Updated News From Kaup
ವಿಜಯ್ ಕಾಂಚನ್ ರಿಗೆ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ
Posted On: 25 Jan 2022, 07:57 PM
ಮಂಗಳೂರು : 2021-22 ನೇ ಸಾಲಿನ ಭಾರತದ ಪ್ರತಿಷ್ಠಿತ ಗೌರವಾನ್ವಿತ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕಕ್ಕೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ವಿಜಯ್ ಕಾಂಚನ್ ಭಾಜನರಾಗಿದ್ದಾರೆ.
ಬೆಳ್ಮಣ್ಣು: ಎರಡು ಗ್ರಂಥಗಳ ಲೋಕಾರ್ಪಣೆ
Posted On: 25 Jan 2022, 02:01 PM
ಬೆಳ್ಮಣ್ಣು: ಲಯನ್ಸ್ ಕ್ಲಬ್ ಬೆಳ್ಮಣ್ಣು ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಲಯನ್ಸ್ ಭವನದಲ್ಲಿ, ಮುದ್ದಣ ಜಯಂತಿ ಮತ್ತು ಎರಡು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಲ|ಎನ್.ಸುಹಾಸ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಕ್ಷರಾದ ಡಾ. ಜಿ. ಎನ್. ಉಪಾಧ್ಯ ಅವರ 'ವಾಙ್ಮಯ ವಿವೇಕ' ಮತ್ತು ಡಾ. ಬಿ. ಜನಾರ್ದನ ಭಟ್ ಅವರ 'ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ' ಗ್ರಂಥಗಳು ಲೋಕಾರ್ಪಣೆಗೊಂಡವು. ವಿದ್ವಾಂಸ ಕೆ. ಎಲ್. ಕುಂಡಂತಾಯ ಮತ್ತು ಲಯನ್ಸ್ ಕ್ಲಬ್ ಕಾರ್ಯದರ್ಶಿ, ಸಾಹಿತಿ ಲ| ಬಿ. ಸೀತಾರಾಮ ಭಟ್ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಅವರು ಮುಖ್ಯ ಅತಿಥಿಯಾಗಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಎನ್. ಶ್ಯಾಮಸುಂದರ ಶೆಟ್ಟಿಯವರು ಸ್ವಾಗತಿಸಿದರು. ಲಯನ್ಸ್ ಖಜಾಂಚಿ ಲ| ವಿ. ಕೆ. ರಾವ್ ಅವರು ವಂದನಾರ್ಪಣೆ ಸಲ್ಲಿಸಿದರು. ನಂದಳಿಕೆಯ ಕವಿಮುದ್ದಣ ಮಿತ್ರಮಂಡಳಿಯ ಅಧ್ಯಕ್ಷರೂ ಆಗಿರುವ ಎನ್. ಸುಹಾಸ್ ಹೆಗ್ಡೆಯವರು ಮುದ್ದಣನ ನೆನಪಿನಲ್ಲಿ ಸಾಹಿತಿಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಗೌರವಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಕೆ. ಎಲ್. ಕುಂಡಂತಾಯ ಅವರು ಕೃತಿಗಳ ಮಹತ್ವವನ್ನು ತೆರೆದಿಟ್ಟರು. ಸುದರ್ಶನ ವೈ.ಎಸ್. ಅವರು ಶುಭಹಾರೈಸಿದರು. ಲೇಖಕ ಡಾ. ಬಿ. ಜನಾರ್ದನ ಭಟ್ ಅವರು ಈ ಕೃತಿಗಳ ರಚನೆಯ ಹಿನ್ನೆಲೆಯನ್ನು ವಿವರಿಸಿದರು.
