Updated News From Kaup
ಉಡುಪಿ ಜಿಲ್ಲಾ ಯುವ ಜನತಾದಳದ ಅಧ್ಯಕ್ಷರಾಗಿ ಸಂಜಯ್ ಕುಮಾರ್ ಆಯ್ಕೆ.

Posted On: 20-11-2021 10:42PM
ಉಡುಪಿ : ಜನತಾದಳ( ಜಾತ್ಯತೀತ) ಉಡುಪಿ ಜಿಲ್ಲಾ ಯುವ ಜನತಾದಳದ ಅಧ್ಯಕ್ಷರನ್ನಾಗಿ ಸಂಜಯ ಕುಮಾರ್ ರವರನ್ನು ಜಿಲ್ಲಾಧ್ಯಕ್ಷರಾದ ಯೋಗಿಶ್ ವಿ ಶೆಟ್ಟಿಯವರು ನೇಮಕ ಮಾಡಿರುತ್ತಾರೆ.
ಸಂಜಯ್ ಕುಮಾರ್ ಯವರು ,ಯುವನಾಯಕ, ಸಮಾಜಸೇವಕರು, ಅನೇಕ ಸಂಘ ಸಂಸ್ಥೆಗಳಲ್ಲಿಗುರುತಿಸಿಕೊಂಡಿದ್ದು,ಯುವಕರ ತಂಡವನ್ನು ಕಟ್ಟಿಕೊಂಡು ಸಮಾಜ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡವರಾಗಿದ್ದಾರೆ.
ಮೂಲಿಕೆ ವೆಂಕಣ್ಣ ಕವಿ ,ಫಣಿಯಪ್ಪಯ್ಯ ಅವರ ಯಕ್ಷಗಾನ ಪ್ರಸಂಗಗಳ ಬಿಡುಗಡೆ

Posted On: 20-11-2021 03:18PM
ಮೂಲ್ಕಿ : ಇಲ್ಲಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಶಿರೂರಿನ ಫಣಿಗಿರಿ ಪ್ರತಿಷ್ಠಾನದ ಉದ್ಘಾಟನೆ, ಮೂಲಿಕೆಯ ವೆಂಕಣ್ಣ ಕವಿ ವಿರಚಿತ 'ಮಾನಸ ಚರಿತ್ರೆ' ಹಾಗೂ ಶಿರೂರು ಫಣಿಯಪ್ಪಯ್ಯ ವಿರಚಿತ 'ವಾಜಿಗ್ರಹಣ ಅಥವಾ ಯೌವನಾಶ್ವ ಕಾಳಗ' ಯಕ್ಷಗಾನ ಪ್ರಸಂಗಗಳ ಬಿಡುಗಡೆ ನೆರವೇರಿತು. ಯಕ್ಷಗಾನ ವಿದ್ವಾಂಸ ,ಸಾಹಿತಿ ,ಛಾಂದಸ, ದಾಸಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿರುವ ,ಯಕ್ಷಗಾನ ಅಷ್ಣಾವಧಾನಿ , ಬಹುಶ್ರುತ ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಮೂಲ್ಕಿಯ ವೆಂಕಟರಮಣ ದೇವಸ್ಥಾನದಲ್ಲಿದ್ದು ಮೂಲಿಕೆಯ ವೆಂಕಣ್ಣಕವಿ(೧೭೫೦ - ೧೮೩೦)ರಚಿಸಿದ್ದ 'ಮಾನಸ ಚರಿತ್ರೆ' ಯಕ್ಷಗಾನ ಪ್ರಸಂಗ ಪಠ್ಯವನ್ನು ತಾಡವಾಲೆ ಹಾಗೂ ಕೈಬರಹದಲ್ಲಿದ್ದುದನ್ನು ಸ್ವೀಕರಿಸಿ ಶುದ್ಧಪ್ರತಿಯಾಗಿ ಸಂಸ್ಕರಿಸಿ ಸಂಪಾದಿಸಿದ್ದರು.ಮೂಲ ತಾಳವಾಡೆ ಹಾಗೂ ಕೈಬರಹ ಪ್ರತಿಗಳು ಶಿರೂರಿನ ಫಣಿಯಪ್ಪಯ್ಯ ಅವರ ಮನೆಯ ಗ್ರಂಥಭಂಡಾರದಿಂದ ಲಭಿಸಿತ್ತು.
