Updated News From Kaup

ಉಗ್ರರಿಗೆ ಹಣ ಪೂರೈಕೆ : ಪಂಜಿಮೊಗರು ಮೂಲದ ದಂಪತಿ ಸೇರಿ ನಾಲ್ವರಿಗೆ 10 ವರ್ಷ ಜೈಲು

Posted On: 26-11-2021 04:33PM

ಮಂಗಳೂರು: ಉಗ್ರರಿಗೆ ಹಣ ಪೂರೈಸಿದ್ದ ಪಂಜಿಮೊಗರು ಮೂಲದ ದಂಪತಿ ಸೇರಿ ನಾಲ್ವರಿಗೆ ಛತ್ತೀಸ್‌ ಘಡ ನ್ಯಾಯಾಯಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮಂಗಳೂರಿನ ಪಂಜಿಮೊಗರು ಮೂಲದ ದಂಪತಿ ಹುಸೈನ್‌ (42), ಪತ್ನಿ ಆಯೀಷಾ ಬಾನು (38), ಧಿರಜ್‌ ಸಾವೋ (21) ಮತ್ತು ಪಪ್ಪು ಮಂಡಲ್‌ ಎಂಬುವವರು ಶಿಕ್ಷೆಗೊಳಗಾದವರು.

2013 ನವೆಂಬರ್‌ ನಲ್ಲಿ ಬಿಹಾರ ಛತ್ತೀಸ್ಗಡ್‌ದಲ್ಲಿ 10 ಕ್ಕೂ ಹೆಚ್ಚು ನಿಷೇಧಿತ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರನ್ನು ಪೋಲಿಸರು ವಿಚಾರಣೆ ಮಾಡಿ ಉಗ್ರರಿಗೆ ಹಣ ಪೂರೈಕೆಯ ಬಗ್ಗೆ ಅಧಿಕಾರಿಗಳು ಮಾಹಿತಿ ಲಭಿಸಿತ್ತು.

ಈ ಮಾಹಿತಿಯ ಮೇರೆಗೆ ಹುಡುಕಿಕೊಂಡು ಬಂದ ಪೋಲಿಸರು ಮಂಗಳೂರಿನ ಪಂಜಿಮೊಗರು ದಂಪತಿಯನ್ನು ವಶಕ್ಕೆ ಪಡೆದಿದ್ದರು. ದಂಪತಿ ಮತ್ತು ಮುಝಾಹಿಧಿನ್ ಉಗ್ರರ ಮಧ್ಯೆ ಕೋಟ್ಯಾಂತರ ಹಣ ವ್ಯವಹಾರ ಮಾಡಿರುವುದು ಬ್ಯಾಂಕ್‌ ಖಾತೆಯ ಮೂಲಕ ನ್ಯಾಯಾಲಯಕ್ಕೆ ವಿಚಾರಣೆ ವೇಳೆ ಸಾಕ್ಷಿ ಸಿಕ್ಕತ್ತು ಇದರ ಆಧಾರದಲ್ಲಿ ಇವರ ವಿರುಧ್ದ ದೇಶ ದ್ರೋಹ ಕಾಯ್ದೆಯಡಿ ರಾಯ್‌ ಪುರ ಕೋರ್ಟ್‌ ದಂಪತಿ ಸೇರಿ ನಾಲ್ವರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ದಂಪತಿ ನೆರೆಹೊರೆಯಲ್ಲಿ ಸಭ್ಯರಂತೆ ವರ್ತಿಸಿ, ತಮ್ಮ ಕುಕೃತ್ಯವನ್ನು ರಾಯ್‌ ಪುರಕ್ಕೆ ಆಗಾಗ ಹೋಗಿ ಬಂದು ಮಾಡುತ್ತಿದ್ದರು. ಇವರ ಬಳಿ 50 ಕ್ಕೂ ಹೆಚ್ಚು ಬ್ಯಾಂಕ್‌ ನಲ್ಲಿ ವ್ಯವಹಾರ ಇರವುದು ಮತ್ತು ನೆಟ್‌ ಬ್ಯಾಂಕಿಂಗ್‌ ಮೂಲಕ ಹಣ ವರ್ಗಾಹಿಸುತ್ತಿರುವುದು ಬೆಳಕಿಗೆ ಬಂದಿದೆ.

