Updated News From Kaup

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿಉಡುಪಿ : ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ, 'ದೇಯಿ ಬೈದೆದಿ' ಪುಸ್ತಕ, ಭಾವಚಿತ್ರ ಬಿಡುಗಡೆ, ಗರೋಡಿ ಪೂ ಪೂಜಾನೆಕಾರರ ಸಮ್ಮೇಳನ, ಸಮ್ಮಾನ‌

Posted On: 30-12-2021 06:46PM

ಉಡುಪಿ : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಆದಿಉಡುಪಿ ಇವರು ಕೊಡಮಾಡುವ ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭವು ಬೈದಶ್ರೀಯಲ್ಲಿ ಜರಗಿತು.

ಹಿರಿಯ ಬೈದರ ದರುಶನ ಪಾತ್ರಿ ಕಲ್ಮoಜೆ ರಾಘು ಪೂಜಾರಿ ಹಾಗೂ ಹಿರಿಯ ಗರೋಡಿ ಸೇವಕರಾದ ಅಪ್ಪು ಮಡಿವಾಳ ಇವರಿಗೆ ನಗದು ಸಹಿತ ಪ್ರಶಸ್ತಿ ನೀಡಲಾಯಿತು. ದಾಮೋದರ ಕಲ್ಮಾಡಿ ಹಾಗೂ ಚೆಲುವ ರಾಜ್ ಪೆರಂಪಳ್ಳಿ ಇವರು ಬರೆದ 'ದೇಯಿ ಬೈದೆದಿ' ಕನ್ನಡ ಆವೃತ್ತಿ ಪುಸ್ತಕ ಬಿಡುಗಡೆ ಹಾಗೆಯೇ ವೀನಸ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಹರೀಶ್ ಎಮ್ ಕಲ್ಮಾಡಿ ಯವರು ಕೊಡ ಮಾಡಿದ ' ದೇಯಿ ಬೈದೆದಿ ಭಾವಚಿತ್ರವನ್ನು ಮುಖ್ಯ ಅತಿಥಿ ಅಚ್ಚುತ ಕಲ್ಮಾಡಿಯವರು ಅನಾವರಣಗೊಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ದಾಮೋದರ ಕಲ್ಮಾಡಿ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲ್ಮಾಡಿ ಗರೋಡಿ ಗೌರವ ಅಧ್ಯಕ್ಷರಾದ ಅಚ್ಚುತ ಕಲ್ಮಾಡಿಯವರು ಮಾತನಾಡುತ್ತ ಇದೊಂದು ಬೈದರ ಸಂಶೋಧನ ಕೇಂದ್ರ ಅಪರೂಪವಾಗಿದ್ದು ಇದನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದರು. ಗರೋಡಿ ಪೂ ಪೂಜಾನೆಕಾರರ ಸಮ್ಮೇಳನ : ಸಂಪನ್ಮೂಲ ವ್ಯಕ್ತಿಗಳಾಗಿ ಕಲ್ಮoಜೆ ರಾಘು ಪೂಜಾರಿ, ಪಾಂಗಳ ಗುಡ್ಡೆ ಗರೋಡಿ ಮನೆ ಸುಧಾಕರ್ ಡಿ ಅಮೀನ್, ಕಿನ್ನಿಮುಲ್ಕಿ ಗರೋಡಿಯ ಭಾಸ್ಕರ್ ಸುವರ್ಣ ಕನ್ನರ್ಪಡಿ ಭಾಗವಹಿಸಿದ್ದರು. ಸಮ್ಮಾನ : ಕರ್ನಾಟಕ ತುಳು ರತ್ನ ಪ್ರಶಸ್ತಿ ಪಡೆದ ಗಂಗಾಧರ್ ಕಿದಿಯೂರ್, ಕರ್ನಾಟಕ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿ ರಾಜ್ಯ ಸಂಚಾಲಕರಾಗಿ ಆಯ್ಕೆಯಾದ ಎಮ್ ಮಹೇಶ್ ಕುಮಾರ್ ಮಲ್ಪೆ ಹಾಗೂ ಕರ್ನಾಟಕ ಸರಕಾರದಿಂದ ಸ್ಕೌಟ್ ಸೇವೆಗಾಗಿ ವಿಶೇಷ ಪ್ರಶಸ್ತಿಯನ್ನು ರಾಜ್ಯಪಾಲ ರಿಂದ ಪಡೆದ ಶೇಖರ್ ಮಾಸ್ಟರ್ ಕಲ್ಮಾಡಿ ಇವರುಗಳನ್ನು ಸಮ್ಮಾನಿಸಲಾಯಿತು.

ಬೈದಶ್ರೀಯ ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ಮಹೇಶ್ ನಯಂಪಲ್ಲಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿಶ್ವಸ್ತರಾದ ಗಂಗಾಧರ್ ಕಿದಿಯೂರು ವಂದನಾರ್ಪಣೆ ಸಲ್ಲಿಸಿದರು.

ಶಂಕರಪುರ : ಸೌಹಾರ್ದತೆ ಮೆರೆದ ಅಯ್ಯಪ್ಪ ಭಕ್ತರು

Posted On: 30-12-2021 06:20PM

ಶಿರ್ವ : ಶಂಕರಪುರ ಸೈಂಟ್ ಜಾನ್ಸ್ ಚರ್ಚಿನ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಮುಂಬೈನ ಚಂದ್ರಹಾಸ ಗುರುಸ್ವಾಮಿ ಶಿಷ್ಯರು ಚರ್ಚಿಗೆ ಹೋಗಿ ಕ್ಯಾಂಡಲ್ ಹೊತ್ತಿಸಿ ಪ್ರಾರ್ಥಿಸಿದರು.

ಮತಾಂಧರ ಕಿಚ್ಚಿನ ನಡುವೆ ಅಯ್ಯಪ್ಪ ಭಕ್ತರು ಸೌಹಾರ್ದತೆ ಮೆರೆದಿದ್ದಾರೆ.

ಶಂಕರಪುರ ಸಾರ್ವಜನಿಕ ಅಯ್ಯಪ್ಪ ಭಕ್ತವೃಂದದ ಅಯ್ಯಪ್ಪ ಭಕ್ತರ ಮತ್ತು ಮುಂಬೈ ಚಂದ್ರಹಾಸ ಗುರುಸ್ವಾಮಿ ಶಿಷ್ಯರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾಪು ಪುರಸಭಾ ಚುನಾವಣಾ ಫಲಿತಾಂಶ : ಬಿಜೆಪಿಗೆ ಒಲಿದ ಗದ್ದುಗೆ

Posted On: 30-12-2021 10:52AM

ಕಾಪು : ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ಕಣವಾಗಿದ್ದ ಕಾಪು ಪುರಸಭೆಯ ಫಲಿತಾಂಶ ಪ್ರಕಟವಾಗಿದೆ.