ಮಾನಸ ಚರಿತ್ರೆ' ಪ್ರಸಂಗ ಪಠ್ಯವನ್ನು ಕಾಪಿಟ್ಟವರಾದ ಪ್ರಸಂಗಕರ್ತ,ಭಾಗವತರೂ ಆಗಿದ್ದ ಶಿರೂರಿನ ಫಣಿಯಪ್ಪಯ್ಯ( ೧೯೧೮ - ೨೦೦೪) ಅವರ 'ವಾಜಿಗ್ರಹಣ ಅಥವಾ ಯೌವನಾಶ್ವ ಕಾಳಗ' ಕೈ ಬರಹದ ಯಕ್ಷಗಾನ ಪ್ರಸಂಗ ಪಠ್ಯವನ್ನು ಸಂಪಾದಿಸಿ ಭಾರದ್ವಾಜರೇ ಮುದ್ರಣಕ್ಕೆ ಸಿದ್ಧಗೊಳಿಸಿದ್ದರು.ಈ ಎರಡೂ ಕೃತಿಗಳ ಸಾದ್ಯಂತ ಪರಿಚಯವನ್ನು ಮಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರತಿಷ್ಠಾನವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವೆಂಕಟರಮಣ ದೇವಳದ ಆಡಳಿತೆ ಮೊಕ್ತೇಸರ ದಾಮೋದರ ಕುಡ್ವ ಅವರು 'ಮಾನಸ ಚರಿತ್ರೆ' ಯಕ್ಷಗಾನ ಪ್ರಸಂಗವನ್ನು ಬಿಡುಗಡೆಗೊಳಿಸಿದರು.ವೆಂಕಣ್ಣ ಕವಿಯ ಭಜನೆಯ ಹಾಡುಗಳನ್ನು ದೇವಳದಲ್ಲಿ ಹಿಂದಿನಿಂದಲೂ ಭಜನೆಯಾಗಿ ಹಾಡಲಾಗುತ್ತಿದೆ ಎಂದರು.
ವಾಜಿಗ್ರಹಣ ಪ್ರಸಂಗವನ್ನು ಬಿಡುಗಡೆಗೊಳಿಸಿದ ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಅವರು ಪುರಾತನ ಪ್ರಸಂಗಳ ಅನ್ವೇಷಣೆ ಹಾಗೂ ಪ್ರಕಟಣೆ ಕಾರ್ಯ ನಡೆಸುತ್ತಿರುವ ಫಣಿಯಪ್ಪಯ್ಯ ಪ್ರತಿಷ್ಠಾನದ ಕಾರ್ಯ ನಿರಂತರವಾಗಲಿ ಎಂದು ಶುಭ ಹಾರೈಸಿದರು. ವೆಂಕಟರಮಣ ದೇವಳದ ಮೊಕ್ತೇಸರ ಅತುಲ್ ಕುಡ್ವ, ನರಸಿಂಹ ಪೈ , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ , ಮುದ್ದಣ ಪ್ರಕಾಶನದ ಅಧ್ಯಕ್ಷ ನಂದಳಿಕೆ ಬಾಲಚಂದ್ರರಾವ್ , ಕಾರ್ಯಕ್ರಮ ಸಂಘಟಿಸಿದ್ದ ಉಮೇಶರಾವ್, ದಿನೇಶ ಉಪ್ಪೂರು,ಲೇಖಕ ರಾಜಗೋಪಾಲ ಕನ್ಯಾನ, ಕೃಷ್ಣಮೂರ್ತಿ ಪುರಾಣಿಕ ಬ್ರಹ್ಮಾವರ, ಜನಾರ್ದನ ಮರವಂತೆ ಉಪಸ್ಥಿತರಿದ್ದರು. ಸತ್ಯನಾರಾಯಣ ಪುರಾಣಿಕ್ ಸ್ವಾಗತಿಸಿದರು.ಎಸ್.ಉಮೇಶ ಶಿರೂರು ಪ್ರಸ್ತಾವಿಸಿದರು.ರಾಮಕೃಷ್ಣ ಶಿರೂರು ಕಾರ್ಯಕ್ರಮ ನಿರೂಪಿಸಿದರು.
ಎರಡೂ ಪ್ರಸಂಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ವಿದ್ವಾಂಸ ಡಾ. ವಸಂತ ಭಾರದ್ವಾಜ ಅವರಿಗೆ ಫಣಿಗಿರಿ ಪ್ರತಿಷ್ಠಾನದ ಮೊತ್ತಮೊದಲ 'ಫಣಿಗಿರಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ವೆಂಕಟ್ರಮಣ ದೇವಳವತಿಯಿಂದ ಅತಿಥಿಗಳೆಲ್ಲರನ್ನೂ ಸಮ್ಮಾನಿಸಲಾಯಿತು.
ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಪಡು ಕುತ್ಯಾರು : ವಾರ್ಷಿಕ ಮಹೋತ್ಸವ ಸಂಪನ್ನ

Posted On: 20-11-2021 02:14PM
ಕಾಪು : ಉಡುಪಿ ಜಿಲ್ಲೆಯ ಕಾಪು ತಾಲೂಕು, ಪಡುಕುತ್ಯಾರು ಗ್ರಾಮದ ಶ್ರೀ ದುರ್ಗಾಮಂದಿರದಲ್ಲಿ ಶುಕ್ರವಾರ, ವಾರ್ಷಿಕ ಮಹೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯು ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಅನುಗ್ರಹದೊಂದಿಗೆ ಜರಗಿತು.
ಈ ಸಂದರ್ಭ ಗೌರವ ಅಧ್ಯಕ್ಷರು ಹಾಗೂ ಮೊಕ್ತೇಸರರಾದ ಪ್ರಕಾಶ ಆಚಾರ್ಯ, ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ, ಕಾರ್ಯಧ್ಯಕ್ಷ ಜಯರಾಮ ಆಚಾರ್ಯ, ಕಾರ್ಯದರ್ಶಿ ಸುರೇಶ್ ಆಚಾರ್ಯ, ಮುಂಬೈ ಕಮಿಟಿ ಅಧ್ಯಕ್ಷ ಮಾಧವ ಆಚಾರ್ಯ, ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
ಕೋವಿಡ್ ಅವಧಿಯಲ್ಲಿ ಮಕ್ಕಳ ಮೇಲಿನ ದುಷ್ಪರಿಣಾಮಗಳಿಗೆ ಸೂಕ್ತ ನೆರವು : ನ್ಯಾ.ಶರ್ಮಿಳಾ

Posted On: 19-11-2021 10:04PM
ಉಡುಪಿ : ಕೋವಿಡ್-19 ಅವಧಿಯಲ್ಲಿ ಮಕ್ಕಳ ಮೇಲಾಗಿರುವ ವಿವಿಧ ದುಷ್ಪರಿಣಾಮಗಳ ಕುರಿತು, ಮಕ್ಕಳ ಮೂಲಕವೇ ತಿಳಿದು, ಅವುಗಳಿಗೆ ಸೂಕ್ತ ನೆರವು ಹಾಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಯುನಿಸೆಫ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ, ಕೋವಿಡ್-19 ಅವಧಿಯಲ್ಲಿ ಮಕ್ಕಳ ಮೇಲಾಗಿರುವ ದುಷ್ಪರಿಣಾಮಗಳ ಕುರಿತ ಮಕ್ಕಳ ಸಾರ್ವಜನಿಕ ಅಹವಾಲು ವಿಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಮಾರು 1.5 ವರ್ಷಕ್ಕೂ ಅಧಿಕ ಅವಧಿಯ ಕೋವಿಡ್-19 ಪಿಡುಗು, ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತ್ತು. ಈ ಅವಧಿಯಲ್ಲಿ ಮಕ್ಕಳು ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಹೊರಗುಳಿದಿದ್ದರು. ಮೊಬೈಲ್ ಮೂಲಕವೇ ಆನ್ಲೈನ್ ತರಗತಿಗಳಿಗೆ ಹಾಜರಾಗಿದ್ದರು. ಮಕ್ಕಳು ಹೆಚ್ಚು ಕಾಲ ಮೊಬೈಲ್ ಬಳಸುವುದರ ಕುರಿತಂತೆ ಪೋಷಕರು ಪರಿಶೀಲಿಸಬೇಕು. ಕೋವಿಡ್-19 ನ ಸಮಯದಲ್ಲಿ ಮಕ್ಕಳು, ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕವಾಗಿ ಎದುರಿಸಿರುವ ಸಮಸ್ಯೆಗಳ ಕುರಿತಂತೆ ಮಕ್ಕಳ ಮೂಲಕವೇ ಅಹವಾಲು ಸ್ವೀಕರಿಸಿ, ಸಂಬಂದಪಟ್ಟ ಅಧಿಕಾರಿಗಳ ಮೂಲಕ, ಸಮಸ್ಯೆಗಳಿಗೆ ಸೂಕ್ತ ನೆರವು ಒದಗಿಸಲಾಗುವುದು ಎಂದು ನ್ಯಾ.ಶರ್ಮಿಳಾ ಹೇಳಿದರು.
