Updated News From Kaup
ವಿಧಾನ ಪರಿಷತ್ ಚುನಾವಣೆ : ಉಡುಪಿ ಜಿಲ್ಲೆಯಲ್ಲಿ 99.48 % ಮತದಾನ
Posted On: 10 Dec 2021, 08:35 PM
ಉಡುಪಿ : ಜಿಲ್ಲೆಯಲ್ಲಿ ಇಂದು ನಡೆದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನಪರಿಷತ್ನ ದ್ವೆöÊವಾರ್ಷಿಕ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಒಟ್ಟು 99.48% ಮತದಾನ ನಡೆದಿದ್ದು, ಜಿಲ್ಲೆಯ ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ 1203 ಪುರುಷ, 1289 ಮಹಿಳಾ ಸದಸ್ಯರು ಸೇರಿದಂತೆ ಒಟ್ಟು 2492 ಮಂದಿ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದು, 10 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 43.91 % ಮತದಾನ ನಡೆದಿದ್ದು, 2505 ಮಂದಿ ಮತದಾರರಲ್ಲಿ 1100 ಮಂದಿ ಮತದಾನ ಮಾಡಿದ್ದರು. ಕುಂದಾಪುರ ತಾಲೂಕಿನ ಆಲೂರು, ಚಿತ್ತೂರು, 74 ಉಳ್ಳೂರು, ಹಾರ್ದಳ್ಳಿ-ಮಂಡಳ್ಳಿ. ಬ್ರಹ್ಮಾವರ ತಾಲೂಕಿನ ಕೋಟತಟ್ಟು, ಬಾರ್ಕೂರು. ಹೆಬ್ರಿ ತಾಲೂಕಿನ ಮಡಾಮಕ್ಕಿ, ನಾಡ್ಪಾಲು. ಕಾರ್ಕಳ ತಾಲೂಕಿನ ಎರ್ಲಪಾಡಿ, ಹಿರ್ಗಾನ, ಕೆರ್ವಾಶೆ, ದುರ್ಗಾ, ಪಳ್ಳಿ, ನಿಟ್ಟೆ, ನಲ್ಲೂರು, ರೆಂಜಾಳ, ಬೋಳ, ನಂದಳಿಕೆ, ಮುಂಡ್ಕೂರು ಗ್ರಾಮ ಪಂಚಾಯತ್ಗಳಲ್ಲಿ ಎಲ್ಲಾ ಮತದಾರರು ಮತ ಚಲಾಯಿಸಿದ್ದು, 100% ಮತದಾನ ನಡೆದಿತ್ತು. ಬೆಳಗ್ಗೆ 10 ಗಂಟೆಯ ನಂತರ ಮತದಾನ ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿದ್ದು, ಪಂಚಾಯತ್ಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರು. ಪೆರ್ಡೂರು ಗ್ರಾಮ ಪಂಚಾಯತ್ನಲ್ಲಿ ಸದಸ್ಯರುಗಳು ಸರತಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. 12 ಗಂಟೆಯ ವೇಳೆಗೆ ಬೈಂದೂರಿನ 9, ಕುಂದಾಪುರದ 22, ಬ್ರಹ್ಮಾವರದ 20, ಉಡುಪಿಯ 10, ಕಾಪುವಿನ 12, ಹೆಬ್ರಿಯ 5, ಕಾರ್ಕಳದ 12 ಗ್ರಾಮ ಪಂಚಾಯತ್ಗಳಲ್ಲಿ 100% ಮತದಾನ ನಡೆದಿತ್ತು. ಮಧ್ಯಾಹ್ನ 2 ಗಂಟೆಯ ವೇಳೆಗೆ ಹೆಬ್ರಿ ತಾಲೂಕಿನಲ್ಲಿ 100% ಮತದಾನ ನಡೆದಿತ್ತು. ಅಂತಿಮವಾಗಿ ಬೈಂದೂರು ಮತ್ತು ಹೆಬ್ರಿ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ 100% ಮತದಾನ ನಡೆದಿದ್ದು, ಕುಂದಾಪುರದ 40, ಬ್ರಹ್ಮಾವರದ 26, ಉಡುಪಿಯ 16, ಕಾಪುವಿನ 13, ಕಾರ್ಕಳದ 26 ಗ್ರಾಮ ಪಂಚಾಯತ್ ಗಳಲ್ಲಿ 100% ಮತದಾನವಾಗಿದೆ. ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ 158 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಚುನಾವಣಾ ಆಯೋಗ ಸೂಚಿಸಿರುವ ಎಲ್ಲಾ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ, ಮತದಾನ ಪ್ರಕ್ರಿಯೆ ನಡೆದಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿತ್ತು.
ಅಸಮಾನತೆ ನಿವಾರಣೆಯಿಂದ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ: ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ
Posted On: 10 Dec 2021, 08:30 PM
ಉಡುಪಿ : ಸಮಾಜದಲ್ಲಿನ ಅಸಮಾನತೆಯನ್ನು ತೊಡೆದು ಹಾಕಿ, ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಿದಾಗ, ಪ್ರತಿಯೊಬ್ಬ ನಾಗರೀಕರ ಹಕ್ಕುಗಳನ್ನು ಎತ್ತಿ ಹಿಡಿಯಲು ಸಾಧ್ಯವಾಗಲಿದ್ದು, ಇದರಿಂದ ಮಾನವ ಹಕ್ಕುಗಳ ರಕ್ಷಣೆ ಸಹ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತದ ವತಿಯಿಂದ ನಡೆದ, ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೋವಿಡ್-19 ಲಸಿಕೆ ತಲುಪುವುದರೊಂದಿಗೆ, ಈ ಸಾಲಿನ ಮಾನವ ಹಕ್ಕುಗಳ ದಿನಾಚರಣೆ ಆಚರಣೆಯ ಧ್ಯೇಯ ವಾಕ್ಯವಾದ, ಸಮಾನತೆ : ಅಸಮಾನತೆಯನ್ನು ತಗ್ಗಿಸಿದರೆ, ಮಾನವ ಹಕ್ಕುಗಳನ್ನು ಸಂರಕ್ಷಿಸಿದಂತೆ. ಈ ನಿಟ್ಟಿನಲ್ಲಿ ರಜಾ ದಿನಗಳಲ್ಲಿಯೂ ಸಹ ಜಿಲ್ಲೆಯ ಪ್ರತಿಯೊಬ್ಬ ಅರ್ಹ ವ್ಯಕ್ತಿಗಳಿಗೂ ಸಹ ಕೋವಿಡ್-19 ಲಸಿಕೆ ತಲುಪಿಸುವ ಉದ್ಧೇಶದಿಂದಾಗಿ ಶ್ರಮಿಸುತ್ತಿರುವ ಎಲ್ಲಾ ಇಲಾಖೆಯ ಸಿಬ್ಬಂದಿಗಳ ಅವಿರತ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ಉಡುಪಿಯ ಅಧ್ಯಕ್ಷ ರವೀಂದ್ರನಾಥ್ ಶಾನುಭಾಗ್ ಮಾತನಾಡಿ, ಕೊರೋನೋತ್ತರದ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿಷೇಷವಾಗಿ ಹಿರಿಯ ನಾಗರೀಕರಿಗೆ ಸಂಬಂಧಿಸಿ ಸಮಸ್ಯೆಗಳು ಮೂರು ಪಟ್ಟು ಹೆಚ್ಚಾಗಿದ್ದು, ಇಂತಹ ಸಂಧರ್ಭಗಳಲ್ಲಿ ವಯೋವೃದ್ದರ, ಅಶಕ್ತರ, ಅಂಗವಿಕಲರ, ಮಕ್ಕಳು ಮತ್ತು ಮಹಿಳೆಯರ ಘನತೆ - ಗೌರವಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿ ಉಂಟಾಗದಂತೆ ಅವರ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರೂ ಶ್ರಮಿಸುವಂತೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಮಾನವ ಹಕ್ಕು ಕುರಿತ ಪ್ರತಿಜ್ಞಾ ವಿಧಿ ಭೋಧಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾಧಿಕಾರಿ ಕಛೇರಿಯ ಸಿಬ್ಬಂದಿಗಳು ಹಾಗೂ ಕಾನೂನು ಕಾಲೇಜಿನ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಸೂರ್ಯ ಚೈತನ್ಯ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ಕಾರ್ಯಾಗಾರ ಸಂಪನ್ನ
Posted On: 10 Dec 2021, 08:24 PM
