Updated News From Kaup
ಬ್ಯಾಂಕ್ ಗಳು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು : ಡಾ.ನವೀನ್ ಭಟ್

Posted On: 07-10-2021 08:59PM
ಉಡುಪಿ : ವಾಣಿಜ್ಯ ಬ್ಯಾಂಕ್ ಗಳಲ್ಲಿ ನಾಗರಿಕರು ವ್ಯವಹರಿಸಲು ಬಂದಾಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಿಗುವ ಸೌಲಭ್ಯಗಳ ನಿಖರ ಮಾಹಿತಿಯನ್ನು ಅವರುಗಳಿಗೆ ಒದಗಿಸುವುದರೊಂದಿಗೆ ಗರಿಷ್ಠ ಸೇವೆಯನ್ನು ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು ಬ್ಯಾಂಕ್ ಗಳಲ್ಲಿ ವ್ಯವಹರಿಸಲು ಬಂದಾಗ ಬ್ಯಾಂಕಿಂಗ್ ಕಾರ್ಯವ್ಯಾಪ್ತಿಯಲ್ಲಿ ಬರುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರಿಗೆ ಒದಗಿಸಿ, ಬ್ಯಾಂಕಿಂಗ್ ಕ್ಷೇತ್ರದ ಸೇವೆಗಳ ಬಗ್ಗೆ ಅವರು ವಿಶ್ವಾಸ ಹೊಂದುವಂತೆ ಮಾಡಿ, ಗರಿಷ್ಠ ಆರ್ಥಿಕ ಚಟುವಟಿಕೆಯನ್ನು ಬ್ಯಾಂಕ್ ಗಳ ಮೂಲಕ ನಿರ್ವಹಿಸುವಂತೆ ಮಾಡುವ ಮೂಲಕ ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಬೇಕು ಎಂದರು.
ಬ್ಯಾಂಕ್ ಗಳಲ್ಲಿ ಜನಸಾಮಾನ್ಯರಿಗೆ ಸರಿಯದ ಸೇವಾ ಮಾಹಿತಿಗಳು ಒದಗಿಸುತ್ತಿಲ್ಲ ಎಂಬ ದೂರುಗಳು ಸಹ ಕೇಳಿಬರುತ್ತಿವೆ ಇದಕ್ಕೆ ಆಸ್ಪದ ನೀಡದೇ ಉತ್ತಮ ಸೇವೆಯನ್ನು ಒದಗಿಸಲು ಮುಂದಾಗಬೇಕು ಎಂದರು. ಜಿಲ್ಲೆಯಲ್ಲಿ ಸಾಲ ಠೇವಣಿ ಅನುಪಾತವು 2020 ಜೂನ್ನಲ್ಲಿ 45.27 ರಷ್ಟಿದ್ದು,ಪ್ರಸ್ತುತ 2021 ರ ಜೂನ್ ನಲ್ಲಿ 45.71 ರಷ್ಠಿದ್ದು, ಕ್ರೆಡಿಟ್ ಆಫ್ ಟೇಕ್ ಕನಿಷ್ಠ ಶೇ.60 ರಷ್ಠು ಇರಬೇಕು ಈ ಅನುಪಾತ ನಿಗಧಿತ ಗುರಿಯನ್ನು ಸಾಧಿಸಬೇಕು,ಜಿಲ್ಲೆಯಲ್ಲಿಇದರ ಸುಧಾರಣೆ ಅಗತ್ಯವಿದೆ ಎಂದ ಅವರು, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ,ಇಂಡಿಯನ್ ಓವರ್ ಸೀಸ್ ಬ್ಯಾಂಕ್,ಐಡಿಬಿಐ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ , ಆಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್ ಗಳು ನಿಗಧಿತ ಸಿಡಿ ಪ್ರಮಾಣ ಗುರಿ ಕಡಿಮೆ ಇರುತ್ತದೆ ,ಇದರಲ್ಲಿ ಸುಧಾರಣೆ ಆಗಬೇಕು ಎಂದರು.