ಡಿವೈಎಸ್ಪಿ ಸುಧಾಕರ್ ಮಾತನಾಡಿ, ಪೊಲೀಸ್ ಇಲಾಖೆ ಈಗ ಜನಸ್ನೇಹಿ ಮತ್ತು ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳು ತಮ್ಮ ಸಮಸ್ಯೆಗಳನ್ನು ಯಾವುದೇ ಭಯ, ಅಂಜಿಕೆಯಿಲ್ಲದೇ ತಿಳಿಸಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಸಮಯದಲ್ಲಿ ಅಗತ್ಯ ಸಹಾಯ ಕೋರಿದಲ್ಲಿ, ಎಲ್ಲಾ ರೀತಿಯ ಸಹಾಯ ನೀಡುವ ಭರವಸೆ ನೀಡಿದರು. ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ.ಶಂಕರಪ್ಪ ಮಾತನಾಡಿ, ಕೋವಿಡ್-19 ಅವಧಿಯಲ್ಲಿ ಮಕ್ಕಳು ಮನೆಯಲ್ಲಿಯೇ ಇರಬೇಕಾಗಿದ್ದರಿಂದ ಮಕ್ಕಳ ಮೇಲೆ ವಿವಿಧ ಬಗೆಯ ದೌರ್ಜನ್ಯಗಳು, ಬಾಲ ಕಾರ್ಮಿಕರಾಗಿ ಬಳಸಿಕೊಂಡಿರುವುದು, ಮಕ್ಕಳ ಹಕ್ಕುಗಳ ಉಲ್ಲಂಘನೆಗಳು ನಡೆದಿರುವ ಸಾಧ್ಯತೆಗಳಿವೆ. ಮಕ್ಕಳು ಈ ಅಹವಾಲು ಸ್ವೀಕಾರ ಸಮಯದಲ್ಲಿ, ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದಲ್ಲಿ, ಜಿಲ್ಲಾ ಹಂತದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾ ಹಂತದಲ್ಲಿ ಬಗೆಹರಿಸಲಾಗುವುದು. ಇಲ್ಲಿ ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ರಾಜ್ಯ ಹಂತದಲ್ಲಿ ಮತ್ತು ನ್ಯಾಯಾಲಯದ ಮೂಲಕ ಇತ್ಯರ್ಥಪಡಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾರ್ಯೋನ್ಮುಖವಾಗಲಿದೆ ಎಂದರು. ಮಕ್ಕಳ ಹಕ್ಕುಗಳ ಕುರಿತ ಅರಿವು ಮೂಡಿಸುವ ಕರಪತ್ರ, ಪೋಸ್ಟರ್, ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು.
ಶಾಲೆಯಲ್ಲಿ ಆಟದ ಮೈದಾನ ಇಲ್ಲದಿರುವ ಬಗ್ಗೆ, ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕೋವಿಡ್-19 ಸಮಯದಲ್ಲಿ ಆನ್ಲೈನ್ ಪಾಠಗಳನ್ನು ಕೇಳಿ ತಲೆನೋವು, ಕಣ್ಣು ನೋವು ಬಂದಿರುವ ಬಗ್ಗೆ, ಮೊಬೈಲ್ ಸುಲಭವಾಗಿ ಸಿಕ್ಕ ಕಾರಣ ಇತರೆ ವಿದ್ಯಾರ್ಥಿಗಳು ಅದರ ದುರ್ಬಳಕೆ ಮಾಡುತ್ತಿರುವ ಹಾಗೂ ಅಪಾಯಕಾರಿ ಗೇಮ್ಗಳನ್ನು ಆಡುವ ಬಗ್ಗೆ ಮತ್ತು ಪ್ರಸ್ತುತ ಶಾಲೆ ಆರಂಭಗೊಂಡ ನಂತರ ಹಳ್ಳಿ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ದೊರೆಯದೇ ಇರುವುದು ಮುಂತಾದ ಸಮಸ್ಯೆಗಳ ಬಗ್ಗೆ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳು ಅಹವಾಲುಗಳನ್ನು ಸಲ್ಲಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ಶೇಷಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೋನಾಲ್ಡ್ ಬಿ ಫುಟಾರ್ಡೋ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್ ಸ್ವಾಗತಿಸಿದರು. ಕೃಷ್ಣ ನಿರೂಪಿಸಿ, ವಂದಿಸಿದರು.
ಜಿಲ್ಲಾಧಿಕಾರಿಗಳಿಂದ ಐಕ್ಯತಾ ಪ್ರಮಾಣ ವಚನ ಬೋಧನೆ

Posted On: 19-11-2021 09:57PM
ಉಡುಪಿ : ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿದರು.