ನವೆಂಬರ್ 29ಕ್ಕೆ ಕರ್ನಾಟಕದಲ್ಲಿ ಮತ್ತೊಂದು ಚಂಡಮಾರುತ ಅಪ್ಪಳಿಸುವ ಭೀತಿ

Posted On: 26-11-2021 02:12PM

ಬೆಂಗಳೂರು : ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಮಳೆಗಾಗಿ ಕಾಯುತ್ತಿದ್ದ ರೈತರು ಯಾಕಾದರೂ ಇಷ್ಟು ಮಳೆ ಬರುತ್ತಿದೆಯೋ ಎನ್ನುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ವಾತಾವರಣ ಸೃಷ್ಟಿಯಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ನ.28ರವರೆಗೂ ಹೆಚ್ಚು ಮಳೆಯಾಗಲಿದೆ. ಚಳಿಗಾಲ ಆರಂಭವಾಗಿದ್ದರೂ ಮಳೆಗಾಲ ಮುಗಿದಿಲ್ಲ. ಹೆಚ್ಚಿದ ಮಳೆಯಿಂದಾಗಿ ತರಕಾರಿ, ಹಣ್ಣುಗಳ ಬೆಲೆಯೂ ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಿದೆ.

ನವೆಂಬರ್ 29ಕ್ಕೆ ಕರ್ನಾಟಕದಲ್ಲಿ ಮತ್ತೊಂದು ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪಾಂತರಗೊಳ್ಳಲಿದೆ. ಇದರಿಂದಾಗಿ ಮಳೆ ಹೆಚ್ಚುವ ಸಾಧ್ಯತೆ ಇದೆ.

ಆಂಧ್ರಪ್ರದೇಶದ ಕರಾವಳಿ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್‌ನಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ಉ.ಕ,ದ.ಕ, ಉಡುಪಿ, ಬೆಳಗಾವಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ, ಚಿತ್ರದುರ್ಗ , ಕಲಬುರಗಿ, ಬೆಂಗಳೂರು, ಬೆಂ.ಗ್ರಾ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಹಾಗೂ ತುಮಕೂರಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಮಲ್ಲಾರು ಗ್ರಾಮದ ಕುರ್ತಿಮಾರು ಉರ್ದುಶಾಲೆ, ಬಳಿ ರೈಲು ಡಿಕ್ಕಿ : ವ್ಯಕ್ತಿ ಸಾವು

Posted On: 26-11-2021 01:39PM

ಕಾಪು : ಇಂದು ಮಲ್ಲಾರು ಗ್ರಾಮದ ಕುರ್ತಿಮಾರು ಉರ್ದುಶಾಲೆಯ ರೈಲ್ವೇ ಹಳಿ ಬಳಿ ನಡೆದುಕೊಂಡು ಹೋಗುತ್ತಿರುವಾಗ ಮಲ್ಲಾರು ಗ್ರಾಮ ಪಕೀರಣಕಟ್ಟೆಯ ಎಂ.ಜೆ.ಎಂ ಮಸೀದಿ ಹತ್ತಿರದ ನಿವಾಸಿ ಅಬ್ದುಲ್ ರಜಾಕ್ (48) ಎಂಬುವವರಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ಯಾವುದೋ ರೈಲು ಡಿಕ್ಕಿ ಹೊಡೆದಿದೆ. ಈ ಸಂದರ್ಭ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

ಈ ಘಟನೆ ಬೆಳಿಗ್ಗೆ 06:30 ಗಂಟೆಯಿಂದ 08:00 ಗಂಟೆಯ ಮಧ್ಯೆ ನಡೆದಿರಬಹುದು ಎಂದು ತಿಳಿದು ಬಂದಿದೆ.