ಜಿಲ್ಲೆಯಲ್ಲಿ 2016-17 ನೇ ಸಾಲಿಗೆ ಹಾಗೂ 2018-19 ನೇ ಸಾಲಿನ ಅಡಿಕೆ ಮತ್ತು ಕಾಳು ಮೆಣಸಿನ ಹವಾಮಾನ ಆಧಾರಿತ ಬೆಳೆಯ ಸಮೀಕ್ಷೆಯ ಹೊಂದಾಣಿಕೆಯಗದೇ ಇರುವ ಪ್ರಕರಣಗಳಲ್ಲಿ ಬೆಳೆ ಸಾಲ ಪಡೆದ ರೈತರಿಗೆ ವಿಮೆ ಹಣ ದೊರಕಲು ಬ್ಯಾಂಕ್ ವತಿಯಿಂದ ಕ್ಷೇತ್ರ ಪರಿಶೀಲನೆ ನಡೆಸಿ, ವಿಮಾ ಕಂಪೆನಿಗಳಿಗೆ ಸೂಕ್ತ ದಾಖಲಾತಿಗಳನ್ನು ಸಲ್ಲಿಸುವ ಕಾರ್ಯವನ್ನು ಕೈಗೊಳ್ಳಲು ಕಳೆದ 2 ಸಭೆಗಳಲ್ಲಿ ಸೂಚನೆ ನೀಡಿದ್ದರೂ ಸೂಕ್ತ ಕಾರ್ಯವನ್ನು ಮಾಡದೇ ಇರುವ ಬ್ಯಾಂಕ್ ನ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಪತ್ರ ಬರೆಯುವ ಸೂಚನೆ ನೀಡಿದರು. ಸರ್ಕಾರದ ವಿವಿಧ ಸಹಾಯಧನ ಆಧಾರಿತ ಅರ್ಥಿಕ ಸಹಾಯವನ್ನು ಒದಗಿಸಲು ಅರ್ಜಿಗಳನ್ನು ಶಿಫಾರಸ್ಸು ಮಾಡಿ, ಬ್ಯಾಂಕ್ಗಳಿಗೆ ಕಳುಹಿಸಿದಾಗ ಸಕಾರಣವಿಲ್ಲದೇ ಅರ್ಜಿಗಳನ್ನು ತಿರಸ್ಕರಿಸದೇ ನಿಗದಿತ ಕಾಲಾವಧಿಯಲ್ಲಿ ಅವರುಗಳಿಗೆ ಸೌಲಭ್ಯ ಒದಗಿಸಬೇಕು ಎಂದರು. ಕೌಶಲ್ಯಾಭಿವೃಧ್ದಿ ತರಬೇತಿಗಳನ್ನು ಯುವಜನರಿಗೆ ಬ್ಯಾಕಿಂಗ್ ಸೆಕ್ಟರ್ ಗಳು ನೀಡಿದಾಗ , ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಗಳನ್ನು ಒದಗಿಸಿ , ಅವರುಗಳನ್ನು ವೃತ್ತಿ ನಿರತರನ್ನಾಗಿಸುವುದರ ಜೊತೆಗೆ ಅರ್ಥಿಕವಾಗಿ ಸಬಲರನ್ನಾಗಿಸಬೇಕು ಎಂದರು.
ಆರ್.ಬಿ.ಐ ಬೆಂಗಳೂರು ನ ಎ.ಜಿ.ಎಂ ವೆಂಕಟೇಶ್ ಮಾತನಾಡಿ, 2000 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಿಗೆ ಬ್ಯಾಂಕಿಂಗ್ ಸರ್ವಿಸ್ ಗಳನ್ನು ಒದಗಿಸಬೇಕು, ಬ್ಯಾಂಕಿಂಗ್ ವ್ಯವಹಾರಗಳು ಮುಂದಿನ ದಿನಗಳಲ್ಲಿ ಶೇ.100 ರಷ್ಠು ಡಿಜಿಟಲೀಕರಣವಾಗಬೇಕು ,ಎಟಿಎಂ ಗಳಲ್ಲಿ ದಿನದ 24 ಗಂಟೆಯೂ ಹಣದ ಸೌಲಭ್ಯ ದೊರೆಯುವಂತೆ ಇರಬೇಕು, ಸಕಾರಣವಿಲ್ಲದೇ ಎಟಿಎಂ ಗಳು ವ್ಯವಹರಿಸದೇ ಇದ್ದಲ್ಲಿ ಅಂತಹವುಗಳಿಗೆ ದಂಡ ವಿಧಿಸಲಾಗುವುದು ಎಂದರು. ಲೀಡ್ ಬ್ಯಾಂಕ್ ಮೆನೇಜರ್ ಪಿ.ಎಂ.ಪಿಂಜಾರ್ ಮಾತನಾಡಿ, ಉಡುಪಿ ಜಿಲ್ಲೆಯ ವಿವಿಧ ಬ್ಯಾಂಕ್ ಗಳಲ್ಲಿ 28976 ಕೋಟಿ ರೂ ಯಷ್ಟು ಹಣ ಠೆವಣಿಯಾಗುವುದರೊಂದಿಗೆ ಶೇ.12.87 ರಷ್ಠು ಬೆಳವಣಿಗೆಯಾಗಿದೆ. 13247 ಕೋಟಿ ರೂ ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿದ್ದು, ಇದರ ಬೆಳವಣಿಗೆ 9.14 ರಷ್ಟಿದೆ ಎಂದರು. ಪ್ರಸ್ತುತ ಸಾಲಿನ ಪ್ರಥಮ ತ್ರೈಮಾಸಿಕದ ಕೊನೆಯ ಭಾಗದಲ್ಲಿ 2290 ಕೋಟಿ ರೂ ಗಳಷ್ಟು ಸಾಲ ನೀಡುವ ಗುರಿ ಇದ್ದು, 2252 ಕೋಟಿ ರೂ ಗಳಷ್ಟು ಸಾಲ ನೀಡಿ ಶೇ.98.34 ರಷ್ಟು ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ 757 ಕೋಟಿ, ಸೂಕ್ಷ, ಸಣ್ಣ ಹಾಗೂ ಮಧ್ಯಮ ವಲಯಗಳಿಗೆ 351 ಕೋಟಿ, ವಿಧ್ಯಾಭ್ಯಾಸಕ್ಕೆ 6 ಕೋಟ , ಗೃಹ ಸಾಲ 61 ಕೋಟಿ, ಮತ್ತಿತರ ಆದ್ಯತಾ ವಲಯಕ್ಕೆ 1196 ಕೋಟಿ, ಆದ್ಯತೆಯಲ್ಲದ ವಲಯಕ್ಕೆ 517 ಕೋಟಿ ಸಾಲ ನೀಡಲಾಗಿದೆ ಎಂದರು. ಸಭೆಯಲ್ಲಿ ಉಡುಪಿ ಪ್ರಾದೇಶಿಕ ಕಚೇರಿ ಪ್ರಬಂಧಕ ಕೆ.