ಅಸಹಾಯಕಳಾಗಿದ್ದ ಮೂಕ ಮಹಿಳೆಯನ್ನು ರಕ್ಷಿಸಿದ ವಿಶು ಶೆಟ್ಟಿ ಅಂಬಲಪಾಡಿ
Posted On: 25 Jan 2022, 10:45 AM
ಉಡುಪಿ : ಕಾಪು ಠಾಣಾ ವ್ಯಾಪ್ತಿಯ ಇನ್ನಂಜೆಯಲ್ಲಿ ತನ್ನವರು ಯಾರೂ ಇಲ್ಲದೆ ಅಸಹಾಯಕಳಾಗಿ ರೋಧಿಸುತ್ತಿದ್ದ ಮೂಕ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ನಿಟ್ಟೂರಿನ ಸಖಿ ಸೆಂಟರ್ ಗೆ ದಾಖಲಿಸಿದ ಘಟನೆ ಜನವರಿ 24ರಂದು ನಡೆದಿದೆ. ಮಹಿಳೆ ನಳಿನಿ ದೇವಾಡಿಗ (45) ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತಿ ತೊರೆದಿದ್ದು ತಂದೆ ತಾಯಿ ಸಹೋದರ ಮೃತರಾಗಿದ್ದಾರೆ. ರಾತ್ರಿಯ ಹೊತ್ತು ಅಸಹಾಯಕಳಾಗಿ ರೋಧಿಸುತ್ತಿದ್ದಾಗ ಸ್ಥಳೀಯ ಮಹಿಳೆಯೊಬ್ಬರು ಉಪಚರಿಸಿ ಆಹಾರ ನೀಡಿದ್ದರು. ಈ ಬಗ್ಗೆ ವಿಷಯ ತಿಳಿದ ವಿಶು ಶೆಟ್ಟಿ ತನ್ನ ವಾಹನದಲ್ಲಿ ತೆರಳಿ ಮಹಿಳೆಯನ್ನು ಇಲಾಖಾ ಸಿಬ್ಬಂದಿ ಪೂರ್ಣಿಮಾ ಸಹಕಾರದಿಂದ ರಕ್ಷಿಸಿ ಸಖಿ ಸೆಂಟರ್ ಗೆ ದಾಖಲಿಸಿದ್ದರು. ಬಾಯಿ ಬಾರದ ಅಸಹಾಯಕ ಮಹಿಳೆಗೆ ಭವಿಷ್ಯತ್ತಿನಲ್ಲಿ ಸಂಬಂಧಪಟ್ಟವರು ಅಥವಾ ಸಮಾಜ ಸಹಕರಿಸಿ ಮಹಿಳೆಯ ನೋವಿಗೆ ಸ್ಪಂದಿಸಬೇಕಾಗಿ ವಿಶು ಶೆಟ್ಟಿ ವಿನಂತಿಸಿದ್ದಾರೆ.
ಕೈ,ಕಾಲುಗಳಿಗೆ ಕಬ್ಬಿಣದ ಸರಪಳಿಯಿಂದ ಬೀಗ ಜಡಿದು ಅರಬ್ಬೀ ಸಮುದ್ರದಲ್ಲಿ ಈಜಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ಗಂಗಾಧರ್ ಜಿ. ಕಡೆಕಾರ್
Posted On: 24 Jan 2022, 06:23 PM
ಉಡುಪಿ : ಇಲ್ಲಿನ ಕಡೆಕಾರಿನ ನಿವಾಸಿ ಆದ ಗಂಗಾಧರ್ ಜಿ. ಕಡೆಕಾರ್ ಈ ಬಾರಿ ಕೈ ಮತ್ತು ಕಾಲುಗಳಿಗೆ ಕಬ್ಬಿಣದ ಸರಪಳಿಯಿಂದ ಬೀಗ ಜಡಿದು ಅರಬ್ಬೀ ಸಮುದ್ರದಲ್ಲಿ 3.5 ಕಿ.ಮಿ ಈಜಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಸಾಧನೆಯನ್ನು ತೋರಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂದರ್ಭ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. 66ರ ಹರೆಯದ ಗಂಗಾಧರ್ ಜಿ. ಕಡೆಕಾರ್ ರವರ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಉಡುಪಿಗೆ ಅಂಗಾರ, ದಕ್ಷಿಣ ಕನ್ನಡಕ್ಕೆ ಸುನೀಲ್ ಕುಮಾರ್, ಉತ್ತರ ಕನ್ನಡಕ್ಕೆ ಕೋಟಾ ಶ್ರೀನಿವಾಸ ಪೂಜಾರಿ
Posted On: 24 Jan 2022, 05:56 PM
ಉಡುಪಿ : ರಾಜ್ಯದ 28 ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಇದರಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ಸುನೀಲ್ ಕುಮಾರ್, ಉಡುಪಿ ಜಿಲ್ಲೆಗೆ ಎಸ್. ಅಂಗಾರ, ಕೋಟಾ ಶ್ರೀನಿವಾಸ ಪೂಜಾರಿ ಅವರು ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.
ಕಟಪಾಡಿ : ಶಿಲಾನ್ಯಾಸ ಕಾರ್ಯಕ್ರಮ
Posted On: 22 Jan 2022, 03:58 PM
ಕಟಪಾಡಿ : ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿ ಇಲ್ಲಿಯ ಮಾಯಂದಾಲ್ ಗುಡಿ, ಕಾಂತೇರಿ ಧೂಮಾವತಿ ಗುಡಿ, ಬೊಬ್ಬರ್ಯ ಗುಡಿ ಹಾಗೂ ಸಮುದಾಯ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜನವರಿ 23, ಆದಿತ್ಯವಾರ ಪೂರ್ವಾಹ್ನ ಗಂಟೆ 11ಗಂಟೆಗೆ ಜರಗಲಿದೆ. ಅಧ್ಯಕ್ಷತೆಯನ್ನು ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಶೋಕ್ ಎನ್ ಪೂಜಾರಿ ವಹಿಸಲಿದ್ದು, ಅತಿಥಿಗಳಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೂಡಬೆಟ್ಟುವಿನ ಆಡಳಿತ ಮೊಕ್ಕೇಸರರಾದ ಗೋವಿಂದಾಸ್ ಶೆಟ್ಟಿ, ಕಟಪಾಡಿ ಬೀಡು, ಗರಡಿ ಜೀರ್ಣೋದ್ಧಾರ ಸಮಿತಿ, ಮುಂಬೈ ಅಧ್ಯಕ್ಷರಾದ ಗೋಪಾಲ್ ಕಾಂಚನ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಮಹಿಳೆಗೆ ಚೂರಿ ಇರಿತ, ಪ್ರಾಣಾಪಾಯದಿಂದ ಪಾರು
Posted On: 22 Jan 2022, 12:56 PM
ಕಾಪು : ಇಲ್ಲಿನ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿ'ಸೋಜಾ(35) ಅವರಿಗೆ ನೆರೆ ಮನೆಯಾತ ಚೂರಿಯಿಂದ ಇರಿದ ಘಟನೆ ಕಳೆದ ರಾತ್ರಿ ನಡೆದಿದೆ. ರೀನಾರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತದ ಚಟ ಹೊಂದಿದ್ದ ನೆರೆಮನೆಯ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯು ಕ್ಷುಲ್ಲಕ ಕಾರಣಗಳಿಗಾಗಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ರೀನಾ ಇನ್ನೋರ್ವ ಮಹಿಳೆಯೊಂದಿಗೆ ತನ್ನ ಮನೆ ಬಳಿ ಮಾತನಾಡುತ್ತಿದ್ದಾಗ ಏಕಾಏಕಿ ಬಂದ ವ್ಯಕ್ತಿ ಹೊಟ್ಟೆಗೆ ಇರಿದಿದ್ದಾನೆ. ರೀನಾ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೋಲಿಸರ ಮೇಲೆ ಹಲ್ಲೆ : ಆರೋಪಿಗಳ ಬಂಧನ
Posted On: 22 Jan 2022, 10:51 AM
ಮಂಗಳೂರು : ಇಲ್ಲಿನ ಪೂರ್ವ ಪೋಲಿಸ್ ಠಾಣೆ, ಕದ್ರಿ ಇಲ್ಲಿಯ ಪೋಲಿಸರಾದ ಶಿವಾನಂದ ಮತ್ತು ಬೀರೇಂದ್ರ ದ್ವಿಚಕ್ರ ವಾಹನದಲ್ಲಿ ವಾಮಂಜೂರಿನ ತಮ್ಮ ವಸತಿ ಗೃಹಕ್ಕೆ ತೆರಳುತ್ತಿರುವ ಸಮಯ ರಾತ್ರಿಯ 10ಗಂಟೆಯ ಸುಮಾರಿಗೆ ಯೆಯ್ಯಾಡಿ ಜಂಕ್ಷನ್ ಸಮೀಪ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಡೆದು ನಿಲ್ಲಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಪ್ರಕರಣ ಪೂರ್ವ ಪೋಲಿಸ್ ಠಾಣೆ, ಕದ್ರಿ ಇಲ್ಲಿ ದಾಖಲಾಗಿದೆ. ಹಲ್ಲೆ ಮಾಡಿದ ಆರೋಪಿಗಳಾದ ಡ್ಯಾನಿ ಮತ್ತು ಮ್ಯಾಕ್ಸಿಮಾ ನೊರೊನ್ಹರನ್ನು ಬಂಧಿಸಲಾಗಿದೆ.