ಆಪತ್ಬಾಂಧವ ಸೂರಿ ಶೆಟ್ಟಿ ಕಾಪು ಮೃತ ದೇಹವನ್ನು ತೆರವುಗೊಳಿಸಲು ಸಹಕರಿಸಿದ್ದು, ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿದ್ದಾರೆ.

ಜಲ್ ಜೀವನ್ ಮಿಷನ್ ವತಿಯಿಂದ ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮ, ಭಿತ್ತಿಪತ್ರ ತಯಾರಿಸುವ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ

Posted On: 25-11-2021 07:59PM

ಮಂಗಳೂರು : ಮಂಗಳೂರು ತಾಲೂಕಿನ ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಜಲ್ ಜೀವನ ಮಿಷನ್ನಿನ ವತಿಯಿಂದ ಶಾಲಾ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ, ಭಿತ್ತಿಪತ್ರ ತಯಾರಿಸುವ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ ಮಾಡಲಾಯಿತು.

ಶಾಲಾ ಮಕ್ಕಳಿಗೆ ನೀರಿನ ಸಂರಕ್ಷಣೆ, ಬಳಕೆ ಮತ್ತು ಜಲಮಾಲಿನ್ಯದಿಂದಾಗುವ ಹಾನಿ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಕಲೆ ಮತ್ತು ಭಿತ್ತಿಪತ್ರ ತಯಾರಿಸುವ ಸ್ಪರ್ಧೆ ಮಾಡಲಾಗಿತ್ತು. ಭಿತ್ತಿಪತ್ರ ತಯಾರಿಸುವ ಸ್ಪರ್ಧೆಯಲ್ಲಿ ಸರಿ ಸುಮಾರು15 ವಿಧ್ಯಾರ್ಥಿಗಳು ಮತ್ತು ಚಿತ್ರಕಲೆಯಲ್ಲಿ 22 ವಿಧ್ಯಾರ್ಥಿಗಳು ಸ್ಪರ್ಧಿಸಿದ್ದರು. ಅನುಕ್ರಮವಾಗಿ ಪ್ರತಿ ಸ್ಪರ್ಧೆಗೂ ಪ್ರಥಮ, ದ್ವಿತಿಯ ಮತ್ತು ತೃತೀಯ ಬಹುಮಾನಗಳನ್ನು ಮುಖ್ಯೋಪಾಧ್ಯಾಯರು ಘೋಷಿಸಿದರು.

ಸೂರಿಂಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಶೆಟ್ಟಿ ಬಹುಮಾನ ವಿತರಿಸಿದರು. ನಂತರ ಗ್ರಾಮದ ಬೀದಿಗಳಲ್ಲಿ ಮಕ್ಕಳೆ ತಯಾರಿಸಿದ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಘೋಷಣೆಗಳನ್ನು ಹೇಳುತ್ತಾ ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ ವೃಂದ ಮತ್ತು ಪಂಚಾಯತ್ ಸಿಬ್ಬಂದಿ ಸಹಕರಿಸಿದರು.

ಕಾಪುವಿನ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಗೆ ಕಾಶೀ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ

Posted On: 24-11-2021 08:30PM

ಕಾಪು : ಇಂದು ಸಂಜೆ ಕಾಶೀ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಕಾಪುವಿನ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಗೆ ಭೇಟಿ ನೀಡಿ ಆಶೀರ್ವದಿಸಿದರು.