ದೇಶದ ಸ್ವಾತಂತ್ರ್ಯ ಮತ್ತು ಐಕ್ಯತೆಯನ್ನು ಬಲಪಡಿಸಲು, ದೇಶದಲ್ಲಿ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟಲು ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಸಪ್ತಾಹದ ಅಂಗವಾಗಿ ನವೆಂಬರ್ 19 ರಿಂದ 25 ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ತಮ್ಮ ಇಲಾಖೆಗಳಲ್ಲಿ ಐಕ್ಯತಾ ಪ್ರಮಾಣ ವಚನ ಸ್ವೀಕರಿಸುವಂತೆ ಮತ್ತು ದೇಶಕ್ಕಾಗಿ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಹಾಗೂ ಸಾರ್ವಜನಿಕರು ಯಾವುದೇ ರೀತಿಯ ಭಿನ್ನಾಭಿಪ್ರಾಯ ಮತ್ತು ವಿವಾದಗಳನ್ನು ಶಾಂತ ರೀತಿಯಲ್ಲಿ ಸಂವಿಧಾನಾತ್ಮಕ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾಧಿಕಾರಿ ಕಚೇರಿಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಣಿಪಾಲ : ಆರ್ ಸೆಟಿ ತರಬೇತಿ ಸಮಾರೋಪ

Posted On: 19-11-2021 04:33PM
ಮಣಿಪಾಲ : ಸ್ವ ಉದ್ಯೋಗದ ಸ್ಥಾಪನೆ ಮತ್ತು ಬೆಳವಣಿಗೆಗೆ ಆಧುನಿಕ ಸಮಾಜದಲ್ಲಿ ವಿಫುಲ ಅವಕಾಶಗಳಿದ್ದು ಯುವಕರು ಇದನ್ನು ಯೋಗ್ಯ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಣಿಪಾಲ ಕೆನರಾ ಬ್ಯಾಂಕ್ ನ ಅಧಿಕಾರಿ ಹೆಚ್ ಆರ್ ವಿಭಾಗದ ಮುಖ್ಯಸ್ಥ ಜಯಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಣಿಪಾಲದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆದ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸ್ವ ಉದ್ಯೋಗದಲ್ಲಿ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆ ಇದ್ದಾಗ ಮಾತ್ರ ಯಶಸ್ಸು ಸಾಧ್ಯ. ನಮ್ಮ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದ ಯುವಕರ ಬಾಳು ಉಜ್ವಲವಾಗಿ, ಸಾಮಾಜಿಕ ಬದ್ಧತೆಯ ಜೊತೆಗೆ ಮಾದರಿ ಬದುಕಾಗಿ ರೂಪುಗೊಳ್ಳಲಿ ಎಂದು ಅವರು ಹಾರೈಸಿದರು.

ಸಂಸ್ಥೆಯ ನಿರ್ದೇಶಕಿ ಸವಿತಾ ನಾಯಕ್,ಉಪನ್ಯಾಸಕ ವರ್ಗ,ಕಛೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಕ್ಟೋಬರ್ ಹದಿನೆಂಟರಿಂದ ನವೆಂಬರ್ ಹದಿನೇಳರವರೆಗೆ ನಡೆದ ಒಂದು ತಿಂಗಳ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಉಪನ್ಯಾಸಕಿ ಶ್ರೇಯಾ ಸ್ವಾಗತಿಸಿ, ನಿರೂಪಿಸಿದರು. ಸಂತೋಷ್ ಕುಮಾರ್ ವಂದಿಸಿದರು. ವರದಿ : ವಿನಯ್ ಆರ್ ಭಟ್, ಕುಕ್ಕುಜೆ
ಬಂಟಕಲ್ಲು : ಶ್ರೀಗುರುರಾಯರ ಸನ್ನಿಧಿಯಲ್ಲಿ ಭಜನೆ, ದೀಪಾರಾಧನೆ, ಮಹಾಪೂಜೆ

Posted On: 19-11-2021 02:53PM
ಶಿರ್ವ : ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ 92 ಹೇರೂರು ಬಂಟಕಲ್ಲು ಶ್ರೀ ಗುರುರಾಯರ ಸನ್ನಿಧಿಯಲ್ಲಿ ಭಜನೆ, ದೀಪಾರಾಧನೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

ಈ ಸಂದರ್ಭ ಶ್ರೀ ಗುರು ರಾಘವೇಂದ್ರ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಟಪಾಡಿ : ಜೀರ್ಣೋದ್ಧಾರಗೊಳ್ಳಲಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿ ಮುಂಬಯಿ ಉಪಸಮಿತಿಯ ರಚನೆ

Posted On: 18-11-2021 04:20PM
ಕಟಪಾಡಿ : ಸುಮಾರು 500 ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯನ್ನು ಪುನರುತ್ಥಾನಗೊಳಿಸಲು ನಿರ್ಧರಿಸಲಾಗಿದ್ದು. ಸುಮಾರು ಅಂದಾಜು 3.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯ ಮುಂಬಯಿ ಉಪಸಮಿತಿಯನ್ನು ಅ.10ರಂದು ಬಿಲ್ಲವ ಭವನದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಚಿಸಲಾಗಿದೆ.

ನೆರೂಲ್ ಶನೀಶ್ವರ ದೇವಸ್ಥಾನದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಅವರು ಗೌರವ ಅಧ್ಯಕ್ಷರಾಗಿದ್ದು, ಗೋಪಾಲ ಆರ್. ಕಾಂಚನ್ ಅಧ್ಯಕ್ಷರಾಗಿದ್ದಾರೆ. ಸದಾನಂದ ಕರ್ಕೇರ ಮತ್ತು ವೀರಮಣಿ ಅಮೀನ್ ಉಪಾಧ್ಯಕ್ಷರುಗಳಾಗಿದ್ದು, ಸತೀಶ್ ಎಸ್. ಅಮಿನ್ ಕಾರ್ಯದರ್ಶಿಯಾಗಿ ಮತ್ತು ರಮೇಶ್ ಕರ್ಕೇರ ಹಾಗೂ ಜ್ಯೋತಿ ಆರ್. ಸುವರ್ಣ ಜತೆ ಕಾರದರ್ಶಿಗಳಾಗಿದ್ದಾರೆ. ಕೋಶಾಧಿಕಾರಿಯಾಗಿ ಯಾದವ ಪಿ. ಕೋಟ್ಯಾನ್ ಮತ್ತು ಜತೆ ಕೋಶಾಧಿಕಾರಿಯಾಗಿ ಸುಧಾಕರ ಅಂಚನ್ ಅವರನ್ನು ಆಯ್ಕೆ ಮಾಡಲಾಗಿದೆ.
ಸದಸ್ಯರುಗಳಾಗಿ ಚಂದ್ರಶೇಖರ ಪೂಜಾರಿ, ಸುರೇಶ್ ಎಸ್. ಅಮೀನ್, ಯಶವಂತ ಪೂಜಾರಿ, ಶಿವಾನಂದ ಬಂಗೇರ, ಶಿವ ಸನಿಲ್, ಸುರೇಂದ್ರ ಶೆಟ್ಟಿ, ಆನಂದ ಸಾಲಿಯಾನ್ ಮತ್ತು ಭಾಸ್ಕರ್ ಪೂಜಾರಿ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಗೌರವ ಸಲಹೆಗಾರರಾಗಿ ರಂಗ ಕೆ. ಪಾಲನ್, ಬಾಲಕೃಷ್ಣ ಅಂಚನ್, ಟಿ.ಎಂ. ಕೋಟ್ಯಾನ್, ಯೋಗೇಂದ್ರ ಪೂಜಾರಿ ಮತ್ತು ಶ್ರೀಮಂತಿ ಎಸ್. ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಏಣಗುಡ್ಡೆಯ ಕಾರಣಿಕ ಕ್ಷೇತ್ರವಾದ ಶ್ರೀ ಬ್ರಹ್ಮ ಬೈದೇರುಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಮುಂಬಯಿಯ ಭಕ್ತಾದಿಗಳು ತನು-ಮನ-ಧನಗಳಿಂದ ಸಹಕರಿಸುವಂತೆ ಉಪ ಸಮಿತಿಯ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಅಧ್ಯಕ್ಷ ಗೋಪಾಲ ಕಾಂಚನ್ (98203 16284), ಕಾರ್ಯದರ್ಶಿ ಸತೀಶ್ ಅಮೀನ್ (9892119275) ಮತ್ತು ಕೋಶಾಧಿಕಾರಿ ಯಾದವ ಕೋಟ್ಯಾನ್ (9821326931) ಇವರನ್ನು ಸಂಪರ್ಕಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯಾದ್ಯಂತ ಸಂಚರಿಸಲಿರುವ ಶ್ರೀರಾಮ ಭಕ್ತ ಹನುಮಂತನ ಭಕ್ತಿ ವೈಭವ ವಿಜಯ ರಥಯಾತ್ರೆ ಕೋಟೇಶ್ವರದಲ್ಲಿ

Posted On: 18-11-2021 03:21PM
ಕುಂದಾಪುರ : ಜಗದ್ಗುರು ಆಚಾರ್ಯರ ಮಾರ್ಗದರ್ಶನದಲ್ಲಿ ಪಂಪಾ ಕ್ಷೇತ್ರದ ಗೋವಿಂದಾನಂದ ಸರಸ್ವತೀ ಸ್ವಾಮಿ ನೇತೃತ್ವದಲ್ಲಿ ಭಾರತಾದ್ಯಂತ 12 ವರ್ಷಗಳ ಕಾಲ ಸಂಚರಿಸುವ ಐತಿಹಾಸಿಕ ಶ್ರೀಹನುಮದ್ ಜನ್ಮಭೂಮಿ ಅಂಜನಾದ್ರಿ ಕಿಷ್ಕಿಂದ ಪಂಪಾ ಕ್ಷೇತ್ರದಿಂದ ಹೊರಟ ಶ್ರೀರಾಮ ಭಕ್ತ ಹನುಮಂತನ ಭಕ್ತಿ ವೈಭವ ವಿಜಯ ರಥಯಾತ್ರೆಯು ಕೋಟೇಶ್ವರ ತಲುಪಿದೆ.