ಪುರಸಭೆಯ 23 ವಾರ್ಡ್ ಗಳ ಪೈಕಿ ಬಿಜೆಪಿಯು 12 ವಾರ್ಡು, ಕಾಂಗ್ರೆಸ್ 7 ವಾರ್ಡು, ಎಸ್ ಡಿಪಿಐ 3 ಮತ್ತು ಜೆಡಿಎಸ್ ಒಂದು ವಾರ್ಡ್ ನಲ್ಲಿ ಜಯ ಸಾಧಿಸಿದೆ.

ಫಲಿತಾಂಶದ ವಿವರ : ಕೋತಲಕಟ್ಟೆ: ಫರ್ಜಾನ (ಕಾಂಗ್ರೆಸ್) ಕೈಪುಂಜಾಲು: ಶೋಭಾ ಎಸ್. ಬಂಗೇರ (ಕಾಂಗ್ರೆಸ್) ಕೊಪ್ಪಲಂಗಡಿ: ನಾಗೇಶ್ (ಬಿಜೆಪಿ) ತೊಟ್ಟಂ: ಸತೀಶ್ಚಂದ್ರ (ಕಾಂಗ್ರೆಸ್) ಕರಾವಳಿ: ಕಿರಣ್ ಆಳ್ವ (ಬಿಜೆಪಿ) ಪೊಲಿಪು ಗುಡ್ಡೆ: ರತ್ನಾಕರ ಶೆಟ್ಟಿ (ಬಿಜೆಪಿ) ದುಗ್ಗನ್ ತೋಟ: ಮಹಮ್ಮದ್ ಆಸಿಫ್ (ಕಾಂಗ್ರೆಸ್) ಮಂಗಳ ಪೇಟೆ: ವಹಿದಾ ಬಾನು (ಎಸ್ ಡಿಪಿಐ) ದಂಡತೀರ್ಥ: ಸುರೇಶ್ ದೇವಾಡಿಗ (ಬಿಜೆಪಿ) ಕಲ್ಯಾ: ಲತಾ ವಿ. ದೇವಾಡಿಗ (ಬಿಜೆಪಿ) ಜನಾರ್ದನ ದೇವಸ್ಥಾನ: ಹರಿಣಿ ದೇವಾಡಿಗ (ಬಿಜೆಪಿ) ಬಡಗರಗುತ್ತು: ವಿದ್ಯಾಲತಾ (ಕಾಂಗ್ರೆಸ್) ಭಾರತ್ ನಗರ: ಅರುಣ್ ಶೆಟ್ಟಿ (ಬಿಜೆಪಿ) ಬೀಡು ಬದಿ: ಅನಿಲ್ ಕುಮಾರ್ (ಬಿಜೆಪಿ) ಕೊಂಬಗುಡ್ಡೆ: ಉಮೇಶ್ ಕರ್ಕೇರ (ಜೆಡಿಎಸ್)

ಜನರಲ್ ಶಾಲೆ: ಮೋಹಿನಿ ಶೆಟ್ಟಿ (ಬಿಜೆಪಿ) ಪೊಲಿಪು: ರಾಧಿಕಾ ಸುವರ್ಣ (ಕಾಂಗ್ರೆಸ್) ಗುಜ್ಜಿ: ಸರಿತಾ ಶಂಕರ್ (ಎಸ್ ಡಿಪಿಐ) ಗರಡಿ: ಶೈಲೇಶ್ ಅಮೀನ್ (ಬಿಜೆಪಿ) ಕಾಪು ಪೇಟೆ: ಸರಿತಾ (ಬಿಜೆಪಿ) ಲೈಟ್ ಹೌಸ್: ನಿತಿನ್ (ಬಿಜೆಪಿ) ಕುಡ್ತಿಮಾರ್: ರಫೂಸ್ ಶಾಬು ಸಾಹೇಬ್ (ಕಾಂಗ್ರೆಸ್) ಅಹಮದಿ ಮೊಹಲ್ಲಾ: ನೂರುದ್ದೀನ್ (ಎಸ್ ಡಿಪಿಐ)

ಕರ್ನಾಟಕ ಬಂದ್ ಗೆ ಸಹಕರಿಸಲು ರಿಕ್ಷಾ ಚಾಲಕರ ಸಂಘ, ರಿಕ್ಷಾ ಚಾಲಕರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಮನವಿ

Posted On: 29-12-2021 08:42PM

ಉಡುಪಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಹಾಗೂ ಬೆಳಗಾವಿಯಲ್ಲಿ ಎಮ್ ಇಎಸ್ ಸಂಘಟನೆ ಕನ್ನಡ ಬಾವುಟವನ್ನು ಸುಟ್ಟು ಮತ್ತು ಬೆಂಗಳೂರಿನ ಶಿವಾಜಿನಗರದಲ್ಲಿ ಶಿವಾಜಿ ಪ್ರತಿಮೆಯನ್ನು ಭಗ್ನಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಡಿಸೆಂಬರ್ 31ರಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕವು ಕರ್ನಾಟಕ ಬಂದ್ ಗೆ ಕರೆನೀಡಿದ್ದು ಈ ಪ್ರತಿಭಟನೆಗೆ ಸಂಪೂರ್ಣ ಸಹಕಾರ ನೀಡಬೇಕೆಂದು ರಿಕ್ಷಾ ಚಾಲಕರ ಸಂಘಕ್ಕೆ ಮನವಿ ಮಾಡಿದ್ದಾರೆ.

ನಮ್ಮ ನೆಲ, ಜಲ ಸಂಸ್ಕೃತಿಯನ್ನು ವಿರೋಧಿಸುವವರ ವಿರುದ್ಧವಾಗಿ ಪ್ರತಿಭಟನೆಯನ್ನು ನಡೆಸುವ ನಿಟ್ಟಿನಲ್ಲಿ ರಿಕ್ಷಾ ಚಾಲಕರ ಸಂಘದಿಂದ ಪ್ರತಿ ಒಬ್ಬರು ಚಾಲಕರು ನಮ್ಮ ಜೊತೆ ಕರ್ನಾಟಕ ಬಂದ್ ಗೆ ಸಂಪೂರ್ಣ ಕೈ ಜೋಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸಂತೋಷ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ, ಪುನರ್ವಸತಿ ಅಧಿನಿಯಮದ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆ

Posted On: 29-12-2021 07:02PM

ಉಡುಪಿ : ಮಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿಯು ಅತ್ಯಂತ ಹೇಯ ಪದ್ಧತಿಯಾಗಿದ್ದು, ಈ ಬಗ್ಗೆ ಜಿಲ್ಲೆಯ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಮಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮದ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಲ್ಲಿನ ಜನರನ್ನು ಮಾನ್ಯುಯಲ್ ಸ್ಕ್ಯಾವೆಂಜರ್ ಕೆಲಸಕ್ಕೆ ಬಳಸಿಕೊಳ್ಳುವ ಸಂಭವವಿದ್ದು, ಈ ಕಾರ್ಯವನ್ನು ಮಾಡದ ಬಗ್ಗೆ ಅಲ್ಲಿನ ಸಾರ್ವಜನಿಕರಿಗೆ ಬೀದಿ ನಾಟಕ ಸೇರಿದಂತೆ ವಿವಿಧ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿರುವ ಸಮುದಾಯ ಭವನಗಳು ಮತ್ತು ಕಟ್ಟಡಗಳ ಬಳಿ ಜಾಗೃತಿ ಮೂಡಿಸುವ ಜಾಹೀರಾತು ಫಲಕಗಳನ್ನು ಅಳವಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಶೌಚಾಲಯಗಳ ನಿರ್ವಹಣೆಗೆ ಸಕ್ಕಿಂಗ್ ಯಂತ್ರಗಳನ್ನು ಬಳಸುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ಗಳ ಸಮೀಕ್ಷೆಯನ್ನು ನಡೆಸಲಾಗಿದ್ದು, ಯಾರೂ ಪತ್ತೆಯಾಗಿರುವುದಿಲ್ಲ. ಈಗಾಗಲೇ ಯಾರಾದರೂ ಮಾನ್ಯುಯಲ್ ಸ್ಕ್ಯಾವೆಂಜರ್ ಕಾರ್ಯವನ್ನು ನಿರ್ವಹಿಸಿದ್ದಲ್ಲಿ ಅವರ ವಿವರಗಳನ್ನು ಸಂಗ್ರಹಿಸಿ, ಅವರಿಗೆ ಸೂಕ್ತ ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಅತಂಹ ವ್ಯಕ್ತಿಗಳಿಗೆ ಸಕ್ಕಿಂಗ್ ವಾಹನಗಳನ್ನು ಖರೀದಿಸಲು ಧನಸಹಾಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದರು. ಕೊಂಕಣ ರೈಲ್ವೆಯಲ್ಲಿ ಯಾವುದೇ ಮಾನ್ಯುಯಲ್ ಸ್ಕಾö್ಯವೆಂಜರ್ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸಫಾಯಿ ಕರ್ಮಚಾರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸಮವಸ್ತ್ರ, 2 ಡೋಸ್ ಕೋವಿಡ್ ಲಸಿಕೆ, ಎಲ್ಲಾ ರೀತಿಯ ಅಗತ್ಯ ಸುರಕ್ಷಾ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದರು.

ಮಾನ್ಯುಯಲ್ ಸ್ಕ್ಯಾವೆಂಜರ್ಗಳನ್ನು ಬಳಸುವುದೂ ಸಹ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಅರಿವು ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಎಎಸ್ಪಿ ಕುಮಾರ ಚಂದ್ರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕುವೆಂಪು ಅವರ ವಿಶ್ವಮಾನವ ಸಂದೇಶ ನಿತ್ಯ ಸತ್ಯ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 29-12-2021 06:48PM

ಉಡುಪಿ : ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ನಿತ್ಯ ಸತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ, ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವ ಮಾನವವಾಗಿರುತ್ತದೆ. ಬೆಳೆಯುತ್ತಾ ಹೋದಂತೆ ಜಾತಿ, ಅಂತಸ್ತು ಮುಂತಾದ ಭೇಧ-ಭಾವಗಳ ಮೂಲಕ ಅವನನ್ನು ನಾವು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಅದರೆ ಅವನನ್ನು ವಿಶ್ವ ಮಾನವನನ್ನಾಗಿಯೇ ಇರಲು ಬಿಡಬೇಕು ಎಂಬುದು ಕುವೆಂಪು ಅವರ ವಿಶ್ವ ಮಾನವ ಸಂದೇಶ. ಯಾವುದೇ ಭೇಧ-ಭಾವ ತೋರದೇ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವ ಮೂಲಕ ವಿದ್ಯೆಯಿಂದ ಅಲ್ಪ ಮಾನವನನ್ನು ವಿಶ್ವ ಮಾನವರನ್ನಾಗಿ ಮಾಡಲು ಸಾಧ್ಯವಿದ್ದು, ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಪ್ರತಿ ನಿತ್ಯ ಕುವೆಂವು ಅವರ ಸಂದೇಶಗಳು ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕೋವಿಡ್-19 ರ ಈ ಅವಧಿಯಲ್ಲಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಅತ್ಯಂತ ಪ್ರಸ್ತುತವಾಗಿದ್ದು, ವಿಶ್ವದ ಯಾವುದೋ ಮೂಲೆಯಲ್ಲಿ ಕೋವಿಡ್-19 ಉಲ್ಬಣಗೊಂಡಿದೆ ಎಂದು ನಾವು ಇಲ್ಲಿ ಕೋವಿಡ್ ನಿಯಮಗಳ ಪಾಲನೆ ಮಾಡದೇ ಇರಬಾರದು. ಪ್ರತಿಯೊಬ್ಬರೂ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸುವುದರ ಮೂಲಕ ಇಡೀ ವಿಶ್ವದಿಂದ ಕೋವಿಡ್-19 ನಿರ್ಮೂಲನೆಗೊಳಿಸಲು ಹೋರಾಡಿದಲ್ಲಿ ವಿಜಯ ಸಾಧ್ಯವಾಗಲಿದೆ. ಕುವೆಂಪು ಅವರ ಜೀವನ ಮತ್ತು ಸಂದೇಶ ಎಲ್ಲರಿಗೂ ಸದಾ ದಾರಿ ದೀಪವಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಕುವೆಂಪು ಕುರಿತು ವಿಶೇಷ ಉಪನ್ಯಾಸ ನೀಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕುವೆಂಪು ಅವರು 20 ನೇ ಶತಮಾನದ ದೈತ್ಯ ಪ್ರತಿಭೆ. ಅವರ ವಿಶ್ವ ಮಾನವ ಪ್ರಜ್ಞೆ ಎಲ್ಲೆಡೆ ಮೂಡಬೇಕು. ಜಿಲ್ಲಾ ಕ.ಸಾ.ಪ ವತಿಯಿಂದ ಕುವೆಂಪು ಕುರಿತು ಕಿರು ಪುಸ್ತಕಗಳನ್ನು ಮುದ್ರಿಸಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ವಿತರಿಸುವ ಯೋಜನೆಯಿದ್ದು, ಜಿಲ್ಲೆಯಲ್ಲಿ ಹೆಸರಿಡದ ಅನೇಕ ರಸ್ತೆಗಳಿದ್ದು, ಅವುಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಪ್ರಸಿದ್ಧ ಕವಿಗಳ ಹೆಸರುಗಳನ್ನು ಇಡಬೇಕು. ಪ್ರತೀ ಮನೆಯಲ್ಲೂ ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಬೇಕು. ಕುವೆಂಪು ಶತಮಾನೋತ್ಸವ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಕುವೆಂಪು ಅವರ ದಿನಚರಿ ನೆನಪಿನ ದೋಣಿಯಲ್ಲಿ ಕೃತಿಯನ್ನು ಪ್ರತಿಯೊಬ್ಬರೂ ಓದುವುದರ ಮೂಲಕ ಅವರ ಜೀವನವನ್ನು ಅರಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕಲಾವತಿ ದಯಾನಂದ್ ಅವರಿಂದ ಕುವೆಂಪು ಅವರ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು.