ಈ‌ ಸಂದರ್ಭ ಸ್ವಾಮೀಜಿಯವರ ಭಕ್ತರು, ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

ಯುವವಾಹಿನಿ ಅಡ್ವೆ ಘಟಕದ ಪದಗ್ರಹಣ

Posted On: 24-11-2021 08:23PM

ಪಡುಬಿದ್ರಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಅಡ್ವೆ ಘಟಕದ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಇಲ್ಲಿ ಜರಗಿತು. ಸಮಾರಂಭವನ್ನು ನಿವೃತ್ತ ಶಿಕ್ಷಕರಾದ ಅಡ್ವೆ ರವೀಂದ್ರ ಪೂಜಾರಿ ಉದ್ಘಾಟಿಸಿದರು.

ಘಟಕದ ನೂತನ ಪದಾಧಿಕಾರಿಗಳಿಗೆ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಥಮ ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು ಪ್ರತಿಜ್ಞಾ ವಿಧಿ ಬೋಧಿಸಿದರು. ಘಟಕದ ಅಧ್ಯಕ್ಷರಾದ ಶಶಿಧರ ಟಿ. ಪೂಜಾರಿಯವರು ನಿಯೋಜಿತ ಅಧ್ಯಕ್ಷರಾದ ಅರುಣಾನಂದ ಕಿಶೋರ್ ಅವರಿಗೆ ಮತ್ತು ಘಟಕದ ಕಾರ್ಯದರ್ಶಿ ಭಾರತಿ ನಿಯೋಜಿತ ಕಾರ್ಯದರ್ಶಿ ಶರತ್ ಅಡ್ವೆಯವರಿಗೆ ಅಧಿಕಾರ ಹಸ್ತಾಂತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಅಡ್ವೆ ಘಟಕದ ಅಧ್ಯಕ್ಷರಾದ ಶಶಿಧರ್ ಟಿ. ಪೂಜಾರಿ ವಹಿಸಿದ್ದರು. ಶ್ರೀ ಬ್ರಹ್ಮ ಬೈದರ್ಕಳ ಅಡ್ವೆ ಗರಡಿಯ ಮಹಾಪೋಷಕರಾದ ಸೂರ್ಯಕಾಂತ್ ಜಯ ಸುವರ್ಣ, ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಸೇವಾ ಸಮಿತಿಯ ಕಾರ್ಯದರ್ಶಿ ನವೀನ್ ಚಂದ್ರ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಮಂಗಳೂರು ಸಂಘಟನಾ ಕಾರ್ಯದರ್ಶಿ ಯೋಗೀಶ್ ಪೂಜಾರಿ ಪಾದೆಬೆಟ್ಟು, ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕಾಪು : ನಗರದ ಮೂರು ಮಾರಿಗುಡಿಗಳಲ್ಲೂ ಜಾರ್ದೆ ಮಾರಿಪೂಜಾ ಮಹೋತ್ಸವ ಸಂಪನ್ನ

Posted On: 24-11-2021 07:45PM

ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಯಮ್ಮ ದೇವಸ್ಥಾನ ಹಾಗೂ ಮೂರನೇ ಮಾರಿಯಮ್ಮ ದೇವಸ್ಥಾನಗಳ್ಲಲಿ ಏಕಕಾಲದಲ್ಲಿ ತುಳುವರ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.

ಸಿಡುಬು, ಸಂತಾನ ಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಟಿ ಮಾರಿಪೂಜೆ ಹಾಗೂ ನವಂಬರ್ ತಿಂಗಳಾಂತ್ಯದಲ್ಲಿ ಜಾರ್ದೆ ತಿಂಗಳ ಮಾರಿ ಪೂಜೆ ನಡೆಯುತ್ತದೆ. ಆಟಿ ಹಾಗೂ ಸುಗ್ಗಿ ತಿಂಗಳ ಮಾರಿಪೂಜೆಯಲ್ಲಿ ಅತೀ ಹೆಚ್ಚಿನ ಭಕ್ತಾಧಿಗಳು ಕಾಪುವಿನ ಮಾರಿಗುಡಿಗಳಿಗೆ ಆಗಮಿಸುತ್ತಿದ್ದು, ಜಾರ್ದೆ ಮಾರಿಪೂಜೆಯಲ್ಲಿ ಭಕ್ತಾಧಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಆದರೂ ಭಕ್ತಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗುತ್ತದೆ.