ಕಾಳಿ, ನಬಾರ್ಡ್ ಎಜಿಎಂ ಸಂಗೀತಾ ಕರ್ತ ಮತ್ತು ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಡಾ.ವಾಸಪ್ಪ, ರೀಜಿನಲ್ ಮ್ಯಾನೇಜರ್ ಲೀನಾ ಪೀಟರ್ ಪಿಂಟೊ, ಹಾಗೂ ವಿವಿಧ ಇಲಾಖೆ ಮತ್ತು ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸೈಬ್ರಕಟ್ಟೆ ರೋಟರಿ ವತಿಯಿಂದ 7500 ರೂ. ಮೌಲ್ಯದ 30 ಔಷಧೀಯ ಕಿಟ್ ಗಳ ಹಸ್ತಾಂತರ

Posted On: 07-10-2021 08:52PM
ಉಡುಪಿ : 75ನೇ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಘನವೆತ್ತ ಭಾರತ ಸರಕಾರದಿಂದ ದೇಶದಾದ್ಯಂತ 750 ಜನ ಔಷಧಿ ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ 100 ಔಷಧೀಯ ಕಿಟ್ ಗಳನ್ನು ಪ್ರತಿಯೊಂದು ಜನ ಔಷಧಿ ಕೇಂದ್ರಗಳಿಗೆ ಹಂಚಲು ನೀಡಲಿದ್ದು, ಇದೆ ತಿಂಗಳ 10ನೇ ತಾರೀಖಿನಂದು ಹಂಚಲಿದ್ದು ಬ್ರಹ್ಮಾವರ ಜನ ಔಷಧಿ ಕೇಂದ್ರಕ್ಕೂ ನೀಡಿದ್ದು , ಅದರ ಜೊತೆ ಸೈಬ್ರಕಟ್ಟೆ ರೋಟರಿ ವತಿಯಿಂದ ಅಣ್ಣಯ್ಯದಾಸ್ ಅವರ ಕೊಡುಗೆ ಸುಮಾರು 7500ರೂ. ಮೌಲ್ಯದ 30 ಔಷಧೀಯ(ವಿಟಮಿನ್ ಪೌಡರ್, ಟಾನಿಕ್, ಜ್ಯೂಸ್) ಕಿಟ್ ಗಳನ್ನು ಜನ ಔಷಧಿ ಕೇಂದ್ರದ ಆಡಳಿತ ಪಾಲುದಾರಾರದ ಸುಂದರ್ ಅವರಿಗೆ ಹಿರಿಯ ನಾಗರಿಕರಿಗೆ ವಿತರಿಸಲು, ವಲಯ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭ ರೋಟರಿ ಅಧ್ಯಕ್ಷರಾದ ಪ್ರಸಾದ್ ಭಟ್, ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ , ಕಿರಣ್ ಕಾಜ್ರಲ್ಲಿ , ನೀಲಕಂಠ ರಾವ್, ಗಣೇಶ್ ನಾಯಕ್, ರಾಮ ಪ್ರಕಾಶ್ ಉಪಸ್ಥಿತರಿದ್ದರು.
ಇನ್ನಂಜೆ : ಆರ್ಥಿಕ ಸಂಕಷ್ಟದ ಕುಟುಂಬಕ್ಕೆ ಇನ್ನಂಜೆ ಯುವತಿ ಮಂಡಲದ ವತಿಯಿಂದ ಆಹಾರ ಸಾಮಾಗ್ರಿ ವಿತರಣೆ

Posted On: 06-10-2021 05:07PM
ಕಾಪು :ಇನ್ನಂಜೆ ಯುವತಿ ಮಂಡಲದ ವತಿಯಿಂದ ಇನ್ನಂಜೆ ಕಲ್ಯಾಲುವಿನಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಮುಂಬೈನ ವಿದ್ಯಾ ಶಶಿಕಾಂತ್ ಶೆಟ್ಟಿ ಕುರ್ಕಾಲು ಪ್ರಾಯೋಜಿತ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಇನ್ನಂಜೆ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕ ಆಚಾರ್ಯ, ಪಂಚಾಯತ್ ಮಾಜಿ ಅಧ್ಯಕ್ಷರಾದ ವಸಂತಿ ವಿ. ಆಚಾರ್ಯ, ಪಂಚಾಯತ್ ಸದಸ್ಯರಾದ ನಿತೇಶ್ ಸಾಲಿಯಾನ್, ಸವಿತಾ ಶೆಟ್ಟಿ, ಯುವತಿ ಮಂಡಲದ ಸದಸ್ಯೆಯರು ಉಪಸ್ಥಿತರಿದ್ದರು.
ಯುವತಿ ಮಂಡಲದ ಅಧ್ಯಕ್ಷರಾದ ಅನಿತಾ ಎನ್. ಸ್ವಾಗತಿಸಿ, ಯುವತಿ ಮಂಡಲದ ಸದಸ್ಯೆ ಪದ್ಮಶ್ರೀ ನಿರೂಪಿಸಿ, ಕಾರ್ಯದರ್ಶಿ ಆಶಾ ನಾಯಕ್ ವಂದಿಸಿದರು.
