Updated News From Kaup
ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷರಾಗಿ ಕಿರಣ್ ಪೂಜಾರಿ ಆಯ್ಕೆ
Posted On: 07 Apr 2022, 08:05 PM
ಕುಂದಾಪುರ: ಇಲ್ಲಿನ ತಾಲೂಕು ಪತ್ರಕರ್ತರ ಸಂಘ (ರಿ) ಕುಂದಾಪುರ ಫೀಲೋಮಿನಾ ಕಮರ್ಷಿಯಲ್ ಪಾರ್ಕ್ ಕುಂದಾಪುರ ಸಂಘದ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕಿರಣ್ ಪೂಜಾರಿ, ಕಾರ್ಯದರ್ಶಿಯಾಗಿ ಸಂತೋಷ ಪಟೇಲ್, ಗೌರವಾಧ್ಯಕ್ಷರಾಗಿ ಎಸ್ ಸತೀಶ್ ಕುಮಾರ್ ಕೋಟೇಶ್ವರ ಹಾಗೂ ಪದಾಧಿಕಾರಿಗಳ ಆಯ್ಕೆ ಸಂಘದ ಸರ್ವ ಸದಸ್ಯರಿಂದ ಮಾಡಲಾಯಿತು. ಕಾನೂನು ಸಲಹೆಗಾರರಾಗಿ ರವಿಕಿರಣ್ ಮುರ್ಡೇಶ್ವರ ಮತ್ತು ಸೋಮನಾಥ ಹೆಗ್ಡೆ ಮತ್ತು ಸಂಘದ ಗೌರವ ಸಲಹೆಗಾರರಾಗಿ ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕರಾದ ಟಿ. ಪಿ. ಮಂಜುನಾಥ್, ಉಪಾಧ್ಯಕ್ಷರಾಗಿ ಪ್ರದೀಪ್ ಪಟೇಲ್, ದಯಾನಂದ್ ನಾಯಕ್ ಮತ್ತು ಎಸ್ ಕೃಷ್ಣ ಮರಕಾಲ ಬೀಜಾಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ದಾಮೋದರ್ ಮೊಗವೀರ, ಪುರುಷೋತ್ತಮ್ ಪೂಜಾರಿ, ಜನಾರ್ಧನ್ ಕೆ. ಎಮ್ ಉಪಸ್ಥಿತರಿದ್ದರು.
ಮಾಜಿ ಸಚಿವರೊಂದಿಗೆ ಅನುಚಿತ ವರ್ತನೆಗೈದ ಶಿರ್ವ ಪಿಡಿಓರವರನ್ನು ತಕ್ಷಣ ಅಮಾನತುಗೊಳಿಸಬೇಕು - ಕಾಪು ಬ್ಲಾಕ್ ಯುವಕಾಂಗ್ರೆಸ್ ( ದಕ್ಷಿಣ ) ಅಧ್ಯಕ್ಷ ರಮೀಝ್ ಹುಸೈನ್
Posted On: 05 Apr 2022, 10:07 PM
ಕಾಪು : ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಕಟ್ಟಿದ್ದಾರೆ ಅನ್ನೋ ನೆಪದಲ್ಲಿ, ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರ ಮನೆಯನ್ನು ಬಿಜೆಪಿಯವರ ಕುಮ್ಮಕ್ಕಿನಿಂದ ಶಿರ್ವ ಗ್ರಾಮಪಂಚಾಯತ್ ಪಿಡಿಓ ,ಕಾಪು ತಹಶೀಲ್ದಾರ್ ಆದೇಶದ ನೆಪವನ್ನು ಇಟ್ಟುಕೊಂಡು ಮನೆ ಧ್ವಂಸಗೊಳಿಸಿದ್ದು, ಈ ವಿಚಾರದಲ್ಲಿ ಸ್ಪಷ್ಟನೆ ಕೇಳಲು ತೆರಳಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರ ಜೊತೆ ಅಮಾನವೀಯ ವರ್ತನೆ ತೋರಿ ಹಲ್ಲೆಗೆ ಯತ್ನಿಸಿದ ಪಿಡಿಓ ರವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಕಾಪು ಯುವಕಾಂಗ್ರೆಸ್ ಒತ್ತಾಯಿಸಿದೆ. ಈ ಮಧ್ಯೆ ಈ ವಿಚಾರದಲ್ಲಿ ಸೊರಕೆಯವರು ಮಾಧ್ಯಮ ಹೇಳಿಕೆ ನೀಡುತ್ತಿದ್ದ ಸಂದರ್ಭ ಏಕಾಏಕಿ ಬಿಜೆಪಿ ಗೂಂಡಾಗಳು, ಘೋಷಣೆ ಕೂಗುತ್ತಾ, ಸೊರಕೆಯವರ ಮಾತಿಗೆ ಅಡ್ಡಿಪಡಿಸಿದ್ದು, ಬಡಕುಟುಂಬದ ಮನೆಯನ್ನು ದ್ವಂಸಗೊಳಿಸುವಲ್ಲಿ ಬಿಜೆಪಿಯ ಕೈವಾಡ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಶಿರ್ವ ಪಿಡಿಓ ಜೊತೆ ಸೇರಿ ಯಾವುದೇ ನೋಟಿಸ್ ನೀಡದೆ ಮನೆಯನ್ನು ದ್ವಂಸಗೊಳಿಸಿದ್ದು ಅತ್ಯಂತ ಖಂಡನೀಯ ಆ ಕುಟುಂಬ ಮನೆ ಇಲ್ಲದೆ ಈಗ ಬೀದಿಪಾಲಾಗಿದೆ. ಬಿಜೆಪಿಯವರಿಗೆ ನೈತಿಕತೆ ಇದ್ದರೆ ನೊಂದ ಮಹಿಳೆಯ ಕುಟುಂಬದ ಜೊತೆ ಇದ್ದು ಮನೆ ನಿರ್ಮಾಣ ಕಾರ್ಯದಲ್ಲಿ ನೈತಿಕ ಬೆಂಬಲ ಸೂಚಿಸಬೇಕು. ಕೂಡಲೇ ಆ ಬಡಕುಟುಂಬಕ್ಕೆ ಮನೆಯನ್ನು ಪಂಚಾಯತಿ ವತಿಯಿಂದಲೇ ನಿರ್ಮಾಣ ಮಾಡಿಕೊಡಬೇಕು ಎಂದು ಕಾಪು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಕಾಯಕಲ್ಪ ನಿಟ್ಟಿನಲ್ಲಿ ಜನತಾ ಜಲಧಾರೆ ರಥ ಯಾತ್ರೆ ಉಡುಪಿಗೆ : ಯೋಗೀಶ ವಿ ಶೆಟ್ಟಿ
Posted On: 05 Apr 2022, 06:44 PM
ಉಡುಪಿ : ರಾಜ್ಯದ ನೆಲ-ಜಲದ ಚಿಂತನೆಯೊಂದಿಗೆ ಕುಡಿಯುವ ನೀರು, ನೀರಾವರಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ರಾಜ್ಯದ ಹಾಗೂ ಉಡುಪಿ ಜಿಲ್ಲೆಯಲ್ಲಿ ನೆನೆಗುಂದಿಗೆ ಬಿದ್ದ ನೀರಾವರಿ ಯೋಜನೆಗಳು ಮತ್ತು ನದಿ ನೀರು ಪಶ್ಚಿಮಕ್ಕೆ ಹರಿದು ಸಮುದ್ರಕ್ಕೆ ಸೇರುವುದನ್ನು ತಡೆದು ಕೃಷಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ನಮ್ಮ ಸರಕಾರದ ಮುಂದಿನ ಕಾಳಜಿ ಇದೆ. ಹಿಂದೆಯೂ ನಮ್ಮ ಸರಕಾರ ನೀರಾವರಿ ವ್ಯವಸ್ಥೆಯನ್ನು ನಮ್ಮ ನಾಯಕರು ಮಾಡಿದ್ದಾರೆ ಇದರ ಅಂಗವಾಗಿ ಜನರು ಪಕ್ಷಾತೀತವಾಗಿ ಬೆಂಬಲ ಕೋರುವಂತೆ ನಾಯಕರಿಗೆ, ಕಾರ್ಯಕರ್ತರಿಗೆ ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ ವಿ ಶೆಟ್ಟಿ ಕರೆ ನೀಡಿದರು. ಅವರು ಏಪ್ರಿಲ್ 4 ರಂದು ಜಿಲ್ಲೆಯ ಪಕ್ಷದ ಕಚೇರಿಯಲ್ಲಿ ನಡೆದ ಜಿಲ್ಲಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಜಲವಿವಾದ ಸುಳಿಯಲ್ಲಿ ಸಿಕ್ಕಿ ರಾಜ್ಯಕ್ಕೆ ಅನ್ಯಾಯವಾಗಿದೆ, ಮತ್ತು ಕೆಲವೊಂದು ಜಲವಿವಾದಗಳು ಸುಪ್ರೀಂ ಕೋರ್ಟಿನಲ್ಲಿ ನೆರೆ ರಾಜ್ಯಗಳ ತಕರಾರಿನಿಂದ ನೆನೆಗುದಿಗೆ ಬಿದ್ದಿದೆ. ವ್ಯವಸಾಯಕ್ಕೆ ನೀರುಣಿಸಲು ನಿರ್ಮಿಸಿರುವ ಕಾಲುವೆಗಳು ಮತ್ತು ವಿತರಣಾ ನಾಲೆಗಳನ್ನು ಪುನಶ್ಚೇತನ ಆಧುನೀಕರಣ ಗೊಳಿಸದೆ ರೈತರಿಗೆ ಸದುಪಯೋಗ ಪಡೆಯಲು ಆಗುತ್ತಿಲ್ಲ. ಈ ಯೋಜನೆ ಗಳಿಗೆ ಕಾಯಕಲ್ಪ ಕಲ್ಪಿಸಿ ರಾಜ್ಯದ ನದಿಗಳಲ್ಲಿ ದೊರೆಯುವ ನೀರನ್ನು ಸದ್ಬಳಕೆ ಮಾಡಿ, ಕರ್ನಾಟಕ ಜನತೆಗೆ ಜಲ ಶಾಮಲ, ಸಸ್ಯಶಾಮಲ ವಾಗಿಸಲು ಜನತಾದಳ ಕಟಿಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ಕುಡಿಯುವ ನೀರು ಮತ್ತು ರೈತರ ಜಮೀನುಗಳಿಗೆ ನೀರುಣಿಸಲು ಜನತಾದಳ ಪಕ್ಷದ ವತಿಯಿಂದ ಕಾಯಕಲ್ಪ ಮಾಡಲಾಗುವುದು. ಕನ್ನಡನಾಡಿನ ಜಲಸಂಪನ್ಮೂಲ ರಾಜ್ಯದ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಆಧ್ಯಾರ್ಪಣೆ, ಇದು ಪಕ್ಷದ ದೃಢಸಂಕಲ್ಪ. ನಮ್ಮ ಜಿಲ್ಲೆಗೆ ಜಲಧಾರೆ ಯಾತ್ರೆಯ ವಾಹನವು ಎಪ್ರಿಲ್ ತಿಂಗಳಲ್ಲಿ ಆಗಮಿಸಲಿದ್ದು, ಕಲಶಕ್ಕೆ ವಾರಾಹಿ,ಸೌಪರ್ಣಿಕಾ ನದಿ, ಸೀತಾನದಿ, ಶಾಂಭವಿ ನದಿ, ನೇತ್ರಾವತಿ ನದಿಯ ನೀರನ್ನು ಶೇಖರಿಸಿ, ಬೆಂಗಳೂರು ತಲುಪಿ, ರಾಜ್ಯದ ಇತರ ಕಡೆಗಳಿಂದ ಆಗಮಿಸುವ ಜಲಧಾರೆಯ ಕಲಶ ದೊಂದಿಗೆ ಅರಮನೆ ಮೈದಾನದಲ್ಲಿ ಬೃಹತ್ ಸಭೆ ಜರಗಿದ ನಂತರ, ಜೆಪಿ ಭವನದ ರಾಜ್ಯ ಪಕ್ಷ ಕಚೇರಿಯಲ್ಲಿ ವರ್ಷಪೂರ್ತಿ ಕಲಶಕ್ಕೆ ಪೂಜೆಗಳು ನಡೆಯಲಿದ್ದು, ಜಲಯಾತ್ರೆಯ ಕಾರ್ಯಕ್ರಮಕ್ಕೆ ಸರ್ವರ ಸಹಕಾರವನ್ನು ಕೋರಿದರು. ಈ ಸಂದರ್ಭ ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀ ವಾಸುದೇವರಾವ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಕಾಂತ ಅಡಿಗರು, ಸಂದರ್ಭೋಚಿತವಾಗಿ ಮಾತನಾಡಿದರು. ಸಭೆಯಲ್ಲಿ ರಾಜ್ಯ ಪದಾಧಿಕಾರಿಯಾದ ಗಂಗಾಧರ ಬಿರ್ತಿ, ಜಿಲ್ಲಾ ಪದಾಧಿಕಾರಿಗಳು,ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ, ಸಂದೇಶ್ ಭಟ್, ಶ್ರೀಕಾಂತ ಹೆಬ್ರಿ, ಬಾಲಕೃಷ್ಣ ಆಚಾರ್ಯ, ಮತ್ತು ಜಿಲ್ಲಾ ಯುವ ಅಧ್ಯಕ್ಷ ಸಂಜಯ ಕುಮಾರ್,ಮತ್ತು ಉದಯ ಆರ್ ಶೆಟ್ಟಿ, ರಮೇಶ್ ಕುಂದಾಪುರ, ವೆಂಕಟೇಶ್ ಎಂ ಟಿ, ಎಸ್. ಪಿ.ಬರ್ಬೊಸ, ಆರ್. ಎನ್.ಕೋಟ್ಯಾನ್, ದೇವರಾಜ ತೊಟ್ಟಮ್, ರಾಮರಾವ್, ಬಾಲಚಂದ್ರ ದೇವಾಡಿಗ, ಭರತ್ ಕುಮಾರ್ ಶೆಟ್ಟಿ, ಮಹೇಶ್ ಪರ್ಕಳ, ಸಂಪತ್, ವಿಶಾಲ್, ಆದಿತ್ಯ ಕುಮಾರ್, ಉದಯಕುಮಾರ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ರವರ ಸ್ವಾಗತಿಸಿ , ಜಿಲ್ಲಾ ಮಹಿಳಾ ಕಾರ್ಯಾಧ್ಯಕ್ಷರಾದ ಪೂರ್ಣಿಮಾ ಎಸ್ ನಾಯಕ್ ವಂದಿಸಿದರು.
ದಲಿತ ವೃದ್ಧೆಯ ಅನಧಿಕೃತ ಮನೆ ಕೆಡವಿದ ಕಂದಾಯ ಇಲಾಖೆ ; ನ್ಯಾಯಕ್ಕೆ ಒತ್ತಾಯಿಸಿದ ಮಾಜಿ ಸಚಿವ ಸೊರಕೆ ಮತ್ತು ಪಿಡಿಒ ನಡುವೆ ಮಾತಿನ ಚಕಮಕಿ
Posted On: 05 Apr 2022, 03:27 PM
ಶಿರ್ವ : ಕಾಪು ತಾಲೂಕು ಶಿರ್ವ ಗ್ರಾಮದ ಸರ್ಕಾರಿ ಜಮೀನಿನಲ್ಲಿ ದಲಿತ ಜನಾಂಗಕ್ಕೆ ಸೇರಿದ ಪದ್ಮಬಾಯಿ ಎಂಬವರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ತಗಡಿನ ಗುಡಿಸಲು ಮನೆ ನಿರ್ಮಾಣ ಮಾಡಿಕೊಂಡಿದ್ದರು. ಈ ಪೈಕಿ ಕಂದಾಯ ಇಲಾಖೆ ದಿನಾಂಕ ಏಪ್ರಿಲ್ 4ರಂದು ಜೆಸಿಬಿ ಮುಖಾಂತರ ಅಕ್ರಮ ಮನೆಯನ್ನು ಕೆಡವಿ ಹಾಕಿದ್ದರು. ಈ ವಿಚಾರವನ್ನು ಖಂಡಿಸಿ ಇಂದು ಶಿರ್ವ ಗ್ರಾಮ ಪಂಚಾಯತ್ ಮುಂಭಾಗ ಮಾಜಿ ಸಚಿವ, ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯ ನೇತೃತ್ವದಲ್ಲಿ ಬಡ ಕುಟುಂಬಕ್ಕೆ ನ್ಯಾಯ ದೊರಕಬೇಕೆಂಬ ದೃಷ್ಟಿಯಿಂದ ಪ್ರತಿಭಟನೆ ನಡೆಸಿ ಪಿಡಿಓ ಮುಖಾಂತರ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಜಮಾಗೊಂಡಿದ್ದರು. ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರು. ಈ ಸಮಯದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸೊರಕೆಯ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಧರ್ಭದಲ್ಲಿ ಗುಂಪಾಗಿ ಸೇರಿದ್ದ ಪ್ರತಿಭಟನಕಾರರ ನೂಕಾಟ ತಲ್ಲಾಟದಲ್ಲಿ ಮಾಜಿ ಸಚಿವ ಸೊರಕೆಯ ಶರ್ಟ್ ಹರಿದ ಘಟನೆ ನಡೆದಿದೆ. ಮನವಿ ಸಲ್ಲಿಸಲು ಪಂಚಾಯತ್ ಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸೊರಕೆ ಪಿಡಿಓಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ ಸಂದರ್ಭ ಉಡಾಫೆ ಉತ್ತರ ನೀಡಿದ್ದರಿಂದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಗರಂ ಆದರು. ಘಟನಾ ಸ್ಥಳಕ್ಕೆ ಕಾಪು ತಾಲೂಕಿನ ತಹಶಿಲ್ದಾರ್ ಶ್ರೀನಿವಾಸ ಕುಲಕರ್ಣಿ ಭೇಟಿ ನೀಡಿ ಸಮಸ್ಯೆಗೆ ಶೀಘ್ರ ನ್ಯಾಯ ಒದಗಿಸುವ ಬಗ್ಗೆ ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ
Posted On: 04 Apr 2022, 02:47 PM
ಕಾಪು : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇದರ ಕಾಪು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭವು ಏಪ್ರಿಲ್ 3ರಂದು ಕಾಪು ಶ್ರೀವೀರಭದ್ರ ಸಭಾಭವನ ಇಲ್ಲಿ ಜರಗಿತು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಸ್ಥಾಪಕ ಅಧ್ಯಕ್ಷರಾದ ಎ.ಎಸ್.ಎನ್.ಹೆಬ್ಬಾರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಈ ಸದರ್ಭ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರಕುಮಾರ್ ಕೋಟ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಕೋಶಾಧ್ಯಕ್ಷರಾದ ಮನೋಹರ್ ಪಿ, ಕಾಪು ತಾಲೂಕು ಘಟಕದ ನಿಯೋಜಿತ ಅಧ್ಯಕ್ಷರಾದ ಬಿ ಪುಂಡಲೀಕ ಮರಾಠೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಬಾನುಲಿ ಕಲಾವಿದ, ಶ್ರೀ ಗಣೇಶ್ ಗಂಗೊಳ್ಳಿಯವರಿಂದ ಗೀತಾಗಾಯನ ಕಾರ್ಯಕ್ರಮ ಜರಗಿತು.
ಕಾಪು : ಮಾತು...ಕಥೆ ಕಿರುಚಿತ್ರ ಬಿಡುಗಡೆ
Posted On: 03 Apr 2022, 06:03 PM
ಕಾಪು, ಏ.3 : ಈಶಾನ್ಯ ಕ್ರಿಯೇಷನ್ಸ್ ಅರ್ಪಿಸುವ ಎಸ್- ಟೀಮ್ ಪ್ರಸ್ತುತಪಡಿಸುವ ಸತ್ಯ ಘಟನೆ ಆಧಾರಿತ ಕಿರುಚಿತ್ರ ಮಾತು... ಕಥೆ ಜೆಸಿಐ ಭವನ ಕಾಪು ಇಲ್ಲಿ ಬಿಡುಗಡೆಗೊಂಡಿತು. ಮುಖ್ಯ ಅತಿಥಿಗಳಾಗಿ ಕಾಪುವಿನ ಈಶಾನ್ಯ ಕನ್ಸ್ ಸ್ಟ್ರಕ್ಷನ್ ನ ಪ್ರಸಾದ್ ಪಾದೂರು, ಸಂಗೀತ ನಿರ್ದೇಶಕ ಲಾಯ್ ವ್ಯಾಲೆಂಟೈನ್ ಸಲ್ಡಾನ್ಹಾ, ರಂಗನಟ, ನಿರ್ದೇಶಕ ದಿವಾಕರ್ ಕಟೀಲ್, ಕಾಪು ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ, ದಿನೇಶ್ ಆಚಾರ್ಯ, ಶ್ರೀಕಾಂತ್ ಆಚಾರ್ಯ ಉಪಸ್ಥಿತರಿದ್ದರು. ಮಾತು... ಕಥೆ ಕಿರುಚಿತ್ರದಲ್ಲಿ ವಿಕಾಸ್ ಕೆ ಇವರ ಚಿತ್ರಕಥೆ, ಸಂಕಲನ, ನಿರ್ದೇಶನವಿದ್ದು, ಪ್ರದೀಪ್ ನಾಯಕ್, ಧೀರಜ್ ಭಟ್ ಛಾಯಾಗ್ರಹಣ, ಸೃಜನ್ ಕುಮಾರ್ ತೋನ್ಸೆ ಸಂಗೀತವಿದೆ. ಕಲಾವಿದರಾಗಿ ಅವಿನಾಶ್ ರೈ, ಸಂದೀಪ್ ಬಂಟ್ವಾಳ ನಟಿಸಿದ್ದಾರೆ. ಎಸ್- ಟೀಮ್ ಇವೆಂಟ್ಸ್ ಕಾಪು ಕಾರ್ಯಕ್ರಮ ಸಂಯೋಜಿಸಿ, ದೂರದರ್ಶನ ಕಾರ್ಯಕ್ರಮ ನಿರೂಪಕ ಎನ್ ಆರ್ ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಕಾಪು ಹೊಸ ಮಾರಿಗುಡಿಯಲ್ಲಿ ಧಾರ್ಮಿಕ ದಿನಾಚರಣೆ ಪ್ರಯುಕ್ತ ಭಜನಾ ಕಾರ್ಯಕ್ರಮ
Posted On: 02 Apr 2022, 07:54 PM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿ ಪ್ರಯುಕ್ತ ನಡೆದ ಧಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀ ಜನಾರ್ದನ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವನ್ನು ನೆರವೇರಿತು. ದೇವಳಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯರ ದೈವಾರಾಧನೆಯ ಕುರಿತ ನಡುವಣ ಲೋಕದ ನಡೆ ಕೃತಿ ಬಿಡುಗಡೆ
Posted On: 02 Apr 2022, 09:00 AM
ಎಲ್ಲೂರು : ಇಲ್ಲಿಯ ಕುಂಜೂರು ಶ್ರೀದುರ್ಗಾ ದೇವಸ್ಥಾನದಲ್ಲಿ ಕೆ.ಎಲ್.ಕುಂಡಂತಾಯರ ದೈವ - ಬೂತಾರಾಧನೆಯ ಕುರಿತ ಲೇಖನಗಳ ಸಂಗ್ರಹ 'ನಡುವಣ ಲೋಕದ ನಡೆ' ದೈವಾರಾಧನೆಯ ನೆಲೆ - ಕಲೆ ಬಿಡುಗಡೆಗೊಂಡಿತು. ಜಾನಪದ ವಿದ್ವಾಂಸ ಡಾ.ವೈ.ಎನ್ .ಶೆಟ್ಟಿ ಹಾಗೂ ಸಾಮಾಜಿಕ ಕಾರ್ಯಕರ್ತ ಸುರೇಶ ಶೆಟ್ಟಿ ಗುರ್ಮೆ 'ನಡುವಣ ಲೋಕದ ನಡೆ'ಯನ್ನು ಬಿಡುಗಡೆಗೊಳಿಸಿದರು. ಸಾಹಿತಿ,ಲೇಖಕ ಡಾ.ಜನಾರ್ದನ ಭಟ್ ಕೃತಿಯನ್ನು ಪರಿಚಯಿಸಿದರು. ಜಾನಪದ ವಿದ್ವಾಂಸ ಡಾ.ಅಶೋಕ ಆಳ್ವ, ಉದ್ಯಮಿ ನಾರಾಯಣ ಕೆ.ಶೆಟ್ಟಿ, ನಡಿಮನೆ ದೇವರಾಜ ರಾವ್, ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್, ದೇವಳದ ಮ್ಯಾನೇಜರ್ ರಾಘವೇಂದ್ರ ಶೆಟ್ಟಿ ಹಾಗೂ ಕೆ.ಎಲ್.ಕುಂಡಂತಾಯ ಉಪಸ್ಥಿತರಿದ್ದರು.