ಪ್ರತಿ ಮಾರಿಪೂಜೆಗಳಲ್ಲಿ ಕುರಿ/ಕೋಳಿ ಹರಕೆ ಅಂದರೆ ಲಕ್ಷಾಂತರ ಕೋಳಿಗಳ ಬಲಿ ನಡೆಯುವುದೂ ಇಲ್ಲಿಯ ವಿಶೇಷತೆಗಳಲ್ಲೊಂದು. ಈ ಬಾರಿಯೂ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು.

ಕುತ್ಯಾರು ವಿದ್ಯಾದಾಯಿನಿ ಹಿರಿಯಪ್ರಾಥಮಿಕ ಶಾಲೆಗೆ ಅವಕಾಶ್ ಫೌಂಡೇಶನ್ ವತಿಯಿಂದ ಕಂಪ್ಯೂಟರ್ ಕೊಡುಗೆ

Posted On: 24-11-2021 07:38PM

ಕಾಪು : ಕುತ್ಯಾರು ಶ್ರೀಪಾದ್ ಹೆಗ್ಡೆಯವರು ಆಡಳಿತ ನಿರ್ದೇಶಕರಾಗಿರುವ ಸ್ವಯಂ ಸೇವಾ ಸಂಸ್ಥೆ ಅವಕಾಶ್ ಫೌಂಡೇಶನ್ ವತಿಯಿಂದ ಸ್ಥಳೀಯ ಕುತ್ಯಾರು ವಿದ್ಯಾದಾಯಿನಿ ಹಿರಿಯಪ್ರಾಥಮಿಕ ಶಾಲೆಗೆ ಕಲಿಕೆಗೆ ಪೂರಕವಾಗಿ ಒಂದು ವರ್ಷದ ಉಚಿತ ಇಂಟರ್ನೆಟ್ ಸೌಲಭ್ಯದ ಸಹಿತ ಎರಡು ಕಂಪ್ಯೂಟರ್ ಹಾಗೂ ಒಂದು ಲಾಪ್ ಟಾಪ್ ಗಳ ಕೊಡುಗೆಯನ್ನು ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಕುಲಾಲ್ ಅವರು ವಹಿಸಿದ್ದರು. ಶ್ರೀಪಾದ್ ಹೆಗ್ಡೆ ಯವರ ತಂದೆ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರೂ ಆಗಿರುವ ಪಾಂಡುರಂಗ ಹೆಗ್ಡೆ, ಶೃಂಗಾರಿ ಹೆಗ್ಡೆ ದಂಪತಿಗಳು ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಅಂಜಾರುಮನೆ ಕಿಶೋರ್ ಶೆಟ್ಟಿ , ಸ್ಥಳೀಯ ಪಂಚಾಯತ್ ಸದಸ್ಯರಾದ ಸಂಪತ್ ಕುಮಾರ್ ಕೇಂಜ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಊರಿನ ಪ್ರಮುಖರಾದ ಕುತ್ಯಾರು ನವೀನ್ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷ ಧೀರಜ್ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ, ಆಶಾ ಚಂದ್ರಹಾಸ ಶೆಟ್ಟಿ, ಶ್ರೀನಾಥ್ ಹೆಗ್ಡೆ , ಉಲ್ಲಾಯ ಫ್ರೆ೦ಡ್ಸ್ ಅಧ್ಯಕ್ಷ ಅಜಿತ್ ಶೆಟ್ಟಿ, ಶಾಲಾ ಶಿಕ್ಷಕ ವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಶರ್ಮಿಳಾ ಅವರು ಸ್ವಾಗತಿಸಿ, ಶಿರ್ವ ಸಿ.ಎ ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ಸವಿತಾ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಹಾಗೂ ವಂದನಾರ್ಪಣೆಯನ್ನು ಶಿಕ್ಷಕಿಯರಾದ ಸುಪ್ರೀತ ಹಾಗೂ ಕುಸುಮ ಅವರು ನಿರ್ವಹಿಸಿದರು.

ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿಗೆ ಅಭಿನಂದನೆ

Posted On: 24-11-2021 07:00PM

ಮಂಗಳೂರು: ನವಂಬರ್ 1ರಂದು ಬೆಂಗಳೂರಿನಲ್ಲಿ ಜರಗಿದ ರಾಜ್ಯೋತ್ಸವ ಸಮಾರಂಭದಲ್ಲಿ 2021 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಹೊರನಾಡ ಕನ್ನಡಿಗ, ಮುಂಬಯಿ 'ಕರ್ನಾಟಕ ಮಲ್ಲ' ಕನ್ನಡ ದೈನಿಕದ ಪ್ರದಾನ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಮಂಗಳೂರಿನ ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಅಭಿನಂದಿಸಲಾಯಿತು.

ಅಭಿನಂದನೆಯನ್ನು ಸ್ವೀಕರಿಸಿದ ಪಾಲೆತ್ತಾಡಿ ಮಾತನಾಡುತ್ತಾ ಕುಲಾಲ ಸಮಾಜ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಕ್ಷೇತ್ರದಲ್ಲಿ ಕುಲಾಲ ಸಮಾಜದ ಧಾರ್ಮಿಕ ಚಿಂತನೆಗಳು ಎದ್ದು ಕಾಣುತ್ತಿದೆ. ಶ್ರದ್ಧೆ. ಭಕ್ತಿಯಿಂದ ಯಿಂದ ಜೀರ್ಣೋದ್ಧಾರದ ಸೇವೆಯನ್ನು ಮಾಡಿದಾಗ ದಾನಿಗಳು, ಭಕ್ತರು ದೇವರ ರೂಪದಲ್ಲಿ ಬರುತ್ತಾರೆ ಆ ಮೂಲಕ ಸಹಕಾರ ನೀಡುತ್ತಾರೆ ಎಂದು ತಿಳಿಸಿದ ಪಾಲೆತ್ತಾಡಿ ಯವರು ನಾನು ಪ್ರಶಸ್ತಿಗಾಗಿ ಹಂಬಲಿಸಿ ಕೊಂಡವನಲ್ಲ ನನ್ನ ಸೇವಾಕಾರ್ಯವನ್ನು ಮಾಡುತ್ತಾ ಬಂದಿದ್ದೇನೆ ಅದನ್ನು ಸರಕಾರ ಗುರುತಿಸಿಕೊಂಡಿದೆ. ನಾವು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವಾಕಾರ್ಯಗಳನ್ನು ಮಾಡಿದಾಗ ನಮ್ಮನ್ನು ಪ್ರಶಸ್ತಿಗಳು ಸನ್ಮಾನಗಳು ಹುಡುಕಿಕೊಂಡು ಬರುತ್ತದೆ. ಎಂದು ಹೇಳಿದರು.

ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಬಿ ಸುರೇಶ್ ಕುಲಾಲ್ ಮಂಗಳಾದೇವಿಯವರು ಅಭಿನಂದನಾ ನುಡಿಗಳನ್ನಾಡಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಂ.ಪಿ. ಬಂಗೇರ ಕ್ಷೇತ್ರದ ಸಮಗ್ರ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ್, ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ್ ಕುಲಾಲ್ ಕಲ್ಬಾವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಎ. ದಾಮೋದರ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಕಾರ್ಯಧ್ಯಕ್ಷರು ಬಿ ಪ್ರೇಮಾನಂದ ಕುಲಾಲ್. ಸೇವಾ ಸಮಿತಿ ಅಧ್ಯಕ್ಷರು ಸುಂದರ ಕುಲಾಲ್ ಶಕ್ತಿನಗರ, ಟ್ರಸ್ಟಿ ಗಿರಿಧರ್ ಜೆ ಮೂಲ್ಯ. ದೇವಸ್ಥಾನದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಮನೋಜ, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್, ಪುರುಷೋತ್ತಮ ಕುಲಾಲ ಬಿಜೈ, ದಯಾನಂದ ಅಡ್ಯಾರ್, ಕಿರನ್ ಅಟ್ಲೂರು, ಧನುಷ್ ಕುಲಾಲ್ ಮತ್ತು ಬೊಕ್ಕಪಟ್ನ ಬೋಳೂರಿನ ಶ್ರೀ ರಾಮಾಂಜನೇಯ ‌ವ್ಯಾಯಾಮಶಾಲೆ ಸಂಸ್ಥಾಪಕ ಶಿಕ್ಷಕ ಮಾಸ್ಟರ್ ಬಿ ಸೀತಾರಾಮ್ ಕುಲಾಲ್, ಕಾರ್ಯದರ್ಶಿ ಬಿ ನಾಗೇಶ್ ಕುಲಾಲ್ ಮತ್ತಿತರ ಕುಲಾಲ ಸಮಾಜದ ಮುಖಂಡರು ಕ್ಷೇತ್ರದ ಭಕ್ತರು ಪಾಲ್ಗೊಂಡಿದ್ದರು.

ಕುತ್ಯಾರುವಿನಲ್ಲಿ ನವೆಂಬರ್ 26ರಂದು ಸನ್ಮಾನ ಕಾರ್ಯಕ್ರಮ, ಗೀತಗಾಯನ

Posted On: 22-11-2021 09:05PM

ಕಾಪು : ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್ ನ ಆಶ್ರಯದಲ್ಲಿ ನವೆಂಬರ್ 26 ರ ಶುಕ್ರವಾರ ಕನ್ನಡ ಜಾನಪದ ಪರಿಷತ್ ನ ಉಡುಪಿ ಜಿಲ್ಲಾ ಅಧ್ಯಕ್ಷರೂ , ಖ್ಯಾತ ಜಾನಪದ ಗಾಯಕರೂ ಆದ ಡಾ. ಗಣೇಶ್ ಗಂಗೊಳ್ಳಿ ಇವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಕನ್ನಡ ಜಾನಪದ ಕೋಗಿಲೆ ಬಿರುದಾಂಕಿತ ಡಾ. ಗಂಗೊಳ್ಳಿಯವರು ಕನ್ನಡ ನಾಡಿನ ಜಾನಪದ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡುತ್ತಿರುವ ಕಲಾಸಾಧಕ. ಕರ್ನಾಟಕ ಜಾನಪದ ಸಾಹಿತ್ಯ ಸೇವೆಗಾಗಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನವಾಗಿದೆ.

ಈ ಸಮಾರಂಭದ ಅಧ್ಯಕ್ಷತೆಯನ್ನು ಸೂರ್ಯ ಚೈತನ್ಯ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿದ್ವಾನ್ ಶಂಭುದಾಸ ಗುರೂಜಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಪು ತಾಲೂಕು ಕಸಾಪ ಪೂರ್ವಾಧ್ಯಕ್ಷ ಪುಂಡಲೀಕ ಮರಾಠೆ, ಮುದರಂಗಡಿ ಸರಕಾರಿ ಪ.ಪೂ. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಭಾಸ್ಕರ ವೈ.ಜಿ. ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ನಂತರ ಡಾ. ಗಣೇಶ್ ಗಂಗೊಳ್ಳಿಯವರಿಂದ 'ಗೀತಗಾಯನ' ಸಂಗೀತ ಕಾರ್ಯಕ್ರಮ ಜರುಗಲಿದೆ. ಪ್ರಾಂಶುಪಾಲ ಗುರುದತ್ತ ಸೋಮಯಾಜಿ , ಶಿಕ್ಷಕವೃಂದ ಮತ್ತು ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಲಿರುವರು.