ಸಾರ್ಜೆಂಟ್ ಕ್ವಾಟರ್ಮಸ್ಟರ್ ಮೋಹಿತ್ ಎನ್ ಸಾಲಿಯಾನ್, ಕಾರ್ಪೊರಲ್ ಧೀರಜ್ ಆಚಾರ್ಯ, ಎನ್‌ಎಸ್‌ಎಸ್ ಸ್ವಯಂಸೇವಕರಾದ ವೈಷ್ಣವಿ, ಮಿನಾಜ್, ಸಿಂಚನಾ, ಶ್ರೇಯಸ್, ಮೊಹಮ್ಮದ್ ಅಫ್ನಾನ್, ರೋವರ್ ಸ್ವಯಂಸೇವಕರಾದ ಡಾರಿಲ್ ಮತ್ತು ಕಾಲೇಜಿನ ಆಡಳಿತ ಸಿಬ್ಬಂದಿ ವರ್ಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ತಮ್ಮ ಸಂಪೂರ್ಣ ಸಹಕಾರವನ್ನು ನೀಡಿದರು.

ಸಂತಮೇರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ್ ರವರು ಸವ೯ರನ್ನು ಸ್ವಾಗತಿಸಿ, ಚಾಲ್ಸ೯ ಮೋಹನ್ ನೊರೊನ್ಹ ಲಯನ್ಸ್ ಕ್ಲಬ್ ಶಿವ೯ ವಂದಿಸಿ, ನೋಬ೯ಟ್೯ ಮಚಾದೊ ಮಾಜಿ ಅಧ್ಯಕ್ಷರು ಲಯನ್ಸ್ ಕ್ಲಬ್ ಶಿವ೯ ಕಾರ್ಯಕ್ರಮ ನಿರೂಪಿಸಿದರು.

ಸಂತ ಮೇರಿ ಮಹಾವಿದ್ಯಾಲಯದಲ್ಲಿ ಲಸಿಕಾ ಅಭಿಯಾನ

Posted On: 03-01-2022 01:36PM

ಶಿರ್ವ:ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿವಿಧ ಘಟಕಗಳಾದ ಎನ್‍ಸಿಸಿ, ಎನ್‍ಎಸ್‍ಎಸ್, ಯೂತ್ ರೆಡ್ ಕ್ರಾಸ್, ರೋವರ್ಸ-ರೇಂಜರ್ಸ್, ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಜಂಟಿಯಾಗಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲಸಿಕಾ ಅಭಿಯಾನವನ್ನು ಕಾಲೇಜಿನ ದೃಶ್ಯ ಶ್ರವ್ಯ ಕೊಠಡಿಯಲ್ಲಿ ಆಯೋಜಿಸಲಾಯಿತು.

ಪದವಿ ಕಾಲೇಜುಗಳಲ್ಲಿ ಹೊಸತಾಗಿ ಸೇರ್ಪಡೆ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ -19 ಲಸಿಕಾಕರಣ ನಡೆಸಲು ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಕಾಲೇಜಿನ 15 ರಿಂದ 18 ವರ್ಷದೊಳಗಿನ ಅರ್ಹ ಫಲಾನುಭವಿಗಳಿಗೆ ಲಸಿಕೆಗಳ ಲಭ್ಯತೆಗೆ ಅನುಸಾರವಾಗಿ ಕಾಲೇಜು ಆವರಣದಲ್ಲಿಯೇ ಲಸಿಕಾಕರಣ ಅಭಿಯಾನ ಆಯೋಜಿಸಲಾಯಿತು, ಕಾಲೇಜು ಆಡಳಿತ ವ್ಯವಸ್ಥೆಯ ಸಹಕಾರದಿಂದ ಕೋವಿಡ್ ನಿಯಂತ್ರಣ ನಿಯಮಾವಳಿಗಳನ್ನು ಪಾಲಿಸಿಕೊಂಡು ಲಸಿಕೆ ವಿತರಿಸಲಾಗುತ್ತಿದೆ ಎಂದು ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಹಾಗೂ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಜಿಲ್ಲಾಡಳಿತದ ವತಿಯಿಂದ ವಿಧ್ಯಾರ್ಥಿಗಳಿಗೆ ಉಚಿತ ಲಸಿಕೆ ವಿತರಣೆ ಮಾಡಲಾಗುತ್ತಿದ್ದು ಕಾಲೇಜುಗಳ ಮೂಲಕ ಲಸಿಕೆ ನೀಡಲಾಗುತ್ತಿದೆ,ಲಸಿಕೆ ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂಬ ಮಾಹಿತಿಯನ್ನು ನೀಡಿದರು.    ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶಿರ್ವ ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಡಾ| ವೈಷ್ಣವಿ ರವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು. ಈ ಅಭಿಯಾನಕ್ಕೆ ಸಹಕಾರವನ್ನು ನೀಡಿದ ಕಾಲೇಜಿನ ವಿದ್ಯಾರ್ಥಿ ಅನುಪ್ ನಾಯಕ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಶಶಿ ಆಶಾ ಕಾರ್ಯಕರ್ತರಾದ ಸಂಗೀತ, ವಿಜಯ, ನಿರ್ಮಲರವರು ನೆರವೇರಿಸಿ ಕೊಟ್ಟರು.

ಕಲ್ಯಾಣಪುರ ರೋಟರಿ ಕ್ಲಬ್ : ಕುಟುಂಬ ಸಮ್ಮಿಲನ, ಸೌಹಾರ್ದ ಕೂಟ, ಸನ್ಮಾನ

Posted On: 02-01-2022 11:43AM

ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ನ ಸದಸ್ಯರ ಕುಟುಂಬ ಸಮ್ಮಿಲನ ಮತ್ತು ಸೌಹಾರ್ದ ಕೂಟ ನೆರವೇರಿತು. ಈಬಸಂದರ್ಭ ಸದಸ್ಯರಾದ ವಿಜಯ ಮಯ್ಯಾಡಿ ಇವರ ಹುಟ್ಟು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಜರುಗಿದ ಈ ಸಮಾರಂಭದಲ್ಲಿ ಹವ್ಯಾಸಿ ರಕ್ತ ದಾನಿಯಾದ ದೀಕ್ಷಿತ್ ಪ್ರಭುರವರ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಸನ್ಮಾನಿಸಲಾಯಿತು. ರೊಟರಾಕ್ಟ್ ಮಣಿಪಾಲದ ನೂತನ ಅಧ್ಯಕ್ಷರಾದ ಗ್ಲೆನ್ ಡಯಾಸ್ ರವರನ್ನು ಅಭಿನಂದಿಸಲಾಯಿತು.

ಕಲ್ಯಾಣಪುರ ರೋಟರಿಯ ಸದಸ್ಯರು ಆದ, ಅಂತಾರಾಷ್ಟ್ರೀಯ ಸಾಧನೆ ಮಾಡಿದ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜರಾಮ ಭಟ್, Indian Dental Association Manglore ಚಾರ್ಟರ್ ನ ನೂತನ ಅಧ್ಯಕ್ಷರಾದ ಡಾ.ರೋಶನ್ ಶೆಟ್ಟಿ, ಮುದ್ರಣ ಸಂಸ್ಥೆಗಳ ಮಾಲೀಕರ ಸಂಘದ ರಾಜ್ಯ ಸಂಚಾಲಕರಾಗಿ ಆಯ್ಕೆ ಆದ ಮಹೇಶ್ ಕುಮಾರ್, ಡಾಕ್ಟರೇಟ್ ಪದವಿ ಪಡೆದ ಡಾ.ಮೇವಿ ಮಿರಾಂಡಾ ರವರು ಗಳನ್ನೂ ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ನ ಅಧ್ಯಕ್ಷ ಶಂಭು ಶಂಕರ್, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಶಿರ್ವ ಗ್ರಾಮ ಪಂಚಾಯತ್ ಗೆ ರೂ 11ಲಕ್ಷ ಮೌಲ್ಯದ ಸ್ವಚ್ಛವಾಹಿನಿ ವಾಹನ ಕೊಡುಗೆ

Posted On: 02-01-2022 09:15AM

ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ನ ನಮ್ಮ ಶಿರ್ವ, ಸ್ವಚ್ಛ ಶಿರ್ವ ಪರಿಕಲ್ಪನೆಯಡಿ ಸ್ವಚ್ಚತೆಯನ್ನು ನಿರ್ವಹಿಸಲು ಅನುಕೂಲವಾಗುವಂತೆ , ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರ ವಿನಂತಿಗೆ ಸ್ಪಂದಿಸಿದ ಶಿರ್ವ ನಿವಾಸಿ, ದಾನಿ, ಮುಂಬೈಯಲ್ಲಿ ಉದ್ಯಮಿಯಾಗಿರುವ ಥೋಮಸ್ ವಿಲ್ಫ್ರಡ್ ಪಿಂಟೊ ರವರು ರೂ. 11 ಲಕ್ಷ ಮೌಲ್ಯದ ಬೊಲೆರೋ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ.