ಸ್ವರ್ಣಾ ನದಿಗೆ ಸಚಿವ ವಿ.ಸುನಿಲ್ ಕುಮಾರ್ ಬಾಗಿನ ಸಮರ್ಪಣೆ

Posted On: 06-10-2021 04:35PM
ಉಡುಪಿ : ಪೆರಂಪಳ್ಳಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಬಳಿ, ಕೃಷ್ಣಾಂಗಾರಕ ಸ್ನಾನ ಘಟ್ಟ ಶೀಂಬ್ರ ಬಳಿ ಇಂಧನ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ಸ್ವರ್ಣಾ ನದಿಗೆ ಇಂದು ಬಾಗಿನ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಹಾಗೂ ರಾಜ್ಯದಲ್ಲಿ ತಮ್ಮದೇ ಸರ್ಕಾರ ಆಡಳಿತದಲ್ಲಿದ್ದರೂ, ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡದವರಿಂದ ಹೆಚ್ಚೇನೂ ನಿರೀಕ್ಷಿಸಲು ಸಾಧ್ಯವಿಲ್ಲ - ರಮೀಜ್ ಹುಸೇನ್

Posted On: 05-10-2021 06:01PM
ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆಯವರು ಕಾಪು ಕ್ಷೇತ್ರದ ಶಾಸಕರಾಗಿದ್ದ ಸಂದರ್ಭದಲ್ಲಿ ಕಾಪು ಕ್ಷೇತ್ರ ಅಭಿವೃದ್ಧಿಯಲ್ಲಿ ಉತ್ತುಂಗದ ಶಿಖರದಲ್ಲಿತ್ತು. ಈ ಸಂದರ್ಭದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ತಮ್ಮದೇ ಸಾಧನೆ ಎಂದು ಬಿಂಬಿಸುವುದರಲ್ಲಿ ಈಗಿನ ಶಾಸಕರು ಬ್ಯುಸಿಯಾಗಿದ್ದಾರೆ. ಯಾವುದೇ ಒಂದು ಆಡಳಿತ ಪಕ್ಷ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವಿಫಲವಾದಾಗ, ಅಥವಾ ಆ ಕ್ಷೇತ್ರ ಅಭಿವೃದ್ಧಿಯಲ್ಲಿ ತೀರ ಹಿಂದುಳಿಯುವಾಗ, ಅಂತಹಾ ಸಂಧರ್ಭದಲ್ಲಿ ವಿರೋಧಪಕ್ಷಗಳು ರಸ್ತೆಗಿಳಿದು ಪ್ರತಿಭಟಿಸುವುದು ಅನಿವಾರ್ಯ. ಇದೀಗ ಬಿಜೆಪಿ ಸರ್ಕಾರ ಸಂಪೂರ್ಣ ನಿಷ್ಕ್ರಿಯ ವಾಗಿದೆ, ಆಡಳಿತ ಯಂತ್ರ ತುಕ್ಕು ಹಿಡಿದಿದೆ. ಈ ಸಂಧರ್ಭದಲ್ಲಿ ರಾಜ್ಯದ ಬಹುತೇಕ ಕಡೆ ಕಾಂಗ್ರೆಸ್ ಪಕ್ಷ ಬಿಜೆಪಿಯ ಸುಳ್ಳಿನ ಸರಮಾಲೆ, ನಕಲಿ ಹಿಂದುತ್ವ, ಮೊಸಳೆ ಕಣ್ಣೀರಿನ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ.
ವಿಪರೀತ ಬೆಲೆ ಏರಿಕೆ, ಜನಜೀವನ ಸಂಕಷ್ಟದಲ್ಲಿದ್ದರೂ, BPL ಕಾರ್ಡ್ ರದ್ದುಗೊಳಿಸುವತ್ತ ಗಮನ ನೀಡುತ್ತಿರುವ ಬಿಜೆಪಿ ಸರ್ಕಾರ, ತೈಲಬೆಲೆ ಏರಿಕೆ, ಬಸ್ ಪ್ರಯಾಣ ದರ ಏರಿಕೆ, ರೈತರ ಮೇಲೆ ಹಲ್ಲೆ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಪುಂಗಿ ಊದುತ್ತಾ, ಹಿಂದೂ ದೇವಾಲಯ ಹಾಗೂ ಪ್ರಾರ್ಥನಾ ಮಂದಿರ ಒಡೆದು ಹಾಕುತ್ತಾ ಇರುವ ಬಿಜೆಪಿ ಸರ್ಕಾರ, ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ನೈತಿಕ ಪೊಲೀಸ್ ಗಿರಿ ಎಲ್ಲವೂ ಎಗ್ಗಿಲ್ಲದೆ ನಡೆಯುವಾಗ ಅವುಗಳನ್ನು ಮೌನವಾಗಿ ಸಮರ್ಥಿಸುವ ಬಿಜೆಪಿಯ ಘಟಾನುಘಟಿ ನಾಯಕರುಗಳು, ಇವೆಲ್ಲವನ್ನೂ ಕಾಂಗ್ರೆಸ್ ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ, ಬಿಜೆಪಿಯ ದ್ವಂದ್ವ ಮನೋಭಾವವನ್ನು ಜನರು ಕೂಡ ಅರ್ಥೈಸತೊಡಗಿದ್ದಾರೆ.