ಮಾರ್ನಮಿಕಟ್ಟೆ ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ವ್ಯಕ್ತಿಯ ಬಂಧನ

Posted On: 29-12-2021 06:05PM

ಮಂಗಳೂರು : ಮಾರ್ನಮಿಕಟ್ಟೆ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಮೂಲದ ಪ್ರಸ್ತುತ ಮಂಗಳೂರಿನ ಕೋಟೇಕಾರು ನಿವಾಸಿಯಾಗಿರುವ ದೇವದಾಸ್ ದೇಸಾಯಿ (62)ನನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆಯ ಸಂದರ್ಭ ಈ ಮೊದಲು ಇಂತಹುವುದೇ 18 ಧಾರ್ಮಿಕ ಸ್ಥಳಗಳಲ್ಲಿ ಕೃತ್ಯ ಎಸಗಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ. ಈತನು ಮಾರ್ನಮಿಕಟ್ಟೆಯ ಕೊರಗಜ್ಜನ ಕಟ್ಟೆ, ಕೊಂಡಾಣ ದೈವಸ್ಥಾನ, ಮಂಗಳಾದೇವಿ ದೇವಸ್ಥಾನ, ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ, ಕಲ್ಲಾಪು ನಾಗನ‌ ಕಟ್ಟೆ, ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ, ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ, ಕುತ್ತಾರು ಕೊರಗಜ್ಜನ ಕಟ್ಟೆ, ಕುಡುಪು ದೈವಸ್ಥಾನ, ಎ.ಬಿ. ಶೆಟ್ಟಿ ವೃತ್ತದ ಬಳಿಯ ದರ್ಗಾ, ಸಿಖ್ ಗುರುದ್ವಾರ ಗುಡಿ-ಬಂಗ್ರ ಕೂಳೂರು, ಕೋಟ ಶ್ರೀ ಬಬ್ಬುಸ್ವಾಮಿ ದೈವಸ್ಥಾನ-ಮಂಕಿಸ್ಟ್ಯಾಂಡ್ ಮತ್ತು ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ-ಜೆಪ್ಪು ಮಹಾಕಾಳಿಪಡ್ಪು ಎಂಬ ಸ್ಥಳಗಳಲ್ಲಿಯೂ ಕೃತ್ಯ ನಡೆಸಿರುವ ಬಗ್ಗೆ ತಪ್ಪು ಒಪ್ಪಿಕೊಂಡಿರುತ್ತಾನೆ.