ಕಾಪು : ಉಡುಪಿ ಜಿಲ್ಲೆ ಕುತ್ಯಾರಿನ ಸೂರ್ಯ ಚೈತನ್ಯ ಹೈಸ್ಕೂಲಿನಲ್ಲಿ ಶುಕ್ರವಾರ ಶಿಕ್ಷಕರಿಗಾಗಿ ಉತ್ತಮದಿಂದ ಅತ್ಯುತ್ತಮ ಶಿಕ್ಷಕರಾಗುವತ್ತ ತರಬೇತಿ ಕಾರ್ಯಕ್ರಮವು ಜರುಗಿತು. ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮೆನೇಜ್ಮೆಂಟ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕ ಡಾ. ಬಾಲಚಂದ್ರ ಆಚಾರ್ ಮಾತನಾಡಿ, "ಶಿಕ್ಷಕರಲ್ಲಿ ವಿಷಯ ಪಾಂಡಿತ್ಯ ಇರಬೇಕು. ಶಿಕ್ಷಕರೆಂದರೆ ಜೀವನ ಪರ್ಯಂತ ಕಲಿಯುವವರು. ಕಾಲಕಾಲಕ್ಕೆ ಬದಲಾಗುವ ಬೋಧನಾ ಪ್ರಕ್ರಿಯೆಗಳನ್ನು ಕಲಿತು ಹೊಸತನವನ್ನು ರೂಢಿಸಿಕೊಳ್ಳುವುದು ಶಿಕ್ಷಕರ ಆದ್ಯ ಕರ್ತವ್ಯ. ಮಕ್ಕಳ ಮನಸ್ಥಿತಿಯನ್ನು ಅರಿತು, ಉತ್ತಮ ಸಂವಹನ ಕಲೆಯೊಂದಿಗೆ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಬೇಕು. ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ ಪ್ರೋತ್ಸಾಹವಿತ್ತು ಶಿಕ್ಷಕವೃತ್ತಿಯಲ್ಲಿ ನೂರಕ್ಕೆ ನೂರರಷ್ಟು ತೊಡಗಿಸಿಕೊಳ್ಳಬೇಕು" ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ನ ಉಪನ್ಯಾಸಕ ಚಂದ್ರ ನಾಯ್ಕ್ ಸ್ಫೂರ್ತಿದಾಯಕ ವೀಡಿಯೊ ಮತ್ತು ಸ್ಲೈಡ್ ಗಳ ಮೂಲಕ ಶಿಕ್ಷಕ ವೃತ್ತಿಯ ಮಹತ್ವದ ಕುರಿತು ವಿವರಿಸಿದರು. ಅವರು ಮಾತನಾಡಿ, "ಉತ್ತಮ ಗುರುಗಳಾಗಲು ನಾವು ದೃಢವಾದ ತಳಹದಿಯನ್ನು ಹಾಕಿಕೊಳ್ಳಬೇಕು. ಶಿಷ್ಯನೊಬ್ಬ ತನ್ನ ಬದುಕಿನಲ್ಲಿ ಯಶಸ್ವಿಯಾದರೆ ಅದೇ ಗುರುವಿಗೆ ಹೆಮ್ಮೆ. ಕೇವಲ ಬೋಧನೆಯೊಂದೇ ಶಿಕ್ಷಕರ ಕೆಲಸವಲ್ಲ. ಅವರು ಸುಗಮಕಾರರೂ, ಆಪ್ತ ಸಮಾಲೋಚಕರೂ ಮತ್ತು ಮಾರ್ಗದರ್ಶಕರೂ ಹೌದು. ವಿದ್ಯಾರ್ಥಿಗಳ ಸಮಸ್ಯೆಯನ್ನು ಸಹನೆಯಿಂದ ಆಲಿಸುವ ಗುಣ ಶಿಕ್ಷಕರಲ್ಲಿರಬೇಕು. ಶಿಕ್ಷಕರು ಸದಾ ಸ್ವ - ವಿಮರ್ಶೆ ಮಾಡಿಕೊಳ್ಳುತ್ತಿರಬೇಕು. ತಮ್ಮ ವೃತ್ತಿಯ ಬಗ್ಗೆ ಅಭಿಮಾನ ಹಾಗೂ ಗೌರವ ಬೆಳೆಸಿದಲ್ಲಿ ಅವರ ಕೌಶಲ್ಯಗಳೂ ವೃದ್ಧಿಯಾಗುವುವು" ಎಂದು ಕರೆಯಿತ್ತರು. ಸೂರ್ಯ ಚೈತನ್ಯ ಹೈಸ್ಕೂಲ್ ಸ್ಥಾಪಕಾಧ್ಯಕ್ಷ ವಿದ್ವಾನ್ ಶಂಭುದಾಸ್ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರುತಿ ಆಚಾರ್ಯ ತಾಂತ್ರಿಕ ಸಹಕಾರ ನೀಡಿದರು. ಪ್ರಾಂಶುಪಾಲ ಗುರುದತ್ತ ಸೋಮಯಾಜಿ ಸ್ವಾಗತಿಸಿ, ಸಹಶಿಕ್ಷಕಿ ವಾಣಿ ಸಂತೋಷ್ ಮತ್ತು ಸಹಶಿಕ್ಷಕ ಸುಧೀರ್ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ದೀಕ್ಷಾ ನಿರೂಪಿಸಿ, ಶಿಕ್ಷಕಿ ಕಾವ್ಯ ವಂದಿಸಿದರು. ಸಂಸ್ಥೆಯ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಡಿಸೆಂಬರ್ 11: ಕರ್ನಾಟಕ ಜಾನಪದ ಪರಿಷತ್ತು ಕಾಪು ತಾಲೂಕು ಘಟಕದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ, ಸಾಂಸ್ಕೃತಿಕ ಕಾರ್ಯಕ್ರಮ
Posted On: 10 Dec 2021, 08:20 PM