ಕರ್ನಾಟಕ ರಾಜ್ಯಾದ್ಯಂತ 1 ವರ್ಷಗಳ ಕಾಲ 1008 ಗ್ರಾಮಗಳು, 108 ಪಟ್ಟಣಗಳಿಂದ ಒಟ್ಟು 6 ಸಾವಿರ ಕಿ.ಮಿ. ದೂರ ಈ ರಥ ಸಂಚರಿಸಲಿದೆ.
ಕಿಷ್ಕಿಂದ ಕ್ಷೇತ್ರದಲ್ಲಿ 215 ಮೀ. ಎತ್ತರದ ಹನುಮಂತ ದೇವರ ದಿವ್ಯ ವಿಗ್ರಹ ಮತ್ತು ಹನುಮದ್ ಜನ್ಮಭೂಮಿ ದೇವಸ್ಥಾನದ ಮಂದಿರ 12 ವರ್ಷಗಳ ಸಮಯದಲ್ಲಿ 1200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.
52ನೇ ವರ್ಷದ ಕೊಡಿ ಹಬ್ಬದ ಸಂಭ್ರಮದಲ್ಲಿರುವ ರಾಮನಾಥಗೋಳಿ ಕಟ್ಟೆಫ್ರೆಂಡ್ಸ್ ಕೋಟೇಶ್ವರ ಇವರ ವೇದಿಕೆಯ ಮುಂಭಾಗದಲ್ಲಿ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಸಹಕಾರದೊಂದಿಗೆ ರಥ 3 ದಿನಗಳ ಕಾಲ ಇಲ್ಲಿಯೇ ಉಳಿಯಲಿದೆ. ಈ ರಥವು ಕೋಟೇಶ್ವರ ಜಾತ್ರೆಯ ಮೆರುಗನ್ನು ಹೆಚ್ಚಿಸಲಿದೆ.
ಸಂಘಟನೆ ವಿರುದ್ಧ ಆರೋಪ ; ನಾಳೆಯೊಳಗೆ ಕ್ಷಮೆಯಾಚಿಸದಿದ್ದರೆ ಬಹಿರಂಗ ಪ್ರತಿಭಟನೆ : ಬಿರುವೆರ್ ಕುಡ್ಲ ಸಂಘಟನೆ ಎಚ್ಚರಿಕೆ

Posted On: 17-11-2021 08:05PM
ಉಡುಪಿ: ನಾಳೆಯೊಳಗಾಗಿ ಸಂಘಟನೆ ವಿರುದ್ಧದ ಆರೋಪಕ್ಕೆ ಶರಣ್ ಪಂಪ್‌ವೆಲ್ ಕ್ಷಮೆಯಾಚಿಸದಿದ್ದರೆ ಬಳ್ಳಾಲ್‌ಬಾಗ್‌ನಲ್ಲಿ ಬಹಿರಂಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿರುವೆರ್ ಕುಡ್ಲ ಸಂಘಟನೆ ಎಚ್ಚರಿಕೆ ನೀಡಿದೆ. ಬಿರುವೆರ್ ಕುಡ್ಲ ಉಡುಪಿ ಘಟಕದಿಂದ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಬಿರುವೆರ್ ಕುಡ್ಲ ಸಂಘಟನೆಯ ಹೆಸರನ್ನು ಕೆಡಿಸಲು ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ಸಂಘಟನೆ ಮಾಡುವ ಉತ್ತಮ ಸಮಾಜ ಸೇವೆಯನ್ನು ಕಂಡು ಸಹಿಸಲಾಗದ ಕೆಲವೊಂದು ವ್ಯಕ್ತಿಗಳು ನಮ್ಮ ಸಂಘಟನೆಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಶರಣ್ ಪಂಪ್‌ವೆಲ್ ಅವರು ಪೂರ್ಣ ಮಾಹಿತಿಯನ್ನು ತಿಳಿಯದೇ ಸಂಘಟನೆಯ ಮೇಲೆ ಆರೋಪ ಮಾಡಿ ನೋವುಂಟು ಮಾಡಿದ್ದಾರೆ. ಇದಕ್ಕಾಗಿ ಅವರು ಸಂಘಟನೆಯ ಕ್ಷಮೆಯಾಚಿಸಬೇಕು. ನಾಳೆಯ ಒಳಗೆ ಕ್ಷಮೆ ಕೇಳದೇ ಇದ್ದಲ್ಲಿ ಬಳ್ಳಾಲ್‌ಬಾಗ್‌ನಲ್ಲಿ ಬಹಿರಂಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಕೌಟುಂಬಿಕ ಸಂಬಂಧಗಳ ಆಧಾರದಲ್ಲಿ ಮೆಚ್ಚಿಸಲು ಏಕಾಏಕಿ ಬಿರುವೆರ್ ಕುಡ್ಲದ ಮೇಲೆ ಆರೋಪ ಮಾಡುವುದು ಸಲ್ಲದು. ಗುರ್ಜಿ ದೀಪೋತ್ಸವ ಮಾಡುವ ಜವಾಬ್ದಾರಿಯನ್ನು ಹೊತ್ತ ಸಮಿತಿಯ ಪವಿತ್ರ ಜಾಗದಲ್ಲಿ ಕುಡಿದು ಕುಪ್ಪಳಿಸಿ ದಾರಿಯಲ್ಲಿ ಹೋಗುವವರಿಗೆ ಗುರಾಯಿಸಿ ನೋಡುವ, ತಮಾಷೆ ಮಾಡುವ ಮೂಲಕ ಪ್ರಚೋದನೆ ನೀಡಿ ಹೊರಗಿನಿಂದ ಬಂದ ಜನ ಪಾರ್ಟಿಯ ಹೆಸರಿನಲ್ಲಿ ಗಲಾಟೆಗೆ ಕಾರಣರಾಗುತ್ತಿದ್ದಾರೆ. ಶರಣ್ ಪಂಪ್‌ವೆಲ್ ಅವರು ಮೊದಲು ಇದನ್ನು ತಡೆಯುವ ಕೆಲಸವನ್ನು ಮಾಡಬೇಕಿದೆ. ಬಳ್ಳಾಲ್ ಬಾಗ್‌ನಲ್ಲಿ ಬಂದು ಯಾರು ಗಲಾಟೆ ಮಾಡುತ್ತಿದ್ದಾರೆ ಎನ್ನುವುದನ್ನು ಶರಣ್ ಪಂಪ್‌ವೆಲ್ ಅವರು ಮೊದಲು ತಿಳಿದುಕೊಳ್ಳಬೇಕು ಎಂದು ಬಿರುವೆರ್ ಕುಡ್ಲ ಸಂಘಟನೆ ಹೇಳಿದೆ ಪೊಲೀಸ್ ಇಲಾಖೆ ಕೂಡಾ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದ ತನಿಖೆ ಮಾಡುತ್ತಿದ್ದು, ಎಲ್ಲಿಯೂ ಬಿರುವೆರ್ ಕುಡ್ಲದ ಹೆಸರು ಪ್ರಸ್ತಾಪಿಸಿಲ್ಲ. ಒಂದೆರಡು ವ್ಯಕ್ತಿಗಳು ಬಂದು ನಮ್ಮ ಸಂಘಟನೆಯ ಮೇಲೆ ವಿನಾಕಾರಣ ಆರೋಪ ಮಾಡಿದರೆ ಜನತೆ ನಂಬುವುದಿಲ್ಲ. ಬಿರುವೆರ್ ಕುಡ್ಲದ ವತಿಯಿಂದ ಸಮಾಜ ಸೇವೆ ಮುಂದುವರಿಯಲಿದೆ. ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದಲ್ಲಿ ಬಿರುವೆರ್ ಕುಡ್ಲ ಸಂಘಟನೆಯ ಪಾತ್ರವಿಲ್ಲ. ಹಲ್ಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಶರಣ್ ಪಂಪ್‌ವೆಲ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಬಿರುವೆರ್ ಕುಡ್ಲ ಉಡುಪಿ ಘಟಕದ ಸಂಘಟನೆಯ ಉಡುಪಿ ಘಟಕ ಅಧ್ಯಕ್ಷ ಕಿಶೋರ್ ಪೂಜಾರಿ, ಉಪಾಧ್ಯಕ್ಷರಾದ ದಿನೇಶ್ ಅಮಿನ್, ಖಜಾಂಚಿ ರಾಜೇಶ್ ಕೊಪ್ಪ, ಕಾರ್ಯದರ್ಶಿ ಯೋಗಿಶ್ ಅಮಿನ್, ಮಾಧ್ಯಮ ಸಲಹೆಗಾರ ತೇಜಸ್ ಬಂಗೇರಾ ಉಪಸ್ಥಿತರಿದ್ದರು.