ತನ್ನ ಬಂಡವಾಳ ಬಯಲಾಗುತ್ತಿದ್ದಂತೆ, ಬಿಜೆಪಿ ನಾಯಕರಿಗೆ ತಳಮಳ ಶುರುವಾಗಿ, ದಿನಕ್ಕೊಂದು ರೀತಿಯ ಹೇಳಿಕೆ ಕೊಡುತ್ತಾ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮೇಲೆ ಸುಖಾಸುಮ್ಮನೆ ಅಪಪ್ರಚಾರ ಮಾಡಿ, ಕೈಲಾಗದವ ಮೈಯ್ಯೆಲ್ಲಾ ಪರಚಿಕೊಂಡ ಎನ್ನುವ ಗಾದೆ ಮಾತು ಸತ್ಯ ಎಂದು ರಾಜ್ಯದ ಜನತೆಗೆ ತಿಳಿಸುತ್ತಿದ್ದಾರೆ. ಇದುವರೆಗೆ ರಾಜ್ಯ ಬಿಜೆಪಿ ನಾಯಕರಾಗಲಿ ಜಿಲ್ಲಾ ನಾಯಕರಾಗಲಿ, ಅಥವಾ ಬಿಜೆಪಿಯ ರಾಜಕಾರಣಿಗಳಾಗಲಿ, ರಾಜ್ಯ ಸರ್ಕಾರ ಪ್ರಾಯೋಜಿತ ದೇವಸ್ಥಾನ ಉರುಳಿಸುವ ಯೋಜನೆ ವಿರುದ್ಧ ಒಂದೇ ಒಂದು ಶಬ್ದ ಮಾತಾಡದೆ, ಸುಮ್ಮನಿರುವ ಉದ್ದೇಶವಾದರೂ ಏನು? ತಮ್ಮ ಉದ್ದೇಶ ಸಾಧನೆಗೆ ಧರ್ಮವನ್ನು ಗುರಾಣಿಯಾಗಿ ಬಳಸಿ, ಇದೀಗ ಅಧಿಕಾರ ಸಿಕ್ಕಾಗ ತಾನು ಪಕ್ಕಾ ಹಿಂದೂ ವಿರೋಧಿ ಎಂದು ಸಾಬೀತುಪಡಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷವು ಎಂದೆಂದಿಗೂ ಹೋರಾಟ ಮಾಡುತ್ತೆ. ಅಭಿವೃದ್ಧಿ ವಿಷಯದಲ್ಲಿ ಮಾತಾಡುವುದನ್ನು ಈ ಬಿಜೆಪಿ ಸರ್ಕಾರ ಮರೆತೇಬಿಟ್ಟಿದೆ. ಆಡಳಿತ ಪಕ್ಷವನ್ನು ವಿರೋಧ ಪಕ್ಷ ಪ್ರಶ್ನಿಸುವುದು ರಾಜಕೀಯ ಧರ್ಮ, ಅದನ್ನು ಕಾಂಗ್ರೆಸ್ ಪಾಲಿಸುತ್ತಿದ್ದೆ, ಮಾನ್ಯ ಸೊರಕೆಯವರು ಜನನಾಯಕರಾಗಿ ಪ್ರಶ್ನಿಸುವಾಗ, ಅದಕ್ಕೆ ಯಾವುದೇ ಉತ್ತರ ಕೊಡದೆ, ವಿಷಯಾಂತರ ಮಾಡಿ ತನ್ನ IT cell ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಸೊರಕೆಯವರ ಬಗ್ಗೆ ಅಪಪ್ರಚಾರ ಮಾಡಿಸುವ ಬಿಜೆಪಿ ನಾಯಕರಲ್ಲಿ ನಮ್ಮದೊಂದು ಮನವಿ.
ನಿಮ್ಮಲ್ಲಿ ಇನ್ನೂ ಕೂಡ ಅಭಿವೃದ್ಧಿಯ ಮನೋಭಾವ ಇದ್ದರೆ, ತಕ್ಷಣ ಕಾಪು ಕ್ಷೇತ್ರದ ಅಭಿವೃದ್ಧಿಗೆ ಹಣಬಿಡುಗಡೆ ಮಾಡಿ. ಹದೆಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿ, ಹಕ್ಕುಪತ್ರ ವಂಚಿತರಿಗೆ ಹಕ್ಕುಪತ್ರ ನೀಡಿ, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಮರುಪ್ರಾರಂಭಿಸಿ, ಅದು ಬಿಟ್ಟು ಹಿಂದಿನ ಸರ್ಕಾರದ ಅವಧಿಗಳಲ್ಲಿ ಆದ ಕಾಮಗಾರಿಗಳನ್ನ ಉದ್ಘಾಟನೆ ಮಾಡಿ ಹೆಸರು ಬದಲಾಯಿಸಿ ತಮ್ಮದೇ ಸಾಧನೆ ಎಂದು ಬಿಂಬಿಸಿ, ಇದ್ದ ಅಲ್ಪಸ್ವಲ್ಪ ಗೌರವವನ್ನು ಕಳೆದುಕೊಳ್ಳಬೇಡಿ ಎಂದು ಯುವ ಕಾಂಗ್ರೆಸ್ ಕಾಪು ಬ್ಲಾಕ್ ( ದಕ್ಷಿಣ)ನ ಅಧ್ಯಕ್ಷರಾದ ರಮೀಜ್ ಹುಸೇನ್ ಆಗ್ರಹಿಸಿದ್ದಾರೆ.