ದೇವದಾಸ್ ದೇಸಾಯಿಯ ಹಿನ್ನೆಲೆ : ಮೂಲತ: ಹುಬ್ಬಳ್ಳಿಯ ಉಣ್ಕಲ್ ಎಂಬ ಊರಿನಲ್ಲಿ ಜನಿಸಿದ್ದು, ಮೊದಲನೆಯವನು ಸುರೇಂದ್ರ ಕುಮಾರ್, ಎರಡನೆಯವನು ಜ್ಯೋತಿಕುಮಾರ್, ಮೂರನೇಯವಳು ಪದ್ಮಾವತಿ, ಈತನು ಕಿರಿಯ ಮಗನಾಗಿರುತ್ತಾನೆ. ಹುಬ್ಬಳ್ಳಿಯ ಬಾಸೆಲ್ ಮಿಷನ್ ಹೈಯರ್ ಸೆಕಂಡರಿ ಸ್ಕೂಲ್ ನಲ್ಲಿ 1977 ನೇ ಇಸವಿಯಲ್ಲಿ 10 ನೇ ತರಗತಿ ವ್ಯಾಸಾಂಗ ಮಾಡಿದ್ದು, ತಾಯಿ ಸುಲೋಚನಾ ಬಾಯಿಯವರು ಮನೆ ವಾರ್ತೆ ಕೆಲಸ ಮಾಡಿಕೊಂಡಿದ್ದು, 1983 ನೇ ಇಸವಿಯಲ್ಲಿ ತೀರಿಕೊಂಡಿರುತ್ತಾರೆ. ತಂದೆ ಜಾನ್ ದೇಸಾಯಿಯವರು 1983ನೇ ಇಸವಿಯಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಹೆಡ್ ಕ್ಲರ್ಕ್ ಆಗಿ ನಿವ್ರತ್ತಿಯಾಗಿದ್ದು, 1997 ನೇ ಇಸವಿಯಲ್ಲಿ ತೀರಿಕೊಂಡಿರುತ್ತಾರೆ. ನಂತರ 1985ನೇ ಇಸವಿಯಲ್ಲಿ ಧಾರವಾಡ ಸಾರಿಗೆ ಕಛೇರಿಯಲ್ಲಿ ತ್ರಿಚಕ್ರ ವಾಹನದ ಚಾಲನಾ ಪರವಾನಿಗೆಯನ್ನು ಪಡೆದುಕೊಂಡು 1991 ನೇ ಇಸವಿವರೆಗೆ ಹುಬ್ಬಳ್ಳಿ ನಗರದಲ್ಲಿ ಅಟೋರಿಕ್ಷಾ ಚಲಾಯಿಸಿ ಕೊಂಡಿದ್ದನು. 1991 ನೇ ಇಸವಿಯಲ್ಲಿ ಅಣ್ಣ ಜ್ಯೋತಿಕುಮಾರ್ ದೇಸಾಯಿಯವರ ಹೆಂಡತಿ ಸುಮಂಗಳಾರವರ ಪರಿಚಯದ ಚಿಕ್ಕಮಗಳೂರು ಜಿಲ್ಲೆಯ ಶಂಕರಪುರ ಎಂಬಲ್ಲಿಯ ಜೋಸೆಫ್ ರವರ ಪುತ್ರಿ ವಸಂತ ಕುಮಾರಿಯ ಜೊತೆಗೆ ಮದುವೆಯಾಗಿದ್ದು, 1993 ನೇ ಇಸವಿಯಲ್ಲಿ ಹೆಣ್ಣು ಮಗುವಾಗಿದ್ದು ಅವಳ ಹೆಸರು ಪದ್ಮಾವತಿ ಎಂಬುದಾಗಿರುತ್ತದೆ. ನಂತರ 1997 ನೇ ಇಸವಿಯಲ್ಲಿ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದು, ಮಂಗಳೂರಿನ ಬಂದರಿನ ವಿ.ಆರ್.ಎಲ್. ಟ್ರಾನ್ಸ್ ಪೋರ್ಟ್ ಕಛೇರಿಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡು, ಆ ಸಮಯ ಸುರತ್ಕಲ್ ಸೂರಿಂಜೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದನು. ಹೆಂಡತಿ ಹಾಗೂ ಮಗಳು ಹುಬ್ಬಳ್ಳಿಯ ಮನೆಯಲ್ಲಿ ಅತ್ತಿಗೆಯ ಜೊತೆಗೆ ಮನಸ್ತಾಪ ಮಾಡಿಕೊಂಡು ಅವಳ ಸ್ವಂತ ಊರಾದ ಚಿಕ್ಕಮಗಳೂರಿಗೆ ಹೋದವರು ನಂತರ ಅಲ್ಲೇ ನೆಲೆಸಿರುತ್ತಾರೆ. 1999ನೇ ಇಸವಿಯಲ್ಲಿ ವಿ.ಆರ್.ಎಲ್. ಕಛೇರಿಯ ಕೆಲಸವನ್ನು ಬಿಟ್ಟು, ಸ್ವಂತ ಊರಾದ ಹುಬ್ಬಳ್ಳಿಗೆ ಹೋಗಿದ್ದು, ಅಲ್ಲಿಂದ ಕೊಡಗು ಜಿಲ್ಲೆಯ ವಿರಾಜಪೇಟೆಯ ಮತ್ತೂರು ಎಂಬಲ್ಲಿ ಶ್ರೀನಿವಾಸ ಕಾಫಿ ಎಸ್ಟೇಟ್ ನಲ್ಲಿ ರೈಟರ್ ಆಗಿ ಕೆಲಸಕ್ಕೆ ಸೇರಿದ್ದು, 2000ನೇ ಇಸವಿಯಲ್ಲಿ ಅಲ್ಲಿಂದ ಕೆಲಸ ಬಿಟ್ಟು ಮಂಗಳೂರಿಗೆ ಬಂದು ಬಾಡಿಗೆ ರಿಕ್ಷಾ ಚಲಾಯಿಸಿಕೊಂಡಿದ್ದೆನು. ಈ ಸಮಯದಲ್ಲಿ ಮಂಗಳೂರಿನ ಶಕ್ತಿನಗರದ ಕಾರ್ಮಿಕ ಕಾಲೊನಿಯಲ್ಲಿ ಪೊಲೀಸ್ ಕೃಷ್ಣಪ್ಪ ಎಂಬವರ ಮನೆಯಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದನು. 2003 ನೇ ಇಸವಿಯಲ್ಲಿ ಮಂಗಳೂರಿನ ಬೆಂದೂರ್ ವೆಲ್ ನ ಕೊಲಾಸೋ ಆಸ್ಪತ್ರೆಯ ಮಾಲಕರಾದ ಮಥಾಯಿಸ್ ಪ್ರಭುರವರ ಕಾರಿನ ಚಾಲಕನಾಗಿ ಸುಮಾರು 6 ತಿಂಗಳುಗಳ ಸಮಯ ಕೆಲಸ ಮಾಡಿಕೊಂಡಿದ್ದನು. ನಂತರ 2006 ನೇ ಇಸವಿಯಲ್ಲಿ ತಲಪಾಡಿ ಕೆ.ಸಿ. ರೋಡ್ ಬಳಿ ಅಂತೋನಿ ರಾಜ್ ಎಂಬವರ ಮನೆಯನ್ನು ಖರೀದಿ ಮಾಡಿದ್ದು, ಪ್ರಸ್ತುತ ಇದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸಮಾಡಿಕೊಂಡಿದ್ದನು. ಸರಿಯಾದ ಕೆಲಸವಿಲ್ಲದೆ ಗುಜಿರಿ ಪೇಪರ್ ಬಾಕ್ಸ್ ಗಳನ್ನು ಮಾರಿಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದನು.

ಶಂಕರಪುರ ಡಿಜಿಟಲ್‌ ಸೇವಾ ಕೇಂದ್ರ : ಕರ್ತವ್ಯ ನಿರ್ವಹಣೆಗೆ ಜನ ಬೇಕಾಗಿದ್ದಾರೆ

Posted On: 28-12-2021 09:32PM

ಕಾಪು : ಸರಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಸಲ್ಲಿಸುತ್ತಿರುವಲ್ಲಿ ಶಂಕರಪುರದ ಡಿಜಿಟಲ್‌ ಸೇವಾ ಕೇಂದ್ರವು ಒಂದಾಗಿದೆ.

ಈ ಡಿಜಿಟಲ್‌ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಶಂಕರಪುರ ಮತ್ತು ಕಾಪು ಆಸುಪಾಸಿನವರಿಗೆ ಆದ್ಯತೆ.

ಆಸಕ್ತರು ಸಂಪರ್ಕಿಸಿ : 9591111028

ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಸ್ವಚ್ಛತಾ ಜನಾಂದೋಲನ - ಪುನೀತ ಸಾಗರ ಅಭಿಯಾನ

Posted On: 28-12-2021 08:15PM

ಶಿರ್ವ: ನಮ್ಮ ಪರಿಸರ ಸ್ವಚ್ಛವಾಗಿದ್ದರೆ ಎಷ್ಟೋ ರೋಗಗಳನ್ನು ಮದ್ದಿಲ್ಲದೇ ದೂರವಾಗಿಸಲು ಸಾಧ್ಯ. ನಮಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪರಿಸರ ಕಾಳಜಿ ಕೂಡ. ಇಂದು ನಮ್ಮ ಎನ್ ಸಿ ಸಿ ಘಟಕದ ವಿದ್ಯಾರ್ಥಿಗಳು ಕಾಪು ಬೀಚ್ ಸ್ವಚ್ಛಗೊಳಿಸುವ ಮೂಲಕ ಸರಕಾರದ ಕೆಲಸ ಮಾತ್ರವಲ್ಲ ಪ್ರಜ್ಞಾವಂತ ನಾಗರಿಕರೆಲ್ಲರ ಕತ೯ವ್ಯವೆಂದು ಸಾಬೀತು ಪಡಿಸಿದರು ಹಾಗೂ ಕಡಲ ಕಿನಾರೆಯ ವ್ಯಾಪಾರಸ್ಥರು ಸ್ವಚ್ಛತೆಯ ಬಗ್ಗೆ ತಾವೇ ಮುತುವಜಿ೯ವಹಿಸಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಪ್ರವಾಸಿಗರಿಗೆ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಸ್ವಚ್ಛ ಭಾರತದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದು ಶಿವ೯ ಸಂತಮೇರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನೀಸ್ ರವರು ಬೀಚ್ ಕ್ಲೀನಿಂಗ್ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛ ಭಾರತ-ಸ್ವಸ್ಥ ಭಾರತದನೆಲೆಯಲ್ಲಿ ಸ್ವಚ್ಛ- ಸುಂದರ ಸಾಗರ, 75 ನೇ ಸ್ವಾತಂತ್ರ್ಯದ ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಬೀಚ್ ಕ್ಲೀನಿಂಗ್ ಕಾರ್ಯಕ್ರಮವನ್ನು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಎನ್ ಸಿ ಸಿ ಘಟಕ ಹಾಗೂ 21 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಉಡುಪಿ ಸಂಯುಕ್ತವಾಗಿ ಏರ್ಪಡಿಸಿದ್ದ ಪುನೀತ ಸಾಗರ ಅಭಿಯಾನದಲ್ಲಿ ಕೇವಲ ಒಂದೆರಡು ದಿನದಲ್ಲಿ ಇಂತಹ ಕೆಲಸಗಳು ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಇಂದು ದೇಶ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ ಆದರೆ ಪ್ರಜ್ಞಾವಂತ ನಾಗರಿಕರಾದ ಪ್ರಜೆಗಳು ಪರಿಸರ ಸ್ವಚ್ಛತೆಯನ್ನು ಪಾಲಿಸದೆ ಮನಬಂದಂತೆ ಪ್ಲಾಸ್ಟಿಕ್ ಮತ್ತು ತ್ಯಾಜ್ಯಗಳನ್ನು ಬಿಸಾಡಿ ಅಧಿಕ ಮಾಲಿನ್ಯವನ್ನು ಮಾತ್ರವಲ್ಲದೆ ಪ್ರಕೃತಿಯಲ್ಲಿರುವ ಪಶು-ಪಕ್ಷಿಗಳಿಗೆ, ಜಲಚರ ಹಾಗೂ ಮಾನವಕುಲಗೆ ಹಾನಿ ಉಂಟು ಮಾಡುತ್ತಿದ್ದಾರೆ. ಇದರ ಪರಿಣಾಮ ಇಂದು ಸಮುದ್ರದಲ್ಲಿ ಸೇರಿರುವ ವಿವಿಧ ತ್ಯಾಜ್ಯಗಳಿಂದ ಸಮುದ್ರ ಮಾಲಿನ್ಯವನ್ನು ನಾವು ನೋಡುತ್ತಿದ್ದೇವೆ ಎಂದು ಕಾಲೇಜಿನ ಎನ್ ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದ್ದರು. ಕಾಪು ಬೀಚಿನಲ್ಲಿ ಸುಮಾರು 35 ಕೆಡೆಟ್ ಗಳು ಭಾಗವಹಿಸಿ 400 ಕೆಜಿ ಪ್ಲಾಸ್ಟಿಕ್ ಮತ್ತು ಕಸವನ್ನು ಸಂಗ್ರಹಿಸಿ ಕಾಪು ಪುರಸಭೆಯ ಸ್ವಚ್ಛಗೊಳಿಸುವ ಸಿಬ್ಬಂದಿ ವರ್ಗದವರಿಗೆ ಹಸ್ತಾಂತರಿಸಲಾಯಿತು ಮತ್ತು ಬೀಚ್ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಜನಾಂದೋಲನವನ್ನು ಜಾಗೃತಿ ಮೂಡಿಸಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯಶೋಧ, ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಸುರಕ್ಷ ,ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತ , ಕಂಪನಿ ಸಾರ್ಜೆಂಟ್ ಕ್ವಾಟರ್ಮಸ್ಟರ್ ಮೋಹಿತ್ ಎನ್ ಸಾಲಿಯಾನ್, ಕಾರ್ಪೊರಲ್ ಧೀರಜ್ ಆಚಾರ್ಯ ಸಹಕರಿಸಿದರು. ಜೂನಿಯರ್ ಅಂಡರ್ ಆಫೀಸರ್ ಸುರಕ್ಷ ಸ್ವಾಗತಿಸಿ,ಲ್ಯಾನ್ಸ್ ಕಾರ್ಪೊರಲ್ ಲೋಬೋ ರಿಯಾ ನೆವಿಲ್ ಪಿಂಟೋ ವಂದಿಸಿದರು.

ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿವಾಸಿ ಕನ್ನಡಿಗರಿಂದ ಟ್ವಿಟರ್, ಇಮೇಲ್ ಅಭಿಯಾನ

Posted On: 27-12-2021 11:16PM

ಉಡುಪಿ : ತಮಗಿರುವ ಸಮಸ್ಯೆಗಳ ಬಗ್ಗೆ, ಬಹುಕಾಲದಿಂದ ಈಡೇರದ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು 30ಕ್ಕೂ ಹೆಚ್ಚಿನ ದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಪ್ರತಿನಿಧಿಸುವ ನೂರಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಒಗ್ಗಟ್ಟಾಗಿ ಟ್ವಿಟರ್ ಮತ್ತು ಈಮೇಲ್ ಅಭಿಯಾನ ನಡೆಸಲು ಮುಂದಾಗಿದ್ದು, ಜನವರಿ 2ರಂದು ಮಧ್ಯಾಹ್ನ ಭಾರತೀಯ ಕಾಲಮಾನ ಸಂಜೆ 4ಗಂಟೆಗೆ ಟ್ವಿಟರ್ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಿ ಸರಣಿ ಮನವಿಗಳನ್ನು, ಬೇಡಿಕೆಗಳನ್ನು ಇಡಲಿದ್ದಾರೆ.

ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಉದ್ಯೋಗ ಹರಸಿ ವಿದೇಶಕ್ಕೆ ತೆರಳಿದರೂ ಹುಟ್ಟೂರು ಮತ್ತು ರಾಜ್ಯದ ಆಗುಹೋಗುಗಳ ಬಗ್ಗೆ ಅತಿ ಹೆಚ್ಚು ಕಾಳಜಿ ತೋರಿಸುವವರು ಅನಿವಾಸಿ ಕನ್ನಡಿಗರು, ರಾಜ್ಯದಲ್ಲಿ ನೆರೆ ಬಂದರೂ, ಬರ ಬಂದರೂ, ಯಾವುದೇ ಸಂಕಷ್ಟ ಬಂದೊದಗಿದರೂ ತತಕ್ಷಣ ಸಹಾಯಹಸ್ತ ಚಾಚುವವರೇ ಲಕ್ಷಾಂತರ ಅನಿವಾಸಿಗಳು, ಆದರೆ ಆಶ್ಚರ್ಯವೆಂದರೆ ಈ ಅನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸುವವರೇ ಇಲ್ಲ, ಬಹುಕಾಲದಿಂದ ಅವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಇದ್ದರೂ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ, ಕೊರೋನ ಸಂಕಷ್ಟ ಸಂದರ್ಭದಲ್ಲಂತೂ ಇವರ ಗೋಳನ್ನು ಕೇಳುವವರೇ ಇರಲಿಲ್ಲ, ಇದೇ ಕಾರಣಕ್ಕೆ ಇದೀಗ ಅನಿವಾಸಿಗಳು ಒಗ್ಗಟ್ಟಾಗಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಲೆಂದೇ ಒಂದು ದಿನವನ್ನು ಆಚರಿಸಲು ನಿರ್ಧರಿಸಿದ್ದು, ಅಭಿಯಾನದ ವಿಶಿಷ್ಟ ರೀತಿಯಲ್ಲಿ ಕರ್ನಾಟಕ ಸರ್ಕಾರದ ಕದತಟ್ಟಿ ಈ ಬಾರಿಯಾದರೂ ತಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಮಂತ್ರಿಗಳು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. 12 ವರ್ಷಗಳ ಹಿಂದೆ ರಾಜ್ಯಸರ್ಕಾರ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಕ್ಷೇಮಾಭಿವೃಧ್ಧಿಗಾಗಿ ಸ್ಥಾಪಿತವಾದ ಸಮಿತಿಯೇ ಕನ್ನಡಿಗರ ಅನಿವಾಸಿ ಭಾರತೀಯ ಸಮಿತಿ. ಸಿಎಂರವರ ನೇರ ನಿಯಂತ್ರಣಕ್ಕೆ ಒಳಪಡುವ ಈ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಈ ಸಮಿತಿ ಬಂದರೂ ಮುಖ್ಯಮಂತ್ರಿಗಳೇ ಇದರ ಅಧ್ಯಕ್ಷರು, ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಗಂಭೀರ ಜವಾಬ್ದಾರಿಗಳಿರುವ ಕಾರಣ ಉಪಾಧ್ಯಕ್ಷರಿಗೇ ಈ ಸಮಿತಿಗೆ ಬೆನ್ನೆಲುಬು, ಆದರೆ ಕಳೆದ ಮೂರು ವರ್ಷಗಳಿಂದ ಈ ಸಮಿತಿಗೆ ಉಪಾಧ್ಯಕ್ಷರೇ ಇಲ್ಲದೇ ಅನಾಥವಾಗಿದೆ.

ಎನ್ಆರೈ ಘಟಕದ ಉಪಾಧ್ಯಕ್ಷ ಕೂಡಲೇ ನೇಮಕವಾಗಬೇಕು, ಅದೂ ಅನಿವಾಸಿಗಳ ಬಗ್ಗೆ ಅರಿವಿರುವ ಒಬ್ಬ ಅನಿವಾಸಿ ಕನ್ನಡಿಗನೇ ಈ ಸ್ಥಾನಕ್ಕೆ ನೇಮಕವಾದರೆ ಅನಿವಾಸಿಗಳಿಗೆ ಅನುಕೂಲ, ಎಲ್ಲರೂ ನೇರವಾಗಿ ಸಿಎಂ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ, ಉಪಾಧ್ಯಕ್ಷರಿದ್ದರೆ ಸಮಸ್ಯೆ ತಿಳಿಸಲು ಸುಲಭ. ಇದಷ್ಟೇ ಅಲ್ಲದೆ ತಮ್ಮಲ್ಲಿರುವ ಹಲವಾರು ಸಮಸ್ಯೆಗಳ, ಬೇಡಿಕೆಗಳ ಪಟ್ಟಿಯೊಂದಿಗೆ ವಿಶ್ವದಾದ್ಯಂತ ಅನಿವಾಸಿ ಕನ್ನಡಿಗರು ಸರ್ಕಾರಕ್ಕೆ ಮನವಿ ಸಲ್ಲಿಸಲು ಜನವರಿ 2ರಂದು 'ಎನ್ಆರೈ ಅಪೀಲ್ ಡೇ' ಎಂದು ಟ್ವಿಟ್ಟರ್ ಅಭಿಯಾನ ಮತ್ತು ಇಮೇಲ್ ಮೂಲಕ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ, ನೂರಾರು ಕನ್ನಡ ಪರ ಸಂಘಟನೆಗಳು ಭಾಗವಹಿಸಲಿದೆ - ಹಿದಾಯತ್ ಅಡ್ಡೂರ್ ಸಂಚಾಲಕರು ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನಾವು ಕರ್ನಾಟಕವನ್ನು, ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವವರು, ನಮಗೆ ಈ ಬಗ್ಗೆ ಹೆಮ್ಮೆಯಿದೆ, ಕೊರೋನ ಸಂಕಷ್ಟದ ಸಂದರ್ಭದಲ್ಲಿ ಅನಿವಾಸಿಗಳ ಗೋಳನ್ನು ಕೇಳುವವರು ಯಾರೂ ಇರಲಿಲ್ಲ, ಏಕೆಂದರೆ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರೇ ಇರಲಿಲ್ಲ! ಇನ್ನಾದರೂ ನೇಮಿಸಿ, ಇನ್ನಾದರೂ ಅನಿವಾಸಿಗಳ ಮನವಿಗೆ ಸ್ಪಂದಿಸಿ !! - ಹೇಮೇಗೌಡ ಮಧು ಅಧ್ಯಕ್ಷರು, ಕನ್ನಡ ಸಂಘ ಇಟಲಿ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಅನಿವಾಸಿಗಳು ಶಾಶ್ವತ ಪೌರತ್ವ ಪಡೆಯಲು ಬಂದವರಲ್ಲ, ಅವರು ದುಡಿದ ಪ್ರತಿಯೊಂದು ರೂಪಾಯಿ ತಾಯ್ನಾಡಿಗೆ ಕಳುಹಿಸಿ ರಾಜ್ಯದ ಆರ್ಥಿಕತೆಗೆ ಸಹಾಯ ಮಾಡುವವರು, ಮುಖ್ಯಮಂತ್ರಿ ಯಡಿಯುರಪ್ಪನವರೇ, ಬಹಳಷ್ಟು ನಿರೀಕ್ಷೆಯೊಂದಿಗೆ ಅನಿವಾಸಿಗಳು ನಿಮ್ಮ ಮುಂದೆ ಬೇಡಿಕೆ ಇಡುತ್ತಿದ್ದೇವೆ, ಕಡೆಗಣಿಸದಿರಿ ನಮ್ಮ ಬೇಡಿಕೆಯನ್ನ. -ರವಿ ಶೆಟ್ಟಿ ಪೋಷಕರು ಮತ್ತು ಮಾಜಿ ಅಧ್ಯಕ್ಷರು ತುಳು ಕೂಟ, ಕತಾರ್ "ಎನ್ಆರೈ ಅಪೀಲ್ ಡೆ' ಅಭಿಯಾನದಲ್ಲಿ ಪಾಲ್ಗೊಳ್ಳುವುದು ವಿಶ್ವದಾದ್ಯಂತ ಪಸರಿಸಿರುವ ಪ್ರತಿಯೊಂದು ಅನಿವಾಸಿ ಕನ್ನಡಪರ ಸಂಘಟನೆಗಳು ಕರ್ತವ್ಯ, ನಿಮ್ಮ ನಿಮ್ಮ ದೇಶದಲ್ಲಿರುವ ಅನಿವಾಸಿ ಕನ್ನಡಿಗರ ಬೇಡಿಕೆಗಳನ್ನು ಜನವರಿ 2ರ ಅಭಿಯಾನದ ಮೂಲಕ ಒಕ್ಕೊರಲಿನಿಂದ ಸರ್ಕಾರದ ಮುಂದಿಟ್ಟು ಸ್ಪಂದಿಸುವರೆಗೂ ಒತ್ತಾಯಿಸೋಣ. ಪ್ರದೀಪ್ ಶೆಟ್ಟಿ ಅಧ್ಯಕ್ಷರು, ಕನ್ನಡ ಸಂಘ ಬಹರೈನ್

ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರ ಅನಿವಾಸಿ ಕನ್ನಡಿಗರ ಅಳಲನ್ನು ಕಡೆಗಾಣಿಸಲಾರರು ಎಂಬ ಭರವಸೆ ಇದೆ. ಸತತವಾಗಿ ಆನಿವಾಸಿಗಳನ್ನು ಮೂಲೆಗುಂಪಾಗಿಸುವ ಕಾರ್ಯ ನಿಲ್ಲಬೇಕು. ಅನಿವಾಸಿ ಕನ್ನಡಿಗರ ಒಗ್ಗಟ್ಟಿನ ಅಭಿಯಾನ 'ಎನ್ಆರೈ ಅಪೀಲ್ ಡೇ' ಯಶಸ್ವಿಯಾಗಲಿ, ಎಲ್ಲಾ ಬೇಡಿಕೆ ತ್ವರಿತವಾಗಿ ಈಡೇರಲಿ ಎಂದು ಹಾರೈಸುವೆ. ಪ್ರವೀಣ್ ಕುಮಾರ್ ಶೆಟ್ಟಿ ಅಧ್ಯಕ್ಷರು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ, ಯುಎಇ ಅನಿವಾಸಿ ಕನ್ನಡಿಗರೆಲ್ಲರೂ ಎರಡನೇ ಬಾರಿಗೆ ಕೈಜೋಡಿಸಿ ಎನ್ಆರೈ ಅಪೀಲ್ ಡೇ' ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ, ಕನ್ನಡಿಗಾಸ್ ಫೆಡರೇಷನ್ ನೇತೃತ್ವದ ಈ ಪ್ರಯತ್ನ ಶ್ಲಾಘನೀಯ. ಅನಿವಾಸಿಗಳ ತಾಳ್ಮೆ ಪರೀಕ್ಷೆ ಮಾಡುವುದನ್ನು ನಿಲ್ಲಿಸಿ, ಬಹುಕಾಲದ ಬೇಡಿಕೆಗಳನ್ನು ಈ ಬಾರಿಯಾದರೂ ಈಡೇರಿಸಿ. ಮಲ್ಲಿಕಾರ್ಜುನ ಗೌಡ ಮಾಜಿ ಅಧ್ಯಕ್ಷರು ಕನ್ನಡಿಗರು ದುಬೈ ಅನಿವಾಸಿ ಭಾರತೀಯ ಸಮಿತಿಗೆ ಸಮರ್ಥ ನೇತೃತ್ವ ಇದ್ದಲ್ಲಿ ಪ್ರಪಂಚದಾದ್ಯಂತ ಕನ್ನಡಿಗರು ಕನ್ನಡದ ಕಂಪನ್ನು ಪಸರಿಸಲು ಸಾಧ್ಯ, ಅನಿವಾಸಿ ಕನ್ನಡಿಗರು ಸಂಘಟನಾತ್ಮಕವಾಗಿ ಬೆಳೆಯಲೂ ಸಾಧ್ಯ, ಹೀಗಾಗಿ ಅನಿವಾಸಿ ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ 'ಎನ್ಆರೈ ಅಪೀಲ್ ಡೇ' ಅಭಿಯಾನದಲ್ಲಿ ಕೈಜೋಡಿಸಿ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರಯತ್ನ ಮುಂದುವರೆಸೋಣ ಎಂ. ಇ ಮೂಳೂರು ಅಧ್ಯಕ್ಷರು ಶಾರ್ಜಾ ಕರ್ನಾಟಕ ಸಂಘ ತಮ್ಮ ಬೇಡಿಕೆಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರದ ಮುಂದಿಡಲು ಅನಿವಾಸಿ ಕನ್ನಡಿಗರು ಆಶಾಭಾವ ದೊಂದಿಗೆ ಮತ್ತೊಮ್ಮೆ ಸಜ್ಜಾಗಿದ್ದಾರೆ. ಇನ್ನಷ್ಟು ಪರಿಣಾಮಕಾರಿಯಾಗಿ ಎನ್ಆರೈ ಅಪೀಲ್ ಡೇ' ಅಭಿಯಾನದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರದ, ಜನಪ್ರತಿನಿಧಿಗಳ ಗಮನ ಸೆಳೆಯಲಿದ್ದಾರೆ. ನಾವೂ ಸಕ್ರಿಯವಾಗಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದೇವೆ. ಶಶಿಧರ ನಾಗರಾಜಪ್ಪ ಅಧ್ಯಕ್ಷರು ಕನ್ನಡ ಮಿತ್ರರು ದುಬೈ