Updated News From Kaup
ಜುಲೈ 16 (ನಾಳೆ) : ಮಳೆ ಹಿನ್ನೆಲೆಯಲ್ಲಿ ಉಡುಪಿ, ದ.ಕ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ
Posted On: 15-07-2024 07:40PM
ಕಾಪು : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ವಿದ್ಯಾರ್ಥಿಗಳ ಹಿತರಕ್ಷಣೆಯಿಂದ ಉಭಯ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಮಂಗಳವಾರ (ಜುಲೈ 16)ದಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಜುಲೈ 17 : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ - 'ಉಚ್ಚಿಲ ದಸರಾ-2024'ರ ಪೂರ್ವಭಾವಿ ಸಭೆ
Posted On: 15-07-2024 09:32AM
ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲದ ಈ ಬಾರಿಯ ದಸರಾ ಉತ್ಸವದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಜುಲೈ 17ರಂದು ಅಪರಾಹ್ನ ಗಂಟೆ 3 ಕ್ಕೆ ಉಚ್ಚಿಲದ ಮೊಗವೀರ ಭವನದಲ್ಲಿ ಸಭೆ ನಡೆಸಲು ನಿರ್ಣಯಿಸಲಾಗಿದೆ.
ಕಳೆದ ಬಾರಿಯ ಉಚ್ಚಿಲ ದಸರಾ ಭಕ್ತಾಭಿಮಾನಿಗಳ ಸಹಕಾರ-ಸಹಯೋಗದೊಂದಿಗೆ ವಿಶ್ವದಾದ್ಯಂತ ಪ್ರಖ್ಯಾತಿಗೊಂಡಿದ್ದು ಈ ಬಾರಿಯ ಉತ್ಸವವು ಅಕ್ಟೋಬರ್ 3ರಿಂದ 12ರವರೆಗೆ ನಡೆಯಲಿದೆ. ಈ ಪ್ರಯುಕ್ತ ಎಲ್ಲಾ ಸಂಯುಕ್ತ ಸಭೆಗಳು, ಗ್ರಾಮಸಭೆಗಳು, ಸಮಾಜದ ವಿವಿಧ ಸಂಘಟನೆಗಳು, ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ಮೀನುಗಾರಿಕಾ ಸಂಘಗಳು, ಸಮಾಜದ ಪ್ರಮುಖರು, ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಸರ್ವ ಭಕ್ತಾಭಿಮಾನಿಗಳು ಸದ್ರಿ ಸಭೆಯಲ್ಲಿ ಭಾಗವಹಿಸಿ ಈ ಬಾರಿಯ ಉತ್ಸವವನ್ನು ಶಿಸ್ತುಬದ್ಧವಾಗಿ ಹಾಗೂ ಆಕರ್ಷಕವಾಗಿ ಆಚರಿಸಲು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ದೇವಳದ ಆಡಳಿತ ಮಂಡಳಿ, ದಸರಾ ಉತ್ಸವ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.
ಜುಲೈ 15 : ಭಾರಿ ಮಳೆ ಹಿನ್ನೆಲೆ - ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ
Posted On: 15-07-2024 06:44AM
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 15ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ ಸರಕಾರಿ ಅನುದಾನಿತ ಮತ್ತು ಖಾಸಗಿ ,ಪ್ರಾಥಮಿಕ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಪಡುಬಿದ್ರಿ : ಸಾಗರ್ ವಿದ್ಯಾ ಮಂದಿರ ಶಾಲೆಯ ಬೆಳ್ಳಿಹಬ್ಬ ಸ್ಮಾರಕ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ
Posted On: 15-07-2024 06:19AM
ಪಡುಬಿದ್ರಿ : ವಿದ್ಯಾ ದಾನದ ಮಹತ್ವಾಕಾಂಕ್ಷೆಯ ಮೂಲಕ ಮೊಗವೀರ ಸಮಾಜದ ಹಿರಿಯರು ಹುಟ್ಟು ಹಾಕಿದ ಶಾಲೆಯು ಇಂದು ಸಾಗರ್ ವಿದ್ಯಾಮಂದಿರ ಶಾಲೆಯಾಗಿ ಸಮಾಜದ ಮೊತ್ತಮೊದಲ ಆಂಗ್ಲ ಮಾಧ್ಯಮ ಶಾಲೆಯಾಗಿ ರೂಪು ಪಡೆದು ಬೆಳೆಯುತ್ತಿದೆ. ಈ ಶಾಲೆಯನ್ನು ಮತ್ತಷ್ಟು ಉನ್ನತಿಗೆ ಒಯ್ಯುವುದು ನಮ್ಮೆಲ್ಲರ ಬಯಕೆಯಾಗಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರೂ ಆಗಿರುವ ನಾಡೋಜಾ ಡಾ| ಜಿ. ಶಂಕರ್ ಹೇಳಿದರು. ಅವರು ಭಾನುವಾರ ಪಡುಬಿದ್ರಿಯ ಸಾಗರ್ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲಾ ಬೆಳಿಹಬ್ಬ ಸ್ಮಾರಕ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ಮಾತನಾಡಿದರು. ಮೂರನೇ ಬಾರಿಗೆ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯ ಸಿ. ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಉಚ್ಚಿಲದ ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಗುತ್ತಿಗೆದಾರ ಪವನ್ ಆನಂದ್ ಎರ್ಮಾಳು, ಅರುಣಾ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ಅನಂತೇಶ್ ವಿ. ಪ್ರಭು, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್ ಚಂದ್ರ ಜೆ. ಶೆಟ್ಟಿ, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಶಾಂತಾ ಎಲೆಕ್ಟ್ರಿಕಲ್ಸ್ ಆಡಳಿತ ನಿರ್ದೇಶಕ ಶ್ರೀಪತಿ ಭಟ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಅರುಣ್ ಶೆಟ್ಟಿ, ಬೆಳ್ಳಿಹಬ್ಬ ಕಟ್ಟಡ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಗ್ರಾಮಸಭೆಯ ಅಧ್ಯಕ್ಷರಾದ ಅಶೋಕ ಸಾಲ್ಯಾನ್, ಗಂಗಾಧರ ಕರ್ಕೇರ, ಪವಿತ್ರಾ ಗಿರೀಶ್, ಮಲ್ಲಿಕಾ ದಿನಕರ್, ನಾರಾಯಣ ಕರ್ಕೇರ, ಹರಿಪ್ರಸಾದ್ ಎಚ್. ಮತ್ತಿತರರು ವೇದಿಕೆಯಲ್ಲಿದ್ದರು.
ಕಾಡಿಪಟ್ಣ ನಡಿಪಟ್ಣ ವಿದ್ಯಾಪ್ರಚಾರಕ ಸಂಘದ ಅಧ್ಯಕ್ಷ, ಶಾಲಾ ಸಂಚಾಲಕ ಸುಕುಮಾರ್ ಶ್ರೀಯಾನ್ ಸ್ವಾಗತಿಸಿದರು. ವಿನುತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮ್ಶಶ್ರೀ ರಾವ್ ವಂದಿಸಿದರು. ವೇ.ಮೂ.ರಾಮಕೃಷ್ಣ ಆಚಾರ್ಯ, ನಂದಕುಮಾರ್ ಆಚಾರ್ಯ ಅವರು ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಅದಮಾರು ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷರಾಗಿ ಉಮೇಶ್ ಕುಲಾಲ್ ಪಾದೆಬೆಟ್ಟು ಆಯ್ಕೆ
Posted On: 14-07-2024 08:13PM
ಕಾಪು : ತಾಲೂಕಿನ ಅದಮಾರು ರಿಕ್ಷಾ ಚಾಲಕರ ಹಾಗೂ ಮಾಲಕರ ಅಧ್ಯಕ್ಷರಾಗಿ ಉಮೇಶ್ ಕುಲಾಲ್ ಪಾದೆಬೆಟ್ಟು ಆಯ್ಕೆಯಾಗಿರುತ್ತಾರೆ.
ಕುಲಾಲ ಸಂಘ (ರಿ.) ಕಾಪು ವಲಯ ಹಾಗೂ ಕುಲಾಲ ಯುವ ವೇದಿಕೆ ಕಾಪು ಇವರಿಗೆ ಅಭಿನಂದನೆ ಸಲ್ಲಿಸಿದೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಭೇಟಿ
Posted On: 14-07-2024 07:54PM
ಮುಲ್ಕಿ : ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭ ದೇವಳ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ಬಳಿಕ ರಾಹುಲ್ ಅವರು ಮುಲ್ಕಿ ಸೀಮೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನಕ್ಕೆ ಹಾಗೂ ಕಕ್ವಗುತ್ತು ಮೂಲ ನಾಗನ ಕ್ಷೇತ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಬಪ್ಪನಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕೆ ಎಲ್ ರಾಹುಲ್ ಪತ್ನಿ ಬಾಲಿವುಡ್ ನಟಿ ಅತಿಯಾ ಶೆಟ್ಟಿ, ನಟ ಅಹನ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ, ಅಶ್ವಿನ್ ಆಳ್ವ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.
ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿ - ಶ್ರೀ ಕ್ಷೇತ್ರ ಪೆಲತ್ತೂರು ಭೇಟಿ
Posted On: 14-07-2024 05:44PM
ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠ ದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ 108 ದಿನಗಳಲ್ಲಿ 108 ಕ್ಷೇತ್ರ ಪ್ರದಕ್ಷಿಣೆ 31 ದಿನದ ಸಂದಶ೯ನ ಶ್ರೀ ಕ್ಷೇತ್ರ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜೂನ್ 14 ಆದಿತ್ಯವಾರ ದಂದು ನಡೆಯಿತು.
ಈ ಸಂದಭ೯ದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಆಶೀವ೯ಚನ ನೀಡಿ, ಹಿಂದೂ ಧಮ೯ದ ರಕ್ಷಣೆಗೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ. ಮತಾಂತರ ಮುಂತಾದ ವ್ಯಾಧಿ ನಮ್ಮ ಸಮಾಜದಿಂದ ದೂರವಾಗಬೇಕು. ಗಡಿಯಲ್ಲಿ ದೇಶ ರಕ್ಷಣೆ ಮಾಡುವ ಯೋಧರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಈ ಕಾಯ೯ ನಡೆಯುತ್ತಿರುವುದಾಗಿ ಹೇಳಿದರು.
ಕ್ಷೇತ್ರದ ವತಿಯಿಂದ ಆಡಳಿತ ಮೊಕ್ತೇಸರ ರಮೇಶ್ ನಾಯಕ್ ರವರು ಗುರೂಜಿಯವರನ್ನು ಗೌರವಿಸಿದರು. ಕಾಯ೯ಕ್ರಮದಲ್ಲಿ ಗುರೂಜಿಯವರು ಬಿಲ್ವಪತ್ರ ಗಿಡ ಮತ್ತು ಮನವಿ ಪತ್ರವನ್ನು ಆಡಳಿತ ಮಂಡಳಿಯ ಸದಸ್ಯರಿಗೆ ನೀಡಿದರು.
ನೀರೆ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಪ್ರಭು, ಪುರೋಹಿತ ರಮೇಶ್ ಭಟ್, ಪೆಲತ್ತೂರು ಫ್ರೆಂಡ್ಸ್ ಕ್ಲಬ್ ಸದಸ್ಯರು, ಜಿ.ಪಂ ಮಾಜಿ ಸದಸ್ಯೆ ಗೀತಾಂಜಲಿ ಸುವಣ೯, ಸತೀಶ್ ದೇವಾಡಿಗ, ರಾಘವೇಂದ್ರ ಪ್ರಭು ಕವಾ೯ಲು, ನಿಲೇಶ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ : ನಿಟ್ಟೂರಿನ ದುಗ್ಗಣ್ಣಬೆಟ್ಟು ಮಾರ್ಗದಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ
Posted On: 14-07-2024 05:37PM
ಉಡುಪಿ : ಒಳಚರಂಡಿ ವ್ಯವಸ್ಥೆ ಇದ್ದರೂ ಅದನ್ನು ಸಮಪರ್ಕವಾಗಿ ನಿರ್ವಹಿಸದ ಕಾರಣ ವಾಸನೆಯಿಂದ ಕುಳಿತುಕೊಳ್ಳಲಾಗದ ಸ್ಥಿತಿ ಉಡುಪಿಯ ನಿಟ್ಟೂರಿನ ದುಗ್ಗಣ್ಣ ಬೆಟ್ಟು ಮಾರ್ಗದ ಸ್ಥಳೀಯರಿಗೆ ಉಂಟಾಗಿದೆ.