ಪಂಚಾಯತ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ದಾನಿಯವರ ಪರವಾಗಿ ಅವರ ಸಹೋದರ ಮೆಥ್ಯು ಡೇಸಾರವರು ವಾಹನದ ಕೀಲಿಯನ್ನು ಪಂಚಾಯತ್ ಅಧ್ಯಕ್ಷ ಕೆ ಆ ರ್ ಪಾಟ್ಕರ್ ರವರಿಗೆ ಹಸ್ತಾಂತರಿಸಿದರು.

ಇದೇ ಸಂಧರ್ಭದಲ್ಲಿ ದಾನಿಗಳಿಗೆ ಪಂಚಾಯತ್ ವತಿಯಿಂದ ಪಂಚಾಯತ್ ಅಧ್ಯಕ್ಷರು ಶಾಲು ಹೊದಿಸಿ ಸ್ಮರಣಿಕೆ, ಕೃತಜ್ಞತಾ ಪತ್ರ ನೀಡಿ ಗೌರವಿಸಿ ಮಾತನಾಡಿ ಈ ಕೊಡುಗೆಗಾಗಿ ಕೃತಜ್ಞತೆಯನ್ನು ಸಲ್ಲಿಸಿದರು. ಗ್ರಾಮಸ್ಥರು, ದಾನಿಗಳು ಈ ರೀತಿಯ ಸಹಕಾರ ನೀಡಿದರೆ ಗ್ರಾಮದ ಅಭಿವೃದ್ದಿ ಸಾಧ್ಯ, ಈ ಕಸ ಸಂಗ್ರಹ ವಾಹನವು ನಮ್ಮ ಪಂಚಾಯತ್ ಗೆ ಅತೀ ಅಗತ್ಯವಾಗಿತ್ತು, ಇದರಿಂದ ನಮ್ಮ ಶಿರ್ವ ಸ್ವಚ್ಛ ಶಿರ್ವ ಪರಿಕಲ್ಪನೆಗೆ ಮತ್ತಷ್ಟು ಅನುಕೂಲವಾಗಿದೆ ಎಂದರು.

ಗ್ರಾಮ ಪಂಚಾಯತ್ ಸದಸ್ಯರಾದ ವೈಲೆಟ್ ಕಸ್ತಲಿನೋ, ಜೆಸಿಂತಾ ಡಿ'ಸೋಜಾ, ಹಸನಬ್ಬ ಶೇಖ್, ಪ್ರವೀಣ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. SLRM ಘಟಕದ ಮೇಲ್ವಿಚಾರಕರಿದ ಕಿಶೋರ್, ರಕ್ಷಿತ್ ಗ್ರಾಮ ಪಂಚಾಯತ್ ಸಬ್ಬಂಧಿ ವರ್ಗ, ಎಸ್.ಎಲ್.ಆರ್.ಎಮ್ ಘಟಕದ ಸಿಬ್ಬಂಧಿ ವರ್ಗ, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಮಂಗಳ ಕೆ.ವಿ ಯವರು ವಂದಿಸಿದರು. ಕಾರ್ಯಕ್ರಮದ ಬಳಿಕ ಹೊಸ ವಾಹನದಲ್ಲಿ ಶಿರ್ವ ದಿಂದ ಬಂಟಕಲ್ಲು ವರೆಗೆ ರಸ್ತೆಯ ಇಕ್ಕೆಲಗಳಲ್ಲಿನ ಕಸ, ತ್ಯಾಜ್ಯ, ಪ್ಲಾಸ್ಟಿಕ್ ಗಳನ್ನು ಪಂಚಾಯತ್ ಅಧ್ಯಕ್ಷರು ಮತ್ತು ಅಭಿವೃದ್ದಿ ಅಧಿಕಾರಿಯವರ ನೇತ್ರತ್ವದಲ್ಲಿ SLRM ಘಟಕದ ಸಿಬ್ಬಂದಿಯವರು ಸ್ವಚ್ಛಗೊಳಿಸಿದರು.