ಕಲ್ಯಾಣಪುರ ರೋಟರಿ ಪ್ರಾಯೋಜಕತ್ವದಲ್ಲಿ ಕೆಮ್ಮಣ್ಣು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪೈಂಟಿಂಗ್
Posted On: 01 Apr 2022, 02:55 PM
ಉಡುಪಿ :ಸರ್ಕಾರಿ ಪದವಿಪೂರ್ವ ಕಾಲೇಜು, ಕೆಮ್ಮಣ್ಣು ಇದರ ಕಟ್ಟಡಕ್ಕೆ ಆಂಶಿಕವಾಗಿ ಇತ್ತೀಚೆಗೆ ಪೈಂಟಿಂಗ್ ಕೆಲಸವನ್ನು ಕಲ್ಯಾಣಪುರ ರೋಟರಿ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಾಡಿ ಕೊಡಲಾಯಿತು. ಇದರ ಹಸ್ತಾಂತರವನ್ನು ರೋಟರಿ ಕಲ್ಯಾಣಪುರದ ಅಧ್ಯಕ್ಷರಾದ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್ , ವಲಯ ಸೇನಾನಿ ಬ್ರಯಾನ್ ಡಿಸೋಜ ಮತ್ತಿತರ ರೋಟರಿ ಪದಾಧಿಕಾರಿಗಳು ,ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮಿ ನಾರಾಯಣ ಎಸ್. ವಿ. ಮತ್ತು ಉಪನ್ಯಾಸಕರಾದ ಕ್ಸೇವಿಯರ್ ರವರು ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು ಸಂಸ್ಥೆಯ ಅವಶ್ಯಕ ಬೇಡಿಕೆಗೆ ಸ್ಪಂದಿಸಿ, ಪೂರೈಸಿದ ರೋಟರಿ ಕ್ಲಬ್ ನ ಸೇವೆಯನ್ನು ಶ್ಲಾಘಿಸಿ ವಂದಿಸಿದರು.
ಮಣಿಪಾಲ : ಚಿನ್ನದ ಸರವನ್ನು ವಾರಸುದಾರರಿಗೆ ಮರಳಿಸಿದ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುದೇಶ್ ನಾಯ್ಕ
Posted On: 31 Mar 2022, 09:50 PM
ಮಣಿಪಾಲ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರವು ಮಾಚ್೯ 31ರ ಬೆಳಿಗ್ಗೆ ಮಣಿಪಾಲ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಸುದೇಶ್ ನಾಯ್ಕ ಇವರಿಗೆ ಸಿಕ್ಕಿರುತ್ತದೆ. ಆ ಚಿನ್ನದ ಸರವನ್ನು ನಿಜವಾದ ವಾರಸುದಾರರಿಗೆ ಮರಳಿಸುವ ಮೂಲಕ ಮಾನವೀಯತೆಯನ್ನು ಮೆರೆದಿರುತ್ತಾರೆ. ಚಿನ್ನದ ಸರದ ವಾರಸುದಾರರು ಇವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.