ಒಳಚರಂಡಿಯ ನೀರು ನಿರಂತರವಾಗಿ ಹರಿಯುತ್ತಿದ್ದು ಇದು ವಾಸನೆಯ ಜೊತೆಗೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹತ್ತಿರದ ಬಾವಿಯ ನೀರು ಹಾಳಾಗುವ ಸಾಧ್ಯತೆಗಳಿವೆ. ಇಲ್ಲಿಯ ರಸ್ತೆ ಕೂಡಾ ಸರಿಯಾಗಿಲ್ಲ.
ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ನೀಡಿದರೂ ಈ ವರೆಗೆ ಯಾವುದೇ ಅಧಿಕಾರಿ ವರ್ಗ ನೋಡಲು ಬಂದಿಲ್ಲ. ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಗೂ ಮನವಿ ನೀಡಲಾಗಿದೆ ಎನ್ನುತ್ತಾರೆ ಸ್ಥಳೀಯರು.
ಎರ್ಮಾಳು ಅಟೋ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಸುರೇಶ್ ಎರ್ಮಾಳ್ ಆಯ್ಕೆ
Posted On: 13-07-2024 06:27PM
ಪಡುಬಿದ್ರಿ : ತೆಂಕ ಎರ್ಮಾಳು ಅಟೋ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಪತ್ರಕರ್ತ ಸುರೇಶ್ ಎರ್ಮಾಳ್ ಅವಿರೋಧವಾಗಿ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಭರತ್ ಶೆಟ್ಟಿಗಾರ್ ಮರು ಆಯ್ಕೆಯಾಗಿದ್ದಾರೆ.
ತೆಂಕ ಎರ್ಮಾಳು ಅಳ್ವೆಕೋಡಿ ಬಬ್ಬುಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸುಮಾರು ಮೂವತ್ತೈದು ಮಂದಿ ಸದಸ್ಯರನ್ನು ಹೊಂದಿರುವ ಈ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಿ ಜನಾನುರಾಗಿಯಾಗಿದೆ.
ಉಪಾಧ್ಯಕ್ಷರಾಗಿ ರಾಜು ಪೂಜಾರಿ, ಕೋಶಾಧಿಕಾರಿಯಾಗಿ ಲಿಯಾಕತ್ ಆಲಿ ಹಾಗೂ ಜತೆ ಕಾರ್ಯದರ್ಶಿಯಾಗಿ ನದೀಮ್ ಎರ್ಮಾಳ್ ಮರು ಆಯ್ಕೆಯಾಗಿದ್ದಾರೆ.
ಪಡುಬಿದ್ರಿ : ಮಗಳ ಖಾಸಗಿ ವಿಡಿಯೋ ಹರಿಬಿಟ್ಟ ತಂದೆ ಪತ್ನಿಯಿಂದ ದೂರು ದಾಖಲು
Posted On: 13-07-2024 06:20PM
ಪಡುಬಿದ್ರಿ : ಸ್ವಂತ ಮಗಳ ಖಾಸಗಿ ವೀಡಿಯೋಗಳನ್ನು ತಂದೆಯೋರ್ವ ವಾಟ್ಸಾಪ್ ಗ್ರೂಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಆತನ ಪತ್ನಿ ಪತಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಆರೋಪಿ ಸಮಾಜ ಸೇವಕ ಆಸೀಫ್ ಆಪತ್ಭಾಂದವನ ಮಗಳು ತೀರ್ಥಹಳ್ಳಿಯ ತೌಸಿಫ್ ಎಂಬ ಸಂಬಂಧಿ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಇದು ಇಷ್ಟವಾಗದ ಆರೋಪಿ ತೌಸಿಫ್ ನನ್ನು ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದ. ಅವರು ತೌಸಿಫ್ ಮತ್ತು ಅವರ ಮಗಳ ಫೋನ್ ಅನ್ನು ಕಸಿದುಕೊಂಡಿದ್ದು ಅದರ ಎಲ್ಲಾ ವೀಡಿಯೊಗಳನ್ನು ಆತನ ಮೊಬೈಲ್ಗೆ ವರ್ಗಾಯಿಸಿ ಸಾಮಾಜಿಕಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಇದಕ್ಕೆ ಪತ್ನಿ ಆಕ್ಷೇಪ ವ್ಯಕ್ತಪಡಿಸಿದಾಗ ಆರೋಪಿ ಆಕೆಯ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ಉಡುಪಿಯ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ಆಸೀಫ್ ಆಪತ್ಭಾಂದವ ಮಗಳು ಫಿನೈಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಕೆಯನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.