ಜಿಲ್ಲೆಯಲ್ಲಿ 4253 ಯುವ ಮತದಾರರ ನೋಂದಣಿ
Posted On: 21 Jan 2022, 09:49 PM
ಉಡುಪಿ : ಜಿಲ್ಲೆಯಲ್ಲಿ ಈ ಸಾಲಿನ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ 4253 ಯುವ ಮತದಾರರು ನೋಂದಣಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ಹಾಲ್ನಲ್ಲಿ, ಭಾರತೀಯ ಚುನಾವಣಾ ಆಯೋಗವು 1-1-2022 ನ್ನು ಅರ್ಹತಾ ದಿನವನ್ನಾಗಿಟ್ಟುಕೊಂಡು ಸಿದ್ಧಪಡಿಸಿರುವ ಭಾವಚಿತ್ರವುಳ್ಳ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ, ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ಹಸ್ತಾಂತರಿಸಿ ಮಾತನಾಡಿದರು. ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 4,87,676 ಪುರುಷರು, 5,25,155 ಮಹಿಳಾ ಮತದಾರರು, ಇತರೆ 11 ಸೇರಿದಂತೆ ಒಟ್ಟು 10,12,842 ಮತದಾರರಿದ್ದು, ಈ ಬಾರಿಯ ಪರಿಷ್ಕರಣೆ ಸಂದರ್ಭದಲ್ಲಿ ಹೊಸ ಸೇರ್ಪಡೆಗಾಗಿ 7862, ಹೆಸರು ತೆಗೆದು ಹಾಕಲು 16815, ತಿದ್ದುಪಡಿಗಾಗಿ 2962, ವಿಧಾನಸಭಾ ವ್ಯಾಪ್ತಿಯಲ್ಲಿ ಬದಲಾವಣೆಗಾಗಿ 552 ಅರ್ಜಿಗಳು ಸ್ವೀಕೃತವಾಗಿದ್ದು, 4253 ಯುವ ಮತದಾರರು ನೋಂದಣಿಯಾಗಿದ್ದಾರೆ ಎಂದರು. ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗಾಗಿ 4 ದಿನಗಳ ವಿಶೇಷ ಅಭಿಯಾನ ನಡೆಸಲಾಗಿದ್ದು, ಮನೆ ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಸಹ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಅಲ್ಲದೆ ಜಿಲ್ಲಾ ಮಟ್ಟದ ಮತದಾರರ ಸಹಾಯವಾಣಿ ಕೆಂದ್ರದ ಉಚಿತ ಸಹಾಯವಾಣಿ ಸಂಖ್ಯೆ 1950 ಮತದಾರರಿಗೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ ಎಂದರು. ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ನೀಡಿದ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿಯ ಸಾಫ್ಟ್ ಪ್ರತಿಯನ್ನು ಸಿ.ಡಿ ಮೂಲಕ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲೆಯ ಬಿ.ಜೆ.ಪಿ., ಕಾಂಗ್ರೆಸ್, ಜೆಡಿಎಸ್, ಮತ್ತು ಸಿಪಿಐ(ಎಂ) ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ
Posted On: 21 Jan 2022, 09:42 PM
ಉಡುಪಿ : ಜನವರಿ 26 ರಂದು ನಡೆಯುವ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಣೆ ಕುರಿತಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ಅದ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ಹಾಲ್ನಲ್ಲಿ ಇಂದು ಸಭೆ ನಡೆಯಿತು. ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕೋವಿಡ್ ಮಾರ್ಗಸೂಚಿಗಳ ಅನ್ವಯ ಅಜ್ಜರಕಾಡು ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಆಯೋಜಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್, ಕರಾವಳಿ ಕಾವಲು ಪಡೆ, ಅಗ್ನಿಶಾಮಕ, ಗೃಹರಕ್ಷಕ, ಅರಣ್ಯ ಮತ್ತು ಅಬಕಾರಿ ಇಲಾಖೆಯಿಂದ ಮತ್ತು ಕಾಲೇಜು ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಪಥ ಸಂಚಲನ ಏರ್ಪಡಿಸುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೃಷಿಕರಿಗೆ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿಕಲಚೇತನ ವಿದ್ಯಾರ್ಥಿಗಳಿಗೆ ಸನ್ಮಾನಿಸುವಂತೆ ತಿಳಿಸಿದರು. ಕೋವಿಡ್ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡದಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಗಣರಾಜ್ಯೋತ್ಸವ ಕಾರ್ಯಕ್ರಮದ ನೇರ ಪ್ರಸಾರವನ್ನು ವೆಬ್ಕಾಸ್ಟಿಂಗ್ ಮೂಲಕ ಪ್ರಸಾರ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕಾರ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ಆಯೋಜಿಸಲು ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