ಕಾಪು : ಕರ್ನಾಟಕ ಜಾನಪದ ಪರಿಷತ್ತು ಕಾಪು ತಾಲೂಕು ಘಟಕದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ, ಸಾಂಸ್ಕೃತಿಕ ಕಾರ್ಯಕ್ರಮವು ಪಡುಬಿದ್ರಿ ಬಂಟರ ಸಂಘದ ಹೊರಾಂಗಣದಲ್ಲಿ ಡಿಸೆಂಬರ್ 11ರಂದು ನಡೆಯಲಿದೆ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಸಮಾಜರತ್ನ ಲೀಲಾಧರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾಪು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಚಿವರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಹಿತ ವಿವಿಧ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಜಾನಪದ ವಿದ್ವಾಂಸರಾದ ಕೆ.ಎಲ್. ಕುಂಡಂತಾಯ, ಡಾ| ವೈ. ಎನ್. ಶೆಟ್ಟಿ, ಸುರೇಶ್ ಪಿ. ಶೆಟ್ಟಿ ಗುರ್ಮೆ ಉಪನ್ಯಾಸ ನೀಡಲಿದ್ದು, ಜಾನಪದ ಕಲಾವಿದರನ್ನು ಸಮ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಂಗೀಲು ಕುಣಿತ, ಕೊಳಲು ವಾದನ, ಪಾರ್ದನ, ಕರಗ ಕೋಲಾಟ, ಪೂಜಾ ಕುಣಿತ, ದಶಾವತಾಶ ನೃತ್ಯರೂಪಕ, ಆಟಿ ಕಳೆಂಜ, ಮಹಾಕಾಳಿ ಕುಣಿತ ನಡೆಯಲಿದೆ ಎಂದರು. ಪಡುಬಿದ್ರಿ ಸಿರಿಕಮಲ ಪ್ರಕಾಶನದ ಪ್ರಕಾಶಕ ಡಾ| ವೈ.ಎನ್. ಶೆಟ್ಟಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಗುರುಚರಣ್ ಪೊಲಿಪು, ರವೀಂದ್ರ ಮಲ್ಲಾರು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪಾಂಗಾಳ : ಆರೂಢ ಪ್ರಶ್ನೆಯಲ್ಲಿ ಗೋಚರಿಸಿತು ಪ್ರಾಚೀನ ಲಕ್ಷ್ಮೀನಾರಾಯಣ ವಿಗ್ರಹ
Posted On: 10 Dec 2021, 08:14 PM
ಕಾಪು : ಪಾಂಗಾಳ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆಯಲ್ಲಿ ಜೀರ್ಣೋದ್ಧಾರ ಕೆಲಸದ ಪೂರ್ವಭಾವಿಯಾಗಿ ಆರೂಢ ಪ್ರಶ್ನೆಯನ್ನು ನವೆಂಬರ್ 5 ರಂದು ಮಂಗಳೂರಿನ ಪ್ರಸಿದ್ಧ ಜ್ಯೋತಿಷ್ಯರಾದ ಶಶಿ ಕುಮಾರ್ ಪಂಡಿತ್ ಇವರ ನೇತೃತ್ವದಲ್ಲಿ , ಕ್ಷೇತ್ರದ ತಂತ್ರಿಗಳಾದ ಉಂಡಾರು ನಾಗರಾಜ ತಂತ್ರಿಗಳ ಉಪಸ್ಥಿತಿಯಲ್ಲಿ ಇರಿಸಲಾಗಿತ್ತು. ಇಟ್ಟಂತಹ ಪ್ರಶ್ನೆಯಲ್ಲಿ ಅಚ್ಛರಿಯ ವಿಷಯವೊಂದು ಗೋಚರವಾಗಿದೆ. ಸ್ಥಳದ ಚರಿತ್ರೆಯ ಬಗ್ಗೆ ಜಾಗದ ಬಗ್ಗೆ ವಿಮರ್ಶೆ ಮಾಡಿದ ಜ್ಯೋತಿಷ್ಯರು ಒಂದು ಅಚ್ಚರಿಯ ಸಂಗತಿಯನ್ನು ತಿಳಿಸಿದ್ದರು.ಅದೇನೆಂದರೆ ಈ ಪಾಂಗಾಳ ಆಲಡೆಯ ನೈರುತ್ಯ ಭಾಗದಲ್ಲಿ ಸರಿ ಸುಮಾರು ನೂರು ಮೀಟರ್ ನ ಅಂತರದಲ್ಲಿ ಪ್ರಾಚೀನ ಕಾಲದಲ್ಲಿ ಒಂದು ಮಠವಿತ್ತು,ಅದರಲ್ಲಿ ಅನೇಕ ವೈಷ್ಣವ ಸಂಬಂಧಿ ವಿಗ್ರಹಗಳ ಅವಶೇಷಗಳು,ತೀರ್ಥ ಬಾವಿ ಇದ್ದು ಇದೀಗ ಆ ಮಠವು ಸಂಪೂರ್ಣವಾಗಿ ನಾಶವಾಗಿದ್ದು ಅಲ್ಲಿನ ಎಲ್ಲಾ ಆರಾಧನಾ ವಸ್ತುಗಳು ಮಣ್ಣಿನಲ್ಲಿ ಅವಶೇಷವಾಗಿದೆ ,ಮಾತ್ರವಲ್ಲದೆ ಆ ಜಾಗದಲ್ಲಿ ಇದ್ದಂತಹ ಒಂದು ವಿಷ್ಣು ಸಾನಿಧ್ಯವು ಪಾಂಗಾಳ ಆಲಡೆಯಲ್ಲಿ ನಿಗೂಢವಾದ ರೀತಿಯಲ್ಲಿ ಬಂದು ಸೇರಿದ್ದು ಕ್ಷೇತ್ರಕ್ಕೆ ಬರುವ ಭಕ್ತ ಜನರ ಅಭೀಷ್ಟಗಳನ್ನು ಈ ಸಾನಿಧ್ಯವು ಮೂಲ ಬೆರ್ಮೆರ ಸಾನಿಧ್ಯದ ಜೊತೆಗೆ ನಿಂತು ಈಡೇರಿಸುತ್ತಿದೆ. ನೈರುತ್ಯ ಭಾಗದಲ್ಲಿ ನಾಶವಾಗಿರುವ ಮಠವು ಪ್ರಾಚೀನ ಕಾಲದಲ್ಲಿ ಈ ಆಲಡೆಯ ಜಾಗಕ್ಕೆ ಸಂಬಂಧಿಸಿದ ಮಠವೇ ಆಗಿದ್ದು ಅಲ್ಲಿನ ಸಾನಿಧ್ಯಕ್ಕೂ ಆಲಡೆಯಲ್ಲಿ ಇರುವಂತಹ ಸಾನಿಧ್ಯಕ್ಕೂ ಅವಿನಾಭಾವ ಸಂಬಂಧವು ಇದೆ ಎನ್ನುವ ವಿಷಯವು ಪ್ರಶ್ನೆಯಲ್ಲಿ ಗೋಚರಿಸಿತ್ತು. ಊಹಿಸಲಾಗದಷ್ಟು ಪ್ರಾಚೀನವಾದ ಈ ಲಕ್ಷ್ಮೀನಾರಾಯಣ ದೇವರ ಪಂಚಲೋಹದ ಮೂರ್ತಿಯು ದೈವಗಳ ಭಂಡಾರ ಚಾವಡಿಯಲ್ಲಿಯೇ ಲಭಿಸಿದ್ದು ,ಇನ್ನುಳಿದ ಮೂರ್ತಿಗಳ ಬಗ್ಗೆ ಪ್ರಶ್ನೆಯಲ್ಲಿ ತಿಳಿಸಿದ ನೈರುತ್ಯ ಭಾಗದ ಜಾಗದ ಬಳಿ ಹೋಗಿ ಪರಿಶೀಲನೆಯನ್ನು ನಡೆಸಿದಾಗ ಅಲ್ಲಿ ಒಂದು ಪುರಾತನ ಬಾವಿಯು ಕೂಡ ಪತ್ತೆಯಾಗಿದೆ. ಬಾವಿಯಲ್ಲಿ ಇಳಿದು ಶೋಧನೆ ಮಾಡಲೆಂದು ಕ್ಷೇತ್ರ ಅಧಿಕಾರಿಗಳು ಯತ್ನಿಸಿದಾಗ ಬಾವಿಯ ಬಳಿ ನಾಗರ ಹಾವು ಗೋಚರಿಸಿದ್ದು ,ಶೋಧ ಕಾರ್ಯದಲ್ಲಿ ಇದ್ದವರು ಭಯಗೊಂಡು ವಾಪಾಸ್ ಬಂದಿದ್ದಾರೆ. ನಂತರ ಡಿಸೆಂಬರ್ 5 ರಂದು ಪ್ರಶ್ನೆಯನ್ನು ಮುಂದುವರೆಸಲಾಗಿದ್ದು ಆಗ ಇನ್ನಷ್ಟು ಅಚ್ಛರಿಯ ವಿಷಯಗಳು ಕಂಡು ಬಂದಿತ್ತು. ಪ್ರಶ್ನೆಯಲ್ಲಿ ಕಂಡು ಬಂದ ವಿಷಯ •ಈ ವಿಗ್ರಹವು ಊಹಿಸಲಾಗದಷ್ಟು ಪ್ರಾಚೀನತೆಯನ್ನು , ಇತಿಹಾಸವನ್ನು ಹೊಂದಿದೆ. •ಈ ವಿಗ್ರಹವನ್ನು ಆರಾಧಿಸುತ್ತಿದ್ದ ಮಠ ಹಾಗೂ ಆಲಡೆ ಇರುವಂತಹ ಜಾಗಕ್ಕೆ ಪೂರ್ವ ಕಾಲದಿಂದಲೂ ಕೂಡ ಅವಿನಾಭಾವ ಸಂಬಂಧ ಇತ್ತು. •ರಾಜ ಮನೆತನದವರಿಗೆ ರಾಜ ಗುರುಗಳಾಗಿ ಇದ್ದಂತಹ ಒಂದು ಮಠದಲ್ಲಿ ಆರಾಧನೆಯಾಗುತ್ತಿದ್ದಂತಹ ವಿಗ್ರಹವು ಇದಾಗಿದೆ. •ವೈವಾಹಿಕ ವಿಷಯದಲ್ಲಿ ಅಡೆತಡೆಗಳು ಅದೇ ಪ್ರಕಾರ ಸಂತಾನ ಪ್ರತಿಬಂಧಕ ಇದ್ದವರಿಗೆ ಈ ದೇವರ ಆರಾಧನೆಯಿಂದ ಅಭಿವೃದ್ಧಿಯು ಆಗುತ್ತದೆ. •ತುಳುವ ಕಟ್ಟಳೆಯಲ್ಲಿ ಬೆರ್ಮೆರ್ ಅಥವಾ ಉಲ್ಲಯ ಎನ್ನುವ ಸಾನಿಧ್ಯ ಕೂಡ ಸಂತಾನ ಕೊಡುವಂತಹ ಸಾನಿಧ್ಯವಾಗಿದ್ದು ಇದೀಗ ಆ ಬ್ರಹ್ಮಲಿಂಗೇಶ್ವರನ ಸನ್ನಿಧಾನದಲ್ಲಿ ಇರುವ ನಾಗ ಬನದ ಬಳಿಯಲ್ಲಿ ಗುಡಿ ಕಟ್ಟಿ ಈ ವಿಗ್ರಹವನ್ನು ಪೂಜಿಸಬೇಕು ಎಂದು ಆರೂಢ ಪ್ರಶ್ನೆಯಲ್ಲಿ ಕಂಡು ಬಂದಿದೆ. •ಬೆರ್ಮೆರ ಪಾದೆ ಎಂದು ಅನಾದಿಕಾಲದಿಂದಲೂ ಊರ ಜನರು ಹೇಳುತ್ತಿದ್ದ ದೊಡ್ಡ ಬಂಡೆಯು ಈ ಪ್ರಾಚೀನ ವಿಗ್ರಹದ ಮೂಲ ಆಶ್ರಯ ಜಾಗವಾಗಿದ್ದದ್ದು ಬಹಳಾ ವಿಶೇಷ. •ಇಷ್ಟು ಮಾತ್ರವಲ್ಲದೇ ಈ ಆಲಡೆಯಲ್ಲಿ ಇರುವಂತಹ ಬ್ರಹ್ಮಲಿಂಗೇಶ್ವರ ಹಾಗೂ ಕುಮಾರನ ಸಾನಿಧ್ಯವು ಪಾಂಗಾಳ ಆದಿ ಆಲಡೆಯ ಭಕ್ತರ ಸರ್ವ ಅಭೀಷ್ಟಗಳನ್ನು ಕೂಡ ಶೀಘ್ರದಲ್ಲಿ ಈಡೇರಿಸುತ್ತದೆ ಹಾಗೂ ಒಳ್ಳೆಯ ಕಾರ್ನಿಕವನ್ನು ಹೊಂದಿರುವ ಮೂಲ ಸನ್ನಿಧಾನವು ಇದಾಗಿದೆ ಎಂದು ಆರೂಢ ಪ್ರಶ್ನೆಯಲ್ಲಿ ಕಂಡು ಬಂದಿದೆ.
ಕರ್ನಾಟಕ ಸೊಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ 1960ರ ಅಡಿಯಲ್ಲಿ ನೋಂದಾಣಿಗೊಂಡ ‘ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ’ ಬಂಟಕಲ್ಲು
Posted On: 10 Dec 2021, 08:07 PM
ಕಾಪು : ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ.), ಬಂಟಕಲ್ಲು ಇದರ ಸಾಮಾನ್ಯ ಸಭೆ ಹಾಗೂ ಕರ್ನಾಟಕ ಸೋಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ 1960ರ ಅಡಿಯಲ್ಲಿ ನೋಂದಾಣಿಗೊಂಡ ಪ್ರಮಾಣ ಪತ್ರ ಹಸ್ತಾಂತರಿಸುವ ಕಾರ್ಯಕ್ರಮ ಡಿಸೆಂಬರ್ 7ರಂದು 92,ಹೇರೂರಿನ ಶ್ರೀ ಗುರುರಾಘವೇಂದ್ರ ಸಮಾಜಸೇವಾ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಬಂಟಕಲ್ಲಿನ ಯುವ ಉದ್ಯಮಿ ಶ್ರೀ ಮಾಧವ ಕಾಮತ್ ರವರು ಉಪಸ್ಥಿತರಿದ್ದರು. ಕಳೆದ ಮಹಾಸಭೆಯಲ್ಲಿ ನಿರ್ಣಯಿಸಿದಂತೆ, ಆಟೋ ಸ್ಟಾಂಡಿನ ಹಿರಿಯ ಮಾಲಕ-ಚಾಲಕ ಹಾಗೂ ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ (ರಿ.) 92-ಹೇರೂರು ಇದರ ಸ್ಥಾಪಕ ಕಾರ್ಯದರ್ಶಿಯವರೂ ಆಗಿರುವ ಶ್ರೀನಿವಾಸ್ ಪ್ರಭು (ಸ್ಪೂರ್ತಿ ಬಂಟಕಲ್ಲು) ಇವರು ಕರ್ನಾಟಕ ಸೋಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ 1960ರ ಪ್ರಕಾರ ಜ್ಞಾಪನ ಪತ್ರ ಮತ್ತು ನಿಯಮ ನಿಬಂಧನೆಗಳನ್ನು ತಯಾರಿಸಿ, ಉಡುಪಿ ಜಿಲ್ಲಾ ಸಂಘಸಂಸ್ಥೆಗಳ ನೋಂದಾಣಿ ಕಛೇರಿಯಲ್ಲಿ ನೋಂದಾಣಿಗೊಳಿಸಿ, ತನ್ಮೂಲಕ ಕಛೇರಿಯಿಂದ ಪಡೆದ ಪ್ರಮಾಣ ಪತ್ರ ಮತ್ತು ಪ್ರಮಾಣಿತ ಬೈಲಾವನ್ನು ಈ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ ಪೂಜಾರಿಯವರಿಗೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಂಟಕಲ್ಲಿನ ಯುವ ಉದ್ಯಮಿ ಮಾಧವ ಕಾಮತ್ ರವರ ಮೂಲಕ ಹಸ್ತಾಂತರಿಸಿದರು. 1997 ರಲ್ಲಿ ಸ್ಥಾಪಿತವಾದ ಬಂಟಕಲ್ಲು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘವು ಜಿಲ್ಲಾ ನೋಂದಾಣಿ ಕಛೇರಿಯಲ್ಲಿ ನೋಂದಾವಣೆ ಆಗದೇ ಇದ್ದುದರಿಂದ ಕೊರೊನದಂತಹ ಮಹಾಮಾರಿಯ ಸಮಯದಲ್ಲಿ ಅಸಂಘಟಿತ ಕಾರ್ಮಿಕರ ಅಡಿಯಲ್ಲಿ ಬರುವ ಅಟೋ ಚಾಲಕ-ಮಾಲಕರಿಗೆ ಸರಕಾರದಿಂದ ಸಿಗಬೇಕಿದ್ದ ಯಾವುದೇ ಸೌಲತ್ತು ಸಿಗದೇ ವಂಚಿತರಾಗಿದ್ದರು. ಅಲ್ಲದೆ ಬ್ಯಾಂಕ್ ವ್ಯವಹಾರಕ್ಕೂ ನೊಂದಾಣಿ ಪ್ರಮಾಣ ಪತ್ರ ಹಾಗೂ ಪಾನ್ ಕಾರ್ಡಿನ ಅಗತ್ಯತೆ ಇದ್ದುದರಿಂದ ಸಂಘದ ಕಾರ್ಯದರ್ಶಿ ಹರೀಶ್ ಹೇರೂರ್ ರವರು ತಮ್ಮ ಸಂಘದ ಸದಸ್ಯರೊಡನೆ ಸಮಾಲೋಚಿಸಿ, ಸುಮಾರು 40 ಸದಸ್ಯರನ್ನೊಳಗೊಂಡ ಈ ಸಂಘವನ್ನು ‘’ಅಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು’’ ಎಂಬ ಹೆಸರಿನಡಿಯಲ್ಲಿ ಉಡುಪಿ ಜಿಲ್ಲಾ ಸಂಘ ಸಂಸ್ಥೆಗಳ ನೋಂದಾಣಿ ಕಛೇರಿಯಲ್ಲಿ ನೋಂದಾಯಿಸಿ ಕೊಡುವಂತೆ ಶ್ರೀನಿವಾಸ್ ಪ್ರಭು ರವರಲ್ಲಿ ವಿನಂತಿಸಿದ್ದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುರೇಶ ಪೂಜಾರಿ ಕಲ್ಲುಗುಡ್ಡೆ, ಕಾರ್ಯದರ್ಶಿ ಹರೀಶ್ ಹೇರೂರು, ಜತೆಕಾರ್ಯದರ್ಶಿ ಶೈಲೇಶ್ ಪೂಜಾರಿ ಕಲ್ಲುಗುಡ್ಡೆ, ಕೋಶಾಧಿಕಾರಿ ರಾಘವೇಂದ್ರ ಕುಲಾಲ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ಉಮೇಶ್ ಪ್ರಭುರವರು ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಹೇರೂರ್ ವಂದಿಸಿದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಒಂದು ದಿನದ ಪೈತಾನ್ ಪ್ರೋಗ್ರಾಮಿಂಗ್ ಕಾರ್ಯಗಾರ
Posted On: 10 Dec 2021, 08:03 PM
ಶಿರ್ವ: ಇಂದು ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಕಂಪ್ಯೂಟರ್ ತಂತ್ರಾಂಶವನ್ನು ವಿನ್ಯಾಸಗೊಳಿಸಿ ವಿವಿಧ ಅಪ್ಲಿಕೇಶನ್ಗಳನ್ನು ರೂಪಿಸುವಲ್ಲಿ ಪೈತನ್ ಪ್ರೋಗ್ರಾಮ್ ಒಂದು ವಿಶಿಷ್ಟತೆಯನ್ನು ಹೊಂದಿದೆ . ಸ್ಮಾರ್ಟ್ ಫೋನ್ ಅಂತ ಸಾಧನೆಗಳನ್ನು ಪ್ರತಿಯೊಬ್ಬರು ಸುಲಭವಾಗಿ ಸದ್ಬಳಕೆ ಮತ್ತು ಸಮರ್ಪಕ ಕಾರ್ಯನಿರ್ವಹಣೆ ಮಾಡಲು ಇಂತಹ ತಾಂತ್ರಿಕತೆ ಅಗತ್ಯವಾಗಿದೆ ಎಂದು ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ|ನಾಗರಾಜ್ ಭಟ್ ಅವರು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್,ಪರಸ್ಪರ ಒಡಂಬಡಿಕೆಯ ಅನ್ವಯ ಕಾಲೇಜಿನ ದೃಶ್ಯ-ಶ್ರಾವ್ಯ ಕೊಠಡಿಯಲ್ಲಿ ಏರ್ಪಡಿಸಿದ ಒಂದು ದಿನದ ಪೈತಾನ್ ಪ್ರೋಗ್ರಾಮಿಂಗ್ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ಕಾರ್ಯಗಾರದಲ್ಲಿ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಶ್ರೀ ಶರತ್ ಕುಮಾರ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ, ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿಯನ್ನು ನೀಡಿದರು. ಇತ್ತೀಚಿನ ಮಾನವ ರೋಬೊ ರೂಪಿಸುವಲ್ಲಿ ಪೈತಾನ್ ಪ್ರೋಗ್ರಾಮಿಂಗ್ ಗಳನ್ನು ವಿಶಿಷ್ಟ ರೂಪದಲ್ಲಿ ಅಳವಡಿಕೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಕಂಪ್ಯೂಟರ್ ವಿದ್ಯಾರ್ಥಿಗಳು ಇಂತಹ ಜ್ಞಾನವನ್ನು ಕಲಿಯುವ ಮೂಲಕ ಉದ್ಯೋಗ ಕ್ಷೇತ್ರವನ್ನು , ಬದಲಾಗುತ್ತಿರುವ ತಂತ್ರಾಂಶವನ್ನು ಅರ್ಥಮಾಡಿಕೊಳ್ಳುವುದು ಇಂದು ಅತ್ಯಗತ್ಯವಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು. ಡೇಟಾ ಸೈನ್ಸ್ ,ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೊದಲಾದ ಆಧುನಿಕ ತಂತ್ರಾಂಶವನ್ನು ರೂಪಿಸಲು ಸೈಂಟಿಸ್ಟ್ ಗಳು ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಗಳು ಹೆಚ್ಚಾಗಿ ಕಳೆದ ಎರಡು ದಶಕಗಳಲ್ಲಿ ಪೈಥಾನ್ ವಿಕಸನಗೊಂಡಂತೆ ಅಳವಡಿಕೆಯ ಜೊತೆಗೆ ಬಳಕೆಯ ಪ್ರಕರಣಗಳು ಬೆಳೆದಿವೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಶ್ರೀ ಲೆಫ್ಟಿನೆಂಟ್ ಪ್ರವೀಣ್ ಕುಮಾರ್ ಅವರು ಮಾಹಿತಿ ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಸುಷ್ಮಾ, ದಿವ್ಯಶ್ರೀ ,ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎಸ್ಎಂವಿಐಟಿಎಂ ವಿದ್ಯಾರ್ಥಿಗಳಾದ ವೈಷ್ಣವಿ, ವಿಕ್ರಮ ಕಾಲೇಜಿನ ವಿದ್ಯಾರ್ಥಿಗಳಾದ ವರ್ಷಿತ್ ಶೆಟ್ಟಿ ಹಾಗೂ ವಿಧಾತ ಶೆಟ್ಟಿ ಸಹಕರಿಸಿದರು.ಕು. ಶ್ರಾವ್ಯ ಮತ್ತು ಬಳಗ ಪ್ರಾರ್ಥಿಸಿ,ಕು. ಮಾನಸಿ ಸಾಲಿಯಾನ್ ವಂದಿಸಿದರು. ಕು. ಪ್ರಿಯಾಂಕ ಸ್ವಾಗತಿಸಿ, ಕು. ಸುರೇಖಾ ಕಾರ್ಯಕ್ರಮ ನಿರೂಪಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಚಿತ್ರನಟ ಸುದೀಪ್ ಭೇಟಿ
Posted On: 09 Dec 2021, 09:16 PM
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಚಿತ್ರನಟ ಸುದೀಪ್ ಗುರುವಾರ ಸಂಜೆ ಭೇಟಿ ನೀಡಿ, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಚಲನಚಿತ್ರ ನಿರ್ದೇಶಕ ರಾಜೇಶ್ ಭಟ್, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ, ಕ್ಷೇತ್ರದ ಟ್ರಸ್ಟಿ ಶೇಖರ್ ಪೂಜಾರಿ, ಮ್ಯಾನೇಜರ್ ವಿನೀತ್ ಉಪಸ್ಥಿತರಿದ್ದರು.
ಸೇನಾ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ, ಹಿಂದುಳಿದ ವರ್ಗಗಳ ಘಟಕ
Posted On: 09 Dec 2021, 09:11 PM
ಕಾಪು : ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಹಾಗೂ ಕಾಪು ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ತಮಿಳ್ ನಾಡು ಕುನೂರ್ ಸಮೀಪ ನಡೆದ ವಾಯುಪಡೆಯ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ದುರ್ಮರಣ ಹೊಂದಿದಂತಹ ಜನರಲ್ ಬಿಪಿನ್ ರಾವತ್ ಹಾಗೂ ಇತರ 12ಮಂದಿಯ ಆತ್ಮ ಶಾಂತಿಗಾಗಿ ಶ್ರದ್ಧಾಂಜಲಿ ಸಭೆಯು ನಡೆಯಿತು. ಈ ಸಂದರ್ಭ ಹೂ ಹಾಗೂ ದೀಪ ಹಚ್ಚಿ ಮೌನ ಪ್ರಾರ್ಥನೆ ಮಾಡಲಾಯಿತು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ದೀಪಕ್ ಎರ್ಮಾಳ್, ನವೀನ್ ಚಂದ್ರ ಜೆ ಶೆಟ್ಟಿ, ದಿವಾಕರ್ ಶೆಟ್ಟಿ ಕಾಪು, ನವೀನ್ ಎನ್ ಶೆಟ್ಟಿ, ಗಣೇಶ್ ಎನ್ ಕೋಟಿಯನ್, ಸಾರ್ಫುದ್ದಿನ ಶೇಕ್, ಇಮ್ರಾನ್ ಕಾಪು, ಮಹಮದ್ ಸಾಧಿಕ್, ಅಮೀರ್ ಕಾಪು, ಪ್ರಭಾ ಶೆಟ್ಟಿ, ದಿವಕರ್ ಡಿ ಶೆಟ್ಟಿ ಕಳತ್ತೂರು, ಬಿ ದಿವಾಕರ್ ಶೆಟ್ಟಿ, ಸುಧೀರ್ ಹೆಜಮಾಡಿ, ಪ್ರಭಾಕರ್ ಆಚಾರ್ಯ, ಸಂತೋಷ್ ಪಡುಬಿದ್ರಿ, ರಾಜೇಶ್ ಮೆಂಡನ್, ಮಧ್ವರಾಜ್ ಬಂಗೇರ, ಲೀಲಾ, ರೀನ ಡಿಸೋಜ ಹೆಜಮಾಡಿ, ಸುಧಾಕರ್ ಸಾಲಿಯಾನ್, ಚಂದ್ರಶೇಖರ್ ಕೈಪುಂಜಾಲ, ಶಾಬುಸಾಬ್, ಗಣೇಶ್ ಆಚಾರ್ಯ, ಸುಧೀರ್ ವೈ ಉಪಸ್ಥಿತರಿದ್ದರು.
ಅಂತರ್ ರಾಜ್ಯ ಕಳ್ಳರ ಬಂಧನ : ಚಿನ್ನದ ಒಡವೆಗಳ ವಶ
Posted On: 09 Dec 2021, 04:57 PM
ಸುರತ್ಕಲ್ : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ ಪಿ ಸಿ ಎಲ್ ರಸ್ತೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ರಾಜನ್ ಎಂಬುವವನನ್ನು ಸುರತ್ಕಲ್ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಕುಳಾಯಿ, ಕಾನ, ಹೊಸಬೆಟ್ಟು, ಕಡಂಬೋಡಿ ಕಡೆಗಳಲ್ಲಿ 2021 ನೇ ಇಸವಿಯ ಮನೆ ಕಳವು ಪ್ರಕರಣಗಳಲ್ಲಿ 4 ಪ್ರಕರಣಗಳ ಚಿನ್ನದ ಒಡವೆಗಳನ್ನು ಕಳವು ಮಾಡಿದ ಬಗ್ಗೆ ಮಾಹಿತಿಯನ್ನು ನೀಡಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಲಾಗಿತ್ತು. ಬೆಂಗಳೂರಿನ ಚಂದಾಪುರದ ಕೀರ್ತಿ ಲೇ ಔಟಿನ ಪಿ.ಬಿ ಪ್ರಮೋದ್ ಎಂಬವನಿಗೆ ಸೇರಿದ ಲಕ್ಷ್ಮೀ, ಕೇರಳ ಮೆಸ್ ನ ರೂಮಿನಲ್ಲಿ ಆರೋಪಿ ರಾಜನ್ ಬಚ್ಚಿಟ್ಟಿದ್ದ ಚಿನ್ನದ ಒಡವೆಗಳನ್ನು ಸ್ವಾಧೀನಪಡಿಸಿ ಆರೋಪಿ ಪಿ.ಬಿ ಪ್ರಮೋದ್ ಎಂಬವನನ್ನು ವಶಕ್ಕೆ ಪಡೆದು ಆರೋಪಿ ರಾಜನ್ ಕಳವು ಮಾಡಿ ತಂದು ಕೊಟ್ಟಿರುವ ಚಿನ್ನದ ಒಡವೆಗಳ ಪೈಕಿ ಮಣಪುರಂ ಫೈನಾನ್ಸ್ ನಲ್ಲಿ ಅಡಮಾನ ಇರಿಸಿದ ಚಿನ್ನದ ಒಡವೆಗಳನ್ನು ಸ್ವಾಧೀನಪಡಿಸಿರುವುದಲ್ಲದೆ, ಆರೋಪಿ ರಾಜನ್ ಎಂಬವನ ಮನೆಯಾದ ತಮಿಳುನಾಡು ರಾಜ್ಯದ ಕೊಯಂಬತ್ತೂರು ಜಿಲ್ಲೆಯ ತೆಲ್ಲುಗುಮ್ ಪಾಳಯಂ ಎಂಬಲ್ಲಿ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದ ಒಡವೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು 366.632 ಗ್ರಾಂ ಚಿನ್ನದ ಒಡವೆಗಳನ್ನು ಆರೋಪಿಗಳಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕಳವು ಪ್ರಕರಣದ ಪ್ರಮುಖ ಆರೋಪಿ ರಾಜನ್ ಎಂಬಾತನು ಅಂತರ್ ರಾಜ್ಯ ಕಳ್ಳನಾಗಿದ್ದು, ಈತನ ಮೇಲೆ ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯದಲ್ಲಿ ಹಲವಾರು ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಗಳ ಪತ್ತೆ ಕಾರ್ಯಾಚರಣೆಯು ಮಂಗಳೂರು ಮಾನ್ಯ ಪೊಲೀಸ್ ಆಯುಕ್ತರಾದ ಶಶಿಕುಮಾರ್ ರವರ ಮಾರ್ಗದರ್ಶನದಂತೆ, ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಪ್ಪ.ಕೆ, ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಕರಯ್ಯ, ಎ.ಎಸ್.ಐ ವಿನೋದ್, ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಅಣ್ಣಪ್ಪ, ಅಜೀತ್ ಮ್ಯಾಥ್ಯು, ರಾಜೇಶ್ ಅತ್ತಾವರ, ವಕೀಲ್ ಲಮಾಣಿ, ಮಣಿಕಂಠ, ಬಸವರಾಜ್ ಯರಬಾಳು, ಮೋಹನ್ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.