ವಾಮದಪದವು : ತುಳುನಾಡ ರಕ್ಷಣಾ ವೇದಿಕೆಯಿಂದ "ತುಳುನಾಡ ಲೇಸ್" ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

Posted On: 05-10-2021 05:20PM
ಮಂಗಳೂರು : ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕ ಆಯೋಜಿಸಿದ "ತುಳುನಾಡ ಲೇಸ್" ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ವಾಮದಪದವು ಗಣೇಶ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ಕುಡ್ಲ ವಾಹಿನಿ ವಾರ್ತಾ ವಾಚಕಿ ಡಾ. ಪ್ರಿಯಾ ಹರೀಶ್ ನೆರವೇರಿಸಿದರು. ಯೋಗೀಶ್ ಶೆಟ್ಟಿ ಕಳಸಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರಾದ ಮುರಳಿ ಕೃಷ್ಣ ರಾವ್ , ಗಾಯಕಿ ಕ್ಷಿತಿ. ಕೆ ರೈ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ರಾಜ್ಯ ರಾಜ್ಯ ನಗರ ನೀರು ಸರಬರಾಜು ಮಂಡಳಿ ಮತ್ತು ಒಳಚರಂಡಿ ಮಂಡಳಿ ನಿರ್ದೇಶಕರಾದ ಸುಲೋಚನಾ ಜಿ. ಕೆ ಭಟ್, ಚೆನ್ನೈತೋಡಿ ಗ್ರಾ ಪಂ. ಅಧ್ಯಕ್ಷರಾದ ಭಾರತಿ ರಾಜೇಂದ್ರ ಪೂಜಾರಿ, ಕುಕ್ಕಿಪಾಡಿ ಗ್ರಾ. ಪಂ ಉಪಾಧ್ಯಕ್ಷರಾದ ಯೋಗೀಶ್ ಆಚಾರ್ಯ, ವಾಮದಪದವು ವ್ಯ.ಸ. ಬ್ಯಾಂಕ್ ಇದರ ಅಧ್ಯಕ್ಷರಾದ ಕಮಲ್ ಶೆಟ್ಟಿ ಬೊಳ್ಳಾಜೆ, ಉದ್ಯಮಿ ವಸಂತ ಶೆಟ್ಟಿ ಕೇದಗೆ, ನಾಡ ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಜ ಲೋಡಿ, ಬೀಡಿ ಕಾಂಟ್ರಾಕ್ಟರ್ ನಜೀರ್ ಸಾಹೇಬ್, ತೆಂಗು ಬೆಳೆಗಾರರ ಸ.ಅಧ್ಯಕ್ಷರಾದ ವಿಜಯ ರೈ ಆಲದಪದವು, ವಾಮದಪದವು ಹಾಲು ಉ. ಸಂ. ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು, ಉದ್ಯಮಿ ಶ್ರೀಧರ ಪೈ ವಾಮದ ಪದವು, ವ್ಯ.ಸ ಸಂಘ ವಾಮದಪದವು ಮಾಜಿ ನಿರ್ದೇಶಕರಾದ ರಿಚ್ಚರ್ಡ್ ಡಿಸೋಜ, ಮಹಿಳಾ ಸೊಸೈಟಿ ವಾಮದಪದವು ಇದರ ಅಧ್ಯಕ್ಷರಾದ ರೇವತಿ ಮಂಜುನಾಥ ನಾಯಕ್, ಸಮಷ್ಟಿ ಸೌಹಾರ್ದ ಸ. ನಿರ್ದೇಶಕರಾದ ಅಶ್ವತ್ ರೈ. ಉದ್ಯಮಿ ರಫೀಕ್ ವಾಮದಪದವು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ದೇವಿ ಪ್ರಸಾದ್ ಪ್ರಸ್ತಾವನೆ ಗೈದರು, ಸೌಕತ್ ಆಲಿ ಸ್ವಾಗತಿಸಿದರು. ಲಾದ್ರು ಮೆನೇಜಸ್ ವಂದಿಸಿದರು.

ವೇದಿಕೆಯಲ್ಲಿ ಆನ್ಲೈನ್ ಸ್ಪರ್ಧೆಯಲ್ಲಿ ಆಯ್ಕೆಯಾದ ಟಾಪ್ 10 ಸ್ಪರ್ದಿಗಳ ತುಳುನಾಡ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಸಮಾರೋಪ ಸಮಾರಂಭದಲ್ಲಿ ತುರವೇ ಸ್ಥಾಪಕಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಅಧ್ಯಕ್ಷತೆ ವಹಿಸಿದ್ದರು. ತುಳು ಸಂಸ್ಕೃತಿ ಆಚಾರ ವಿಚಾರದ ಬಗ್ಗೆ, ಆಟಿ ವಿಶೇಷತೆಯ ಬಗ್ಗೆ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸರ್ ಮಾತನಾಡಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಮಾಜಿ ಸಚಿವರಾದ ರಮಾನಾಥ ರೈ, ಕೆಡಿಪಿ ಸದಸ್ಯ ಚಂದ್ರಶೇಖರ ಶೆಟ್ಟಿ, ಬಂಟ್ವಾಳ ವರ್ತಕರ ವಿ. ಸಂ. ಅಧ್ಯಕ್ಷರಾದ ಎಂ. ಶುಭಾಶ್ಚಂದ್ರ ಜೈನ್, ಮೋಹನ್ ಶೆಟ್ಟಿ ನರ್ವಲ್ದಡ್ಕ, ಶಶಾಂಕ್ ಇಂಡಸ್ಟ್ರಿ ಮಾಲಕರಾದ ಹರೀಂದ್ರ ಪೈ, ಕುಕ್ಕಿಪಾಡಿ ಪಂ. ಅಧ್ಯಕ್ಷರಾದ ಸುಜಾತಾ ಆರ್. ಪೂಜಾರಿ, ಉದ್ಯಮಿ ಹಂಝ ಬಸ್ತಿಕೋಡಿ, ಉದ್ಯಮಿ ಸಂದೀಪ್ ಶೆಟ್ಟಿ, ಕಿಯೋನಿಕ್ಸ್ ಕಂಪ್ಯೂಟರ್ ನ ಗೀತಾ ಜೈನ್, ಬೇಬಿ ಕುಂದರ್, ಕೆ ವಿವೇಕಾನಂದ ರಾವ್, ಉಪಸ್ಥಿತರಿದ್ದರು.
ಆನ್ಲೈನ್ ಸ್ಪರ್ಧೆಯಲ್ಲಿ ಆಯ್ಕೆಯಾದ ಟಾಪ್ ಟೆನ್ ಸ್ಪರ್ದಿಗಳನ್ನು ಅಭಿನಂದಿಸಿ ವಿಜೇತರಾದ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು. ಕೋವಿಡ್ ಸಂಕಷ್ಟ ಕಾಲದಲ್ಲಿ ಶ್ರಮವಹಿಸಿ ಕೊರೋನ ನಿಯಂತ್ರಣದಲ್ಲಿ ಹೋರಾಡಿದ ಆಶಾಕಾರ್ಯಕರ್ತರನ್ನು ಗೌರವಿಸಲಾಯಿತು. ಪ್ರದೀಪ್ ಕುಕ್ಕಿಪಾಡಿ ಸ್ವಾಗತಿಸಿ, ದೇವಿಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು.
ಇನ್ನಂಜೆ : ಆರ್ಥಿಕ ಸಂಕಷ್ಟದ ಕುಟುಂಬಕ್ಕೆ ಇನ್ನಂಜೆ ಯುವತಿ ಮಂಡಲದ ವತಿಯಿಂದ ಆಹಾರ ಸಾಮಾಗ್ರಿ ವಿತರಣೆ

Posted On: 04-10-2021 06:10PM
ಕಾಪು :ಇನ್ನಂಜೆ ಯುವತಿ ಮಂಡಲದ ವತಿಯಿಂದ ಇನ್ನಂಜೆ ಕಲ್ಯಾಲುವಿನಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಮುಂಬೈನ ವಿದ್ಯಾ ಶಶಿಕಾಂತ್ ಶೆಟ್ಟಿ ಕುರ್ಕಾಲು ಪ್ರಾಯೋಜಿತ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಇನ್ನಂಜೆ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕ ಆಚಾರ್ಯ, ಪಂಚಾಯತ್ ಮಾಜಿ ಅಧ್ಯಕ್ಷರಾದ ವಸಂತಿ ವಿ. ಆಚಾರ್ಯ, ಪಂಚಾಯತ್ ಸದಸ್ಯರಾದ ನಿತೇಶ್ ಸಾಲಿಯಾನ್, ಸವಿತಾ ಶೆಟ್ಟಿ, ಯುವತಿ ಮಂಡಲದ ಸದಸ್ಯೆಯರು ಉಪಸ್ಥಿತರಿದ್ದರು.
ಯುವತಿ ಮಂಡಲದ ಅಧ್ಯಕ್ಷರಾದ ಅನಿತಾ ಎನ್. ಸ್ವಾಗತಿಸಿ, ಯುವತಿ ಮಂಡಲದ ಸದಸ್ಯೆ ಪದ್ಮಶ್ರೀ ನಿರೂಪಿಸಿ, ಕಾರ್ಯದರ್ಶಿ ಆಶಾ ನಾಯಕ್ ವಂದಿಸಿದರು.
ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗದ ವತಿಯಿಂದ ಗೋ ಶಾಲೆಗೆ ಪಶು ಆಹಾರ ಸಲ್ಲಿಕೆ

Posted On: 04-10-2021 02:24PM
ಕಾಪು : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ (ರಿ) ಮತ್ತು ಮಹಿಳಾ ಬಳಗದ ವತಿಯಿಂದ ಕುತ್ಯಾರು ಶ್ರೀ ಆನೆಗೊಂದಿ ಸಂಸ್ಥಾನದ ಗುರುಪೀಠದ ಗೋ ಶಾಲೆಗೆ ಪಶು ಆಹಾರ(ಹುಲ್ಲು)ವನ್ನು ಶ್ರಮದಾನದ ಮೂಲಕ ಸಂಗ್ರಹ ಮಾಡಿ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಉಮೇಶ್ ಆಚಾರ್ಯ, ಗೌರವ ಅಧ್ಯಕ್ಷ ಸುರೇಶ್ ಆಚಾರ್ಯ, ಕಾರ್ಯದರ್ಶಿ ಮಾಧವ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ ಮತ್ತು ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಸ್ವಾಮೀಜಿಯವರು ಫಲ ಮಂತ್ರಾಕ್ಷತೆ ನೀಡಿ ಹರಸಿದರು.
ಅಕ್ಟೋಬರ್ 9 : ವಿಶ್ವ ನ್ಯೂಸ್ 24 ಇದರ ನೂತನ ಕಚೇರಿ ಹಾಗೂ ಸ್ಟುಡಿಯೋ ಉದ್ಘಾಟನೆ

Posted On: 02-10-2021 11:05PM
ಕಾಪು : ಮಮಂತ್ರ ಮೀಡಿಯಾ ನೆಟ್ವಕ್೯ ಗ್ರೂಪ್ ಆಫ್ ಕಂಪನಿಯ ನಾಲ್ಕನೇ ವರ್ಷದ ಸಂಭ್ರಮದಲ್ಲಿರುವ ವಿಶ್ವ ನ್ಯೂಸ್ 24 ಇದರ ನೂತನ ಕಚೇರಿ ಹಾಗೂ ಸ್ಟುಡಿಯೋ ಉದ್ಘಾಟನೆಯು ಅಕ್ಟೋಬರ್ 9, ಶನಿವಾರ ಬೆಳಿಗ್ಗೆ 10:15 ಕ್ಕೆ ಸರಿಯಾಗಿ ಕಾಪುವಿನ ಜನಾರ್ಧನ ಕಾಂಪ್ಲೆಕ್ಸ್ ನ ನಾಲ್ಕನೇ ಮಹಡಿಯಲ್ಲಿ ಜರಗಲಿದೆ.

ನೂತನ ಕಚೇರಿ ಹಾಗೂ ಸ್ಟುಡಿಯೋ ಇದರ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾಡಲಿದ್ದು, ನೂತನ ಆ್ಯಪ್ ನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಬಿಡುಗಡೆ ಮಾಡಲಿದ್ದಾರೆ ಎಂದು ಮಮಂತ್ರ ಮೀಡಿಯಾ ನೆಟ್ವಕ್೯ ಗ್ರೂಪ್ ಆಫ್ ಕಂಪನಿಯ ಪ್ರವರ್ತಕ ಪುರುಷೋತ್ತಮ್ ಸಾಲ್ಯಾನ್ ಮೂಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾರಿಗೆ ಉದ್ಯಮಿ, ಶತಾಯುಷಿ, ಪಾಂಗಾಳ ರಬೀಂದ್ರ ನಾಯಕ್ : ದೈವಾಧೀನ

Posted On: 02-10-2021 10:29PM
ಉಡುಪಿ : ಇಲ್ಲಿನ ಸುಪ್ರಸಿದ್ಧ ಸಾರಿಗೆ ಉದ್ಯಮಿ, ಶತಾಯುಷಿ, ಪಾಂಗಾಳ ರಬೀಂದ್ರ ನಾಯಕ್ ರವರು ಇಂದು ವಯೋ ಸಹಜ ಅನಾರೋಗ್ಯದಿಂದ ದೈವಾಧೀನರಾಗಿರುವರು ಎಂದು ತಿಳಿಸಲು ವಿಷಾದಿಸುತ್ತೇವೆ. ತನ್ನ ತಂದೆ ದಿವಂಗತ ಉಪೇಂದ್ರ ಶ್ರೀನಿವಾಸ ನಾಯಕ್ ರವರು ಹುಟ್ಟು ಹಾಕಿದ ಹನುಮಾನ್ ಹಾಗೂ ಗಜಾನನ ಟ್ರಾನ್ಸ್ ಪೋರ್ಟ್ ಕಂಪೆನಿಯನ್ನು ಉತ್ತುಂಗಕ್ಕೇರಿಸಿ, ಹಲವಾರು ಜನರಿಗೆ ಉದ್ಯೋಗದಾತರಾಗಿ, ಅನ್ನದಾತರಾಗಿ ಜನಾನುರಾಗಿದ್ದರು.
ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ" ಎಂಬ ಧೃಡವಾದ ನಂಬಿಕೆಯಿಂದ ಶಿಕ್ಷಣಕ್ಕೆ ನಿರಂತರವಾಗಿ ಪ್ರೋತ್ಸಾಹವನ್ನು ನೀಡುತ್ತಾ, ಪಟ್ಲ ಯು ಎಸ್ ನಾಯಕ್ ಪ್ರೌಢಶಾಲಾ ಸ್ಥಾಪಕರಾಗಿಯೂ ಸಾವಿರಾರು ಜನರಿಗೆ ವಿದ್ಯಾದಾನಕ್ಕೆ ಅನುವು ಮಾಡಿರುತ್ತಾರೆ. ನಮ್ಮ ಪರ್ಕಳ ಶಾಲೆಗೂ ದೇಣಿಗೆಯನ್ನು ನೀಡಿರುತ್ತಾರೆ.
ಮಣಿಪಾಲದ ಆರ್ ಎಸ್ ಬಿ ಭವನದ ನಿರ್ಮಾಣಕ್ಕೆ , ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಅನ್ನದಾನ ನಿಧಿಗೆ ಸಾಕಷ್ಟು ದೇಣಿಗೆಯನ್ನು ನೀಡಿದ ಕೊಡುಗೈ ದಾನಿ. ದಿವಂಗತರು ಬಂಟಕಲ್ಲು ದೇವಸ್ಥಾನದ ಸ್ಥಾಪನೆಗೆ ಮೂಲ ಕಾರಣರಾದ ಪಾಂಗಾಳ ನಾಯಕ್ ಕುಟುಂಬಸ್ಥರು ಮಾತ್ರವಲ್ಲದೆ ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಆರಾಧಕರಾಗಿದ್ದರು.